ಉಮಾಸಹಸ್ರಮ್ ನಾಲ್ಕನೇ ಶತಕ


ಉಮಾಸಹಸ್ರಮ್
ಚತುರ್ಥ ಶತಕಂ
ಪುಷ್ಪಗುಚ್ಛ (ಸ್ತಬಕ) – 13;  ಛಂದಸ್ಸು - ಉಪಜಾತಿವೃತ್ತ (ತ್ರಿಷ್ಟುಬ್ ವಿಶೇಷ ವೃತ್ತ)
ಕಟಾಕ್ಷ ವರ್ಣನೆ

ಸಂಸ್ಕೃತದಲ್ಲಿ :
ಭವಾಂಬುಧಿಂ ತಾರಯತಾದ್ಭವಂತಂ
ಹಾಸೋsದ್ಭುತಃ ಕುಂಜರವಕ್ತ್ರಮಾತುಃ
ಯೋ ಹಂತಿ ಬಿಂಬಾಧರಲಂಘನೇsಪಿ
ವ್ಯಕ್ತಾಲಸತ್ವೋ ಹರಿತಾಂ ತಮಾಂಸಿ ||1||

ತಾತ್ಪರ್ಯ :
ಗಣೇಶನ ಮಾತೆಯ ಮನೋಹರವಾದ ಮಂದಹಾಸವು ನಿಮ್ಮನ್ನು ಪ್ರಾಪಂಚಿಕ ಆಸ್ತಿತ್ವಗಳ ಸಾಗರವನ್ನು ದಾಟಲು ಸಹಾಯ ಮಾಡಲಿ. ಈ ಸೌಮ್ಯವಾದ ಮಂದಹಾಸವು ಕೇವಲ ಮಾತೆಯ ತುಟಿಗಳ ಬಿಂಬವನ್ನು ದಾಟಿದರೂ, ಅದು ಎಲ್ಲ ದಿಕ್ಕುಗಳಲ್ಲಿ ಪಸರಿಸಿರುವ ದಟ್ಟವಾದ ಕತ್ತಲನ್ನು ಚದುರಿಸುವ ಶಕ್ತಿಯನ್ನು ಹೊಂದಿದೆ.

ವಿವರಣೆ :
ದೇವಿಯ ಕೆಂದುಟಿಗಳನ್ನು ಅತಿಕ್ರಮಿಸಿದ್ದರೂ ಮಂದವಾಗಿಯೇ ಇರುವ ದೇವಿಯ ಮಂದಹಾಸವು ದಿಕ್ಕುಗಳಲ್ಲಿರುವ ಕತ್ತಲನ್ನು ನಾಶಪಡಿಸುತ್ತದೆ. ಅಂತಹ ಗಜಾನನನ ತಾಯಿಯಾದ ಆ ದೇವಿಯ ಮಂದಹಾಸವು, ನಿನ್ನನ್ನು ಸಂಸಾರಸಾಗರದಿಂದ ಪಾರುಮಾಡಲಿ.

ಸಂಸ್ಕೃತದಲ್ಲಿ :
ಸಕ್ತಃ ಸದಾ ಚಂದ್ರಕಲಾಕಲಾಪೇ
ಸರ್ವೇಷು ಭೂತೇಷು ದಯಾಂ ದಧಾನಃ
ಗೌರೀಕಟಾಕ್ಷೋ ರಮಣೋ ಮುನಿರ್ವಾ
ಮದೀಯಮಜ್ಞಾನಮಪಾಕರೋತು ||2||

ತಾತ್ಪರ್ಯ :
ದೇವಿಯ ಹಾಗೂ ರಮಣ ಮಹರ್ಷಿಗಳ ದಯಾಪೂರಿತ ನೋಟಗಳು ಸದಾ ಶೀತಲವಾದ ಚಂದ್ರನ ಬೆಳಕಿನೊಂದಿಗೆ ಸಂಬಂಧಿಸಿದೆ ಹಾಗೂ ಎಲ್ಲರ ಮೇಲೂ ದಯೆ ತೋರುವುದು. ಈ ನೋಟವು ನನ್ನ ಅಜ್ಞಾನವನ್ನು ಹೋಗಲಾಡಿಸಲಿ.

ವಿವರಣೆ :
ಈ ಶ್ಲೋಕದಲ್ಲಿ ಕವಿಯು ಗೌರೀಕಟಾಕ್ಷವನ್ನು ಮತ್ತು ರಮಣ ಮಹರ್ಷಿಗಳನ್ನು ಪ್ರಾರ್ಥಿಸುತ್ತಾರೆ.
ಚಂದ್ರನನ್ನು ಅಲಂಕಾರವಾಗಿ ಹೊಂದಿರುವ ಪರಶಿವನಲ್ಲಿ ಸರ್ವದಾ ಆಸಕ್ತವಾಗಿರುವ ಸಮಸ್ತ ಪ್ರಾಣಿವರ್ಗದಲ್ಲೂ ದಯೆಯನ್ನು ಹೊಂದಿರುವ ಪಾರ್ವತೀದೇವಿಯ ಕಟಾಕ್ಷವೂ ಹಾಗೂ ಶ್ರೀರಮಣ ಮಹರ್ಷಿಗಳೂ ನನ್ನ ಅಜ್ಞಾನವನ್ನು ಹೋಗಲಾಡಿಸಲಿ.
ಈ ಶ್ಲೋಕದಲ್ಲಿ ಪಾರ್ವತೀಕಟಾಕ್ಷ ಮತ್ತು ರಮಣ ಮಹರ್ಷಿಗಳಿಬ್ಬರಿಗೂ ಇಲ್ಲಿಯ ವಿಶೇಷಣಗಳು ಅನ್ವಯಿಸುತ್ತವೆ.

ಸಂಸ್ಕೃತದಲ್ಲಿ
ಕೃಪಾವಲೋಕೋ ನಗಕನ್ಯಕಾಯಾಃ
ಕರೋತು ಮೇ ನಿರ್ಮಲಮಂತರಂಗಂ
ಯೇನಾಂಕಿತಃ ಶಂಕರ ಏಕತತ್ತ್ವಂ
ವಿಶ್ವಂ ಲುಲೋಕೇ ಜಗತೇ ಜಗೌ ಚ ||3||

ತಾತ್ಪರ್ಯ :
ಪರ್ವತ ರಾಜಕುಮಾರಿಯಾದ ಪಾರ್ವತೀದೇವಿಯ ದಯಾಪೂರಿತ ನೋಟವು ನನ್ನ ಅಂತರಂಗವನ್ನು ಶುದ್ಧೀಕರಿಸಲಿ; ಈ ನೋಟದೊಂದಿಗೆ ಜೊತೆಯಾದ ಮಹಾನ್ ಶಕ್ತಿಶಾಲಿ ಶಂಕರನೂ ನೋಡುತ್ತಾ ಮತ್ತು ಪ್ರಪಂಚವನ್ನು ಒಂದೇ ತತ್ತ್ವವೆಂದು ಹೊಗಳುವನು.

ವಿವರಣೆ :
ಪಾರ್ವತೀದೇವಿಯ ಕಟಾಕ್ಷವು ನನ್ನ ಮನಸ್ಸನ್ನು ಶುದ್ಧಗೊಳಿಸಲಿ. ಯಾವ ಕಟಾಕ್ಷವನ್ನು ಪಡೆದು ಶಂಕರರು ಪ್ರಪಂಚವನ್ನು ಏಕತತ್ತ್ವವನ್ನಾಗಿ ಕಂಡರೋ ಆ ತತ್ತ್ವವನ್ನು ಜಗತ್ತಿಗೆ ಉಪದೇಶಿಸಿದರು.

ಸಂಸ್ಕೃತದಲ್ಲಿ
ಕಾಲೀಕಟಾಕ್ಷೋ ವಚನಾನಿ ಮಹ್ಯಂ
ದದಾತು ಮೋಚಾಮದಮೋಚನಾನಿ
ಯತ್ಪಾತಪೂತಂ ರಘುವಂಶಕಾರಂ
ನರಾಕೃತಿಂ ಪ್ರಾಹುರಜಸ್ಯ ನಾರೀಂ ||4||

ತಾತ್ಪರ್ಯ :
ಕಾಳಿದೇವಿಯ ಕಟಾಕ್ಷವು ನನಗೆ ವಾಕ್ ಶಕ್ತಿಯನ್ನು ಕರುಣಿಸಲಿ. ಇದು ನನಗೆ ಸ್ವಾತಂತ್ರ್ಯದ ಆನಂದವನ್ನು ನೀಡುವುದು. ಮೇರುಕಾವ್ಯವಾದ ರಘುವಂಶವನ್ನು ರಚಿಸಿದ ಕಾಲಿದಾಸನೂ ಬ್ರಹ್ಮನ ರಾಣಿ ಸರಸ್ವತಿಯ ಅವತಾರವೆಂದೇ ಪರಿಗಣಿಸಲಾಗಿ, ಅವನು ಕಾಳಿದೇವಿಯ ನೋಟದಿಂದ ಪವಿತ್ರನಾದನು.
ಇಲ್ಲಿ ಕಾಳಿದಾಸನು ಕಾಳಿಯ ಆಶೀರ್ವಾದದಿಂದ ಕವಿತಾಶಕ್ತಿಯನ್ನು ಪಡೆದು ಅದರಿಂದಾಗಿ ಅವನಿಗೆ ಲೋಕಪ್ರಸಿದ್ಧವಾದ ಕಾಳಿದಾಸನೆಂಬ ಹೆಸರು ಬಂದಿದ್ದ ಘಟನೆಯನ್ನು ನೆನಪಿಸಿಕೊಳ್ಳಲಾಗಿದೆ.

ವಿವರಣೆ :
ಪಾರ್ವತೀದೇವಿಯ ಕಟಾಕ್ಷವು ನನಗೆ ಮೋಚಾ ಎಂಬ ಬಾಳೆಹಣ್ಣಿನ ಮಾಧುರ್ಯವನ್ನು ಹೀಗಳೆಯುವ ಮಾತುಗಳನ್ನು ನೀಡಲಿ. ಯಾವ ದೇವಿಯ ಕಟಾಕ್ಷವು ರಘುವಂಶ ಕರ್ತೃವಾದ ಕಾಳಿದಾಸನನ್ನು ಸರಸ್ವತಿಯ ಅವತಾರವನ್ನಾಗಿ ಮಾಡಿತೋ ಆ ಕಟಾಕ್ಷವು ನನಗೂ ಒಳ್ಳೆಯ ಸಿಹಿಯಾದ ಮಾತುಗಳನ್ನು ನೀಡಲಿ.

ಸಂಸ್ಕೃತದಲ್ಲಿ
ಯುಷ್ಮಾಕಮಗ್ರ್ಯಾಂ ವಿತನೋತು ವಾಣೀ-
ಮೇಣೀದೃಗೇಷಾ ಗಿರಿಶಸ್ಯ ಯೋಷಾ
ಯಸ್ಯಾಃ ಕಟಾಕ್ಷಸ್ಯ ವಿಸಾರಿ ವೀರ್ಯಂ
ಗಿರಾಮಯಂ ಮೇ ವಿವಿಧೋ ವಿಲಾಸಃ ||5||

ತಾತ್ಪರ್ಯ :
ಶಂಕರನ ಸುಂದರವಾದ ಪಾರಿವಾಳದ ಕಣ್ಣುಳ್ಳ ಕುಮಾರಿಯು ನಿನಗೆ ಅತ್ಯುತ್ತಮ ಪದಗಳಿಂದ ದಯಪಾಲಿಸಲಿ. ಏಕೆಂದರೆ ನನ್ನ ಕಾವ್ಯ ರಚನೆಗೆ ದೇವಿಯ ಸರ್ವವ್ಯಾಪಿ ಪ್ರಮುಖ ಶಕ್ತಿಯಾದ ಕಣ್ಣೋಟವು ಅನೇಕ ಪಟ್ಟಿನ ಶಕ್ತಿ ಮತ್ತು ಸೌಂದರ್ಯವನ್ನು ನೀಡಿದೆ.

ವಿವರಣೆ :
ಯಾವ ಪಾರ್ವತೀದೇವಿಯ ದಿವ್ಯ ಕಟಾಕ್ಷವನ್ನು ಪಡೆದು ನಾನು ನಾನಾರೀತಿಯ ವಾಗ್ವೈಭವವನ್ನು ಪಡೆದೇನೋ ಆ ಶಿವಪತ್ನಿಯಾದ ಸುಂದರಿಯು ನಿಮಗೆ ಒಳ್ಳೆಯ ಮಾತಿನ ಸಂಪತ್ತನ್ನು ಅನುಗ್ರಹಿಸಲಿ.

ಸಂಸ್ಕೃತದಲ್ಲಿ
ನಗಾತ್ಮಜಾಯಾಃ ಕರುಣೋರ್ಮಿಶಾಲೀ
ದೃಗಂತಸಂತಾನಧುನೀಪ್ರವಾಹಃ
ಭೀಷ್ಮೇಣ ತಪ್ತಾನ್ಭವನಾಮಕೇನ
ಗ್ರೀಷ್ಮೇಣ ಯುಷ್ಮಾಂ ಚ್ಛಿಶಿರೀಕರೋತು ||6||

ತಾತ್ಪರ್ಯ :
ಪರ್ವತರಾಜನ ಪುತ್ರಿಯ ಕಣ್ಣಂಚಿನಿಂದ ಹೊರಬಂದ ಕಣ್ಣೋಟದ ಧಾರೆಯು ಜನಗಳ ಮೇಲೆ ಸಂಪೂರ್ಣವಾದ ಅನುಕಂಪವನ್ನು ಹರಿಸಿ; ಅದು ನಿಮ್ಮನ್ನು ಪ್ರಾಪಂಚಿಕ ಅಸ್ತಿತ್ವದ ರೂಪದಲ್ಲಿರುವ ಸುಡುವ ಶಾಖವನ್ನು ಕಡಿಮೆಮಾಡಲಿ.

ವಿವರಣೆ :
ಪಾರ್ವತೀದೇವಿಯ ಕರುಣೆಯೆಂಬ ಅಲೆಗಳಿಂದ ಶೋಭಿಸುವ ಕಟಾಕ್ಷದ ವಿಸ್ತಾರವೆಂಬ ಪ್ರವಾಹವು ಭಯಂಕರವಾದಭವ”(ಜನನ)ವೆಂಬ ಗ್ರೀಷ್ಮ ಕಾಲದಿಂದ ಬೆಂದಿರುವ ನಿಮ್ಮನ್ನು ತಂಪಾಗಿಸಲಿ.

ಸಂಸ್ಕೃತದಲ್ಲಿ
ಅಜಸ್ರಮಾರ್ದಾ ದರ್ಯಯಾsನ್ತರಂಗೇ
ಯಥಾ ಭವೋ ನಿಮ್ನಗಯೋತ್ತಮಾಂಗೇ
ಸಂತಾಪಶಾಂತಿಂ ಭವಸುಂದರೀ ಮೇ
ಕರೋತು ಶೀತೇನ ವಿಲೋಕಿತೇನ ||7||

ತಾತ್ಪರ್ಯ :
ಹೇಗೆ ಶಂಕರಭಗವಾನನು ಗಂಗೆಯಿಂದ ನನ್ನ ಶಿರವನ್ನು ತಂಪಾಗುವಂತೆ ಮಾಡಿದನೋ, ಅದೇ ರೀತಿ ಎಲ್ಲರ ಮೇಲೂ ಕರುಣೆಯುಳ್ಳ ಶಿವನ ಪತ್ನಿಯ ಕರುಣಾಪೂರಿತ ತಂಪಾದ ನೋಟವು ನನ್ನಲ್ಲಿನ ಅಂತರಂಗದ ನೋವನ್ನು ನಿವಾರಿಸಲಿ.

ವಿವರಣೆ :
ಪರಶಿವನು ತನ್ನ ತಲೆಯಲ್ಲಿ ನಿರಂತರವಾಗಿ ಗಂಗಾನದಿಯಿಂದ ಒದ್ದೆಯಾಗಿರುವಂತೆ ದೇವಿಯ ಹೃದಯವೂ ಯಾವಾಗಲೂ ದಯಾರಸದಿಂದ ತೊಯ್ದಿರುತ್ತದೆ. ಆ ದೇವಿಯ ತಂಪಾದ ತನ್ನ ಕುಡಿಗಣ್ಣೋಟದಿಂದ ನನ್ನ ತಾಪತ್ರಯಗಳನ್ನು ಹೋಗಲಾಡಿಸಿ ತಂಪೆರೆಯಲಿ.

ಸಂಸ್ಕೃತದಲ್ಲಿ
ಪುಣ್ಯಾ ಸದಾsಪೀಶ್ವರ ಏವ ಸಕ್ತಾ
ಪತಿವ್ರತಾಸಾಮ್ಯಮಿತಾ ತವೇಕ್ಷಾ
ಕುಲಾಚಲಾಧೀಶ್ವರಕನ್ಯಕೇ ಮೇ
ಸಂಹಾರಮಂಹೋವಿತತೇರ್ವಿಧತ್ತಾಂ ||8||

ತಾತ್ಪರ್ಯ :
ಕುಲಪರ್ವತ ರಾಜನ ಪುತ್ರಿಯೇ ! ನಿನ್ನ ಕಣ್ಣೋಟವು ಸತತವಾಗಿ ಶಂಕರನ ಮೇಲೇ ನೆಟ್ಟಿರುವುದರಿಂದ ಅದು ಸಮತೋಲನ ವಾಗಿದ್ದು ಮತ್ತು ಪ್ರಶಂಸನೀಯವಾಗಿದೆ. ಅದಕ್ಕಾಗಿಯೇ ನಿನ್ನನ್ನು ಆದರ್ಶ ಹಾಗೂ ಪರಿಶುದ್ಧ ಪತ್ನಿಯೆಂದು ಹೋಗಳುವರು. ನಿನ್ನ ಮಹತ್ತರವಾದ ಕಣ್ಣೋಟವು ನನ್ನಲ್ಲಿನ ಅಹಂಕಾರವನ್ನು ನಾಶಮಾಡಲಿ ಎಂದು ಪ್ರಾರ್ಥಿಸುವೆ.

ವಿವರಣೆ :
ಪರ್ವತರಾಜ ಪುತ್ರಿಯೇ ! ನಿನ್ನ ನೋಟವು ಪವಿತ್ರವಾಗಿ ಸರ್ವದಾ ಈಶ್ವರನಲ್ಲೇ ಆಸಕ್ತಳಾಗಿದ್ದು ಪತಿವ್ರತೆಯ ಸಾಮ್ಯವನ್ನು ಪಡೆದಿದೆ. ಆ ದೃಷ್ಟಿಯು ನನ್ನ ಪಾಪರಾಶಿಗಳನ್ನು ನಾಶಮಾಡಲಿ.
ಪತಿವ್ರತೆಯಾದವಳ ದೃಷ್ಟಿಯು ಪತಿಯನ್ನು ಬಿಟ್ಟು ಬೇರೆ ಕಡೆ ಹೋಗುವುದಿಲ್ಲ. ಹಾಗಿದ್ದರೂ ಪಾತಿವ್ರತ್ಯ ಪ್ರಭಾವದಿಂದ ಪಾಪಸಂಹಾರವಾಗುವಂತೆ ನಿನ್ನ ದೃಷ್ಟಿಯಿಂದಲೂ ನನ್ನ ಪಾಪಕ್ಷಯವಾಗಲಿ.

ಸಂಸ್ಕೃತದಲ್ಲಿ
ಶರ್ವಸ್ಯ ರಾಮೇ ನಿಯಮೇನ ಹೀನಾ
ಶ್ಯಾಮಾ ತವೇಕ್ಷಾ ಗಣಿಕಾಂಗನೇವ
ನಿಚೇsಪಿ ಮರ್ತ್ಯೇ ನಿಪತತ್ಯನರ್ಘಾ
ಬಿಭರ್ತಿ ನಾ ಷೋಡಶ ಯಃ ಸುವರ್ಣಾನ್||9||

ತಾತ್ಪರ್ಯ :
ಓ ಶರ್ವನ ಪ್ರಿಯೆ ! ನಿನ್ನ ನೋಟವು ಎಲ್ಲ ಸಾಮಾಜಿಕ ಕಟ್ಟಳೆಗಳನ್ನು ಉಲ್ಲಂಘಿಸಿದ ಮೊಂಡುತನದ ಸುಂದರ ಹೆಂಗಸಿನಂತಿದೆ. ಅದು ಹದಿನಾರು ಬಂಗಾರದ ನಾಣ್ಯವನ್ನು ತರುವ ಯಾರಿಗಾದರೂ, ಕೆಳಮಟ್ಟದ ವ್ಯಕ್ತಿಗೂ ಸಹ ಈ ನೋಟವನ್ನು ನೋಡಲು ಸಿಗುತ್ತದೆ.
ಇಲ್ಲಿ ಬಂಗಾರ ಎಂಬ ಪದಕ್ಕೆ ಎರಡರ್ಥ ಇರುವುದು. ಮೊದಲನೆಯದು ಬಂಗಾರದ ನಾಣ್ಯಗಳು. ಎರಡನೆಯದು, ಹದಿನಾರು ಬಂಗಾರದ ನಾಣ್ಯ ಎಂದರೆ ದೇವಿಯ ಹದಿನಾರು ಅಕ್ಷರಗಳುಳ್ಳ ಮಂತ್ರ, ಪ್ರಸಿದ್ದವಾದ ಷೋಡಷಾಕ್ಷಾರೀ ಮಂತ್ರ.

ವಿವರಣೆ :
ಪರಶಿವನ ಪತ್ನಿಯೆ ! ನಿನ್ನ ದೃಷ್ಟಿಯು ಶ್ಯಾಮಳಾಗಿ ಸುಂದರಿಯಾಗಿದ್ದಾಳೆ. ವೇಶ್ಯಾ ಸ್ತ್ರಿಯಂತೆ ಒಂದೆಡೆ ನಿಲ್ಲುವ ಸ್ವಭಾವವಿಲ್ಲದ ವಳಾಗಿದ್ದಾಳೆ. ಯಾವ ಪುರುಷನು ನೀಚನಾಗಿದ್ದರೂ ಹದಿನಾರು ಸುವರ್ಣಗಳನ್ನು ಹೊಂದಿರುವನೋ ಅವನು ನೀಚನಾದರೂ ಅವನ ಬಳಿ ಬರುತ್ತಾಳೆ. ಹದಿನಾರು ಸುವರ್ಣಗಳೆಂದರೆ ಷೋಡಶಾಕ್ಷಾರೀ ಮಂತ್ರವೆಂದು ಅರ್ಥ. ದೇವಿಯು ಆ ಮಂತ್ರವನ್ನು ತಿಳಿದಿರುವವನನ್ನು ಅನುಗ್ರಹಿಸುತ್ತಾಳೆ ಎಂದು ತಾತ್ಪರ್ಯ.

ಸಂಸ್ಕೃತದಲ್ಲಿ
ಪದ್ಮಾಯತಾಕ್ಷಿ ಕ್ಷಿತಿಧಾರಿಕನ್ಯೇ
ಕಟಾಕ್ಷನಾಮಾ ತವ ಕಾಲಸರ್ಪಃ
ಯಂ ಸಂದಶತ್ಯೇಷ ಜಗತ್ಸಮಸ್ತಂ
ವಿಸ್ಮೃತ್ಯ ಚಾಹೋ ನ ದಧಾತಿ ಮೋಹಂ||10||

ತಾತ್ಪರ್ಯ :
ಓ ಕಮಲದ ಕಣ್ಣುಳ್ಳ ಪರ್ವತರಾಜನ ಪುತ್ರಿಯೇ ! ನಿನ್ನ ನೋಟವು ಸತ್ಯವಾಗಿಯೂ ಸರ್ಪದಂತಿರುವುದು, ಯಾರು ಈ ಸರ್ಪದಿಂದ ಕಚ್ಚಿಸಿಕೊಳ್ಳುವರೋ ಅವರು ಎಚ್ಚರತಪ್ಪದೇ ಇದ್ದರೂ ಸಮಸ್ತ ಪ್ರಪಂಚವನ್ನು ಮರೆಯುತ್ತಾರೆ. (ಅವನು ಪ್ರಜ್ಞೆ ತಪ್ಪುವುದಿಲ್ಲ, ವಿಚಿತ್ರವಾದದ್ದು !).

ವಿವರಣೆ :
ಕಮಲದಂತೆ ವಿಸ್ತಾರವಾದ ಕಣ್ಣುಳ್ಳವಳಾದ ದೇವಿಯೇ ! ಪಾರ್ವತಿಯೇ ! ನಿನ್ನ ಕಟಾಕ್ಷವೆಂಬುದು ಕಾಳಿಂಗ ಸರ್ಪವಿದ್ದಂತೆ. ಆ ಕೃಷ್ಣಸರ್ಪವು ಯಾರನ್ನು ಕಚ್ಚುವುದೋ ಅಂತಹವನು ಪ್ರಪಂಚವನ್ನು ಮರೆತರೂ ಮೂರ್ಛೆಯನ್ನು ಹೊಂದುವುದಿಲ್ಲ. ನಿನ್ನ ಕಟಾಕ್ಷಕ್ಕೆ ಪಾತ್ರನಾದವನು ಪ್ರಪಂಚವನ್ನು ಮರೆಯುವನು. ಯಾವಾಗ ಪ್ರಪಂಚವನ್ನು ಮರೆಯುತ್ತಾನೋ ಆಗ ಭಗವತ್ಸಾಕ್ಷಾತ್ಕಾರ ವಾಗಿ ಪುನಃ ಸಂಸಾರವನ್ನೇ ಹೊಂದುವು ದಿಲ್ಲವೆಂದು ಅರ್ಥ.

ಸಂಸ್ಕೃತದಲ್ಲಿ
ಈಶದ್ವಿಷಾ ಶೈಲಮಹೇಂದ್ರಕನ್ಯೇ
ಕರೋತಿ ಮೈತ್ರೀಂ ವಿಷಮಾಯುಧೇನ
ಪ್ರಭಾಷತೇ ಪಾತಕಿನಶ್ಚ ಪಕ್ಷೇ
ಕುತಃ ಕಟಾಕ್ಷೋ ನ ತವಾಂಬ ಮುಗ್ಧಃ ||11||

ತಾತ್ಪರ್ಯ :
ಓ ಮಹಾನ್ ಪರ್ವತ ಪುತ್ರಿಯೇ, ನಿನ್ನ ನೋಟವು ನಿನ್ನ ಪತಿಯ ಶತ್ರುವಿನೊಂದಿಗೂ ಮಿತ್ರತ್ವವನ್ನು ಮಾಡಿಕೊಳ್ಳುತ್ತದೆ ಹಾಗೂ ಪಾಪಿಗಳ ಪರವಾಗಿ ವಾದಿಸುತ್ತದೆ. ಅದು ಹೇಗೆ ನಿನ್ನ ನೋಟವು ಅಷ್ಟೊಂದು ಮುಗ್ಧವಾಗಿರುವುದು?

ವಿವರಣೆ :
ಪರಶಿವನ ಪತ್ನಿಯೆ ! ತಾಯಿಯೇ ! ನಿನ್ನ ಕಟಾಕ್ಷವು ಪರಶಿವನ ಶತ್ರುವಾದ ಮನ್ಮಥನೋಡನೆ ಸ್ನೇಹವನ್ನು ಹೊಂದಿದೆ. ಅಂದರೆ ಅದರಿಂದ ಪರಶಿವನಿಗೆ ಮನ್ಮಥವಿಕಾರವುಂಟಾಗುತ್ತದೆ. ಹಾಗೆಯೇ ಮನ್ಮಥನಿಗೆ ಸಹಾಯವೂ ಆಗುತ್ತದೆ. ಈಶದ್ವೇಷಿಗಳಲ್ಲಿಯೂ ನಿನ್ನ ಕಟಾಕ್ಷವು ಪರಮ ಕರುಣೆಯುಳ್ಳದ್ದು ಎಂದು ಅರ್ಥ.

ಸಂಸ್ಕೃತದಲ್ಲಿ
ಕೃಪಾನ್ವಿತಃ ಕರ್ಣಸಮೀಪಚಾರೀ
ಶ್ರೀಮಾನ್ಸದಾ ಪುಣ್ಯಜನಾನುಕೂಲಃ
ಸಾಮ್ಯಂ ಕರುಣಾಮಧಿಪಸ್ಯ ಶಂಭೋಃ
ಪ್ರಾಣಪ್ರಿಯೇ ತೇ ಭಜತೇ ಕಟಾಕ್ಷಃ ||12||

ತಾತ್ಪರ್ಯ :
ಓ ದೇವಿ ! ಶಂಭುವಿನಿಂದ ಅವನ ಜೀವನಾಡಿಯಾಗಿ ಪ್ರೀತಿಸಲ್ಪಡುವ, ನೀನು ದಯಾಳುವಾದದ್ದರಿಂದ ನಿನ್ನ ನೋಟವು ಕುರುರಾಜನನ್ನು ಹೋಲುತ್ತದೆ ಹಾಗೂ ಸದಾ ಶ್ರೀಮಂತವಾದ ಪುಣ್ಯಜನಗಳ ಕಿವಿಗಳ ಸುತ್ತಾ ಹರಿದಾಡುತ್ತಿರುತ್ತದೆ. (ಪುಣ್ಯಜನ, ಅಸುರರೆಡೆಗೆ ಸಹಾಯಕವಾದುದು).
(ಕೃಪ, ಕರ್ಣರು ಮಹಾಭಾರತದಲ್ಲಿನ ಪಾತ್ರಗಳು. ಕೌರವ ರಾಜ ದುರ್ಯೋಧನನ ಪಕ್ಷದಲ್ಲಿದ್ದ ಮಹಾನ್ ಯೋಧರು. ಪುಣ್ಯಜನ ಎಂಬುದಕ್ಕೆ ಅಸುರರು ಅಥವಾ ರಾಕ್ಷಸರು ಎಂದೂ ಅರ್ಥವುಂಟು. ಈ ಪದದ ವಿಶೇಷತೆಯನ್ನು ಗಮನಿಸಬಹುದು).

ವಿವರಣೆ :
ಶಂಭುವಿನ ಪ್ರಾಣಪ್ರಿಯೆ ! ನಿನ್ನ ಕಟಾಕ್ಷವು ಕೃಪಾನ್ವಿತವಾಗಿ ಕಿವಿಯವರೆಗೂ ಪ್ರಸರಿಸಿದುದಾಗಿ, ಶ್ರೀಯುಳ್ಳದ್ದಾಗಿ, ಪುಣ್ಯಜನರಿಗೆ ಅನುಕೂಲವಾಗುತ್ತದೆ. ಮತ್ತೊಂದರ್ಥದಲ್ಲಿ, ಕೃಪಾಚಾರ್ಯರೊಂದಿಗೆ ಕೂಡಿ, ಕರ್ಣನ ಸಮೀಪದಲ್ಲಿರುತ್ತಾ, ರಾಜ್ಯಶ್ರೀಯುಳ್ಳದ್ದಾಗಿ, ರಾಕ್ಷಸಬುದ್ಧಿಯುಳ್ಳ ವರಿಗೆ ಅನುಕೂಲವಿರುತ್ತಾ, ದುರ್ಯೋಧನನ ಸಾಮ್ಯವನ್ನು ಪಡೆಯುತ್ತದೆ. ದುರ್ಯೋಧನನ ಸಾಮ್ಯವನ್ನು ಹೇಳಿ, ಬಂದ ವಿರೋಧವನ್ನು, ಕೃಪೆಯಿಂದ ಕೂಡಿದುದು ಎಂದು ಮತ್ತೊಂದು ಅರ್ಥವನ್ನು ಹೇಳಿ ಪರಿಹರಿಸಬೇಕು.

ಸಂಸ್ಕೃತದಲ್ಲಿ
ಕರ್ಣಾಂತಿಕಸ್ಥೋsಪಿ ನ ಧರ್ಮವೈರೀ
ಕೃಷ್ಣೋsಪಿ ಮತಾರ್ನಕುಲಂ ನ ಪಾತಿ
ಶೀತೋsಪಿ ಸಂದೀಪಯತಿ ಸ್ಮರಾಗ್ನಿಂ
ಹರಸ್ಯ ತೇ ಶೈಪಸುತೇ ಕಟಾಕ್ಷಃ ||13||

ತಾತ್ಪರ್ಯ :
ಓ ಮಾತೇ ! ನಿನ್ನ ನೋಟವು ವಿರೋಧಾಭಾಸದಿಂದ ಕೂಡಿದ್ದು ವಿಚಿತ್ರವಾಗಿದೆ ! ಕರ್ಣನಿಗೆ (ಕಿವಿ) ಹತ್ತಿರವಾದರೂ ಅದು ಧರ್ಮದ ಶತ್ರುವಲ್ಲ, ಅದನ್ನು ಕೃಷ್ಣ (ಕಪ್ಪು) ಎಂದು ವಿವರಿಸ ಬಹುದಾದರೂ, ಶ್ರೀಕೃಷ್ಣ ಪರಮಾತ್ಮನು ಪಾಂಡವಪಕ್ಷಪಾತಿ, ಪಾಂಡವರ ಸಹೋದರರಲ್ಲೊಬ್ಬನಾದ ನಕುಲನನ್ನು ರಕ್ಷಿಸಲಿಲ್ಲ, ತಂಪಾಗಿದ್ದರೂ (ನೋಟವು) ಕಾಮಾರಿಯ (ಶಿವನ) ಪ್ರೀತಿಗೆ ಕಾವನ್ನು ನೀಡುತ್ತದೆ.
ಈ ಶ್ಲೋಕದಲ್ಲಿ ಕರ್ಣ, ಕೃಷ್ಣ ಮತ್ತಿತರ ಪದಗಳ ಮೇಲೆ ಒತ್ತನ್ನು ನೀಡಿರುವುದನ್ನು ಗಮನಿಸಿ. ಅವುಗಳನ್ನು ಸಂದರ್ಭಕ್ಕೆ ತಕ್ಕಂತೆ ಅರ್ಥಮಾಡಿಕೊಂಡಲ್ಲಿ ತೋರಿಕೆಯ ವಿರೋಧಭಾಸಗಳನ್ನು ತೆಗೆಯಬಹುದು.

ವಿವರಣೆ :
ಪಾರ್ವತಿಯೇ ! ನಿನ್ನ ಕಟಾಕ್ಷವು ಕರ್ಣನ ಸಮೀಪದಲ್ಲಿದ್ದರೂ ಧರ್ಮರಾಜನಿಗೆ ವಿರೋಧಿಯಲ್ಲ. ಕೃಷ್ಣ ಎಂದರೆ ಭಗವಂತನಾದ ಕೃಷ್ಣನಾದರೂ ನಕುಲನನ್ನು ರಕ್ಷಿಸುವುದಿಲ್ಲ. ಶೀತಲವಾದರೂ ಶಿವನ ಕಾಮಾಗ್ನಿಯನ್ನು ಉದ್ದೀಪನಗೊಳಿಸುತ್ತದೆ. (ಹೀಗೆ ಇತಿಹಾಸ ವಿರೋಧದಿಂದ ವಿರೋಧಾಭಾಸವನ್ನು ಪ್ರತಿಪದಾರ್ಥದಲ್ಲಿ ಹೇಳಿರುವಂತೆ ವಿರೋಧವನ್ನು ಪರಿಹರಿಸಿಕೊಳ್ಳಬೇಕು).

ಸಂಸ್ಕೃತದಲ್ಲಿ
ಅಯಂ ಕಟಾಕ್ಷಸ್ತವ ತೋಯವಾಹಃ
ಕಾರುಣ್ಯಕಾಲೇ ಪರಿಜೃಂಭಮಾಣಃ
ಗೃಹೇಷು ಲೀನಾನ್ ಸುಖಿನೋ ವಿಹಾಯ
ನಿರಾಶ್ರಯಾನ್ ಸಿಂಚತಿ ವಿಶ್ವಮಾತಃ ||14||

ತಾತ್ಪರ್ಯ :
ಓ ವಿಶ್ವ ಮಾತೆಯೇ ! ನಿನ್ನ ನೋಟವು, ಯಾವಾಗ ಕರುಣೆಯನ್ನು ತೋರುವ ಸಂದರ್ಭವು ಉಂಟಾಗುವುದೋ ಆಗ ಎಲ್ಲೆಡೆಯೂ ರಕ್ಷಣೆಯ ರೂಪದಲ್ಲಿ ಹರಡಿರುವ ಮೋಡದಂತಿರುವುದು. ಅದು (ನಿನ್ನ ನೋಟವು) ಮನೆಯೊಳಗಡೆ ಎಲ್ಲ ಸುಖಗಳನ್ನೂ ಅನುಭವಿಸುತ್ತಿರುವವರನ್ನು ಹೊರತು ಪಡಿಸಿ ಹೊರಗಡೆ (ನಿನ್ನನ್ನು ಹೊರತು ಪಡಿಸಿ) ಯಾವುದೇ ಸಹಾಯವಿಲ್ಲದಿರುವವರ ಮೇಲೆ ಸಂತೋಷದ ಮಳೆಯನ್ನು ಹರಿಸುವೆ.
ಇಲ್ಲಿ ಗೃಹ ಪದವು ದೈಹಿಕ ಸುಖ ಸಂತೋಷಗಳನ್ನು ಅರ್ಥೈಸುವುದು. ನಿರಾಶ್ರಯನ್ ಅಂದರೆ, ದೇವಿಯ ಆಶೀರ್ವಾದವನ್ನು ಪಡೆಯಲು ಸರ್ವಸ್ವವನ್ನೂ ತ್ಯಾಗಮಾಡುವ ವ್ಯಕ್ತಿ ಎಂದು. ಅಲಂಕಾರವು ಎರಡು ಜೊತೆಗಳಲ್ಲಿ, ಅಂದರೆ, ಕಟಾಕ್ಷ ಮತ್ತು ತೋಯವಹ, ನೋಟ ಮತ್ತು ಮೋಡ, ಕಾರುಣ್ಯ ಮತ್ತು ವರ್ಷಕಲ, ದಯೆ ಮತ್ತು ಮಳೆಗಾಲಗಳ ರೂಪಕ ಅಥವಾ ರೂಪಕೋಕ್ತಿ.

ವಿವರಣೆ :
ದೇವಿಯೇ ! ನಿನ್ನ ಕಟಾಕ್ಷವು ಒಂದುಮೇಘವೆಂದು ಭಾವಿಸುತ್ತೇವೆ. ಆ ಮೋಡವು ಸಮಯ ಬಂದಾಗ (ಮಳೆಗಾಲ ಬಂದಾಗ) ಮೈಗೂಡಿಕೊಂಡು ಕೇವಲ ಮನೆ, ಮಡದಿ, ಬಂಧುವರ್ಗ, ಹಣ ಮೊದಲಾದವುಗಳಲ್ಲಿ ಆಸಕ್ತರಾಗಿ ದೇವಿಯ ಕಟಾಕ್ಷವನ್ನು ಮರೆತುಬಿಡುವರೋ ಹಾಗೂ ಅಲ್ಪ ಸುಖಕ್ಕೋಸ್ಕರ ಅಧಿಕವಾದದ್ದನ್ನು ಮರೆಯುವರೋ ಅವರನ್ನು ಬಿಟ್ಟು ಯಾರು ನಿರಾಶ್ರಯರಾಗಿರುವರೋ ಅವರನ್ನು ದೇವಿಯು ಕಟಾಕ್ಷದಿಂದ ತೋಯಿಸುವಳು

ಸಂಸ್ಕೃತದಲ್ಲಿ
ಕಸ್ಯಾಪಿ ವಾಚಾ ವಪುಷಾ ಬಲೇನ
ಸಮಸ್ಯ ಸರ್ವೈರಪಿ ಯನ್ನಿದೇಶಾಃ
ಅಂಭೋಧಿವೇಲಾಸ್ವಪಿ ನ ಸ್ಖಲಂತಿ
ಶಂಭೋ ಪ್ರಿಯೇsಯಂ ತವ ದೃಕ್ಪ್ರಸಾದಃ||15||

ತಾತ್ಪರ್ಯ :
ಓ ಶಂಭುವಿನ ಪ್ರೀತಿಯ ಪತ್ನಿಯೆ ! ಮಾತು, ನೋಟ, ಎದೆಗಾರಿಕೆ ಮತ್ತು ಸಾಧನೆಗಳಲ್ಲಿ ಬೇರೆಯವರಿಗಿಂತ ವ್ಯತ್ಯಾಸವಿಲ್ಲದ ಸಾಮಾನ್ಯ ವ್ಯಕ್ತಿಯೂ ಸಮುದ್ರದ ಮೇಲೂ ತನ್ನ ಪ್ರಭಾವವನ್ನು ಬಿರುವ, ಅಂದರೆ, ಮಹಾನ್ ಚಕ್ರವರ್ತಿಯಂತೆ ಆಳುವುದು ಸಾಧ್ಯವಾಗುವುದು ಕೇವಲ ನಿನ್ನ ನೋಟದ ಮೂಲಕ ನೀಡುವ ವರವಲ್ಲದೇ ಬೇರಾವುದೂ ಅಲ್ಲ.
ಮನುಷ್ಯನು ಉತ್ತಮ ಸಾಧನೆಗಳನ್ನು ಮಾಡುವುದು ಕೇವಲ ನಿನ್ನ ಕರುಣೆಯಿಂದ ಮಾತ್ರ ಎಂಬ ವಿಷಯವು ನಿರ್ವಿವಾದ ವಾದುದು. ದೇವಿಯ ಅನುಗ್ರಹವಿಲ್ಲದೆ ಮನುಷ್ಯನು ಪ್ರಪಂಚದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ.

ವಿವರಣೆ :
ಮನುಷ್ಯರ ಮಾತು, ಶರೀರ ಮತ್ತು ಬಲಗಳಿಂದ ಎಲ್ಲರೂ ಸಮನಾಗಿಯೇ ಇರುತ್ತಾರೆ. ಆದರೂ ಒಬ್ಬೊಬ್ಬರು ಸಮುದ್ರದ ದಡದವರೆಗೂ ವಿಫಲವಾದ ಆಜ್ಞೆಯುಳ್ಳವ ರಾಗಿರುತ್ತಾರೆ. ಅದಕ್ಕೆ ನಿನ್ನ ದಯಾಪೂರ್ಣ ವಾದ ಕಟಾಕ್ಷಗಳ ಅನುಗ್ರಹವೇ ಕಾರಣ.

ಸಂಸ್ಕೃತದಲ್ಲಿ
ದ್ವಾರೇಷು ತೇಷಾಂ ವಿಚರಂತಿ ಶೂರಾಃ
ಸೌಧೇಷು ಸಾರಂಗದೃಶಸ್ತರುಣ್ಯಃ
ಪ್ರಗಲ್ಭವಾಚಃ ಕವಯಃ ಸಭಾಸು
ಶರ್ವಾಣಿ ತೇ ಯೇಷು ಕೃಪಾಕಟಾಕ್ಷಃ ||16||

ತಾತ್ಪರ್ಯ :
ಓ ಶ್ರಾವಣಿ ! ಯಾರ ಮೇಲೆ ನಿನ್ನ ಕರುಣಾಪೂರಿತ ನೋಟವು ಬಿರುವುದೋ ಅವನು ನಿಜಕ್ಕೂ ಅದೃಷ್ಟವಂತನು. ಅವನ ಭಾಗ್ಯದ ಬಾಗಿಲು ಧೈರ್ಯ ಹಾಗೂ ಶೂರನ ಸಹಾಯದಿಂದ ಭದ್ರವಾಗಿರುವುದು; ಅವನ ಮನೆಯಲ್ಲಿ ಸೌಂದರ್ಯವತಿಯಾದ ಹೆಂಗಸರು ನೆಲಸುವರು; ಅವನ ಸುತ್ತ ಮುತ್ತ ವಿದ್ಯಾವಂತ ಮತ್ತು ವರಕವಿಗಳು ಇರುವರು.
ಯಾರು ದೇವಿಯ ಆಶೀರ್ವಾದವನ್ನು ಪಡೆಯುತ್ತಾರೋ ಅವರು ಅತ್ಯುತ್ತಮ ಜೀವನವನ್ನು ನಡೆಸುವರು. ಅವನಿಗೆ ಕಾಳಿಯು ಶೌರ್ಯವನ್ನು ವರವಾಗಿ ನೀಡುವಳು; ಲಕ್ಷ್ಮಿಯು ಸಂಪತ್ತನ್ನು ಅನುಗ್ರಹಿಸುವಳು ಮತ್ತು ಸರಸ್ವತಿಯು ಜ್ಞಾನವನ್ನು ಕರುಣಿಸುವಳು.

ವಿವರಣೆ :
ದೇವಿ ! ಯಾರು ನಿನ್ನ ಕಟಾಕ್ಷಕ್ಕೆ ಪಾತ್ರರಾಗು ವರೋ ಅವರ ಮನೆಗಳ ಭಾಗದಲ್ಲಿ ವೀರರು ಓಡಾಡುತ್ತಾರೆ. ವೀರಪುರುಷಸೇವಿತರಾಗಿ ಶ್ರೀಮಂತರಾಗುತ್ತಾರೆ. ಹಾಗೆ ಯಾರು ಕಟಾಕ್ಷಪಾತ್ರರಾಗಿರುತ್ತಾರೋ ಅಂತಹವರು ಶ್ರೀಮಂತರಾಗಿ ಸುಖವಾಗಿರುತ್ತಾರೆ ಹಾಗೂ ಅಂತಹವರ ಸಭೆಗಳಲ್ಲಿ ಪ್ರೌಢರಾದ ಕವಿಗಳು ಇರುತ್ತಾರೆ. ಒಟ್ಟಿನಲ್ಲಿ, ದೇವಿ, ನಿನ್ನ ಕಟಾಕ್ಷ ಪಾತ್ರರು ಕಾಳೀ, ಲಕ್ಷ್ಮೀ ಮತ್ತು ಸರಸ್ವತೀ ದೇವಿಯರ ಅನುಗ್ರಹಕ್ಕೆ ಪಾತ್ರರಾಗುವರು ಎಂದು ಅರ್ಥ.

ಸಂಸ್ಕೃತದಲ್ಲಿ
ಯತ್ರಾಂಬ ತೇ ಕೋsಪಿ ಕಟಾಕ್ಷಲೇಶಃ
ಸ ದುರ್ಜಯಃ ಸಂಗರಸೀಮ್ನಿ ಶೂರಃ
ಪೂರ್ವಂ ದಿವಂ ಪೂರಯತಿ ದ್ವಿಷದ್ಭಿ-
ಸ್ತತೋ ಯಶೋಭಿರ್ಭುವಮಿಂದುಗೌರೈಃ||17||

ತಾತ್ಪರ್ಯ :
ಓ ಮಾತೇ ! ನಿನ್ನ ನೋಟದ ಅತಿ ಸಣ್ಣ ಕಣವು ಯಾರ ಮೇಲಾದರೂ ಬಿದ್ದರೂ ಸಾಕು, ಅವನು ಭೀಕರ ಕದನದಲ್ಲಿ ಜಯವನ್ನು ಪಡೆಯುತ್ತಾನೆ; ಅವನು ಸ್ವರ್ಗವನ್ನು ಶತ್ರುಗಳಿಂದ, ನಂತರ ಭೂಮಿಯನ್ನು ತನ್ನಲ್ಲಿನ ಖ್ಯಾತಿಯಿಂದ, ಶಾಂತತೆ ಮತ್ತು ಚಂದ್ರನ ಬೆಳಕಿನಂತೆ ಮನೋಹರವಾದ ಗುಣಗಳಿಂದ ತುಂಬಿಸುವನು.
ಯಾರೇ ಆದರೂ ಯುದ್ದಭೂಮಿಯಲ್ಲಿ ಮಾಡಿದರೆ ಅವರು ಸ್ವರ್ಗವನ್ನು ತಲುಪುವರೆಂದು ನಂಬಿಕೆ.

ವಿವರಣೆ :
ದೇವಿಯಾದ ಮಾತೆಯೇ ! ಯಾವ ಒಬ್ಬ ಶೂರಪುರುಷನಲ್ಲಿ ನಿನ್ನ ಅದ್ವಿತೀಯವಾದ ಕಡೆಗಣ್ಣೋಟದ ಅಲ್ಪಾಭಾಗವು ಬೀಳುತ್ತದೋ, ಅಂತಹ ಶೂರನು ರಣಾಂಗಣದಲ್ಲಿ ಶತ್ರುಭಯಂಕರನಾಗಿ ಅಜೇಯನಾಗುತ್ತಾನೆ. ಆತನು ಮೊದಲು ಸ್ವರ್ಗಲೋಕವನ್ನು ತನ್ನ ಶತ್ರುಗಳಿಂದ ತುಂಬುತ್ತಾನೆ. ಅಂದರೆ ಅಂತಹವನ ಶತ್ರುಗಳು ಇವನಿಂದ ಸಂಹರಿಸಲ್ಪಟ್ಟು ವೀರಸ್ವರ್ಗವನ್ನು ಪಡೆಯುತ್ತಾರೆ. ಅನಂತರ ಭೂಮಿಯೆಲ್ಲವನ್ನೂ ಬೆಳ್ಳನೆಯಿರುವ ತನ್ನ ಯಶಸ್ಸಿನಿಂದ ತುಂಬುತ್ತಾನೆ. ನಿರ್ಮಲವಾದ ಯಶಸ್ಸು ಬೆಳ್ಳಗಿರುವುದೆಂದು ಕವಿಯ ಕಲ್ಪನೆಯಾಗಿರುವುದು.

ಸಂಸ್ಕೃತದಲ್ಲಿ
ಯಂ ತಾರಕಾಕಾಂತಕಲಾಪಕಾಂತೇ
ನ ಲೋಕಸೇ ಕೋsಪಿ ನ ಲೋಕತೇ ತಂ
ಯಂ ಲೋಕಸೇ ತೇನ ವಿಲೋಕಿತೋsಪಿ
ಶ್ರಿಯಂ ಸಮೃದ್ಧಾಂ ಸಮುಪೈತಿ ಲೋಕಃ ||18||

ತಾತ್ಪರ್ಯ :
  ತನ್ನ ಶಿರದಲ್ಲಿನ ಜತೆಯಲ್ಲಿ ಚಂದ್ರನನ್ನು ಧರಿಸಿರುವ ಮಹಾದೇವನ ಪ್ರೀತಿಯ ಪತ್ನಿಯೆ! ದೇವಿಯೇ! ಯಾರನ್ನು ನೀನು ನಿನ್ನ ನೋಟದಿಂದ ಅನುಗ್ರಹಿಸುವುದಿಲ್ಲವೋ ಅವನನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ; ಬದಲಾಗಿ ಯಾರಾದರೂ, ನೀನು ನಿನ್ನ ನೋಟದಿಂದ ಅನುಗ್ರಹಿಸಿದವನನ್ನು ನೋಡಿದರೆ ಸಾಕು ಅವನು ಈ ಪ್ರಪಂಚದಲ್ಲಿ ಅಪಾರ ಸಂಪತ್ತನ್ನು ಹೊಂದುತ್ತಾನೆ.
ದೇವಿಯ ಅನುಗ್ರಹೀತ ನೋಟದೊಂದಿಗೆ ಪರೋಕ್ಷವಾಗಿ ಸಂಪರ್ಕವಿದ್ದರೂ ಸಾಕು ಅದು ಅಮೋಘ ಫಲವನ್ನು ನೀಡುವುದು ಎಂಬುದೇ ಈ ಶ್ಲೋಕದ ಸಾರಾಂಶ. ದೇವಿ ಯಿಂದ ಸಣ್ಣದೊಂದು ಸಹಾಯವೂ ಅಪಾರ ಅಭ್ಯುದಯವನ್ನು ಉಂಟುಮಾಡುತ್ತದೆ.

ವಿವರಣೆ :
ಚಂದ್ರನನ್ನು ಅಲಂಕಾರವಾಗುಳ್ಳ ಪರಶಿವನ ಪತ್ನಿಯೆ ! ನೀನು ಯಾರನ್ನು ನೋಡುವುದಿಲ್ಲವೋ ಅವನು ಜಗತ್ತಿನಲ್ಲಿ ಎಲ್ಲರ ಔದಾಸೀನ್ಯಕ್ಕೂ ಪಾತ್ರನಾಗುವನು. ನೀನು ಯಾರನ್ನು ನೋಡುತ್ತಿಯೋ ಅವನು ಮತ್ತೊಬ್ಬನನ್ನು ನೋಡಿದರೂ ಆತನು ಐಶ್ವರ್ಯವಂತನಾಗುತ್ತಾನೆ. ದೇವಿಯ ದೃಷ್ಟಿಗೆ ನೇರವಾಗಿ ಪಾತ್ರನಾಗದಿದ್ದರೂ, ಅವಳಿಂದ ನೋಡಲ್ಪಟ್ಟವನ ದೃಷ್ಟಿಗೆ ಪಾತ್ರನಾದರೂ ಅವನು ಸರ್ವಸಮೃದ್ಧನಾಗುತ್ತಾನೆ.

ಸಂಸ್ಕೃತದಲ್ಲಿ
ಸುಧಾಂ ಹಸಂತೀ ಮಧು ಚಾಕ್ಷಿಪಂತೀ
ಯಶೋ ಹರಂತೀ ವನಿತಾಧರಸ್ಯ
ಪರಿಷ್ಕರೋತ್ಯಸ್ಯ ಕವಿತ್ವಧಾರಾ
ಮುಖಂ ಹರಪ್ರೇಯಸಿ ಲೋಕಸೇ ಯಂ ||19||

ತಾತ್ಪರ್ಯ :
ಓ ದೇವಿ ! ಯಾರಿಗಾದರೂ ನಿನ್ನ ನೋಟದ ಮೂಲಕ ಅನುಗ್ರಹಿಸಿದಲ್ಲಿ, ಅವನು ಎಲ್ಲರನ್ನೂ ಮೀರಿಸುವ ಮಹಾನ್ ಕವಿಯಾಗುವನು; ಅವನ ಸಿಹಿಯಾದ ಮತ್ತು ಆಕರ್ಷಕವಾದ ಕವನಗಳು ಅಮೃತವನ್ನು ಅವಮಾನಿಸಿದರೂ ಆಶ್ಚರ್ಯವಿಲ್ಲ, ಜೇನನ್ನು ಸಿಹಿಯಲ್ಲಿ ಮೀರಿಸಿ ಹಾಗೂ ಸುಂದರ ಹೆಂಗಸಿನ ಮುತ್ತುಗಳಿಗೆ ಸವಾಲನ್ನು ಒಡ್ಡುವುದು.
ಈ ಶ್ಲೋಕದ ಸಲಹೆಯಂದರೆ, ದೇವಿಯು ತನ್ನ ನೋಟದಿಂದ ಅಂತರಂಗವನ್ನು ಕಲಕುವ ಕಾವ್ಯವನ್ನು ರಚಿಸುವಂತೆ ಸ್ಫೂರ್ತಿಯನ್ನು ನೀಡುವುದು. ಕಾವ್ಯದ ಹರಿವನ್ನು ಅನೇಕ ಉಪಮಾನಗಳಿಂದ ಹೋಲಿಸುವುದನ್ನು ಮಾಲೋಪಮ ಎನ್ನುವರು.

ವಿವರಣೆ :
ಪರಶಿವನ ಕಾಂತೆಯೇ ! ಯಾರು ನಿನ್ನ ಅವಲೋಕನಕ್ಕೆ ಪಾತ್ರನಾಗುವನೋ ಅವನ ಮಾತು ಕಾವ್ಯ ಸಮೂಹದಂತೆ ಅಲಂಕಾರಯುಕ್ತವಾಗುತ್ತದೆ. ಕಾವ್ಯದ ಸವಿಯು ಅಮೃತದ ರುಚಿಯನ್ನು ಅಣಕಿಸುತ್ತದೆ. ಜೇನಿಗೆ ಸಮನಾಗಿರುತ್ತದೆ. ಮಧುರವಾದ ಪದಾರ್ಥಗಳಲ್ಲಿ ಮಧುರವಾದುದು ಎಂದು ಸ್ತ್ರೀಯರ ಅಧರಕ್ಕೆ ಇರುವ ಯಶಸ್ಸನ್ನು ಅಪಹರಿಸುತ್ತದೆ. ಇಂತಹ ರುಚಿಯಿಂದ ಕೂಡಿದ ಕಾವ್ಯರಸವು ನಿನ್ನ ಅನುಗ್ರಹಕ್ಕೆ ಪಾತ್ರನಾದವನ ಮಾತನ್ನು ಅಲಂಕರಿಸುತ್ತದೆ.

ಸಂಸ್ಕೃತದಲ್ಲಿ
ಸರ್ವೇಂದ್ರಿಯಾನಂದಕರೀ ಪುರಂಧ್ರೀ
ವಿದ್ಯಾsನವದ್ಯಾ ವಿಪುಲಾ ಚ ಲಕ್ಷ್ಮೀಃ
ಇಯಂ ತ್ರಿರತ್ನೀ ಪುರುಷಸ್ಯ ಯಸ್ಯ
ದುರ್ಗೇ ತ್ವಯಾ ದೃಷ್ಟಮಿದಂ ತು ವಿದ್ಮಃ||20||

ತಾತ್ಪರ್ಯ :
ಓ ದುರ್ಗಾದೇವಿ ! ಯಾರಿಗೇ ಆದರೂ ಸೌಂದರ್ಯವತಿಯಾದ ಪತ್ನಿ, ಆಳವಾದ ಜ್ಞಾನ ಮತ್ತು ಸಾಕಷ್ಟು ಸಂಪತ್ತಿದ್ದರೆ ಅದು ಕೇವಲ ವಿಫಲವಾಗದ ನಿನ್ನ ನೋಟದ ರೂಪದಲ್ಲಿನ ಆಶೀರ್ವಾದವೇ ಕಾರಣ.
ನಿನ್ನ ಅನುಗ್ರಹವಿಲ್ಲದಿದ್ದರೆ ಈ ಮೂರೂ ಯಾರಿಗೂ ಲಭ್ಯವಾಗದು.

ವಿವರಣೆ :
ದೇವಿಯೇ ! ಯಾವ ಪುರುಷನ ಬಳಿ ಎಲ್ಲ ಇಂದ್ರಿಯಗಳಿಗೂ ಸಂತೋಷವನ್ನೀಯುವ ರಮಣಿಯು ಇರುವಳೋ, ನಿರ್ದುಷ್ಟವಾದ ವಿದ್ಯೆಯು ಇರುವುದೋ, ವಿಸ್ತಾರವಾದ ಐಶ್ವರ್ಯ ಇರುತ್ತದೋ ಅಂತಹವನನ್ನು ನಿನ್ನ ಅನುಗ್ರಕ್ಕೆ ಪಾತ್ರನಾದವನು ಎಂದು ತಿಳಿಯುತ್ತೇವೆ. ಈ ಮೂರನ್ನೂತ್ರಿರತ್ನಗಳು ಎನ್ನುವರು. ಈ ಮೂರೂ ರತ್ನಗಳು ಒಬ್ಬನಲ್ಲಿದ್ದರೆ ಅವನು ದೇವಿಯ ಅನುಗ್ರಹವುಳ್ಳವನೆಂದು ಅರಿಯಬೇಕು.

ಸಂಸ್ಕೃತದಲ್ಲಿ
ಮುಧಾ ಕ್ಷಿಪಸ್ಯದ್ರಿಸುತೇ ಕಟಾಕ್ಷಾನ್
ಕೈಲಾಸಕಾಂತಾರಮಹೀರುಹೇಷು
ಇತಃ ಕಿರೇಷತ್ತವ ನಾಸ್ತಿ ಹಾನಿಃ
ಸಿದ್ಧ್ಯತ್ಯಭೀಷ್ಟಂ ಚ ಸಮಸ್ತಮಸ್ಯ ||21||

ತಾತ್ಪರ್ಯ :
ಓ ಗಿರಿಜಾ ! ನಿನ್ನ ಫಲಪ್ರದವಾದ ನೋಟವನ್ನು ಬರಡಾದ ಕೈಲಾಸ ಪರ್ವತದೆಡೆಗೆ ಹರಿಸಿ ಏಕೆ ಅದನ್ನು ವ್ಯರ್ಥಗೊಳಿಸುವೆ? ಅದೇ ನೋಟವನ್ನು ನನ್ನೆಡೆಗೆ ಹರಿಸಿದಲ್ಲಿ ನೀನು ಏನನ್ನೂ ಕಳೆದುಕೊಳ್ಳುವುದಿಲ್ಲ; ಬದಲಾಗಿ ನನಗೆ ಹೊಂದಬಹುದಾದದ್ದೆಲ್ಲವನ್ನೂ ಪಡೆದುಕೊಳ್ಳುವ ಲಾಭವಾಗುವುದು.

ವಿವರಣೆ :
ದೇವಿಯೇ ! ನೀನು ನಿನ್ನ ಕಡೆಗಣ್ಣೋಟವನ್ನು ವ್ಯರ್ಥವಾಗಿ ಕೈಲಾಸ ಪರ್ವತದ ಕಾಡಿನಲ್ಲಿರುವ ಮರಗಳಲ್ಲಿ ಹರಿಸುವೆ. ಅದಕ್ಕಿಂತ ನನ್ನಂತಹವನಲ್ಲಿ ಸ್ವಲ್ಪ ಹರಿಸು. ಅದರಿಂದ ನಿನಗೆ ನಷ್ಟವೇನೂ ಇಲ್ಲ. ನನಗಾದರೆ ಅದು ನನ್ನ ಇಷ್ಟಾರ್ಥಗಳು ಸಿದ್ಧಿಸುತ್ತವೆ. ನನ್ನಲ್ಲಿ ಕಟಾಕ್ಷ ಬೀರುವುದರಲ್ಲಿ ನಿನಗೇನೂ ಕಡಿಮೆಯಾಗುವುದಿಲ್ಲ. ನನಗೆ ಅಪಾರ ಲಾಭವಾಗುವುದು.

ಸಂಸ್ಕೃತದಲ್ಲಿ
ಶೀತಾಚಲಾಧೀಶಕುಮಾರಿ ಶೀತಃ
ಸಂರಕ್ಷಣೇ ಸಂಶ್ರಿತಮಾನವಾನಾಂ
ದುರ್ಧರ್ಷದುಷ್ಟಾಸುರಮರ್ದನೇಷು
ನಿತಾಂತಮುಷ್ಣಶ್ಚ ತವಾವಲೋಕಃ ||22||

ತಾತ್ಪರ್ಯ :
ಓ ತಂಪಾದ ಪರ್ವತ ಪುತ್ರಿಯೇ ! ನಿನ್ನಲ್ಲಿ ಆಶ್ರಯವನ್ನು ಬೇಡಿ ಬಂದವರಿಗೆ ನಿನ್ನ ನೋಟವು ತಂಪಾದ ಹಾಗೂ ಹಿತವಾದ ನೋಟದ ಮೂಲಕ ರಕ್ಷಣೆಯನ್ನು ನೀಡುವುದು. ಅದೇ ನೋಟವು ಅಸುರರನ್ನು ಭೀಕರ ಹೋರಾಟದ ಮೂಲಕ ನಿಗ್ರಹಿಸುವ ಸಮಯದಲ್ಲಿ ಸಹಿಸಲಸಾಧ್ಯವಾದ ಶಾಖದಿಂದ ಕೂಡಿರುವುದು.
ಒಂದೇ ನೋಟವನ್ನು ಎರಡು ರೀತಿಯಲ್ಲಿ ವಿವರಿಸಿರುವುದರಿಂದ ಇದು ಉಲ್ಲೇಖಾಲಂಕಾರ.

ವಿವರಣೆ :
ಹಿಮಾಲಯಾ ಪರ್ವತದರಾಜಕುಮಾರಿಯೇ ! ನಿನ್ನ ಭಕ್ತರಾದವರನ್ನು ರಕ್ಷಿಸುವಾಗ ನಿನ್ನ ನೋಟವು ತಂಪಾಗಿರುವುದು. ಅದೇ ದುರ್ಜಯರಾದ ದುಷ್ಟರಾದ ಅಸುರರನ್ನು ನಿಗ್ರಹಿಸುವಾಗ ಅತ್ಯಂತ ಉಷ್ಣವಾಗಿರುತ್ತದೆ. ಅದು ಅವರನ್ನು ಸುಡುವಂತಾಗಿರುತ್ತದೆ. ಒಂದೇ ನೋಟ ನಿಮಿತ್ತಭೇದದಿಂದ ಶೀತವಾಗಿಯೂ, ಉಷ್ಣವಾಗಿಯೂ ಆಗುತ್ತದೆ.

ಸಂಸ್ಕೃತದಲ್ಲಿ
ರುಷಾಂ ಸಮೇತಂ ವಿದಧಾತಿ ನಾಶಂ
ಕರೋತಿ ಪೋಷಂ ಕೃಪಯಾ ಸನಾಥಂ
ಅಂಬೌಷಧಸ್ಯೇವ ತವೇಕ್ಷಿತಸ್ಯ
ಯೋಗಸ್ಯ ಭೇದೇನ ಗುಣಸ್ಯ ಭೇದಃ ||23||

ತಾತ್ಪರ್ಯ :
ಓ ಮಾತೇ ! ನಿನ್ನ ಕೋಪದ ನೋಟವು ನಾಶಪಡಿಸುವುದು ಮತ್ತು ಕರುಣೆಯಿಂದ ಕೂಡಿದ ನೋಟವು ರಕ್ಷಿಸುವುದು. ಅದು ಔಷಧೀಯ ಸಂಯೋಜನೆಯಂತೆ, ಅದನ್ನು ವಿವಿಧ ಅಳತೆಗಳಲ್ಲಿ ನೀಡಿದಾಗ ರೋಗವನ್ನು ಉಲ್ಬಣಗೊಳಿಸುವ ಅಥವಾ ವಾಸಿಮಾಡು ವಂತೆ.
ಆಯುರ್ವೇದ ಔಷಧಿಯ ಪದ್ಧತಿಯಲ್ಲಿ ಯೋಗ ಮತ್ತು ಗುಣ ಪದಗಳು ತಾಂತ್ರಿಕ ಪದಗಳಾಗಿರುವುದು ಹಾಗೂ ಅವುಗಳ ಮೇಲೆ ಸ್ವಲ್ಪ ದ್ವಂದ್ವಾರ್ಥಗಳಿರುವುದು.

ವಿವರಣೆ :
ತಾಯಿಯೇ ! ನಿನ್ನ ನೋಟವು ಕೋಪದಿಂದ ಕೂಡಿದಾಗ ನಾಶಮಾಡುತ್ತದೆ. ಹಾಗೆಯೇ ಕೃಪೆಯಿಂದ ಕೂಡಿದಾಗ ಸರ್ವವಿಧ ಪೋಷಣೆಯನ್ನು ನೀಡುವುದು. ಔಷಧಿಗಳು ಅದರಲ್ಲಿ ಸೇರುವ ಪದಾರ್ಥಗಳ ಮಿಶ್ರಣ ವ್ಯತ್ಯಾಸದಿಂದ ವಾತ-ಪಿತ್ಥ-ಕಫಾದಿಗಳನ್ನು ನಾಶಪಡಿಸುತ್ತದೋ ಹಾಗೆಯೇ ನಿನ್ನ ನೋಟವು ಕೋಪಾದಿಯೋಗದಿಂದ ನಾಶವನ್ನೂ, ಕೃಪಾದಿಯೋಗದಿಂದ ಪೋಷಣೆಯನ್ನೂ ನೀಡುವುದು.

ಸಂಸ್ಕೃತದಲ್ಲಿ
ನಾಶಾಯ ತುಲ್ಯೋದ್ಧತಕಾಮಲೋಭ-
ಕ್ರೋಧತ್ರಿದೋಷಸ್ಯ ಭವಾಮಯಸ್ಯ
ಶಿವಪ್ರಿಯೇ ವೀಕ್ಷಿತಭೇಷಜಂ ತೇ
ಕ್ರೀಣಾನಿ ಭಕ್ತ್ಯಾ ವದ ಭೋಃ ಕಿಯತ್ಯಾ ||24||

ತಾತ್ಪರ್ಯ :
ಓ ಮಹಾದೇವನ ಪ್ರೀತಿಪಾತ್ರಳೆ ! ನಿನ್ನ ನೋಟವೆಂಬ ಔಷಧವನ್ನು ಎಷ್ಟು ಅಳತೆಯ ಭಕ್ತಿಯಿಂದ ಕೊಳ್ಳಬಹುದು? ನಿಜವಾಗಿಯೂ ಇದು ಎರಡು ರೋಗಗಳನ್ನು ಒಮ್ಮೆಲೇ ವಾಸಿಮಾಡುವ ಶಕ್ತಿಯುತ ಔಷಧಿ; ಮೊದಲನೆಯದು ದುಶ್ಚಟಗಳಾದ ಕಾಮ, ಲೋಭ, ಇತ್ಯಾದಿ, ಮಾನಸಿಕ ರೋಗಗಳು, ಎರಡನೆಯದು, ದೇಹದ ಮೇಲೆ ಪರಿಣಾಮ ಬೀರುವುದು.
ಈ ಶಕ್ತಿಯುತವಾದ ಔಷಧಿಯಿಂದ ದೈಹಿಕ ಹಾಗೂ ಮಾನಸಿಕ ಖಾಯಿಲೆಗಳನ್ನು ವಾಸಿಮಾಡಿಕೊಳ್ಳಬಹುದು. ಇದು ಸಾವಯವ ರೂಪಕ ಅಲಂಕಾರ.

ವಿವರಣೆ :
ಶಿವನ ಕಾಂತೆಯೇ ! ನನಗೆ ಕಾಮ, ಕ್ರೋಧ ಮತ್ತು ಲೋಭವೆಂಬ ತ್ರಿಗುಣಗಳು ಉಲ್ಬಣವಾಗಿವೆ. ಇದು ಸಂಸಾರವೆಂಬ ಭೋಗ. ಇದಕ್ಕೆ ನಿನ್ನ ನೋಟವೊಂದೇ ಔಷಧ. ಅದಕ್ಕೆ ಭಕ್ತಿಯೆಂಬ ಬೆಲೆಯನ್ನು ನಾನು ನೀಡಬೇಕು. ಭಕ್ತಿಯೆಂಬ ಔಷಧವನ್ನು ಕೊಳ್ಳಲು ಎಷ್ಟು ಬೆಲೆ ನೀಡಬೇಕೆಂದು ಹೇಳು.

ಸಂಸ್ಕೃತದಲ್ಲಿ
ಅಭಿಷ್ಟುತಾಂ ಚಾರಣಸಿದ್ಧಸಂಘೈ-
ಸ್ತ್ರಿಷ್ಟುಬ್ವಿಶೇಷಾ ಅಸಿ ಮರ್ತ್ಯಸೂನೋಃ
ಕೃಪಾಕಟಾಕ್ಷೈರ್ವಿನತಾನ್ಬುನಾನಾಂ
ಕಪರ್ದಿನಃ ಸಮ್ಮದಯಂತು ಕಾಂತಾಂ ||25||  325

ತಾತ್ಪರ್ಯ :
ನನ್ನ ವಿನಮ್ರ ಪ್ರಾರ್ಥನೆಯೆಂದರೆ, ಮರ್ತ್ಯನು ರಚಿಸಿದ ಈ ಶ್ಲೋಕಗಳು ಕಪರ್ದಿಯ ದೈವೀ ಸಂಗಾತಿಗೆ ಸಂತೋಷವನ್ನುಂಟುಮಾಡಲಿ; ಅವಳನ್ನು ಮಹಾದೇವಿಯನ್ನಾಗಿ ಸ್ವರ್ಗಲೋಕದ ಸಿದ್ಧ ಮತ್ತು ಚಾರಣರು ಸದಾ ಪ್ರಾರ್ಥಿಸುತ್ತಿರುತ್ತಾರೆ. ಅವಳು ತನ್ನ ನೋಟದಿಂದ ತನ್ನಲ್ಲಿ ಶರಣಾಗತಿ ಬಯಸಿ ಬಂದವರನ್ನು ಪವಿತ್ರರನ್ನಾಗಿಸುವಳು.

ವಿವರಣೆ :
ಈ ಸ್ತಬಕದಲ್ಲಿ ಎಲ್ಲ ಶ್ಲೋಕಗಳೂ ಉಪಜಾತಿ ಮತ್ತು ಉಪೇಂದ್ರ ವಜ್ರಗಳಿಂದ ಕೂಡಿರುವ ತ್ರಿಷ್ಟುಪ್ ಛಂದಸ್ಸಿಗೆ ಸೇರಿವೆ. ದೇವಿಯಾದ ಪಾರ್ವತಿಯೋ ಸಿದ್ಧ ಚಾರಣರಿಂದ ಸ್ತುತಿಸಲ್ಪಡುತ್ತಾಳೆ. ಆಕೆಯು ಭಕ್ತರ ಸಮೂಹವೆಲ್ಲವನ್ನೂ ಪವಿತ್ರಗೊಳಿಸುತ್ತಾಳೆ. ಶಿವಕಾಂತೆಯಾದ ಆ ಪಾರ್ವತೀದೇವಿಯನ್ನು ಈ ಸ್ತೋತ್ರಗಳು ಆನಂದಪಡಿಸಲಿ.

ಹದಿಮೂರನೇ ಸ್ತಬಕವು ಮುಗಿಯಿತು

ಪುಷ್ಪಗುಚ್ಛ (ಸ್ತಬಕ) – 14;  ಛಂದಸ್ಸು - ಉಪಗೀತಿವೃತ್ತ
ಕಾಲೀ ಗೌರೀ ಕುಂಡಲಿನೀ ವೈಭವ

ಈ ಸ್ತಬಕದಲ್ಲಿ ಸಮಯ, ಆಕಾಶ ಮತ್ತು ರೂಪಗಳನ್ನು ಕಾಳಿ, ಗೌರಿ ಮತ್ತು ಕುಂಡಲಿನಿಯರ ದೈವೀ ಸಮಕ್ಷಮದಲ್ಲಿ ವರ್ಣಿಸಲಾಗಿದೆ. ಇವುಗಳು ಸಾಧಕನಿಗೆ ಅತೀಂದ್ರಿಯ ಅನುಭವಗಳನ್ನು ಪಡೆಯಲು ಸಹಕರಿಸುತ್ತವೆ.
ಸಂಸ್ಕೃತದಲ್ಲಿ :
ಕಾರಣಮಖಿಲಮತೀನಾಂ ವಾರಣಮಂತರ್ಲಸತ್ತಮಸಃ
ಮಂದಸ್ಮಿತಂ ಮಹೇಶ್ವರಸುದೃಶೋ ಮೇ ಶ್ರೇಯಸೇ ಭವತು ||1||

ತಾತ್ಪರ್ಯ :
ಮಹೇಶನ ಪ್ರೀತಿಯ ಪತ್ನಿಯ ಸೌಮ್ಯ ಮುಗುಳ್ನಗೆಯು ನನ್ನ ಮೇಲೆ ದಿವ್ಯಾನಂದವನ್ನು ದಯಪಾಲಿಸಲಿ. ಎಲ್ಲ ಜ್ಞಾನಗಳ ಅಭಿವ್ಯಕ್ತಿತ್ತ್ವದ ಮೂಲ ಕಾರಣವೇ ನಿನ್ನ ಸೌಮ್ಯ ಮುಗುಳ್ನಗು ಮತ್ತು ಅಂತರಂಗದಲ್ಲಿ (ಒಳಗಿನ ಕತ್ತಲು) ಹುದುಗಿರುವ ಅಜ್ಞಾನದ ವಿನಾಶಕ್ಕೆ ಕಾರಣ ನಿನ್ನ ಮುಗುಳ್ನಗು.
ಉದ್ದೇಶಿತ ಲಾಭವು ಎರಡು ರೀತಿಯದು - ಜ್ಞಾನದ ಗೋಚರ ಮತ್ತು ಅಜ್ಞಾನದ ನಾಶ.

ವಿವರಣೆ :
ಸಮಸ್ತವಾದ ಆತ್ಮಜ್ಞಾನವನ್ನು, ಅನುಗ್ರಹಿಸುವ ಮತ್ತು ನನ್ನ ಹೃದಯದಲ್ಲಿ ಅಡಗಿರುವ ಸಕಲವಾದ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸುವ ಮಹೇಶ್ವರನ ಸುಂದರಿಯಾದ ಪಾರ್ವತೀದೇವಿಯ ಮಂದಹಾಸವು ನನಗೆ ಎಲ್ಲ ರೀತಿಯ ಶ್ರೇಯಸ್ಸನ್ನು ಅನುಗ್ರಹಿಸಲಿ.

ಸಂಸ್ಕೃತದಲ್ಲಿ :
ವಿಶ್ವತನುಸ್ತನುಗಾತ್ರೀ ವಜ್ರಮಯೀ ಪುಷ್ಪಸುಕುಮಾರೀ
ಸರ್ವಸ್ಯ ಶಕ್ತಿರಬಲಾ ಕಾಲೀ ಗೌರ್ಯಂಬಿಕಾ ಜಯತಿ ||2||

ತಾತ್ಪರ್ಯ :
ಓ ತೆಳುವಾದ ಹಾಗೂ ಆಕರ್ಷಕ ಸೌಂದರ್ಯವತಿಯೇ ! ನಿನ್ನ ರೂಪವು ದೈಹಿಕ ಪ್ರಪಂಚದ ಸಂಪೂರ್ಣತೆ. ನೀನು ವಜ್ರದಂತೆ ಕಠಿಣಳಾದರೂ, ನೀನು ಅದೇ ರೀತಿಯಲ್ಲಿ ಕುಸುಮದಂತೆ ಮೆತ್ತಗಿನ ಹಾಗೂ ಕೋಮಲ. ನಿನ್ನನ್ನು ಅಬಲೆಯೆಂದು ಕರೆದರೂ, ನೀನು ಏನನ್ನೂ ಮತ್ತು ಎಲ್ಲವನ್ನೂ ಮಾಡುವ ಶಕ್ತಿಯುಳ್ಳವಳು. ನೀನು ಮಸುಕಾದ ಕಪ್ಪು ಹಾಗೂ ಬಂಗಾರ ವರ್ಣವುಳ್ಳವಳು.
ವಿಶ್ವ ತತ್ತ್ವದಲ್ಲಿ ಎಲ್ಲವೂ ಅಡಗಿರುವುದರಿಂದ ಅದರಲ್ಲಿ ಸಮಸ್ತ ವೈರುಧ್ಯ ಹಾಗೂ ವಿರೋಧಾಭಾಸಗಳು ಇರುವುದು. ಮಹಾ ಮಾತೆಗೆ ಸಂಬಂಧಿಸಿದಂತೆ ಯಾವುದು ಸ್ವಾಭಾವಿಕವೋ ಅವು ವಿರೋಧಾತ್ಮಕ ಅಥವಾ ವಿರೋಧಿಸುವಂತೆ ಸೀಮಿತ ದೃಷ್ಟಿಕೋನದಲ್ಲಿ ಕಂಡುಬರುವುದು. ಅಂದರೆ ಮರ್ತ್ಯರು ಈ ಅಮರತ್ವದ ತತ್ತ್ವ ಮತ್ತು ರಹಸ್ಯವನ್ನು ಅರಿಯಲು ಅಸಮರ್ಥರು ಎಂದು.

ವಿವರಣೆ :
ದೇವಿಯು ವಿಶ್ವಾತ್ಮಕಳಾಗಿ ದೊಡ್ಡದಾಗಿದ್ದರೂ, ತೆಳ್ಳನೆಯ ಶರೀರವುಳ್ಳವಳಾಗಿದ್ದಾಳೆ. ವಜ್ರದಂತೆ ಕಠೋರದವಳಾದರೂ ಹೂವಿನಂತೆ ಮೃದುವಾಗಿದ್ದಾಳೆ. ಅವಳು ಯಾವಾಗಲೂ ಶಕ್ತಿಸ್ವರೂಪಿಣಿಯಾಗಿದ್ದಾಳೆ. ಆದರೂ ಸ್ತ್ರೀರೂಪಿಣಿಯಾಗಿರುವುದರಿಂದ ಅಬಲೆಯಾಗಿದ್ದಾಳೆ. ಹೀಗೆ ಪರಸ್ಪರ ವಿರುದ್ದವಾದ ಲಕ್ಷಣವುಳ್ಳವಳಾಗಿದ್ದು ಅಪ್ರಮೇಯಸ್ವರೂಪವುಳ್ಳ ದೇವಿಯಾಗಿರುವಳು.

ಸಂಸ್ಕೃತದಲ್ಲಿ :
ತಾಮಾಹುರ್ಜಗದಂಬಾಂ ಗೌರೀಂ ಕೇಚಿತ್ ಪರೇ ಕಾಲೀಂ
ಸಾ ಗೌರೀ ಮಹಿಲಾತನುರಂಬರತನುರುಚ್ಯತೇ ಕಾಲೀ||3||

ತಾತ್ಪರ್ಯ :
ಕೆಲವರು ಮಹಾ ಮಾತೆಯನ್ನು ಗೌರಿ ಎಂದರೆ, ಮತ್ತೆ ಕೆಲವರು ಅವಳನ್ನು ಕಾಳಿ ಎಂದು ಕರೆಯುವರು. ಸ್ತ್ರೀ ರೂಪದಲ್ಲಿ ಗೌರಿಯಾದರೆ ಆಕಾಶದಲ್ಲಿ ಹರಡಿರುವ ರೂಪವನ್ನು ಕಾಳಿ ಎನ್ನುವರು.
ದೇವಿಯ ರೂಪ ಹಾಗೂ ನಾಮಗಳಲ್ಲಿ ವ್ಯತ್ಯಾಸಗಳಿದ್ದರೂ, ಮೂಲದಲ್ಲಿ ಯಾವುದೇ ತಾರತಮ್ಯವಿಲ್ಲ. ಹಿಂದಿನ ಸ್ತಬಕದಲ್ಲಿ ಮಾತೆಯ ಸ್ತ್ರೀ ರೂಪವನ್ನು ವೈಭವಿಕರಿಸಲಾಗಿದೆ. ಇಲ್ಲಿಂದ ಕಾಳಿಯ ತತ್ತ್ವ ಹಾಗೂ ಅವಳ ಶಕ್ತಿ ಮತ್ತು ವೈಭವವನ್ನು ವಿವರಿಸಲಾಗುವುದು.

ವಿವರಣೆ :
ಕೆಲವರು ದೇವಿಯನ್ನು ಗೌರೀ ಎಂದು ಕರೆದರೆ ಮತ್ತೆ ಕೆಲವರುಕಾಳೀಎಂದು ಕರೆಯುವರು. ಅವಳು ಮಹಿಳಾಸ್ವರೂಪಿಣಿ ಯಾದರೆ ಗೌರೀ ಎನಿಸಿಕೊಳ್ಳುವಳು, ಆಕಾಶಶರೀರಿಣಿಯಾದರೆ ಕಾಳೀ ಎನಿಸಿಕೊಳ್ಳುವಳು. ಆದ್ದರಿಂದ ನಾಮರೂಪಭೇದವಿದ್ಧರೂ ಸ್ವರೂಪದಿಂದ ಅವಳು ಅಭಿನ್ನವಾಗಿರುವಳು.

ಸಂಸ್ಕೃತದಲ್ಲಿ :
ಪಾಚಕಶಕ್ತೇಃ ಕಾಲ್ಯಾಃ ಕೇವಲಲಿಂಗೇನ ಭಿದ್ಯತೇ ಕಾಲಃ
ಯತ್ಪಾಕತೋ ಗಭೀರಾದ್ಭುವನೇ ಸರ್ವೇsಪಿ ಪರಿಣಾಮಾಃ ||4||

ತಾತ್ಪರ್ಯ :
ಕಾಳಿ ಮತ್ತು ಕಾಲ ಇವೆರಡರ ನಡುವಿನ ಭಿನ್ನತೆಯು ಕೇವಲ ಶಬ್ದಾರ್ಥ ಮಾತ್ರ. ಕಾಳಿಯು ಸ್ತ್ರೀ, ಕಾಲನು ಪುರುಷ. ಈ ರೀತಿಯ ಲಿಂಗ ಭೇದವನ್ನು ಹೊರತುಪಡಿಸಿ, ಕಾರ್ಯಕ್ಷಮತೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಈ ವಿಶ್ವದಲ್ಲಿ ನಮಗೆ ಕಂಡುಬರುವ ಅಪಾಯಗಳೆಲ್ಲವನ್ನೂ ಸಮಯಕ್ಕೆ ಆರೋಪಿಸಲಾಗುವುದು, ಹಾಗೂ ಇವುಗಳು ಎಲ್ಲ ವಿಧದ ರೂಪಾಂತರಗಳನ್ನು ಉಂಟುಮಾಡುವುದು. ಕಾಲ ನಿರ್ದೇಶನದಲ್ಲಿ ಸಮಸ್ತ ಸೃಷ್ಟಿಯೂ ಬದಲಾವಣೆಯನ್ನು ಕಾಣುವುದು.

ವಿವರಣೆ :
ಕಾಳಿಯು ಎಲ್ಲವನ್ನೂ ಪರಿಪಕ್ವ ಮಾಡುವ ರುದ್ರನ ಶಕ್ತಿಯಾಗಿದ್ದಾಳೆ. ಕಾಳೀ ಶಬ್ದದ (ಸ್ತ್ರೀಲಿಂಗದ) ಪುಲ್ಲಿಂಗರೂಪವೇ ಕಾಲ. ಅವಳ ಅಗಾಧ ಪಾಕದಿಂದಲೇ ಪ್ರಪಂಚದ ಸಮಸ್ತವಾದ ಪರಿಣಾಮಗಳೂ ಆಗುತ್ತವೆ.

ಸಂಸ್ಕೃತದಲ್ಲಿ :
ಸರ್ವಭುವನಾಶ್ರಯತ್ವಾತ್ ಕಾಲೀ ನಾಮ್ನಾ ದಿಗನ್ಯೇನ
ಲೋಕೇ ತು ವ್ಯವಹರಣಂ ವಿದುಷಾಂ ದಿಕ್ಕಾಲಯೋರ್ಭಾಕ್ತಂ ||5||

ತಾತ್ಪರ್ಯ :
ವಿಶ್ವದಲ್ಲಿ ಎಲ್ಲವನ್ನೂ ಸಂರಕ್ಷಣೆ ಮಾಡುವ ಕಾಳಿಯ ಗುಣದಿಂದ ಅವಳನ್ನು ವ್ಯೋಮವೆಂದು ಗುರುತಿಸಲಾಗುವುದು; ಸರಿಯಾಗಿ ನೋಡಿದಲ್ಲಿ ಅಂತರಿಕ್ಷ ಮತ್ತು ಕಾಲವು ವಿಶ್ವದ ಹೊಂದಾಣಿಕೆಯ ಗೌಣ ಪರಿಗಣನೆ.
ಹಿಂದಿನ ಶ್ಲೋಕದಲ್ಲಿ ಕಾಳಿಯನ್ನು ಸಮಯವೆಂದು ವಿವರಿಸಲಾಗಿತ್ತು. ಈ ಶ್ಲೋಕದಲ್ಲಿ ಅವಳನ್ನು ವ್ಯೋಮ (ಅಂತರಿಕ್ಷ) ಎಂದೂ ವಿವರಿಸಲಾಗಿದೆ. ಆದರೆ ಈ ವ್ಯತ್ಯಾಸಗಳು ಕೇವಲ ಕಾಲ್ಪನಿಕ ಹಾಗೂ ವಾಸ್ತವಿಕವಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಕಾಳಿಯು ಸಮಯ ಹಾಗೂ ಅಂತರಿಕ್ಷ ಎರಡೂ.

ವಿವರಣೆ :
ದೇವಿಯು ಸಮಸ್ತ ಪ್ರಪಂಚಕ್ಕೂ ಆಧಾರವಾಗಿರುವುದರಿಂದ ಆಕೆಯನ್ನು ಕಾಳೀ ಎಂದೂ ಕರೆಯುತ್ತಾರೆ. ಅವಳೇ ಮತ್ತೊಂದು ಹೆಸರಾದದಿಕ್ಎಂದು ಕರೆಸಿಕೊಳ್ಳುತ್ತಾಳೆ. ಲೋಕದಲ್ಲಿ ಕಾಳಿ ಮತ್ತು ದಿಕ್ ಎಂಬ ವ್ಯವಹಾರವು ಗೌಣವಾದುದು. ಹಿಂದೆ ಇದೇ ದೇವಿಯು ಕಾಳೀ ಎಂದು ಹೇಳಲ್ಪಟ್ಟಳು. ಇಲ್ಲಿ ಅವಳೇ ದೇಶಾತ್ಮಳಾಗಿಯೂ ಇರುವಳೆಂದು ಹೇಳಲ್ಪಟ್ಟಿದ್ದಾಳೆ. ವಿದ್ವಾಂಸರಾದವರಿಗೆ ದೇಶ ಕಾಲವೆಂಬ ವ್ಯವಹಾರವು ಗೌಣವೇ ವಿನಾ ಮುಖ್ಯವಲ್ಲ. ಕಾಳಿ ಮತ್ತು ದಿಕ್ಜುಗಳ ಮೂಲರೂಪವು ಕಾಳಿಯೇ ಆಗಿರುವಳು.

ಸಂಸ್ಕೃತದಲ್ಲಿ :
ದಿಗದಿತಿರಗಾದ್ಯಖಣ್ದಾ ಪರಿಣಮಯಿತ್ರಿ ಸ್ಮೃತಾ ಕಾಲೀ
ದಕ್ಷಸ್ಯೈಕಾ ದುಹಿತಾ ಸಾ ದ್ವೇ ಗುಣಭೇದಮುಗ್ಧದೃಶಾಂ ||6||

ತಾತ್ಪರ್ಯ :
ಅಂತರಿಕ್ಷವನ್ನು ಏಕಮೇವ ಹಾಗೂ ಸರ್ವವ್ಯಾಪಿಯೆಂದು ಪರಿಗಣಿಸಲಾಗಿದೆ; ಹೀಗಾಗಿ ಅಡಿತಿಯೆಂದು ಅರಿಯಲಾಗಿದೆ. ಕಾಳಿಯನ್ನು ಮಾರ್ಪಾಡುಗಳನ್ನು ಉಂಟುಮಾಡುವವಳೆಂದು ಸೂಚಿಸಲಾಗಿದೆ. ಇವೆರಡೂ ಒಂದೇ; ದಕ್ಷ ಪ್ರಜಾಪತಿಯ ಪುತ್ರಿ ಸತಿಯನ್ನು ವಿಭಿನ್ನ ಪ್ರಭಾವದಿಂದಾಗಿ ಎರಡು ರೂಪವೆಂದು ಪರಿಗಣಿಸಲಾಗಿದೆ.
ವ್ಯತ್ಯಾಸವನ್ನು ವಸ್ತುಶಃ ಮತ್ತು ನೈಜವಾದದ್ದಲ್ಲ. ಅದಿತಿ ಮತ್ತು ಕಾಳಿ ಕ್ರಮವಾಗಿ ಅಂತರಿಕ್ಷ ಮತ್ತು ಕಾಲ ಕಟ್ಟಕಡೆಗೆ ಒಂದೇ ತತ್ತ್ವದಲ್ಲಿ ವಿಲೀನವಾಗುವರು.

ವಿವರಣೆ :
ಕಾಳಿದೇವಿಯು ಮೂಲರೂಪದಲ್ಲಿ ಒಂದೇ ಆಗಿದ್ದು ಗುಣಭೇದದಿಂದ ದಿಕ್ಕು ಮತ್ತು ಕುಲವೆಂಬ ಹೆಸರನ್ನು ಪಡೆಯುತ್ತಾಳೆ. ದೋ-ಅವಖಂಡನೇಎಂಬ ಧಾತುವಿನಿಂದ ದಿಕ್ ಎಂದರೆ ವಿಭಾಗವೆಂದರ್ಥ. ಅದಿತಿ ಎಂದರೆ ಭಾಗವಿಲ್ಲದ್ದು ಎಂದರ್ಥ. ಕಾಳಿ ಎಂದರೆ ವಾಚಕ ಶಕ್ತಿ. ಅದರಿಂದ ಕಾಲ ಏರ್ಪಡುತ್ತದೆ. ಇದೇ ಗುಣಭೇದ.

ಸಂಸ್ಕೃತದಲ್ಲಿ :
ದೇಹೇ ದೇಹೇ ಸೇಯಂ ಕುಂಡಲಿನೀ ನಾಮ ಜಗದಂಬಾ
ಸಾ ಸ್ವಪತಿ ಸಂಸ್ಕೃತಿಮತಾಂ ಯುಂಜಾನಾನಾಂ ಪ್ರಬುದ್ಧಾ ಸ್ಯಾತ್ ||7||

ತಾತ್ಪರ್ಯ :
ವಿಶ್ವ ಮಾತೆ ಕುಂಡಲಿನಿ, ಮೊದಲಲ್ಲಿ ಕಾಳಿ ಎಂದು ವಿವರಿಸಲ್ಪಟ್ಟ, ಅದಿತಿಯರು ಪ್ರತಿಯೊಂದು ಶರೀರದಲ್ಲೂ ಕಂಡುಬರುವುದು. ಅವಳನ್ನು ಆರಂಭಿಸದ ಸುಪ್ತ ಸ್ಥಿತಿಯಲ್ಲಿ ಇರುವಳು, ಆದರೆ ಯೋಗಿಗಳು ಅವಳನ್ನು ಎಚ್ಚರಿಸಲು ಸರ್ವ ಪ್ರಯತ್ನವನ್ನು ಮಾಡಿದಾಗ ಅವಳು ಯೋಗಿಗಳ ಶರೀರದಲ್ಲಿ ಮೇಲೇರುವಳು.

ವಿವರಣೆ :
ಜಗದಂಬೆಯಾದ ಕಾಳಿದೇವಿಯು ಪ್ರತಿದೇಹದಲ್ಲೂ ಕುಂಡಲಿನೀರೂಪದಲ್ಲಿರು ತ್ತಾಳೆ. ಯಾರು ಸಂಸಾರಿಗಳಾಗಿ ಪಾಮರರಂತೆ ಆಗುತ್ತಾರೋ ಅವರಿಗೆ ಅವಳು ಶರೀರದಲ್ಲಿ ಮಲಗಿರುತ್ತಾಳೆ. ಯೋಗಿಗಳಿಗೆ ಅವಳು ಅಲ್ಲಿ ಎಚ್ಚೆತ್ತಿರುತ್ತಾಳೆ.

ಸಂಸ್ಕೃತದಲ್ಲಿ :
ಮೂಲಾಧಾರಾದಗ್ನಿರ್ಜ್ವಲತಿ ಶಿರಸ್ತಃ ಶಶಿ ದ್ರವತಿ
ಕುಂಡಲಿನೀಮಯಿ ಮನ್ಯೇ ವೀಣಾಶಯನಾತ್ಪ್ರಬುದ್ಧೇಯಂ ||8||
ತಾತ್ಪರ್ಯ :
ಮುಲಾಧಾರದಿಂದ ಮೂಲಚಕ್ರವು, ಬೆಂಕಿಯ ಜ್ವಾಲೆಯು ಮುನ್ನುಗ್ಗುವುದು. ಯೋಗಿಯಲ್ಲಿನ ಕುಂಡಲಿನಿಯು ಎದ್ದಾಗ,  ಶಿರದಲ್ಲಿನ ಸಹಸ್ರಾರ ಚಕ್ರದಿಂದ(ಅತಿ ಎತ್ತರದ) ಶೀತಲವಾದ (ಸೋಮ) ಅಮೃತವು ಸ್ರವಿಸುವುದು. ಹೀಗಾಗಿ ವೀಣೆಯಲ್ಲಿ ಅಡಗಿರುವ ಕುಂಡಲಿನಿಯು ಏಳುವುದೆಂದು ಊಹಿಸಬಹುದು.
ಶಿರದಿಂದ ಮುಲಾಧಾರದವರೆಗಿನ (ಮೂತ್ರಪಿಂಡದ ಪ್ರದೇಶ) ಮೂಳೆಯ ರಚನೆಯು ವೀಣೆಯನ್ನು ಹೋಲುವುದು. ಅನೇಕ ಚಕ್ರಗಳು ಈ ಪ್ರದೇಶದ ಮೂಲಕ ಹಾದುಹೋಗುವವು ಹಾಗೂ ಇವನ್ನು ವೀಣೆಯ ಮೆತ್ತೆಯಿಂದ ಎದ್ದಂತೆ ಹೇಳಲಾಗುವುದು.
ಕುಂಡಲಿನಿ, ವೀಣಾ ಶಯನ, ಇತ್ಯಾದಿಗಳು ತಂತ್ರ ಪದ್ಧತಿಯಲ್ಲಿ ಉಪಯೋಗಿಸುವ ಪದಗಳು.

ವಿವರಣೆ :
ಮುಲಾಧಾರದಿಂದ ಅಗ್ನಿಯು ದೀಪ್ತವಾಗುತ್ತದೆ. ಸಹಸ್ರಾರದಿಂದ (ಶಿರದಿಂದ) ಅಮೃತರೂಪವಾದಸೋಮವು ಸ್ರವಿಸುತ್ತದೆ. ಈ ಕುಂಡಲಿನಿಯು ವೀಣೆಯೆಂದು ಯೋಗಶಾಸ್ತ್ರದಲ್ಲಿ ಪ್ರಸಿದ್ಧವಾದ ಶರೀರವೆಂಬ ಹಾಸಿಗೆಯಿಂದ ಎಚ್ಚೆತ್ತುಕೊಳ್ಳುತ್ತಾಳೆ.
ಸಹಸ್ರಾರದಿಂದ ಮುಲಾಧಾರದವರೆಗೂ ಇರುವ ಅಸ್ಥಿಪಂಜರಕ್ಕೆ ಯೋಗಶಾಸ್ತ್ರದಲ್ಲಿ ವೀಣೆಯೆಂದು ಹೆಸರು. ಅಲ್ಲಿ ಕುಂಡಲಿನಿಯು ಪ್ರಬುದ್ಧಳಾಗಿರುತ್ತಾಳೆ. ಈ ವಿಚಾರವನ್ನು ನಾಲ್ಕನೇ ಸ್ತಬಕದಲ್ಲಿನ 6 ಹಾಗೂ 7 ನೇ ಶ್ಲೋಕಗಳ ವಿವರಗಳಲ್ಲಿ ವಿವರಿಸಲಾಗಿದೆ.

ಸಂಸ್ಕೃತದಲ್ಲಿ :
ಯದ್ದ್ರವತಿ ತತ್ರ ಕಿಂ ತ್ವಂ ಕಿಂ ತತ್ರ ತ್ವಮಸಿ ಯಜ್ಜ್ವಲತಿ
ಕಿಮು ತತ್ರಾಸಿ ಮಹೇಶ್ವರಿ ಯದುಭಯಮೇತದ್ವಿಜಾನತಿ ||9||

ತಾತ್ಪರ್ಯ :
ಓ ಮಹೇಶ್ವರಿ ! ನಿನ್ನನ್ನು ಎಲ್ಲಿ ಕಾಣುವುದು? ನಿನ್ನನ್ನು ಶಿರದಲ್ಲಿ ಕಾಣಬಹುದೆ? (ಎಲ್ಲಿ ಹೊರಹಾಕುವುದು ಆಗುವುದೆ?) ಅಥವಾ ನೀನು ಪ್ರಜ್ವಲಿಸುವ ಮುಲಾಧಾರದಲ್ಲಿ ಕಾಣಬಹುದೇ? ಅಥವಾ ನೀನು ಇವೆರಡನ್ನೂ ಅರಿತಿರುವ ಹಾಗೂ ಇವೆಲ್ಲಕ್ಕೂ ಆಧಾರವಾಗಿರುವ ದಾಹರಾಕಾಶದಲ್ಲಿ ಇರಬಹುದೇ? (ಈ ಎಲ್ಲ ಅನುಭವಗಳನ್ನೂ ಉಂಟುಮಾಡುವ).
ತಂತ್ರ ಸಾಹಿತ್ಯದಲ್ಲಿ ದಹರ ಪದವನ್ನು ತಾಂತ್ರಿಕ ಪದವನ್ನಾಗಿ ಉಪಯೋಗಿಸುವರು. ಇದರ ಅರ್ಥವೆಂದರೆ ಹೃದಯದಲ್ಲಿನ ಜಾಗ. ತಂತ್ರ ಗ್ರಂಥಗಳಲ್ಲಿ ಇವುಗಳ ಬಗೆಗಿನ ತಾಂತ್ರಿಕ ಮಾಹಿತಿಗಳನ್ನು ವೀಕ್ಷಿಸಬಹುದು.

ವಿವರಣೆ :
ದೇವಿಯೇ ! ಸೋಮವು ಅಂದರೆ ಅಮೃತವು ಎಲ್ಲಿಂದ ಸ್ರವಿಸುತ್ತದೋ ಅಲ್ಲಿ ನೀನಿರುವೆಯೋ ಅತವಾ ಎಲ್ಲಿಂದ ಅಗ್ನಿಜ್ವಾಲೆಯು ಬೆಳಗುತ್ತದೋ ಆ ಮುಲಾಧಾರದಲ್ಲಿ ನೀನಿರುವೆಯೋ ಅಥವಾ ಸೋಮಸ್ರಾವ ಮತ್ತು ಅಗ್ನಿಯ ಉದ್ದೀಪನ ಇವೆರಡನ್ನೂ ಬಲ್ಲ ಹೃದಯಾಕಾಶದಲ್ಲಿ ನೀನಿರುವೆಯೋ?

ಸಂಸ್ಕೃತದಲ್ಲಿ :
ಏತಾವಗ್ನೀಷೋಮೌ ಜ್ವಾಲಭಿಶ್ಚಂದ್ರಿಕಾಭಿರಪಿ
ಆವೃಣುತಸ್ತನುಮನಯೋರ್ವ್ಯಕ್ತಿತ್ವಂ ಮೇ ಪಶುರ್ಭವತು ||10||

ತಾತ್ಪರ್ಯ :
ಅಗ್ನಿ ಹಾಗೂ ಸೋಮ ದೇವತೆಗಳು ಕ್ರಮವಾಗಿ ತಮ್ಮ ಬಿಸಿ ಜ್ವಾಲೆಗಳು ಮತ್ತು ಚಂದ್ರನಂತೆ ಶೀತಲ ಕಿರಣಗಳಿಂದ ನನ್ನ ಶರೀರವನ್ನು ಸುತ್ತುವರೆದಿರುವರು. ಇದರ ಫಲವಾಗಿ, ನನ್ನ ಅಹಂ (ಪೃಥಗಾತ್ಮ) ಯಜ್ಞದಲ್ಲಿ ಬಲಿಪಶುವಾಗಲಿ (ನಾಶವಾಗಲಿ).
ನಮ್ಮಲ್ಲಿ ಅಹಂ ಅನ್ನು ನಿವಾರಿಸಿಕೊಳ್ಳುವುದು ಮತ್ತು ದೈವೀ ಉಪಸ್ಥಿತಿಯು ಉದಾಯವಾಗುವುದು ಕುಂಡಲಿನಿಯ ಜಾಗೃತಿಯ ಫಲ. ಈ ಶ್ಲೋಕದಲ್ಲಿ ಈ ವಿಷಯವನ್ನು ವಿವರಿಸಲಾಗಿದೆ. ಮೊದಲನೇ ಸ್ತಬಕದಲ್ಲಿ ವಿಶ್ವದ ಸಂಕೇತದಂತೆ ದಕ್ಷಯಜ್ಞದ ಕಥೆಯನ್ನು ವಿವರಿಸಲಾಗಿದೆ. ಈ ಸ್ತಬಕದಲ್ಲಿ ಯೋಗಿನ ಸ್ವಯಂ ಅನುಭವಗಳನ್ನು ವ್ಯಕ್ತಪಡಿಸಲಾಗಿದೆ.

ವಿವರಣೆ :
ನನ್ನ ಚರ್ಮೇಂದ್ರಿಯದಿಂದ ತಿಳಿಯಲ್ಪಡುವ ಮುಲಾಧಾರಾಗ್ನಿಯು ಮತ್ತು ಸಹಸ್ರಾರದಿಂದ ಸ್ರವಿಸುವ ಸೋಮ ಇವೆರಡರಲ್ಲೂ ಅಂದರೆ ಅಗ್ನಿ ಸ್ತೋಮದಲ್ಲಿ ಅಹಂಕಾರದಿಂದ ಕೂಡಿದನಾನು ಬೇರೆಎಂದು ಭಾವಿಸುವ ಪೃಥಗಾತ್ಮತೆಯು ಯಜ್ಞಪಶುವಾಗಲಿ.

ಸಂಸ್ಕೃತದಲ್ಲಿ :
ಅಗ್ನಿಸ್ತ್ವಂ ಸೋಮಸ್ತ್ವಂ ತ್ವಮಧೋ ಜ್ವಲಸಿ ದ್ರ್ವಸ್ಯೂರ್ಧ್ವಂ
ಅಮೃತಮನಯೋಃ ಫಲಂ ತ್ವಂ ತಸ್ಯ ಚ ಭೋಕ್ತ್ರೀ ಚಿದಂಬ ತ್ವಂ ||11||

ತಾತ್ಪರ್ಯ :
ಓ ಮಾತೆ ! ನೀನು ಅಗ್ನಿ ಮತ್ತು ಸೋಮ ಎರಡೂ ಆಗಿರುವೆ. ಕೆಳಗಿನಿಂದ ನೀನು ಜ್ವಾಲೆಯಂತೆ ಉರಿಯುವೆ ಹಾಗೂ ಮೇಲಿನಿಂದ ಕರಗುವೆ. ಇದರ ಫಲವಾಗಿ ಅಮೃತವು ಕಂಡುಬರುವುದು ಹಾಗೂ ಅದು ಬೇರಾವುದೂ ಅಲ್ಲ, ಸ್ವತಃ ನೀನೇ. ಮತ್ತೂ, ನೀನು ಇದನ್ನು  ಜ್ಞಾನದ ಮೂಲಕ ನೈಜವಾಗಿ ಆನಂದಿಸುವವಳು.
ಆನಂದವನ್ನು ನೀಡುವವಳು, ಆನಂದಿಸುವವಳು ಹಾಗೂ ಆನಂದದ ಕ್ರಿಯೆ, ಎಲ್ಲವೂ ಒಂದೇ. ವಿಶ್ವದಲ್ಲಿನ ಸಮಸ್ತವೂ ನೀನೇ, ನಿನ್ನಿಂದಲೇ.

ವಿವರಣೆ :
ತಾಯಿಯೇ ! ಮುಲಾಧಾರದಲ್ಲಿ ಜ್ವಲಿಸುವ ಅಗ್ನಿಯೂ ಜ್ವಲನಕ್ರಿಯೆಯೂ ನೀನಾಗಿದ್ದೀಯೆ. ಸಹಸ್ರಾರದಿಂದ ಸ್ರವಿಸುವ ಸೋಮನ ದ್ರವಣಕ್ರಿಯೆಯೂ ನೀನೇ.  ಈ ಜ್ವಲನ ಮತ್ತು ಅಮೃತಸ್ರವನದಿಂದ ಉಂಟಾಗಿರುವ ಫಲರೂಪವೂ ನೀನೇ. ಇವೆಲ್ಲವನ್ನು ಅನುಭವಿಸುವ ಭೋಕ್ತ್ರಿಯಾದ ಚಿದ್ರೂಪಳೂ ನೀನೇ ಆಗಿದ್ದೀಯೆ. ಹೀಗೆ ಭೋಕ್ತೃವಾದ ಚಿದ್ರೂಪಭೋಗ್ಯವಾದ ಅಮೃತ-ಜ್ವಲನ-ದ್ರಾವಣಾತ್ಮಕವಾದ ಕ್ರಿಯೆ, ಈ ಭೋಗಕ್ಕೆ ಕಾರಣಭೂತರಾದ ಅಗ್ನೀಷೋಮರು ಎಲ್ಲವೂ ನೀನೇ ಆಗಿದ್ದೀಯೆ.

ಸಂಸ್ಕೃತದಲ್ಲಿ :
ಕಿನ್ನು ಸುಕೃತಂ ಮಯಾ ಕೃತಮಖಿಲೇಶ್ವರಿ ಕಿಂ ತಪಸ್ತಪ್ತಂ
ಕ್ರೀಡಯಸಿ ಮಾಂ ಪ್ರತಿಕ್ಷಣಮಾನಂದಸುಧಾನಿಧಾವಂತಃ ||12||

ತಾತ್ಪರ್ಯ :
ಓ ಸಮಸ್ತ ವಿಶ್ವದ ಸಾಮ್ರಾಜ್ಞಿಯೇ ! ನಾನು ಎಷ್ಟು ಅದೃಷ್ಟವಂತನು? ಪ್ರತಿ ಕ್ಷಣದಲ್ಲೂ ನೀನು ನನ್ನನ್ನು ಆನಂದದ ಅನುಭವದಲ್ಲಿ ಮುಳುಗುವಂತೆ ಮಾಡಿರುವುದಕ್ಕೆ ನಾನು ಯಾವ ತೀವ್ರವಾದ ತಪಸ್ಸನ್ನು ಮಾಡಿರುವೆ !
ನಾನು ಯಾವ ಮಹತ್ತರ ಕಾರ್ಯವನ್ನು ಮಾಡಿರುವೆ ಎಂಬುದು ನನಗರಿಯದು ಹಾಗೂ ಇದರ ಫಲವಾಗಿ ನಾನು ವರ್ಣಿಸಲಾಗದ ಅಂತರಂಗದ ಆನಂದವನ್ನು ಅನುಭವಿಸುತ್ತಿರುವೆ. ಅಸಾಧಾರಣ ಯೋಗದ ಅನುಭವಗಳು ಸಾಧಾರಣವಾದ ಸತ್ಕಾರ್ಯಗಳನ್ನು ಮಾಡುವುದರಿಂದ ಉಂಟಾಗುವ ಫಲವಲ್ಲ.
ದೇವಿಯ ಮುಂದೆ ಕವಿಯು (ಗಣಪತಿ ಮುನಿಗಳು) ಎಷ್ಟು ವಿನೀತರೆಂದರೆ ಅವರಿಗೆ ದೇವಿಯಿಂದ ಈ ರೀತಿಯ ಆಶೀರ್ವಾದವು ದೊರಕಲು ತಾವು ಯಾವು ಸತ್ಕಾರ್ಯವನ್ನು ಅಥವಾ ಕೆಲಸಗಳನ್ನೂ ಸಾಕಷ್ಟು ಮಾಡಿಲ್ಲವೆಂದು ಯೋಚಿಸುವರು. ಆದರೆ ಸರಿಯಾಗಿ ಗಣಪತಿ ಮುನಿಗಳ ಜೀವನವನ್ನು ವೀಕ್ಷಿಸಿದರೆ, ನಮಗೆ ಅರಿವಾಗುವುದೇನೆಂದರೆ ಅವರು ಮಹಾನ್ ಸಾಧಕರು. ಅವರು ಜಪ, ತಪಸ್ಸು, ಧ್ಯಾನ ಇತ್ಯಾದಿಗಳನ್ನು ಮಾತೆಯ ಅನುಗ್ರಹ ಸಂಪಾದನೆಗೆ ಜೀವನದುದ್ದಕ್ಕೂ ಮಾಡಿರುವರು.

ವಿವರಣೆ :
ಪ್ರಪಂಚದ ತಾಯಿಯೇ ! ಯಾವ ಪುಣ್ಯದ ಕೆಲಸವನ್ನು ಆಚರಿಸಿದೆನೋ ಯಾವ ತಪಸ್ಸನ್ನು ಮಾಡಿದೆನೋ ತಿಳಿಯದು. ಯಾವುದರ ಫಲವಾಗಿ ನೀನು ನನ್ನನ್ನು ಆನಂದದ ಕಡಲಿನ ಒಳಗಡೆ ಕ್ರೀಡಿಸುವಂತೆ ಮಾಡಿದ್ದೀಯೆ. ಅಂದರೆ ನನಗೆ ನಿನ್ನಲ್ಲಿ ಉಂಟಾಗಿರುವ ಭಕ್ತಿಗೆ ನೀನೇ ಕಾರಣ.

ಸಂಸ್ಕೃತದಲ್ಲಿ :
ಕ್ಷಾಂತಂ ಕಿಂ ಮಮ ದುರಿತಂ ಶಾಂತಂ ಕಿಂ ದೇವಿ ತೇ ಸ್ವಾಂತಂ
ಅನುಗೃಹ್ಣಾಸಿ ವಿಚಿತ್ರಂ ಮಾಮಪ್ಯಪರಾಧೀನಾಂ ಪ್ರಥಮಂ ||13||

ತಾತ್ಪರ್ಯ :
ಓ ದೈವೀ ಮಾತೇ ! ನಾನು ಅತ್ಯಂತ ಪಾಪಿಷ್ಠನಾದರೂ, ನೀನು ನನ್ನನ್ನು ಕ್ಷಮಿಸಿರುವಂತಿದೆ. ನನ್ನನ್ನು ಸಹಿಸಿಕೊಳ್ಳಲು ನೀನು ಆಳವಾಗಿ ಸಂತಸಗೊಂಡಿರುವೆ ಎನಿಸುವುದು. ಇಲ್ಲದಿದ್ದಲ್ಲಿ, ಹೇಗೆ ನಾನು ನಿನ್ನಿಂದ ವಿಶೇಷ ಅನುಗ್ರಹವನ್ನು ಪಡೆಯಲು ಸಾಧ್ಯ?
ಕವಿಮುನಿಗಳು ತಮ್ಮನ್ನು ಪಾಪಾತ್ಮನೆಂದು ಪರಿಗಣಿಸಿರುವರು. ಈ ರೀತಿಯ ಸ್ವಯಂ ಅಂದಾಜನ್ನು ಹೇಗೆ ಅರ್ಥೈಸಬಹುದು? ಏಕೆಂದರೆ ನಮಗೆ ಗೊತ್ತಿರುವಂತೆ ಅವರು ಯೋಗಿಗಳು, ವಿದ್ವಾಂಸರು ಹಾಗೂ ಮಹಾತ್ಮರು. ನಿಜವಾದ ವಿಷಯವೆಂದರೆ ಮಹಾತ್ಮರು ಜನಗಳು ಮಾಡಿದ ಎಲ್ಲ ಪಾಪಗಳನ್ನೂ ತಮ್ಮ ಮೇಲೆ ಸ್ವೀಕರಿಸುವರು. ಅವರು ತಾವು ವಿಶ್ವಕಟುಂಬದ ಸದಸ್ಯರೆಂದು ಭಾವಿಸುವರು.

ವಿವರಣೆ :
ತಾಯಿಯೇ ! ನನ್ನೆಲ್ಲಾ ಅಪರಾಧಗಳನ್ನು ಕ್ಷಮಿಸಿದ್ದೀಯಾ? ಆದ್ದರಿಂದಲೇ ನಿನ್ನ ಮನಸ್ಸು ನನ್ನ ವಿಷಯದಲ್ಲಿ ಸಮಾಧಾನದಿಂದ ಕುಡಿರುವುದಾಗಿದೆಯೆ? ಏಕೆಂದರೆ ನಾನು ಅಪರಾಧಗಳಲ್ಲಿ ಮೊದಲಿಗ. ನನ್ನನ್ನು ನಿನ್ನ ಅನುಗ್ರಹಪಾತ್ರನನ್ನಾಗಿಸಿದ್ದೀಯೆ. ಆಶ್ಚರ್ಯ!

ಸಂಸ್ಕೃತದಲ್ಲಿ :
ಕಾಲೇ ಕಾಲೇ ಸಂಧ್ಯಾರೂಪಾ ನೋಪಾಸಿತಾ ಭವತೀ
ವಿಚ್ಛಿನ್ನಃ ಸ್ಮಾರ್ತಾಗ್ನಿಸ್ತ್ರೇತಾ ಕುತ ಏವ ವಹ್ನಿನಾಂ ||14||

ತಾತ್ಪರ್ಯ :
ಓ ಮಾತೇ ! ನಾನು ಸರಿಯಾಗಿ ಮಾಡುವ ರೀತಿಯಲ್ಲಿ ನಿನ್ನನ್ನು ಸಂಧ್ಯಾ ರೂಪದಲ್ಲಿ ಕ್ರಮವಾಗಿ ಪೂಜಿಸಿಲ್ಲ: ಸ್ಮಾರ್ತಾಗ್ನಿ ಆಚರಣೆಗಳನ್ನೂ ಕ್ರಮಬದ್ಧವಾಗಿ ಮಾಡಿಲ್ಲ ಹಾಗಾಗಿ ತ್ರೇತಾಗ್ನಿ ಆಚರಣೆಯ ಬಗೆಗೆ ಮಾತನಾಡುವ ಅಗತ್ಯವೇ ಇಲ್ಲ.
ಕವಿಮುನಿಗಳು ಅತ್ಯಂತ ವಿನಯದಿಂದ ದೇವಿಗೆ ತಾವು ಸನಾತನ ಧರ್ಮದಲ್ಲಿ ವ್ಯಕ್ತಿಗತವಾಗಿ ಮಾಡುವ ಪೂಜಾಪದ್ಧತಿ ಗಳನ್ನು ಕ್ರಮಬದ್ಧವಾಗಿ, ವೈದಿಕ ಮತ್ತು ಇತರ ರೀತಿಯಲ್ಲಿ ಮಾಡಿಲ್ಲವೆಂದು ವಿನಂತಿಸಿಕೊಳ್ಳುತ್ತಾರೆ. ಆದರೂ ಮಾತೆಯು ಪರಿಪೂರ್ಣ ಉಪಾಸಕನಿಗೆ ನೀಡುವ ಆನಂದದ ಅನುಗ್ರಹವನ್ನು ತಮಗೂ ನೀಡುವ ಉದಾತ್ತತೆಯನ್ನು ತೋರಿರುವಳು. ದೇವಿಯ ಈ ರೀತಿಯ ಔದಾರ್ಯವನ್ನು ಕಂಡು ಕವಿಯು ಭಾವಪರವಶತೆಯನ್ನು ಅನುಭವಿಸುತ್ತಾರೆ.
ಸಂಧ್ಯಾವಂದನ, ಅಗ್ನಿಕಾರ್ಯ ಇತ್ಯಾದಿ ಕಾರ್ಯಗಳು ನಿತ್ಯಕರ್ಮಾನುಷ್ಠಾನದ ವರ್ಗದಲ್ಲಿ ಮಾಡಲೇಬೇಕಾದ ಹಾಗೂ ಇದರಿಂದಾಗಿ ಯಾವುದೇ ವಿಶೇಷ ಫಲವು ದೊರಕಡಿದ್ದರೂ, ಇದನ್ನು ಮಾಡದಿದ್ದರೆ ಅವನು ಪಾಪಿಯಾಗುವನು.
ವಿವರಣೆ :
ದೇವಿ ! ನಾನು ಆಯಾ ಸಂಧ್ಯಾಕಾಲದಲ್ಲಿ ಸಂಧ್ಯಾಸ್ವರೂಪಿಣಿಯಾದ ನಿನ್ನನ್ನು ಉಪಾಸನೆ ಮಾಡಲಿಲ್ಲ. ಔಪಾಸನಾಗ್ನಿಯನ್ನು ಮದುವೆಯಾದ ಮೇಲೆ ಆರಂಭಿಸಿ ಮಾಡಬೇಕಿತ್ತು. ಅದನ್ನು ಮಾಡಲಿಲ್ಲ. ಇನ್ನು  ಶ್ರೌತಾಗ್ನಿಗಳಾದ ದಕ್ಷಿಣಾಗ್ನಿ, ಗಾರ್ಹಪತ್ಯ ಮತ್ತು ಅಹವನೀಯವೆಂಬ ತ್ರೇತಾಗ್ನಿಗಳ ವಿಚ್ಛೇದವಿಲ್ಲದಿರುತ್ತದೆಯೇ? ಅದು ಆಗಲೇ ಬೇಕಲ್ಲವೇ?

ಸಂಸ್ಕೃತದಲ್ಲಿ :
ದಾತುಂ ನಾರ್ಜಿತಮನ್ನಂ ಬಹು ದೇವೇಭ್ಯಶ್ಚ ಭೂತೇಭ್ಯಃ
ಯತ್ಕಿಂಚಿದಾರ್ಜಿತಂ ವಾ ಕಲತ್ರಪುತ್ರಾನ್ವಿತೋsಶ್ನಾಮಿ ||15||

ತಾತ್ಪರ್ಯ :
ಮಾತೆ ! ಪ್ರಶಂಸನೀಯ ಕಾರ್ಯಗಳಾದ, ಬಡವರಿಗೆ ದಾನ ನೀಡುವುದು, ವಿವಿಧ ದೇವತೆಗಳಿಗೆ ಧಾರ್ಮಿಕ ಪೂಜೆಯನ್ನು ನಡೆಸುವುದು - ಇವುಗಳಿಗೆ ಹಣವನ್ನು ಖರ್ಚು ಮಾಡಲು ನಾನು ಸಂಪತ್ತನ್ನು ಸಂಗ್ರಹಿಸಿಲ್ಲ. ನಾನು ಸಂಪಾದಿಸಿದ ಸಂಪತ್ತು ನನಗೆ ಹಾಗೂ ನನ್ನ ಸಂಸಾರಕ್ಕೆ ತಗಲುವ ವೆಚ್ಚಕ್ಕಾಗುವಷ್ಟು ಮಾತ್ರ.
ಈ ಶ್ಲೋಕದ ನಿವೇದನೆಯೆಂದರೆ ನನ್ನ ಮನೋವೃತ್ತಿಯು ಸ್ವಾರ್ಥದಿಂದ ಕೂಡಿದ್ದು ಎಂಬುದು. ವೇದಗಳ ಅಭಿಪ್ರಾಯದ ಪ್ರಕಾರ ಗೃಹಸ್ಥನು ಚೆನ್ನಾಗಿ ಸಂಪಾದಿಸಿ ಅದನ್ನು ಬಡವರಿಗೆ ಆಹಾರ ನೀಡುವುದು, ಅತಿಥಿ ಸತ್ಕಾರ, ಪೂಜಾ ಕಾರ್ಯಕ್ರಮಗಳಿಗೆ ಖರ್ಚು ಮಾಡುವುದು ಹಾಗೂ ಭಾವಿ/ಕೆರೆ ಮತ್ತು ದೇವಸ್ಥಾನಗಳನ್ನು ನಿರ್ಮಿಸಲು, ಇತ್ಯಾದಿ ಸಮಾಜ ಸುಧಾರಣಾ ಕಾರ್ಯಕ್ರಮಗಳಿಗೆ ಉಪಯೋಗಿಸಬೇಕು. ಈ ಹಿನ್ನೆಲೆಯಲ್ಲಿ, ಕವಿಯು ಗೃಹಸ್ಥನಾದ ತಾನು ಈ ಕಾರ್ಯದಲ್ಲಿ ವಿಫಲನಾಗಿರುವುದನ್ನು ತಿಳಿಸುವ ಪ್ರಯತ್ನವನ್ನು ಮಾಡಿರುವರು.
ವಿವರಣೆ :
ದೇವೀ! ನಾನು ಎಲ್ಲ ದೇವತೆಗಳ ಪೂಜೆಗಾಗಿಯಾಗಲಿ, ಎಲ್ಲ ಪ್ರಾಣಿವರ್ಗಗಳನ್ನು ಸಂತೋಷಪಡಿಸುವುದ ಕ್ಕಾಗಲಿ ಅನ್ನವನ್ನು ಸಂಪಾದನೆ ಮಾಡಲಿಲ್ಲ. ಅಂದರೆ ಪಂಚಮಹಾಯಜ್ಞಾದಿಗಳನ್ನು ಮಾಡದೇ ಕೇವಲ ಸ್ವಾರ್ಥಪರನಾಗಿ ಜೀವನವನ್ನು ಕಳೆದೆ.

ಸಂಸ್ಕೃತದಲ್ಲಿ :
ಕಶ್ಚಿದಪಿ ಪಾಪಹಾರೀ ನ ಪುರಶ್ಚರಿತಶ್ಚ ತೇ ಮಂತ್ರಃ
ಕಂ ಗುಣಮಭಿಲಕ್ಷ್ಯ ಮಮ ಪ್ರಬುದ್ಧ್ಯಸೇsನ್ತರ್ಜಗನ್ಮಾತಃ ||16||

ತಾತ್ಪರ್ಯ :
ಓ ವಿಶ್ವ ಮಾತೆಯೇ ! ನಾನು ನನ್ನ ಪಾಪಗಳನ್ನು ದೂರಮಾಡುವ, ನಿನ್ನ ಮಂತ್ರಜಪವನ್ನು ಪರಿಣಾಮಕಾರಿಯಾಗಿ ಸಾಕಷ್ಟು ಮಾಡಿಲ್ಲವಾದರೂ. ನೀನು ನನ್ನಲ್ಲಿ ಜಾಗೃತಗೊಂಡಿರುವೆ, ಹೀಗೆ ಮಾಡಲು ನನ್ನಲ್ಲಿ ಯಾವ ವಿಶೇಷತೆಯನ್ನು ಗುರುತಿಸಿದೆ?

ವಿವರಣೆ :
ತಾಯಿಯೇ ! ನಾನು ಅನೇಕ ಮಂತ್ರಗಳನ್ನು ಬಲ್ಲೆ. ಆದರೆ ನಾನು ಯಾವ ಮಂತ್ರವನ್ನೂ ತಂತ್ರೋಕ್ತಕ್ರಮದಿಂದ ಅನುಷ್ಠಾನ ಮಾಡಲಿಲ್ಲ. ನೀನು ನನ್ನ ಯಾವ ಗುಣವನ್ನು ನೋಡಿ ನನ್ನೊಳಗೆ ಜಾಗೃತಳಾಗಿ ಪ್ರಕಾಶಿಸುತ್ತೀಯೆ?

ಸಂಸ್ಕೃತದಲ್ಲಿ :
ತವ ಮಯಿ ಪೃಥಕ್ತನೂಜಪ್ರೇಮಾ ಚೇತ್ಪಕ್ಷಪಾತೋsಯಂ
ಅಥವಾ ಸತಾಂ ನಿಸರ್ಗಃ ಸೋsಯಂ ತ್ವಯಿ ಚಾಂಬ ಸಂಭಾವ್ಯಃ ||17||
ತಾತ್ಪರ್ಯ :
ನಿನ್ನ ಪುತ್ರನಾದ ನನ್ನನ್ನು ವಿಶೇಷ ರೀತಿಯಲ್ಲಿ ಅನುಗ್ರಹಿಸುವುದಾದರೆ, , ಮಾತೆ ! ನೀನು ಒಬ್ಬರಿಗೆ ಮಾತ್ರ ಪಕ್ಷಪಾತಿಯೆಂದು ಆರೋಪಿಸುವರು (ನಿಜವಾಗಿ ನೋಡಿದರೆ ಎಲ್ಲರೂ ನಿನ್ನ ಮಕ್ಕಳೇ). ಆದರೂ ಇದು ನಿನಗೆ ನಿಂದನೆಯಲ್ಲವೇ ಅಲ್ಲವೇಕೆಂದರೆ ಶ್ರೇಷ್ಠ ಮನಸ್ಸಿನ ಸ್ವಾಭಾವಿಕ ಗುಣವು ಬೇರೆಯವರಿಗೆ ಒಳ್ಳೆಯದನ್ನೇ ಮಾಡುವುದು.
ಗಣಪತಿ ಮುನಿಗಳು ಅನುಭವಿಸುತ್ತಿರುವ ಯೋಗಾನುಭವವು (ಆನಂದಾನುಭವ) ದೇವಿಯ ಕರುಣೆಯಿಂದ ಕೂಡಿದ ಅನುಗ್ರಹದಿಂದ ಹಾಗೂ ಅದು ನನ್ನ ಯೋಗ್ಯತೆಗೆ ಮೀರಿದ್ದು ಎಂದು ಕವಿ ಮುನಿಗಳ ಅಭಿಪ್ರಾಯ.

ವಿವರಣೆ :
ತಾಯಿ ! ಇಷ್ಟೆಲ್ಲಾ ಆದರೂ ನೀನು ನನ್ನಲ್ಲಿ ವಿಶೇಷ ಕೃಪೆಯನ್ನು ತೋರಿದರೆ, ಅದು ಪಕ್ಷಪಾತವಾದೀತು. ಆದರೆ ಮಹಾತ್ಮರ ಸ್ವಭಾವವೇ ಅದಾಗಿರುತ್ತದೆ. ಅದು ನಿನ್ನಲ್ಲುಂಟಾದರೆ ಉಚಿತವೇ ಆದೀತು.

ಸಂಸ್ಕೃತದಲ್ಲಿ :
ಲಕ್ಷ್ಯಂ ವಿನೈವ ಮಂತ್ರಃ ಕಿಂ ಸಿದ್ಧ್ಯತಿ ಕೋಟಿಶೋsಪ್ಯುಕ್ತಃ
ದಧ್ಮಸ್ತದ್ಯದಿ ಲಕ್ಷ್ಯಂ ತವ ರೂಪಂ ಗಲತಿ ಹಾ ಮಂತ್ರಃ ||18||

ತಾತ್ಪರ್ಯ :
ಮಾತೇ ! ಗುರಿ, ರೂಪಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸದೆ, ಮಂತ್ರ, ಜಪಗಳನ್ನು ಮಾಡಿದಲ್ಲಿ ಅದು ಫಲವನ್ನು ಕೊಡುವುದೇ? ಇಲ್ಲ. ಆದ್ದರಿಂದ ಮಂತ್ರವನ್ನು ಉದ್ದೇಶಪೂರ್ವಕವನ್ನಾಗಿ ಮಾಡಲು ನಿನ್ನ ಕಾಂತಿಯುಕ್ತ ರೂಪವನ್ನು ನಾನು ಯೋಚಿಸುವೆ, ಅದು ನನ್ನನ್ನು ಮಂತ್ರವನ್ನು ಮರೆಯುವಷ್ಟರ ಮಟ್ಟಿಗೆ ಮೈಮರೆಸುತ್ತದೆ! ಎಂಥಾ ವಿಪರ್ಯಾಸ ! ಹೇಗೆ ನಾನು ಈ ವಿಧದ ದ್ವಂದ್ವದಿಂದ ಹೊರಬರಲಿ?

ವಿವರಣೆ :
ದೇವಿಯೇ ! ಒಂದು ವಿಗ್ರಹರೂಪವನ್ನೋ ಅಥವಾ ಶ್ರೀಚಕ್ರರುಪದಲ್ಲೋ ನಿನ್ನನ್ನು ಧ್ಯಾನ ಮಾಡಿದರೆ ಆ ಮಂತ್ರವು ಕೋಟಿ ಸಂಖ್ಯೆಯಿಂದ ಜಪಿಸಿದರೂ ಅದು ಫಲವನ್ನು ನೀಡುವುದಿಲ್ಲ. ಒಂದು ವೇಳೆ ಧ್ಯಾನಕ್ಕೆ ಅಥವಾ ಜಪಕ್ಕೆ ಒಂದು ಅಲಂಬನವನ್ನು ಕೊಟ್ಟು ಜಪಿಸಿದರೆ ಆಗ ಮಂತ್ರವೇ ಜಾರಿ ಬೀಳುತ್ತದೆ. ನಿನ್ನ ರೂಪವನ್ನೂ ಚಿಂತಿಸಿದಾಗ ಜಪಿಸಿದವನಿಂದ ಮಂತ್ರವು ಬಿಡಲ್ಪಡುತ್ತದೆ. ಇದು ಮಹತ್ತರವಾದ ಕಷ್ಟವಾಗಿದೆ.

ಸಂಸ್ಕೃತದಲ್ಲಿ :
ಸಂಕಲ್ಪಾನಾಂ ವಾಚಾಮನುಭೂತೀನಾಂ ಚ ಯನ್ಮೂಲಂ
ಯತ್ರ ಪ್ರಾಣೋ ಬದ್ಧಸ್ತಲ್ಲಕ್ಷ್ಯಂ ದೇವಿ ತೇ ರೂಪಂ ||19||

ತಾತ್ಪರ್ಯ :
ಓ ದೇವಿ ! ಸಮಸ್ತ ಸಂಕಲ್ಪಗಳಿಗೂ ನೀನೇ ಮೂಲಕಾರಣ, ಅಂತರಂಗದ ಆಲೋಚನೆಗಳು, ಬಾಹ್ಯದ ಸಮಸ್ತ ಮಾತನಾಡುವ ಶಕ್ತಿ, ಮತ್ತು ಎಲ್ಲ ಭಾವನೆಗಳು. ನಿನ್ನಲ್ಲಿ ಕಂಡುಬರುವುದು, ಜೀವ ಮತ್ತು ಮುಖ್ಯ ಪ್ರಾಣ. ಅದು ನನ್ನ ಧ್ಯಾನಸ್ಥಿತಿಯ ಮೂಲಕ ಆ ನಿನ್ನ ರೂಪವನ್ನು ಅರಿಯಲು ಪ್ರಯತ್ನಿಸುವೆ.
ದೈವೀ ಮಾತೆಯು ಮಾತುಗಳ, ಆಲೋಚನೆ ಮತ್ತು ಭಾವನೆಗಳ ಮೂಲ ಕಾರಣ. ಧ್ಯಾನದ ಮೂಲಕ ಸಾಧಕನು ಇದನ್ನು ಅರಿಯಬೇಕು. ಏಕೆಂದರೆ ಹಾಗೆ ಮಾಡಿದಾಗ ಮಾತ್ರ ಧ್ಯಾನದ ನಿಜವಾದ ಲಾಭವನ್ನು ಪಡೆಯುವ ಮೂಲವನ್ನು ತಲುಪಲು ಸಾಧ್ಯ.

ವಿವರಣೆ :
ಎಲೌ ತಾಯಿಯೇ ! ನಮ್ಮ ಚಿತ್ತವೃತ್ತಿಗಳ ಉಚ್ಚರಿಸಲ್ಪಡುವ ಶಬ್ದಗಳ ಸಕಲ ವೇದಗಳ ಉತ್ಪತ್ತಿಸ್ಥಾನವಾಗಿ ಯಾವುದಾಗಿದೆಯೋ ಅದು ನಿನ್ನ ಸ್ವರೂಪವು ಧ್ಯಾನಿಸಲ್ಪಡಬಹು ದಾದುದಾಗಿ ಆಗುತ್ತದೆ.
ಮಾತು, ಪ್ರಾಣ, ಮನಸ್ಸು ಮತ್ತು ವೇದಗಳ ಮೂಲಸ್ಥಾನವಾಗು ಯಾವುದಿದೆಯೋ ಅದೇ ನಿನ್ನನ್ನು ಧ್ಯಾನಿಸಲು ಯೋಗ್ಯವಾದ ಸ್ಥಳವಾಗಿದೆ.

ಸಂಸ್ಕೃತದಲ್ಲಿ :
ನೈಸರ್ಗಿಕಸ್ವವೃತ್ತೇರಹಂಕೃತೇರ್ಮೂಲಮನ್ವಿಷ್ಯ
ತ್ವಾಂ ಕಿಲ ಸಾಕ್ಷಾತ್ಕುರುತೇ ರಮಣಮಹರ್ಷೇರಿಯಂ ದೃಷ್ಟಿಃ ||20||

ತಾತ್ಪರ್ಯ :
ಭಗವಾನ್ ರಮಣ ಮಹರ್ಷಿಗಳ ಮೂಲ ತತ್ತ್ವವಾದನಾನು ಯಾರು (ಅಹಂ)” ಎಂಬುದಕ್ಕೆ ಉತ್ತರವನ್ನು ಅರಸುವ ಮಾರ್ಗವನ್ನು ಸ್ವಾಭಾವಿಕವಾಗಿ ಹಾಗೂ ಸುಲಭ ರೀತಿಯನ್ನು ನಾನು ಅರಿಯಲಿಚ್ಛಿಸುತ್ತೇನೆ.
ರಮಣ ಮಹರ್ಷಿಗಳು ತಮ್ಮ ಶಿಷ್ಯರಿಗೆ, ಎಲ್ಲ ಅನುಭವಗಳ ಮತ್ತು ಭಾವನೆಗಳ ಮೂಲವನ್ನು ಅರಿಯಲು, ಅಹಂ ನ ಮಾರ್ಗ ಅಥವಾ ಸಾಮಾನ್ಯ ರೀತಿಯಲ್ಲಿ ಹೇಳುವಂತೆನಾನು”, ಅಂದರೆ ಅಹಂಕೃತಿಗಳ ಜಾಡನ್ನು ಹಿಡಿಯಿರೆನ್ನುವರು. ಅವರು ಮಾನಸಿಕ ಹಾಗೂ ದೈಹಿಕವಾಗಿ ಅಪಾರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಬೇರೆ ಯಾವುದೇ ಉಪಾಸನೆ ಅಥವಾ ಪೂಜೆ, ಅರ್ಚನೆಗಳನ್ನು ಸೂಚಿಸಲಿಲ್ಲ. ಹೀಗಾಗಿ, ರಮಣ ಮಹರ್ಷಿಗಳ ಈ ರೀತಿಯ ಮಾರ್ಗವನ್ನುನೈಸರ್ಗಿಕಸ್ವಾಭಾವಿಕವೆಂದು ವಿವರಿಸಲಾಗಿದೆ. ಕವಿ ಕಾವ್ಯಕಂಠ ಗಣಪತಿ ಮುನಿಗಳು ಅರುಣಾಚಲದ ಸುಪ್ರಸಿದ್ಧ ಭಗವಾನ್ ರಮಣ ಮಹರ್ಷಿಗಳ ಅತ್ಯಂತ ಪರಮ ಶಿಷ್ಯರು.

ವಿವರಣೆ :
ಸ್ವಾಭಾವಿಕವಾದ (ಪ್ರಯತ್ನವಿಲ್ಲದ) ತನ್ನ ಇರುವಿಕೆಯಿಂದ ನಾನು ಎಂಬ ಅನುಭವದ ಉತ್ಪತ್ತಿಸ್ಥಾನವನ್ನು ಹುಡುಕಿ ಪುಜ್ಯೇಯಾದ, ಚಿತ್ ಸ್ವರೂಪಿಣಿಯಾದ ಸಾಕ್ಷಾತ್ಕರಿಸುತ್ತೇನ ಲ್ಲವೇ? ಇದು ನನ್ನ ಗುರುವಾದ ರಮಣ ಮಹರ್ಷಿಗಳ ಸಾಕ್ಷಾದ್ದರ್ಶನವಾಗಿ ಆಗುತ್ತದೆ.

ಸಂಸ್ಕೃತದಲ್ಲಿ :
ಮನ್ಯೇ ಪರ್ವತಕನ್ಯೇ ಮಮ ಸೇಯಮಹಂಕೃತಿರ್ಮಹತೀ
ಅವತರತಾ ವರ್ಷಗಣೈರಪಿ ತನ್ಮೂಲಂ ನ ಲಬ್ದಮಹೋ ||21||

ತಾತ್ಪರ್ಯ :
ಓ ಪರ್ವತರಾಜನ ಪುತ್ರಿಯೇ ! ಅನೇಕ ವರ್ಷಗಳ ಪ್ರಯತ್ನದ ನಂತರವೂ ನನಗೆ ಅಹಂಕೃತಿಯ ಮೂಲವನ್ನು ತಲುಪಲಾಗದೆ ಇದ್ದದ್ದರಿಂದ ನಾನು ನನ್ನ ಅಹಂ ಅನ್ನು ಪಾಲಿಸಿಕೊಂಡು ಹೋಗುತ್ತೇನೆ.
ಶ್ಲೋಕದಲ್ಲಿನಅವತರತಪದವು ಇಲ್ಲಿ ಗಮನಾರ್ಹವಾದದ್ದು. ಅದಕ್ಕೆ ಎರಡರ್ಥ.
1.    ಶಿರಸ್ಥಾಃ ಅವತರತ - ಆಲೋಚನೆಯ ಉಗಮವಾದ ಶಿರದಿಂದ ಭಾವನೆಯ ಸ್ಥಳವಾದ ಹೃದಯದವರೆಗೂ ಅಧೋಮುಖವಾಗಿ ಧ್ಯಾನವನ್ನು ಮಾಡುವುದು.
2.    ಒಟ್ಟಾರೆ ಬೇರೆ ಪ್ರಪಂಚದಿಂದ ಅವತರಿಸಿದ. ದೇವರೂ ಸಹ ವಿಶೇಷವಾಗಿ ಅಹಂಕೃತಿಮೂಲ ವನ್ನರಿಯಲು ಮರ್ತ್ಯಲೋಕಕ್ಕೆ ಇಳಿದು ಬರಲೇ ಬೇಕು. ಪ್ರಪಂಚದ ಮೂಲಭೂತ ಸತ್ಯವನ್ನರಿಯಲು ಮನುಷ್ಯ ರೂಪವು ಬಹಳ ಉಪಯೋಗವಾಗುವುದೆಂದು ವೇದೋಪನಿಷತ್ತುಗಳು ಘೋಷಿಸುತ್ತವೆ.

ವಿವರಣೆ :
ಪರ್ವತರಾಜ ಪುತ್ರಿಯೇ! ನಾನು ಮನಸ್ಸಿನ ಸ್ಥಾನವಾದ ಶಿರದಿಂದ ಹೃದಯದ ಕಡೆಗೆ ಅನೇಕ ವರ್ಷಗಳಿಂದ ಇಳಿಯುತ್ತಿದ್ದರೂ ಅಥವಾ ದೇವಲೋಕದಿಂದ ಮನುಷ್ಯ ಲೋಕಕ್ಕೆ ಇಳಿದುಬಂದಿದ್ದರೂ, ಅಹಂಕಾರ ತತ್ತ್ವದ ಮೂಲವಾದ ಚಿನ್ಮಾತ್ರಸ್ವರೂಪಿಣಿ ಯಾದ ನಿನ್ನನ್ನು ಕಾಣಲಾಗಲಿಲ್ಲ.
ಅವತರತಾ = ದೇವಲೋಕದಿಂದ ಮನುಷ್ಯಲೋಕಕ್ಕೆ ಇಳಿದುಬಂದಿರುವ ನನಗೆ ಅಹಂಕಾರ ತತ್ತ್ವದ ಮೂಲವು ದೊರಕಲಿಲ್ಲವೆಂದೂ ಅರ್ಥೈಸಬಹುದು.

ಸಂಸ್ಕೃತದಲ್ಲಿ :
ಏಷ ಪ್ರೌಢೋ ಭಗವತಿ ಬಹುಲಂ ಗರ್ಜತ್ಯಹಂಕಾರಃ
ಏತಸ್ಮಿನ್ನಯಿ ಕಾಲೇ ಭವತೀ ಚಾಬೋಧಿ ಕುಂಡಲಿನೀ ||22||

ತಾತ್ಪರ್ಯ :
ಓ ದೈವತ್ವವೇ ! ನನ್ನ ಈ ಅಹಂಕಾರವು ಎಷ್ಟರಮಟ್ಟಿಗೆ ಬೆಳೆದಿದೆಯೆಂದರೆ ಅದು ಮೋಡಗಳು ಮಾಡುವ ಶಬ್ದದಂತೆ ಆಳವಾದ ಶಬ್ದವನ್ನುಂಟುಮಾಡುವುದು. ಈ ರೀತಿಯ ಪ್ರತಿಕೂಲ ಪ್ರಭಾವದಲ್ಲೂ ನನ್ನಲ್ಲಿನ ಕುಂಡಲಿನಿಯು ಜಾಗ್ರತವಾಗುವುದು. (ಎಂತಹ ಆಶ್ಚರ್ಯ !)
ಕುಂಡಲಿನಿಯು ಜಾಗ್ರತವಾದಾಗ ಅಹಂಕಾರವು ಶಕ್ತಿಯುತವಾಗಿರಲು ಅಸಾಧ್ಯ. ಸಾಮಾನ್ಯವಾಗಿ ಅದು ಶಮನಗೊಳ್ಳುವುದು. ಆದರೆ ನನ್ನಲ್ಲಿ ಇದು ಬೇರೆಯೇ ಆಗುವುದು.

ವಿವರಣೆ :
ನನ್ನ ಈ ಅಹಂಕಾರವು ಈಗ ಪ್ರೌಢವಾಗಿ ಘರ್ಜಿಸುತ್ತಿದೆ. ಈ ಘರ್ಜನ ಕಾಲದಲ್ಲಿ ಕುಂಡಲಿನಿ ಶಕ್ತಿಯು ಮತ್ತು ನೀನೂ ಪ್ರಬುದ್ಧರಾಗಿರುವಿರಿ.ಕುಂಡಲಿನೀ ಶಕ್ತಿಯು ಪ್ರಬುದ್ಧವಾದರೆ ಅಹಂಕಾರವು ಕೆಲಸಮಾಡುವುದಿಲ್ಲವೆಂದು ಅರ್ಥ.

ಸಂಸ್ಕೃತದಲ್ಲಿ :
ತವ ಪಶ್ಚಾತ್ಸಂಭೂತಿಂ ಜಾನಾತಿ ನ ಸೋsಯಮದ್ಯಾಪಿ
ಪ್ರಾಗಿವ ಗರ್ಜತಿ ಧೀರಂ ಬಿಭೇತಿ ಮೃತ್ಯೋರ್ನ ನೇದಿಷ್ಠಾತ್ ||23||

ತಾತ್ಪರ್ಯ :
ಓ ಭಗವತಿ ! ಅಹಂ ತತ್ತ್ವಕ್ಕೆ ನಿನ್ನ ಜನ್ಮದಬಗ್ಗೆ  ಏನೂ ಗೊತ್ತಿಲ್ಲ. ಅದು ತನ್ನ ಮಿತಿಮೀರಿದ ಅಜ್ಞಾನದಿಂದ ವ್ಯರ್ಥವಾಗಿ ಘರ್ಜಿಸುವುದು. ಅದು ಎಷ್ಟರ ಮಟ್ಟಿಗೆ ಅಸಂವೇದಿಯಾಗಿದೆ ಯೆಂದರೆ ಸಾವಿನ ಹತ್ತಿರದಲ್ಲೂ ಅದು ಧೈರ್ಯವಾಗಿರುವುದು.
ಕುಂಡಲಿನಿಯು ಎಷ್ಟು ಶಕ್ತಿಶಾಲಿಯೆಂದರೆ ಅದು ಜಾಗೃತವಾದಾಗ ಅಹಂ ತತ್ತ್ವವನ್ನು ಅಧೀನಗೊಳಿಸುತ್ತದೆ. ಕುಂಡಲಿನಿಯು ಜಾಗೃತವಾದಾಗ ಅಹಂಕೃತಿಯು ಬೆಂಕಿಯೆದುರು ಮಂಜುಗಡ್ಡೆ ಕರಗುವಂತೆ ಕರಗುವುದು. ಯೋಗಿಯ ಈ ಅನುಭವವನ್ನು ಸಾಂಕೇತಿಕವಾಗಿ ಇಲ್ಲಿ ವಿವರಿಸಲಾಗಿದೆ.

ವಿವರಣೆ :
ಈ ಅಹಂಕಾರವು ಮುಂದೆ ನೀನು ಹುಟ್ಟವುದನ್ನು ಅರಿಯದೆ ಘರ್ಜಿಸುತ್ತದೆ. ಕುಂಡಲಿನಿಯು ಹುಟ್ಟುವ ಮೊದಲು ಘರ್ಜಿಸುತ್ತದೆ. ಸಮೀಪದಲ್ಲಿರುವ ಮೃತ್ಯುವಿನಿಂದ ಭಯಪಡುವುದಿಲ್ಲ. ಯೋಗಸಾಧನದಲ್ಲಿ ಪುರೋಮಾರ್ಗ ಮತ್ತು ಪಶ್ಚಾನ್ಮಾರ್ಗವೆಂಬ ಎರಡು ಮಾರ್ಗಗಳು ರಾಜಯೋಗಸಾರವೆಂಬ ಗ್ರಂಥದಲ್ಲಿ ಪ್ರತಿಪಾದಿತವಾಗಿದೆ. ಅವು ಇಲ್ಲಿ ಹೇಳಲ್ಪಟ್ಟಿವೆ.

ಸಂಸ್ಕೃತದಲ್ಲಿ :
ಅತಿಪುಷ್ಪಮಹಂಕಾರಂ ಪಶುಮೇತಂ ತುಭ್ಯಮರ್ಪಯೇತೇ
ಪ್ರಮಥಪತಿಪ್ರಾಣೇಶ್ವರಿ ಗಣಪತಿರೇಕಾಂತಭಕ್ತೋsಯಂ ||24||

ತಾತ್ಪರ್ಯ :
ಓ ಪ್ರಮಥಗಣಗಳೊಡೆಯನ ಪ್ರೀತಿಯ ಪತ್ನಿಯೆ ! ನಿನಗೆ ಮೀಸಲಾದಗಣಪತಿಯು ಮತ್ತು ಕೇವಲ ಗಣಪತಿ ಮಾತ್ರ ತನ್ನ ಪೂರ್ಣವಾಗಿ ಬೆಳೆದ ಪ್ರಾಣಿಯಂತಿರುವ ಅಹಂಕೃತಿಯನ್ನು ಅರ್ಪಿಸುವನು. ಈ ಕಾಣಿಕೆಯನ್ನು ಸ್ವೀಕರಿಸಿ ಮತ್ತು ನನಗೆ ಅತ್ಯುತ್ತಮವೆನಿಸುವ ನಿನ್ನ ಅನುಗ್ರಹವನ್ನು ಕರುಣಿಸು.

ವಿವರಣೆ :
ಪ್ರಮಾತನಾಥನ ಪ್ರಾಣಕಾನಂತೆಯೇ ! ನಿನಗೆ ನಾನು ಏಕಾಂತ ಭಕ್ತನಾದ ಗಣಪತಿಯಾಗಿದ್ದೇನೆ. ನಾನು ಅತ್ಯಂತ ಪುಷ್ಟವಾದ ಅಹಂಕಾರವೆಂಬ ಈ ಪಶುವನ್ನು ನಿನಗೆ ಬಲಿಯನ್ನಾಗಿ ಅರ್ಪಿಸುತ್ತೇನೆ. ಇದನ್ನು ಸ್ವೀಕರಿಸಿ ನೀನು ಮಾಡಬೇಕಾದದ್ದನ್ನು ಮಾಡು.

ಸಂಸ್ಕೃತದಲ್ಲಿ :
ಉಪಗೀತಯೋ ಗಣಪತೇರುಪತಿಷ್ಠಂತಾಮಿಮಾಃ ಪ್ರೀತ್ಯಾ
ಉತ್ಸವಸಹಸ್ರಲೋಲಾಮುಕಾರವಾಚ್ಯಸ್ಯ ಗೃಹನಾಥಾಂ ||25||              350

ತಾತ್ಪರ್ಯ :
ಉಪಗೀತಿ ಛಂದಸ್ಸಿನಲ್ಲಿ ರಚಿಸಿದ ಈ ಶ್ಲೋಕಗಳನ್ನು ಮೂರುಅಕ್ಷರಗಳಾದ - ಶಿವಾ; ನೂರಾರು ಅನುಭವಿ ಯೋಗಿಗಳಲ್ಲಿ ಹರಡಿಕೊಂಡಿರುವ ಮಹಿಳೆಯ ಕುಂಡಲಿನಿ ಈಶ್ವರನ ಪತ್ನಿಯನ್ನು ಸಂತೋಷಪಡಿಸಲಿ.

ವಿವರಣೆ :
ಗಣಪತಿಯು ಈ ಉಪಗೀತಿ ಎಂಬ ಛಂದಸ್ಸಿನಲ್ಲಿ ಹೇಳಲ್ಪಟ್ಟಿರುವ ಈ ಸ್ತೋತ್ರಗಳು, “ಕಾರದಿಂದ ಹೇಳಲ್ಪಡುವ ಶಿವನ ಗೃಹಿನಿಯನ್ನು ಸಮೀಪಿಸಿ ಸೇವಿಸಲಿ.

ಹದಿನಾಲ್ಕನೇ ಸ್ತಬಕವು ಮುಗಿಯಿತು

ಪುಷ್ಪಗುಚ್ಛ (ಸ್ತಬಕ) – 15 - ಛಂದಸ್ಸು ಸ್ವಾಗತಾವೃತ್ತ;
ಶಕ್ತಿಯನ್ನು ಕುರಿತು ಧ್ಯಾನ ಅಥವಾ ಧ್ಯಾನದ ಮೂಲಕ ದೈವೀ ಶಕ್ತಿಯ ಅವರೋಹಣ

ಈ ಸ್ತಬಕದಲ್ಲಿ ದೈವೀ ಮಾತೆಯ ವೈಭವವನ್ನು ಚಿತ್ರಿಸುವುದಲ್ಲದೆ, ಅವಳನ್ನುದ್ದೇಶಿಸಿ ಮಾಡುವ ಧ್ಯಾನದ ಕ್ರಮವನ್ನೂ ಪ್ರಸ್ತುತಪಡಿಸಲಾಗಿದೆ

ಸಂಸ್ಕೃತದಲ್ಲಿ :
ಆಪದಾಮಪಹರಂತು ತತಿಂ ನಃ
ಸಂಪದಾಮಪಿ ದಿಶಂತು ಸಮೃದ್ಧಿಂ
ದಂತಕುಂದರುಚಿದತ್ತಬಲಾನಿ
ವ್ಯೋಮಕೇಶಸುದೃಶೋ ಹಸಿತಾನಿ ||1||

ತಾತ್ಪರ್ಯ :
ಮಲ್ಲಿಗೆ ಮೊಗ್ಗಿನಂತಿರುವ ದಂತಪಂಕ್ತಿಗಳಿಂದ ಉತ್ಪತ್ತಿಯಾದ ಸೌಂದರ್ಯವು ದೇವಿಯ ಮಂದಹಾಸವನ್ನು ಇನ್ನೂ ಶಕ್ತಿಯುತವನ್ನಾ ಗಿಸಿ, ಗುಡ್ಡದಷ್ಟಾದ ತೊಂದರೆಗಳನ್ನು ನಾಶಪಡಿಸಿ ಹಾಗೂ ಸತತವಾಗಿ ಒಳ್ಳೆಯ ಅದೃಷ್ಟವನ್ನು ತಂದುಕೊಡುವುದು.
ಹಸಿತ - ನಗು, ಬಹುವಚನವನ್ನು ಈ ಶ್ಲೋಕ ದಲ್ಲಿ ಉಪಯೋಗಿಸಿರುವುದು, ಸಮೃದ್ಧತೆ ಹಾಗೂ ಸೌಮ್ಯತೆಯನ್ನು ತೋರುವುದು.

ವಿವರಣೆ :
ವ್ಯೋಮಕೇಶನಾದ ಶಿವನ ಸುಂದರಿಯಾದ ಪಾರ್ವತಿಯು ಮಲ್ಲಿಗೆ ಮೊಗ್ಗಿನಂತಿರುವ ಹಲ್ಲುಗಳ ಕಾಂತಿಯಿಂದ ಬೆಳಗುತ್ತಿರುವ ನಗು ಉಳ್ಳವಳು. ಆ ನಗುವಿನಿಂದ ದೇವಿಯು ನಮ್ಮ ವಿಪತ್ಪರಂಪರೆಯನ್ನು ಪರಿಹರಿಸಲಿ. ಹಾಗೆಯೇ ಸಂಪತ್ಸಮೃದ್ಧಿಯನ್ನು ನೀಡಲಿ.

ಸಂಸ್ಕೃತದಲ್ಲಿ :
ಅಲ್ಪಮಪ್ಯಧಿಕಶಕ್ತಿಸಮೃದ್ಧಂ
ಮಂದಮಪ್ಯಧಿಕಸೂಕ್ಷ್ಮವಿಸಾರಂ
ಸುಸ್ಮಿತಂ ಸ್ಮರವಿರೋಧಿರಮಣ್ಯಾಃ
ಕಲ್ಪತಾಂ ಮಮ ಕುಲಸ್ಯ ಶುಭಾಯ ||2||

ತಾತ್ಪರ್ಯ :
ಮಂದಹಾಸವು ಸೌಮ್ಯವಾಗಿದ್ದು ಅಪಾರ ಶಕ್ತಿಯನ್ನೊಳಗೊಂಡಿದೆ; ಮಂದಗತಿ ಹಾಗೂ ಸೂಕ್ಷ್ಮದಿಂದ ಕೂಡಿದ್ದು ಅದು ಎಲ್ಲೆಡೆಗೂ ಪಸರಿಸುವುದು; ಈ ವಿಧದ ಕಾಮಾರಿಯ ಮಂದಹಾಸವು ನನ್ನ ಸಂಸಾರವನ್ನು ಪಾವಿತ್ರ್ಯತೆಯೊಂದಿಗೆ ಹರಸಲಿ.
ವಿಭಾವನ ಮತ್ತು ವಿರೋಧಾಭಾಸ ಅಲಂ ಕಾರಗಳು; ಏಕೆಂದರೆ ಇಲ್ಲಿ ಕಾರಣವು ದುರ್ಬಲವಾಗಿದ್ದು ಪ್ರಭಾವವು ಶಕ್ತಿಯುತವಾಗಿರುವುದು.

ವಿವರಣೆ :
ಮನ್ಮಥನ ವಿರೋಧಿಯಾದ ಶಿವನ ಸುಂದರಿ ಯಾದ ಪಾರ್ವತೀದೇವಿಯ ಸುಂದರವಾದ ಮಂದಹಾಸವು ಸ್ವಲ್ಪವಾದರೂ ಅತ್ಯಧಿಕ ವಾದ ಶಕ್ತಿಯುಳ್ಳದ್ದಾಗಿದೆ. ಮೆಲ್ಲನೆ ಇದ್ದರೂ ಅತ್ಯಂತ ಸೂಕ್ಷ್ಮತೆಯಿಂದ ವೇಗವುಳ್ಳ ದ್ದಾದರೂ ಸ್ಥೂಲ ದೃಷ್ಟಿಗೆ ಗೋಚರವಾಗದು. ಆ ಮಂದಹಾಸವು ನಮ್ಮ ವಂಶಕ್ಕೆ ಶುಭವನ್ನು ಮಾಡಲಿ.

ಸಂಸ್ಕೃತದಲ್ಲಿ :
ಪುಷ್ಕರಾದ್ರವಿಮತೋ ಭುವಮೇತಾಂ
ಭೂಮಿತಶ್ಶಶಧರಂ ಕ್ರಮಮಾಣಾ
ನೈವ ಮುಂಚತಿ ಪದಂ ಬತ ಪೂರ್ವಂ
ನೋತ್ತರಂ ವ್ರಜತಿ ನೇಶಪುರಂಧ್ರೀ ||3||

ತಾತ್ಪರ್ಯ :
ಸೃಷ್ಟಿಯ ಸಮಯದಲ್ಲಿ ದೇವಿಯು ತನ್ನ ಮೊದಲ ಹೆಜ್ಜೆಯನ್ನು ಆಕಾಶದಲ್ಲಿಟ್ಟು, ಅದನ್ನು ತೆಗೆಯದೇ, ತನ್ನ ಮತ್ತೊಂದು ಹೆಜ್ಜೆಯನ್ನು ಸೂರ್ಯನ ಮೇಲೆ ಇರಿಸಿದಳು, ಏಕಕಾಲದಲ್ಲಿ ಮತ್ತೊಂದು ಹೆಜ್ಜೆಯನ್ನು ಭೂಮಿಯ ಮೇಲಿಟ್ಟಳು ಹಾಗೂ ಚಂದ್ರನ ಮೇಲೂ ಮತ್ತೊಂದು ಹೆಜ್ಜೆಯನ್ನಿಟ್ಟಳು ಇತ್ಯಾದಿ. ಇದು ಆಶ್ಚರ್ಯಕರ ಹಾಗೂ ಅನಿರೀಕ್ಷಿತವಾದದ್ದಲ್ಲವೇ?
ದೇವಿಯ ಸರ್ವಾಂತರ್ಯಾಮಿತ್ವದ ವೈಭವ ವನ್ನು ಕವಿಯು ಇಲ್ಲಿ ಸೂಚಿಸಬಯಸುವರು. ಸಾಮಾನ್ಯವಾಗಿ ಯಾರೇ ನಡೆದರೂ ಮೊದಲು ಒಂದು ಹೆಜ್ಜೆಯಿಟ್ಟು ಮತ್ತೊಂದು ಹೆಜ್ಜೆಯಿಡುವ ಮೊದಲು ಹಿಂದಿನ ಪಾದವನ್ನು ಮೇಲೆತ್ತಿದ ನಂತರವೇ ಮತ್ತೊಂದು ಹೆಜ್ಜೆ ಇಡುವುದು; ನಡಿಗೆಯು ಪಾದವನ್ನೆತ್ತುವುದು ಹಾಗೂ ನಂತರ ಇಡುವುದು, ಹೀಗೆ ಒಂದಾದ ಮೇಲೆ ಒಂದರಂತೆ ಹೆಜ್ಜೆಯಿಡುವರು. ಇದು ಸೀಮಿತ ವ್ಯಕ್ತಿತ್ವದವರಿಗೆ ಅನ್ವಯಿಸುವ ನಿಯಮ, ಆದರೆ ಅನಿಯಮಿತ ಶಕ್ತಿಯುಳ್ಳ ದೇವಿಯು ಎಲ್ಲೆಡೆ ತನ್ನ ಇರವನ್ನು ಏಕಕಾಲ ದಲ್ಲಿ ಪ್ರಕಟಿಸುವಳು. ಭೂಮಿಯ ಮೇಲಿರ ಬೇಕಾದರೆ, ಅವಳು ಆಕಾಶದಲ್ಲಿನ ತನ್ನ ಇರವನ್ನು ಖಾಲಿಮಾಡಬೇಕಿಲ್ಲ. ಅವಳು ಸರ್ವಾಂತರ್ಯಾಮಿ. ಇಲ್ಲಿಯೂ ಸಹ ಅಲಂಕಾರವನ್ನು ಉಪಯೋಗಿಸಿರುವುದು ವಿಭಾವನ ಮತ್ತು ವಿರೋಧಾಭಾಸ.

ವಿವರಣೆ :
ದೇವಿಯು, ಸೃಷ್ಟಿಯ ಕಾಲದಲ್ಲಿ ಆಕಾಶದಿಂದ ಹೊರಟು ಸೂರ್ಯನಲ್ಲಿ ಹೆಜ್ಜೆಯಿಡುವಳು. ಅನಂತರ ಭೂಮಿಯಲ್ಲಿ ಆಮೇಲೆ ಚಂದ್ರನ ಮೇಲೂ ಹೆಜ್ಜೆಯಿಡುವಳು. ಹೀಗೆ ಹೆಜ್ಜೆ ಇಡುವಾಗ ಹಿಂದೆ ಚಂದ್ರನಲ್ಲಿಟ್ಟ ಹೆಜ್ಜೆಯನ್ನು ಬಿಡದೆ ಮುಂದಿನ ಹೆಜ್ಜೆಯನ್ನು ಭೂಮಿಯ ಮೇಲಿಡುತ್ತಾಳೆ. ಎರಡೂ ಸ್ಥಳಗಳಲ್ಲಿ ಬಿಡದೆ, ಸದಾ ಚಂದ್ರನಲ್ಲಿ ಕಾಲಿಟ್ಟಿರುತ್ತಾಳೆ. ಇದು ಆಶ್ಚರ್ಯವೇ ಸರಿ.
ಲೋಕದಲ್ಲಿ ಜನರು ಹಿಂದಿನ ಹೆಜ್ಜೆಯನ್ನು ಇಟ್ಟ ನಂತರವೇ ಮುಂದಿನ ಹೆಜ್ಜೆ ಇಡುತ್ತಾರೆ. ಇವಳೋ ಅಂದರೆ ಅಸಾಧಾರಣ ಪಾದಾ ನ್ಯಾಸವುಳ್ಳವಳು. ಇದೇ ನಮಗೆ ಆಶ್ಚರ್ಯ.

ಸಂಸ್ಕೃತದಲ್ಲಿ :
ಭೂಷಣೇಷ್ವಿವ ಸವಿತ್ರಿ ಸುವರ್ಣಂ
ಮೃತ್ತಿಕಾಮಿವ ಘಟೀಷ್ವಖಿಲೇಷು
ವಿಶ್ವವಸ್ತುಷು ನಿರಸ್ತವಿಶೇಷಾಂ
ದೇವಿ ಪಶ್ಯತಿ ಸತೀಂ ವಿಬುಧಸ್ತ್ವಾಂ ||4||

ತಾತ್ಪರ್ಯ :
ಓ ಮಾತೇ ! ಬಂಗಾರದ ಒಡವೆಯಲ್ಲಿ ಬಂಗಾರವು ಅವಿಭಾಜ್ಯವಾಗಿರುವಂತೆ, ಎಲ್ಲ ಮಣ್ಣಿನ ಪಾತ್ರೆ ಇತ್ಯಾದಿಗಳಲ್ಲಿ ಮಣ್ಣು ಅವಿಭಾಜ್ಯ. ಮಡಿಕೆಯು ಮಣ್ಣಿನಿಂದ ಮಾಡಿರುವಂತೆ, ಯಾವುದೇ ವಿನಾಯಿತಿ ಯಿಲ್ಲದೇ ಜ್ಞಾನಿಗಳು ನಿನ್ನ ಅಸ್ತಿತ್ವವನ್ನು ವಿಶ್ವದಲ್ಲಿರುವ ಎಲ್ಲರಲ್ಲೂ ಕಾಣುವರು.
ವಿಶ್ವದ ರಹಸ್ಯವಾದ ದೈವೀತತ್ತ್ವದ ಸರ್ವ ವ್ಯಾಪಿತ್ವವನ್ನು ಜ್ಞಾನಿಗಳು ಅರಿಯುವರು. 

ವಿವರಣೆ :
ತಾಯಿಯೇ ! ಎಲ್ಲ ಅಭರಣಗಳಲ್ಲಿ ಚಿನ್ನವಿರುವಂತೆ, ಗಡಿಗೆ ಕುಡಿಕೆ ಇತ್ಯಾದಿಗಳಲ್ಲಿ ಮಣ್ಣಿರುವಂತೆ ನೀನೂ ಎಲ್ಲ ವಸ್ತುಗಳಲ್ಲೂ ಇರುವೆ. ನೀನು ಯಾವ ವಿಶೇಷವೂ ಇಲ್ಲದ ಅಖಂಡಚಿನ್ಮಾತ್ರಳಾಗಿರುತ್ತೀಯೆ. ಇದನ್ನು ವಿದ್ವಾಂಸನಾದವನು ಅರಿಯುತ್ತಾನೆ.

ಸಂಸ್ಕೃತದಲ್ಲಿ :
ಕಿಟ್ಟಭೂತಮಖಿಲೇಶ್ವರಜಾಯೇ
ದೃಶ್ಯಜಾತಮಖಿಲಂ ನಿಜಪಾಕೇ
ಪ್ರಾಣಬುದ್ಧಿಮನಸಾಮಿಹ ವರ್ಗಃ
ಸಾರಭೂತ ಇತಿ ಸೂರಿಜನೋಕ್ತಿಃ ||5||

ತಾತ್ಪರ್ಯ :
ಓ ವಿಶ್ವಪತಿಯ ಪತ್ನಿಯೆ ! ಪ್ರಪಂಚದಲ್ಲಿನ ಸಂವೇದ್ಯವಾದ ಎಲ್ಲವೂ, ಸತ್ಯವಾಗಿ ಹೇಳುವುದಾದರೆ ವ್ಯರ್ಥ; ನೀನು ನಿರ್ದೇಶಿಸುವ ಈ ಬದಲಾವಣೆಯ ಹಂತ ಹಾಗೂ ರೂಪಾಂತರಗಳಲ್ಲಿ ಇದು ಬಂಜರಿನಂತಾಗಿರುವುದು. ಹೀಗಿದ್ದರೂ, ತ್ರಿವಳಿಗಳಾದ - ಪ್ರಾಣ, ಬುದ್ಧಿ ಮತ್ತು ಮನಸ್ಸುಗಳು ಮಾತ್ರ ಅಸ್ತಿತ್ವವುಳ್ಳದ್ದೆಂದು ಜ್ಞಾನಿಗಳು ಹೇಳುವರು.
ಉಪನಿಷತ್ತುಗಳು ಆಧ್ಯಾತ್ಮಿಕ ಬೌದ್ಧಿಕತೆಯ ನಿಜವಾದ ಖಜಾನೆ. ಜೀವನದ ಅಸ್ತಿತ್ವದ ಸೂಕ್ಷ್ಮ ವಿಷಯಗಳನ್ನು ಅವು ವಿವರವಾಗಿ ಪ್ರತಿಪಾದಿಸುವುದು. ಕಣ್ಣಿಗೆ ಕಾಣುವುದಷ್ಟೇ ಸಂಪೂರ್ಣ ಮತ್ತು ಆ ವಸ್ತುವಿನ ಏಕೈಕವಲ್ಲ. ಆದರೆ ಇದು ಬೇರೆ ರೀತಿಯದು. ಪ್ರತಿ ಯೊಂದು ವಸ್ತುವಿನಲ್ಲೂ ಮೂಲತತ್ತ್ವ ವೊಂದು ಆಧಾರವಾಗಿರುವುದು. ಛಾಂದೋಗ್ಯೋಪನಿಷತ್ತಿನ ಆರನೇ ಪ್ರಪಾಥಕದಲ್ಲಿ ಈ ವಿಷದ ಮೇಲೆ ವಿವರವಾಗಿ ಚರ್ಚಿಸಿ, ಈ ತ್ರಿವಳಿಗಳಾದ ಕ್ರಮವಾಗಿ - ಅನ್ನ - ಅಪ್, ಮತ್ತು ತೇಜಸ್ಸ್ ಗಳು ಮನಸ್ಸು, ಪ್ರಾಣ ಮತ್ತು ವಾಕ್ ಎಂಬುದಾಗಿ ತೀರ್ಮಾನಕ್ಕೆ ಬರಲಾಗಿದೆ.

ವಿವರಣೆ :
ದೇವಿಯೇ ! ನಿನ್ನ ಪರಿಣಾಮ ಕ್ರಿಯೆಯು ಒಂದು ಪಚನಕ್ರಿಯೆ. ಆ ಕ್ರಿಯೆಯಲ್ಲಿ ದೃಶ್ಯಭೂತವಾದ ಜಗತ್ತೆಲ್ಲಾ ಮಲದಂತೆ ಕಳೆದುಹೋಗುತ್ತದೆ. ಸಾರಭೂತವಾಗಿ ಪ್ರಾಣ-ಬುದ್ಧಿ-ಮನಸ್ಸು ಈ ವರ್ಗವು ಉಳಿದುಕೊಳ್ಳುತ್ತದೆ.

ಸಂಸ್ಕೃತದಲ್ಲಿ :
ಸಾರಮೀಶ್ವರಿ ತಿಲೇಷ್ಟಿವ ತೈಲಂ
ವಿಗ್ರಹೇಷು ನಿಖಿಲೇಷು ನಿಗೂಢಂ
ಯೇ ದಿಯಾ ಮಥನತೋ ವಿದುರೇಕಂ
ತೇ ಭವಂತಿ ವಿಬುಧಾಸ್ತ್ವಯಿ ಲೀನಾಃ ||6||

ತಾತ್ಪರ್ಯ :
ಓ ವಿಶ್ವದ ಸಾಮ್ರಾಜ್ಞಿಯೇ ! ಯಾರು ತಮ್ಮ ಪಕ್ಷಪಾತರಹಿತ ಸೌಲಭ್ಯವನ್ನು ಎಚ್ಚರಿಕೆ ಯಿಂದ ಬಳಸಿ, ಎಣ್ಣೆಯ ಬೀಜದೊಳಗೆ ಎಣ್ಣೆಯಿರುವಂತೆ, ಎಲ್ಲ ಕಣ್ಣಿಗೆ ಕಾಣುವ ರೂಪಗಳ ಹಿಂದೆ ಮೂಲಭೂತ ತತ್ತ್ವವು ಆಧಾರವಾಗಿರುವುದು ಎಂಬುದನ್ನು ಅರಿಯುವರೋ ಅವರು ನಿನ್ನೊಂದಿಗೆ ಒಂದಾಗುವರು.
ವ್ಯತ್ಯಾಸವು ಮಾಯವಾಗುವುದು. ಅವರ ಮೇಲೆ ಏಕೀಕೃತ ದೃಷ್ಟಿಯು ಉದಯವಾಗು ವುದು. ಬಾಹ್ಯರೂಪದ ಇರುವಿಕೆಯನ್ನು ಪುಷ್ಠೀಕರಿಸಲು ಶ್ವೇತಾಶ್ವತರೋಪನಿಷತ್ತಿನಲ್ಲಿ ಈ ತಿಲತ್ಯಲ ಹೋಲಿಕೆಯನ್ನು ಉಪಯೋಗಿ ಸಲಾಗಿದೆ. ಅರಣಿ ಅಥವಾ ಕಟ್ಟಿಗೆಯಲ್ಲಿ ಕಣ್ಣಿಗೆ ಕಾಣದ ಅಗ್ನಿಜ್ವಾಲೆಯು ಇರುವಿಕೆ ಯನ್ನು ಈ ಉಪನಿಷತ್ತು ನಮ್ಮ ಗಮನಕ್ಕೆ ತರುವುದು. ಸರಿಯಾದ ಪ್ರಮಾಣದ ಶಕ್ತಿ ಯಿಂದ ಎರಡು ಅರಣಿಗಳನ್ನು ತಿಕ್ಕಿದಾಗ ಅದರಲ್ಲಿ ಹುದುಗಿರುವ ಬೆಂಕಿಯು ಕಂಡು ಬರುವುದು. ಹೀಗಾಗಿ ಕಣ್ಣಿಗೆ ಕಾಣಿಸುವುದ ಕ್ಕಿಂತ ಹೆಚ್ಚಿನದು ಇರುವುದೆಂಬುದು ಸತ್ಯ ಸಂಗತಿ.

ವಿವರಣೆ :
ಸ್ವಾಮಿನಿಯೇ ! ಎಳ್ಳು ಮೊದಲಾದವುಗಳಲ್ಲಿ ಎಣ್ಣೆಯು ಗೋಪ್ಯವಾಗಿ ಅಡಗಿರುವಂತೆ ಎಲ್ಲ ಶರೀರಗಳಲ್ಲೂ ಈ ರೀತಿ ಇರುತ್ತಲಿರುವ ನಿನ್ನನ್ನು ಯಾವ ವಿದ್ವಾಂಸರು ತೀಕ್ಷ್ಣವಾದ ಬುದ್ಧಿಯಿಂದ ಕಡೆದು ತಿಳಿಯುತ್ತಾರೋ ಅವರು ನಿನ್ನಲ್ಲೇ ಲೀನವಾಗುತ್ತಾರೆ.

ಸಂಸ್ಕೃತದಲ್ಲಿ :
ಆಯಸಂ ತ್ರಿಭುವನೇಶ್ವರಿ ಪಿಂಡಂ
ವಹ್ನಿನೇವ ತಪಸಾ ತನುಪಿಂಡಂ
ಯಸ್ಯ ಚಿಜ್ಜ್ವಲನಜಾಲಮಯಂ ಸ್ಯಾತ್
ತಪ್ತಮಂಬ ಸ ತವಾಲಯಭೂತಃ ||7||

ತಾತ್ಪರ್ಯ :
ಮೂರೂ ಲೋಕಗಳ ಸಾಮ್ರಾಜ್ಞಿ! ಹೇಗೆ ಕಬ್ಬಿಣದ ಉಂಡೆಯನ್ನು ಸತತವಾಗಿ ಅಗ್ನಿಯ ಮಧ್ಯದಲ್ಲಿರಿಸಿದಾಗ ಅದು ಕೆಂಪಾಗುವುದೋ, ಅದೇ ರೀತಿ ತಪಸ್ಸನ್ನಾಚರಿಸುವವನ ದೇಹವು ತಪಸ್ಸಿನ ಜ್ವಾಲೆಯಿಂದ ಜ್ವಲಿಸುವುದು. ಯಾವಾಗ ಅವನು ಆತ್ಮಜ್ಞಾನದ ಶಕ್ತಿ ಯೊಂದಿಗೆ ಆವರಿಸುವನೋ ಆಗ ಅವನು ನಿನ್ನ ವಾಸಸ್ಥಾನವನ್ನು ಸೇರುವನು.
ಕಬ್ಬಿಣದ ಉಂಡೆಯು ಅಗ್ನಿಯೊಂದಿಗೆ ನಿರಂತರವಾಗಿ ಸಂಪರ್ಕದಿಂದ ಅಗ್ನಿಯ ಚೆಂಡಾಗುವುದು. ತಪಸ್ವಿನಿಯು ನಿರಂತರ ವಾಗಿ ತಪಸ್ಸನ್ನಾಚರಿಸುತ್ತಾ ಅಸ್ತಿತ್ತ್ವದ ಸಾರವಾಗಿ, ಅಂದರೆ ಆತ್ಮಜ್ಞಾನದೊಂದಿಗೆ ರೂಪಾಂತರಗೊಳ್ಳುವನು. ಅವನು ಚಿನ್ಮಯ ಶರೀರಿಯಾಗುವನು.

ವಿವರಣೆ :
ಎಲೈ ತ್ರಿಭುವನೇಶ್ವರಿಯೇ ! ಕಬ್ಬಿಣದ ಉಂಡೆಯು ಬೆಂಕಿಯಿಂದ ತಪ್ತವಾದುದಾಗಿ ಹೇಗೆ ಅಗ್ನಿಗೆ ಆವಾಸಸ್ಥಾನವಾಗುತ್ತದೆಯೋ ಹಾಗೆಯೇ ಯಾವಾತನ ಶರೀರವು ಜ್ಞಾನ ವೆಂಬ ಅಗ್ನಿಯ ಸಮೂಹದ ವಿಕಾರವಾದು ದಾಗಿ ಆಗುತ್ತದೆಯೋ ಅಂತಹ ಶರೀರವು, ನಿನಗೆ ಅವಾಸಭೂಮಿಯಾಗುತ್ತದೆ.

ಸಂಸ್ಕೃತದಲ್ಲಿ :
ಯೋsರಣೇರ್ಮಥನತೋsತಿಪವಿತ್ರಂ
ವೀತಿಹೋತ್ರಮಿವ ವೀತಕಲಂಕಃ
ಪ್ರಾಣಮುಜ್ಜ್ವಲಯತಿ ಸ್ವಶರೀರಾತ್
ತ್ವಾಮಸಾವಭಯದೇsರ್ಹತಿ ಯಷ್ಟುಂ ||8||

ತಾತ್ಪರ್ಯ :
ಓ ನಿರ್ಭಯವನ್ನು ದಾಯಪಾಲಿಸುವ ದೇವಿಯೇ! ಹೇಗೆ ಎರಡು ಕಟ್ಟಿಗೆಗಳು ಬೆಂಕಿಗೆ ಹತ್ತಿರಬಂದಾಗ ಪರಿಶುದ್ಧವಾದ ಬೆಂಕಿಯು ಉತ್ಪತ್ತಿಯಾಗುವುದೋ, ಹಾಗೇ ಸಾಧಕನು ಮುಖ್ಯವಾದ ಪ್ರಾಣವಾಯುವನ್ನು ಹೊರ ತಂದು, ನಿನ್ನನ್ನು ಪೂಜಿಸಲು ಅರ್ಹನಾಗು ವನು.
ಸಾಧಕನು ನಿರಂತರವಾಗಿ ಆಧ್ಯಾತ್ಮಿಕ ಸಾಧನೆಗಳಾದ ತಪಸ್ಸು, ಧ್ಯಾನ ಇತ್ಯಾದಿ ಗಳನ್ನು ಮಾಡುತ್ತಾ ಶಿಸ್ತಿನ ಯೋಗಿಯಾಗು ವನು. ಈ ಶರೀರವು ಬೆಂಕಿಯ ಕಟ್ಟಿಗೆ; ಧ್ಯಾನ, ತಪಸ್ಸು, ಇತ್ಯಾದಿ ಮಾರ್ಗಗಳು ಕಟ್ಟಿಗೆಯನ್ನು ಉಜ್ಜುವ ಕಾರ್ಯ. ಕುಂಡಲಿನಿಯಿಂದ ಹೊರಬರುವ ಪ್ರಾಣಜ್ವಾಲೆಯೇ ಅಗ್ನಿ. ಈ ಸಾದೃಶ್ಯವನ್ನು ಶ್ವೇತಾಶ್ವತರೋಪನಿಷತ್ತಿನಲ್ಲಿ ನೀಡಲಾಗಿದೆ.

ವಿವರಣೆ :
ಸಮಸ್ತ ಜಗತ್ತಿಗೂ ಅಭಯವನ್ನು ನೀಡುವವಳೇ ! ಯಾರು ಮರದ ಕೊರಡಿನಿಂದ ಪವಿತ್ರವಾದ ಅಗ್ನಿಯನ್ನು ಪಡೆಯುತ್ತಾನೋ ಹಾಗೇ ತನ್ನ ಶರೀರದಿಂದ ಜೀವನ ಕಾರಣವಾದ ಪ್ರಾಣವಾಯುವನ್ನು ಪ್ರಜ್ವಲಿಸುವಂತೆ ಮಾಡುತ್ತಾನೋ ಅಂತಹ ವನು ನಿನ್ನ ಪೂಜೆಯನ್ನು ಮಾಡಲು ಅರ್ಹ ನಾಗುತ್ತಾನೆ. ವೇದವುವಾಯೋರಾಗ್ನಿಃಎಂದು ಹೇಳಿ ಪ್ರಾಣವಾಯುವನ್ನು ಅಗ್ನಿಯ ಮೂಲವೆಂದು ಹೇಳಿದೆ.

ಸಂಸ್ಕೃತದಲ್ಲಿ :
ಪ್ರಾಣತಾ ಶ್ವಸಿತಮೇವ ವಿಚಾರ್ಯಂ
ಕುರ್ವತಾ ಕರಣಮೇವ ನಿಭಾಲ್ಯಂ
ಗಚ್ಛತಾ ಗಮನಮೇವ ವಿಶೋಧ್ಯಂ
ತತ್ತನೌ ಮಥನಮಾಗಮಬೋಧ್ಯಂ ||9||

ತಾತ್ಪರ್ಯ :
ಉಸಿರಾಡುತ್ತಿರುವವನು ಕೇವಲ ಉಸಿರಾಡುವ ಪ್ರಕ್ರಿಯೆಯ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸಬೇಕು. ಯಾವ ಕಾರ್ಯದಲ್ಲಿ ವ್ಯಕ್ತಿಯು ತೊಡಗಿರುತ್ತಾನೋ ಅದರ ಮೇಲೆ ಮಾತ್ರ ಮನಸ್ಸನ್ನು ಕೇಂದ್ರೀ ಕರಿಸಬೇಕು. ನಡೆಯುತ್ತಿರುವವನು ನಡಿಗೆಯ ಬಗ್ಗೆ ಮಾತ್ರ ಚಿಂತಿಸಬೇಕು. ಶಾಸ್ತ್ರಗಳ ಹೇಳಿಕೆಯ ಪ್ರಕಾರ ಸಾಧಕನು ಉಸಿರಾಟ, ಚಲನ ಹಾಗೂ ಕ್ರಿಯೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು
ಹಿಂದಿನ ಶ್ಲೋಕದಲ್ಲಿ ಮಂಥನ ಅಂದರೆ ಕಡೆಯುವಿಕೆಯ ಪ್ರಕ್ರಿಯೆಯ ಬಗ್ಗೆ ತಿಳಿಸಲಾಯಿತು. ಈ ಶ್ಲೋಕದಲ್ಲಿ ಅದನ್ನು ಮತ್ತಷ್ಟು ವಿವರಿಸಲಾಗಿದೆ. ಉಸಿರಾಟದ ಹಿಂದೆ ಇರುವ ಶಕ್ತಿ ಯಾವುದೆಂದು ಅರಿಯುವುದು ಅತಿ ಮುಖ್ಯವಾದದ್ದು. ದೈಹಿಕ ಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆ ಕ್ರಿಯೆಯ ಮೂಲವನ್ನರಿಯಬಹುದು. ನಮ್ಮ ಸ್ವಾಭಾವಿಕ ಕ್ರಿಯೆಗಳ ಬಗ್ಗೆ ಸಂಪೂರ್ಣವಾಗಿ ಅರಿವಾಗುವ ಈ ರೀತಿಯ ಎಚ್ಚರಿಕೆಯಿಂದ ಕೂಡಿದ ಪರಿಶೀಲನೆಯನ್ನು ಶಾಸ್ತ್ರವು ಮಂಥನ ಎನ್ನುವುದು. ಈ ಸ್ಥಿತಿಯಲ್ಲಿ ಅದೇ ಹಂತದಲ್ಲಿ ಬೇರಾವುದೇ ಕ್ರಿಯೆಯಲ್ಲಿ ತೊಡಗದೇ ಇದ್ದು, ಮಂಥನದ ಕ್ರಿಯೆಯಲ್ಲೇ ಮುಂದುವರೆಯಬಹುದು.

ವಿವರಣೆ :
ನಾವು ಉಸಿರಾಡುವಾಗ ಯಾರು ಉಸಿರಾಡುತ್ತಾರೆ, ಹೇಗೆ ಉಸಿರಾಡುತ್ತಾರೆ ಎಂದು; ಕೆಲಸಗಳನ್ನು ಮಾಡುವಾಗ ಯಾರು ಕೆಲಸ ಮಾಡುತ್ತಾರೆ, ಹೇಗೆ ಕೆಲಸಮಾಡು ತ್ತಾರೆ; ಹಾಗೆಯೇ ನಡೆದಾಡುವಾಗ ಯಾರು ನಡೆದಾಡುತ್ತಾರೆ ಎಂಬುದನ್ನು ಮಥನ ಮಾಡಬೇಕು. ಹೀಗೆ ಉಸಿರಾಟ, ಕೆಲಸ ಮಾಡುವುದು, ಗಮನಾಗಮನಗಳನ್ನು ಮಾಡುವುದು ಇವು ಮೂರೂ ದೇಹದಲ್ಲಿ ಪ್ರಾಣವನ್ನು ಜ್ವಲಿಸುವಂತೆ ಮಾಡುವ ಮಥನವಾಗುವುದೆಂದು ನಿಗಮಾಗಮಗಳ ತಾತ್ಪರ್ಯ. ಕೆಲಸ ಮಾಡದೇ ಸುಮ್ಮನೆ ಕುಳಿತಿದ್ದರೂ ಉಸಿರಾಡುತ್ತೇವೆ. ಹಾಗೆ ಕುಳಿತಿದ್ದಾಗಲೂ ಉಸಿರಾಟವನ್ನು ಗಮನಿಸುವುದು ಮಥನವಾಗುತ್ತದೆ. ಆದ್ದರಿಂದ ಎಲ್ಲ ಕಾಲದಲ್ಲೂ ಆ ನಿರ್ಮಥನವನ್ನು ಮಾಡುತ್ತಿರಬೇಕು ಎಂಬುದೇ ಈ ಶ್ಲೋಕದ ತಾತ್ಪರ್ಯ.

ಸಂಸ್ಕೃತದಲ್ಲಿ :
ಯೋ ರಸಂ ಪಿಬತಿ ಮೂರ್ಧಸರೋಜಾತ್
ಸೋಮಪೋsಯಮನಘಃ ಪ್ರಯತಾತ್ಮಾ
ಅಗ್ನಿಹೋತ್ರಮಖಿಲೇಶ್ವರಿ ನಿತ್ಯಂ
ಮೂಲಕುಂಡದಹನಸ್ಥಿತಿರಸ್ಯ ||10||

ತಾತ್ಪರ್ಯ :
ಓ ಅಖಿಲೇಶ್ವರೀ ! ಮಾತೇ! ಸಹಸ್ರಾರ ಕಾರಂಜಿಯಲ್ಲಿ ಕುಡಿಯುವ ಯೋಗಿಯು ತನ್ನ ಅಂತರ್ಯವನ್ನು ಸಂಪೂರ್ಣವಾಗಿ ಶುದ್ಧಿಯಾಗಿಟ್ಟುಕೊಳ್ಳುವನು ಹಾಗೂ ಅವನನ್ನು ಸೋಮಪ ಎಂದು ಕರೆಯುವರು. ಆ ಯೋಗಿಯು ಅಗ್ನಿಹೋತ್ರವನ್ನು ದಿನಕ್ಕೆ ಮೂರುಬಾರಿ ಮಾಡುವುದಲ್ಲದೆ ಅದಕ್ಕಿಂತಲೂ ಹೆಚ್ಚು ಬಾರಿ ಮಾಡುವನು ! ಪ್ರತಿಕ್ಷಣದಲ್ಲೂ ಮೂಲಾಧಾರದಲ್ಲಿ ಉರಿಯುವ, ದಹನ ಕ್ರಿಯೆಯು ನಡೆಯುತ್ತಲೇ ಇರುತ್ತದೆ.
ಒಮ್ಮೆ ಯೋಗಿಗೆ ತನ್ನ ಮೂಲಸ್ವಭಾವವು ಅರಿವಾಯಿತೆಂದರೆ ಅಲ್ಲಿಂದ ಅವನಿಗೆ ವಿರಾಮವೆಂಬುದೇ ಇಲ್ಲ. ಸಾಧನೆಗಳ ಕಟ್ಟ ಕಡೆಯ ಫಲವೇ ಕುಂಡಲಿನಿಯ ಜಾಗ್ರತೆ. ಒಮ್ಮೆ ಈ ಸ್ಥಿತಿಯನ್ನು ತಲುಪಿದ ಸಾಧಕನಿಗೆ ಬೇರೇನೂ ಸಾಧಿಸುವ ಅಗತ್ಯತೆ ಇರುವುದಿಲ್ಲ. ವೇದಗಳಲ್ಲಿ ವಿವರಿಸಿರುವಂತೆ ಅಗ್ನಿಹೋತ್ರವು ಅಗ್ನಿಯನ್ನು ಪೂಜಿಸುವ ಧರ್ಮಾಚರಣೆ, ಇದನ್ನು ದಿನಕ್ಕೆ ಮೂರುಬಾರಿ ಆಚರಿಸಬೇಕು.

ವಿವರಣೆ :
ಯಾವ ಯೋಗಿಯು ತಲೆಯಲ್ಲಿರುವ ಸಹಸ್ರಾರದಿಂದ ಸ್ರವಿಸುವ ರಸವನ್ನು ಪಾನಮಾಡುವನೋ ಆ ಪಾಪವನ್ನು ಕಳೆದುಕೊಂಡ ಪ್ರಯತಾತ್ಮನು ನಿತ್ಯಾಗ್ನಿ ಹೋತ್ರಿಯಾಗುವನು. ಅಗ್ನಿಹೋತ್ರ ಮಾಡುವಾಗ ಇರುವ ಕಾಲನಿಯಮವಿಲ್ಲದವ ನಾಗುತ್ತಾನೆ. ಮೂಲಾಧಾರವೆಂಬ ಅಗ್ನಿಕುಂಡದಲ್ಲಿ ಜ್ವಲಿಸುವ ಅಗ್ನಿ ಸಮೂಹದಲ್ಲಿ ಅವನು ನೆಲೆಸಿರುತ್ತಾನೆ.

ಸಂಸ್ಕೃತದಲ್ಲಿ :
ಚಿನ್ಮಯೀ ಪಿಬಸಿ ಸೋಮಮಿಮಂ ಕಿಂ
ಸೋಮ ಏವ ಕಿಮಸಾವಸಿ ಮಾತಃ
ಪೀಯಸೇ ಪಿಬಸಿ ಚ ಸ್ವಯಮೇಕಾ
ಪೇಯಪಾತೃಯುಗಲಂ ಕಿಮು ಭೂತ್ವಾ ||11||

ತಾತ್ಪರ್ಯ :
ಓ ಮಾತೇ ! ನೀನು ಚಿನ್ಮಯಿ, ಪರಿಶುದ್ಧಾ ತ್ಮಳು, ಸದಾ ಸಂತೋಷವನ್ನನುಭವಿಸುವ ವಳಾದ್ದರಿಂದ, ನೀನು ಸೋಮರಸವನ್ನು ಪಾನ ಮಾಡುವೆಯಾ? ನೀನು ಸಂತೋಷ ಪಡಿಸುವವಳು ಹಾಗೂ ಸಂತೋಷಪಡು ವವಳು, ಭೋಗತ ಹಾಗೂ ಭೂಕ್ತೃತುತಳಾಗಿ ದ್ವಿಪಾತ್ರವನ್ನು ಧರಿಸುವೆ. ಇದು ನಿಜವೇ?

ವಿವರಣೆ :
ತಾಯಿಯೇ ! ಸಹಸ್ರಾರದಿಂದ ಸ್ರವಿಸುವ ಸೋಮವನ್ನು ನೀನೇ ಚಿನ್ಮಯಳಾಗಿ ಕುಡಿಯುವೆಯಾ? ಅಥವಾ ನೀನೇ ಸೋಮವಾಗಿದ್ದೀಯಾ? ಅಥವಾ ನೀನೇ ಕುಡಿಯಲ್ಪಡುವ ಸೋಮವಾಗಿ ಅದನ್ನು ಕುಡಿಯುತ್ತೀಯಾ? ಅಥವಾ ಕುಡಿಯಲ್ಪಡುತ್ತೀಯಾ?

ಸಂಸ್ಕೃತದಲ್ಲಿ :
ತೈಜಸಂ ಕನಕಮಗ್ನಿವಿತಪ್ತಂ
ತೇಜ ಏವ ಕನಕಾಂಗಿ ಯಥಾ ಸ್ಯಾತ್
ಮೋದರೂಪಕಲಯಾ ತವ ತಪ್ತಂ
ತನ್ಮಯಂ ಭವತಿ ಮೋದಜಪಿಂಡಂ ||12||

ತಾತ್ಪರ್ಯ :
ಓ ಕನಕಾಂಗಿ ! ತೇಜಸ್ ವಿಭಾಗಕ್ಕೆ ಸೇರಿದ ಬಂಗಾರವನ್ನು ಬೆಂಕಿಗೆ ಸ್ಪರ್ಶಿಸಿದಾಗ ಅದು ತೇಜಸ್ಸಿನಿಂದ ಬೆಳಗುವುದು. ಅದೇ ರೀತಿ, ಅನಂದಶರೀರವು ಅನಂದಸ್ವರೂಪದ ಒಂದು ಸಣ್ಣ ಭಾಗದೊಡನೆ ಸಂಪರ್ಕ ಹೊಂದಿದರೂ ಅದು ಸಂಪೂರ್ಣವಾಗಿ ಅನಂದದಾಯಕ ಸ್ವರೂಪದ ಅಸ್ತಿತ್ವಕ್ಕೆ ರೂಪಾಂತರವಾಗುವುದು.
ಈ ಶ್ಲೋಕದಲ್ಲಿ ಉಪನಿಷತ್ತಿನ ಸಿದ್ಧಾಂತವಾದ - ಸಮಸ್ತ ಜೀವಿಗಳೂ ಆನಂದದಿಂದ ಜನಿಸು ವರೆಂಬುದನ್ನು ಸುಂದರವಾಗಿ ವಿವರಿಸ ಲಾಗಿದೆ. ಈ ಆನಂದದಿಂದ ಹೊರಬಂದ ಜೀವಿಯು ಅನಂದಕಲೆಯಿಂದ ಸಂಸ್ಕರಿ ಸಿದಾಗ ಅದು ಅನಂದವೇ ಆಗುವುದು.
ಭಾರತೀಯ ವಿವೇಚನೆಯಾದ ತರ್ಕ ಶಾಸ್ತ್ರವನ್ನು ಪರೋಕ್ಷವಾಗಿ ಉಪಯೋಗಿಸಲಾಗಿದೆ. ಅನೇಕ ಪದಾರ್ಥಗಳನ್ನು ಬೇರೆ ಬೇರೆ ವಿಭಾಗಗಳಲ್ಲಿ ವಿಂಗಡಿಸುವಾಗ ಬಂಗಾರವನ್ನು ತೇಜಸ್ ವಿಭಾಗಕ್ಕೆ ಸೇರಿದ್ದೆಂದು ಪರಿಗಣಿಸಲಾಗಿದೆ. ಹಾಗಾಗಿ ಬಂಗಾರವನ್ನು ತೈಜಸ ಎಂದು ಕರೆಯಲಾಗುವುದು.

ವಿವರಣೆ :
ತೇಜೋಮಯವಾದ ಶರೀರವಳ್ಳ ದೇವಿಯೇ! ಗಣಿಯಲ್ಲಿ ಹುಟ್ಟಿದ ಚಿನ್ನವು ಅಗ್ನಿಯಿಂದ ಸಂಸ್ಕರಿಸಲ್ಪಟ್ಟು ಹೇಗೆ ತೇಜೋಮಯವಾಗು ತ್ತದೋ ಹಾಗೇ, “ಅನಂದಾದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇಎಂಬ ಶ್ರುತಿಯಂತೆ, ಆನಂದದಿಂದ ಹೊರಬಂದ ಈ ಶರೀರವು ನಿನ್ನ ಆನಂದದ ಅಂಶದಿಂದ ಸುಸಂಸ್ಕೃತವಾಗಿ ಅನಂದಮಯವಾಗುತ್ತದೆ.

ಸಂಸ್ಕೃತದಲ್ಲಿ :
ಕಾsಪಿ ಮೋದಲಹರೀ ತವ ವೀರ್ಚಿ-
ನಿರ್ಗತಾ ದಶಶತಾರಸುಧಾಬ್ಧೇಃ
ಪೂರಯತ್ಯಖಿಲಮಂಬ ಶರೀರಂ
ನೇಹ ವೇದ್ಮಿ ಪರಮೇ ಜಡಭಾಗಂ ||13||

ತಾತ್ಪರ್ಯ :
ಓ ಮಾತೇ ! ಅಮೃತದಿಂದ ತುಂಬಿದ ಸಹಸ್ರಾರದ ಸಮುದ್ರದಿಂದ ಹೊರಹೊಮ್ಮಿದ ಆನಂದದ ಅಲೆಗಳು ನನ್ನ ಶರೀರದ ಪ್ರತಿಯೊಂದು ಭಾಗವನ್ನೂ ಪರಮಾನಂದದ ಅನುಭವಗಳಿಂದ ತುಂಬಲಿ. ನನ್ನ ದೇಹದಲ್ಲಿ ಯಾವ ಭಾಗವನ್ನೂ ಜಡ ಅಥವಾ ಅಚೇತನ ವನ್ನಾಗಿ ನನಗೆ ಕಂಡುಬರುವುದೇ ಇಲ್ಲ.
ಕವಿ ಕಾವ್ಯಕಂಠ ಗಣಪತಿಮುನಿಗಳು ತಮ್ಮ ಸ್ವಂತ ಯೋಗಿಯ ಅನುಭವಗಳನ್ನು ಹಂಚಿಕೊಳ್ಳುತ್ತಿರುವರು. ಈ ಶ್ಲೋಕದಲ್ಲಿ ಕುಂಡಲಿನಿಯು ಜಾಗೃತವಾದಾಗ ಆಗುವ ಆನಂದದ ಅನುಭವಗಳನ್ನು ವಿವರಿಸಲಾಗಿದೆ.

ವಿವರಣೆ :
ಸಹಸ್ರಾರ ಚಕ್ರದಿಂದ ನಿನ್ನ ಅನಂದಲಹರಿ ಯು ನನ್ನ ಶರೀರವೆಲ್ಲವನ್ನೂ ತುಂಬಿಬಿಡುತ್ತದೆ. ಆಗ ನನ್ನ ಶರೀರದಲ್ಲಿ ಅಚೇತನವಾದ ಭಾಗವೇ ತಿಳಿದುಬರುವುದಿಲ್ಲ.

ಸಂಸ್ಕೃತದಲ್ಲಿ :
ಸೇಯಮುತ್ತಮತಮಾ ನಿಪತಂತೀ
ಶೀತಲಾದ್ದಶಶತಾರಪಯೋದಾತ್
ಪ್ರೇರಿತಾದಖಿಲರಾಜ್ಞಿ ಭವತ್ಯಾ
ಬುದ್ಧಿಸಸ್ಯಮವತಾದ್ರಸವೃಷ್ಟಿಃ ||14||

ತಾತ್ಪರ್ಯ :
ಓ ವಿಶ್ವದ ಸಾಮ್ರಾಜ್ಞಿಯೇ ! ಸಹಸ್ರಾರದ ತಂಪಾದ ಮೋಡಗಳಿಂದ ಉತ್ತಮವಾದ ಮಳೆಯನ್ನು ನೀನು ಹರಿಸುತ್ತಿರುವಂತೆ, ಜಾಗೃತಿ ಎಂಬ ಗಿಡವು ನೀನು ಪ್ರೇರೇಪಿಸಿದ ಅತ್ಯುತ್ತಮ ಫಲಗಳನ್ನು ನೀಡಲಿ.
ಈ ಶ್ಲೋಕದಲ್ಲಿ ಮೂರು ರೂಪಕಗಳು ಶ್ಲೋಕದ ಸ್ಫುರ್ತಿಯನ್ನು ಅರ್ಥಮಾಡಿ ಕೊಳ್ಳಲು ಅವಿಭಾಜ್ಯವಾಗಿವೆ. ಅವುಗಳು ಯಾವುವೆಂದರೆ :-
ದಶಶತರ ಪಯೋದ ಸಹಸ್ರಾರವನ್ನು ಮೋಡವಾಗಿ;
ಬುದ್ಧಿಯನ್ನು ಸಸ್ಯ ಅಥವಾ ಬೆಳೆಯನ್ನಾಗಿ; ಮತ್ತು
ಶರೀರವನ್ನು  ಬೆಳೆ ಬೆಳೆಯುವ ಕ್ಷೇತ್ರ (ಹೊಲ)ವನ್ನಾಗಿ ರೂಪಕಗಳೆಂದು ಪರಿಗಣಿಸಲಾಗಿದೆ.
ಹಿಂದಿನ ಶ್ಲೋಕದಲ್ಲಿ ಶರೀರದಲ್ಲಿರುವ ಕಡೆಯ ಚಕ್ರವಾದ ಸಹಸ್ರಾರವನ್ನು ಅಮೃತದಿಂದ ತುಂಬಿರುವ ಸಾಗರವೆಂದು ಕಲ್ಪಿಸಿಕೊಳ್ಳ ಲಾಗಿದೆ. ಎಲ್ಲ ವಿವರಣೆಗಳು ಹಾಗೂ ಕಲ್ಪನೆಗಳು ಅನುಭವದ ಮುದ್ರೆಯನ್ನೊಳ ಗೊಂಡಿದೆ. ಏಕೆಂದರೆ ಇಲ್ಲಿ ಕವಿಯು ದೈವದತ್ತವಾದ ಅಭಿವ್ಯಕ್ತಿಯನ್ನೊಳಗೊಂಡ ಯೋಗಿಯೂ ಆಗಿರುವುದರಿಂದ, ಶರೀರದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನೂ ಚಿತ್ರಸಹಿತ ವಿವರಿಸಲಾಗಿದೆ.

ವಿವರಣೆ :
ತಾಯಿಯೇ ! ನನ್ನಿಂದ ಅನುಭವಿಸಲ್ಪಡುತ್ತಿ ರುವ ರಸವೆಂಬ ಮಳೆಯು ತಂಪಾಗಿರುವ ನಿನ್ನಿಂದ ಪ್ರೇರೇಪಿಸಲ್ಪಟ್ಟು, ಸಹಸ್ರಾರವೆಂಬ ಮೋಡದಿಂದ ಹೊರಬಂದು ನನ್ನ ಬುದ್ಧಿಯೆಂಬ ಸಸ್ಯವನ್ನು ಕಾಪಾಡಲಿ.

ಸಂಸ್ಕೃತದಲ್ಲಿ :
ದುಗ್ಧಸಿಂಧುಮಥನಾದಮೃತಂ ವಾ
ಶಬ್ದಸಿಂಧುಮಥನಾತ್ಪ್ರಣವೋ ವಾ
ಲಭ್ಯತೇ ಸುಕೃತಿಭಿಸ್ತವ ವೀರ್ಚಿ-
ಮೂರ್ಧಕಂಜಮಥನಾದ್ರಸ ಏಷಃ ||15||

ತಾತ್ಪರ್ಯ :
ಓ ಮಾತೇ ! ಯಾರು ಕ್ಷೀರಸಾಗರವನ್ನು ಕಡೆದು ಅಮೃತವನ್ನು ಉತ್ಪತ್ತಿ ಮಾಡಿದರೋ ಅದರಂತೆ ಅರ್ಹರು ಸೋಮರಸವನ್ನು ಅಲೆಗಳ ಮೂಲಕ ಸ್ವಾಭಾವಿಕವಾಗಿ ಅನಂದದಿಂದಿರುವ ನಿನ್ನಿಂದ ಪಡೆಯುವರು; ಯಾರು ಶಬ್ದದ ತತ್ತ್ವವನ್ನು ಆಳವಾಗಿ ಶೋಧಿಸುತ್ತಾರೋ ಅವರಿಗೆ ಪ್ರಣವ ಅಥವಾ ಓಂಕಾರವು ಲಭಿಸುವುದು.
ಇಲ್ಲಿನ ಪ್ರಸ್ತಾಪವೆಂದರೆ ಭಾರತೀಯ ಪವಿತ್ರ ಗ್ರಂಥಗಳಲ್ಲಿ ಕಂಡುಬರುವ ಸಮುದ್ರಮಥನದ ಕಥೆ. ಪುರಾತನ ಜನಗಳು ಭಾವಿಸಿದ ಅತ್ಯಂತ ವಿಶಿಷ್ಟ ಹಾಗೂ ಅರ್ಥಪೂರ್ಣ ಸಂಕೇತವಾದ ಘಟನೆಯೇ ಸಮುದ್ರಮಥನ. ಅಂತರಂಗ ಹಾಗೂ ಬಹಿರಂಗದ ನಡುವಿನ, ಶಿಷ್ಟ ಹಾಗೂ ದುಷ್ಟರ ನಡುವಿನ ಸತತ ಘರ್ಷಣೆಯನ್ನು ಕಥೆಯ ಮೂಲಕ ಸುಂದರವಾಗಿ ಚಿತ್ರಿಸಲಾಗಿದೆ.

ವಿವರಣೆ :
ತಾಯಿಯೇ ! ಕ್ಷೀರಸಮುದ್ರವನ್ನು ಕಡೆಯುವುದರಿಂದ ಅಮೃತವನ್ನು ಪಡೆದಂತೆ, ಶಬ್ದಸಾಗರವನ್ನು ಕಡೆದುದರಿಂದ ಪ್ರಣವವು ಉಂಟಾದಂತೆ, ತಲೆಯೆಂಬ ಕಮಲವನ್ನು ಕಡೆಯುವುದರಿಂದ ನಿನ್ನ ಅನಂದಕಲೆಯಾದ ರಸವು ಭಾಗ್ಯವಂತರಿಂದ ಪಡೆಯಲ್ಪಡುತ್ತದೆ.

ಸಂಸ್ಕೃತದಲ್ಲಿ :
ಅಸ್ಥಿಷು ಪ್ರವಹತಿ ಪ್ರತಿವೇಗಂ
ಮಜ್ಜಸಾರಮಮೃತಂ ವಿದಧಾನಾ
ಬಿಭ್ರತೀ ಮದಮನುಷ್ಣಮದೋಷಂ
ಮೂರ್ಧಕಂಜನಿಲಯೇ ತವ ಧಾರಾ ||16||

ತಾತ್ಪರ್ಯ :
ಓ ಮಾತೇ ! ನಿನ್ನ ವಾಸಸ್ಥಾನವಾದ ಸಹಸ್ರಾರದಿಂದ ಶಕ್ತಿಯುತವಾದ ಸೋಮರಸವು ಭೋರ್ಗರೆದು, ಮೂಳೆಗಳ ಆಳವಾದ ಬಿರುಕುಗಳಲ್ಲಿ ಹರಿದು ಒಂದು ರೀತಿಯ ತಂಪಾದ ಹಾಗೂ ದುರ್ಗುಣರಹಿತ ವಿಚಿತ್ರವಾದ ಅರಿವನ್ನು ಸೃಷ್ಟಿಸಿದೆ.
ಮದ ಪದವನ್ನು ಈ ಶ್ಲೋಕದಲ್ಲಿ ವಿಶೇಷವಾದ ಅರಿವನ್ನು ಉಂಟುಮಾಡು ವುದು. ಮದ ಎಂದರೆ ಆರು ಶತ್ರುಗಳಾದ ಅರಿಷಡ್ವರ್ಗಗಳಲ್ಲಿ ಇದೂ ಒಂದು ಹಾಗೂ ಇದು ಕಳಂಕದಿಂದ ಕೂಡಿದ್ದು. ಇದು ಮರೆವನ್ನು ಸೃಷ್ಟಿಸುವುದು. ಆದರೆ ಈ ಶ್ಲೋಕದಲ್ಲಿ ಮದ ಪದವನ್ನು ಯಾರು ಇದರ ಇರುವಿಕೆಯನ್ನು ಅರಿಯುತ್ತಾರೋ ಅವರು ವಿನೀತರಾಗುವರೆಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ. ಮಾತೆಯ ಶಕ್ತಿಯನ್ನು ಅರಿತ ಯೋಗಿಯು ತನ್ನನ್ನು ಸಂಪೂರ್ಣವಾಗಿ ವಿಶ್ವಾತ್ಮಕ್ಕೆ ಅರ್ಪಿಸಿ ಕೊಳ್ಳುವನು.

ವಿವರಣೆ :
ಸಹಸ್ರಾರವೆಂಬ ಕಮಲದಲ್ಲಿ ವಾಸಿಸುವ ತಾಯಿಯೇ ! ಅಲ್ಲಿಂದ ಸ್ರವಿಸುವ ಸೋಮರಸವು, ಮೂಲೆಗಳಲ್ಲಿ ಒಳಗೆ ಹರಿಯುವ ಮಜ್ಜಾ ಎಂಬ ಸಾರಭೂತ ವಾದದ್ದಕ್ಕೂ ಸಾರಭೂತವಾಗಿ, ತಾಪವನ್ನುಂಟುಮಾಡದ, ಯಾವ ದೋಷವೂ ಇಲ್ಲದಿರುವ ಬೋಧವೆಂಬ ಮದವನ್ನು ಪ್ರತಿಪ್ರವಾಹದಲ್ಲೂ ಉಂಟು ಮಾಡುತ್ತದೆ.

ಸಂಸ್ಕೃತದಲ್ಲಿ :
ತೈತ್ತರೀಯಕಥಿತೋ ರಸಲಾಭಃ
ಸೋsಯಮೇವ ಸಕಲಾಗಮವರ್ಣ್ಯೇ
ಏತದೇವ ಶಶಿಮಂಡಲನಾಥೇ
ತಂತ್ರಭಾಷಿತಪರಾಮೃತಪಾನಂ ||17||

ತಾತ್ಪರ್ಯ :
ಓ ಮಾತೇ ! ಸಮಸ್ತ ಶಾಸ್ತ್ರಗಳಲ್ಲೂ ಸ್ತುತಿಸಲ್ಪಟ್ಟ, ತೈತ್ತಿರೀಯೋಪನಿಷತ್ತಿನಲ್ಲಿ ನಿಜವಾದ ಪ್ರಖ್ಯಾತ ರಸವೆಂದು ವಿವರಿಸಲಾದ ನಿನ್ನನ್ನು ಈಗ ನಾನು ಅರ್ಥಮಾಡಿಕೊಂಡೆ; ಸೋಮಮಂಡಲದಲ್ಲಿ ನೆಲಸಿರುವ ನಾಯಕಿ ಹಾಗೂ ತಂತ್ರ ಗ್ರಂಥಗಳಲ್ಲಿ ವಿವರಿಸಿರುವ ಸೊಗಸಾದ ಅಮೃತವೇ ನೀನು.
ವೇದಗಳ ಆಚರಣೆ ಹಾಗೂ ತಾಂತ್ರಿಕ ಆಚರಣೆಗಳೆರಡರಲ್ಲೂ ಸಹಸ್ರಾರಸೋಮದ ಬಗ್ಗೆ ವಿವರಗಳನ್ನು ಕಾಣಬಹುದೆಂದು ಕವಿಯು ಹೇಳುವರು. ಪ್ರಾರಂಭದಲ್ಲಿ ಈ ಪದ್ಧತಿಗಳ ನಡುವೆ ವೈವಿಧ್ಯತೆಯು ಕಂಡುಬಂದರೂ, ಅವುಗಳ ಉದ್ದೇಶದಲ್ಲಿ ಏಕತೆ ಇರುವುದನ್ನು ಅರಿಯಬಹುದು.
ವೇದಗಳ ಆಚರಣೆಯಲ್ಲಿ ಸೋಮರಸಪಾನ ಕಂಡುಬರುವುದು. ತಾಂತ್ರಿಕ ಪದ್ಧತಿಯಲ್ಲಿ ವಿಶೇಷವಾಗಿ ಕುಲಾಚಾರ ಪದ್ಧತಿಯಲ್ಲಿ ದೇವಿಗೆ ಅರ್ಪಿಸಿದ ಮತ್ತೇರಿಸುವ ಪಾನೀಯವನ್ನು ಸ್ವೀಕರಿಸುವ ಅಭ್ಯಾಸವನ್ನು ಕಾಣಬಹುದು. ತಾತ್ವಿಕವಾಗಿ ಈ ರೀತಿಯ ಎರಡೂ ಪದ್ಧತಿಗಳಲ್ಲಿನ ಆಚರಣೆಯು ಸಹಸ್ರರಸೋಮವನ್ನು ಪ್ರತಿನಿಧಿಸುವುದರಿಂದ ಅದು ಕಳಂಕರಹಿತವಾದದ್ದು.

ವಿವರಣೆ :
ಎಲ್ಲ ವೇದಗಳಿಂದಲೂ ಸ್ತುತಿಸಲ್ಪಡುವ ತಾಯಿಯೇ ! ಈಗ ಅನುಭವಿಸಲ್ಪಡುವ ನನಗೆ ತಿಳಿದಿರುವ, ಒಳಗೆ ಪ್ರವಹಿಸುವ ಸಹಸ್ರಾರ ಸೋಮವೇ ತೈತ್ತಿರೀಯೋಪನಿಷತ್ತಿ ನಲ್ಲಿ ಹೇಳಲ್ಪಡುವ, “ರಸೋ ವೈ ಸಃ” “ರಸಂ ಹ್ಯೇವಾಯಂ ಲಬ್ಧ್ವಾ ಅನಂದೀ ಭವತಿಎಂಬ ರಸವಾಗಿದೆ. ಸೋಮಮಂಡಲದ ನಾಯಕಿಯಾದವಳೇ! ತಂತ್ರಶಾಸ್ತ್ರಗಳಲ್ಲಿ ಹೇಳಲ್ಪಡುವ ಉತ್ಕೃಷ್ಟವಾದ ಅಮೃತಪಾನವೂ ಇದಾಗಿದೆ. ವೈದಿಕರ ಯಾಗಗಳಲ್ಲಿ ತಾಂತ್ರಿಕರ ಕುಲಾಚಾರದಲ್ಲಿ ಹೇಳಲ್ಪಡುವ ಕ್ರಮವಾಗಿ ಸೋಮಪಾನ ಮತ್ತು ಸುರಾಪಾನಗಳ ತತ್ತ್ವವು ಸಹಸ್ರಾರ ಸೋಮಪಾನವೇ ಆಗಿದೆ.

ಸಂಸ್ಕೃತದಲ್ಲಿ :
ಮೂರ್ಧಸೋಮಮಜರಾಮರರೂಪೇ
ಯುಕ್ತವೀಕ್ಷಣಕರೇಣ ನಿಪೀಡ್ಯ
ಶಂಭುಸುಂದರಿ ಸುನೋಮಿ ಧಿನೋಮಿ
ತ್ವಾಂ ಪ್ರದೀಪ್ತಕುಲಕುಂಡನಿಶಾಂತಾಂ ||18||

ತಾತ್ಪರ್ಯ :
ಓ ಅಮರ ರೂಪವುಳ್ಳ ಮಾತೇ ! ಭಗವಾನ್ ಶಂಕರನ ದೈವೀ ಪತ್ನಿಯೆ ! ಪ್ರಜ್ವಲಿಸುತ್ತಿರುವ ಯಜ್ಞಕುಂಡದ ಮೇಲೆ ಅಂದರೆ ಮೂಲಾಧಾರ ಚಕ್ರದಲ್ಲಿ ಕುಳಿತಿರುವ ನಿನಗೆ ನಾನು ಯೋಗದೃಷ್ಟಿಯ ರೂಪದಲ್ಲಿ ನನ್ನ ಕೈಗಳಿಂದ ಹಿಂಡಿದ ಸೋಮರಸವನ್ನು ನೀಡುವೆನು.
ಯಾಗದಲ್ಲಿ (ಬಲಿಯನ್ನು ನೀಡುವ) ಅದನ್ನು ನಡೆಸುವ ಕರ್ತೃವು (ಯಜಮಾನ) ಸೋಮ ಸಸ್ಯವನ್ನು ಪುಡಿಮಾಡುವ ಕಲ್ಲಿನ ಮೇಲಿಟ್ಟು ರಸವನ್ನು ತೆಗೆಯಲು ತನ್ನ ಹಸ್ತವನ್ನು ಉಪಯೋಗಿಸುವನು; ತನ್ನ ಯೋಗ ದೃಷ್ಟಿಯ ಮೂಲಕ ಅರಿವುಂಟು ಮಾಡಿಕೊಂಡ ಇಲ್ಲಿ ಯೋಗಿಯೂ ಆದ ಕವಿಯು ಇಲ್ಲಿ ಹಸ್ತವು ಬೇರೆ ಯಾವುದೂ ಅಲ್ಲ ಅದು ಯೋಗದೃಷ್ಟಿ ಯೆಂದು ಮತ್ತು ಬಲಿ ಪೀಠವು ಜಾಗೃತವಾದ ಮೂಲಾಧಾರ ಚಕ್ರವೆಂದು ಹೇಳುವರು.

ವಿವರಣೆ :
ಶಂಭು ಕಾಂತೆಯೇ! ಮುಪ್ಪಿಲ್ಲದ, ಮೃತ್ಯುಭಯವಿಲ್ಲದ ದೇವತಾ ಸ್ವರೂಪಿಣಿಯೇ! ಸಹಸ್ರಾರದಲ್ಲಿರುವ ಸೋಮರಸವನ್ನು, ಯೋಗಕಾಲದಲ್ಲಿ ಉಂಟಾಗುವ ನೋಟವೆಂಬ ಕೈಗಳಿಂದ ಹಿಂಡಿ ರಸವಾಗಿಸುತ್ತೇನೆ. ಅನಂತರ ಜ್ವಲಿಸುತ್ತಿರುವ ಕುಲಕುಂಡಾಗ್ನಿಯಲ್ಲಿ ವಾಸಮಾಡುವ ನಿನಗೆ ಅದನ್ನು ಅರ್ಪಿಸುತ್ತೇನೆ.

ಸಂಸ್ಕೃತದಲ್ಲಿ :
ದೃಷ್ಟಿರೇವ ರವಿದೀಧಿತಿರುಗ್ರಾ
ಶೀರ್ಷಕಂಜಶಶಿನಂ ಪ್ರವಿಶಂತೀ
ಶೀತಲಾಮೃತಮಯೀ ಖಲು ಭೂತ್ವಾ
ಯೋಗಿನೋ ದ್ರವತಿ ಮೋದಕಲಾ ತೇ ||19||

ತಾತ್ಪರ್ಯ :
ಯೋಗ ಗ್ರಹಿಕೆಯು ಸೂರ್ಯನ ಪ್ರಖರವಾದ ಕಿರಣ ಹಾಗೂ ಅದು ಸಹಸ್ರಾರದಲ್ಲಿ ಕುಳಿತಿರುವ ಚಂದ್ರನನ್ನು ಪ್ರವೇಶಿಸಿ ಅಲ್ಲಿಂದ ತಾಂತ್ರಿಕ ಭಾಷೆಯಲ್ಲಿ ಹೇಳುವ ಮೋದಕಲದಲ್ಲಿ ತಂಪಾದ ಅಮೃತದಂತಹ ರಸವನ್ನು ಹೊರಹೊಮ್ಮಿಸುವುದು.
ಸುಪರಿಚಿತವಾದ, ಚಂದ್ರನಿಗೆ ತನ್ನದೇ ಆದ ತೇಜಸ್ಸು ಇಲ್ಲವೆಂಬುದನ್ನು ಕವಿಯು ಕಾವ್ಯಾತ್ಮಕವಾಗಿ ಹೇಳಿರುವುದೇ ಈ ಶ್ಲೋಕದ ವಿಶೇಷತೆ. ಸೂರ್ಯನ ಬಿಸಿ ಕಿರಣವು ಚಂದ್ರನ ಮೇಲೆ ಬಿದ್ದಾಗ, ಅದು ತಂಪಾದ ಹಾಗೂ ಆನಂದವನ್ನು ನೀಡುವ ಚಂದ್ರಬೆಳಕಿ ನಂತೆ ಮರಳಿ ಪ್ರತಿಫಲಿಸುವುದು. ಈ ಶ್ಲೋಕದಲ್ಲಿ ಯೋಗಿಯು ಮೋದಕಲವನ್ನು ಅರಿಯುವ ಪ್ರಕ್ರಿಯೆಯನ್ನು ಪ್ರಸ್ತುತ ಪಡಿಸಲಾಗಿದೆ. ದೇವಿಯು ಮೊದಲಿಗೆ ಯೋಗಿಯ ಕಣ್ಣನ್ನು ಪ್ರವೇಶಿಸಿ ನಂತರ ಸಹಸ್ರಾರದಲ್ಲಿರುವ ಚಂದ್ರನನ್ನು ಪ್ರವೇಶಿಸಿ ಮೋದಕಲವೆಂಬ ಆನಂದಭರಿತ ಅನುಭವವನ್ನು ಉಂಟುಮಾಡುವ ಅಮೃತದಂತಹ ತಂಪಾದ ಕಿರಣಗಳನ್ನು ಉಂಟುಮಾಡುವಳು.
ವಿವರಣೆ :
ತೀಕ್ಷ್ಣವಾದ ಯೋಗದೃಷ್ಟಿಯು ಸೂರ್ಯ ಕಿರಣವಿದ್ದಂತೆ. ಅದು ಸಹಸ್ರಾರಕಮಲದಲ್ಲಿ ರುವ ಚಂದ್ರನನ್ನು ಪ್ರವೇಶಿಸಿ ತಂಪಾಗಿಯೂ ಅಮೃತಪ್ರಾಯವೂ ಆಗಿ ನಿನ್ನ ಆನಂದದ ಕಲೆಯಾಗಿ ಕೆಳಗೆ ಪ್ರವಹಿಸುತ್ತದೆ. ಚಂದ್ರನು ಸ್ವಯಂ ಪ್ರಕಾಶನಲ್ಲ. ಉಷ್ಣವಾದ ಸೂರ್ಯಕಾಂತಿಯೇ ಚಂದ್ರಬಿಂಬದಲ್ಲಿ ಪ್ರತಿಫಲಿಸಿ ತಂಪಾದ ಬೆಳದಿಂಗಳಾಗುತ್ತ ದೆಂದು ತಿಳಿದ ಜ್ಯೋತಿಷ್ಕರ ಸಿದ್ಧಾಂತವು. ಇಲ್ಲಿಯೋಅಂದರೆ ದೇವಿಯೇ ಯೋಗಿಯಾದ ವನ ಸಹಸ್ರಾರವನ್ನು ಪ್ರವೇಶಿಸಿ ಅಲ್ಲಿಂದ ಅನಂದಮಯವಾದ ಆನಂದದ ಅಲೆಗಳನ್ನು ಉಂಟುಮಾಡುವಳು ಎಂದು ಭಾವ.

ಸಂಸ್ಕೃತದಲ್ಲಿ :
ಮೂರ್ಧನಿ ದ್ರವಸಿ ಯೋಗಯುತಾನಾಂ
ಚಕ್ಷುಸಿ ಜ್ವಲಸಿ ಶಂಕರಭಾಮೇ
ತಿಷ್ಠಸಿ ಸ್ಥಿರಪದಾ ಕುಲಕುಂಡೇ
ಬಾಹ್ಯತಃ ಸ್ಖಲಸಿ ನೈವ ಕದಾsಪಿ ||20||

ತಾತ್ಪರ್ಯ :
ಓ ಮಾತೇ ! ಶಂಕರನ ಪ್ರೀತಿಪಾತ್ರಳೆ! ತಂಪಾದ ಚಂದ್ರನು ಸಹಸ್ರಾರದಲ್ಲಿ ನೆಲಸಿರುವುದರಿಂದ ನೀನು ಯೋಗಿಯ ಶಿರದಲ್ಲಿ ಕರಗುವೆ. ನೀನು ದೃಷ್ಟಿಯ ಮೂಲಕಾರಣವೇ ಆಗಿರುವುದರಿಂದ ಯೋಗಿಯ ಕಣ್ಣಿನಲ್ಲಿ ನಿನ್ನನ್ನು ಅಭಿವ್ಯಕ್ತಿ ಗೊಳಿಸುವೆ. ಹಾಗೂ ನೀನು ಮುಲಾಧಾರದಲ್ಲಿ ಸ್ಪಷ್ಟವಾಗಿ ನೆಲಸಿರುವೆ. ಈ ಮೂರು ಸ್ಥಳಗಳನ್ನು ಹೊರತುಪಡಿಸಿ ಬೇರಾವ ಸ್ಥಳದಲ್ಲೂ ನೀನು ಹೊರಹೊಮ್ಮುವುದಿಲ್ಲ.
ಯೋಗಿಯ ಶರೀರದಲ್ಲಿನ ಮೇಲೆ ವಿವರಿಸಿರುವ ಮೂರು ಸ್ಥಳಗಳಲ್ಲಿ ದೇವಿಯು ನೆಲಸಿರುವುದು ಸರ್ವವಿದಿತವಾದದ್ದೆಂದು ಈ ಶ್ಲೋಕದ ಅರ್ಥ.

ವಿವರಣೆ :
ಶಂಕರಪ್ರಿಯೆಯೇ! ಯೋಗಯುಕ್ತರ ತಲೆಯಲ್ಲಿ ನೀನು ಸೋಮಾತ್ಮಕಳಾಗಿ ಇರುವೆ. ಹಾಗೆಯೇ ಅಲ್ಲಿಂದ ಸ್ರವಿಸುತ್ತೀಯೆ ಮತ್ತು ಅಂತಹವರ ಕಣ್ಣುಗಳಲ್ಲಿ ನೀನೇ ದೇದೀಪ್ಯ ಮಾನಳಾಗಿ ಬೆಳಗುತ್ತೀಯೆ. ಏಕೆಂದರೆ ಅಲ್ಲಿ ಬೆಳಗುವವಳು ನೀನೇ ಆಗಿದ್ದೀಯೆ. ಹಾಗೆಯೇ ಅವರ ಮೂಲಾಧಾರದಲ್ಲಿ ಚಾಂಚಲ್ಯವಿಲ್ಲದವಳಾಗಿ ನೆಲೆನಿಂತಿರುತ್ತೀಯೆ. ಈ ಸ್ಥಳಗಳನ್ನು ಬಿಟ್ಟು ನೀನು ಹೊರಗಡೆ ಇರುವುದಿಲ್ಲ.

ಸಂಸ್ಕೃತದಲ್ಲಿ :
ಸಾ ಯದಿ ದ್ರವತಿ ಮೋದಕಲಾ ಸ್ಯಾತ್
ಸಾ ಯದಿ ಜ್ವಲತಿ ಚಿತ್ಕಲಿಕಾ ಸ್ಯಾತ್
ಸಾ ಪರಾ ಸ್ಥಿರಪದಾ ಯದಿ ತಿಷ್ಠ-
ತ್ಯಕ್ಷರಾ ಭವತಿ ಕಾಚನ ಸತ್ತಾ ||21||

ತಾತ್ಪರ್ಯ :
ಅವಳು ಕರಗಿ ಹೋದರೆ ಅವಳನ್ನು ಮೋದಕಲ ಎನ್ನುವರು; ಅವಳು ಜ್ವಾಲೆಯಾದರೆ ಅವಳನ್ನು ಚಿತ್ಕಲ ಎನ್ನುವರು; ಅವಳು ಅಚಲಳಾದರೆ ಅವಳನ್ನು ನಿರ್ವಿಕಲ್ಪ ಎನ್ನುವರು. ಸ್ಥಳ ಹಾಗೂ ಕಾರ್ಯಗಳನ್ನವ ಲಂಬಿಸಿ ಅವಳು ಬೇರೆ ಬೇರೆ ರೂಪಗಳನ್ನು ಹೊಂದುವಳು. ಆದರೆ ಮೂಲ ಒಂದೇ.
ಸರಳವಾದ ತೀರ್ಮಾನವೆಂದರೆ, ಮೂಲವು ಒಂದೇ ಆಗಿದ್ದರೂ, ಅದು ತನ್ನಿಚ್ಛೆಯಂತೆ ಅನೇಕ ರೂಪಗಳನ್ನು ಧರಿಸಬಹುದು, ಏಕೆಂದರೆ ಅದು ಪರಿಶುದ್ಧವಾದ ಆತ್ಮ.

ವಿವರಣೆ :
ಆ ದೇವಿಯು ಯೋಗಿಗಳ ಸಹಸ್ರಾರದಲ್ಲಿ ಸೋಮರೂಪಾಳಾಗಿ ದ್ರವಿಸಿದರೆ ಅವಳನ್ನು ಮೋದಕಲೆ ಅಥವಾ ಅನಂದಕಲೆಯೆಂಬು ದಾಗಿ ಕರೆಯುತ್ತಾರೆ. ಅವಳೇ ದೀಪ್ತಳಾಗಿ ಜ್ವಲಿಸಿದರೆ ಚಿನ್ಮಯಳು ಎನಿಸಿಕೊಳ್ಳುತ್ತಾಳೆ. ಅವಳೇ ಮೂಲಾಧಾರದಲ್ಲಿ ಅಚಂಚಲೆಯಾಗಿ ನಿಂತರೆ ಅಖಂಡಸತ್ತಾ (ಅಖಂಡವಾಗಿ ಇರುವವಳು) ಎಂದು ಕರೆಯುತ್ತಾರೆ.
ಒಟ್ಟಿನಲ್ಲಿ ದೇವಿಯೊಬ್ಬಳೇ ಸೋಮಾತ್ಮಿಕೆ ಯಾಗಿ ಆನಂದಮಯಳೂ, ತೇಜೋರೂಪಿಣಿ ಯಾಗಿ ಚಿನ್ಮಯಿಯಾಗಿಯೂ, ಚಂಚಲವಾಗಿ ಮೂಲಾಧಾರದಲ್ಲಿ ನೆಲೆನಿಂತಾಗ ಅಕ್ಷರರೂಪ ಳಾಗಿಯೂ ಆಗುತ್ತಾಳೆ. ಅವಳು ಸ್ಥಾನ ಮತ್ತು ಕ್ರಿಯಾ ಭೇದದಿಂದ ಮೂರು ರೂಪವುಳ್ಳ ವಳಾಗಿರುತ್ತಾಳೆ ಎಂದು ಹೇಳಿದ್ದರೂ ವಾಸ್ತವವಾಗಿ ಚಿದಾನಂದಮಯಿಯಾದ ದೇವಿಯೊಬ್ಬಳೇ ಆಗುತ್ತಾಳೆ ಎಂದು ಅರ್ಥ.

ಸಂಸ್ಕೃತದಲ್ಲಿ :
ಪಶ್ಯತಾ ನಯನಮಂಡಲವೃತ್ತಿಂ
ಗೃಹ್ಯಸೇ ತ್ವಮಚಲಾಧಿಪಕನ್ಯೇ
ಜಾನತಾ ದಶಶತಾರವಿಲಾಸಂ
ಸ್ಪೃಷ್ಯಸೇ ವಿದಿತಮಂಬ ರಹಸ್ಯಂ ||22||

ತಾತ್ಪರ್ಯ :
ಓ ಪಾರ್ವತಿ ! ಅಚಲನ ಪುತ್ರಿ ! ನನಗೆ ನಿನ್ನ ರಹಸ್ಯವು ಅರಿವಾಯಿತು. ಯೋಗಿಯು ನಿನ್ನನ್ನು ನೋಡಿರುವನು (ನೀನು ಯೋಗಿಯ ದೃಷ್ಟಿಗೆ ಒಂದು ವಸ್ತುವಾಗುವೆ). ತನ್ನ ಸಹಸ್ರಾರದಲ್ಲಿ ಅಮೃತ ವೃಷ್ಟಿಯನ್ನು ಅನುಭವಿಸಿದ ಯೋಗಿಗೆ ನಿನ್ನ ಸ್ಪರ್ಶದ ನೋಟವು ದೊರಕುವುದು. ಯೋಗಿಯು ನಿನ್ನ ಚಿನ್ಮಯ ರೂಪವನ್ನು ಕಾಣಬಹುದು ಹಾಗೂ ನಿನ್ನ ಆನಂದಮಯ ರೂಪವನ್ನು ಸಾಕ್ಷಾತ್ಕರಿಸಿಕೊಳ್ಳಬಹುದು.
ದೇವಿಯು ಚಿನ್ಮಯಿಯೂ ಹೌದು ಹಾಗೇ ಅನಂದಮಯಿಯೂ ಕೂಡಾ. ಎರಡು ನಿರ್ದಿಷ್ಟ ರೂಪಗಳನ್ನು ಯೋಗಿಯು ಸಾಕ್ಷಾತ್ಕರಿಸಿಕೊಳ್ಳುವನು.

ವಿವರಣೆ :
ಪರ್ವತರಾಜಕುಮಾರಿಯಾದ ಪಾರ್ವತಿಯೇ! ತನ್ನ ಕಣ್ಣುಗಳಲ್ಲಿರುವ ದೃಷ್ಟಿಯಲ್ಲಿ ನಿನ್ನನ್ನು ಕಾಣುವ ಯೋಗಿಯು ಚಿನ್ಮಯಿಯಾದ ನಿನ್ನನ್ನು ಸಾಕ್ಷಾತ್ಕರಿಸುತ್ತಾನೆ. ಸಹಸ್ರಾರದಲ್ಲಿ ಉಂಟಾದ ರಸವರ್ಷಣಾತ್ಮಕವಾದ ವಿಲಾಸವನ್ನು ತಿಳಿದ ಯೋಗಿಯು ಆನಂದಮಯಳಾದ ನಿನ್ನನ್ನು ಪಡೆಯುತ್ತಾನೆ. ಈ ರಹಸ್ಯವು ನನ್ನಿಂದ ತಿಳಿಯಲ್ಪಟ್ಟಿತು.

ಸಂಸ್ಕೃತದಲ್ಲಿ :
ವ್ಯಾಪ್ತಶಕ್ತ್ಯಸುಬಲೇನ ಲಸಂತೀ
ಭಾನುಬಿಂಬನಯನೇನ ತಪಂತೀ
ಚಂದ್ರಬಿಂಬಮನಸಾ ವಿಹರಂತೀ
ಸಾ ಪುನರ್ಜಯತಿ ಮೂರ್ಧ್ನಿ ವಸಂತೀ ||23||

ತಾತ್ಪರ್ಯ :
ಸರ್ವವ್ಯಾಪಿಯಾದ ಪ್ರಾಣ ಶಕ್ತಿಯನ್ನು ಧರಿಸಿ (ಅಂದರೆ, ಎಲ್ಲವನ್ನು ಪ್ರಾಣ ಶಕ್ತಿಯೊಂದಿಗೆ ಸಕ್ರಿಯೆಗೊಳಿಸುವುದು); ಸೂರ್ಯನ ಕಕ್ಷೆಯ ರೂಪದಲ್ಲಿ ಕಣ್ಣಿನ ಮೂಲಕ ತಪಸ್ಸನ್ನಾಚರಿಸು ವುದು; ಚಂದ್ರನ ರೂಪವನ್ನು ಮನಸ್ಸಿನಲ್ಲಿ ಯೋಚಿಸುವುದು; ಓ ಮಾತೆ ! ನೀನು ಸಹಸ್ರಾರದಲ್ಲಿ ನೆಲಸಿರುವೆ. ನಿನಗೆ ಜಯವಾಗಲಿ.
ಈ ಶ್ಲೋಕದಲ್ಲಿ ವಿಶ್ವವನ್ನೇ ತನ್ನ ಶರೀರ ವನ್ನಾಗುಳ್ಳ ದೇವಿಯ ದೈವತ್ವವನ್ನು ವಿವರಿಸಲಾಗಿದೆ ಹಾಗೂ ಏಕಕಾಲದಲ್ಲಿ ಎಲ್ಲೆಲ್ಲೂ ಕಾಣಿಸುವ ಶಕ್ತಿಯನ್ನು ಕೊಂಡಾಡ ಲಾಗಿದೆ. ಸೂಕ್ಷ್ಮ ಹಾಗೂ ಭಾರಿ ಗಾತ್ರವೆರಡೂ ದೈವತ್ವದ ಶಕ್ತಿಯಿಂದ ಹರಡಿದೆ.
ಉಪನಿಷತ್ತಿನ ಹೇಳಿಕೆಯಂತೆ, “ಚಂದ್ರಮಾ ಮನಸೋ ಜಾತಃ ಚಕ್ಷೋ ಸೂರ್ಯೋ ಅಜಾಯತಅಂದರೆ ಸೂರ್ಯನೇ ಕಣ್ಣುಗಳು ಮತ್ತು ಮನಸೇ ಚಂದ್ರ ಎಂದು.

ವಿವರಣೆ :
ಬ್ರಹ್ಮಾಂಡದಲ್ಲಿ ವ್ಯಾಪಕವಾದ ಶಕ್ತಿಯೇ ಅವಳ ಪ್ರಾಣವು. ಸೂರ್ಯನೇ ಅವಳ ಕಣ್ಣು. ಚಂದ್ರನೇ ಅವಳ ಮನಸ್ಸು ಎಂದು ಆಕೆಯು ಬ್ರಹ್ಮಾಂಡದಲ್ಲಿ ಎಲ್ಲೆಲ್ಲೂ ಇರುತ್ತಾಳೆ. ಶ್ರುತಿಗಳು ಕೂಡಾ ಇದೇ ರೀತಿ ಹೇಳುತ್ತವೆ.

ಸಂಸ್ಕೃತದಲ್ಲಿ :
ಸ್ವಾಗತಂ ಸಕಲಲೋಕನುತಾಯೈ
ಸ್ವಾಗತಂ ಭುವನರಾಜಮಹಿಷ್ಯೈ
ಸ್ವಾಗತಂ ಮಯಿ ಭೃಶಂ ಸದಯಾಯೈ
ಸ್ವಾಗತಂ ದಶಶತಾರಮಿತಾಯೈ ||24||

ತಾತ್ಪರ್ಯ :
ಸಮಸ್ತ ಪ್ರಪಂಚದೆಲ್ಲೆಡೆ ಪೂಜಿಸಲ್ಪಡುವ ದೈವೀ ಶಕ್ತಿಯನ್ನು ಸ್ವಾಗತ. ವಿಶ್ವಪತಿಯ ರಾಣಿಗೆ ಸ್ವಾಗತ; ಅವಳ ಮಗುವಾದ ನನ್ನೆಡೆಗೆ ಸದಾ ಕರುಣೆಯುಳ್ಳ ದೈವೀ ಮಾತೆಗೆ ಹೃತ್ಪೂರ್ವಕ ಸ್ವಾಗತ; ಸಹಸ್ರಾರದಲ್ಲಿ ನೆಲಸಿರುವ ದೇವಿಗೆ ಸ್ವಾಗತ.
ಈ ಶ್ಲೋಕದಲ್ಲಿ ಕವಿಯು ತನ್ನ ಕೃತಜ್ಞತೆಯಿಂದ ಕೂಡಿದ ಧನ್ಯವಾದವನ್ನು ಅಸ್ತಿತ್ವದ ರಹಸ್ಯವನ್ನು ತಿಳಿಸಿ ಉದಾರಳಾದ ಹಾಗೂ ತನಗೆ ಅತೀಂದ್ರಿಯ ಅನುಭವಗಳನ್ನು ಅನುಭವಿಸುವಂತೆ ಮಾಡಿದ ದೇವಿಗೆ ಅರ್ಪಿಸಿರುವರು. ಯಾರು ತನ್ನ ಜೀವನದ ಪರಮೋಚ್ಚ ಗುರಿಯನ್ನು ತಲುಪಿರುವನೋ ಅವನೇ ಧನ್ಯ.

ವಿವರಣೆ :
ಸಮಸ್ತಲೋಕಗಳಿಂದ ವಂದಿಸಲ್ಪಡುವ ದೇವಿಗೆ ನನ್ನಲ್ಲಿ ಬರಲು ಸ್ವಾಗತ. ಸಮಸ್ತ ಜಗದೊಡೆಯನಾದ ಪರಶಿವನ ಹೃದಯೇಶ್ವ ರಿಗೆ ಸ್ವಾಗತವು. ನನ್ನಲ್ಲಿ ಸರ್ವದಾ ದಯಾಮಯಿಯಾಗಿರುವ ದೇವಿಗೆ ಸ್ವಾಗತ. ಯಾವಾಕೆಯು ಸರ್ವಲೋಕಗಳಿಂದಲೂ ಸ್ತೋತ್ರಮಾಡಲ್ಪಡುವಳೋ, ಯಾರು ಸರ್ವೇಶ್ವರನ ಹೃದಯೇಶ್ವರಿಯಾಗಿರುವಳೋ ಯಾರು ನನ್ನಲ್ಲಿ ಸರ್ವದಾ ದಯಾಮಯಿ ಯಾಗಿರುವಳೋ, ಯಾರು ಕರುಣೆಯಿಂದ ನನ್ನ ಸಹಸ್ರಾರದಲ್ಲಿ ವಿಲಾಸಪೂರ್ಣಳಾಗಿರು ವಳೋ ಅವಳು ಸರ್ವೋತ್ಕೃಷ್ಟವಾಗಿರುತ್ತಾಳೆ ಎಂದು ತಾತ್ಪರ್ಯ.

ಸಂಸ್ಕೃತದಲ್ಲಿ :
ಸತ್ಕವಿಕ್ಷಿತಿಭುಜೋ ಲಲಿತಾಭಿಃ
ಸ್ವಾಗತಾಭಿರನಘಾಭಿರಿಮಾಭಿಃ
ಸ್ವಾಗತಂ ಭಣಿತಮಸ್ತು ಭವಾನ್ಯೈ
ಖೇಲನಾಯ ಶಿರ ಏತದಿತಾಯೈ ||25||  375

ತಾತ್ಪರ್ಯ :
ಸ್ವಾಗತ ಛಂದಸ್ಸಿನಲ್ಲಿ ಈ ಶ್ಲೋಕಗಳನ್ನು ಕವಿ ಸರ್ವೋತ್ತಮರು ರಚಿಸಿ, ತನ್ನ ರಹಸ್ಯ ಮಾರ್ಗ ಗಳನ್ನು ವಿವರಿಸಿ ತನ್ನ ಶಿರದಲ್ಲಿ ನೆಲಸಿರುವ ಭವಾನಿ ದೇವಿಯನ್ನು ಸ್ವಾಗತಿಸಲು ಬಯಸುವೆ.

ವಿವರಣೆ :
ಇಲ್ಲಿರುವ ಪದ್ಯಗಳು ಯೋಗ್ಯರಾದ ಕವಿಲೋಕಕ್ಕೆ ರಾಜನಾದವನಿಂದ ಬರೆಯಲ್ಪಟ್ಟುದಾಗಿದೆ. ಈ ಪದ್ಯಗಳುಸ್ವಾಗತಾಎಂಬ ಛಂದಸ್ಸಿನಲ್ಲಿ ರಚಿಸಲ್ಪ ಟ್ಟಿವೆ. ದೇವಿಯು ನನ್ನ ಸಹಸ್ರಾರದಲ್ಲಿ ವಿಲಾಸಕ್ಕೋಸ್ಕರ ಬಂದವಳಾಗಿದ್ದಾಳೆ. ಅವಳಿಗೆ ಈ ಸ್ವಾಗತಾ ಛಂದಸ್ಸಿನಲ್ಲಿ ಹೇಳಲ್ಪಟ್ಟ ಸ್ತೋತ್ರವು ಸ್ವಾಗತವನ್ನು ನೀಡಲಿ. ಇಲ್ಲಿ ಉಪಯುಕ್ತವಾದ ಸ್ತ್ರೀಲಿಂಗ ಪದಗಳ ಸಾಮರ್ಥ್ಯದಿಂದ ಆ ಗುಣಗಳಿರುವ ಅಂಗನೆಯರ ಸೂಚನೆಯಾಗಿದೆ. ಆದ್ದರಿಂದ ಮುದ್ರಾಲಂಕಾರವೂ ಆಗಿರುತ್ತದೆ.

ಇಲ್ಲಿಗೆ ಹದಿನೈದನೇ ಸ್ತಬಕವು ಸಂಪೂರ್ಣ


ಪುಷ್ಪಗುಚ್ಛ (ಸ್ತಬಕ) – 16; ಛಂದಸ್ಸು - ಕುಮಾರಲಲಿತಾವೃತ್ತಂ
ಶಕ್ತಿಯ ಸಮೃದ್ಧತೆ ಮತ್ತು ಅತೀಂದ್ರಿಯ ಅನುಭವಗಳು

ಹದಿನಾರನೇ ಸ್ತಬಕವನ್ನು ಕುಮಾರಲಲಿತಾ ಛಂದಸ್ಸಿನಲ್ಲಿ ರಚಿಸಿರುವುದರಿಂದ ಅದಕ್ಕೆ ಕುಮಾರಲಲಿತಾ ಸ್ತಬಕವೆಂದು ಹೆಸರಿಸಲಾಗಿದೆ. ಈ ಸ್ತಬಕದಲ್ಲಿ ಹಿಂದಿನ ಸ್ತಬಕದಲ್ಲಿ ವಿವರಿಸಿದ ದೈವೀ ಮಾತೆಯ ಪ್ರಶಂಸೆ ಹಾಗೂ ಅತೀಂದ್ರಿಯ ಅನುಭವ ಗಳನ್ನು ಮುಂದುವರೆಸಲಾಗಿದೆ.

ಸಂಸ್ಕೃತದಲ್ಲಿ :
ಮಹೋವಿಹತಮೋಹಂ ಮಹೇಶಮಹಿಲಾಯಾಃ
ಸ್ಮಿತಂ ವಿತನುತಾನ್ಮೇ ಗೃಹೇಷು ಮಹಮಗ್ರ್ಯಂ ||1||

ತಾತ್ಪರ್ಯ :
ಮಹೇಶ ಭಗವಾನನ ಪತ್ನಿಯ ಸೌಮ್ಯ ಮಂದಹಾಸವು ದುಃಸ್ವಭಾವವಾದ ಮೋಹವನ್ನು ನಿವಾರಿಸಿ, ಕಾಂತಿಯನ್ನು ಪಸರಿಸುವ ಗುಣದಿಂದಾಗಿ ವ್ಯಾಮೋಹ ಗೊಂಡು, ನನ್ನ ವಾಸಸ್ಥಳದಲ್ಲಿ ಪ್ರಕಾಶಮಾನವಾದ ಪರಿಸರವನ್ನು ಸೃಷ್ಟಿಸಲಿ.
ಕವಿಯು ತಾನು ಎಲ್ಲೇ ಇದ್ದರೂ ತನ್ನನ್ನು ಅರಿವಿನ ಸ್ಥಿತಿಯಲ್ಲಿ ನಿರಂತರವಾಗಿರಿಸೆಂದು ಪ್ರಾರ್ಥಿಸುವರು.

ವಿವರಣೆ :
ತನ್ನ ತೇಜಸ್ಸಿನಿಂದ ನಾಶಗೊಳಿಸಲ್ಪಟ್ಟ ಮಹಾಮೋಹವುಳ್ಳ ಮಹೇಶ್ವರಿಯ ಮಂದಹಾಸವು ನಾನಿರುವೆಡೆಯಲ್ಲೆಲ್ಲಾ ಪ್ರಶಸ್ತವಾದ ಉತ್ಸವವನ್ನು ವಿಸ್ತರಿಸಲಿ. ಅಂದರೆ ನಾನು ಮಹೇಶ್ವರಿಯಾದ ದೇವಿಯ ಮಂದಸ್ಮಿತದ ವಿಲಾಸದಿಂದ ಮೋಹವನ್ನು ಕಳೆದುಕೊಂಡವನಾಗಿ ನಾನಿರುವ ಸ್ಥಳದಲ್ಲೆಲ್ಲಾ ಮಹೋತ್ಸವವನ್ನು ಆಚರಿಸುವಂತಾಗಲಿ.

ಸಂಸ್ಕೃತದಲ್ಲಿ :
ಇಯದ್ಬಹುಲಗೋಲಂ ಜಗಲ್ಲಘು ದಧಾನಾ
ಪಿತಾಮಹಮುಖೈರಪ್ಯಖಂಡಿತವಿಧಾನಾ ||2||
ಅದುಷ್ಟಚರಿತೇಭ್ಯಃ ಶುಭಾನ್ಯಭಿದಧಾನಾ
ಕುಲಾನಿ ಮಲಿನಾನಾಂ ಹತಾನಿ ವಿದಧಾನಾ||3||
ದುಕೂಲಮರುಣಾಂಶುಪ್ರಭಂ ಪರಿದಧಾನಾ
ಹರಸ್ಯ ರಜತಾದ್ರಿಕ್ಷಿತೀಶಿತುರಧೀನಾ ||4||
ಮುನೀಂದ್ರಕೃತತಂತ್ರಪ್ರಸಿದ್ಧಬಹುದಾನಾ
ಉಮಾ ಬಲಮಲಂ ನಸ್ತನೋತ್ವತುಲಮಾನಾ ||5||
(ಶ್ಲೋಕ 2 ರಿಂದ 5 ರ ವರೆಗೂ ತಾತ್ಪರ್ಯ ವಿವರಣೆಯ ಸಲುವಾಗಿ ಒಂದೇ ವಿಭಾಗವನ್ನಾಗಿ ಪರಿಗಣಿಸಲಾಗಿದೆ. ಏಕೆಂದರೆ ಕ್ರಿಯಾಪದದ ಮೂಲಕ ದೇವಿಯ ವರ್ಣನೆಯು ಐದನೇ ಶ್ಲೋಕದೊಂದಿಗೆ ಕೊನೆಗೊಳ್ಳುವುದು).

ತಾತ್ಪರ್ಯ :
2. ಅಳೆಯಲಾಗದ  ಅಳತೆಯುಳ್ಳ ಉಮಾದೇವಿಯು ನಮಗೆ ಸಾಕಷ್ಟು ಶಕ್ತಿಯನ್ನು ನೀಡಲಿ; ವಿಶ್ವದ ಶಕ್ತಿಶಾಲಿ ವ್ಯವಸ್ಥೆಗಳಾದ - ಯಾವುದರ ಕಾರ್ಯಗಳನ್ನು ಸೃಷ್ಟಿಕರ್ತನೂ ಸಹ ಅಡ್ಡಿಮಾಡದಂತಿರುವುದು -   ಅಳೆಯಲಾಗದ ಗೋಳಗಳು.
3. ಯಾರು ಹಟವಾದಿಗಳು ಹಾಗೂ ತಮ್ಮ ನಡತೆಯ ದುರ್ಬುದ್ಧಿಯನ್ನು ಪ್ರದರ್ಶಿಸುವರೋ ಅವರನ್ನು ಕಿತ್ತುಹಾಕುವುದರೊಂದಿಗೆ, ಯಾರ ನಡತೆಯು ಕಳಂಕರಹಿತವಾಗಿರುವುದೋ ಅಂತಹವರಿಗೆ ಅತ್ಯಂತ ಪವಿತ್ರವಾದ ಆಶೀರ್ವಾದವನ್ನು ಯಾರು ನೀಡುತ್ತಾರೋ;
4. ಉದಯಿಸುವ ಸೂರ್ಯನ ಬಣ್ಣವುಳ್ಳ ಉತ್ತಮವಾದ ರೇಷ್ಮೆ ಸೀರೆಯನ್ನುಟ್ಟು ಸದಾ ಬೆಳ್ಳಿಯಂತಹ ಬೆಳ್ಳಗಿನ ಕೈಲಾಸ ಪರ್ವತದ ಒಡೆಯ, ಹರನ ನಿಯಂತ್ರಣದಲ್ಲಿರುವ;
5. ತಂತ್ರಶಾಸ್ತ್ರದ ಅಧ್ಯಯನದಲ್ಲಿ ನಿಷ್ಣಾತರಾದ ಹಾಗೂ ಬೇಡಿದವರಿಗೆಲ್ಲಾ ಅತ್ಯಂತ ಧಾರಾಳವಾಗಿ ಬೇಡಿದ್ದನ್ನು ನೀಡುವವಳು.

ವಿವರಣೆ :
2. ನಕ್ಷತ್ರಗಳೆಂಬ ಗೊಳಗಳಿಂದ ಕೂಡಿ ಇಷ್ಟು ದೊಡ್ಡದಾಗಿರುವ ಜಗತ್ತನ್ನು ಧರಿಸಿರುವ ಚತುರ್ಮುಖ ಬ್ರಹ್ಮಾದಿಗಳಿಂದಲೂ, ಪ್ರತಿಭಟಿ ಸಲಾಗದ ಕಾರ್ಯವೈಖರಿಯುಳ್ಳ ಆ  ದೇವಿಯ ಕಾರ್ಯವಿಧಾನವು ನಮಗೆ ಮಂಗಳವನ್ನುಂಟುಮಾಡಲಿ.
3. ಪಾಪಿಗಳ ಕುಲಗಳನ್ನು ನಾಶಮಾಡುವವ ಳಾದ ಆ ದೇವಿಯು, ದೋಷರಹಿತ ನಡತೆ ಹಾಗೂ ಗುಣಗಳುಳ್ಳವರಿಗೆ ಮಂಗಳ  ವನ್ನುಂಟು ಮಾಡಲಿ.
4. ಬಾಲಸೂರ್ಯನಂತಿರುವ ಪ್ರಕಾಶ ಮಾನವಾದ ದುಕೂಲವನ್ನು ಧರಿಸಿರುವ ರಜತಾದ್ರೀಶ್ವರನಿಗೆ ಅಧೀನೆಯಾದ ಆ ದೇವಿಯು ನಮಗೆ ಮಂಗಳವನ್ನುಂಟು ಮಾಡಲಿ.
5. ಋಷಿಗಳು ತಮ್ಮ ತಂತ್ರಗ್ರಂಥಗಳಲ್ಲಿ ಉಮಾ ದೇವಿಯು ನಾವು ಅಪೇಕ್ಷಿಸಿದುದ ಕ್ಕಿಂತಲೂ ಹೆಚ್ಚು ನೀಡುವವಳು ಎಂದಿದ್ದಾರೆ. ಅಪ್ರತಿಮಿತವಾದ ಪರಿಮಾಣವುಳ್ಳ ಆ ಪೂಜೆಯಾದ ಉಮಾ ದೇವಿಯು ನಮಗೆ ಸಾಕಷ್ಟು ಬಲವನ್ನು ನೀಡಲಿ.

ಸಂಸ್ಕೃತದಲ್ಲಿ :
ನಿರಸ್ತವಿಷಯಾಂ ಯದ್ ದಧಾತಿ ಮತಿಕೀಲಾಂ
ಸಮಸ್ತಜಗದೀಶೇ ಧೃತಿಸ್ತವ ಮತೇಯಂ ||6||

ತಾತ್ಪರ್ಯ :
ಓ ವಿಶ್ವ ಸಾಮ್ರಾಜ್ಞಿಯೇ ! ಸಾಧಕನ ಬುದ್ಧಿ ಶಕ್ತಿಯು ಕಡಿಮೆರೀತಿಯ ಆಲೋಚನೆಗಳು ಹಾಗೂ ಮಾನಸಿಕ ಕಲ್ಪನೆಗಳಿಂದ (ಎಲ್ಲ ಕಲ್ಮಶಗಳಿಂದ ಹೊರತಾದ) ಜ್ವಲಿಸಿದಾಗ, ಅದು ಧೃತಿ ಎಂಬ ಹೆಸರನ್ನು ಹೊಂದುತ್ತದೆ. ಈ ಸ್ಥಿರತೆಯನ್ನು ಸಾಧಿಸುವುದನ್ನೇ ನಿನ್ನನ್ನು ಹೊಂದುವುದು ಅಥವಾ ನಿನ್ನಲ್ಲಿ ಒಂದಾಗು ವುದು ಎನ್ನಲಾಗುವುದು. “ನಿರ್ವಿಷಯಬುದ್ಧಿ ಧಾರಣೈವ ದೇವಿ ಧಾರಣ.”

ವಿವರಣೆ :
ಯಾವ ಪುರುಷನು ರೂಪಾದಿ ವಿಷಯಗಳಲ್ಲದಿರುವಬುದ್ಧಿಎಂಬ ಜ್ವಾಲೆಯನ್ನು ಧಾರಣಮಾಡುವನೋ ಅವನು ನಿನ್ನನ್ನೇ ಧಾರಣಮಾಡುತ್ತಾನೆಂದು ತಿಳಿದವರ ಅಭಿ ಪ್ರಾಯವಾಗಿದೆ. ಅದೇಧೃತಿಎಂಬ ಶಬ್ದದಿಂದ ಹೇಳಲ್ಪಡುತ್ತದೆ. ನಿರ್ವಿಷಯವಾದ ಬುದ್ಧಿಧಾರಣವೇ ದೇವಿಯಧಾರಣಎಂದು ಭಾವ.

ಸಂಸ್ಕೃತದಲ್ಲಿ :
ಶ್ರುತಾ ಪ್ರವಣಚಿತ್ತಂ ಸ್ಮೃತಾ ನರಮಪಾಪಂ
ಧೃತಾ ಹೃದಿ ವಿಧತ್ಸೇ ಗತಸ್ವಪರಭಾವಂ ||7||

ತಾತ್ಪರ್ಯ :
ಓ ದೇವಿ ! ನಿನ್ನ ಬಗ್ಗೆ ಯಾರೊಬ್ಬನು ಕೇಳಿದರೂ ಅವನು ವಿನೀತನಾಗುವನು; ಸಾಧಕನೊಬ್ಬನು ನಿನ್ನನ್ನು ಜ್ಞಾಪಿಸಿಕೊಂಡರೆ, ಅವನನ್ನು ನೀನು ಪರಿಶುದ್ಧನನ್ನಾಗಿ ಮಾಡುವೆ; ಯಾರು ನಿನ್ನನ್ನು ಕುರಿತು ಧ್ಯಾನಿಸುವರೋ, ನೀನು ಅವರಲ್ಲಿನನಾನು ಮತ್ತು ನೀನುಎಂಬ ಮೂಲಭೂತ ವ್ಯತ್ಯಾಸವನ್ನು ನಿವಾರಿಸುವೆ! (ಒಮ್ಮೆಲೇ ಅವನಲ್ಲಿ ಐಕ್ಯತೆಯ ಭಾವನೆಯು ಉದಿಸುವುದು).”
ಓ ಮಾತೆ ! ನೀನು ಎಷ್ಟು ಧಾರಾಳ ಮನಸ್ಸುಳ್ಳವಳು ! ಉಪಾಸನೆಯ ಹಂತಗಳಾದ - ಶ್ರವಣ, ಮನನ ಮತ್ತು ನಿಧಿಧ್ಯಾಸನಗಳನ್ನು ಇಲ್ಲಿ ತಿಳಿಸಲಾಗಿದೆ.

ವಿವರಣೆ :
ತಾಯಿಯೇ ! ನಿನ್ನ ವಿಷಯವನ್ನು ಕೇಳಿದ ಮನುಷ್ಯನನ್ನು ನೀನು ವಿನೀತನನ್ನಾಗಿ ಮಾಡುತ್ತೀಯೆ. ನೀನು, ನಿನ್ನನ್ನು ಸ್ಮರಿಸಿದವನನ್ನು ಪಾಪರಹಿತನನ್ನಾಗಿ ಮಾಡುತ್ತೀಯೆ. ಹೃದಯದಲ್ಲಿ ನಿಲ್ಲಿಸಿ ಧ್ಯಾನಿಸಿದ್ದೇ ಆದರೆ, ಅಂತಹವನ, ನಾನು-ಬೇರೆಯವರು ಭೇದಬುದ್ಧಿಯು ಹೋಗುತ್ತದೆ.

ಸಂಸ್ಕೃತದಲ್ಲಿ :
ಅಹಂಮತಿತಟಿನ್ಯಾಃ ಸತಾಮವನಿಮೂಲಂ
ತ್ವಮೇವ ಕಿಲ ಸೇಯಂ ಮಹರ್ಷಿರಮಣೋಕ್ತಿಃ ||8||

ತಾತ್ಪರ್ಯ :
ಓ ಸಜ್ಜನರನ್ನು ರಕ್ಷಿಸುವವಳೇ ! ಜ್ಞಾನವಾಹಿನಿಯ ಮೂಲವೇ ನೀನೆಂದು ಸರ್ವವಿದಿತವಾದದ್ದು. ನನ್ನ ಗುರುವಾದ ರಮಣಮಹರ್ಷಿಗಳು ತೋರಿರುವಂತೆ ಎಲ್ಲ ಪ್ರಕ್ರಿಯೆಗಳ ಮೂಲವಾದಅಹಂ”, ನಾನು ಎಂಬ ತತ್ತ್ವವೇ ನೀನು.
ದೇವರ ಇರುವಿಕೆಯ ಬಗ್ಗೆ ಪ್ರಶ್ನಿಸಿದವರಿಗೆ ಭಗವಾನ್ ರಮಣ ಮಹರ್ಷಿಗಳು ಅಹಂಪ್ರತ್ಯಯದ ಮಾರ್ಗವನ್ನು ಹುಡುಕಿ, ಅನಂತರ ಅದರ ಮೂಲವನ್ನು ಕಂಡುಕೊಳ್ಳಲು ತಿಳಿಸಿರುವರು. ಯಾರು ಅಹಂಪ್ರತ್ಯಯದ ಮೂಲವನ್ನು ಕಂಡುಕೊಳ್ಳುವರೋ ಅವರಿಗೆ ದೇವರು ಸಿಗುವನು ಎಂದು ತಿಳಿಸಿದ್ದಾರೆ.

ವಿವರಣೆ :
ನಾನು, ನಾನು ಎಂಬ ಸ್ಮರಣೆಯ ಮೂಲವು ಚಿತ್ಸ್ವರೂಪವಾಗಿದೆ. ಹೀಗೆಂದು ರಮಣ ಮಹರ್ಷಿಗಳ ಉಪದೇಶವು ಪ್ರಸಿದ್ಧವಾಗಿದೆ. ಸಾಮಾನ್ಯವಾಗಿ ನದಿಗಳ ಉಗಮಸ್ಥಾನವು ಬೆಟ್ಟವೇ ಆಗಿರುತ್ತದೆ. ಇಲ್ಲಿಯತಟನೀಶಬ್ದಸ್ವಾರಸ್ಯದಿಂದ ಅಹಂಕಾರದ ಮೂಲವುಅಚಲಎಂದು ಊಹಿಸಲ್ಪಡುತ್ತದೆ.

ಸಂಸ್ಕೃತದಲ್ಲಿ :
ಅಹಂಮತಿಲತಾಯಾಸ್ತ್ವಯೀಶವಧು ಕಂದೇ
ಸ್ಥಿತೋsಮ್ಬ ಭುವನಸ್ಯ ಪ್ರವಿಂದತಿ ರಹಸ್ಯಂ ||9||

ತಾತ್ಪರ್ಯ :
ಓ ಭಗವಾನ್ ಶಂಕರನ ಮಡದಿಯೇ ! ಅಹಂ ನ ಬಳ್ಳಿಗೆ ನೀನೇ ಬೇರು; ಓ ಮಾತೆ! ಈ ಬೇರಿನಲ್ಲಿ ಸ್ಥಾಪಿತನಾದ ಸಾಧಕನು ವಿಶ್ವದ ಸೂಕ್ಷ್ಮ ರಹಸ್ಯ ಹಾಗೂ ಬೇರಿನ ಗೋಪ್ಯತೆ ಯನ್ನು ಗ್ರಹಿಸುವನು.
ಮೇಲಿನ ಶ್ಲೋಕದಲ್ಲಿ ಅಹಮ್ಮತಿಯನ್ನು ತೊರೆಗೆ ಹಾಗೂ ಬಳ್ಳಿಗೆ ಹೋಲಿಸಲಾಗಿದೆ. ಉಮಾ, ದೇವಿ, ಕುಂಡಲಿನೀ, ಇತ್ಯಾದಿ ಪದಗಳು ಸ್ತ್ರೀಲಿಂಗವಾದ್ದರಿಂದ ಈ ಶ್ಲೋಕದಲ್ಲಿನ ಪದಗಳಾದ, ತತಿನಿ ಹಾಗೂ ಲತಾ ಎಂಬ ಪದಗಳನ್ನೂ ಸಹ ಸ್ತ್ರೀಲಿಂಗ ದಂತೆ ನಿರೂಪಿಸಲಾಗಿದೆ. ಸಂಸ್ಕೃತದಲ್ಲಿ ಪದಗಳು ತಮ್ಮೊಂದಿಗೆ ಲಿಂಗವನ್ನೂ ಪ್ರತಿನಿಧಿಸುತ್ತವೆ.

ವಿವರಣೆ :
ಅಹಂ” (ನಾನು) ಎಂಬ ಬಳ್ಳಿಯ ಬುಡದಲ್ಲಿ ಚಿದ್ರೂಪಿಣಿಯಾಗಿ ನೀನೇ ಇರುವೆ. ಅಲ್ಲಿ ನಿಂತಿರುವ ಯೋಗಿಪುರುಷನಿಗೆ ಪ್ರಪಂಚದ ನಿಜವಾದ ತತ್ತ್ವದ ಅರಿವಾಗುತ್ತದೆ.

ಸಂಸ್ಕೃತದಲ್ಲಿ :
ಯದೇತದಖಿಲಾಂಬ ಪ್ರಸಿದ್ಧಮಿವ ದೃಶ್ಯಂ
ತಮೈವ ಕಿಲ ಜಾಲಂ ಗತೋ ಭಣತಿ ಮೂಲಂ ||10||

ತಾತ್ಪರ್ಯ :
ಓ ವಿಶ್ವದ ಮೂಲಜನಕಳೆ ! ಸಂಪೂರ್ಣವಾಗಿ ವೈವಿಧ್ಯತೆಯಿಂದ ಕೂಡಿದ, ಮತ್ತು ಸುಂದರ ವಾಗಿ ಹಾಗೂ ಶಾಶ್ವತವಾಗಿ ಕಾಣುವ ಅಭಿವ್ಯಕ್ತವಾದ ಪ್ರಪಂಚವು ನಿನ್ನ ಕೈಕೆಲಸವೆ ಆಗಿದೆಯೆಂದು ಮೂಲವಾದ ನಿನ್ನನ್ನು ತಲುಪಿದ ಯೋಗಿಯು ಹೇಳುವನು.

ವಿವರಣೆ :
ಜಗತ್ತಿನ ತಾಯಿಯೇ ! ಈ ಪ್ರಸಿದ್ಧವಾಗಿ ನಿಶ್ಚಿತವಾಗಿ ಇರುತ್ತಿರುವ ಈ ಜಗತ್ತು ನಿನ್ನ ಮಾಯಾಜಾಲವೇ ಅಗಿದೆ. ಹೀಗೆಂಬುದಾಗಿ ಅಹಂಕಾರವೆಂಬ ಬಳ್ಳಿಯ ಬುಡವನ್ನು ಕಂಡ ಯೋಗಿಯು ಹೇಳುತ್ತಾನೆ.

ಸಂಸ್ಕೃತದಲ್ಲಿ :
ಪ್ರಪಶ್ಯಸಿ ಪರಾಚೀ ಜಗದ್ವಿವಿಧಭೇದಂ
ಸ್ವತಃ ಕಿಮಪಿ ನಾನ್ಯತ್ಪ್ರತೀಚಿ ಪುರತಸ್ತೇ ||11||

ತಾತ್ಪರ್ಯ :
ಬಾಹ್ಯ ದೃಷ್ಟಿಯ ಅಂಶದಿಂದ ಪ್ರಪಂಚವನ್ನು ನೋಡಿದಾಗ ಅದು ಸಂಪೂರ್ಣವಾಗಿ ವಿವಿಧವರ್ಣದಿಂದ ಕೂಡಿರುವುದು; ಆದರೆ ಆಂತರಂಗದಿಂದ ಇದು ನಿನ್ನ ಹೊರತು ಬೇರೇನೂ ಅಲ್ಲ.
ಜ್ಞಾನವು ಅನೇಕ ವಿಧವಾಗಿ ಅಭಿವ್ಯಕ್ತ ವಾಗುವುದೇ ಏಕಮೇವ ತತ್ತ್ವ. ಅದರ ಅಸ್ತಿತ್ತ್ವವು ಸಂಪೂರ್ಣವಾಗಿ ಹಾಗೂ ಏಕಮೇವವಾಗಿ ದೇವಿಯ ಹೊರತು ಬೇರೇನೂ ಅಲ್ಲ.

ವಿವರಣೆ :
ದೇವಿಯೇ ! ನೀನು ಪರಾಗ್ದೃಷ್ಟಿಯುಳ್ಳವ ಳಾಗಿ ಅಂದರೆ ಹೊರಮುಖಳಾಗಿ ನಾನಾ ರೀತಿಯ ಭೇದಭಾವಗಳನ್ನು ನೋಡಿಸು ತ್ತೀಯೆ. ಅದರಿಂದಲೇ ಜಗತ್ತಿನ ಸ್ಥಿತಿಯು, ಅಂತರ್ಮುಖಿಯಾಗಿ ನೀನೇ ಎಲ್ಲವೂ ಆಗಿಬಿಡುತ್ತೀಯೆ. ಬೇರೆ ಯಾವುದೂ ಇರುವುದಿಲ್ಲವೆಂಬ ಅರ್ಥ.

ಸಂಸ್ಕೃತದಲ್ಲಿ :
ಸ್ತುತಾ ಭವಸಿ ಶಶ್ವತ್ ಸ್ಮೃತಾ ಚ ಭಜನೇ ತ್ವಂ
ಧೃತಾ ಭವಸಿ ಯೋಗೇ ತತಾ ಭವಸಿ ಬೋಧೇ ||12||

ತಾತ್ಪರ್ಯ :
ಯೋಗಿಗಳು ನಿನ್ನನ್ನು ಪ್ರಾರ್ಥಿಸುತ್ತಾರೆ ಹಾಗೂ ಸದಾ ನೆನಪಿಸಿಕೊಳ್ಳುವರು ಮತ್ತು ಧ್ಯಾನಿಸುವರು. ಎಲ್ಲಾ ಶಾಖೆಗಳಾದ ವಿವೇಚನೆ ಮತ್ತು ಜಾಗೃತಿಗಳಲ್ಲಿ ನೀನು ಹರಡಿರುವೆ.

ವಿವರಣೆ :
ದೇವಿಯೇ ! ನೀನು ಭಜನಕಾಲದಲ್ಲಿ ಸ್ತೋತ್ರಮಾಡಲ್ಪಡುತ್ತೀಯೆ. ಯೋಗಕಾಲದಲ್ಲಿ ಧರಿಸಲ್ಪಡುತ್ತೀಯೆ. ಜ್ಞಾನಕಾಲದಲ್ಲಿ ವಿಸ್ತೃತಳಾಗುತ್ತೀಯೆ.

ಸಂಸ್ಕೃತದಲ್ಲಿ :
ಸ್ತುತಾ ದಿಶಸಿ ಕಾಮಂ ಸ್ಮೃತಾ ಹರಸಿ ಪಾಪಂ
ಧೃತಾsಸ್ಯಧಿಕಶಕ್ತ್ಯೈ ತತಾ ಭವಸಿ ಮುಕ್ತ್ಯೈ||13||

ತಾತ್ಪರ್ಯ :
ನಿನ್ನನ್ನು ಪ್ರಾರ್ಥಿಸಿದಾಗ ನೀನು ಪ್ರಾರ್ಥಿಸಿದವರಿಗೆ ಅವರ ಎಲ್ಲ ಕೋರಿಕೆಗಳನ್ನೂ ಆಶೀರ್ವಾದದ ಮೂಲಕ ಪೂರೈಸುವೆ; ನಿನ್ನನ್ನು ನೆನಪಿಸಿಕೊಂಡಾಗ ಅವರ ಪಾಪಗಳನ್ನು ನಿವಾರಿಸುವೆ; ಯೋಗಿಯು ನಿನ್ನನ್ನು ತನ್ನ ಹೃದಯದಲ್ಲಿ ಇರಿಸಿಕೊಂಡಾಗ ನೀನು ಅಸಾಧಾರಣವಾದ ಶಕ್ತಿಯನ್ನು ಅವನಿಗೆ ಕರುಣಿಸುವೆ ಹಾಗೂ ಅವನ ಅಭಿವೃದ್ಧಿಯ ಎಲ್ಲಹಂತಗಳಲ್ಲೂ ಪ್ರವೇಶಿಸಿ ಅವನಿಗೆ ಕಡೆಗೆ ಮುಕ್ತಿದೊರಕಲು ಮಾರ್ಗ ದರ್ಶನ ಮಾಡುವೆ.
ಪ್ರಶಂಸೆಯು ಕೋರಿಕೆಗಳನ್ನು ಕರುಣಿಸಿ, ಧ್ಯಾನವು ಪಾಪವನ್ನು ಹೋಗಲಾಡಿಸುವುದು, ಯೋಗವು ಶಕ್ತಿಯನ್ನು ನೀಡಿದರೆ, ಜ್ಞಾನವು ಮುಕ್ತಿಯನ್ನು ದೊರಕಿಸಿಕೊಡುತ್ತದೆ.

ವಿವರಣೆ :
ದೇವಿಯೇ ! ನೀನು ಸ್ತೋತ್ರಮಾಡಲ್ಪಟ್ಟವ ಳಾಗಿ ಇಷ್ಟಾರ್ಥಗಳನ್ನು ನೀಡುತ್ತೀಯೆ. ಸ್ಮರಿಸಲ್ಪಟ್ಟವಳಾಗಿ ಪಾಪಗಳನ್ನು ನಾಶಮಾಡುತ್ತೀಯೆ. ಯೋಗಕಾಲದಲ್ಲಿ ಧರಿಸಲ್ಪಟ್ಟವಳಾಗಿ ಸಮೃದ್ಧವಾದ ಶಕ್ತಿಯನ್ನು ನೀಡುತ್ತೀಯೆ. ಜ್ಞಾನಸಿದ್ಧಿಗೋಸ್ಕರ ನನ್ನಲ್ಲಿ ವ್ಯಾಪ್ತಳಾಗಿ ಮೋಕ್ಷವನ್ನು ನೀಡುತ್ತೀಯೆ.

ಸಂಸ್ಕೃತದಲ್ಲಿ :
ವಿಶುಧ್ಯತಿ ಯತಾಶೀ ಪ್ರಮಾದ್ಯತಿ ನ ಶುದ್ಧಃ
ಪ್ರಮಾದರಹಿತಸ್ಯ ಸ್ಫುಟೇ ಲಸಸಿ ಕಂಜೇ ||14||

ತಾತ್ಪರ್ಯ :
ಆಹಾರದ ಮೇಲೆ ಹತೋಟಿಯನ್ನು ಸಾಧಿಸುವ ಸಾಧಕನು ಪರಿಶುದ್ಧನಾಗುವನು; ಪರಿಶುದ್ಧಾತ್ಮವು ದೋಷರಹಿತವಾಗುವುದು, ದೇವಿಯು ಸಹಸ್ರಾರದಲ್ಲಿ ನೆಲಸಲು ತಪ್ಪಿಲ್ಲ ದವನೆ ಸೂಕ್ತ ವ್ಯಕ್ತಿ.
ಏಕಾವಲಿ ರೂಪವು ರಚನೆಯ ದಾರದಂತೆ, ಹಿಂದಿನದು ಮುಂದಿನದನ್ನು ಸೂಚಿಸುವಂತೆ.

ವಿವರಣೆ :
ಆಹಾರನಿಯಮವಿರುವವನು ಶುದ್ಧನಾಗುತ್ತಾನೆ. ಹಾಗೆ ಶುದ್ಧನಾದವನು ಪ್ರಮಾದಗಳನ್ನು ಮಾಡುವುದಿಲ್ಲ. ಪ್ರಮಾದವಿಲ್ಲದವನ ಅರಳಿದ ಸಹಸ್ರಾರವೆಂಬ ಕಮಲದಲ್ಲಿ ನೀನು ಕ್ರೀಡಿಸುತ್ತೀಯೆ.

ಸಂಸ್ಕೃತದಲ್ಲಿ :
ಸ್ಫುಟಂ ಯದಿ ಸರೋಜಂ ನಟೀವ ಪಟು ನಾಟ್ಯಂ
ಕರೋಷಿ ಯತಬುದ್ಧೇರ್ಜಗಜ್ಜನನಿ ಶೀರ್ಷೇ ||15||

ತಾತ್ಪರ್ಯ :
ಓ ವಿಶ್ವ ಮಾತೇ ! ಯೋಗಿಯ ಸಂಪೂರ್ಣವಾಗಿ ಅರಳಿದ ಸಹಸ್ರಾರದಾಲ್ಲಿ ನೀನು ನುರಿತ ನೃತ್ಯಗಾತಿಯಂತೆ ಮುಕ್ತವಾಗಿ ನರ್ತಿಸುವೆ.

ವಿವರಣೆ :
ಜಗತ್ತಿನ ತಾಯಿಯೇ ! ಯಾವಾತನ ಸಹಸ್ರಾರ ಕಮಲವು ಹೀಗೆ ಅರಳುತ್ತದೋ ಆತನ ತಲೆಯಲ್ಲಿ ನೀನು ನರ್ತಕಿಯಂತೆ ಪಟುನರ್ತನವನ್ನು ಮಾಡುತ್ತೀಯೆ.

ಸಂಸ್ಕೃತದಲ್ಲಿ :
ಶಿರೋಗತಮಿದಂ ನಃ ಪ್ರಫುಲ್ಲಮಯಿ ಪದ್ಮಂ
ಅನಲ್ಪಮಕರಂದಂ ತ್ವಮಂಬ ಭವ ಭೃಂಗೀ||16||

ತಾತ್ಪರ್ಯ :
ನನ್ನ ಶಿರದಲ್ಲಿರುವ ಸಹಸ್ರಾರವು ಅಮೃತದಿಂದ ತುಂಬಿದ ಸಾವಿರ ದಳಗಳ ಕಮಲ ಪುಷ್ಪವು. ನಾನು ನಿನ್ನನ್ನು ದುಂಬಿಯಂತೆ ಬಂದು ಅದರ ರುಚಿಯನ್ನು ನೋಡಲು ಆಹ್ವಾನಿಸುವೆ.

ವಿವರಣೆ :
ಎಲೈ ತಾಯಿಯೇ ! ಯಾವಾಗ ತಲೆಯಲ್ಲಿರುವ ಸಹಸ್ರಾರವೆಂಬ ಕಮಲವು ಅರಳುತ್ತದೋ ಆಗ ಅತ್ಯಧಿಕವಾದ ಪುಷ್ಪರಸವುಳ್ಳದ್ದಾಗಿ ಅದು ಆಗುತ್ತದೆ. ಆಗ ನೀನು ಆ ಮಕರಂದವನ್ನು ಆಸ್ವಾದಿಸುವ ಹೆಣ್ಣುದುಂಬಿ ಯಾಗು. ಅಂದರೆ ಆ ರಸವನ್ನು ಸ್ವೀಕರಿಸುವ ವಳಾಗಿ ಅಲ್ಲಿ ಪ್ರಕಾಶಿಸು.

ಸಂಸ್ಕೃತದಲ್ಲಿ :
ಸರೋಜಮತುದಂತೀ ಪಿಬಾಂಬ ಮಕರಂದಂ
ಮಹಾಮಧುಕರಿ ತ್ವಂ ಭಜೇರ್ಮದಮಮಂದಂ ||17||

ತಾತ್ಪರ್ಯ :
ಮಾತೇ ! ಪುಷ್ಪಕ್ಕೆ ತೊಂದರೆಯಾಗದಂತೆ ನೀನು ಅಮೃತದಲ್ಲಿನ ಪಾಲು ತೆಗೆದು ಕೊಳ್ಳುವೆ. ನೀನು ಅನುಭವಿ ದುಂಬಿ, ನಿನಗೆ ಪುಷ್ಪವನ್ನು ಅಖಂಡವಾಗಿರುವಂತೆ ನೋಡಿ ಕೊಂಡು ಅಮೃತ ರಸವನ್ನು ಹೀರುವುದು ಹೇಗೆ ಎಂದು ಗೊತ್ತಿರುವುದು.
ಕುಂಡಲಿನಿಯು ಜಾಗೃತವಾಗಿ ಸಹಸ್ರಾರವನ್ನು ತಲುಪುವ ಸಮಯದಲ್ಲಿ ಯೋಗಿಯು ತನ್ನ ಶರೀರದಲ್ಲಿ ಅಧಿಕ ನೋವನ್ನು ಅನುಭವಿಸುವನು. ಹಾಗಾಗಿ ಯೋಗಿಯು ಮಾತೆಯನ್ನು ಪುಷ್ಪವನ್ನು ಎಚ್ಚರಿಕೆಯಿಂದ ನಿರ್ವಹಿಸುವಂತೆ ಪ್ರಾರ್ಥಿಸುತ್ತಾನೆ. ಇದು ಸಾಂಕೇತಿಕ ಭಾಷೆ.

ವಿವರಣೆ :
ತಾಯಿಯೇ ! ನನ್ನ ಸಹಸ್ರಾರವೆಂಬ ಕಮಲವನ್ನು ಹಿಂಸಿಸದೆ ಅಲ್ಲಿರುವ ಅತ್ಯಧಿಕವಾದ ಜೇನನ್ನು-ಬೋಧವನ್ನು ಪಾನಮಾಡು. ಏಕೆಂದರೆ ನೀನು ಮಹಾನಿಪುಣವಾದ ಮಧುಕರಿಯಾಗಿದ್ದೀಯೆ.
ಯೋಗಾನುಭವ ಕಾಲದಲ್ಲಿ ಉಂಟಾಗುವ ಅನುಭವ ವಿಶೇಷಗಳಿಂದ ಯೋಗಿಯಾದವನಿಗೆ ಶಾರೀರಿಕವಾದ ವ್ಯಥೆಗಳು ಉಂಟಾಗಬಹುದು. ಆದ್ದರಿಂದ ಹೂವನ್ನು ಹಿಂಸಿಸದೆ ಪಾನಮಾಡು ಎಂದು ರೂಪಕಮಾಡಿ ಹೇಳಿದೆ.

ಸಂಸ್ಕೃತದಲ್ಲಿ :
ಅಮಂಗಲಮಿತಃ ಪ್ರಾಜ್ ಮಯೇಶವಧು ಭುಕ್ತಂ
ಇತಃ ಪರಮಮೇಯೇ ಸುಖಾನ್ಯನುಭವ ತ್ವಂ ||18||

ತಾತ್ಪರ್ಯ :
ಓ ಎಲ್ಲೆಯಿಲ್ಲದವಳೇ ! ಮಹಾದೇವನ ಪತ್ನಿಯೆ! ಹಿಂದೆ ನಾನು ಬಹಳವಾಗಿ ದುಃಖವನ್ನನುಭವಿಸಿರುವೆ. ಈಗ ನೀನು ನನಗೆ ಸಂತೋಷವನ್ನು ಅನುಭವಿಸಲು ಅನುಗ್ರಹಿಸು.
ಸೂಚನೆಯು ಸ್ಪಷ್ಟವಾಗೇ ಇದೆ. ಅಜ್ಞಾನದಿಂದಾಗಿ ಅಜ್ಞಾನಿಯು ಜೀವನದಲ್ಲಿ ಬಹಳ ಕಷ್ಟವನ್ನು ಅನುಭವಿಸುವನು. ಒಮ್ಮೆ ಅವನಲ್ಲಿ ಜ್ಞಾನವು ಗೋಚರವಾಗುತ್ತಿದ್ದಂತೆ, ಅವನು ಪರಮೋಚ್ಚ ಜ್ಞಾನದಲ್ಲಿ ಒಂದಾಗುವನು, ಹಾಗೂ ಅಲ್ಲಿ ಭೋಕ್ತೃಭವ ಅಥವಾ ಅನಂದಕರವು ಇರುವುದಿಲ್ಲ. ಮಾತೆ ಮಾತ್ರ ಸಂತೋಷಿಸುವವಳು. ಹಾಗಾಗಿ ಯೋಗಿಯು ಮಾತೆಗೆ, “ನೀನು ಆನಂದಿಸುಎನ್ನುವನು.

ವಿವರಣೆ :
ಈಶ್ವರನ ಸುಂದರಿಯೇ ! ಇದಕ್ಕೆ ಮೊದಲು ನನ್ನಿಂದ ದುಃಖಗಳು ಅನುಭವಿಸಲ್ಪಟ್ಟವು. ಇನ್ನು ಮೇಲೆ ಸುಖವನ್ನು ಅನುಭವಿಸು. ನಿನ್ನ ಸುಖಕ್ಕೋಸ್ಕರವೆಂದೇ ನನ್ನಿಂದ ದುಃಖಗಳು ಅನುಭವಿಸಲ್ಪಟ್ಟವು. ನೀನು ಆನಂದಮಯಳಾಗಿ, ಅನಂದಕ್ಕೋಸ್ಕರವೇ ಇರುತ್ತಿದ್ದೀಯೆ. ಜ್ಞಾನೋದಯಕ್ಕೆ ಮುಂಚೆ ಎಲ್ಲ ಕಷ್ಟಗಳೂ ಜ್ಞಾನವಿಲ್ಲದಿರುವುದರಿಂದ ನನ್ನಿಂದ ಅನುಭವಿಸಲ್ಪಟ್ಟಿತು. ಜ್ಞಾನೋದಯವಾದ ಮೇಲೆ ಸುಖ ಉಂಟಾಗಲು ಆ ಬುದ್ಧನಭೋಕ್ತ್ರುತ್ವವೇನಾಶವಾಗುತ್ತದೆ. ಆಗ ಭೋಕ್ತ್ರೀಯಾದವಳು ದೇವಿಯೇ ಆಗುತ್ತಾಳೆ.

ಸಂಸ್ಕೃತದಲ್ಲಿ :
ಅಹಂಕೃತಿವಶಾನ್ಮೇ ಚಿದೀಶ್ವರಿ ಪುರಾsಭೂತ್
ತವಾಭವದಿದಾನೀಂ ಮಮಾಸ್ತಿ ನ ವಿಭುತ್ವಂ ||19||

ತಾತ್ಪರ್ಯ :
ಓ ಸಾಮ್ರಾಜ್ಞಿಯೇ ! ಕುಂಡಲಿನಿಯು ಜಾಗೃತವಾಗುವ ಮೊದಲು, ನಾನು ಬೇರೆಯದೇ ಆದ ಆತ್ಮವೆಂಬ ಭಾವನೆಯನ್ನು ಹೊಂದಿದ್ದೆ. ನೀನು ಅದನ್ನು ತಪ್ಪೆಂದು ದೃಢಪಡಿಸಿರುವೆ. ನನ್ನ ಆತ್ಮವು ನಿನ್ನದೇ ಆಗಿದೆ.
ಮಹಾಗುಣಗಳಾದ, ಅಂದರೆ ಸರ್ವವ್ಯಾಪಕತೆ ಮತ್ತು ಅಧಿಪತ್ಯವು ನಿನಗೇ ಸೇರಿದ್ದು, ನನಗಲ್ಲ.

ವಿವರಣೆ :
ತಾಯಿಯೇ ! ಜ್ಞಾನೋದಯಕ್ಕೆ ಮುಂಚಿತವಾಗಿ ನಾನುಚಿತ್ಪ್ರಭುಎಂದು ತಿಳಿದಿದ್ದೆ. ಈಗ ನೀನೇ ಚಿತ್ಪ್ರಭುವಾಗಿದ್ದೀಯೆ. ಆದ್ದರಿಂದ ನಾನು ಆ ಚಿತ್ತಿನ ಪ್ರಭುವಲ್ಲ. ನೀನೇ ನನ್ನ ಚಿತ್ತಿನ ಪ್ರಭುವಾಗಿದ್ದೀಯೆ.

ಸಂಸ್ಕೃತದಲ್ಲಿ :
ಯದಾsಭವದಿಯಂ ಮೇ ತದಾsನ್ವಭವದಾರ್ತಿಂ
ತವೇಶ್ವರಿ ಭವಂತೀ ಭುನಕ್ತು ಶಮಿದಾನೀಂ||20||

ತಾತ್ಪರ್ಯ :
ಓ ದೇವೀ ! ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ಮೇಲೆ ನನ್ನಲ್ಲಿನ ಅಹಂ ಸಂಪೂರ್ಣವಾಗಿ ನಿನಗೆ ಶರಣಾಗಿದೆ. ಆದ್ದರಿಂದ ಅದು ದೀರ್ಘಕಾಲದಿಂದ ಮಮತೆಯಿಂದ ಪೋಷಿಸುತ್ತಿದ್ದ ಮತ್ತು ನೆರವೇರಿಕೆಗಳು, ಈಗಲಾದರೂ, ನಿನ್ನ ಹತೋಟಿಯಲ್ಲಿವೆ.

ವಿವರಣೆ :
ಚಿತ್ಯಾವಾಗ ನನ್ನದಾಗಿತ್ತೋ ಆಗ ಅಹಂಕಾರವಶದಿಂದ ನನ್ನದಾಗಿತ್ತು. ಆಗ ಅದು ವ್ಯಥೆಯನ್ನು ಅನುಭವಿಸಿತು. ಈಗ ಎಲೈ ಈಶ್ವರಿಯೇ ! ನಿನ್ನವಳಾಗಿ ಸುಖವನ್ನು ಅನುಭವಿಸಲಿ. ಮಮಕಾರವಿದ್ದಾಗ ಎಲ್ಲವೂ ದುಃಖಮಯವಾಗಿರುತ್ತದೆ. ನಿರ್ಮಮತ್ವವೇರ್ಪಟ್ಟರೆ ಎಲ್ಲವೂ ಪರಮ ಸುಖವಾಗುತ್ತದೆ.

ಸಂಸ್ಕೃತದಲ್ಲಿ :
ಕರೋತ್ವಿಯಮಹಂತಾ ವಿವಾದಮಧುನಾsಪಿ
ತಥಾsಪಿ ಪುರತಸ್ತೇ ಮಹೇಶ್ವರಿ ವಿವೀರ್ಯಾ ||21||

ತಾತ್ಪರ್ಯ :
ಓ ಮಹೇಶ್ವರಿಯೇ ! ನಾನು ಎಂಬ ಈ ಅಹಂ, ಎಷ್ಟರಮಟ್ಟಿಗೆ ಮೆರೆದರೂ, ನಿನ್ನ ಮುಂದೆ ಅದರ ದೌರ್ಬಲ್ಯವು ಬಹಿರಂಗವಾಗುವುದು. ವೈಯುಕ್ತಿಕ ಅಹಂ, ಪರಮೋಚ್ಚ ಜ್ಞಾನದ ಮುಂದೆ ಸರಿಸಮಾನವಲ್ಲವೇ ಅಲ್ಲ.

ವಿವರಣೆ :
ಮಹೇಶ್ವರಿಯಾದವಳೇ ! ಈ ಅಹಂತೆಯು ಈಗಲೂ ಅನೇಕವಾದ ವಿವಾದಗಳನ್ನು ಮಾಡಲಿ. ಆದರೆ ನಿನ್ನ ಮುಂದುಗಡೆ ಅದು ನಿಃಸತ್ವವಾಗಿಬಿಡುತ್ತದೆ. ಏಕೆಂದರೆ ನಿನ್ನಾಶ್ರಯವೆಲ್ಲಿ? ಈ ಅಹಂತೆಯೆಲ್ಲಿ?

ಸಂಸ್ಕೃತದಲ್ಲಿ :
ಇಯಂ ಚ ತವ ಬುದ್ಧೇರ್ಯತೋ ಭವತಿ ವೃತ್ತಿಃ
ಇಮಾಮಪಿ ಕುರು ಸ್ವಾಂ ಕ್ಷಮಾವತಿ ವಿರೋಷಾ ||22||

ತಾತ್ಪರ್ಯ :
ಓ ಕ್ಷಮಾಗುಣವುಳ್ಳ ದೇವತೆಯೇ ! ಬೌದ್ಧಿಕ ಸಹಜ ಶಕ್ತಿಯು ನಿನಗೆ ಸೇರಿದ್ದಾದ್ದರಿಂದ, ಕೋಪರಹಿತವಾಗಿ ಅದನ್ನು ನಿನ್ನದಾಗಿ ಸ್ವೀಕರಿಸು.

ವಿವರಣೆ :
ತಾಯಿಯೇ ! ಕ್ಷಮಾಶೀಲಳೆ ! ಯಾವ ಕಾರಣದಿಂದ ಈ ಧೀವೃತ್ತಿಯು ನಿನ್ನವಳಾಗಿರುತ್ತಾಳೋ ಅದೇ ಕಾರಣದಿಂದ ಅವಳನ್ನು ಶಾಂತಳಾಗಿ ನಿನ್ನವಳನ್ನಾಗಿಸು. ಈ ಧೀವೃತ್ತಿಯು ನಿನ್ನವಳು. ಅದರ ಸ್ವಾಮಿನಿಯು ನೀನೇ ಆದ್ದರಿಂದ ಅವಳನ್ನು ಸ್ವೀಕರಿಸು.

ಸಂಸ್ಕೃತದಲ್ಲಿ :
ಸುಧಾಬ್ಧಿರಿಹ ಮಾತಸ್ತರಂಗಶತಮಾಲೀ
ಚಿದಭ್ರಪುರಮತ್ರ ಪ್ರಭಾಪದಮದಭ್ರಂ ||23||

ತಾತ್ಪರ್ಯ :
ಓ ಮಾತೇ ! ಈ ಶರೀರದಲ್ಲಿ ಅಮೃತ ಸಾಗರವನ್ನು ಕಂಡು, ಅದರಲ್ಲಿ ನೂರಾರು ಅಲೆಗಳಿವೆ; ಈ ಶರೀರವು ಚಿದಾಕಾಶವೆಂದು ಕರೆಯುವ ಪ್ರಕಾಶಮಾನವಾದ ಬೆಳಕು. ಇಲ್ಲಿ ನೆಮ್ಮದಿಯಿಂದ ನೆಲೆಸು.
ತಂತ್ರಶಾಸ್ತ್ರದಲ್ಲಿ ಸಹಸ್ರಾರವನ್ನು ಅಮೃತ ಸಾಗರವೆಂದು ಚಿತ್ರಿಸುತ್ತದೆ. ಅದು ಬ್ರಹ್ಮಪುರ ಅಥವಾ ದಹರದಂತೆ ಪರಿಶುದ್ಧವಾದ ಚಿದಾಕಾಶ. ದೇವಿಯನ್ನು ಯೋಗಿಯ ಈ ಶರೀರದಲ್ಲಿ ಸಂತೋಷವಾಗಿ ನೆಲೆಸುವಂತೆ ಬೇಡಿಕೊಳ್ಳಲಾಗಿದೆ. ಅಲ್ಲಿ ಸಾಕಷ್ಟು ತಿನ್ನಲು ಅಮೃತದ ರೂಪದಲ್ಲಿ ಆಹಾರವಿರುವುದು ಮತ್ತು ದಹರದ ರೂಪದಲ್ಲಿ ವಾಸಿಸಲು ಜಾಗವಿರುವುದು.

ವಿವರಣೆ :
ತಾಯಿಯೇ ! ಈ ಶರೀರದಲ್ಲಿ ಅಮೃತಸಾಗರವು ನೂರಾರು ಅಲೆಗಳ ಮಾಲೆಗಳುಳ್ಳದ್ದಾಗಿರುತ್ತದೆ. ಇದರಿಂದ ತಂತ್ರಶಾಸ್ತ್ರಗಳಲ್ಲಿ ಸಹಸ್ರಾರ ವಿಲಸಿತವು ಅಮೃತ ಸಾಗರವೆಂದು ಹೇಳಿದ್ದನ್ನು ನೆನಪಿಸಿದಂತಾಗುತ್ತದೆ. ಇದೇ ಶರೀರದಲ್ಲಿ ಅತ್ಯಧಿಕವಾದ ತೇಜಸ್ಸಿಗೆ ಮೂಲವಾದ ವೇದಗಳಲ್ಲಿ ಪ್ರಸಿದ್ಧವಾದ ದಹರಾಕಾಶವು ಇರುತ್ತದೆ. ಇದರಿಂದ ಸೂರ್ಯಮಂಡಲವೆಂದು ಶಾಸ್ತ್ರಗಳಲ್ಲಿ ಹೇಳಲ್ಪಡುವ ಹೃದಯವು ಹೇಳಲ್ಪಟ್ಟಿತು. ಆಹಾರಕ್ಕೆ ಅಮೃತಸರೋವರದ ಅಮೃತವಿರುತ್ತದೆ. ವಾಸಿಸಲು ದಹರಾಕಾಶ ವಾಗುತ್ತದೆ. ಆದ್ದರಿಂದ ನೀನು ವಿಜಯಿಯಾಗು.

ಸಂಸ್ಕೃತದಲ್ಲಿ :
ಕುರು ತ್ವಮಿದಮೇಕಂ ನಿಜಾಲಯಶತೇಷು
ಸವಿತ್ರಿ ವಿಹರಾಸ್ಮಿನ್ ಯಥೇಷ್ಟಮಯಿ ದೇಹೇ ||24||

ತಾತ್ಪರ್ಯ :
ಓ ಮಾತೇ ! ನಿನಗೆ ನೂರಾರು, ಸಾವಿರಾರು ಮನೆಗಳು ವಾಸಿಸಲು ಇರುವುದು. ನನ್ನ ಶರೀರವನ್ನು ಆಯ್ದುಕೊಂಡು ಇಲ್ಲಿ ನಿನಗಿಷ್ಟವಾಗುವಂತೆ ನೆಲಸುವಂತೆ ಭಕ್ತಿಯಿಂದ ಪ್ರಾರ್ಥಿಸುವೆ.

ವಿವರಣೆ :
ತಾಯಿಯೇ ! ನಿನಗೆ ನೂರಾರು ವಾಸಸ್ಥಳಗಳಿವೆ. ಅವುಗಳಲ್ಲಿ ನನ್ನ ದೇಹವನ್ನೂ ಒಂದು ವಾಸಸ್ಥಳವನ್ನಾಗಿ ಮಾಡಿಕೊ. ಈ ದೇಹವೆಂಬ ಪುರದಲ್ಲಿ ನೀನು ಮನಬಂದಂತೆ ವಿಹರಿಸು.

ಸಂಸ್ಕೃತದಲ್ಲಿ :
ಕುಮಾರಲಲಿತಾನಾಂ ಕೃತಿರ್ಗಣಪತೀಯಾ
ಕರೋತು ಮುದಮೇಷಾ ಕಪರ್ದಿದಯಿತಾಯಾಃ ||25||    400

ತಾತ್ಪರ್ಯ :
ಗಣಪತಿ ಮುನಿಯು ಈ ಶ್ಲೋಕಗಳನ್ನು ಕುಮಾರಲಲಿತಾ ಛಂದಸ್ಸಿನಲ್ಲಿ ರಚಿಸಿ ಅದು ಕಪರ್ದಿಯ (ಈಶ್ವರನ) ಪತ್ನಿಯನ್ನು ಸಂತೋಷಪಡಿಸಲಿ.

ವಿವರಣೆ :
ಗಣಪತಿಗೆ ಸೇರಿದಕುಮಾರಲಾಲಿತಾಎಂಬ ಛಂದಸ್ಸಿನಲ್ಲಿ ರಚಿಸಲ್ಪಟ್ಟಿರುವ ಈ ಸ್ತೋತ್ರವು ಪರಮೇಶ್ವರನ ಪ್ರಿಯೆಗೆ ಪ್ರೀತಿಯನ್ನುಂಟು ಮಾಡಲಿ.

ಹದಿನಾರನೇ ಸ್ತಬಕವು ಸಂಪೂರ್ಣವಾಯಿತು

ನಾಲ್ಕನೇ ಶತಕ ಸಂಪೂರ್ಣವಾಯಿತು


Comments