ಉಮಾಸಹಸ್ರಂ ಪಂಚಮ ಶತಕ


ಉಮಾಸಹಸ್ರಂ ಪಂಚಮ ಶತಕ
ಪುಷ್ಪಗುಚ್ಛ (ಸ್ತಬಕ) - 17
ಛಂದಸ್ಸು - ಚಂಪಕಮಾಲಾವೃತ್ತ
ಶಕ್ತಿಯ ಆರಾಧನೆ ಹಾಗೂ ಪೂಜಿಸುವುದು

ಸಂಸ್ಕೃತದಲ್ಲಿ :
ಪಾಪವಿಧೂತೌ ನಿರ್ಮಲಗಂಗಾ ತಾಪನಿರಾಸೇ ಚಂದ್ರಮರೀಚಿಃ
ಭರ್ಗಪುರಂಧ್ರೀಹಾಸಕಲಾ ಮೇ ಭದ್ರಮಮಿಶ್ರಂ ಕಾsಪಿ ಕರೋತು ||1||

ತಾತ್ಪರ್ಯ :
ಭರ್ಗ- ಶಂಕರ ಭಗವಾನನ ಪತ್ನಿಯ ಪ್ರಕಾಶಿಸುವ ಮಂದಹಾಸವು ಎಲ್ಲ ಪಾವಿತ್ರ್ಯತೆಯಿಂದೊಡಗೂಡಿ ನನ್ನನ್ನು ಆಶೀರ್ವದಿಸಲಿ; ಈ ಮಂದಹಾಸವು ಪಾಪವನ್ನು ತೊಳೆಯುವಾಗ ಪವಿತ್ರವಾದ ಗಂಗೆಯಂತೆ ವರ್ತಿಸಿ, ಶಾಖವನ್ನು ಪರಿಹಾರಮಾಡುವಾಗ ಅದು ಚಂದ್ರನ ತಂಪಾದ ಕಿರಣಗಳಂತೆ ವರ್ತಿಸುವುದು.

ವಿವರಣೆ :
ನನ್ನ ಪಾಪಗಳನ್ನು ಹೋಗಲಾಡಿಸುವುದರಲ್ಲಿ ಪರಾಮಪಾವನೆಯಾದ ಗಂಗೆಯಂತಿರುವ, ನನ್ನ ದುಃಖಗಳ ಬೇಗೆಯನ್ನು ಪರಿಹರಿಸುವುದರಲ್ಲಿ ಬೆಳದಿಂಗಳಂತಿರುವ ಪರಶಿವನ ಮಡದಿಯ ಮಂದಹಾಸದ ಅಂಶವು ನನಗೆ ಶುದ್ಧವಾದ ಮಂಗಳವನ್ನುಂಟು ಮಾಡಲಿ.

ಸಂಸ್ಕೃತದಲ್ಲಿ :
ಶಿಷ್ಟಕುಲಾನಾಂ ಸಮ್ಮದಯಿತ್ರೀ ದುಷ್ಟಜನಾನಾಂ ಸಂಶಮಯಿತ್ರೀ
ಕಷ್ಟಮಪಾರಂ ಪಾದಜುಷೋ ಮೇ ವಿಷ್ಟಪರಾಜ್ಞೀ ಸಾ ವಿಧುನೋತು ||2||

ತಾತ್ಪರ್ಯ :
ವಿಶ್ವದ ಸಾಮ್ರಾಜ್ಞಿಯು ನನ್ನ ಕಷ್ಟಗಳನ್ನು ದೂರಮಾಡಲಿ; ಸಜ್ಜನರ ಹೃದಯವನ್ನು ಸಂತೋಷಪಡಿಸುವ ಮತ್ತು ದುಷ್ಟರನ್ನು ಶಿಕ್ಷಿಸುವ ದೇವಿಯ ಪಾದಗಳನ್ನು ಸೇವಿಸುವೆ.

ವಿವರಣೆ :
ದೇವಿಯು ಸಜ್ಜನರ ವಂಶಗಳನ್ನು ಅನಂದಪಡಿಸುತ್ತಾಳೆ. ದುರ್ಜನರನ್ನು ದಮನ ಮಾಡುತ್ತಾಳೆ. ಆ ರೀತಿಯವಳಾದ ಭುವನೇಶ್ವರಿಯಾದ ಆ ಪಾರ್ವತೀದೇವಿಯು ನನ್ನ ಅನಂತವಾದ ಕಷ್ಟಪರಂಪರೆಗಳನ್ನು ಪರಿಹರಿಸಲಿ.

ಸಂಸ್ಕೃತದಲ್ಲಿ :
ನೂತನಭಾಸ್ವದ್ಬಿಂಬನಿಭಾಂಘ್ರಿಂ ಶೀತಲರಶ್ಮಿದ್ವೇಷಿಮುಖಾಬ್ಜಾಂ
ಖ್ಯಾತವಿಭೂತಿಂ ಪುಷ್ಪಶರಾರೇಃ ಪೂತಚರಿತ್ರಾಂ ಯೋಷಿತಮೀಡೇ ||3||

ತಾತ್ಪರ್ಯ :
ಮನ್ಮಥನ ಶತ್ರುವಿನ ಪ್ರೀತಿಪಾತ್ರಳಾದ ದೇವಿಯನ್ನು ಹೊಗಳುವಾಗ ನಾನು ಹೆಮ್ಮೆಪಡುತ್ತೇನೆ; ಅವಳು ಪರಮ ಪವಿತ್ರವಾದ ಚಾರಿತ್ರ್ಯವುಳ್ಳವಳು, ಅವಳ ಸಂಪತ್ತು ಹಾಗೂ ಸಾಧನೆಗಳು ಸರ್ವರಿಗೂ ಚೆನ್ನಾಗಿ ತಿಳಿದಿರುವುದು, ಅವಳ ಪಾದದ್ವಯಗಳು ಉದಯಿಸುತ್ತಿರುವ ಸೂರ್ಯನ ಸೂರ್ಯಮಂಡಲದಂತೆ ಪ್ರಜ್ವಲಿಸುತ್ತಿರುವುದು ಮತ್ತು ಅವಳ ಸುಂದರವಾದ ವದನವು ತಾಜಾ ಕಮಲ ಪುಷ್ಪದಂತೆ ಮಿನುಗುವುದು.

ವಿವರಣೆ :
ಹೊಸದಾಗಿ ಉದಯಿಸಿರುವ ಸೂರ್ಯಬಿಂಬದಂತೆ ಇರುವ ಪಾದಕಮಲವುಳ್ಳ, ಚಂದ್ರನನ್ನು ಜಯಿಸಿದ ಮುಖಕಮಲವುಳ್ಳ, ಪ್ರಸಿದ್ಧವಾದ ಮಾಹಾತ್ಮ್ಯವುಳ್ಳ, ಪವಿತ್ರವಾದ ಕಥೆಯುಳ್ಳ, ಮನ್ಮಥನ ಶತೃವಾದ ಪರಶಿವನ ಮಡದಿಯಾದ ಪಾರ್ವತಿಗೆ ನಮಸ್ಕರಿಸುತ್ತೇನೆ.

ಸಂಸ್ಕೃತದಲ್ಲಿ :
ಉಜ್ಜ್ವಲತಾರೇ ವ್ಯೋಮ್ನಿ ಲಸಂತೀ ಸಾರಸಬಂಧೌ ಭಾತಿ ತಪಂತೀ
ಶೀತಲಭಾಸಾ ಚಿಂತನಕರ್ತ್ರೀ ಪಾತು ಕುಲಂ ಮೇ ವಿಷ್ಟಪಭರ್ತ್ರೀ ||4||

ತಾತ್ಪರ್ಯ :
ಈ ಪ್ರಪಂಚವನ್ನು ರಕ್ಷಿಸುವ ದೈವೀ ಮಾತೆಯು ನನ್ನ ಕುಟುಂಬದವರ ಮೇಲೆ ವಿಶೇಷವಾದ ಆಶೀರ್ವಾದದ ಮಳೆಯನ್ನು ತರಲಿ; ಈ ದೈವತ್ವವು ಹೊಳೆಯುವ ನಕ್ಷತ್ರಗಳಿಂದ ಪ್ರಕಾಶಮಾನವಾದ ವಿಶಾಲವಾದ ಆಕಾಶದಲ್ಲಿ ತೋರ್ಪಡಲಿ; ನೋಡುವ ಕಾರ್ಯವನ್ನು ಅಂದರೆ ಸೂರ್ಯನನ್ನು ಕಾರ್ಯಗತಗೊಳಿಸುವುದು ಹಾಗೂ ಚಂದ್ರನನ್ನು ಆಲೋಚನೆಯ ಸಹಜ ಶಕ್ತಿಯನ್ನಾಗಿ ಉಪಯೋಗಿಸುವುದು.

ವೇದ ಸಿದ್ಧಾಂತಗಳಾದ ಶ್ರುತಿಗಳ ಪ್ರಕಾರ ವಿಶ್ವದ ಚೇತನಗಳಲ್ಲಿ ಸೂರ್ಯನೇ ಕಣ್ಣುಗಳು; ಚಂದ್ರನೇ ಮನಸ್ಸು.

ವಿವರಣೆ :
ನಕ್ಷತ್ರಗಳು ಪ್ರಕಾಶಿಸುವ ಆಕಾಶದಲ್ಲಿ ಬೆಳಗುವ ಸೂರ್ಯನಲ್ಲಿ (“ಚಕ್ಷೋಸ್ಸೂರ್ಯೋ ಅಜಾಯತಎಂದು ವೇದವು ಹೇಳುತ್ತದೆ.) ಪ್ರಕಾಶಿಸುವ ಚಂದ್ರನ ಮೂಲಕ ಚಿಂತಿಸುವ (ಚಂದ್ರನು ಮನಸ್ಸಾಗಿರುವುದರಿಂದ) ಮೂರು ಲೋಕವನ್ನೂ ರಕ್ಷಿಸುವ ಆ ತಾಯಿಯು ನನ್ನ ವಂಶವನ್ನು ಕಾಪಾಡಲಿ.

ಸಂಸ್ಕೃತದಲ್ಲಿ :
ಪ್ರಾಣಮನೋವಾಗ್ವ್ಯಸ್ತವಿಭೂತಿರ್ಲೋಕವಿಧಾತುಃ ಕಾಚನ ಭೂತಿಃ
ಪುಷ್ಕರಪೃಥ್ವೀಪಾವಕರೂಪಾ ಶುಷ್ಕಮಘಂ ನಃ ಸಾ ವಿದಧಾತು ||5||

ತಾತ್ಪರ್ಯ :
ನನ್ನ ಎಲ್ಲಾ ಪಾಪಗಳನ್ನೂ ಸುಟ್ಟು ಬೂದಿ ಮಾಡುವಂತೆ ದೇವಿಯನ್ನು ಪ್ರಾರ್ಥಿಸುವೆ; ಸೃಷ್ಟಿಕರ್ತನ ಸೃಷ್ಟಿ ಶಕ್ತಿಯಾದ ವೈಭವಪೂರಿತ ಶಕ್ತಿಯೇ ದೇವಿ; ಅವಳ ಸಂಪತ್ತೆಲ್ಲಾ  ಮೂರು ಅವಶ್ಯಕವಾದ ಪ್ರಾಣ, ಮನಸ್ಸು ಹಾಗೂ ವಾಕ್ ಗಳಲ್ಲಿ ಹಂಚಿಹೋಗಿದೆ. ಅವಳ ದೃಶ್ಯ ರೂಪವು ಮೂರು ಆದಿಸ್ವರೂಪದ ಅಂಶಗಳಲ್ಲಿ - ನೀರು, ಭೂಮಿ ಮತ್ತು ಅಗ್ನಿಗಳಲ್ಲಿರುವುದು.
ಪ್ರಾಣ, ಮನಸ್ಸು ಮತ್ತು ತೇಜಸ್ಸುಗಳು ನೀರು, ಭೂಮಿ ಮತ್ತು ಬೆಂಕಿಗಳ ಸೂಕ್ಷ್ಮ ಸ್ವರೂಪಗಳು. ಆದ್ದರಿಂದ ಪ್ರಾಣ, ಮನಸ್ಸು ಹಾಗೂ ವಾಕ್ ಗಳಿಂದ ಉಂಟಾಗುವ ಪಾಪಗಳನ್ನು ದೇವಿ ಮಾತ್ರ ನಿವಾರಿಸಬಲ್ಲಳು.

ವಿವರಣೆ :
ದೇವಿಯು ಪ್ರಾಣ, ಮನಸ್ಸು ಮತ್ತು ವಾಕ್ಕುಗಳಲ್ಲಿ ವಿಭಜಿಸಲ್ಪಟ್ಟ ಐಶ್ವರ್ಯವುಳ್ಳವಳಾಗಿದ್ದಾಳೆ. ಅವಳೇ ಸ್ವತಃ ಪರಮೇಶ್ವರನ ಐಶ್ವರ್ಯವಾಗಿದ್ದಾಳೆ. ಅವಳು ಜಲ ಮತ್ತು ಭೂಮಿಗಳನ್ನು ಪವಿತ್ರಗೊಳಿಸುವ ಸ್ವರೂಪವುಳ್ಳವಳಾಗಿದ್ದಾಳೆ. ಆ ಪಾರ್ವತೀದೇವಿಯು ನನ್ನ ಪಾಪಸಮೂಹಗಳನ್ನು ನಿಃಸಾರವನ್ನಾಗಿ ಮಾಡಲಿ.

ಸಂಸ್ಕೃತದಲ್ಲಿ :
ಇಷ್ಟಫಲಾನಾಮಂಬ ಸಮೃದ್ಧೈ ಕಷ್ಟಫಲಾನಾಂ ತತ್ಕ್ಷಣಧೂತ್ಯೈ
ಚೇಷ್ಟಿತಲೇಶೋದ್ದೀಪಿತಶಕ್ತಿಂ ವಿಷ್ಟಪಭರ್ತ್ರಿ ತ್ವಾಮಹಮೀಡೇ ||6||

ತಾತ್ಪರ್ಯ :
ಓ ವಿಶ್ವದ ಸಾಮ್ರಾಜ್ಞಿಯೇ! ಮಾತೇ! ಕೂಡಲೇ ದುಃಖಗಳನ್ನು ನಿವಾರಿಸಿ, ಎಲ್ಲ ಕೋರಿಕೆಗಳನ್ನೂ ಈಡೇರಿಸುವಂತೆ ನಿನ್ನಲ್ಲಿ ಪ್ರಾರ್ಥಿಸುವೆ. ಕೇವಲ ಸಣ್ಣದಾದ ಸತ್ಕಾರ್ಯವನ್ನು ಮಾಡಿದರೂ ಸಾಕು ಅದು ನಿನ್ನ ಶಕ್ತಿಯಿಂದ ಮಾತ್ರ ಜರುಗುವುದು.

ವಿವರಣೆ :
ಜಗತ್ತಿನ ರಾಣಿಯಾದ ತಾಯಿಯೇ ! ನಾನು ಅಪೇಕ್ಷಿಸಿದ ಎಲ್ಲ ಸುಖ ಸಮೃದ್ಧಿಗೋಸ್ಕರ ಹಾಗೂ ನನ್ನ ದುಃಖಾನುಭವಗಳ ತಃಕ್ಷಣ ನಾಶಕ್ಕೋಸ್ಕರವಾಗಿಯೂ ನಾನು ನಿನ್ನನ್ನು ನಮಸ್ಕರಿಸುತ್ತೇನೆ. ನೀನು ಸ್ವಲ್ಪ ಚಲನೆಯಿಂದಲೇ ಉತ್ತೇಜಿತವಾದ ಶಕ್ತಿಯುಳ್ಳವಳಾಗಿರುವೆ.

ಸಂಸ್ಕೃತದಲ್ಲಿ :
ಭೂಮಿರುಹಾಗ್ರಸ್ಥಾಪಿತಭಂಡಾದ್ಯೋ ಮಧು ಪಾಯಂ ಪಾಯಮಜಸ್ರಂ
ವಿಸ್ಮೃತವಿಶ್ವೋ ನಂದತಿ ಮಾತಸ್ತತ್ರ ಕಿಲ ತ್ವಂ ಧಾಮ ದಧಾಸಿ ||7||

ತಾತ್ಪರ್ಯ :
ಓ ಮಾತೇ! ಪ್ರಪಂಚದ ಅರಿವಿಲ್ಲದೇ ಮತ್ತು ವರಿಸುವ ಪಾನೀಯವನ್ನು ಮರದ ಮೇಲಿಟ್ಟಿರುವ ನೀನು ವಾಸಿಸುವ ಸಹಸ್ರಾರವೆಂಬ ಮಹಾನ್ ಪಾತ್ರೆಯಿಂದ ಕುಡಿಯುತ್ತಾ ಅನಂದಿಸುತ್ತಿರುವೆ.
ಸಾಂಪ್ರದಾಯಿಕ ನಿರೂಪಣೆಯಲ್ಲಿ ಶರೀರವನ್ನು ಮರಕ್ಕೆ ಹೋಲಿಸಲಾಗುವುದು, ಸಹಸ್ರಾರವನ್ನು ಪಾತ್ರೆಯಾಗಿ, ಅದರಲ್ಲಿರುವ ಅಮೃತವನ್ನು ಮತ್ತುಬರಿಸುವ ಪಾನೀಯವನ್ನಾಗಿ, ಅದನ್ನು ಸೇವಿಸುವವರು ಪ್ರಪಂಚವನ್ನೇ ಮರೆಯುವಂತೆ ಮಾಡುತ್ತದೆ.

ವಿವರಣೆ :
ಶರೀರವೆಂಬುದೇ ಮರ, ಅದರ ತುದಿ ತಲೆ, ಅಲ್ಲಿರುವ ಪಾತ್ರೆ ಸಹಸ್ರಾರ, ಅಲ್ಲಿರುವ ಜೇನೇ ಸೋಮರಸ. ಅದರ ಪಾನದಿಂದ ಉಂಟಾಗುವುದು ಬ್ರಹ್ಮಾನಂದದ ಮದ. ಅದರಿಂದಾಗಿ ಅಂತಹವನು ಪ್ರಪಂಚವನ್ನು ಮರೆಯುತ್ತಾನೆ.
ಪ್ರಪಂಚದಲ್ಲಿ ತೆಂಗು ಹಾಗೂ ತಾಳೆಯ ಮರಗಳ ತುದಿಯಲ್ಲಿ ಮಣ್ಣಿನ ಮಡಕೆಯನ್ನಿಟ್ಟು ಜನರು ಮಧ್ಯವನ್ನು ತಯಾರಿಸುತ್ತಾರೆ. ಆ ಮಧ್ಯವನ್ನು ಸೇವಿಸಿ ಜನಗಳು ಜಗತ್ತನ್ನು ಮರೆಯುತ್ತಾರೆ. ಅದರಂತೆ -

ಸಂಸ್ಕೃತದಲ್ಲಿ :
ಕೋsಪಿ ಸಹಸ್ರೈರೇಷ ಮುಖಾನಾಂ ಶೇಷ ಇತೀಡ್ಯಃ ಪನ್ನಗರಾಜಃ
ಉದ್ಗಿರತೀದಂ ಯದ್ವದನೇಭ್ಯೋ ದೇವಿ ತನೌ ಮೇ ತದ್ವತ ಪಾಸಿ ||8||

ತಾತ್ಪರ್ಯ :
ಓ ದೇವಿ ! ಈ ಸರ್ಪರಾಜನಾದ ಸಹಸ್ರಾರು ಹೆಡೆಗಳುಳ್ಳ ಅದಿಶೇಷನೆಂದು ಹೊಗಳಿರುವವನು ಅಪಾರ ಶಕ್ತಿಯುಳ್ಳವನು; ತನ್ನ ಅನೇಕ ಬಾಯಿಗಳಿಂದ ವಿಷವನ್ನು ನನ್ನ ಶರೀರದೊಳಗೆ ಉಗುಳುವನು; ಈ ವಿಷದ ಪ್ರಭಾವದಿಂದ ನನ್ನನ್ನು ರಕ್ಷಿಸು.
ಇಲ್ಲಿನ ಪ್ರಸ್ತಾಪವು, ದೇವಾಸುರರು ಸಮುದ್ರ ಮಥನ ಮಾಡಿದ ಪೌರಾಣಿಕ ಘಟನೆಗೆ ಸಂಬಂಧಿಸಿದುದು. ಸಮುದ್ರ ಮಥನವು ಪ್ರಾರಂಭವಾಗುತ್ತಿದ್ದಂತೆ ಮೊದಲಿಗೆ ಭಯಂಕರವಾದ ವಿಷವು ಹೊರಬಂದಿತು. ಕಟ್ಟ ಕಡೆಯ ವಸ್ತುವೇ ಅಮೃತ. ಅದೇ ರೀತಿ, ಯೋಗಿಯ ಶರೀರವು ಶುದ್ಧೀಕರಣದ ಪ್ರಕ್ರಿಯೆಯಲ್ಲಿ ಕುಂಡಲಿನಿಯು ಜಾಗೃತವಾಗಿ ಸಹಸ್ರಾರದೆಡೆಗೆ ಹೋಗುವುದಕ್ಕೆ ಮೊದಲು ತೀವ್ರವಾದ ನೋವನ್ನನುಭವಿಸುವುದು. ಕವಿಯು ತನ್ನ ಸ್ವಂತ ಅನುಭವದಿಂದ ಮಾತನಾಡುತ್ತಿರುವರು.

ವಿವರಣೆ :
ಅಸದೃಶವಾದ ಸಾವಿರಾರು ಮುಖಗಳಿಂದ ಶೇಷನೆಂದು ಸ್ತೋತ್ರ ಮಾಡಲ್ಪಡುವ ಸರ್ಪರಾಜನು ನನ್ನ ಶರೀರದಲ್ಲಿ ಸುತ್ತಲೂ ತುಂಬಿರುತ್ತಾನೆ. ಅದರಿಂದ ನೀನು ನನ್ನನ್ನು ಕಾಪಾಡುತ್ತೀಯೆ. ಇದರ ಅಂಕಿತವೇನೆಂದರೆ, ದೇವಿಯ ಅನುಗ್ರಹದಿಂದ ಮಹಾಯೋಗವು ಪ್ರಾರಂಭವಾದರೆ ಯಾವುದೇ ಸಿದ್ಧಿಯುಂಟಾಗುವ ಮೊದಲು ಅಮೃತಮಥನ ಸಮಯದಲ್ಲಿ ಮೊದಲು ವಿಷವುಂಟಾದಂತೆ ಆ ಯೋಗಸಿದ್ಧನಲ್ಲೂ ಉಂಟಾಗುತ್ತದೆ. ವಿಷದಿಂದ ತಾಪ ಉಂಟಾಗುವಂತೆ ಆ ಕಾಲದಲ್ಲಿ ತಾಪವುಂಟಾಗುತ್ತದೆ. ತನ್ನ ಈ ಸ್ವಾನುಭವವನ್ನು ಯೋಗಿಯಾದ ಕವಿಯು ಇಲ್ಲಿ ಹೇಳಿರುವರು.

ಸಂಸ್ಕೃತದಲ್ಲಿ :
ಸಾಕಮಮೇಯೇ ದೇವಿ ಭವತ್ಯಾ ಪ್ರಾತುಮಹಂತಾ ಯಾವದುದಾಸ್ಯಾ
ತಾವದೀಯಂ ತಾಂ ಮೂರ್ಛಯತೀಶೇ ಪನ್ನಗರಾಜೋದ್ಗಾರಜಧಾರಾ ||9||

ತಾತ್ಪರ್ಯ :
ಓ ಸರಿಸಾಟಿಯಿಲ್ಲದವನೆ! ಮುಂದೆ ಅಮೃತದ ಆನಂದದಾಯಿಕ ಹರಿವನ್ನು ನಿನ್ನೊಂದಿಗೆ ಆನಂದಿಸಲು, ನನ್ನಲ್ಲಿನ ಅಹಂ ವಿಷದ ಬಗ್ಗೆ ಅನಾದರ ತೋರುವುದು ನಿಜವೇ ಆಗಿದೆ; ಆದರೆ ವಿಷದ ಪ್ರಭಾವವು ನನ್ನ ಅಹಂ ಅನ್ನು ಮತ್ತೇರಿಸುವಂತೆ ಮಾಡಿ ಅದನ್ನು ನಿಸ್ಸಹಾಯಕವನ್ನಾಗಿ ಮಾಡುವುದರ ಬಗ್ಗೆ ನನ್ನನ್ನು ನಿಸ್ಸಹಾಯಕನನ್ನಾಗಿ ಮಾಡಿದೆ.
ಕವಿಯು ತನ್ನ ಅನುಭವವಾದ ಕುಂಡಲಿನಿಯು ಸಹಸ್ರಾರದೆಡೆಗೆ ಜಾಗೃತವಾಗುವ ಸಂದರ್ಭದಲ್ಲಿ ಅನುಭವಿಸಿದ ನೋವನ್ನು ಮತ್ತೊಮ್ಮೆ ವ್ಯಕ್ತಪಡಿಸಿರುವರು.

ವಿವರಣೆ :
ಅಳತೆಗೆ ಮೀರಿದ ಮಹಿಮೆಯುಳ್ಳ ದೇವಿಯೇ! ನಿನ್ನೊಡನೆ ಹೊರಬಂದ ವಿಷವನ್ನು ತಿನ್ನಲು ಎಷ್ಟರಲ್ಲಿ ಅಹಂಕಾರವು ಉದಾಸೀನದಿಂದಿರುತ್ತದೋ ಅಷ್ಟರಲ್ಲಿ ಈ ಪನ್ನಗರಾಜನ ಉದ್ಗಾರದಿಂದುಂಟಾದ ವಿಷಧಾರೆಯು ಆ ಅಹಂತೆಯನ್ನು ಮೂರ್ಚೆಗೊಳಿಸುತ್ತದೆ. ನಿನ್ನ ಸಹಜ ಅಮೃತವಾಹಿನಿಯೊಡನೆ ಅಮೃತಕ್ಕೆ ಮುಂಚೆ ಉಂಟಾಗುವ ವಿಷವನ್ನು ಎಷ್ಟರಲ್ಲಿ ಅಹಂತೆಯು ಔದಾಸೀನ್ಯವನ್ನು ತೋರುತ್ತದೋ ಅಷ್ಟರಲ್ಲಿ ಈ ವಿಷಧಾರೆಯು ಆ ಅಹಂಕಾರವನ್ನು ಮೂರ್ಚಿತನನ್ನಾಗಿಸುತ್ತದೆ. ಈ ಸ್ಥಿತಿಯಲ್ಲಿ ಉಂಟಾಗುವ ಕ್ಲೇಶಗಳನ್ನು ಪುನಃ ಹೇಳಿದ್ದಾನೆ.

ಸಂಸ್ಕೃತದಲ್ಲಿ :
ಶಾಮ್ಯತಿಚಿಂತಾಜೀವಿತಮಸ್ಯಾಮಿಂದ್ರಿಯಸತ್ತಾsಪ್ಯಸ್ತಮುಪೈತಿ
ಯಾತಿ ನಿರುದ್ಧಾ ಹಾ ಗಲದೇಶೇ ಸಂಶಯಮೇಷಾ ಮಾತರಹಂತಾ ||10||

ತಾತ್ಪರ್ಯ :
ಓ ಮಾತೇ ! ಈ ವಿಷದ ಮಿತಿಮೀರಿದ ಪ್ರಭಾವದಿಂದಾಗಿ ಯೋಚನಾ ಶಕ್ತಿಯು ಸ್ಥಗಿತವಾಗಿದೆ. ಇಂದ್ರಿಯಗಳು ತಮ್ಮ ಜೀವಶಕ್ತಿಯನ್ನು ಕಳೆದುಕೊಂಡು ಅವುಗಳು ಕೆಲಸಮಾಡುವುದನ್ನು ನಿಲ್ಲಿಸಿಬಿಟ್ಟಿವೆ. ಗಂಟಲಿನ ಭಾಗದಲ್ಲಿ ಅಹಂ ಸಿಕ್ಕಿಹಾಕಿಕೊಳ್ಳುವುದು. ಆಶ್ಚರ್ಯದ ವಿಷಯವೆಂದರೆ ನಿನ್ನ ಶಕ್ತಿಯನ್ನು ಅಭಿವ್ಯಕ್ತಗೊಳಿಸಬೇಕಾದ ಯೋಗಿಯ ಶರೀರವು ಇಂತಹ ಹೀನಾಯವಾದ ಸಾವಿನ ಹತ್ತಿರದ ಸ್ಥಿತಿಯನ್ನು ಅನುಭವಿಸಬೇಕಾದುದು.

ವಿವರಣೆ :
ತಾಯಿಯೇ ! ಈ ವಿಷಧಾರೆಯಲ್ಲಿ ಚಿಂತಾಜೀವಿತವು ಶಾಂತವಾಗುತ್ತದೆ. ಇಂದ್ರಿಯಗಳು ತಮ್ಮ ತಮ್ಮ ಕೆಲಸಗಳನ್ನು ಮಾಡದೇ ಅಸ್ತಂಗತವಾಗುತ್ತವೆ. ಈ ಅಹಂತೆಯು ನನ್ನ ಕಂಠಪ್ರದೇಶದಲ್ಲಿ ಸ್ತಂಭೀತವಾದದ್ದಾಗಿ ಸಂಶಯಗ್ರಸ್ತವಾಗುತ್ತದೆ.
ಯೋಗದಶೆಯಲ್ಲಿರುವ ಶಕ್ತಿವಿಲಾಸವನ್ನು ಪಡೆಯುವ ನನಗೆ ಮೃತ್ಯುವೊದಗೀತೋ ಎಂದೆನಿಸುತ್ತದೆ.

ಸಂಸ್ಕೃತದಲ್ಲಿ :
ಗೌರಿ ಮಹೇಶಪ್ರಾಣಸಖೀ ಮಾಂ ಪಾಹಿ ವಿಪನ್ನಾಂ ಮಾತರಹಂತಾಂ
ಸಾ ಯದಿ ಜೀವೇದೀಶ್ವರಿ ತುಭ್ಯಂ ದಾಸಜನಸ್ತಾಮರ್ಪಯತೇsಯಂ ||11||

ತಾತ್ಪರ್ಯ :
ಓ ಗೌರೀ ! ಮಹೇಶನ ಪ್ರೀತಿಪಾತ್ರಳಾದ ಸ್ನೇಹಿತೆ, ಆಳವಾದ ಯಾತನೆಯಲ್ಲಿರುವ ನನ್ನನ್ನು ಉಳಿಸು. ಇಂತಹ ಯಾತನೆಯ ಸ್ಥಿತಿಯಲ್ಲಿ ನನ್ನ ಅಹಂ ಉಳಿದರೆ, ನಿನ್ನ ಸೇವಕನಾದ ನಾನು, ಖಂಡಿತವಾಗಿಯೂ ನನ್ನ ಅಹಂ ಅನ್ನು ನಿನಗೆ ಅರ್ಪಿಸುತ್ತೇನೆ.

ವಿವರಣೆ :
ಗೌರಿ ! ಮಹೇಶನ ಪ್ರಾಣಸಖಿಯೇ! ನಷ್ಟವಾಗುವ ಸ್ಮೃತಿಗೆ ಬಂದಿರುವ ಈ ಅಹಂತೆಯನ್ನು ಕಾಪಾಡು. ತಾಯಿಯೇ! ಒಂದು ವೇಳೆ ಅವಳು ಬದುಕಿದ್ದೇ ಆದರೆ ಈ ಕಿಂಕರನು ನಿನಗೆ ಅಹಂತೆಯನ್ನು ಅರ್ಪಿಸುತ್ತಾನೆ.
ಯೋಗಸಾಧನ ವಿಶೇಷಗಳಲ್ಲಿ ಈ ರೀತಿಯ ಅವಾಂತರ ಕ್ಲೇಶಗಳು ಸಂಭವಿಸಿದಲ್ಲಿ ಅಹಂತಾವಿಲಯವು ಅನಪೇಕ್ಷಿತವಾದುದಾಗಿರುತ್ತದೆ. ಏಕೆಂದರೆ ಪರದೇವತೆಗೆ ಸಮರ್ಪಿಸಲ್ಪಡಬೇಕಾದ ಅಹಂಭಾವವು ದುಃಖದಲ್ಲಿ ಮುಳುಗಿರುವುದರಿಂದ ತಿರುಗಿಯೂ ದುಃಖವು ಉಂಟಾಗಬಹುದು ಅಥವಾ ಹೆಚ್ಚಾಗಬಹುದು. ಅಂತಹ ಅವಸ್ಥೆಯು ಈ ಅಹಂತೆಗೆ ಉಂಟಾಗದೇ ಇರಲಿ ಎಂದು ಹೀಗೆ ಹೇಳಲಾಗಿದೆ. ಅಹಂತೆಯು ಅಶುದ್ಧವಾದರೆ ಅವಳು ಇಂದಿಗೂ ದೇವಿಗೆ ಅರ್ಪಿಸಲ್ಪಡಲು ಒಪ್ಪುವುದಿಲ್ಲ. ಅವಳು ಅರ್ಪಣಕ್ಕೂ ಯೋಗ್ಯಳಾಗುವುದಿಲ್ಲ.

ಸಂಸ್ಕೃತದಲ್ಲಿ :
ತ್ವತ್ಸೃತಿವೀರ್ಯಾಚ್ಛಾಂತಿಸಮೃದ್ಧಾಂ ಮಾತರಹಂತಾಂ ಶುದ್ಧತಮಾಂ ಮೇ
ಆತ್ಮಭುಜಿಷ್ಯಾಂ ಕರ್ತುಮಿಧಾನೀಂ ಶಾಂತಧಿಯಸ್ತೇ ಕೋsಸ್ತಿ ವಿಕಲ್ಪಃ ||12||

ತಾತ್ಪರ್ಯ :
ಮಾತೆ, ನಾನು ಶಾಂತವಾದ ಹಾಗೂ ಸಮಗ್ರವಾದ ಆತ್ಮ. ನಿನ್ನನ್ನು ಕುರಿತು ದೀರ್ಘಕಾಲ ಧ್ಯಾನಿಸಿರುವುದರಿಂದ, ಅದರ ಅಪಾರವಾದ ಪ್ರಭಾವದಿಂದಾಗಿ ನನ್ನ ಆತ್ಮವು ಸಾಕಷ್ಟು ಶಿಸ್ತಿನಿಂದ ಕೂಡಿದೆ. ಹಾಗಾಗಿ ಅದು ಯಾವುದೇ ಅಶುದ್ಧತೆಯ ಶೇಷವಿಲ್ಲದೆ ಪರಿಶುದ್ಧವಾಗಿದೆ. ಹೀಗಿರುವಾಗ, ಅದನ್ನು ಯಾಕೆ ನೀನು ನಿನ್ನ ಸೇವೆಗೆ ಉಪಯೋಗಿಸುತ್ತಿಲ್ಲ? ದಯವಿಟ್ಟು ನನ್ನ ಮೇಲೆ ಅಪನಂಬಿಕೆ ಬೇಡ.

ವಿವರಣೆ :
ತಾಯಿಯೇ ! ಈ ನನ್ನ ಅಹಂತೆಯನ್ನು ನಿನ್ನ ಧ್ಯಾನದಿಂದಾಗಿ ಅದರ ಬಲದಿಂದ ಶಾಂತಿಯಿಂದ ಮತ್ತು ಅಂತಃಕರಣ ಶುದ್ಧಿಯಿಂದಲೂ ಕೂಡಿದುದನ್ನಾಗಿ ಮಾಡು. ಅನಂತರ ಅವಳು ಶುದ್ಧಳಾಗುತ್ತಾಳೆ. ಆಗ ಅವಳನ್ನು ನಿನ್ನ ಪರಿಚಾರಿಕೆಯನ್ನಾಗಿ ಮಾಡಿಕೊ. ಇದರಲ್ಲಿ ಸಂಶಯ ಬೇಕಿಲ್ಲ.

ಸಂಸ್ಕೃತದಲ್ಲಿ :
ಮಂದರಧಾರೀ ನಾಮೃತಹೇತುರ್ವಾಸುಕೀರಜ್ಜುರ್ನಾಮೃತಹೇತುಃ
ಮಂಥನಹೇತುಸ್ಸಾsಮೃತಹೇತುಃ ಸರ್ವಬಲಾತ್ಮಾ ಶರ್ವಪುರಂಧ್ರೀ ||13||

ತಾತ್ಪರ್ಯ :
ಸಮುದ್ರ ಮಥನದಲ್ಲಿ ಮಂದಾರ ಪರ್ವತವನ್ನು ಕಡೆಯುವ ಕಂಭದಂತೆ ಉಪಯೋಗಿಸಿದ್ದು ಅಮೃತವನ್ನು ಕಡೆಯುವುದಕ್ಕಾಗಿ ಅಲ್ಲ ಅಥವಾ ವಾಸುಕಿಯನ್ನು ಪರ್ವತದ ಸುತ್ತಾ ಹಗ್ಗವನ್ನಾಗಿ ಉಪಯೋಗಿಸಿದ್ದೂ ಕಾರಣವಲ್ಲ. ನಿಜವಾಗಿ, ಅಮೃತವನ್ನು ಕಡೆದಿದ್ದ ಕಾರಣವೇನೆಂದರೆ ಸಮಸ್ತ ಜೀವಿಗಳ ಅಸ್ತಿತ್ವವಾದ ಭಗವಾನ್ ಶರ್ವನ ಮಡದಿ.

ವಿವರಣೆ :
ಅಮೃತವನ್ನು ದೇವತೆಗಳು ಪಡೆಯಲು ಕಾರಣವಾದುದು ಮಂದರ ಪರ್ವತವನ್ನು ಬೆನ್ನಿನಲ್ಲಿ ಧರಿಸಿದ ಕೂರ್ಮವಲ್ಲ. ಹಾಗೆಯೇ ಹಗ್ಗವಾಗಿದ್ದ ವಾಸುಕಿಯೂ ಅಲ್ಲ. ಎಲ್ಲರ ಬಲಕ್ಕೂ ಕಾರಣಳಾದ ಜೀವಭೂತಳಾದ ದುರ್ಗಾದೇವಿಯೇ ಕಾರಣವಾಗಿದ್ದಾಳೆ.

ಸಂಸ್ಕೃತದಲ್ಲಿ :
ಪ್ರಾಣಿಶರೀರಂ ಮಂದರಶೈಲೋ ಮೂಲಸರೋಜಂ ಕಚ್ಛಪರಾಜಃ
ಪೂರ್ಣಮನಂತಂ ಕ್ಷೀರಸಮುದ್ರಃ ಪೃಷ್ಠಗವೀಣಾ ವಾಸುಕಿರಜ್ಜುಃ ||14||

ತಾತ್ಪರ್ಯ:
ಜೀವಿಯ ಶರೀರವೇ ಮಂದಾರ ಪರ್ವತ. ಮೂಲಾಧಾರ (ಕಮಲ) ಚಕ್ರವೇ ಮಹಾನ್ ಆಮೆ; ಅದರ ಮೇಲೆ ಮಂದಾರ ಪರ್ವತವು ನಿಂತಿರುವುದು. ಅನಂತವಾದ ಹೃದಯದ ಭಾಗವನ್ನು ದಹರ ಎಂದು ಕರೆದು, ಅದೇ ಅಮೃತ ಸಾಗರ. ವೀಣಾನಾದದ ರೂಪದಲ್ಲಿರುವ ಬೆನ್ನುಮೂಳೆಯೇ ಹಗ್ಗವಾದ ಸರ್ಪ, ವಾಸುಕಿ.
ಈ ಶ್ಲೋಕದಲ್ಲಿ ಸುಪ್ರಸಿದ್ಧ ಕಥೆಯಾದ ಸಮುದ್ರಮಥನದಲ್ಲಿನ ಅಂತರಾಳದ ವಿಶೇಷತೆಯನ್ನು ವಿವರಿಸಲಾಗಿದೆ. ಸಂಪೂರ್ಣ ಕಥೆಯು ಕೇವಲ ಸಾಂಕೇತಿಕವಾದದ್ದು. ಕಡೆಯುವ ಪ್ರಕ್ರಿಯೆಯು ಆಧ್ಯಾತ್ಮಿಕ ಕ್ರಿಯೆಯನ್ನು ಸಂಕೇತಿಸುತ್ತದೆ.

ವಿವರಣೆ :
ಅಮೃತ ಮಥನದ ಗೂಢಾರ್ಥವನ್ನು ಎರಡು ಶ್ಲೋಕಗಳಲ್ಲಿ ವಿವರಿಸಲಾಗಿದೆ.
ಪ್ರಾಣಿಗಳ ಶರೀರವು ಮಂದರ ಪರ್ವತವು ಮೂಲಾಧಾರದ ಕಮಲವು. ಕೂರ್ಮರಾಜನು ಅನಂತವಾದ ದಹರಾಕಾಶವು (ಹೃದಯವು ಕ್ಷೀರ ಸಮುದ್ರವಾಗಿರುತ್ತದೆ.) ವೀಣೆಯ ರೂಪದಲ್ಲಿರುವ ಅಸ್ತಿದಂಡವು ವಾಸುಕಿಯಾಗಿರುತ್ತದೆ.

ಸಂಸ್ಕೃತದಲ್ಲಿ :
ದಕ್ಷಿಣನಾಡೀ ನಿರ್ಜರಸೇನಾ ವಾಮಗನಾಡೀ ದಾನವಸೇನಾ
ಶಕ್ತಿವಿಲಾಸೋ ಮಂಥನಕೃತ್ಯಂ ಶೀರ್ಷಜಧಾರಾ ಕಾsಪಿ ಸುಧೋಕ್ತಾ ||15||

ತಾತ್ಪರ್ಯ :
ಮೂಗಿನ ಬಲ ಭಾಗದ ನಾಳವನ್ನು ಪಿಂಗಳಾ ನಾಡಿಯೆಂದು ಕರೆಯುವರು. ಇದನ್ನು ತಂತ್ರಶಾಸ್ತ್ರದಲ್ಲಿ ದೇವತೆಗಳ ಸೈನ್ಯವೆಂದು; ಎಡಭಾಗದ ನಾಳವನ್ನು ಇಡಾ ನಾಡಿಯೆನ್ನಲಾಗಿ, ಅದು ಅಸುರರ ಸೈನ್ಯವೆನ್ನಲಾಗಿದೆ. ಶಕ್ತಿಯ ಕ್ರಿಯೆಯೇ ಕಡೆಯುವ ಪ್ರಕ್ರಿಯೆ; ಸಹಸ್ರಾರದಿಂದ ಹೊರಹೊಮ್ಮುವ ರಸವೇ ಮಥನದ ಪ್ರಕ್ರಿಯೆಯಿಂದ ಹೊರಬರುವ ಅಮೃತ.
ಪಿಂಗಳಾ ನಾಡಿಯು, ಮಧ್ಯಭಾಗದ ನಾಡಿಯಾದ ಸುಷುಮ್ನಾನಾಡಿಯ ಬಲಭಾಗದಲ್ಲಿರುವುದು ಹಾಗೂ ಇಡಾ ನಾಡಿಯು ಸುಷುಮ್ನಾದ ಎಡಭಾಗದಲ್ಲಿರುವುದು. ಉಸಿರಾಟದ ಪ್ರಕ್ರಿಯೆಯನ್ನು ಇಲ್ಲಿ ಸೂಚಿಸಲಾಗಿದೆ. ಯೋಗಕ್ಕೆ ಸಂಬಂಧಿಸಿದ ಉಸಿರಾಟ ಅಥವಾ ಪ್ರಾಣಾಯಾಮವು ಯೋಗಿಯ ಶಕ್ತಿಯನ್ನು ಅನೇಕ ರೀತಿಯಲ್ಲಿ ವೃದ್ಧಿಸುತ್ತದೆ. ಸಮುದ್ರಮಥನದ ಸಾಂಕೇತಿಕತೆಯನ್ನು ಯೋಗಕ್ರಿಯೆಯಾದ ಪ್ರಾಣಾಯಾಮಕ್ಕೆ ವಿಸ್ತರಿಸಲಾಗಿದೆ.

ವಿವರಣೆ :
ಸುಷುಮ್ನಾ ನಾಡಿಯ ಬಲಕ್ಕಿರುವ ಪಿಂಗಲಾ ನಾಡಿಯು ದೇವಸೇನೆಯಾಗಿದೆ, ಎಡಭಾಗದಲ್ಲಿರುವ ನಾಡಿಯು ದಾನವಸೇನೆಯಾಗಿಯೂ ಶಕ್ತಿಯ ಕ್ರೀಡಾವಿಲಾಸವು ಕಡೆಯುವ ಕೆಲಸವಾಗುತ್ತದೆ.

ಸಂಸ್ಕೃತದಲ್ಲಿ :
ಕಂಠನಿರುದ್ಧೇ ಭೂರಿವಿಷಾಗ್ನೌ ತೈಜಸಲಿಂಗಾವಾಸಿಹರೇಣ
ತ್ವದ್ಬಲಜಾತಂ ಸ್ವಾದ್ವಮೃತ್ತಂ ಕೋ ದೇವಿ ನಿಪೀಯ ಪ್ರೇತ ಇಹ ಸ್ಯಾತ್ ||16||

ತಾತ್ಪರ್ಯ :
ಅಪಾರವಾದ ವಿಷದ ಜ್ವಾಲೆಯು ಗಂಟಲನ್ನು ಹಿಸುಕುತ್ತಿದ್ದರೂ, ತೈಜಸಲಿಂಗದಲ್ಲಿ ವಾಸವಾಗಿರುವ ಹರನಿಂದ ಆ ಜ್ವಾಲೆಯು ಮತ್ತಷ್ಟು ಹರಡುವುದನ್ನು ನಿಲ್ಲಿಸಲಾಯಿತು; ಅನಂತರ ಅಮೃತವು ಮೇಲಿಂದ ಹೊರಬಂದಿತು; ಆ ಆಹ್ಲಾದಕರವಾದ ಅಮೃತವನ್ನು ಕುಡಿದ ಯಾವ ಯೋಗಿಯು ಹೊರಹೋದ ಆತ್ಮದ ಲೋಕವನ್ನು ತಲುಪಲು ಇಷ್ಟಪಡುವನು? (ಉತ್ತರ : ಯಾರೂ ಇಲ್ಲ).
ಕುಂಡಲಿನಿಯು ಜಾಗ್ರತೆಯಾದ ನಂತರ ತನ್ನ ಶರೀರವನ್ನು ತ್ಯಜಿಸುವ ಯೋಗಿಯ ವಿಷಯದಲ್ಲಿ ಸಾವು ಎಂಬ ಪದವನ್ನು ಉಪಯೋಗಿಸುವುದಿಲ್ಲ.
ಮೂಲಾಧಾರದಿಂದ ಅಜ್ಞಾದವರೆಗಿನ ಚಕ್ರಗಳನ್ನು, ಕ್ರಮವಾಗಿ, ಅಗ್ನಿ, ಸೂರ್ಯ ಮತ್ತು ಸೋಮವೆಂಬ ಮೂರು ವಿಭಾಗವನ್ನಾಗಿ ಪರಿಗಣಿಸಲಾಗಿದೆ. ಮೊದಲನೆಯ ಭಾಗವಾದ ಮೂಲ ಮತ್ತು ಸ್ವಾಧಿಷ್ಠಾನಗಳನ್ನು ಅಗ್ನಿಮಂಡಲವೆಂದು ವಿವರಿಸಲಾಗಿದೆ. ಇದನ್ನು ಮೂಲಾಧಾರದಲ್ಲಿರುವ ತೇಜೋಲಿಂಗವೆಂದೂ ಪರಿಗಣಿಸಲಾಗಿದೆ. ಮೂಲಾಧಾರದಲ್ಲಿರುವ ಹರನು ವಿಷದ ಜ್ವಾಲೆಯು ಮತ್ತಷ್ಟು ಹರಡುವುದನ್ನು ತಡೆಯುವನು ಎಂಬ ಅರ್ಥವನ್ನು ಕವಿಯು ಇಲ್ಲಿ ಸೂಚಿಸಿರುವರು. ಈ ವಿವರಣೆಯು ತೈಜಸಲಿಂಗವೆಂದು ಕರೆಯುವ ಅರುಣಾಚಲ ಪರ್ವತದಲ್ಲಿ ವಾಸಿಸುತ್ತಿದ್ದ ಕವಿಯೋಗಿಯ ಸ್ವಾನುಭವದ ಅಭಿವ್ಯಕ್ತಿತ್ತ್ವವಾಗಿದೆ.
ಹರ, ಶಂಕರ ಭಗವಾನನು ವಿಷವನ್ನು ಕುಡಿಯುವುದರ ಮೂಲಕ ಅದು ಮತ್ತಷ್ಟು ಹರಡುವುದನ್ನು ನಿಲ್ಲಿಸಿದನು ಹಾಗೂ ಅದನ್ನು ತನ್ನ ಕಂಠದಲ್ಲೇ ಹಿಡಿದು ಕಂಠವು ನೀಲಿ ಬಣ್ಣವಾಗುವಂತಾಯಿತು. ಪುರಾಣದ ಈ ಕಥೆಯು ನೀಲಕಂಠ (ಶಿವನಿಗೆ ಒಂದು ಗುಣವಾಚಕ) ಎಂಬ ಹೆಸರು ಬಂದದ್ದಕ್ಕೆ ವಿವರಣೆ ನೀಡುವುದು.

ವಿವರಣೆ :
ಅಮೃತಮಥನ ಕಾಲದಲ್ಲಿ ಮೊದಲು ಬಂದ ವಿಷವು ಶಿವನಿಂದ ಕುತ್ತಿಗೆಯಲ್ಲಿರಿಸಲ್ಪಟ್ಟಿತು. ನಿನ್ನಿಂದ ಆ ವಿಷಸಾರವು ತಡೆಯಲ್ಪಟ್ಟಿತು. ನಿನ್ನ ಬಲವು ಶಿವನಿಗೆ ಅಮೃತವಾಯಿತು. ಆ ಅಮೃತವನ್ನು ಕುಡಿದ ಯಾವನು ತಾನೇ ಪ್ರೇತಲೋಕವನ್ನು ಹೊಂದುತ್ತಾನೆ?

ಸಂಸ್ಕೃತದಲ್ಲಿ :
ಯೇನ ವಿಭುಸ್ತೇ ಮಾದ್ಯತಿ ಶರ್ವೋ ಯತ್ರ ಶಿವೇ ತ್ವಂ ಕ್ರೀಡಸಿ ಹೃಷ್ಟಾ
ಸಮ್ಮದಮೂಲಂ ತಂ ಮದಮಾದ್ಯೇ ವರ್ಧಯ ಪುತ್ರೇsನುಗ್ರಹಪಾತ್ರೇ ||17||

ತಾತ್ಪರ್ಯ :
ಓ ದೈವಾತ್ಮವೇ! ನಿನ್ನ ಪತಿಯೂ ಈ ಆಹ್ಲಾದಕರವಾದ ಅಮೃತದ ಹರಿವಲ್ಲಿ ಅನಂದಿಸುವನು, ಹಾಗೂ ನೀನು ನಿನ್ನ ಹೃದಯ ತುಂಬಿಬರುವವರೆಗೂ ಅದರಲ್ಲಿ ಕ್ರೀಡಿಸುವೆ. ನಿನ್ನಿಂದ ಮೊದಲು ಜನಿಸಿದ, ವಿಶೇಷವಾದ ಆಶೀರ್ವಾದಗಳನ್ನು ಪಡೆದ, ಗಣಪತಿಯಲ್ಲಿ ಆನಂದದ ಮೂಲಕಾರಣವಾದ ಮದವನ್ನು ಹೆಚ್ಚಿಸುವಂತೆ ನಾನು ನಿನ್ನನ್ನು ಕೇಳಿಕೊಳ್ಳುವೆ.

ವಿವರಣೆ :
ಪೂಜ್ಯೆಯಾದ ತಾಯಿಯೇ! ಯಾವ ಆನಂದದ ಮೂಲಕಾರಣವಾದ ಮದದಿಂದ ನಿನ್ನ ಸ್ವಾಮಿಯಾದ ಪರಶಿವನು ಸಂತೋಷಿಸುತ್ತಾನೋ, ಯಾವ ಆನಂದದ ಮೂಲ ಕಾರಣದಲ್ಲಿ ನೀನಿರುತ್ತೀಯೋ, ಆ ಆನಂದದ ಮೂಲಕಾರಣವಾದ ಮದವನ್ನು ನಿನ್ನ ಅನುಗ್ರಹಪಾತ್ರನಾದ ಜ್ಯೇಷ್ಠಪುತ್ರನಾದ ಗಣಪತಿಯಲ್ಲಿರಿಸು ಮತ್ತು ಹೆಚ್ಚಾಗುವಂತೆ ಮಾಡು.

ಸಂಸ್ಕೃತದಲ್ಲಿ :
ಯೋ ಮದಮೀದೃಜ್ಮಾರ್ಗಮುಪೇಕ್ಷ್ಯ ಸ್ವರ್ವಿಭುಪೂಜ್ಯೇ ಗರ್ವಸಮೇತಃ
ಆಹರತಿ ಶ್ರೀಬಾಹ್ಯಸಮೃದ್ಧ್ಯಾ ನ ಸುರಯಾ ವಾ ಸೋsಸುರ ಉಕ್ತಃ ||18||

ತಾತ್ಪರ್ಯ :
ಓ ಮಾತೇ ! ಸ್ವರ್ಗಾಧಿಪತಿಯಾದ ಇಂದ್ರನಿಂದ ಪೂಜಿಸಲ್ಪಡುವ, ಯಾರೇ ಆದರೂ ತಪ್ಪಾದ ಪ್ರತಿಷ್ಠೆಯಿಂದ ಈ ಉದಾತ್ತವಾದ ಹಾಗೂ ಸಂತೋಷವನ್ನು ನೀಡುವ ನ್ಯಾಯ ಮಾರ್ಗದ ಬಗ್ಗೆ ಅಸಡ್ಡೆಯನ್ನು ತೋರಿದರೆ, ಅವನು ಸಂಪತ್ತಿನ ಕೊಳಕು ಪ್ರದರ್ಶನ ಮತ್ತು ಮತ್ತೇರಿಸುವ ಪಾನೀಯಗಳ ಮಾರ್ಗವನ್ನು ಅನುಸರಿಸುವ ಅಸುರನಾಗುತ್ತಾನೆ.
ಸಾಕ್ಷಾತ್ಕಾರವನ್ನು ದೊರಕಿಸಿಕೊಡುವ ಸ್ವಾಭಾವಿಕವಾದ ಹಾಗೂ ಉದಾತ್ತ ಮಾರ್ಗವನ್ನು ಬಿಡುವುದರಿಂದ ಅವನು ಅಸುರರ ಇಂದ್ರಿಯಲೋಲುಪ್ತತೆಯ ಮಾರ್ಗದಲ್ಲಿ ನಡೆಯುವನು.

ವಿವರಣೆ :
ಸ್ವರ್ಗಾಧಿಪತಿಯಾದ ಇಂದ್ರನಿಂದ ಪೂಜಿಸಲ್ಪಟ್ಟ ತಾಯಿಯೇ ! ಯಾವ ಮನುಷ್ಯನು ಅಹಂಕಾರದಿಂದ ಹಿಂದಿನ ಶ್ಲೋಕದಲ್ಲಿ ಹೇಳಲ್ಪಟ್ಟಸಮ್ಮದಮೂಲವಾದಹರ್ಷವನ್ನು ತಿರಸ್ಕರಿಸಿ ಲಕ್ಷ್ಮಿಯ ಹೊರ ಸಮೃದ್ಧಿಯೆಂಬ ಸುರೆಯಿಂದ ಸಂತೋಷವನ್ನು ಪಡೆಯುತ್ತಾನೋ ಅವನು ಅಸುರನೆನ್ನಲ್ಪಡುತ್ತಾನೆ.

ಸಂಸ್ಕೃತದಲ್ಲಿ :
ತಾಮ್ಯತಿ ತೀವ್ರಾಫೇನನಿಷೇವೀ ಕ್ಲಾಮ್ಯತಿ ಸಂವಿತ್ಪತ್ರನಿಷೇವೀ
ಭ್ರಾಮ್ಯತಿ ಹಾಲಾಭಾಂಡನಿಷೇವೀ ಶಾಮ್ಯತಿ ಶೀರ್ಷದ್ರಾವನಿಷೇವೀ ||19||

ತಾತ್ಪರ್ಯ :
ಯಾರು ಅತಿಯಾಗಿ ಮತ್ತೇರಿಸುವ ಅಫಿಮೇನ (ಓಪಿಯಮ್) ಪಾನೀಯವನ್ನು ಕುಡಿಯುವರೋ ಅವರು ಖಂಡಿತವಾಗಿ ನರಳುವರು; ಯಾರು ಗಾಂಜಾಮರಿಜುವಾನದ ಎಲೆಯನ್ನು ತಿನ್ನುವರೋ ಅವರು ಮೊದಲಿಗೆ ಆನಂದವನ್ನು ಅನುಭವಿಸುತ್ತಿದ್ದೀನೆಂದು ಭಾವಿಸಿದರೂ, ಕಡೆಗೆ ನರಳುವುದು ಖಚಿತ. ಯಾರು ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾದಕ ಪಾನೀಯವನ್ನು ಸೇವಿಸಿ ತಮ್ಮನ್ನೇ ಮೋಸಗೊಳಿಸಿಕೊಳ್ಳುತ್ತಾರೋ ಅವರು ಕಡೆಗೆ ಭ್ರಮನಿರಸನೆಗೆ ಒಳಗಾಗುವರು. ಆದರೆ, ಯೋಗಿಯು ಸಹಸ್ರಾರ ಕಾರಂಜಿಯಿಂದ ಪಾನೀಯವನ್ನು ಕುಡಿದರೆ ಅವನಿಗೆ ಶಾಂತಿಯು ದೊರಕುವುದು.

ವಿವರಣೆ :
ಅಫಿಮೆನ ಎಂಬ ಮಾದಕದ್ರವ್ಯವನ್ನು ಸೇವಿಸುವವನು ಸಂಕಟಕ್ಕೆ ಒಳಗಾಗುತ್ತಾನೆ. ಗಾಂಜಾ ಎಲೆಯನ್ನು ಸೇವಿಸುವವನು ಉತ್ಸಾಹಹೀನನಾಗುತ್ತಾನೆ. ಮಧ್ಯಪೂರ್ಣಪಾತ್ರದಿಂದ ಮದ್ಯಪಾನ ಮಾಡುವವನು ತೂರಾಡುತ್ತಾನೆ. ಆದರೆ ಸಹಸ್ರಾರದಿಂದ ಸ್ರವಿಸುವ ರಸವನ್ನು ಪಾನಮಾಡುವವನು ಶಾಂತನಾಗಿರುತ್ತಾನೆ.

ಸಂಸ್ಕೃತದಲ್ಲಿ :
ಅಸ್ತು ವಿರೇಕೇ ಪಥ್ಯಮಫೇನಂ ಪತ್ರಮಜೀರ್ಣೇಷ್ವಸ್ತು ನಿಷೇವ್ಯಂ
ಅಸ್ತು ಹಿತಂ ತದ್ಯಕ್ಷ್ಮಣಿ ಮದ್ಯಂ ಸಂಸ್ಕೃತಿಹಾರೀ ದೇವಿ ರಸಸ್ತೇ ||20||

ತಾತ್ಪರ್ಯ :
ಅತಿಯಾದ ಅತಿಸಾರದಿಂದ ಬಳಲುತ್ತಿರುವವನಿಗೆ ಅಫಿಮೇನವನ್ನು (ಓಪಿಯಮ್) ಔಷಧವನ್ನಾಗಿ ನೀಡಲಾಗುವುದು; ಅಜೀರ್ಣದಿಂದ ಬಳಲುತ್ತಿದ್ದರೆ, ಅಂತಹವರಿಗೆ ಗಾಂಜಾವನ್ನು ನೀಡಲಾಗುವುದು; ಕ್ಷಯರೋಗದಿಂದ ನರಳುತ್ತಿರುವವರಿಗೆ ಅದನ್ನು ಹತೋಟಿಯಲ್ಲಿಡಲು ಶಕ್ತಿಯುತವಾದ ಮಧ್ಯವನ್ನು ನೀಡಲಾಗುವುದು. ಆದರೆ, ಸಹಸ್ರಾರದಿಂದ ಹೊರಹೊಮ್ಮುವ ಸೋಮರಸವು ಜನನ-ಮರಣಗಳ ಚಕ್ರದಿಂದ ನರಳುತ್ತಿರುವವರನ್ನು ಗುಣಪಡಿಸುವುದಲ್ಲದೇ, ಯೋಗಿಗೆ ಶಾಶ್ವತ ಮುಕ್ತಿಯನ್ನು ದೊರಕಿಸಿಕೊಡುತ್ತದೆ.

ವಿವರಣೆ :
ಅಫಿಮೆನವೆಂಬ ಮಾದಕದ್ರವ್ಯವು ಅತಿಸಾರವೇ ಮೊದಲಾದ ರೋಗಗಳಲ್ಲಿ ಔಷಧವಾಗುತ್ತದೆ. ಗಾಂಜಾ ಎಲೆಯು ಅಜೀರ್ಣಕ್ಕೆ ಔಷಧವಾಗುತ್ತದೆ. ಕ್ಷಯರೋಗಕ್ಕೆ ಮಧ್ಯವು ಔಷಧವಾಗುವುದು. ಆದರೆ ದೇವಿಯೇ ! ನೀನುಂಟುಮಾಡುವ ಸಹಸ್ರಾರರಸವು ಸಂಸಾರವೆಂಬ ರೋಗಕ್ಕೇ ಮದ್ದಾಗಿರುತ್ತದೆ.

ಸಂಸ್ಕೃತದಲ್ಲಿ :
ನೈವ ಮಹಾಂತಸ್ಸತ್ತ್ವಸಮೃದ್ಧಾಃ ಸರ್ವಮದೇಷ್ವಪ್ಯಂಬ ಚಲಂತು
ಅಲ್ಪಜನಾನಾಂ ಮಾದಕವಸ್ತುಪ್ರಾಶನಮೀಶೇ ನಾಶನಮುಕ್ತಂ ||21||

ತಾತ್ಪರ್ಯ :
ತುಚ್ಛವಾದ ಮತ್ತುಬರಿಸುವ ಪಾನೀಯಗಳು ಮತ್ತು ಪುಡಿಗಳನ್ನೂ ಸೇರಿಸಿ ಎಲ್ಲ ವಸ್ತುಗಳಲ್ಲೂ ಕೆಲವು ಖಾಯಿಲೆಗಳನ್ನು ಗುಣಪಡಿಸುವ ಔಷಧೀಯ ಗುಣಗಳಿದ್ದರೂ, ಅವುಗಳನ್ನು ಎಲ್ಲರೂ ಸೇವಿಸುವುದು ಸರ್ವಥಾ ಸರಿಯಲ್ಲ. ಎಲ್ಲರೂ ಒಪ್ಪಬಹುದಾದ ರಾಜಮಾರ್ಗವೆಂದರೆ ದೇವಿಯ ಪೂಜೆಯನ್ನು ಮಾಡುವುದು ಮಾತ್ರ. ಅದನ್ನು ಅನುಸರಿಸುವುದರಿಂದ ಆ ಮಾರ್ಗವು ಮುಕ್ತಿಗೆ ಸೋಪಾನ ಹಾಗೂ ಮಾನವನ ಅಸ್ತಿತ್ವದ ಮೂಲ ಗುರಿ.
ಕವಿ ಗಣಪತಿ ಮುನಿಗಳು ಆಯುರ್ವೇದ ವಿದ್ಯೆಯನ್ನು ಅಭ್ಯಸಿಸುತ್ತಿದ್ದರು. ಹೀಗಾಗಿ ತಮ್ಮ ಸ್ತೋತ್ರದಲ್ಲಿ ಮೇಲೆ ವಿವರಿಸಿದ ವಿಷಯಗಳು ಅರ್ಥಪೂರ್ಣವಾದದ್ದು.

ವಿವರಣೆ :
ಸತ್ತ್ವಗುಣಸಮೃದ್ಧಿಯಿಂದ ಕೂಡಿದ ಮಹಾತ್ಮರು ಮಾದಕವಸ್ತುಗಳನ್ನು ಸೇವಿಸದಿರಲಿ. ಆದರೆ ಅಲ್ಪಜನರು ಆ ಮಾದಕವಸ್ತುಗಳನ್ನು ಸೇವಿಸಿ ಆತ್ಮನಾಶವನ್ನು ಮಾಡಿಕೊಳ್ಳುತ್ತಾರೆಂದು ಹಿರಿಯರು ಹೇಳುತ್ತಾರೆ.

ಸಂಸ್ಕೃತದಲ್ಲಿ :
ಕೇsಪಿ ಯಜಂತೇ ಯನ್ಮಧುಮಾಂಸೈಸ್ತ್ವಾಂ
ತ್ರಿಪುರಾರೇರ್ಜೀವಿತನಾಥೇ
ಅತ್ರ ನ ಯಾಗೋ ದೂಷಣಭಾಗೀ ದ್ರವ್ಯಸಸಂಗೋ ದುಷ್ಯತಿ ಯಷ್ಟಾ ||22||

ತಾತ್ಪರ್ಯ :
ಓ ತ್ರಿಪುರ ನಾಶಕನ ಪ್ರೀತಿಯ ಪತ್ನಿಯೆ ! ಕೆಲವರು ಪಂಚಮ ಅಥವಾ ಐದು ಮಕರಗಳನ್ನಾಗಿ ವಿಭಾಗಿಸಿರುವ ವಸ್ತುಗಳನ್ನು ಉಪಯೋಗಿಸಿ ಪೂಜಿಸುತ್ತಾರೆ. ಈ ಐದು ಮಕರಗಳೆಂದರೆ - ಮೈಥುನ ಮಾನಿನಿ, ಮದ್ಯ, ಮಾಂಸ, ಮುದ್ರ, ಮತ್ಸ್ಯ. ಈ ವಿಧದ ಪೂಜೆಯ ಪ್ರಕ್ರಿಯೆಯು ತಪ್ಪಿನಿಂದ ಕೂಡಿದ್ದೇನಲ್ಲ. ಆದರೆ ಕೆಟ್ಟ ಸಹವಾಸದಿಂದಾಗಿ, ಪೂಜಿಸುವವನು ಕಲಬೆರಕೆಯಾಗುವನು.

ವಿವರಣೆ :
ತ್ರಿಪುರಾರಿಯಾದ ಶಿವನ ಪ್ರಾಣಪ್ರಿಯೆಯಾದವಳೇ! ಅನೇಕ ತಾಂತ್ರಿಕರು, ಮಕಾರಪಂಚಕಗಳಲ್ಲಿ ಸೇರಿರುವ ಮದ್ಯ ಮತ್ತು ಮಾಂಸಗಳಿಂದ ನಿನ್ನನ್ನು ಕುರಿತು ಯಾಗ ಮಾಡುತ್ತಾರೆ. ಆದರೆ ಅದರಿಂದ ಆ ಯಾಗವು ದೋಷಕ್ಕೆ ಒಳಗಾಗುವುದಿಲ್ಲ. ಆ ಮದ್ಯಮಾಂಸಗಳನ್ನು ಉಪಯೋಗಿಸಿ ಯಾಗಮಾಡುವವನು ದೋಷವುಳ್ಳವನಾಗುತ್ತಾನೆ.

ಸಂಸ್ಕೃತದಲ್ಲಿ :
ದಕ್ಷಿಣಮಾರ್ಗೇ ಸಿದ್ಧ್ಯತಿ ಭಕ್ತಃ ಸವ್ಯಸರಣ್ಯಾಂ ಸಿದ್ಧ್ಯತಿ ವೀರಃ
ನೇಶ್ವರಿ ಸವ್ಯೇ ನಾಪ್ಯಪಸವ್ಯೇ ಸಿದ್ಧ್ಯತಿ ದಿವ್ಯೇ ತ್ವದ್ಧ್ವನಿ ಮೌನೀ ||23||

ತಾತ್ಪರ್ಯ :
ಓ ಈಶ್ವರಿ ! ಭಕ್ತನು ಬಲ ಮಾರ್ಗವಾದ ಸಮಯಾಚಾರವನ್ನು ಅನುಸರಿಸಿದಲ್ಲಿ ತನ್ನ ಕಟ್ಟ ಕಡೆಯ ಗುರಿಯನ್ನು ತಲುಪುವನು; ಅದೇ ಎಡಮಾರ್ಗವಾದ ಅಂದರೆ ಕುಲಾಚಾರಮಾರ್ಗವನ್ನು ಅನುಸರಿಸಿದಲ್ಲಿ ಯೋಗಿಯು ವೀರನಾಗುವನು. ಆದರೆ ಮುನಿಯು ಈ ಎರಡೂ ಮಾರ್ಗಗಳ ಮೂಲಕ ತನ್ನ ಗುರಿಯನ್ನು ತಲುಪುವುದಿಲ್ಲ. ಅವನು ತನ್ನ ಕಟ್ಟ ಕಡೆಯ ಗುರಿಯನ್ನು ಮೂರನೇ ಮಾರ್ಗವಾದ ದಿವ್ಯಮಾರ್ಗವನ್ನು ಅನುಸರಿಸುವುದರ ಮೂಲಕ ತಲುಪುವನು.
ತಾಂತ್ರಿಕನು ಮೂರು ಮಾರ್ಗಗಳನ್ನು ಅನುಸರಿಸುವನು. ಅವುಗಳೆಂದರೆ, ಪಶುಭಾವ, ವೀರಭಾವ, ಮತ್ತು ದಿವ್ಯಭಾವ. ಶ್ಲೋಕದ ಮೊದಲೆರಡು ಸಾಲುಗಳು ಮೊದಲೆರಡು ಮಾರ್ಗಗಳನ್ನು ತಿಳಿಸುತ್ತದೆ; ಕಡೆಯ ಎರಡು ಸಾಲುಗಳು ಮೂರನೆಯದನ್ನು ಸೂಚಿಸುತ್ತದೆ.

ವಿವರಣೆ :
ಸಮಯಾಚಾರ ಮಾರ್ಗದಲ್ಲಿ ನಡೆಯುವವನು ಭಕ್ತನಾಗುತ್ತಾನೆ. ವಾಮಾಚಾರ ಮಾರ್ಗದಲ್ಲಿ (ಕುಲಾಚಾರ) ನಡೆಯುವವನು, ಅಂದರೆ ಮದ್ಯ ಮಾಂಸಗಳಿಂದ ದೇವಿಯನ್ನು ಪೂಜೆಮಾಡುವವನು ವೀರನಾಗುತ್ತಾನೆ. ಮೌನಿಯಾದವನು ಸವ್ಯಮಾರ್ಗದಲ್ಲೂ ಸಿದ್ಧಿಪಡೆಯುವುದಿಲ್ಲ. ಆದರೆ ದಿವ್ಯಮಾರ್ಗದಲ್ಲಿ ಸಿದ್ಧಿಪಡೆಯುತ್ತಾನೆ.

ಸಂಸ್ಕೃತದಲ್ಲಿ :
ನಾರ್ಚನಭಾರೋ ನಾಪಿ ಜಪೋsಸ್ಯಾಂ ದಿವ್ಯಸರಣ್ಯಾಂ ಭವ್ಯತಮಾಯಾಂ
ಕೇವಲಮಂಬಾಪಾದಸರೋಜಂ ನಿಶ್ಚಲಮತ್ಯಾ ಮೃಗ್ಯಮಜಸ್ರಂ ||24||

ತಾತ್ಪರ್ಯ :
ಮೂರನೇ ಮಾರ್ಗವಾದ ದಿವ್ಯಪಥವು ಮಹತ್ತರವಾದದ್ದೇ ಸರಿ! ಏಕೆಂದರೆ ಈ ಮಾರ್ಗದಲ್ಲಿ ಪೂಜೆಗಾಗಿ ವಿವಿಧ ಸಾಮಗ್ರಿಗಳನ್ನು ಕೂಡಿಸುವುದು ಕಷ್ಟದ ಕೆಲಸವೇನಲ್ಲ ಹಾಗೂ ಮಂತ್ರಗಳನ್ನು ಪುನರಾವರ್ತನೆ ಮಾಡುವ ಕಷ್ಟದ ಕೆಲಸವಿಲ್ಲ. ಇದು ಬಹಳ ಸುಲಭವಾದದ್ದು. ಏಕೈಕ ಗುರಿಯಾದ ಮೋಕ್ಷವನ್ನು ಪಡೆಯುವ ಉದ್ದೇಶದಿಂದ ಕೇವಲ ದೇವಿಯ ಪಾದಕಮಲಗಳಲ್ಲಿ ಧ್ಯಾನಮಾಡಿ.  ಈ ದಿವ್ಯಮಾರ್ಗವು ಯಾವುದೇ ಬಾಹ್ಯ ವಸ್ತುಗಳನ್ನು ಬಯಸುವುದಿಲ್ಲ.

ವಿವರಣೆ :
ಅತ್ಯಾನಂದಕರವಾದ ದಿವ್ಯಮಾರ್ಗದಲ್ಲಿ ಪೂಜಾಸಾಮಗ್ರಿಗಳನ್ನು ಸಂಪಾದಿಸಬೇಕೆಂಬ ಚಿಂತೆಯಿಲ್ಲ. ಮಂತ್ರಜಪಗಳನ್ನು ವಿಧಿಗನುಸಾರವಾಗಿ ಮಾಡಬೇಕಾಗಿಯೂ ಇರುವುದಿಲ್ಲ. ದೇವಿಯ ಪಾದಾರವಿಂದಗಳನ್ನು ಏಕಾಗ್ರತೆಯಿಂದ ನಿರಂತರವಾಗಿ ಹುಡುಕುತ್ತಿರಬೇಕು.

ಸಂಸ್ಕೃತದಲ್ಲಿ :
ಕಾಚಿದಮೂಲ್ಯಾ ಚಂಪಕಮಾಲಾ ವೃತ್ತನಿಬದ್ಧಾ ಮಂಜುಲಮಾಲಾ
ಅಸ್ತು ಗಣೇಶಸ್ಯೇಶ್ವರಕಾಂತಾ ಕಂಠವಿಲೋಲಾ ಚಂಪಕಮಾಲಾ ||25|| 425

ತಾತ್ಪರ್ಯ :
ಕವಿ ಗಣಪತಿಯು ರಚಿಸಿದ ಈ ಅಮೂಲ್ಯ ಹಾಗೂ ಮಧುರ ನಾದವನ್ನುಂಟುಮಾಡುವ ಪದಗಳಿಂದ ಚಂಪಕಮಾಲಾ ಛಂದಸ್ಸಿನಲ್ಲಿ ರಚಿಸಿರುವ ಅನರ್ಘ್ಯ ರತ್ನಹಾರವು ದೇವಿಯ ಕಂಠವನ್ನು ಸುಂದರವಾದ ಚಂಪಕ ಪುಷ್ಪಗಳಿಂದ ಕೂಡಿದ ಮಾಲೆಯಂತೆ ಕಂಗೊಳಿಸುತ್ತಿದೆ.

ವಿವರಣೆ :
ಗಣೇಶನೆಂಬ ಕವಿಯಿಂದ ಚಂಪಕಮಾಲಾ ಎಂಬ ವೃತ್ತದಲ್ಲಿ ನಿಬದ್ಧವಾದ ಈ ಸಂಪಿಗೆಯ ಹಾರವು ಈಶ್ವರನ ಕಾಂತೆಯಾದ ದೇವಿಯ ಕೊರಳಲ್ಲಿ ಓಡಾಡಲಿ. ಅಂದರೆ ಏಕಾಂತ ಭಕ್ತನಾದ ಪುತ್ರನಾದ ನನ್ನಿಂದ ರಚಿಸಲ್ಪಟ್ಟ ಈ ಸ್ತುತಿಯನ್ನು ಕೇಳಿ ದೇವಿಯು ಕೂಡ ನನ್ನ ಮಗನಿಂದ ಅಮೂಲ್ಯ ರಮಣೀಯವಾಗಿ ರಚಿಸಲ್ಪಟ್ಟಿದೆಯೆಂದು ಆಕೆಯೂ ಸೂಕ್ಷ್ಮವಾಗಿ ಹೇಳಲಿ.

ಹದಿನೇಳನೇ ಸ್ತಬಕವು ಮುಗಿಯಿತು

ಪುಷ್ಪಗುಚ್ಛ (ಸ್ತಬಕ) - 18
ಛಂದಸ್ಸು - ಪ್ರಹರ್ಷಿಣೀವೃತ್ತ
ರೂಪವಿಶೇಷ ಮತ್ತು ಕುಂಡಲಿನೀಸಮುಲ್ಲಾಸ ವರ್ಣನೆ

ಹದಿನೆಂಟನೇ ಸ್ತಬಕದಲ್ಲಿ ದೇವಿಯ ಅಸಂಖ್ಯಾತ ರೂಪಗಳ ಹಾಗೂ ಅವಳ ಸೂಕ್ಷ್ಮ ಮತ್ತು ದೊಡ್ಡ ರೀತಿಯಲ್ಲಿನ ಅಸ್ತಿತ್ವವನ್ನು ವರ್ಣಿಸಲಾಗಿದೆ.

ಸಂಸ್ಕೃತದಲ್ಲಿ :
ಧುನ್ವಂತ್ಯಸ್ತಿಮಿರತತಿಂ ಹರಿತ್ತಟೀನಾಂ
ಧಿನ್ವಂತ್ಯಃ ಪುರಮಥನಸ್ಯ ಲೋಚನಾನಿ
ಸ್ಕಂದಾಂಬಾಹಸಿತರುಚೋ ಹರಂತು ಮೋಹಂ
ಸಾಂದ್ರಂ ಮೇ ಹೃದಯಗತಂ ಪ್ರಸಹ್ಯ ಸದ್ಯಃ ||1||

ತಾತ್ಪರ್ಯ :
ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ವ್ಯಾಮೋಹವನ್ನು ಸ್ಕಂದನ ಮಾತೆಯ ಮಂದಹಾಸದ ಹೊಳೆಯುವ ಕಿರಣಗಳು ಕಿತ್ತೊಗೆಯಲಿ. ಇದೇ ಕಿರಣಗಳು ಸುತ್ತಲೂ ಹರಡಿರುವ ಕತ್ತಲನ್ನು ಅಡಗಿಸಲಿ, ಹಾಗೂ ತ್ರಿಪುರಾಂತಕ ಮತ್ತು ಮುಕ್ಕಣ್ಣನನ್ನು ಸಂತೋಷಪಡಿಸಲಿ.

ವಿವರಣೆ :
ದಿಗಂತದಲ್ಲಿ ಹರಡಿರುವ ಕತ್ತಲನ್ನು ಹೋಗಲಾಡಿಸುವ, ಪರಶಿವನ ಮೂರೂ ಕಣ್ಣುಗಳಿಗೂ ಸಂತೋಷವನ್ನುಂಟುಮಾಡುವ, ಸುಬ್ರಹ್ಮಣ್ಯನ ತಾಯಿಯ ಮಂದಹಾಸಗಳು ನನ್ನ ಹೃದಯದಲ್ಲಿರುವ ನಿಬಿಡವಾದ ಅಜ್ಞಾನವನ್ನು ಹೋಗಲಾಡಿಸಿಲಿ.

ಸಂಸ್ಕೃತದಲ್ಲಿ :
ತನ್ವಾನಾ ವಿನತಹಿತಂ ವಿರೋಧಿವರ್ಗಂ
ಧುನ್ವಾನಾ ಬುಧಜನಮೋದಮಾದಧಾನಾ
ಸಾಮ್ರಾಜ್ಞೀ ತ್ರಿದಿವಧರಾರಸಾತಲಾನಾಂ
ರುದ್ರಾಣೀ ಭಣತು ಶಿವಾನೀ ಮತ್ಕುಲಸ್ಯ ||2||

ತಾತ್ಪರ್ಯ :
ಸ್ವರ್ಗ, ಮರ್ತ್ಯ ಹಾಗೂ ಪಾತಾಳಗಳ ಸಾಮ್ರಾಜ್ಞಿ, ರುದ್ರಾಣಿಯು ನನ್ನ ಸಮಸ್ತ ಕುಟುಂಬವನ್ನು ಅತ್ಯಂತ ಪವಿತ್ರವಾದ ಪದಗಳಿಂದ ಆಶೀರ್ವದಿಸಲಿ. ಏಕೆಂದರೆ ಯಾರು ನಮ್ರತೆಯಿಂದ ಇರುತ್ತಾರೋ ಅವರನ್ನು ಉತ್ತಮರನ್ನಾಗಿ ಮಾಡುವುದು ಕೇವಲ ಅವಳು ಮಾತ್ರ. ಯಾರು ಅವಳನ್ನು ಪ್ರತಿಭಟಿಸುವರೋ ಅವರನ್ನು ನಡುಗುವಂತೆ ಮಾಡುವಳು. ಜ್ಞಾನಿಗಳು ಹಾಗೂ ಸಜ್ಜನರಿಗೆ ಹರ್ಷವನ್ನುಂಟು ಮಾಡುವಳು.

ವಿವರಣೆ :
ಭಕ್ತರಾದವರಿಗೆ ಮಂಗಳವನ್ನುಂಟುಮಾಡುತ್ತಾ, ವಿರೋಧಿವರ್ಗಗಳನ್ನು ನಾಶಮಾಡುತ್ತಾ, ಜ್ಞಾನಿಗಳ ಸಮೂಹಕ್ಕೆ ಸ್ವಾಮಿನಿಯಾದ ಪಾರ್ವತೀದೇವಿಯು ನನ್ನ ವಂಶಕ್ಕೆ ಮಂಗಳವನ್ನುಂಟುಮಾಡಲಿ.

ಸಂಸ್ಕೃತದಲ್ಲಿ :
ಯೋsಮ್ಬ ತ್ವಾಂ ಹೃದಿ ವಿದಧತ್ತಟಿತ್ಪ್ರಕಾಶಾಂ
ಪೀಯೂಷದ್ಯುತಿಮದಹೃನ್ಮುಖಾರವಿಂದಾಂ
ಅನ್ಯತ್ತು ಸ್ಮೃತಿಪಥತೋ ಧುನೋತಿ ಸರ್ವಂ
ಕಾಮಾರೇಃ ಸುದತಿ ನತಸ್ಯ ಭುವ್ಯಸಾಧ್ಯಂ ||3||

ತಾತ್ಪರ್ಯ :
ಓ ಮಾತೇ ! ಕಾಮಾರಿಯ ಪತ್ನಿಯೆ ! ಯಾರು ಮಿಂಚಿನ ಗೆರೆಯನ್ನು ಹೋಲುವ ನಿನ್ನ ಪದ್ಮದಂತಿರುವ ಮುಖದ ಹೊಳಪನ್ನು ತಮ್ಮ ಮನಸ್ಸಿನಲ್ಲೇ ಧ್ಯಾನಿಸುವರೋ, ಅವರು ಸ್ಥಿರವಾದ ಹಾಗೂ ನುರಿತ ಮನಸ್ಸಿನಿಂದ ಬೇಡವಾದ ಆಲೋಚನೆಗಳನ್ನು ದೂರಮಾಡುವರು. ಅಂತಹ ಯೋಗಿಯು ಪ್ರಪಂಚದಲ್ಲಿ ಸಾಧಿಸಲಾಗದ್ದು ಏನಿದೆ? (ಎಲ್ಲವೂ ಸಾಧ್ಯವಾದದ್ದು).

ವಿವರಣೆ :
ತಾಯಿಯೇ ! ಮಿಂಚಿನಂತೆ ಪ್ರಕಾಶವುಳ್ಳ ಚಂದ್ರನ ಅಹಂಕಾರವನ್ನು ಹೋಗಲಾಡಿಸುವ ಕಮಲದಂತೆ ಮುಖವುಳ್ಳ ನಿನ್ನನ್ನು ಸರ್ವದಾ ಮನಸ್ಸಿನಲ್ಲಿ ಯೋಚಿಸುತ್ತಾ, ಉಳಿದುದೆಲ್ಲವನ್ನೂ ಮನಸ್ಸಿಗೆ ತೆಗೆದುಕೊಳ್ಳದಿರುವವನಿಗೆ, ಕಾಮಾರಿಯಾದ ಶಿವನ ಸುಂದರಿಯಾದ ದೇವಿಯೇ ! ಈ ಪ್ರಪಂಚದಲ್ಲಿ ಅಸಾಧ್ಯವಾದುದು ಯಾವುದೂ ಇರುವುದಿಲ್ಲ.

ಸಂಸ್ಕೃತದಲ್ಲಿ :
ಕಾಲಾಭ್ರದ್ಯುತಿಮಸಮಾನವೀರ್ಯಸಾರಾಂ
ಶಕ್ತ್ಯೂರ್ಮಿಭ್ರಮಕರಶುಕ್ಲಘೋರದಂಷ್ಟ್ರಾಂ
ಯೋ ಧೀರೋ ಮನಸಿ ದಧಾತಿ ಭರ್ಗಪತ್ನಿ
ತ್ವಾಮಸ್ಯ ಪ್ರಭವತಿ ಸಂಗರೇಷು ಶಸ್ತ್ರಂ ||4||

ತಾತ್ಪರ್ಯ :
ಓ ಭರ್ಗನ ಪತ್ನಿಯೆ ! ಮಿನುಗುತ್ತಿರುವ ಕಪ್ಪು ಮೋಡಗಳಂತೆ, ಸಾಟಿಯಿಲ್ಲದ ಪರಾಕ್ರಮವನ್ನುಳ್ಳ, ಬಿಳಿಬಣ್ಣದ ದೊಡ್ಡದಾದ ಹಾಗೂ ಭಯಂಕರವಾದ ಹಲ್ಲುಗಳಿಂದ ಹೊರಬರುವ ಪ್ರಕಾಶಮಾನವಾದ ಕಿರಣಗಳು ಮಾಯಾ ಶಕ್ತಿಯನ್ನು ಸೃಷ್ಟಿಸುವುದು. ಇಂತಹ ರೂಪವನ್ನು ಕುರಿತು ಯಾರು ಧ್ಯಾನಿಸುವರೋ  ಅವರಿಗೆ ನಿನ್ನಲ್ಲಿನ ಅಸ್ತ್ರಗಳನ್ನು ನೀಡಿ ಭಯಾನಕ ಯುದ್ಧದಲ್ಲಿ ವಿಜಯಿಯಾಗುವಂತೆ ಮಾಡುವೆ.
ಈ ಶ್ಲೋಕದಲ್ಲಿ ಕಡು ಕಪ್ಪುಬಣ್ಣದ ವಾರಾಹಿಯನ್ನು ಚಿತ್ರಿಸಲಾಗಿದೆ. ಈ ಶಕ್ತಿಶಾಲಿ ದೇವಿಯು ಅವಳನ್ನು ಪೂಜಿಸುವವರಿಗೆ ಅವರು ತಮ್ಮ ಶಕ್ತಿಶಾಲಿ ಶತ್ರುವಿನ ವಿರುದ್ಧ ನಡೆಸುವ ಭಯಂಕರ ಯುದ್ಧದಲ್ಲಿ ಜಯಗಳಿಸುವಂತೆ ಆಶೀರ್ವದಿಸುವಳು.

ವಿವರಣೆ :
ರುದ್ರಮಹಿಷಿಯಾದ ದೇವಿಯೆ ! ಕಪ್ಪಾದ ಮೋಡದಂತಿರುವ ನಿನ್ನ ಅಸದೃಶವಾದ ಪರಾಕ್ರಮಬಲವುಳ್ಳ, ಶಕ್ತಿಯ ಅಲೆಗಳಂತೆ ತೋರುವ ಬೆಳ್ಳಗಿರುವ ಭಯಂಕರವಾದ ಕೋರೆಹಲ್ಲುಗಳುಳ್ಳ ಆ ನಿನ್ನನ್ನು ಧ್ಯಾನಮಾಡುವವನಿಗೆ, ನೀನು ಯುದ್ಧದಲ್ಲಿ ಜಯವನ್ನು ಉಂಟುಮಾಡುವೆ.

ಸಂಸ್ಕೃತದಲ್ಲಿ :
ಯಃ ಪ್ರಾಜ್ಞಸ್ತರುಣದಿವಾಕರೋಜ್ಜ್ವಲಾಂಗೀಂ
ತನ್ವಂಗಿ ತ್ರಿಪುರಜಿತೋ ವಿಚಿಂತಯೇತ್ತ್ವಾಂ
ತಸ್ಯಾಜ್ಞಾಂ ದಧತಿ ಶಿರಸ್ಸು ಫುಲ್ಲಜಾಜೀ-
ಮಾಲಾಂ ವಾ ಧರಣಿಜುಷೋ ವಶೇ ಭವಂತಃ ||5||

ತಾತ್ಪರ್ಯ :
ಓ ತ್ರಿಪುರವನ್ನೂ ಜಯಿಸಿದ ಸುಕೋಮಲೆಯೇ ! ಎಳೆಯದಾದ ಸೂರ್ಯನಂತೆ ಹೊಳೆಯುತ್ತಿರುವ ನಿನ್ನ ರೂಪವನ್ನು ಪೂಜಿಸುವ ಜ್ಞಾನಿಗಳು ಉಳಿದ ಮನುಷ್ಯರ ಮೇಲೆ ಹತೋಟಿಯನ್ನು ಸಾಧಿಸಲಿ. ಆ ಮನುಷ್ಯರು ತಮ್ಮ ಸ್ವಯಿಚ್ಛೆಯಿಂದ ಜ್ಞಾನಿಗಳ ತಾಜಾ ಮಲ್ಲಿಗೆಹೂವಿನ ಗೊಂಚಲಿನಂತಿರುವ  ಮಾತನ್ನು ಶಿರಸಾವಹಿಸಿ ನಡೆಸಿಕೊಡುವರು.
ಇಲ್ಲಿ ದೇವಿಯ ರೂಪವನ್ನು ಬಾಲಸೂರ್ಯನಿಗೆ ಹೋಲಿಸಲಾಗಿದೆ.

ವಿವರಣೆ :
ಪರಶಿವನ ಸುಂದರಿಯೇ ! ಯಾವ ವಿದ್ವಾಂಸನು ಬಾಲಾರ್ಕಪ್ರಕಾಶಮಾನವಾದ ನಿನ್ನ ಶರೀರವನ್ನು ಮನಸ್ಸಿನಲ್ಲಿ ಧ್ಯಾನಮಾಡುತ್ತಾನೋ ಅಂತಹವನ ಆಜ್ಞೆಯನ್ನು, ಭೂಮಿಯಲ್ಲಿರುವ ಮನುಷ್ಯರು, ಅರಳಿದ ಜಾಜಿ ಹೂವಿನ ಮಾಲೆಯಂತೆ ತಲೆಯಲ್ಲಿ ಧರಿಸುತ್ತಾರೆ.

ಸಂಸ್ಕೃತದಲ್ಲಿ :
ಯೋ ರಾಕಾಶಶಧರಕಾಂತಿಸಾರಶುಭ್ರಾಂ
ಬಿಭ್ರಾಣಾಂ ಕರಕಮಲೇನ ಪುಸ್ತಕಂ ತ್ವಾಂ
ಭೂತೇಶಂ ಪ್ರಭುಮಸ್ಕೃತ್ಪ್ರಬೋಧಯಂತೀಂ
ಧ್ಯಾಯೇದ್ವಾಗ್ಭವತಿ ವಶೇsಸ್ಯ ನಾಕದೂತೀ||6||

ತಾತ್ಪರ್ಯ :
ಪೂರ್ಣಚಂದ್ರನ ಹೊಳೆಯುವ ಕಿರಣಗಳ ಸತ್ವದಂತೆ ಶುಭ್ರ ಹಾಗೂ ಪ್ರಕಾಶಮಾನವಾದ ರೂಪವುಳ್ಳ ಹಾಗೂ ಕಮಲ ಪುಷ್ಪದ ಮೊಗ್ಗಿನಂತೆ ಕೋಮಲವಾದ ಒಂದು ಹಸ್ತದಲ್ಲಿ ಪುಸ್ತಕವನ್ನು ಮತ್ತು ತನ್ನ ಸ್ವಾಮಿಯಾದ (ಸದಾ ಸಮಾಧಿ ಸ್ಥಿತಿಯಲ್ಲಿರುವ) ಭೂತೇಶನನ್ನು ಎಬ್ಬಿಸುವ ಕಾರ್ಯದಲ್ಲಿ ಮಗ್ನಳಾಗಿರುವ ದೇವಿಯ  ರೂಪವನ್ನು ಯಾರು ಪೂಜಿಸುತ್ತಾರೋ ಅವರಿಗೆ ವಿದ್ಯಾದೇವತೆಯು ಒಲಿಯುವಳು ಮತ್ತು ಅವನು ತನ್ನ ಸುಂದರವಾದ ಸ್ತುತಿಯಿಂದ ದೇವತೆಗಳ ಹೃದಯವನ್ನು ಪ್ರವೇಶಿಸುವ ಶಕ್ತಿಯನ್ನು ಪಡೆಯುವನು.
ಇಲ್ಲಿ ಪ್ರಕಾಶಮಾನವಾದ ಪುಸ್ತಕಧಾರಿಣಿಯ ರೂಪವನ್ನು ಉದ್ದೇಶಿಸಲಾಗಿದೆ. ಈ ದೇವಿಯನ್ನು ಪೂಜಿಸುವವನಿಗೆ ಅಪಾರ ಮಾತಿನ ಶಕ್ತಿಯು ಲಭಿಸಿ, ಅದರಿಂದ ದೇವತೆಗಳ ಸಹಿತ ಎಲ್ಲರನ್ನೂ ಮೆಚ್ಚಿಸುವನು.

ವಿವರಣೆ :
ಹುಣ್ಣಿಮೆಯ ಚಂದ್ರನಂತೆ ಶುಭ್ರವಾದ ಪುಸ್ತಕವನ್ನು ಕೈಯಲ್ಲಿ ಹಿಡಿದಿರುವ, ನಿತ್ಯ ಸಮಾಧಿಯಲ್ಲಿರುವ ಪರಶಿವನನ್ನು ಜಗದ್ವ್ಯಾಪಾರಕ್ಕಾಗಿ ಪದೇ ಪದೇ ಎಚ್ಚರಿಸುತ್ತಲಿರುವ ನಿನ್ನನ್ನು ಧ್ಯಾನಮಾಡಿದರೆ ಅಂತಹವನ ಮಾತು, ಸ್ವರ್ಗದಲ್ಲಿರುವ ದೇವತೆಗಳ ಹೃದಯವನ್ನು ಪ್ರವೇಶಿಸುವಂತಹುದಾಗುತ್ತದೆ.

ಸಂಸ್ಕೃತದಲ್ಲಿ :
ಜಾನೀಮೋ ಬಗವತಿ ಭಕ್ತಚಿತ್ತವೃತ್ತೇ-
ಸ್ತುಲ್ಯಂ ತ್ವಂ ಸಪದಿ ದಧಾತಿ ರೂಪಮಗ್ರ್ಯಂ
ಪ್ರಶ್ನೋsಯಂ ಭವತಿ ನಗಾಧಿನಾಥಕನ್ಯೇ
ರೂಪಂ ತೇ ಮದಯತಿ ಕೀದೃಶಂ ಸ್ಮರಾರಿಂ||7||

ತಾತ್ಪರ್ಯ :
ಓ ದೈವೀ ದೇವಿಯೇ ! ನಿನ್ನ ಭಕ್ತರ ಚಿತ್ತವೃತ್ತಿಗೆ ತಕ್ಕುದಾದ ರೂಪವನ್ನು ನೀನು ಧರಿಸುವೆ ಎಂಬುದು ನಮಗೆ ಗೊತ್ತಿರುವುದು. ಆದರೆ, ಓ ಪರ್ವತ ಪುತ್ರಿಯೇ! ಮನ್ಮಥನ ಶತ್ರುವಾದ ಮಹಾದೇವನ ಗಮನವನ್ನು ನಿನ್ನೆಡೆಗೆ ಆಕರ್ಷಿಸಿವುದು ಅದಾವ ರೂಪ ಎಂಬುದೇ ನಮ್ಮನ್ನು ಕಾಡುವ ಪ್ರಶ್ನೆ.
ದೈವತ್ವವು ಭಕ್ತರನ್ನು ಸಂತೋಷಪಡಿಸಲು ಅನೇಕ ರೂಪಗಳನ್ನು ಧರಿಸುವ ಶಕ್ತಿಯನ್ನು ಹೊಂದಿರುವುದು ಎಂಬುದು ಸರ್ವವಿದಿತವಾದರೂ, ಮನ್ಮಥನನ್ನು ತಿರಸ್ಕರಿಸುವ ನಿನ್ನ ಸ್ವಾಮಿಯನ್ನು ಆಕರ್ಷಿಸುವ ರೂಪವು ಯಾವುದಿರಬಹುದೆಂಬ ಬಲವಾದ ಕುತೂಹಲವು ಭಕ್ತನ ಮನದಲ್ಲಿ ಉದಯಿಸಿದೆ. ಅದು ಅವಿವರಣೀಯ ವಾದದ್ದಿರಬೇಕು !

ವಿವರಣೆ :
ಪೂಜ್ಯೆಯೇ ! ಭಕ್ತರ ಮನಸ್ಸಿಗೆ ಅನುಗುಣವಾದ ರೂಪವನ್ನು ನೀನು ಪಡೆಯುತ್ತೀಯೆ ಎಂಬುದನ್ನು ನಾವು ತಿಳಿದಿರುತ್ತೇವೆ. ಆದರೆ, ಪರ್ವತರಾಜಪುತ್ರಿಯೇ ! ಮನ್ಮಥ ಶತ್ರುವಾದ ಪರಶಿವನನ್ನು ನಿನ್ನ ಯಾವ ತೆರನಾದ ರೂಪವು ಮೋಹಗೊಳಿಸುತ್ತದೆ ಎಂಬುದು ನನ್ನ ಪ್ರಶ್ನೆಯಾಗಿದೆ.

ಸಂಸ್ಕೃತದಲ್ಲಿ :
ಚಾರು ಸ್ಯಾದಲಮಿತಿ ವಕ್ತುಮಂಬ ಶಕ್ಯಂ
ರೂಪಂ ತೇ ವದತಿ ಕೋsಪಿ ಕೀದೃಶಂ ವಾ
ಸಮ್ಮೋಹಂ ಪರಮುಪಯಾಂತಿ ಕಾಂತಿಭಾಂಡೇ
ಕಾಮಾರೇರಪಿ ನಯನಾನಿ ಯತ್ರ ದೃಷ್ಟೇ ||8||

ತಾತ್ಪರ್ಯ :
ಓ ಮಾತೇ ! ನಿನ್ನ ರೂಪವನ್ನು ವಿವರಿಸುವಾಗ ಸುಂದರವಾದದ್ದು ಎಂಬ ಪದವನ್ನು ಬಹಳ ಸುಲಭವಾಗಿ ಬಳಸಬಹುದು, ಅದು ತುಂಬಾ ವಿಶಿಷ್ಟವಾಗಿರಬಹುದು. ಆದರೆ ಅದು ಏನು ಮತ್ತು ಹೇಗೆ ಎಂಬುದನ್ನು ಯಾರಿಗೂ ಹೇಳಲು ಅಸಾಧ್ಯ. ಅಷ್ಟೇ ಏಕೆ ಮುಕ್ಕಣ್ಣನಾದ ಕಾಮರಿಯೂ ಸಹ ನಿನ್ನ ಭವ್ಯ ಹಾಗೂ ಮನಮೋಹಕ ರೂಪವನ್ನೇ ತದೇಕ ಚಿತ್ತದಿಂದ ತನ್ನ ಕಣ್ಣುಗಳನ್ನು ನಿನ್ನಲ್ಲೇ ನೆಟ್ಟು ನೋಡುತ್ತಾ ಇರುವನು.
ಕಾಮಾರಿಯೇ ನಿನ್ನ ರೂಪದಿಂದ ಈ ರೀತಿಯಾಗಿ ಬೆರಗಾದರೆ, ಮರ್ತ್ಯರು ಅಥವಾ ಉಳಿದವರು ಹೇಗೆ ನಿನ್ನ ರೂಪವನ್ನು ವರ್ಣಿಸಲು ಸಾಧ್ಯ? ಅದು ಅಸಾಧ್ಯ.

ವಿವರಣೆ :
ಪರಶಿವನನ್ನು ಮೋಹಗೊಳಿಸಲು ಎಷ್ಟು ಸೌಂದರ್ಯವು ಬೇಕೋ ಅಷ್ಟು ಸೌಂದರ್ಯವು ನಿನ್ನಲ್ಲಿದೆ ಎಂದು ಹೇಳುವುದು ಸುಲಭ. ಜಗತ್ತಿನ ಸಮಸ್ತ ಸುಂದರಪದಾರ್ಥಗಳ ಸೌಂದರ್ಯಕ್ಕೆ ಆಧಾರವಾಗಿರುವ ನಿನ್ನ ಆ ರೂಪದಲ್ಲಿ ಪರಶಿವನ ಮೂರೂ ಕಣ್ಣುಗಳೂ ಅತ್ಯಧಿಕವಾಗಿ ಪರವಶವಾಗುತ್ತವೋ ಆ ರೂಪವನ್ನು ಯಾರೂ ಹೇಳಲಾರರು.

ಸಂಸ್ಕೃತದಲ್ಲಿ :
ಸಂಕಲ್ಪೈಃ ಕಿಮು ತವ ಭೂಷಣಾನ್ಯಭೂವಂ-
ಚ್ಛಿಲ್ಪೀಂದ್ರಾಃ ಕಿಮು ವಿದಧುರ್ಯಥಾsತ್ರ ಲೋಕೇ
ತತ್ಸ್ವರ್ಣಂ ಭಗವತಿ ಕೀದೃಶಂ ಮಣೀನಾಂ
ಕಿಂ ರೂಪಂ ಭವತಿ ಚ ತತ್ರ ಯೋಜಿತಾನಾಂ ||9||

ತಾತ್ಪರ್ಯ :
ಓ ಅತ್ಯುನ್ನತವಾದ ದೈವತ್ವವೇ ! ನಿನ್ನ ಕಲ್ಪನೆಗಳು ಉತ್ಕೃಷ್ಟತೆಯ ಅಭರಣಕ್ಕಿಂತ ಶ್ರೇಷ್ಠವಾದದ್ದೆ? ಈ ಪ್ರಪಂಚದಲ್ಲಿನ ನುರಿತ ಆಭರಣ ತಯಾರಕರು ಅದನ್ನು ಅನುಸರಿಸುವರೆ? ನೀನು ಧರಿಸಿರುವ ಆಭರಣಗಳು ಅದೆಷ್ಟು ಅದ್ಭುತವಾಗಿವೆ, ಬಂಗಾರದ ಒಡವೆಗಳಲ್ಲಿ ಸೇರಿಸಿರುವ ಆ ಮುತ್ತುಗಳು ಯಾವುದಾಗಿರಬಹುದು?
ಈ ಪ್ರಪಂಚದಲ್ಲಿ ನುರಿತ ಆಭರಣ ತಯಾರಕರು ಬಂಗಾರ ಹಾಗೂ ಮುತ್ತುಗಳನ್ನು ಸೇರಿಸಿ ಒಡವೆ ಮಾಡುವುದು ನಮಗೆಲ್ಲಾ ಗೋತ್ತಿರುವುದೇ. ಆದರೆ, ದೇವಿಯು ಧರಿಸಿರುವ ಒಡವೆಗಳು ಈ ಪ್ರಪಂಚಕ್ಕೆ ಸೇರಿದ್ದಲ್ಲವೆಂಬ ಭಾವನೆ.

ವಿವರಣೆ :
ತಾಯಿಯೇ ! ನಿನ್ನಲ್ಲಿರುವ ಅಭರಣಗಳೆಲ್ಲವೂ ನಿನ್ನ ಸಂಕಲ್ಪದಿಂದಾದುವೆ? ಅಥವಾ ಲೋಕದಲ್ಲಿರುವ ಅಕ್ಕಸಾಲಿಗರು ಅದನ್ನು ನಿರ್ಮಾಣ ಮಾಡಿದರೆ? ಆ ಚಿನ್ನ ಯಾವುದು? ಯಾವುದರಿಂದ ಭೂಷಣ ಮಾಡಲ್ಪಟ್ಟವು? ಆ ಭೂಷಣಗಳಲ್ಲಿ ಹುದುಗಿಸಿರುವ ರತ್ನಗಳ ಸ್ವರೂಪವೆಂತಹುದು?

ಸಂಸ್ಕೃತದಲ್ಲಿ :
ಯಾನ್ಯಂಗಾನ್ಯಖಿಲಮನೋಜ್ಞಸಾರಭೂತಾ
ನ್ಯೇತೇಷಾಮಪಿ ಕಿಮು ಭೂಷಣೈರುಮೇ ತೇ
ಆಹೋಸ್ವಿಲ್ಲಲಿತತಮಾನಿ ಭಾಂತಿ ಭೂಯೋ
ಭೂಷಾಭಿರ್ವಿಕೃತತಮಾಭಿರಪ್ಯಮೂನಿ ||10||

ತಾತ್ಪರ್ಯ :
ಉಮಾ ದೇವಿಯೇ ! ನಿನ್ನ ಪತಿಯು ಈ ವಿಶ್ವದಲ್ಲಿನ ಸಮಸ್ತ ಸುಂದರ ವಸ್ತುಗಳ ಸತ್ತ್ವದಿಂದ ಹೊರತಾಗಿರುವನು. ಹಾಗಿದ್ದಾಗ ನೀನು ಧರಿಸಿರುವ ಆಭರಣಗಳು ಅಥವಾ ಒಡವೆಗಳು ನಿನಗೆ ಯಾವ ಉಪಯೋಗಕ್ಕೆ? ಒಂದು ಉಪಯೋಗಕ್ಕಿರಬಹುದು. ನೀನು ಈ ಒಡವೆಗಳಿಗೆ ಹೋಲಿಸಿದರೆ ಸ್ವಾಭಾವಿಕವಾಗಿಯೇ ಸುಕೋಮಲೆ ಹಾಗೂ ಆಕರ್ಷಕ ವ್ಯಕ್ತಿತ್ತ್ವವುಳ್ಳವಳು. ಒಡವೆಗಳಾದರೋ ಅವು ಕೃತಕತೆಯಿಂದ ಕೂಡಿರುವುದು.

ವಿವರಣೆ :
ತಾಯಿಯಾದ ಉಮಾದೇವಿಯೇ! ಸಮಸ್ತ ಸುಂದರ ಪದಾರ್ಥಗಳ ಸಾರಭೂತವಾದ ನಿನ್ನ ಅಂಗಾಂಗಗಳಿಗೆ ಭೂಷಣಗಳಿಂದ ಅಗಬೇಕಾದುದೇನಿದೆ? ಅಥವಾ ವಿಕೃತತಮವಾದ ಆಭರಣಗಳಿಂದ ನಿನ್ನ ಪರಮ ಸುಂದರವಾದ ಅಂಗಾಂಗಗಳ ಸೌಂದರ್ಯವು ಹೆಚ್ಚಾಗುತ್ತದೆಯೋ?

ಸಂಸ್ಕೃತದಲ್ಲಿ :
ಮುಕ್ತಾಬಿರ್ಭವತಿ ತವಾಂಬ ಕಿನ್ನು ಹಾರಃ
ಪಿಯೂಷದ್ಯುತಿಕರಸಾರನಿರ್ಮಲಾಭಿಃ
ಮುಂರ್ಡೈರ್ವಾ ಘಲಘಲಶಬ್ದಮಾದಧದ್ಭಿಃ
ಸಂಘರ್ಷಾತ್ ತ್ರಿಭುವನಸಾರ್ವಭೌಮಭಾಮೇ ||11||

ತಾತ್ಪರ್ಯ :

ಹೇ ಮಾತೇ? ನೀನು ತೆಳ್ಳಗೆ ಹಾಗೂ ಸುಂದರವಾದ ಹೆಂಗಸೆಂದು ನನಗೆ ಗೊತ್ತಿದೆ. ಆದರೆ ನಿನ್ನ ಕುತ್ತಿಗೆಯನ್ನು ಯಾವುದು ಅಲಂಕರಿಸಿರುವುದು? ಅದು ಪೂರ್ಣ ಚಂದ್ರನ ಮೇಲಿರುವ ಮಂಜಿನ ಹನಿಗಳಂತೆ ಪರಿಶುದ್ಧ ಹಾಗೂ ತಂಪಾಗಿರುವ ಮುತ್ತಿನ ಹಾರವೆ ಅಥವಾ ಮಾನವ ಶರೀರಗಳಿಂದ ಮಾಡಿದ ಒಂದಕ್ಕೊಂದು ತಾಗಿ ಉಂಟಾಗುವ ಘರ್ಷಣೆಯಿಂದ ಕೂಡಿರುವ ಹಾರವೆ?
ತಂತ್ರಜ್ಞಾನದಲ್ಲಿ ಸಾಮಾನ್ಯವಾಗಿ ದೇವಿಯ ದಕ್ಷಿಣ ಕಾಳಿಯ ರೂಪವು ಮುಂಡಮಾಲೆ (ಮನುಷ್ಯನ ದೇಹದಿಂದ) ಧರಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ವಿವರಣೆ :
ತಾಯಿಯೇ! ಮೂರೂ ಲೋಕದ ಚಕ್ರವರ್ತಿಯ ಪತ್ನಿಯೆ! ನೀನು ಧರಿಸಿರುವ ಹಾರಗಳು ಚಂದ್ರನ ಕಿರಣಗಳಂತೆ ಪ್ರಕಾಶಮಾನವಾಗಿವೆಯೆ? ಅಥವಾ ಅನ್ಯೋನ್ಯವಾಗಿ ಸಂಘರ್ಷದಿಂದ ಘಲ್ ಘಲ್ ಎಂದು ಶಬ್ದ ಮಾಡುವ ಮನುಷ್ಯರ ಮುಂಡಗಳಿಂದ ಆಗಿವೆಯೆ? (ತಂತ್ರ ಶಾಸ್ತ್ರದಲ್ಲಿ ದಕ್ಷಿಣ ಕಾಳಿಯ ಮೂರ್ತಿಯು ಮುಂಡಮಾಲೆಯಿಂದ ಆಗಿವೆ ಎಂದು ಪ್ರಸಿದ್ಧವಾಗಿವೆ. ಆದ್ದರಿಂದ ದೇವಿಯ ಕಂಠದಲ್ಲಿರುವ ಮಾಲೆಯು ಮುತ್ತಿನಿಂದ ಆಗಿದೆಯೋ? ಅಥವಾ ಅದು ಮುಂಡಮಾಲೆಯಿಂದ ಆಗಿವೆಯೊ? ಎಂಬ ಪ್ರಶ್ನೆ ಉಚಿತವಾಗಿದೆ.)

ಸಂಸ್ಕೃತದಲ್ಲಿ :
ವಸ್ತ್ರಂ ಸ್ಯಾದ್ಯದಿ ತವ ಸರ್ವಶಾಸ್ತ್ರಗಮ್ಯೇ
ಕಾರ್ಪಾಸಂ ದಿವಿ ಚ ತದುದ್ಭವೋsನುಮೇಯಃ
ಕ್ಷೌಮಂ ಚೇದ್ಭಗವತಿ ತಸ್ಯ ಹೇತುಭೂತಾಃ
ಕೀಟಾಃ ಸ್ಯುರ್ಗಗನಜಗತ್ಯಪೀತಿ ವಾಚ್ಯಂ ||12||

ತಾತ್ಪರ್ಯ :
ಮಾತೆ ! ಎಲ್ಲ ಶಾಸ್ತ್ರಗಳಲ್ಲೂ ನಿನ್ನನ್ನೇ ಮುಖ್ಯ ಗುರಿಯಾಗಿ ವಿವರಿಸಲಾಗಿದೆ. ನಿನ್ನ ವಸ್ತ್ರವು ಹತ್ತಿಯಿಂದ ತಯಾರಿಸಲ್ಪಟ್ಟಿದ್ದರೆ, ಆಗ ಹತ್ತಿಯು ಸ್ವರ್ಗದಲ್ಲಿ ಬೆಳೆಯುವುದೆಂದು ತೀರ್ಮಾನಿಸಬಹುದು. ನಿನ್ನ ವಸ್ತ್ರವು ರೇಷ್ಮೆಯಿಂದ ತಯಾರಿಸಿದ್ದರೆ, ಆಗ ಸ್ವರ್ಗದಲ್ಲಿ ರೇಷ್ಮೆಹುಳಗಳು ಇರಬಹುದೆಂದು ನಾವು ನಿರ್ಧರಿಸಬಹುದು.

ವಿವರಣೆ :
ಸಕಲ ಶಾಸ್ತ್ರಗಳಿಂದ ಪ್ರತಿಪಾದಿಸುವ ತಾಯಿಯೇ? ನಿನ್ನ ವಸ್ತ್ರವು ಹತ್ತಿಯಿಂದ ಮಾಡಲ್ಪಟ್ಟುದುದಾದರೆ ಆಗ ಸ್ವರ್ಗದಲ್ಲೂ ಹತ್ತಿಯ ಉತ್ಪತ್ತಿಯನ್ನು ಹೇಳಬೇಕಾಗುತ್ತದೆ. ಪೂಜ್ಯೆಯೆ ! ಆ ವಸ್ತ್ರವು ಉಣ್ಣೆಯದಾದರೆ ಆಗ ಸ್ವರ್ಗಲೋಕದಲ್ಲೂ ಕೀಟಗಳಿರುತ್ತವೆ ಎಂದು ಹೇಳಬೇಕಾಗುತ್ತದೆ. ಏಕೆಂದರೆ ರೇಷ್ಮೆಯು ಕ್ರಿಮಿಕೋಶದಿಂದ ಉತ್ಪತ್ತಿಯಾಗುತ್ತದೆ.

ಸಂಸ್ಕೃತದಲ್ಲಿ :
ರುದ್ರಸ್ಯ ಪ್ರಿಯದಯಿತೇsಥವಾ ಸುರರ್ದ್ರು-
ಭೂಷಾಣಾಂ ಮಣಿಕನಕಪ್ರಕಲ್ಪಿತಾನಾಂ
ವಸ್ತ್ರಾಣಾಮಪಿ ಮನಸೇ ಪರಂ ಹಿತಾನಾಂ
ಕಾಮಂ ತೇ ಭವತಿ ಸಮರ್ಪಕಃ ಸಮರ್ಥಃ ||13||

ತಾತ್ಪರ್ಯ :
ದೇವಿ ! ನೀನು ರುದ್ರನಿಗೆ ಅತ್ಯಂತ ಪ್ರೀತಿಪಾತ್ರಳು. ನಿನಗೆ ರೇಷ್ಮೆ ವಸ್ತ್ರಗಳು ಹಾಗೂ ಅದ್ಭುತವಾದ ಬಂಗಾರದ ಒಡವೆಗಳನ್ನು ಪೂರೈಸಲು ಸ್ವರ್ಗಲೋಕದ ಕಲ್ಪವೃಕ್ಷ ಹಾಗೂ ಕಲ್ಪತರುಗಳಿಗೆ ಮಾತ್ರ ಸಾಧ್ಯ.

ವಿವರಣೆ :
ಶ್ರೀರುದ್ರನ ಪ್ರೇಯಸಿಯೆ ! ಸ್ವರ್ಗಲೋಕದಲ್ಲಿರುವ ಕಲ್ಪವೃಕ್ಷವು ನಿನಗೆ ಮುತ್ತು ರತ್ನಗಳಿಂದ ನಿರ್ಮಿಸಲ್ಪಟ್ಟ ಅಭರಣಗಳನ್ನು ಕೊಡುತ್ತದೆ. ಹಾಗೆಯೇ ನಿನ್ನ ಮನಸ್ಸಿಗೆ ಆಕರ್ಷಕವಾದ ವಸ್ತ್ರಗಳನ್ನು ನೀಡುವುದೂ ಅದೇ ಆಗಿರುತ್ತದೆ.

ಸಂಸ್ಕೃತದಲ್ಲಿ :
ಸುಸ್ಕಂಧೋ ಬಹುವಿಟಪಃ ಪ್ರವಾಲಶೋಭೀ
ಸಂಫುಲ್ಲಪ್ರಸವಸುಗಂಧವಾಸಿತಾಶಃ
ವೃಕ್ಷಃ ಕಿಂ ಭಗವತಿ ಕಲ್ಪನಾಮಕೋsಯಂ
ಸಂಕಲ್ಪಃ ಕಿಮು ತವ ಕೋsಪಿ ದೇವಿ ಸತ್ಯಃ ||14||

ತಾತ್ಪರ್ಯ :
ಓ ದೈವತ್ವವೆ ! ನೈಜತೆಯಲ್ಲಿ ಏನಿದೆ? ಶಕ್ತಿಶಾಲಿ ಬುಡವಿರುವ ಕಲ್ಪವೃಕ್ಷವು ಎಲೆಗಳು ಹಾಗೂ ಗೊಂಚಲಿನಿಂದ ತುಂಬಿ ಅದರಿಂದ ಹೊರಬರುವ ಸಿಹಿಯಾದ ಸುಗಂಧದ ಪರಿಮಳವು ಎಲ್ಲೆಡೆ ಹರಡಿರುವುದೇ? ಅಥವಾ ಅದು ಕೇವಲ ನಿನ್ನ ಪ್ರಾಮಾಣಿಕ ಕಲ್ಪನೆಯೇ?
ಮಾನವನ ಕಲ್ಪನೆಯು ಸತ್ಯವನ್ನು ಗ್ರಹಿಸಲು ವಿಫಲವಾಗುವುದು.

ವಿವರಣೆ :
ಪೂಜ್ಯಳಾದ ದೇವಿಯೆ ! ಶುದ್ಧವಾದ ಪ್ರಕಾಂಡದಿಂದ ಕೂಡಿರುವ ಅನೇಕ ಕೊಂಬೆಗಳಿಂದ ಕೂಡಿರುವ, ಅನೇಕ ಚಿಗುರುಗಳಿಂದ ತುಂಬಿರುವ, ಅರಳಿರುವ ಹೂಗಳ ಪರಿಮಳದಿಂದ ಸುಗಂಧಿತವಾದ ದಿಕ್ಕುಗಳುಳ್ಳ ಈಕಲ್ಪವೃಕ್ಷವೆಂಬುವುದು ಮರವೋ? ಅಥವಾ ಅಸದೃಶವಾದ ನಿನ್ನ ಸತ್ಯವಾದ ಸಂಕಲ್ಪವೇ ಆಗಿರುತ್ತದೋ ತಿಳಿಯದು.

ಸಂಸ್ಕೃತದಲ್ಲಿ :
ಸಂಕಲ್ಪಾನ್ನ ಭವತಿ ಕಲ್ಪಪಾದಪೋsನ್ಯಃ
ಸ್ವರ್ದೋಗ್ಧ್ರೀ ಪುನರಿತರಾ ನ ಕುಂಡಲಿನ್ಯಾಃ
ಯಃ ಕುರ್ಯಾದ್ ದ್ವಯಮಿದಮುದ್ಗತಾತ್ಮವೀರ್ಯಂ
ಕಾರುಣ್ಯಾತ್ತವ ಭುವಿ ಚಾಸ್ಯ ನಾಕಭಾಗ್ಯಂ ||15||

ತಾತ್ಪರ್ಯ :
ಕೋರಿದ್ದನ್ನೆಲ್ಲಾ ನೀಡುವ ಕಲ್ಪವೃಕ್ಷವನ್ನು ಬಿಟ್ಟರೆ ಬೇರೆ ಯಾವುದೂ ಮರಗಳಿಲ್ಲ; ಕುಂಡಲಿನಿಯನ್ನು ಹೊರತುಪಡಿಸಿ ಬೇರೆ ಯಾವುದೂ ಕಾಮಧೇನುವಿಲ್ಲ. ಯಾರು ದೇವಿಯ ಅನುಗ್ರಹ ಹಾಗೂ ತನ್ನೆಲ್ಲಾ ಸಾಮರ್ಥ್ಯಗಳನ್ನು ಉಪಯೋಗಿಸಿಕೊಂಡು ಕಲ್ಪವೃಕ್ಷ ಹಾಗೂ ಕುಂಡಲಿನಿಗಳನ್ನು ಜಾಗೃತಿಗೊಳಿಸುವರೊ ಅವರು ಸ್ವರ್ಗಲೋಕದ ಅನೇಕ ಪ್ರಯೋಜನಗಳನ್ನು ಈ ಪ್ರಪಂಚದಲ್ಲೇ ಪಡೆಯುವರು.

ವಿವರಣೆ :
ತಾಯಿಯೆ ! ನಿನ್ನ ಸಂಕಲ್ಪದಿಂದ ಬೇರೊಂದು ಕಲ್ಪತರುವು ಉಂಟಾಗುವುದಿಲ್ಲ. ಏಕೆಂದರೆ ನಿನ್ನ ಸಂಕಲ್ಪವೇ ಕಲ್ಪತರುವಾಗುತ್ತೆ. ಹಾಗೆಯೇ ಕುಂಡಲಿನೀ ಶಕ್ತಿಯಿಂದ ಬೇರೊಂದು ಕಾಮಧೇನುವು ಉಂಟಾಗುವುದಿಲ್ಲ. ಏಕೆಂದರೆ ಕುಂಡಲಿನಿಯೇ ಕಾಮಧೇನುವಾಗಿರುತ್ತದೆ. ಇವೆರಡೂ ಸ್ವಶಕ್ತಿಯಿಂದ ಹೊರಬರಲು ನಿನ್ನ ಕರುಣೆಯೇ ಕಾರಣ. ಆ ನಿನ್ನ ಕರುಣೆಯಿಂದ ಈ ಭೂಮಿಯೆಲ್ಲವೂ ಸ್ವರ್ಗಸಮಾನವಾಗುತ್ತದೆ.

ಸಂಸ್ಕೃತದಲ್ಲಿ :
ಆಪೀನಂ ಭವತಿ ಸಹಸ್ರಪತ್ರಕಂಜಂ
ವತ್ಸೋsಸ್ಯಾಃ ಪಟುತರಮೂಲಕುಂಡವಹ್ನಿಃ
ದೋಗ್ಧಾssತ್ಮಾ ದಹರಸರೋರುಹೋಪವಿಷ್ಟೋ
ಮೌನಂ ಸ್ಯಾತ್ಸುರಸುರಭೇಸ್ತನೂಷು ದೋಹಃ ||16||

ತಾತ್ಪರ್ಯ :
ಸ್ವರ್ಗಲೋಕದ ಕಾಮಧೇನುವಿನ ಕೆಚ್ಚಲೇ ಸಹಸ್ರಾರ; ಪ್ರಕಾಶಮಾನವಾಗಿ ಹೊಳೆಯುತ್ತಿರುವ ಮೂಲಾಗ್ನಿಯೇ ಕಾಮಧೇನುವಿನ ಕರು; ಹೃದಯಪ್ರದೇಶವಾದ ದಹರಾಕ್ಷದಲ್ಲಿ ಕುಳಿತಿರುವ ಜೀವಾತ್ಮವೇ ಹಸುವನ್ನು ಕಾಯುವವನು. ಪ್ರಾಪಂಚಿಕ ಆಕರ್ಷಣೆಗಳನ್ನು ಹೊರತುಪಡಿಸಿ ಸಂಪೂರ್ಣ ಶಾಂತಿಯೇ ಹಸುವಿನಿಂದ ಹಾಲುಕರೆಯುವುದು.
ಇದು ರೂಪಕ ನಿರೂಪಣ, ಸಂಪೂರ್ಣವಾದ ರೂಪಾಲಂಕಾರ.

ವಿವರಣೆ :
ತಾಯಿಯೆ ! ಸಹಸ್ರಾರವೆಂಬ ಕಮಲವೇ ಇಲ್ಲಿ ಕುಂಡಲಿನೀ ಎಂಬ ಕಾಮಧೇನುವಿನ ಕೆಚ್ಚಲಾಗಿರುತ್ತದೆ. ಮುಲಾಧಾರವೆಂಬ ಕುಂಡದಲ್ಲಿರುವ ಅಗ್ನಿಯೇ ನಿಪುಣತರವಾದ ಕರುವಾಗಿರುತ್ತದೆ. ಶಾಂತಿ ಸಮೃದ್ಧಿಯಿಂದ ಕೂಡಿದ ಮೌನವೇ ಈ ಶರೀರದಲ್ಲಾಗುವ ಹಾಲು ಕರೆಯುವ ಕ್ರಿಯೆಯಾಗುತ್ತದೆ.

ಸಂಸ್ಕೃತದಲ್ಲಿ :
ದೋಗ್ಧ್ಯಾಸ್ತೇ ಭಗವತಿ ದೋಹನೇನ ಲಬ್ಧಂ
ವತ್ಸಾಗ್ನಿಪ್ರಥಮನಿಪಾನಸದ್ರವಾಯಾಃ
ದುಗ್ಧಂ ಸ್ವಾದ್ವಮೃತಮಯಂ ಪಿಬನ್ಮಮಾತ್ಮಾ
ಸಂತೃಪ್ತೋ ನ ಭವತಿ ದುರ್ಭರೋsಸ್ಯ ಕುಕ್ಷಿಃ ||17||

ತಾತ್ಪರ್ಯ :
ಮೂಲಾಗ್ನಿಯ ರೂಪದಲ್ಲಿನ ಕರುವಿನಿಂದ ಪ್ರೇರಿತವಾದ ಕಾಮಧೇನುವಿನಿಂದ ಪಡೆದ ಹಾಲು ಅಮೃತಕ್ಕೆ ಸಮಾನವಾಗಿದ್ದು, ಅದಷ್ಟೂ ನನ್ನ ಉದರಕ್ಕೆ ಸಾಲುವುದಿಲ್ಲ.
ಅಗಾಧವಾದ ಉದರಕ್ಕೆ ಸ್ವಲ್ಪ ಪ್ರಮಾಣದ ಆಹಾರವು ಸಾಲುವುದಿಲ್ಲ. ಇಲ್ಲಿನ ಸೂಚನೆಯೆಂದರೆ, ಸಾಧಕನು ಹೆಚ್ಚು ಹೆಚ್ಚು ಬೇಕೆಂದು ಬಯಸುವನು ಎಂದು.

ವಿವರಣೆ :
ಪರಮ ಪೂಜ್ಯೆಯಾದ ತಾಯಿಯೆ ! ಕರುವಿನ ರೂಪದಲ್ಲಿರುವ ಮೂಲಾಧಾರವೆಂಬ ಕುಂಡದ ಮಗುವಾದ ಅಗ್ನಿಯ ಮೊದಲನೆಯ ಅಧಿಕವಾದ ಪಾನದಿಂದ ಉಂಟಾದ ದ್ರವದಿಂದ ಕೂಡಿರುವ ಕಾಮಧೇನುವಾದ ನಿನ್ನನ್ನು ಕರೆಯುವುದರಿಂದ ಉಂಟಾದ ಮಧುರವಾದ ಅಮೃತಮಯವಾದ ಕುಡಿಯುವ ಈ ನಾನೆಂಬ ಜೀವನು ತೃಪ್ತನಾಗುವುದಿಲ್ಲ. ಏಕೆಂದರೆ ಈ ಜೀವನ ಹೊಟ್ಟೆಯು ತುಂಬಲಾರದುದಾಗಿರುತ್ತದೆ. ಹೆಚ್ಚು ಊಟ ಮಾಡುವವನಿಗೆ ಸ್ವಲ್ಪ ಭೋಜನವನ್ನು ಉಣಬಡಿಸಿದಂತಾಗುತ್ತದೆ.

ಸಂಸ್ಕೃತದಲ್ಲಿ :
ವತ್ಸೋsಗ್ನಿಃ ಪಿಬತಿ ದೃಡಾಜ್? ಘ್ರಿರಂಬ ಪಶ್ಚಾ-
ದಶ್ರಾಂತಂ ಪಿಬತಿ ದುಹನ್ ಪುರೋsನ್ತರಾತ್ಮಾ
ವೃದ್ಧಿಂ ಚ ವ್ರಜತಿ ಪಯಃ ಪ್ರತಿಪ್ರದ್ರೋಹಂ
ದೋಗ್ಧ್ಯಾಸ್ತೇ ದ್ರವ ಇಹ ಕುಂಡಲಿನ್ಯಪಾರಃ||18||

ತಾತ್ಪರ್ಯ :
ದೃಢವಾಗಿ ತನ್ನ ಕಾಲುಗಳ ಮೇಲೆ ನಿಂತಿರುವ ಕರುವು ಹಾಲನ್ನು ಕುಡಿಯುವುದು; ಅಂತರಂಗವೂ ಸಹ ಸತತವಾಗಿ ಹಾಲನ್ನು ಕುಡಿಯುವುದು. ಕರುವು ಹಾಲನ್ನು ಹಸುವಿನ ಕೆಚ್ಚಲಿನಿಂದ ಕುಡಿಯುತ್ತಿದ್ದಂತೆ ಕೆಚ್ಚಲಿನಲ್ಲಿ ಹಾಲು ಹೇಗೆ ಹೆಚ್ಚಾಗುವುದೋ ಹಾಗೇ ಓ ಕುಂಡಲಿನೀ ! ಹಾಲನ್ನು (ಅಮೃತವನ್ನು) ನೀಡಲು ನಿನ್ನ ಸಾಮರ್ಥ್ಯವು ಅಪಾರವಾದದ್ದು.

ವಿವರಣೆ :
ಕರುವಾದ ಅಗ್ನಿಯು ಅತ್ತಿತ್ತ ಚಲಿಸದ ಕಾಲುಗಳುಳ್ಳದ್ದಾಗಿ ಹಾಲನ್ನು ಕುಡಿಯುತ್ತದೆ. ಮುಂದುಗಡೆ ಅಂತರಾತ್ಮನು ಹಾಲನ್ನು ಕರೆಯುತ್ತಾ ಎಡೆಬಿಡದೆ ಕುಡಿಯುತ್ತಾನೆ. ಪ್ರತಿಯೊಂದು ಕರೆಯುವಿಕೆಯಲ್ಲೂ ಹಾಲು ಅಭಿವೃದ್ಧಿಯಾಗುತ್ತದೆ. ಹೀಗೆ ಹಾಲು ಹೆಚ್ಚಾಗುತ್ತದೆಯೇ ವಿನಾ ಕಡಿಮೆಯಾಗುವುದಿಲ್ಲ. ಕುಂಡಲಿನೀ ದೇವಿಯೆ ! ಕಾಮಧೇನುವಾದ ನಿನ್ನ ಹಾಲು ಅಪರಿಮಿತವಾಗಿರುತ್ತದೆ.

ಸಂಸ್ಕೃತದಲ್ಲಿ :
ಸೋಮಸ್ಯ ದ್ರವಮಿಮಮಾಹುರಂಬ ಕೇಚಿದ್
ದುಗ್ಧಾಬ್ಧೇರಮೃತರಸಂ ಗದಂತಿ ಕೇsಪಿ
ಬಾಷ್ಪಂ ಕೇsಪ್ಯಭಿದಧತೇ ತು ಕೌಲಕುಂಡಂ
ಪೀನೋಧಸ್ಸ್ರವಮಿತರೇ ಭ್ರಣಂತಿ ಧೇನೋಃ ||19||

ತಾತ್ಪರ್ಯ :
, ಮಾತೇ ! ಈ ರೀತಿಯ ಸ್ರವಿಸುವ ರಸವನ್ನು ಕೆಲವರು ಸಮರಸ ಎಂದರೆ, ಮತ್ತೆ ಕೆಲವರು ಇದನ್ನು ಚಂದ್ರನ ಕಿರಣಗಳಿಂದ ಒಸರುವ ಅಮೃತವೆನ್ನುವರು. ಇನ್ನೂ ಕೆಲವರು ಇದನ್ನು ಅಮೃತಮಥನದಲ್ಲಿ ಹೊರಬಂದ ಅಮೃತವೆನ್ನುವರು. ಕೆಲವು ಜನಗಳು ಇದನ್ನು ಕುಲಕುಂಡಾಗ್ನಿಯಿಂದ ಹೊರಬಂದ ಆವಿಯೆನ್ನುವರು; ಮತ್ತೆ ಕೆಲವರು ಇದನ್ನು ಕಾಮಧೇನುವಿನ ವಿಶಾಲವಾದ ಕೆಚ್ಚಲಿನಿಂದ ಹೊರಬಂದ ಸಿಹಿಯಾದ ಹಾಲೆಂದು ಸಂತೋಷದಿಂದ ಹೇಳುವರು.
ಬೇರೆ ಬೇರೆ ಜನಗಳು ಬೇರೆ ಬೇರೆ ರೀತಿಯಾಗಿ ಹೇಳಿದರೂ ಇಲ್ಲಿ ಸೂಚಿಸಿರುವ ವಸ್ತು ಮಾತ್ರ ಒಂದೇ.

ವಿವರಣೆ :
ತಾಯಿಯೆ ! ಈ ರಸವನ್ನು ಕೆಲವರು ಸೋಮಲತೆಯ ರಸವೆಂಬುದಾಗಿಯೂ, ಚಂದ್ರನ ಕಿರಣದ ಅಮೃತವೆಂಬುದಾಗಿಯೂ ಹೇಳುತ್ತಾರೆ. ಇನ್ನು ಕೆಲವರು ಕ್ಷೀರಸಮುದ್ರದ ಅಮೃತವೇ ಇದೆನ್ನುತ್ತಾರೆ. ಮತ್ತೆ ಕೆಲವರು ಮೂಲಾಗ್ನಿ ಕುಂಡದ ಹಬೆ ಅಥವಾ ಬಾಷ್ಪವೆಂಬುದಾಗಿ ಹೇಳುತ್ತಾರೆ. ಉಳಿದ ಕೆಲವರು ಕಾಮಧೇನುವಿನ ದಪ್ಪದಾದ ಕೆಚ್ಚಲಿನ ರಸವೆಂಬುದಾಗಿಯೂ ಹೇಳುತ್ತಾರೆ.

ಸಂಸ್ಕೃತದಲ್ಲಿ :
ಮೂಲೇ ತ್ವಂ ಜ್ವಲದಲನಪ್ರಕಾಶರೂಪಾ
ವೀಣಾಯಾಂ ಪ್ರಬಲಮಹಾಮದೋಷ್ಮರೂಪಾ
ಶೀರ್ಷಾಬ್ಜೇ ಸತತಗಲಸಸ್ವರೂಪಾ
ಭ್ರೂಮಧ್ಯೇ ಭವಸಿ ಲಸತ್ತಟಿಸ್ಸ್ವರೂಪಾ ||20||

ತಾತ್ಪರ್ಯ :
ಮೂಲಾಧಾರದಲ್ಲಿ ನೀನು ಹೊಂಬಣ್ಣದಿಂದ ಕೂಡಿದ ಪ್ರಜ್ವಲಿಸುವ ಬೆಂಕಿಯ ರೂಪದಲ್ಲಿರುವೆ; ಬೆನ್ನೆಲುಬಿನಲ್ಲಿ ನಿನ್ನ ಇರವನ್ನು ಆನಂದಿಸುವ ರೂಪದಲ್ಲಿ ಅನುಭವಿಸಬಹುದು; ಸಹಸ್ರಾರದಲ್ಲಿ ನೀನು ಸೋಮರಸದ ರೂಪದಲ್ಲಿ ಕಾಣುವೆ; ಆಜ್ಞಾಚಕ್ರದಲ್ಲಿ ನೀನು ತೀಕ್ಷ್ಣವಾದ ಕಣ್ಣುಗಳು ಕೋರೈಸುವ ಕೋಲ್ಮಿಂಚಿನ ರೂಪದಲ್ಲಿರುವೆ.

ವಿವರಣೆ :
ತಾಯಿಯೆ ! ನೀನು ಮೂಲಾಧಾರದಲ್ಲಿ ಪ್ರಕಾಶಿಸುವ ಅಗ್ನಿಯಂತೆ ಬೆಳಗುತ್ತೀಯೆ. ವೀಣಾರೂಪದಲ್ಲಿರುವ ಅಸ್ಥಿಖಂಡದಲ್ಲಿ ಪ್ರಬಲವಾದ ಮದದ ಹಬೆಯಂತೆ ಇರುತ್ತೀಯೆ. ಸಹಸ್ರಾರದಲ್ಲಿ ಎಡೆಬಿಡದೆ ಸ್ರವಿಸುತ್ತಿರುವ ರಸರೂಪದಿಂದ ಬೆಳಗುತ್ತೀಯೆ. ಹಾಗೆಯೇ ಅಜ್ಞಾಚಕ್ರದಲ್ಲಿ ಪ್ರಕಾಶಿಸುವ ಮಿಂಚಿನ ಸ್ವರೂಪವನ್ನು ಪಡೆಯುತ್ತೀಯೆ.

ಸಂಸ್ಕೃತದಲ್ಲಿ :
ಹಾರ್ದೇ ಚೇದವತರಸೀಹ ಪುಂಡರೀಕೇ
ಛಾಯಾವತ್ಸಕಲಮಪಿ ಪ್ರಪಶ್ಯಸಿ ತ್ವಂ
ಆರೂಢಾ ದಶಶತಪತ್ರಮದ್ರಿಪುತ್ರಿ
ಸ್ಯಾಶ್ಚೇತ್ರಂ ಭಣಸಿ ಜಗತ್ಸುಧಾಸಮುದ್ರಂ ||21||

ತಾತ್ಪರ್ಯ :
ಓ ಪಾರ್ವತಿ ! ನೀನು ಹೃದಯಕಮಲದ ಪ್ರದೇಶದಲ್ಲಿ ಅವತರಿಸುವೆ, ನೀನು ಬೇರೆಲ್ಲವನ್ನೂ ನಿನ್ನ ನೆರಳಿನಂತೆ ನೋಡುವೆ; ಸಹಸ್ರಾರದಲ್ಲಿ ನೀನು ಬಂದಾಗ, ಅಲ್ಲಿ ಎಲ್ಲವೂ ಅಮೃತದ ಸಮುದ್ರವಾಗುವುದು. ಆತ್ಮನು ಸರ್ವಾಂತರ್ಯಾಮಿಯಾದ್ದರಿಂದ, ನೋಡುವ ಎಲ್ಲವೂ ನೆರಳಿನಂತೆ ಕಾಣಿಸುವುದು.

ವಿವರಣೆ :
ದೇವಿಯೆ ! ನೀನು ಹೃದಯಕಮಲದಲ್ಲಿ ಇಳಿದರೆ ನೀನು ಜಗತ್ತನ್ನು ನೆರಳಿನಂತೆ ಅವಾಸ್ತವಿಕವನ್ನಾಗಿ ಕಾಣುತ್ತೀಯೆ. ಅದೇ ನೀನು ಸಹಸ್ರಾರ ಚಕ್ರವನ್ನು ಏರಿದರೆ, ಆಗ ಜಗತ್ತನ್ನು ಅಮೃತಸಾಗರದಂತೆ ಕಾಣುವೆ. ಆಗ ಜಗತ್ತೆಲ್ಲವೂ ನೆರಳಿನಂತೆ ಅವಾಸ್ತವವಾಗಿಯೂ, ಜಗತ್ತು ಆತ್ಮಮಯವಾಗಿರುವುದರಿಂದ ಅಮೃತಮಯವಾಗಿಯೂ ಕಾಣುತ್ತದೆ. ಜಗತ್ತೆಲ್ಲವೂ ಶಕ್ತ್ಯಾತ್ಮಕವಾಗಿ ಕಾಣುತ್ತದೆ.

ಸಂಸ್ಕೃತದಲ್ಲಿ :
ನೇತ್ರಾಭ್ಯಾಂ ಸರಸಿರುಹಚ್ಛದಾಯತಾಭ್ಯಾಂ
ವಕ್ತ್ರೇಣ ಪ್ರವಿಮಲಹಾಸಭಾಸುರೇಣ
ಪ್ರತ್ಯಕ್ಷಾ ಮಮ ಮನಸಃ ಪುರಃ ಪುರಂಧ್ರೀ
ಕಾಮಾರೇಃ ಪರಣಿತಮಸ್ಮದೀಯಭಾಗ್ಯಂ ||22||

ತಾತ್ಪರ್ಯ :
ಮಹಾದೇವನ ಪತ್ನಿಯೇ ! ನಿನ್ನ ಕಣ್ಣುಗಳು ಕಮಲಪುಷ್ಪದ ದಳಗಳಂತೆ ವಿಶಾಲವಾಗಿದ್ದು, ನಿನ್ನ ಮುಖದ ತುಂಬಾ ಪ್ರಕಾಶಮಾನವಾದ ಮಂದಹಾಸದಿಂದ ನನ್ನ ಮನದ ಮುಂದೆ ಕಾಣಿಸುವೆ. ನನ್ನ ಅದೃಷ್ಟ ಎಷ್ಟಿರಬಹುದು ! ನನ್ನ ಅರ್ಹತೆಯು ಅತ್ಯುತ್ತಮ ಫಲವನ್ನು ನೀಡಿದೆ.
ದೇವಿಯ ಭವ್ಯ ರೂಪದ ದರ್ಶನದ ಫಲಕ್ಕಿಂತ ಹೆಚ್ಚಿನ ಫಲವಿರುವುದಿಲ್ಲ.

ವಿವರಣೆ :
ಕಮಲದ ದಳದಂತೆ ವಿಸ್ತಾರವಾದ ಕಣ್ಣುಣ್ಣವಳಾಗಿಯೂ, ನಿರ್ಮಲವಾದ ನಗುವಿನಿಂದ ಬೆಳಗುವ ಮುಖವುಳ್ಳವಳಾಗಿಯೂ ಪರಶಿವನ ಪ್ರೇಯಸಿಯು ನನ್ನ ಮನಸ್ಸಿನ ಮುಂದುಗಡೆ ಬೆಳಗುತ್ತಿದ್ದಾಳೆ. ನಮ್ಮ ಅದೃಷ್ಟವು ಪಕ್ವವಾದಂತಾಯಿತು.

ಸಂಸ್ಕೃತದಲ್ಲಿ :
ಪುಣ್ಯಾನಾಂ ಪರಿಣತಿರೇವ ಭೂತಭರ್ತುಃ
ಸಿದ್ಧಾನಾಂ ಬಲನಿಧಿರೇವ ಕೋsಪಿ ಗೂಢಃ
ಭಕ್ತಾನಾಂ ದೃಢತರಿರೇವ ಶೋಕಸಿಂಧೌ
ಮಗ್ನಾನಾಂ ಮಮ ಜನನೀ ಮಹೀಧ್ರಪುತ್ರೀ ||23||

ತಾತ್ಪರ್ಯ :
ಶಂಕರ ಮಹಾದೇವನ ತಪಸ್ಸಿನ ಫಲವೇ ನನ್ನ ಮಾತೆ ಪಾರ್ವತಿ; ಸಿದ್ಧರ ಶಕ್ತಿಯ ರಹಸ್ಯವಾದ ಖಜಾನೆಯೇ ಮಾತೆ, ಹಾಗೂ ಅವಳು ಅಷ್ಟಸಿದ್ಧಿಗಳನ್ನು ಹೊಂದಿರುವಳು - ಗರಿಮಾ, ಮಹಿಮಾ ಇತ್ಯಾದಿ. ನೋವು ಹಾಗೂ ದುಃಖಗಳ ಸಾಗರದಲ್ಲಿ ಸಿಲುಕಿರುವ ಭಕ್ತರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಒಂದು ಶಕ್ತಿಶಾಲಿ ಹಾಗೂ ಗಟ್ಟಿಮುಟ್ಟಾದ ದೋಣಿಯೇ ಅವಳು.

ವಿವರಣೆ :
ನನ್ನ ತಾಯಿಯಾದ ಪರಶಿವನ ಪತ್ನಿಯಾದ ಪಾರ್ವತೀದೇವಿಯು ಪರಶಿವನ ಅದೃಷ್ಟಗಳ ಪರಿಪಕ್ವದೆಶೆಯೇ ಆಗಿದ್ದಾಳೆ. ತಪಸ್ಸಿನಿಂದಾದ ಫಲವೇ ಆಗಿದ್ದಾಳೆ. ಸಿದ್ಧಪುರುಷರಿಗೆ ಶಕ್ತಿಯ ಕೋಶವೇ ಆಗಿದ್ದಾಳೆ. ದುಃಖ ಸಮುದ್ರದಲ್ಲಿ ಮುಳುಗಿರುವ ಭಕ್ತರಿಗೆ ಆಕೆಯು ಅತ್ಯಂತ ಶಕ್ತಿಯುತವಾದ ನೌಕೆಯೇ ಆಗಿದ್ದಾಳೆ.

ಸಂಸ್ಕೃತದಲ್ಲಿ :
ಉದ್ಧರ್ತಂ ವಿನತಜನಂ ವಿಷಾದಗರ್ತಾತ್
ಸಂಸ್ಕರ್ತುಂ ಭುವನಹಿತಾಯ ಯೋಗಯುಕ್ತಂ
ಸಂಹರ್ತುಂ ಖಲಕುಲಮುದ್ಧತಂ ಚ ದರ್ಪಾದ್
ಭರ್ಗಸ್ಯ ಪ್ರಿಯತರುಣೀ ಸದಾ ಸದೀಕ್ಷಾ ||24||

ತಾತ್ಪರ್ಯ :
ಭರ್ಗ ಭಗವಾನನ ಸಂಗಾತಿಯು (ವಚನ ಪಾಲಿಸುವ) ಸದಾ ತನ್ನ ಭಕ್ತರನ್ನು ದುಃಖದ ಮಡುವಿನಿಂದ (ಮೇಲೆತ್ತಿ) ಉದ್ಧರಿಸುವ ವಚನ ಪಾಲಿಸುವಳು; ಪ್ರಪಂಚದ ಒಳಿತಿಗಾಗಿ ಯೋಗಿಗಳನ್ನು ಪವಿತ್ರೀಕರಿಸುವಳು; ಅಹಂಕಾರ ಮತ್ತು ಹಠಮಾರಿತನಗಳ ಸಹವಾಸದಿಂದ ಅವುಗಳೊಂದಿಗಿರುವ ಅಹಂಕಾರದಿಂದ ಬೇರ್ಪಡಿಸಿ ಅವನ್ನು ನಾಶಮಾಡುವೆ.

ವಿವರಣೆ :
ಶಿವನ ಪ್ರೇಯಸಿಯು ಭಕ್ತರನ್ನು ಕಾಪಾಡಲು, ಯೋಗನಿಷ್ಠೆಯಲ್ಲಿರುವ ಭಕ್ತರನ್ನು ಕಾಪಾಡಲು, ದುರಹಂಕಾರದಿಂದ ಕೂಡಿರುವ ದುರ್ಜನರನ್ನು ನಾಶಪಡಿಸಲು ಬದ್ಧಕಂಕಣಳಾಗಿದ್ದಾಳೆ.

ಸಂಸ್ಕೃತದಲ್ಲಿ :
ಮೃದ್ವೀಕಾಂ ಮಧುರತಯಾ ಸುಧಾಂ ಮಹಿಮ್ನಾ
ಗಾಂಭೀರ್ಯಾತ್ಸುರತಟಿನೀಂ ಚ ನಿರ್ಜಯಂತೀ
ಶರ್ವಾಣೀಚರಿತಪರಾ ಪ್ರಹರ್ಷಿಣೀನಾಂ
ಶ್ರೇಣೀಯಂ ಜಯತು ಗಣೇಶ್ವರೇಣ ಬದ್ಧಾ||25||                450

ತಾತ್ಪರ್ಯ :
ಶರ್ವಾಣಿಯ ಉದಾತ್ತ ಕಥೆಯನ್ನು ವಿವರಿಸುವುದು ಹಾಗೂ ಇದನ್ನು ಪ್ರಹರ್ಷಿನಿ ಛಂದಸ್ಸಿನಲ್ಲಿ ಕವಿ ಗಣಪತಿ ಮುನಿಗಳು ರಚಿಸಿರುವ ಈ ಶ್ಲೋಕಗಳ ಪುಷ್ಪಗುಚ್ಚಕ್ಕೆ ಜಯವಾಗಲಿ; ಈ ಶ್ಲೋಕಗಳು ಸಿಹಿಯಾದ ದ್ರಾಕ್ಷಿಗಳನ್ನೂ ಸಿಹಿಯಲ್ಲಿ ಸವಾಲು ಹಾಕುವುದು ಮತ್ತು ಮಹತ್ತಿನಲ್ಲಿ ಅಮೃತವನ್ನೂ ಮೀರಿಸುವುದು ಹಾಗೂ ದೇವಗಂಗೆಯನ್ನು ಆಳ ಹಾಗೂ ಘನತೆಯನ್ನೂ ಮೀರಿಸುವುದು.

ವಿವರಣೆ :
ಮಾಧುರ್ಯದಿಂದ ದ್ರಾಕ್ಷಾಫಲವನ್ನೂ ಮಹಿಮೆಯಿಂದ ಅಮೃತವನ್ನೂ ಗಾಂಭೀರ್ಯದಿಂದ ದೇವಗಂಗಾನದಿಯನ್ನೂ ಜಯಿಸಿರುವ ದುರ್ಗಾದೇವಿಯ ಚರಿತೆಯನ್ನೇ ಪ್ರಧಾನ ಕಥೆಯನ್ನಾಗಿ ಉಳ್ಳ ಪ್ರಹರ್ಷಿಣೀ ಎಂಬ ಛಂದಸ್ಸಿನಲ್ಲಿ ಬರೆಯಲ್ಪಟ್ಟಿರುವ ಈ ಪದ್ಯಗಳು ಜಯಿಸಿಲಿ.

ಹದಿನೆಂಟನೇ ಸ್ತಬಕವು ಮುಗಿಯಿತು

ಪುಷ್ಪಗುಚ್ಛ (ಸ್ತಬಕ) - 19
ಛಂದಸ್ಸು - ಪ್ರಮಾಣಿಕಾವೃತ್ತ
ಮಾತೆ ಲಲಿತಳ ಸೌಂದರ್ಯದ ವರ್ಣನೆ

ಸಂಸ್ಕೃತದಲ್ಲಿ :
ಪ್ರಫುಲ್ಲಕಲ್ಪಪಾದಪಪ್ರಸೂನಸದ್ಯಶೋಹರಂ
ಮಹಾರುಜಂ ಧುನೋತು ತೇ ಮಹೇಶಸುಂದರೀಸ್ಮಿತಂ ||1||

ತಾತ್ಪರ್ಯ :
ಮಹೇಶನ ಪತ್ನಿಯ ಮುಖದ ಮೇಲಿನ ಮಂದಹಾಸವು ಕಲ್ಪವೃಕ್ಷದ ತಾಜಾ ಮೊಗ್ಗಿನ ಹೊಳಪಿಗೂ ಸವಾಲನ್ನು ಹಾಕುವಂತಿದೆ, ಹಾಗೂ ಅದು ಪ್ರಾಪಂಚಿಕ ರೋಗಗಳಿಂದುಂಟಾಗುವ ದುಃಖಗಳನ್ನು (ಸಂಸಾರ) ದೂರಮಾಡಲಿ.

ವಿವರಣೆ :
ಅರಳಿರುವ ಕಲ್ಪವೃಕ್ಷದ ಪುಷ್ಪಗಳ ಒಳ್ಳೆಯ ಯಶಸ್ಸನ್ನು ಅಪಹರಿಸುವ ಮಹೇಶ್ವರಿಯ ಸುಂದರವಾದ ಮಂದಹಾಸವು ನನ್ನೆಲ್ಲಾ ರೋಗಗಳನ್ನೂ ಹೋಗಲಾಡಿಸಲಿ.

ಸಂಸ್ಕೃತದಲ್ಲಿ :
ಮುನೀಂದ್ರಮೂಲವೇದಿಭೋದನಂಜಯಪ್ರಬೋಧನಂ
ಯತೀಂದ್ರಹಾರ್ದಪೇಟಿಕಾ ಕವಾಟಬಂಧಭೇದನಂ ||2||

ತಾತ್ಪರ್ಯ :
ದೇವಿಯ ಆ ಮಂದಹಾಸವು ಸಾಧಕನ ಮೂಲಾಧಾರವನ್ನೇ ತನ್ನ ಯಜ್ಞವೇದಿಕೆಯನ್ನಾಗಿ ಹಾಗೂ ಅದರಲ್ಲಿ ಅಗ್ನಿಯನ್ನು ಹರಡಿ ಮತ್ತು ಅದು ಯೋಗಿಯ ಹೃದಯವೆಂಬ ಘಟ್ಟಿಯಾದ ಸಣ್ಣ ಪೆಟ್ಟಿಗೆಯ ಮುಚ್ಚಳವನ್ನು ಒಡೆಯುವ ಸಾಮರ್ಥ್ಯವುಳ್ಳದ್ದು.

ವಿವರಣೆ :
ಮುನೀಂದ್ರರ ಮೂಲಾಧಾರವೆಂಬ ವೇದಿಕೆಯಲ್ಲಿರುವ ಅಗ್ನಿಯನ್ನು ಪ್ರಜ್ವಲಿಸುವಂತೆ, ಯತೀಂದ್ರರ ಹೃದಯವೆಂಬ ಪೆಟ್ಟಿಗೆಯ ಬಾಗಿಲನ್ನು ತೆರೆಯುವಂತೆ ದೇವಿಯ ಮಂದಹಾಸವು ಮಾಡಲಿ.

ಸಂಸ್ಕೃತದಲ್ಲಿ :
ಯಥಾವಿಧಿಕ್ರಿಯಾಪರದ್ವಿಜಾತಿಚಿತ್ತಶೋಧನಂ
ಮಮಾಂಬಿಕಾಸ್ಮಿತಂ ಭವತ್ವಘಪ್ರತಾಪರೋಧನಂ ||3||

ತಾತ್ಪರ್ಯ :
ಆ ಮಂದಹಾಸಾವು  ಧರ್ಮ ಗ್ರಂಥಗಳಲ್ಲಿ ನಿಗದಿಪಡಿಸಿರುವ ಕರ್ತವ್ಯಗಳನ್ನು ಚಾಚೂತಪ್ಪದೇ ಪಾಲಿಸಿಕೊಂಡು ಬರುವ ಧಾರ್ಮಿಕ ಶ್ರದ್ಧೆಯುಳ್ಳ ಬ್ರಾಹ್ಮಣರ ಮನಸ್ಸನ್ನು ಶುದ್ಧಿಗೊಳಿಸುವ ಸಾಮರ್ಥ್ಯವನ್ನು ಹೊಂದಿರುವುದು; ಆ ಮಂದಹಾಸವು ನನ್ನಿಂದ ಬಲವಂತವಾಗಿ ಮಾಡಿಸುವ ಪಾಪಗಳನ್ನು ತಡೆಯಲಿ.

ವಿವರಣೆ :
ಶಾಸ್ತ್ರಕ್ರಮದಲ್ಲಿ ನಿತ್ಯಕರ್ಮಾನುಷ್ಠಾನಗಳನ್ನು ಮಾಡುವ ಬ್ರಾಹ್ಮಣೋತ್ತಮರ ಮನಸ್ಸನ್ನು ಪರಿಶುದ್ಧಗೊಳಿಸುವ ದೇವಿಯ ಮಂದಸ್ಮಿತವು ನನ್ನ ಪಾಪಗಳ ಪ್ರತಾಪವನ್ನು ಹೋಗಲಾಡಿಸಿಲಿ.

ಸಂಸ್ಕೃತದಲ್ಲಿ :
ಸುವರ್ಣಸಾಲಭಂಜಿಕಾ ಚರೇವ ಶೋಭಯಾsಧಿಕಾ
ಅತೀವ ಮಾರ್ದವಾನ್ವಿತಾ ನವೇವ ಪುಷ್ಪಿತಾ ಲತಾ ||4||

ತಾತ್ಪರ್ಯ :
ಚಲಿಸುವ ಬಂಗಾರದ ವಿಗ್ರಹದಂತೆ ಅವಳು ಭವ್ಯವಾಗಿರುವಳು, ತಾಜಾ ಹೂವುಗಳಿಂದ ಕೂಡಿರುವ ಮೃದುವಾದ ಬಳ್ಳಿಯಂತೆ ಅಸಾಧಾರಣವಾದ ಮೃದುತ್ವವನ್ನು ಹೊಂದಿರುವಳು.

ವಿವರಣೆ :
ಸಂಚರಿಸುವ ಚಿನ್ನದ ಗೊಂಬೆಯಂತೆ ಅತ್ಯಂತ ಪ್ರಕಾಶಮಾನವಾದ ಅತ್ಯಂತ ಮೃದುವಾದ ಪುಷ್ಠಿತವಾದ ಬಳ್ಳಿಯಂತಿರುವ (ದೇವಿಯು). ನನ್ನಿಂದ ಚಿಂತಿಸಲ್ಪಡಲಿ.

ಸಂಸ್ಕೃತದಲ್ಲಿ :
ಸುಪರ್ವಮೌಲಿರತ್ನಭಾ ವಿರಾಜಿಹೇಮಪಾದುಕಾ
ಮರಾಲಿಕಾನಿಮಂತ್ರಕಪ್ರಶಸ್ತರತ್ನ
ನೂಪುರಾ||5||

ತಾತ್ಪರ್ಯ :
ದೇವಾನು ದೇವತೆಗಳು (ವಿನಯ ಪೂರ್ವಕವಾಗಿ ಬಗ್ಗಿ ಪೂಜಿಸುವ) ಧರಿಸುವ ಕಿರೀಟದಲ್ಲಿನ ಅತ್ಯಮೂಲ್ಯವಾದ ವಜ್ರಾಭರಣಗಳಿಂದ ಪ್ರಕಾಶಿಸುವ ಬೆಳಕಿನಿಂದ ದೇವಿಯು ಧರಿಸಿರುವ ಬಂಗಾರದ ಪಾದುಕೆಗಳು ಹೊಳೆಯುತ್ತಿರುವುದು; ಮುತ್ತು, ರತ್ನ, ಹವಳಗಳಿಂದ ಕೂಡಿದ ಆಕರ್ಷಕವಾದ ಕಾಲಂದಿಗೆಯನ್ನು ತನ್ನ ಮಧುರವಾದ ನಾದದಿಂದ ಹಂಸಗಳು ಆಹ್ವಾನಿಸುತ್ತಿವೆ.

ವಿವರಣೆ :
ದೇವತೆಗಳ ಕಿರೀಟಗಳಲ್ಲಿರುವ ರತ್ನಗಳಿಂದ ಪ್ರಕಾಶಿಸುವ ಪಾದುಕೆಗಳಿಂದ ಕೂಡಿರುವ, ಹಂಸಗಳನ್ನು ಆಹ್ವಾನಿಸುವ ಶ್ರೇಷ್ಠವಾದ ರತ್ನಖಚಿತವಾದ ಕಾಲಂದುಗೆಗಳಿಂದ ಕೂಡಿರುವ ದೇವಿಯು,

ಸಂಸ್ಕೃತದಲ್ಲಿ :
ವಲಕ್ಷದೀಧಿತಿಪ್ರಭಾವಿಶೇಷಹೃನ್ನಖಾವಲೀ
ಮುನೀಂದ್ರಶುದ್ಧಮಾನಸಪ್ರಮೇಯಪಾದಸೌಷ್ಠವಾ ||6||

ತಾತ್ಪರ್ಯ :
ಚಂದ್ರನ ಕಿರಣಗಳಂತೆ ಮಿನುಗುತ್ತಿರುವ ಹಾಗೂ ಮೃದುವಾದ ದೇವಿಯ ಪಾದದಲ್ಲಿನ ಉಗುರುಗಳು ಅವಳ ಪಾದದ ಪಾವಿತ್ರ್ಯತೆಯು ಸಾಧಕನ ಪರಿಶುದ್ಧವಾದ ಮನಸ್ಸಿನಲ್ಲಿ ಗುರುತಿಸಲ್ಪಡುತ್ತದೆ.

ವಿವರಣೆ :
ಬೆಳ್ಳಗಿರುವ ಚಂದ್ರನಂತೆ ಪ್ರಕಾಶಿಸುವ ಉಗುರುಗಳ ಸಾಲುಳ್ಳ, ಮುನೀಂದ್ರರ ಶುದ್ಧವಾದ ಮನಸ್ಸಿನಿಂದ ತಿಳಿಯಲ್ಪಡಬಹುದಾದ ಪಾದಗಳ ಮಾರ್ದವವುಳ್ಳ (ದೇವಿಯು),

ಸಂಸ್ಕೃತದಲ್ಲಿ :
ಘನೀಭವತ್ತಟಿತ್ಪ್ರಭಾಪ್ರವಾಹಕಲ್ಪಜಂಘಿಕಾ
ಮತಂಗಜೇಂದ್ರನಾಸಿಕಾ ಮನೋಜ್ಞಸಕ್ಥಿಶೋಭಿನೀ ||7||

ತಾತ್ಪರ್ಯ :
ಘಟ್ಟಿಯಾದ ಮಿಂಚಿನಂತೆ ಕಂಗೊಳಿಸುವುದು ದೇವಿಯ ಪಾದಗಳು; ಆನೆಯ ಮೂಗಿನಂತೆ (ಆಕಾರದಲ್ಲಿ)ಅವಳ ತೊಡೆಗಳು ಸುಂದರವಾಗಿರುವುದು.

ವಿವರಣೆ :
ಒತ್ತಟ್ಟಿಗೆ ಸೇರಿಸುವ ಮಿಂಚಿನ ಪ್ರಭೆಗಳ ಪ್ರವಾಹದಂತೆ ಇರುವ ಮೊಣಕಾಲುಗಳುಳ್ಳ, ಶ್ರೇಷ್ಠವಾದ ಆನೆಯ ಸೊಂಡಿಲಿನಂತಿರುವ ತೊಡೆಗಳುಳ್ಳ (ದೇವಿಯು),

ಸಂಸ್ಕೃತದಲ್ಲಿ :
ಪ್ರಸೂನಸಾಯಕಾಗಮಪ್ರವಾದಚುಂಚುಕಾಂಚಿಕಾ
ವಿಶಾಲಕೇಶಚುಂಬಿತೋಲ್ಲಸನ್ನಿತಂಬಮಂಡಲಾ ||8||

ತಾತ್ಪರ್ಯ :
ಅವಳ ಮೇಖಲಾ ಹಾಗೂ ವಜ್ರಗಳಿಂದ ಕೂಡಿದ ಸೊಂಟಪಟ್ಟಿಯು ಶೃಂಗಾರಭರಿತ ಕಾಮತಂತ್ರವನ್ನು ಉಪದೇಶಿಸುವಂತಿದೆ. ಅವಳ ಸೊಂಟವು ಅದರ ಮೇಲೆ ಹರಡಿಕೊಂಡಿರುವ ಉದ್ದನೆಯ ಕಪ್ಪುಕೂದಲಿನಿಂದ ಹೊಳೆಯುತ್ತಿರುವುದು.

ವಿವರಣೆ :
ಮನ್ಮಥನ ವೇದವನ್ನು ಅಂದರೆ ಕಾಮಶಾಸ್ತ್ರವನ್ನು ಪ್ರಚಾರಮಾಡುವ ಡಾಬಿನಿಂದ ಕೂಡಿರುವ ವಿಸ್ತಾರವಾದ ತಲೆಗೂದಲುಗಳಿಂದ ಚುಂಬಿಸಲ್ಪಟ್ಟ ನಿತಂಬ ಬಿಂಬವುಳ್ಳ (ದೇವಿಯು),

ಸಂಸ್ಕೃತದಲ್ಲಿ :
ಅಜಾಂಡಪಿಂಡಸಂಹತಿಪ್ರಪೂರ್ಣಕುಕ್ಷಿಶಾಲಿನೀ
ಅಪಾರದಿವ್ಯಕಾಂತಿವಾರ್ನಿಧಾನನಾಭಿದೀರ್ಘಿಕಾ ||9||

ತಾತ್ಪರ್ಯ :
ಅವಳ ಹೊಟ್ಟೆಯು (ಉದರ) ಸೂಕ್ಷ್ಮ ಮತ್ತು ಸಮಷ್ಟಿಯಿಂದ ಕೂಡಿದ ಅನೇಕ ಬ್ರಹ್ಮಾಂಡಗಳಿಂದ ತುಂಬಿರುವುದು. ಅವಳ ನಾಭಿಯು ದಿವ್ಯ ಪ್ರಭೆಯಿಂದ ಕೂಡಿದ ನೀರಿನಿಂದ ತುಂಬಿದ ಭಾವಿಯಂತೆ ಇರುವುದು.

ವಿವರಣೆ :
ಬ್ರಹ್ಮಾಂಡಪಿಂಡಗಳ ಒಕ್ಕೂಟದಿಂದ, ಪೂರ್ಣವಾದ ಉದರದಿಂದ ಕೂಡಿದ ಅನಂತವಾದ ದಿವ್ಯವಾದ ಕಾಂತಿಯೆಂಬ ನೀರಿಗೆ ಮೂಲಸ್ಥಾನವಾಗಿರುವ ನಾಭಿಯಿಂದ ಕೂಡಿರುವ (ದೇವಿಯು),

ಸಂಸ್ಕೃತದಲ್ಲಿ :
ಬಿಸಪ್ರಸೂನಸಾಯಕಚ್ಛುರಾಭರೋಮರಾಜಿಕಾ
ಜಗತ್ತ್ರಯೀವಸಜ್ಜನೋಪಜೀವ್ಯದುಗ್ಧಭೃತ್ಕುಚಾ ||10||

ತಾತ್ಪರ್ಯ :
ಅವಳ ಉದರದಿಂದ ಉದ್ಭವಿಸಿರುವ ರೋಮಗಳ ಸಾಲುಗಳು ಮನ್ಮಥನ ಚಾಕುವಿನಂತಿರುವುದು. ಅವಳ ಸ್ತನಗಳಲ್ಲಿ ತುಂಬಿರುವ ಅಮೃತ ಸದೃಶ ಹಾಲು ಮೂರು ಲೋಕಗಳನ್ನೂ ಸಲಹುವಷ್ಟಿರುವುದು.

ವಿವರಣೆ :
ಮನ್ಮಥನ ಈಟಿಯಂತಿರುವ ಸಣ್ಣದಾದ ಕೂದಲುಗಳಸಾಲುಳ್ಳ, ಮೂರು ಲೋಕಗಳಲ್ಲಿ ವಾಸಮಾಡುವ ಜನರಿಗೆ ಬದುಕಾಗಿರುವ ಹಾಲುಳ್ಳ ಕುಚಗಳುಳ್ಳ (ದೇವಿಯು),

ಸಂಸ್ಕೃತದಲ್ಲಿ :
ಮಹೇಶಕಂಠಬಂಧಕಪ್ರಶಸ್ತಬಾಹುವಲ್ಲರೀ
ಸಮಸ್ತವಿಷ್ಟಪಾಭಯಪ್ರದಾಯಿಪಾಣಿಪಂಕಜ ||11||

ತಾತ್ಪರ್ಯ :
ಅವಳ ಬಳ್ಳಿಯಂಥ ಕೈಗಳು ಮಹೇಶನನ್ನು ಗಾಢವಾಗಿ ಅಪ್ಪುವಂತೆ ಕಂಗೊಳಿಸುವುದು. ಅವಳ ಅಂಗೈಗಳು ಸುಂದರವಾದ ಕಮಲ ಪುಷ್ಪದಂತಿದ್ದು ಅದು ಸಮಸ್ತ ವಿಶ್ವಕ್ಕೂ ರಕ್ಷಣೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

ವಿವರಣೆ :
ಮಹೇಶ್ವರನ ಕುತ್ತಿಗೆಯನ್ನು ಆಲಂಗಿಸುವ, ಪ್ರಶಸ್ತವಾದ ತೋಳುಗಳುಳ್ಳ, ಸಮಸ್ತ ಪ್ರಪಂಚಕ್ಕೂ, ಅಭಯವನ್ನು ನೀಡುವ ಕಮಲದಂತಿರುವ ಕೈಯುಳ್ಳ (ದೇವಿಯು),

ಸಂಸ್ಕೃತದಲ್ಲಿ :
ವಿಲೋಲಹಾರಮೌಕ್ತಿಕಪ್ರತಾನಸಂವದತ್ಸ್ಮಿತಾ
ವಿಶುದ್ಧಸುಂದರಸ್ಮಿತಪ್ರಕಾಶಭಾಸಿ
ತಾಂಬರಾ||12||

ತಾತ್ಪರ್ಯ :
ದೇವಿಯ ಸುಂದರವಾದ ಹಾಗೂ ಸೌಮ್ಯವಾದ ಮುಗುಳ್ನಗೆಯು ಅಗಾಧವಾದ ಆಕಾಶವನ್ನು ಪ್ರಕಾಶವನ್ನಾಗಿ ಮಾಡುವುದು ಹಾಗೂ ಆ ಮುಗುಳ್ನಗುವು ಅವಳ ಕುತ್ತಿಗೆಯಲ್ಲಿ ಕಂಗೊಳಿಸುತ್ತಿರುವ ಸುಂದರವಾದ ಮುತ್ತಿನ ಹಾರದಲ್ಲಿನ ಮುತ್ತುಗಳೊಂದಿಗೆ ಸ್ನೇಹಪೂರ್ವಕವಾಗಿ ಸಂಭಾಷಿಸುತ್ತಿರುವಂತಿದೆ.

ವಿವರಣೆ :
ಚಲಿಸುತ್ತಿರುವ ಕಂಠಮಾಲೆಯ ಮುತ್ತು ಗಳಿಂದ, ಸಾಮರಸ್ಯ ಹೊಂದಿರುವ ಮಂದಸ್ಮಿತವುಳ್ಳ ಶುದ್ಧವಾದ ಮಂದಹಾಸದ ಪ್ರಕಾಶದಿಂದ ಬೆಳಗುತ್ತಿರುವ ಆಕಾಶವುಳ್ಳ (ದೇವಿಯು),

ಸಂಸ್ಕೃತದಲ್ಲಿ :
ಸುಕೋಮಲೋಷ್ಠಕಂಪನಪ್ರಭೀತದುರ್ಜಯಾಸುರಾ
ಸುಯುಕ್ತಕುಂದಕುಟ್ಮಲಪ್ರಕಾಶದಂತಪಂಕ್ತಿಕಾ ||13||

ತಾತ್ಪರ್ಯ :
ಅಂದವಾಗಿ ಜೋಡಿಸಿರುವ ಮಲ್ಲಿಗೆಯ ಮೊಗ್ಗುಗಳನ್ನು ಹೋಲುವಂತೆ ದೇವಿಯ ಪರಿಪೂರ್ಣವಾದ ದಂತಪಂಕ್ತಿಗಳಿಂದ, ಅವಳು ತನ್ನ ಕೇಳತುಟಿಯನ್ನು ಕೋಪದಿಂದ ಸ್ವಲ್ಪವಾಗಿ ಅಲುಗಾಡಿಸುವುದರ ಮೂಲಕ ಸಮಸ್ತ ದಾನವರನ್ನೂ ಗಡಗಡನೆ ನಡುಗಿಸುವಂತೆ ಮಾಡುವಳು.

ವಿವರಣೆ :
ಮೃದುವಾದ ಅಧರಗಳ ಕಂಪನದಿಂದ, ಬೆದರಿದ ಭಯಂಕರವಾದ ಅಸುರವರ್ಗವುಳ್ಳ, ಒಟ್ಟಾಗಿ ಕಟ್ಟಿದ ಮಲ್ಲಿಗೆ ಮೊಗ್ಗಿನಂತೆ ಪ್ರಕಾಶಮಾನವಾದ ಹಲ್ಲುಗಳ ಸಾಲುಳ್ಳ (ದೇವಿಯು),

ಸಂಸ್ಕೃತದಲ್ಲಿ :
ಶರತ್ಸುಧಾಂಶುಮಂಡಲಪ್ರಭಾವಿಗರ್ಹಣಾನನಾ
ಸುಧಾಮರಂದವಜ್ಜಪಾಸುಮೋಹಮಾಧರಾಧರಾ ||14||

ತಾತ್ಪರ್ಯ :
ಅಮೃತದಿಂದ ತುಂಬಿರುವ ಜಪಾ ಕುಸುಮದಂತಿರುವ ಆಕರ್ಷಕವಾದ ಕೆಂಪಾದ ತುಟಿಗಳಿಂದ, ಅವಳ ಭವ್ಯವಾದ ವದನವು ಶರತ್ಕಾಲದ ಪೂರ್ಣಚಂದ್ರನನ್ನೂ ನಾಚಿಸುವುದು.

ವಿವರಣೆ :
ಶರತ್ಕಾಲದ ಚಂದ್ರನ ಕಾಂತಿಯನ್ನು ತನ್ನ ಮುಖಕಾಂತಿಯಿಂದ ತಿರಸ್ಕರಿಸಿರುವ, ಅಮೃತದಂತಿರುವ ಹಾಗೂ ಜಪಾ ಕುಸುಮದಂತಿರುವ ಆಧಾರವುಳ್ಳ (ದೇವಿಯು),

ಸಂಸ್ಕೃತದಲ್ಲಿ :
ತಿಲಪ್ರಸೂನಚಾರುತಾsಪಹಾಸಿಭಾಸಿನಾಸಿಕಾ
ನವೀನಭಾಭನಾಸಿಕಾವಿಲಂಬಿದಿವ್ಯಮೌಕ್ತಿಕಾ ||15||

ತಾತ್ಪರ್ಯ :
ನಕ್ಷತ್ರದಂತೆ ಹೊಳೆಯುವ ಮೂಗುತಿಯೊಂದಿಗೆ, ಅವಳ ನಾಸಿಕವು ತಿಲ ಪುಷ್ಪದಂತೆ ಅದರ ಸುಂದರಾಕೃತಿಯನ್ನೂ ಮೀರಿಸುವುದು.

ವಿವರಣೆ :
ಎಳ್ಳು ಹೂವಿನಂತೆ ಸೌಂದರ್ಯವನ್ನು ಹಾಸ್ಯಮಾಡುವ ಪ್ರಕಾಶಮಾನವಾದ ಮೂಗುಳ್ಳ, ಆಗತಾನೇ ಹುಟ್ಟಿರುವ ನಕ್ಷತ್ರದಂತೆ ಕಾಂತಿಯುಳ್ಳ ಮೂಗಿನ ತುದಿಯಲ್ಲಿ ತೂಗುತ್ತಲಿರುವ ಮೂಗುತಿಯುಳ್ಳ (ದೇವಿಯು),

ಸಂಸ್ಕೃತದಲ್ಲಿ :
ವಿಶುದ್ಧಗಂಡಬಿಂಬಿತಸ್ವರೂಪರತ್ನಕುಂಡಲಾ
ಮಹಾಮಹಸ್ತರಂಗಿತಪ್ರಭಾವಶಾಲಿಲೋಚನಾ ||16||

ತಾತ್ಪರ್ಯ :
ಅವಳ ಹೊಳೆಯುವ ಕೆನ್ನೆಗಳು ಅವಳ ಕರ್ಣಾಭರಣದಲ್ಲಿರುವ ವಜ್ರದ ಕಾಂತಿಯನ್ನು ಪ್ರತಿಫಲಿಸುತ್ತದೆ. ಅವಳ ಭಾವಪ್ರಚೋದಕ ಕಣ್ಣುಗಳು ತೇಜಸ್ಸಿನಿಂದ ಕೂಡಿದ ಶಕ್ತಿಯುತವಾದ ಕಿರಣಗಳಿಂದ ತುಂಬಿ ತುಳುಕುತ್ತಿರುವುದು.

ವಿವರಣೆ :
ಸ್ವಚ್ಛವಾದ ಕಪೋಲಗಳಲ್ಲಿ ಪ್ರತಿಬಿಂಬಿತವಾದ ರತ್ನಕುಂಡಲುಗಳುಳ್ಳ ಅತ್ಯಧಿಕವಾದ ತೇಜಸ್ಸುಗಳ ಅಲೆಗಳಿಂದ ಪ್ರಭಾವಶಾಲಿಯಾದ ಕಣ್ಣುಗಳುಳ್ಳ (ದೇವಿಯು),

ಸಂಸ್ಕೃತದಲ್ಲಿ :
ದಲಾಂತರಸ್ಥಯಾಮಿನೀಪ್ರಭುಪ್ರಭಾಲಿಕೆಥಲೀ
ಮಯೂರಬರ್ಹಗರ್ಹಣಪ್ರಕೃಷ್ಟಕೇಶಭಾಸಿನೀ ||17||

ತಾತ್ಪರ್ಯ :
ಅವಳ ಮುಖದ ಸುತ್ತಲಿನ ಸುರಳಿಗಳು ಸಹಸ್ರಾರವನ್ನು ಅಲಂಕರಿಸಿರುವ ಚಂದ್ರನ ಬೆಳಕಿನಿಂದ ಮತ್ತಷ್ಟು ಹೊಳೆಯುತ್ತಿರುವುದು. ಅವಳ ಕೂದಲಿನ ಗುಂಗುರುಗಳು ನವಿಲಿನ ದಟ್ಟವಾದ ಗರಿಗಳಂತೆ ಅತಿ ಸುಂದರವಾಗಿ ಕಂಗೊಳಿಸುವುದು.

ವಿವರಣೆ :
ಸಹಸ್ರದಳದ ಒಳಗಿರುವ ಚಂದ್ರನ ಪ್ರಭೆಯಂತಿರುವ ಮುಖಕಾಂತಿಯುಳ್ಳ ನವಿಲುಗಳ ಗರಿಯನ್ನು ನಿಂದಿಸುವ ಕೇಶಪಾಶಗಳಿಂದ ಪ್ರಕಾಶಿಸುವ (ದೇವಿಯು),

ಸಂಸ್ಕೃತದಲ್ಲಿ :
ದಿವಾಕರಾಯುತೋಜ್ವಲಾ ಹಿಮಾಂಶುಲಕ್ಷಶೀತಲಾ
ತಟಿತ್ಸಹಸ್ರಭಾಸುರಾ ನಿರಂಕಚಂದ್ರಶೇಖರಾ ||18||

ತಾತ್ಪರ್ಯ :
ದೇವಿಯು ತನ್ನ ಶಿಖೆಯಲ್ಲಿ ಕಳಂಕರಹಿತ ಚಂದ್ರನು ಸಾವಿರ ಸೂರ್ಯರನ್ನು ಒಟ್ಟಿಗೆ ಇರುವಂತೆ ಭವ್ಯವಾಗಿ ಕಂಗೊಳಿಸಿ, ಹಾಗೂ ಲಕ್ಷ ಲಕ್ಷ ಚಂದ್ರರನ್ನು ಒಂದೆಡೆ ಸೇರಿಸಿ ಅದರಿಂದ ಹೊರಬರುವ ಅತ್ಯಂತ ತಣ್ಣನೆಯ ಮತ್ತು ಮನೋಹರವಾಗಿ; ಬೆಳಕಿನ ಅನೇಕ ಕಿರಣಗಳು ಒಂದೆಡೆ ಸೇರಿದಂತೆ ಭವ್ಯವಾಗಿ ಕಂಗೊಳಿಸುವಳು.

ವಿವರಣೆ :
ಸಾವಿರಾರು ಸೂರ್ಯರಂತೆ ಪ್ರಕಾಶಿಸುವ, ಲಕ್ಷಾಂತರ ಚಂದ್ರರಂತೆ ತಂಪಾಗಿರುವ, ಸಾವಿರಾರು ಮಿಂಚಿನ ಪ್ರಭೆಯಂತೆ ಪ್ರಕಾಶಮಾನಳಾದ ಕಳಂಕವಿಲ್ಲದ ಚಂದ್ರನನ್ನು ಅಲಂಕಾರವಾಗುಳ್ಳ (ದೇವಿಯು),

ಸಂಸ್ಕೃತದಲ್ಲಿ :
ನಭೋಂತರಾಲಚಾರಿಣೀ ಮಹಾವಿಚಿತ್ರಕಾರಿಣೀ
ಕುಲಾಗ್ನಿಕುಂಡಶಾಯಿನೀ ಜಗತ್ಕಥಾವಿಧಾಯಿನೀ ||19||

ತಾತ್ಪರ್ಯ :
ಆಕಾಶದಲ್ಲಿ ಚಲಿಸುತ್ತಾ, ಅತಿ ಅದ್ಭುತವಾದ ಸಾಹಸಗಳನ್ನು ಸಾಧಿಸುತ್ತಾ, ಕುಲಕುಂಡದ ಅಗ್ನಿಯಲ್ಲಿ ನಿದ್ರಿಸುತ್ತಾ, ದೇವಿಯು ವಿಶ್ವದ ಸಮಸ್ತ ಕೆಲಸಗಳನ್ನು ಅತಿ ಸುಲಭವಾಗಿ ಕಾರ್ಯಗತಗೊಳಿಸುವಳು.

ವಿವರಣೆ :
ಆಕಾಶ ಮಧ್ಯದಲ್ಲಿ ಸಂಚರಿಸುವ ಅತ್ಯಾಶ್ಚರ್ಯಕರವಾದ ಕೆಲಸಗಳನ್ನು ಮಾಡುವ ಮೂಲಾಗ್ನಿಕುಂಡದಲ್ಲಿ ಮಲಗಿರುವ ಜಗತ್ತಿನ ಕಾಯಕ ವಿಧಾನಗಳನ್ನು ನಡೆಸುವ (ದೇವಿಯು),

ಸಂಸ್ಕೃತದಲ್ಲಿ :
ನಭಸ್ತಲೇ ಬಲೇಶ್ವರೀ ಧರಾತಲೇ ಕ್ರಿಯೇಶ್ವರೀ
ದಿವಾಕರೇ ವಿಭೇಶ್ವರೀ ಸುಧಾಕರೇ ರಸೇಶ್ವರೀಬ ||20||

ತಾತ್ಪರ್ಯ :
ಆಕಾಶದ ಭಾಗದಲ್ಲಿ ಎಲ್ಲ ಶಕ್ತಿಗಳಿಗೂ ಅವಳು ಏಕೈಕ ಒಡತಿ. ಭೂಮಿಯ ಮೇಲಿನ ಎಲ್ಲ ಕ್ರಿಯೆಗಳಿಗೆ ಸಕ್ರಿಯೆಗೊಳಿಸುವ ಏಕೈಕ ವ್ಯಕ್ತಿಯೇ ದೇವಿ. ಅವಳೇ ಸೂರ್ಯನಲ್ಲಿನ ಪ್ರಕಾಶದ ಏಕೈಕ ಮೂಲ ಹಾಗೂ ಚಂದ್ರನಲ್ಲಿನ ರಸಗಳ ಏಕೈಕ ಮೂಲವೇ ದೇವಿಯು.
ದೈವ ಶಕ್ತಿಯು ಬಲ, ಕ್ರಿಯ, ವಿಭ ಮತ್ತು ರಸಗಳು,ಈ ಶ್ಲೋಕದ ಕ್ರಮವಾದ ಸ್ಥಳಗಳಲ್ಲಿ
ರೂಪವನ್ನು ಪಡೆಯುವುದು.

ವಿವರಣೆ :
ಅಕಾಶದೇಶದಲ್ಲಿ ಸಮಸ್ತ ವಿಧವಾದ ಬಲಕ್ಕೂ ಈಶ್ವರಿಯೂ, ಭೂಮಿಯಲ್ಲಿರುವ ಸಮಸ್ತ ಕ್ರಿಯೆಗಳಿಗೂ ಈಶ್ವರಿಯೂ, ಸೂರ್ಯನಲ್ಲಿ ಸಮಸ್ತ ಕಾಂತಿಗಳಿಗೂ ಈಶ್ವರಿಯೂ ಚಂದ್ರನಲ್ಲಿ ರಸಗಳ ಈಶ್ವರಿಯಾಗಿಯೂ ಇರುವ (ದೇವಿಯು).

ಸಂಸ್ಕೃತದಲ್ಲಿ :
ಮಹೇಶವೇಶ್ಮದೀಪಿಕಾ ಜಗತ್ತ್ರಯಪ್ರಮಾಪಿಕಾ
ಅಶೇಷಶೀರ್ಷಶಾಸಿನೀ ಸಮಸ್ತಹೃನ್ನಿವಾಸಿನೀ ||21||

ತಾತ್ಪರ್ಯ :
ಮಹೇಶನ ಮನೆಯಲ್ಲಿ ದೀಪವನ್ನು ಹಚ್ಚುವವಳೇ ದೇವಿಯು; ಮೂರು ಲೋಕದಲ್ಲಿನ ಜೀವಿಗಳನ್ನು ಸಾಕ್ಷಾತ್ಕಾರದೆಡೆಗೆ ಪ್ರಚೋದಿಸುವವಳೇ ಅವಳು; ಸಮಸ್ತ ಮಾನವರಲ್ಲಿ ಅವರ ಸಹಸ್ರಾರದಲ್ಲಿ ಕುಳಿತು ಎಲ್ಲರನ್ನೂ ಆಳುವವಳೇ ಅವಳು; ಎಲ್ಲರ ಹೃದಯದಲ್ಲಿ ನೆಲಸಿರುವವಳೇ ಆ ದೇವಿ.

ವಿವರಣೆ :
ಮಹೇಶ್ವರನ ಭವನದ ದೀಪವಾಗಿರುವ, ಮೂರೂ ಲೋಕಗಳಿಗೆ ಜ್ಞಾನವನ್ನು ನೀಡುವ ಎಲ್ಲರ ತಲೆಯಲ್ಲಿ ಅಂದರೆ ಸಹಸ್ರಾರದಲ್ಲಿ ವಾಸಿಸುವ ಹಾಗೂ ಎಲ್ಲರ ಹೃದಯದಲ್ಲೂ ವಾಸಿಸುವ (ದೇವಿಯು),

ಸಂಸ್ಕೃತದಲ್ಲಿ :
ಗುಣಸ್ತವೇ ಗುಣಸ್ತವೇ ಗುಣಪ್ರಕರ್ಷದಾಯಿನೀ
ವಿಚಿಂತನೇ ವಿಚಿಂತನೇ ವಿಶಿಷ್ಟಶಕ್ತಿಧಾಯಿನೀ ||22||

ತಾತ್ಪರ್ಯ :
ಪ್ರತಿಬಾರಿ ಭಕ್ತನು ದೇವಿಯನ್ನು ಪ್ರಾರ್ಥಿಸಿದಾಗಲೂ ಅವಳು ಭಕ್ತನಿಗೆ ವಿಶೇಷವಾದ ಗುಣಗಳನ್ನು ದಯಪಾಲಿಸುವಳು; ಹಾಗೇ ಪ್ರತಿಬಾರಿ ಧ್ಯಾನಿಸಿದಾಗಲೂ ಅವಳನ್ನು ಧ್ಯಾನಿಸುವವನು ಶಕ್ತಿಶಾಲಿಯಾಗುವನು.

ವಿವರಣೆ :
ಪ್ರತಿಯೊಂದು ಗುಣಗಳ ಸ್ತೋತ್ರದಲ್ಲೂ ಸ್ತೋತ್ರಮಾಡುವವರ ಗುಣಗಳನ್ನು ಹೆಚ್ಚುಮಾಡುವ, ಪ್ರತಿಯೊಂದು ಧ್ಯಾನದಲ್ಲೂ ಅಧಿಕವಾದ ಶಕ್ತಿಯನ್ನು ನೀಡುವ (ದೇವಿಯು),

ಸಂಸ್ಕೃತದಲ್ಲಿ :
ಭ್ರಮಾಕುಲೇನ ದುಸ್ತರಾ ಭವಾಲಸೇನ ದುರ್ಗಮಾ
ಅಮಂತ್ರಕೇಣ ದುರ್ಭರಾ ಜಗತ್ತ್ರಯೇಣ ದುರ್ಜಯಾ ||23||

ತಾತ್ಪರ್ಯ :
ಗೊಂದಲದಲ್ಲಿರುವ ಮನುಷ್ಯನು ದೇವಿಯನ್ನು ಪಡೆಯಲಾರ. (ಕೇವಲ ಸ್ಥಿರ ಮನಸ್ಸುಳ್ಳವರು ಮಾತ್ರ ದೇವಿಯನ್ನು ಪಡೆಯಬಹುದು). ಪ್ರಾಪಂಚಿಕ ಅನಂದಗಳಲ್ಲಿ ಮುಳುಗಿರುವವನು ದೇವಿಯನ್ನು ಪಡೆಯಲಾರ. ಮಂತ್ರದ ಸಹಾಯವಿಲ್ಲದೆ ಅವಳನ್ನು ಸಾಕ್ಷಾತ್ಕರಿಸಿಕೊಳ್ಳಲಾಗುವುದಿಲ್ಲ. ಆದ್ದರಿಂದಲೇ ಅವಳು ವಿಶ್ವದಲ್ಲಿ ಅಜೇಯಳಾಗಿರುವಳು.

ವಿವರಣೆ :
ವೀಕ್ಷಿಪ್ತಚಿತ್ತದಿಂದ (ಮನಸ್ಸು ಹತೋಟಿಯಲ್ಲಿಲ್ಲದವನು) ದಾಟಲಾಗದ, ಸಂಸಾರಿಗಳಿಂದ ಶ್ರಮದಿಂದ ಹೊಂದಲ್ಪಡುವ (ಸೋಮಾರಿತನವಿಲ್ಲದವನಿಂದ ಹೊಂದಲ್ಪಡುವ), ಮಂತ್ರಬಲವಿಲ್ಲದವನಿಂದ ಭರಿಸಲಾಗದಿರುವ, ಮೂರೂ ಲೋಕಗಳಿಂದ ಜಯಿಸಲಾಗದಿರುವ (ದೇವಿಯು),

ಸಂಸ್ಕೃತದಲ್ಲಿ :
ಸುವರ್ಣಚೇಲಧಾರಿಣೀ ಸಮಸ್ತಮೋದಕಾರಿಣೀ
ವಿಲಾಸಿನೀ ನಿರಾಮಯಾ ವಿಚಿಂತ್ಯತಾಂ ಮನಸ್ತ್ವಯಾ ||24||

ತಾತ್ಪರ್ಯ :
ಬಂಗಾರದ ವಸ್ತ್ರಗಳನ್ನು ಧರಿಸಿ, ದೇವಿಯು ಪ್ರತಿಯೊಬ್ಬರನ್ನೂ ಸಂತೋಷಗೊಳಿಸುತ್ತಾಳೆ. ಆರೋಗ್ಯಕರವಾದ ಶರೀರ ಹಾಗೂ ಮನಸ್ಸುಗಳನ್ನು ಕೊಟ್ಟು ಎಲ್ಲರಲ್ಲೂ ಕ್ರೀಡಿಸುತ್ತಾಳೆ. ಓ ಮನಸ್ಸೇ ! ಈ ಮಹಾನ್ ತತ್ತ್ವದ ಬಗ್ಗೆ ಸದಾ ಚಿಂತಿಸು.

ವಿವರಣೆ :
ಚಿನ್ನದ ವಸ್ತ್ರವನ್ನುಟ್ಟಿರುವ, ಸಮಸ್ತರಿಗೂ ಸಂತೋಷವನ್ನೀಯುವ, ಯಾವ ರೋಗವಿಲ್ಲದ, ವಿಲಾಸವುಳ್ಳ ದೇವಿಯನ್ನು ಎಲೈ ಮನಸ್ಸೇ ನಿನ್ನಿಂದ ಧ್ಯಾನಮಾಡಲ್ಪಡಲಿ.

ಸಂಸ್ಕೃತದಲ್ಲಿ :
ಪದಾಬ್ಜವಂದಿನಃ ಕವೇರಿಯಂ ಪ್ರಮಾಣಿಕಾವಲೀ
ಮಹೇಶಮಾನಸೇಶ್ವರೀ ಗೃಹೇ ಮಹಾಯ ಕಲ್ಪತಾಂ ||25||              475

ತಾತ್ಪರ್ಯ :
ದೇವಿಯ ಪಾದಗಳಲ್ಲಿ ನಮ್ರ ಸೇವಕನಾದ ಕವಿಯು ಪ್ರಾಮಾಣಿಕ ಛಂದಸ್ಸಿನಲ್ಲಿ ರಚಿಸಿದ ಈ ಶ್ಲೋಕಗಳು ಮಹಾದೇವನನ್ನು ಸಂತೋಷಪಡಿಸುವ ಅವಳನ್ನು ಆಕರ್ಷಿಸಲಿ.

ವಿವರಣೆ :
ಪಾದಾರವಿಂದಗಳ ಸ್ತುತಿಪಾಠಕನಾದ, ಕವಿಯಾದ ಗಣಪತಿಯು ಪ್ರಾಮಾಣಿಕಾ ಎಂಬ ಛಂದಸ್ಸಿನಲ್ಲಿ ರಚಿಸಿರುವ ಪದ್ಯಗಳ ಸಾಲು ಮಹೇಶ್ವರನ ಹೃದಯೇಶ್ವರಿಯ ಮನೆಯಲ್ಲಿ ಉತ್ಸವವಾಗಿ ಆಗಲಿ.

ಹತ್ತೊಂಬತ್ತನೇ ಸ್ತಬಕವು ಮುಗಿಯಿತು

ಪುಷ್ಪಗುಚ್ಛ (ಸ್ತಬಕ) - 20
ಛಂದಸ್ಸು - ಮಣಿಬಂಧವೃತ್ತ
ಸರ್ವಸಾರಮಯಿಯ ವರ್ಣನೆ

ಈ ಸ್ತಬಕದಲ್ಲಿ ಸಮಸ್ತ ಅಸ್ತಿತ್ವಗಳ ಸಾರವಾದ ದೇವಿಯನ್ನು ವರ್ಣಿಸಲಾಗಿದೆ. ಧರ್ಮ ಗ್ರಂಥಗಳಲ್ಲಿ ಪ್ರತಿಪಾದಿಸಲಾಗಿರುವ ಹಾಗೂ ಸಾಧಕರಿಗೆ ಮೋಕ್ಷವನ್ನು ತಲುಪಲು ಸಹಾಯಕವಾದ ದೇವಿಯ ಅಮೋಘ ರೂಪಗಳನ್ನು ಚಿತ್ರಿಸಲಾಗಿದೆ.

ಸಂಸ್ಕೃತದಲ್ಲಿ :
ಪ್ರೀತಿವಿಕಾಸೇ ಸ್ವಲ್ಪತಮೋ ರೋಷವಿಶೇಷೇ ಭೂರಿತರಃ
ಅದ್ಭುತಹಾಸೋ ವಿಶ್ವಸುವೋ ರಕ್ಷತು ಸಾಧುಂ ಹಂತು ಖಲಂ ||1||

ತಾತ್ಪರ್ಯ :
ದೇವಿಯ ಅದ್ಭುತವಾದ ಮಂದಹಾಸವು (ಅದರಿಂದ ಹೊರಬಂದಿರುವ ವಿಶ್ವವು) ಸಜ್ಜನರನ್ನು ರಕ್ಷಿಸಿ, ದುರ್ಜನರನ್ನು ನಾಶಪಡಿಸಲಿ. ಆ ಮಂದಹಾಸವು ಅದ್ಭುತವಾದದ್ದು ಏಕೆಂದರೆ ಅದು ಪ್ರೀತಿ ಹಾಗೂ ವಿಶ್ವಾಸವನ್ನು ಅರ್ಥೈಸುವಾಗ, ಅದೇ ಮಂದಹಾಸವು ಕೆಟ್ಟದ್ದನ್ನು ನಾಶಮಾಡುವಾಗ ತೋರುವ ಕ್ರೋಧದ ಸಮಯದಲ್ಲಿ ಭೀಕರವಾಗಿರುವುದು.

ವಿವರಣೆ :
ಪ್ರೀತಿಯ ಅವಿಷ್ಕಾರದಲ್ಲಿ ಮಂದವಾಗಿಯೂ, ಕೋಪದ ಅಭಿವ್ಯಕ್ತಿಯಲ್ಲಿ ಹೆಚ್ಚಾದ ಜಗನ್ಮಾತೆಯ ಆಶ್ಚರ್ಯಕರವಾದ ನಗುವು ಸಾಧುಜನರನ್ನು ರಕ್ಷಿಸಲಿ ಹಾಗೂ ದುಷ್ಟರನ್ನು ಶಿಕ್ಷಿಸಲಿ.

ಸಂಸ್ಕೃತದಲ್ಲಿ :
ಸಜ್ಜನಚಿತ್ತಾನಂದಕರೀ ಸಂಶ್ರಿತಪಾಪವ್ರಾತಹರೀ
ಲೋಕಸವಿತ್ರೀ ನಾಕಚರೀ ಸ್ತಾನ್ಮಮ ಭೂಯೋ ಭದ್ರಕರೀ ||2||

ತಾತ್ಪರ್ಯ :
ಸ್ವರ್ಗದ ಮೇಲಿನ ಕ್ಷೇತ್ರದಲ್ಲಿ ಸಂಚರಿಸುವ ಹಾಗೂ ಸಜ್ಜನರ ಮನಸ್ಸನ್ನು ಸಂತೋಷಪಡಿಸುವ ವಿಶ್ವ ಮಾತೆಯು ಯಾರು ಅವಳಲ್ಲಿ ಆಶ್ರಯವನ್ನು ಬಯಸಿ ಬರುವರೋ ಅವರ ಪಾಪಗಳ ಸರಣಿಯನ್ನು ನಾಶಪಡಿಸಿ ಅವರನ್ನು ಆಶೀರ್ವದಿಸುವಳು.

ವಿವರಣೆ :
ಸಜ್ಜನರ ಹೃದಯಕ್ಕೆ ಆನಂದ ಉಂಟುಮಾಡುವವಳೂ, ಆಶ್ರಿತರ ಪಾಪಸಮೂಹವನ್ನು ನಾಶಮಾಡುವವಳೂ, ಜಗನ್ಮಾತೆಯಾದ, ಸ್ವರ್ಗದಲ್ಲಿ ಸಂಚರಿಸುವ ದೇವಿಯು ಮಂಗಳವನ್ನುಂಟುಮಾಡಲಿ.

ಸಂಸ್ಕೃತದಲ್ಲಿ :
ಅರ್ಚನಕಾಲೇ ರೂಪಗತಾ ಸಂಸ್ತುತಿಕಾಲೇ ಶಬ್ದಗತಾ
ಚಿಂತನಕಾಲೇ ಪ್ರಾಣಗತಾ ತತ್ತ್ವವಿಚಾರೇ ಸರ್ವಗತಾ ||3||

ತಾತ್ಪರ್ಯ :
ಪೂಜೆಯ ಘಳಿಗೆಯಲ್ಲಿ ಅವಳು ಪ್ರತಿಬಿಂಬದಲ್ಲಿ ನೆಲಸಿರುವಳು;
ವರ್ಣಿಸುವ ಘಳಿಗೆಯಲ್ಲಿ ಅವಳು ಶಬ್ದವಾಗುವಳು;
ಆಲೋಚನೆಯ ಘಳಿಗೆಯಲ್ಲಿ ಅವಳು ಜೀವನದೊಂದಿಗೆ ಒಂದಾಗುವಳು;
ಚಿಂತಿಸುವ ಘಳಿಗೆಯಲ್ಲಿ ಅವಳು ಎಲ್ಲವೂ ಆಗುವಳು.
ಪ್ರತಿಯೊಂದು ಮಾರ್ಗವೂ ಅನುಗುಣವಾದ ಸತ್ಯದೆಡೆಗೆ ಮಾರ್ಗದರ್ಶಿಸುತ್ತವೆ.”
-        ಎಮ್.ಪಿ.ಪಂಡಿತ್.

ವಿವರಣೆ :
ಪೂಜೆಮಾಡುವ ಕಾಲದಲ್ಲಿ, ಪೂಜಿಸಲ್ಪಡುವ ಮೂರ್ತಿಯಲ್ಲಿರುವವಳೂ, ಸ್ತೋತ್ರಮಾಡುವಾಗ ಶಬ್ದರೂಪದಲ್ಲಿರುವ, ಧ್ಯಾನಮಾಡುವಾಗ ಪ್ರಾಣದಲ್ಲಿರುವವಳೂ, ತತ್ತ್ವವಿಚಾರದಲ್ಲಿ ಎಲ್ಲೆಡೆ ಇರುವವಳೂ ಆಗಿರುತ್ತಾಳೆ.

ಸಂಸ್ಕೃತದಲ್ಲಿ :
ಉಜ್ವಲರೂಪೇ ನೃತ್ಯಕರೀ ನಿಷ್ಪ್ರಭರೂಪೇ ಸುಪ್ತಿಕರೀ
ಗೋಪಿತರುಪೇ ಸಿದ್ಧಿಕರೀ ಗೋಚರರೂಪೇ ಬಂಧಕರೀ ||4||

ತಾತ್ಪರ್ಯ :
ನೀನು ಭವ್ಯವಾದ ರೂಪದಲ್ಲಿ ನೃತ್ಯಗಾರ್ತಿ;
ಮಂದವಾದ ರೂಪದಲ್ಲಿ ನೀನು ಹೊಳಪಿಲ್ಲದ ನಿಷ್ಕ್ರಿಯಳಾಗಿರುವೆ;
ಅವ್ಯಕ್ತ ರೂಪದಲ್ಲಿ ನೀನು ಅದ್ಭುತ ಕಾರ್ಯಗಳನ್ನೆಸಗುವೆ;
ವಿಷಯಾಸಕ್ತ ವಸ್ತುಗಳಲ್ಲಿ ನೀನು ಬಂಧನವನ್ನುಂಟುಮಾಡುವೆ.
ಅವಳು ಸರ್ವಾಂತರ್ಯಾಮಿ. ಒಳ್ಳೆಯದು, ಕೆಟ್ಟದ್ದು, ಪ್ರಕಾಶಮಾನವಾದದ್ದು ಮತ್ತು ಮಂಕಾಗಿರುವ ಎಲ್ಲದರಲ್ಲೂ ಅವಳೇ ಇರುವಳು. ಅವಳು ಸರ್ವವ್ಯಾಪಿ. ಈ ಸಮಸ್ತ ಪ್ರಪಂಚವು ಅವಳ ಸಮಗ್ರ ರೂಪ.

ವಿವರಣೆ :
ಪ್ರಕಾಶಮಾನವಾದ ರೂಪದಲ್ಲಿ ನೃತ್ಯಮಾಡುವವಳೂ, ಶೋಭೆಯು ಕಡಿಮೆಯಾದ ರೂಪದಲ್ಲಿ ಶೋಭಾರೂಪವಾದ ನಿದ್ರೆಮಾಡುವವಳೂ, ಅದೃಷ್ಟವಾದ ರೂಪದಲ್ಲಿ ಸಿದ್ಧಿಯನ್ನುಂಟುಮಾಡುವವಳೂ, ಸ್ಥೂಲರೂಪದಲ್ಲಿ ಬಂಧನವನ್ನುಂಟುಮಾಡುವವಳಾಗಿದ್ದೀಯೆ.

ಸಂಸ್ಕೃತದಲ್ಲಿ :
ಅಂಬರದೇಶೇ ಶಬ್ದವತೀ ಪಾವಕತಾತೇ ಸ್ಪರ್ಶವತೀ
ಕಾಂಚನವೀರ್ಯೇ ರೂಪವತೀ ಸಾಗರಕಾಂಚ್ಯಾಂ ಗಂಧವತೀ ||5||

ತಾತ್ಪರ್ಯ :
ಆಕಾಶದಲ್ಲಿ ನೀನು ಶಬ್ದ ರೂಪದಲ್ಲಿ ಪ್ರಕಟಗೊಳ್ಳುವೆ; ವಾಯುವಿನಲ್ಲಿ ನೀನು ಸ್ಪರ್ಶರೂಪವನ್ನು ತಾಳುವೆ; ಅಗ್ನಿಯಲ್ಲಿ ನೀನು ಅಮೋಘವಾದ ಬಣ್ಣದಲ್ಲಿ ಕಾಣಿಸುವೆ; ಭೂಮಿಯಲ್ಲಿ ನೀನು ಗಂಧವಾಗಿ (ಸುವಾಸನೆ) ಇರುವೆ.

ವಿವರಣೆ :
ಆಕಾಶದಲ್ಲಿ ಶಬ್ದವೆಂಬ ಗುಣವಿದೆ. ದೇವಿಯು ಅಕಾಶಾತ್ಮಳಾಗಿ ಶಬ್ದವನ್ನು ಪಡೆದಿದ್ದಾಳೆ. ಆಕಾಶದಲ್ಲಿನ ಶಬ್ದವೇ ದೇವಿಯು. ವಾಯುವಿನಲ್ಲಿರುವ ಸ್ಪರ್ಶಗುಣವು ದೇವಿಗೆ ಸೇರಿದುದು.

ಸಂಸ್ಕೃತದಲ್ಲಿ :
ಅಪ್ಸ್ವಮಲಾಸು ಸ್ಪಷ್ಟರಸಾ ಚಂದ್ರವಿಭಾಯಾಂ ಗುಪ್ತರಸಾ
ಸಂಸ್ಕೃತಿಭೋಗೇ ಸರ್ವರಸಾ ಪೂರ್ಣಸಮಾಧಾವೇಕರಸಾ ||6||

ತಾತ್ಪರ್ಯ :
ಶುದ್ಧವಾದ ಜಲದಲ್ಲಿ ದೇವಿಯು ರಸರೂಪದಲ್ಲಿ ಇರುವಳೆಂಬುದು ಸರ್ವವಿದಿತ; ಚಂದ್ರನ ಬೆಳಕಿನಲ್ಲಿ ಅವಳು ಅಡಗಿರುವ ರಸ; ಜೀವನದ ಆನಂದದ ಕ್ಷಣಗಳಲ್ಲಿ ಅವಳು ಸಂತೋಷದಾಯಿನಿ; ಸಂಪೂರ್ಣವಾದ ಭಾವಪರವಶತೆಯಲ್ಲಿ ಅವಳು ಏಕೈಕ ಆನಂದ.
ಉಪನಿಷತ್ತಿನಲ್ಲಿ ಹೇಳಿರುವಂತೆ -”ರಸೋ ವೈ ಸಃ” - ದೈವತ್ವವು ಅನಂದವಾಗಿ ಎಲ್ಲ ಅಸ್ತಿತ್ವಗಳನ್ನೂ ಒಟ್ಟಾಗಿ ಇರಿಸುವ ಒಂದು ರಸ. ಈ ಮೂಲ ಆನಂದವು ಅನೇಕ ವಿಧವಾದ ಸೃಷ್ಟಿಯ ರೂಪಗಳಾದ - ಶಕ್ತಿಯ ಆನಂದ, ಜ್ಞಾನ, ಸೌಂದರ್ಯ, ಸಾಮರಸ್ಯ, ಸೇವೆ, ಪ್ರೀತಿ ಇತ್ಯಾದಿ ರೂಪಗಳಲ್ಲಿ ಅಭಿವ್ಯಕ್ತಿಗೊಳ್ಳುವುದು. ಈ ರಸಗಳು ಕ್ರಿಯಾಶೀಲವಾಗಲು ಬಾಹ್ಯದ ಅಂಶಗಳನ್ನು ಅವಲಂಬಿಸಿದೆ. ಆದರೆ, ಯಾವುದರ ಮೇಲೂ ಅವಲಂಬಿತವಾಗದ ಈ ಎಲ್ಲ ರಸಗಳ ಹಿಂದಿರುವ ಮೂಲ ರಸವು ಏಕೈಕವಾದದ್ದು. ಈ ಕಾರಣರಹಿತವಾದ ಆನಂದವನ್ನು ಸಮಸ್ತ ಇಂದ್ರಿಯಗಳನ್ನೂ ಒಳಕ್ಕೆಳೆದ ಹಾಗೂ ಅರಿವನ್ನು ಸಂಪೂರ್ಣವಾಗಿ ಸ್ವಾಭಾವಿಕವಾದ ಸಮಾಧಿ ಸ್ಥಿತಿಯಲ್ಲಿ ಅನುಭವಿಸಲಾಗುವುದು. (ಪುಟ ಸಂಖ್ಯೆ.75 - “ಅಡೋರೇಷನ್ ಆಫ್ ದಿ ಡಿವೈನ್ ಮದರ್”, ಎಮ್. ಪಿ.ಪಂಡಿತ್)

ವಿವರಣೆ :
ನಿರ್ಮಲವಾದ ನೀರಿನಲ್ಲಿ ಸ್ಪಷ್ಟವಾದ ರಸದವಳಾಗಿ (ಮಧುರ ರಸವಾಗಿ), ಚಂದ್ರನ ಕಾಂತಿಯಲ್ಲಿ ಅಭಿವ್ಯಕ್ತವಿಲ್ಲದ ರಸವುಳ್ಳವಳಾಗಿ, ಲೋಕವಿಷಯವಾದ ಭೋಗಗಳಲ್ಲಿ ಶೃಂಗಾರವೇ ಮೊದಲಾದ ಸರ್ವರಸಸ್ವರೂಪವಾಗಿಯೂ, ಯಾವ ಅಲೆಯೂ ಇಲ್ಲದ ಸಮಾಧಿಯಲ್ಲಿ ಅನಂದಸ್ವರೂಪಳಾಗಿರುತ್ತೀಯೆ.

ಸಂಸ್ಕೃತದಲ್ಲಿ :
ಚಕ್ಷುಷಿ ದೃಷ್ಟಿಶ್ಯಾತತಮಾ ಚೇತಸಿ ದೃಷ್ಟಿಶ್ಚಿತ್ರತಮಾ
ಆತ್ಮನಿ ದೃಷ್ಟಿಶ್ಯುದ್ಧತಮಾ ಬ್ರಹ್ಮಣಿ ದೃಷ್ಟಿಃ ಪೂರ್ಣತಮಾ ||7||

ತಾತ್ಪರ್ಯ :
ಕಣ್ಣುಗಳೊಳಗಿನ ಪ್ರಖರವಾದ ಬೆಳಕೇ ದೇವಿಯು, ಮನಸ್ಸಿನ ಕಣ್ಣಿನಲ್ಲಿ ಅವಳು ಅದ್ಭುತವಾದ ಸೃಷ್ಟಿ; ಅಂತರ್ನೋಟದಲ್ಲಿ ಅವಳು ಪರಿಶುದ್ಧಳು; ಬ್ರಹ್ಮನಲ್ಲಿ ಅವಳು ಸಂಪೂರ್ಣ ಹಾಗೂ ಪರಿಪೂರ್ಣಳು.
ಅಂತರ್ನೋಟದಲ್ಲಿ ಅವಳು ಪರಿಶುದ್ಧಳು ಏಕೆಂದರೆ ಅವಳು ಸ್ವಾಭಾವಿಕ. ಬ್ರಹ್ಮನಲ್ಲಿ ಅವಳು ಪರಿಪೂರ್ಣಳು, ಏಕೆಂದರೆ, ಅವನೇ ಎಲ್ಲದಕ್ಕೂ ಸಾಕ್ಷಿ.

ವಿವರಣೆ :
ಕಣ್ಣುಗಳಲ್ಲಿ ತೀವ್ರವಾದ ದೃಷ್ಟಿಯುಳ್ಳವಳಾಗಿ, ರೂಪದಲ್ಲಿ, ಮನಸ್ಸಿನಲ್ಲಿ ಆಶ್ಚರ್ಯಕರವಾದ ಮಾನಸೀದೃಷ್ಟಿಯವಳಾಗಿ, ಆತ್ಮನಲ್ಲಿ ಸಹಜವಾದ ದೃಷ್ಟಿಯವಳಾಗಿ, ಬ್ರಹ್ಮನಲ್ಲಿ ಎಲ್ಲವನ್ನೂ ನೋಡುವವಳಾಗಿರುತ್ತೀಯೆ.

ಸಂಸ್ಕೃತದಲ್ಲಿ :
ಶೀರ್ಷಸರೋಜೇ ಸೋಮಕಲಾ ಭಾಲಸರೋಜೇ ಶಕ್ರಕಲಾ
ಹಾರ್ದಸರೋಜೇ ಸೂರ್ಯಕಲಾ ಮೂಲಸರೋಜೇ ವಹ್ನಿಕಲಾ ||8||

ತಾತ್ಪರ್ಯ :
ಸಹಸ್ರಾರದಲ್ಲಿ (ಶಿರದಲ್ಲಿ) ಅವಳು ಸೋಮಕಲಾ;
ಅಜ್ಞಾಚಕ್ರದಲ್ಲಿ (ಹಣೆಯಲ್ಲಿ) ಅವಳು ಇಂದ್ರಕಲಾ;
ಹೃದಯಭಾಗದಲ್ಲಿ ಅವಳು ಸೂರ್ಯಕಲಾ;
ಮೂಲಾಧಾರದಲ್ಲಿ ಅವಳು ವನ್ಹೀಕಲಾ.
ಇವುಗಳನ್ನು ತಂತ್ರಶಾಸ್ತ್ರದ ಗ್ರಂಥಗಳಲ್ಲಿ ಮತ್ತಷ್ಟು ಸ್ಪಷ್ಟಪಡಿಸಲಾಗಿದೆ.

ವಿವರಣೆ :
ಸಹಸ್ರಾರಕಮಲದಲ್ಲಿ ಚಂದ್ರಕಲಾಸ್ವರೂಪಳಾಗಿಯೂ, ಅಜ್ಞಾಚಕ್ರಕಮಲದಲ್ಲಿ (ಹುಬ್ಬುಗಳ ಮಧ್ಯದಲ್ಲಿ) ಇಂದ್ರಕಲೆಯಿಂದ ವಿದ್ಯುತ್ತಾಗಿಯೂ, ಹೃದಯಕಮಲದಲ್ಲಿ ಸೂರ್ಯಮಂಡಲಾತ್ಮಕಳಾಗಿ, ಮೂಲಾಧಾರಕಮಲದಲ್ಲಿ ಅಗ್ನಿಜ್ವಾಲಾಸ್ವರೂಪಳಾಗಿರುತ್ತೀಯೆ.

ಸಂಸ್ಕೃತದಲ್ಲಿ :
ಸ್ಥೂಲಶರೀರೇ ಕಾಂತಿಮತೀ ಪ್ರಾಣಶರೀರೇ ಶಕ್ತಿಮತೀ
ಸ್ವಾಂತಶರೀರೇ ಭೋಗವತೀ ಬುದ್ಧಿಶರೀರೇ ಯೋಗವತೀ ||9||

ತಾತ್ಪರ್ಯ :
ಸ್ಥೂಲ ರೂಪದಲ್ಲಿ ಅವಳು ಪ್ರಕಾಶಮಾನಳಾಗಿರುವಳು;
ಪ್ರಾಣಶರೀರದಲ್ಲಿ ಅವಳು ಜೀವಶಕ್ತಿಯಾಗಿರುವಳು;
ಮನಸ್ಸಿನಲ್ಲಿ ಅವಳು ಅನಂದಗೊಳಿಸುವವಳು;
ಬುದ್ಧಿಯಲ್ಲಿ ಅವಳು ಯೋಗದ ಶಕ್ತಿಯಾಗಿರುವಳು.
ಮನಸ್ಸು ನೋವು ಹಾಗೂ ನಲಿವುಗಳನ್ನು ಆನಂದಿಸುತ್ತದೆ; ಮನಸ್ಸಿಗಿಂತ ಸೂಕ್ಷ್ಮವಾದ ಬುದ್ಧಿಶಕ್ತಿಯು ವೀಕ್ಷಕ ಮತ್ತು ಸ್ವಯಂ ಸ್ವಾವಲೋಕನ.

ವಿವರಣೆ :
ಪಂಚಭೌತಿಕ ಶರೀರದಲ್ಲಿ ಕಾಂತಿಸ್ವರೂಪಳಾಗಿಯೂ, ಭೌತಿಕವಾದ ಶರೀರವನ್ನು ಧರಿಸುವ ಪ್ರಾಣಮಯವಾದ ದೇಹದಲ್ಲಿ ಶಕ್ತಿಸ್ವರೂಪಳಾಗಿಯೂ, ಮನೋರೂಪವಾದ ಶರೀರದಲ್ಲಿ ಭೋಗಸ್ವರೂಪಳಾಗಿಯೂ, ಮನಸ್ಸಿಗಿಂತ ಸೂಕ್ಷ್ಮವಾದ ಬುದ್ಧಿಸ್ವರೂಪದಲ್ಲಿ (ಆತ್ಮಸ್ವರೂಪನಿಷ್ಠ) ಯೋಗವತಿಯಾಗಿ ಅಗ್ನಿಜ್ವಾಲಾರೂಪದಲ್ಲಿಯೂ ಇರುತ್ತೀಯೆ.

ಸಂಸ್ಕೃತದಲ್ಲಿ :
ಸಾರಸಂಬಂಧೋರುಜ್ಜ್ವಲಭಾ ಕೈರವಬಂಧೋಃ ಸುನದರಭಾ
ವೈದ್ಯುತವಹ್ನೇರದ್ಭುತಭಾ ಭೌಮಕೃಶಾನೋರ್ದೀಪಕಭಾ ||10||

ತಾತ್ಪರ್ಯ :
ಸೂರ್ಯನಲ್ಲಿ ಅವಳು ಅತ್ಯಂತ ಪ್ರಕಾಶಮಾನಳು. ಚಂದ್ರನಲ್ಲಿ ಅವಳು ಅತ್ಯಂತ ಆಕರ್ಷಕಳಾಗಿ ಹೊಳೆಯುವಳು. ಮಿಂಚಿನ ಗೆರೆಗಳಲ್ಲಿ ಅವಳು ಅಚ್ಚರಿ ಹುಟ್ಟಿಸುವ ಬೆಳಕು. ಬೆಂಕಿಯಲ್ಲಿ ಬೆಳಗುವ ಬೆಳಕೇ ಅವಳು.

ವಿವರಣೆ :
ಸೂರ್ಯನ ಪ್ರಕಾಶಮಾನವಾದ ಕಾಂತಿಯು, ಚಂದ್ರನ ಸುಂದರವಾದ ಶೋಭೆಯು, ಮಿಂಚಿನಲ್ಲಿರುವ ಅಗ್ನಿಯ ಆಶ್ಚರ್ಯಕರವಾದ ಪ್ರಕಾಶವು, ಭೂಮಿಯಲ್ಲಿರುವ ಅಗ್ನಿಯು, ಪ್ರಕಾಶಮಾನವಾದ ಪ್ರಭೆಯು ನೀನಾಗಿದ್ದೀಯೆ.

ಸಂಸ್ಕೃತದಲ್ಲಿ :
ಯೋಧವರಾಣಾಮಾಯುಧಭಾ ಯೋಗಿವರಾಣಾಮೀಕ್ಷಣಭಾ
ಭೂಮಿಪತೀನಾಮಾಸನಭಾ ಪ್ರೇಮವತೀನಾಮಾನನಭಾ ||11||

ತಾತ್ಪರ್ಯ :
ಯೋಧರ ಅತ್ಯುತ್ತಮಗಳಲ್ಲಿ ನೀನು ಹೊಳೆಯುವ ಆಯುಧ. ಯೋಗಿಗಳ ಅತ್ಯುತ್ತಮದಲ್ಲಿ ನೀನು ಬೆಳಕಿನ ದೃಷ್ಟಿ.
ಭೂಪತಿಗಳಲ್ಲಿ ನೀನು ವೈಭವಯುತವಾದ ಸಿಂಹಾಸನ. ಪ್ರೀತಿಯಲ್ಲಿರುವ ಹೆಂಗಸಲ್ಲಿ ನೀನು ಪ್ರಕಾಶಮಾನವಾದ ಮುಖ.
ದುಷ್ಟರ ವಿರುದ್ದ ಹೋರಾಡುವ ಸೈನಿಕನಿಗೆ ನೀನು ಶಕ್ತಿಯಾಗಿ ವ್ಯಕ್ತಗೊಳ್ಳುವೆ. ಅತ್ಯುತ್ತಮ ಯೋಗಿಗಳಲ್ಲಿ ನೀನು ಜ್ಞಾನದೀಪವಾಗಿ ಅಜ್ಞಾನದ ಪರದೆಯನ್ನು ಸೀಳಿ ಹಾಗೂ ಸತ್ಯವನ್ನು ತೋರುವವಳಾಗಿರುವೆ. ಸಾಮ್ರಾಜ್ಯವನ್ನು ಆಳುವ ಹಾಗೂ ರಕ್ಷಿಸುವ ರಾಜರಲ್ಲಿ ನೀನು ವೈಭವೋಪೇತ ಹಾಗೂ ಉದಾತ್ತ ಮನೋಭಾವವುಳ್ಳವಳು. ಪ್ರೀತಿಯ ಲೋಕದಲ್ಲಿರುವ ಮಹಿಳೆಯರಲ್ಲಿ ನೀನು ಸೌಂದರ್ಯವಾಗಿ ಅರಳುವೆ.
ಏಕಕಾಲದಲ್ಲಿ ಅವಳು ಶಕ್ತಿಯಾಗಿ, ಜ್ಞಾನವಾಗಿ, ವೈಭವೋಪೇತಳಾಗಿ ಹಾಗೂ ಸೌಂದರ್ಯವತಿಯಾಗಿಯೂ ಭೂಮಿಯಮೇಲೆ ಅಭಿವ್ಯಕ್ತಗೊಳ್ಳುವಳು (“ಆಡೋರೇಶನ್ ಆಫ್ ದಿ ಡಿವೈನ್ ಮದರ್”, ಎಮ್. ಪಿ.ಪಂಡಿತ್, ಪುಟ.60 ನೋಡಿ).

ವಿವರಣೆ :
ಯೋಧರ ಆಯುಧಗಳ ಕಾಂತಿಯೂ, ಯೋಗೀಂದ್ರರ ದೃಷ್ಟಿಪ್ರಭೆಯೂ, ರಾಜರ ಸಿಂಹಾಸನಕಾಂತಿಯೂ, ಸ್ತ್ರೀಯರ ಮುಖಕಾಂತಿಯೂ ನೀನಾಗಿದ್ದೀಯೆ.

ಸಂಸ್ಕೃತದಲ್ಲಿ :
ಶಸ್ತ್ರಧರಾಣಾಂ ಭೀಕರತಾ ಶಾಸ್ತ್ರಧರಾಣಾಂ ಬೋಧಕತಾ
ಯಂತ್ರಧರಾಣಾಂ ಚಾಲಕತಾ ಮಂತ್ರಧರಾಣಾಂ ಸಾಧಕತಾ ||12||

ತಾತ್ಪರ್ಯ :
ಆಯುಧವನ್ನು ಹಿಡಿದಿರುವವರಲ್ಲಿ ನೀನು ಭಯಂಕರವಾದ ಬಲ. ಪಾಂಡಿತ್ಯಪೂರ್ಣ ವಿದ್ವಾಂಸರಲ್ಲಿ ನೀನು ಜ್ಞಾನಸ್ಫೂರ್ತಿ.
ವಾಹನ ಚಲಿಸುವವರಲ್ಲಿ ನೀನು ಚಾಲನಾಶಕ್ತಿ. ವಿವೇಕಿ ಅಡಳಿತಗಾರರಲ್ಲಿ ನೀನು ಸಾಧನೆಯ ಶಕ್ತಿ.

ವಿವರಣೆ :
ಖಡ್ಗಾದಿಗಳನ್ನು ಧರಿಸಿರುವವರ ಭಯಂಕರತೆಯೂ, ವಿದ್ವಾಂಸರ ಬೋಧನಕ್ರಮವೂ, ಯಂತ್ರಗಳನ್ನು ಚಾಲನೆ ಮಾಡುವವರಲ್ಲಿ ಚಾಲಕತೆಯೂ, ರಹಾಸ್ಯಾಲೋಚನೆಗಳನ್ನು ಮಾಡುವವರಲ್ಲಿ ಸಾಧಕತೆಯೂ ನೀನಾಗಿದ್ದೀಯೆ.

ಸಂಸ್ಕೃತದಲ್ಲಿ :
ಗಾನಪಟೂನಾಂ ರಂಜಕತಾ ಧ್ಯಾನಪಟೂನಾಂ ಮಾಪಕತಾ
ನೀತಿಪಟೂನಾಂ ಭೇದಕತಾ ಧೂತಿಪಟಾನಾಂ ಕ್ಷೇಪಕತಾ ||13||

ತಾತ್ಪರ್ಯ :
ಸಂಗೀತಗಾರರಲ್ಲಿ ನೀನು ಆಕರ್ಷಕಶಕ್ತಿ, ಚಿಂತಕರಲ್ಲಿ ನೀನು ಅಂದಾಜನ್ನು ಮಾಡುವ ಸಾಮರ್ಥ್ಯವುಳ್ಳವಳು, ರಾಜನೀತಿಜ್ಞರಲ್ಲಿ ನೀನು ರಾಜತಾಂತ್ರಿಕ ಕುಶಾಗ್ರಾಮತಿ, ನಡುಕ ಹುಟ್ಟಿಸುವ ಪಡೆಗಳಲ್ಲಿ ನೀನು ಹೊಡೆದೋಡಿಸುವ ಸಾಮರ್ಥ್ಯವುಳ್ಳವಳು.

ವಿವರಣೆ :
ಗಾನಮಾಡುವುದರಲ್ಲಿ ನಿಪುಣರಾದವರ ಪ್ರೀತಿಯುಂಟುಮಾಡುವಿಕೆಯೂ, ಸಮಾಹಿತವಾದ ಮನಸ್ಸುಳ್ಳವರ ಇದಿಂತಹುದೆಂದು ಅಳತೆಮಾಡುವ ಸಾಮರ್ಥ್ಯವೂ, ಸಾಮಾದ್ಯುಪಾಯಗಳನ್ನು ಮಾಡುವವರ ಭೇದೊತ್ಪಾದನೆಯಲ್ಲಿ, ಮತ್ತೊಬ್ಬರನ್ನು ಕಂಪಿಸುವುದರಲ್ಲಿ, ಇನ್ನೊಬ್ಬರನ್ನು ಅಲುಗಿಸುವ ಸಾಮರ್ಥ್ಯವೂ ನೀನಾಗಿದ್ದೀಯೆ.

ಸಂಸ್ಕೃತದಲ್ಲಿ :
ದೀಧಿತಿಧಾರಾ ಲೋಕಯತಾಂ ಜೀವಿತಧಾರಾ ವರ್ತಯತಾಂ
ಜ್ಞಾಪಕಧಾರಾ ಚಿಂತಯತಾಂ ಮಾದಕಧಾರಾ ದ್ರಾವಯತಾಂ ||14||

ತಾತ್ಪರ್ಯ :
ಕಣ್ಣುಗಳಲ್ಲಿ ನೀನು ಪ್ರಕಾಶಮಾನವಾದ ಬೆಳಕಿನ ಪ್ರವಾಹ, ಮಹಾನ್ ಹಾಗೂ ಯೋಗ್ಯರಲ್ಲಿ ನೀನು ಜೀವಶಕ್ತಿ, ಧ್ಯಾನಿಗಳಲ್ಲಿ ನೀನು ಸ್ಮರಣಶಕ್ತಿ, ಯೋಗಿಗಳಲ್ಲಿ ನೀನು ಆನಂದದ ತೊರೆ.

ವಿವರಣೆ :
ನೋಡುವವರ ತೇಜೋಧಾರೆಯಾಗಿಯೂ, ಜ್ವಲಂತವಾದ ಜೀವಿತವಾಗಿಯೂ, ಧ್ಯಾನಮಾಡುವವರ ಜ್ಞಾಪಕಶಕ್ತಿಯಾಗಿಯೂ, ದ್ರಾವವಾದ ಮಾದಕಪದಾರ್ಥಗಳನ್ನು ಮಾಡುವವರ ಮದವನ್ನುಂಟುಮಾಡುವ ಸಾಮರ್ಥ್ಯವಾಗಿಯೂ ನೀನಾಗಿದ್ದೀಯೆ.

ಸಂಸ್ಕೃತದಲ್ಲಿ :
ಮಂತ್ರಪರಾಣಾಂ ವಾಕ್ಯಬಲಂ ಯೋಗಪರಾಣಾಂ ಪ್ರಾಣಬಲಂ
ಆತ್ಮಪರಾಣಾಂ ಶಾಂತಿಬಲಂ ಧರ್ಮಪರಾಣಾಂ ತ್ಯಾಗಬಲಂ ||15||

ತಾತ್ಪರ್ಯ :
ಮಂತ್ರಜಪ ಮಾಡುವವರಲ್ಲಿ ನೀನು ಮಾತಿನ ಜೀವಧಾರಕ ಶಕ್ತಿ. ಯೋಗಿಗಳಲ್ಲಿ ನೀನು ಜೀವನದ ಜೀವಧಾರಕ ಶಕ್ತಿ. ಜ್ಞಾನಿಗಳಲ್ಲಿ ನೀನು ಶಾಂತಿಯುತ ಶಕ್ತಿ. ಧರ್ಮಪರಾಯಣರಲ್ಲಿ ನೀನು ಔದಾರ್ಯದ ಶಕ್ತಿ.

ವಿವರಣೆ :
ಮಂತ್ರಜಪವನ್ನು ಮಾಡುವವರ ವಾಕ್ಕಿನ ಶಕ್ತಿಯಾಗಿಯೂ, ಯೋಗನಿಷ್ಠರ ಪ್ರಾಣರೂಪವಾದ ಬಲವಾಗಿಯೂ, ಜ್ಞಾನನಿಷ್ಠರಾದವರ ಶಾಂತರೂಪವಾದ ಬಲವಾಗಿಯೂ, ಧಾರ್ಮಿಕರಾದವರ ದಾನಮಾಡಲು ಬೇಕಾದ ತನ್ನದೆಂಬ ಭಾವನೆಯ ತ್ಯಾಗಬಲವಾಗಿಯೂ ನೀನಾಗಿದ್ದೀಯೆ.

ಸಂಸ್ಕೃತದಲ್ಲಿ :
ಸೂರಿವರಾಣಾಂ ವಾದಬಲಂ ವೀರವರಾಣಾಂ ಬಾಹುಬಲಂ
ಮರ್ತ್ಯಪತೀನಾಂ ಸೈನ್ಯಬಲಂ ರಾಗವತೀನಾಂ ಹಾಸಬಲಂ ||16||

ತಾತ್ಪರ್ಯ :
ಪ್ರೌಢ ವಿದ್ವಾಂಸರಲ್ಲಿ ನೀನು ಚರ್ಚಾಶಕ್ತಿ, ಶೂರರಲ್ಲಿ ನೀನು ದೈಹಿಕ ಶಕ್ತಿ, ರಾಜರುಗಳಲ್ಲಿ ನೀನು ಸೇನಾಶಕ್ತಿ, ಮನಮೋಹಕ ಸ್ತ್ರೀಯರಲ್ಲಿ ನೀನು ಮುಗುಳ್ನಗೆಯ ಶಕ್ತಿ.

ವಿವರಣೆ :
ವಿದ್ವಾಂಸರ ಪ್ರವಚನ ಸಾಮರ್ಥ್ಯವೂ, ವೀರರ ತೋಳ್ಬಲವೂ, ರಾಜರ ಸೈನ್ಯ ಬಲವೂ, ಅನುರಾಗವುಳ್ಳವರ ಹಾಸಬಲವೂ ನೀನಾಗಿದ್ದೀಯೆ.

ಸಂಸ್ಕೃತದಲ್ಲಿ :
ವೈದಿಕಮಂತ್ರೇ ಭಾವವತೀ ತಾಂತ್ರಿಕಮಂತ್ರೇ ನಾದವತೀ
ಶಾಬರಮಂತ್ರೇ ಕಲ್ಪವತೀ ಸಂತತಮಂತ್ರೇ ಸಾರವತೀ ||17||

ತಾತ್ಪರ್ಯ :
ವೇದಮಂತ್ರಗಳಲ್ಲಿ ನೀನು ಅರ್ಥವಾಗಿರುವೆ, ತಾಂತ್ರಿಕ ಮಂತ್ರಗಳಲ್ಲಿ ನೀನು ಶಬ್ದದ ಶಕ್ತಿಯಾಗಿರುವೆ, ಸಾಮಾನ್ಯ ಮಂತ್ರಗಳಲ್ಲಿ ನೀನು ಧರ್ಮಾಚರಣೆಯ ಶಕ್ತಿ, ನಿರಂತರ ಮಂತ್ರಗಳಲ್ಲಿ ನೀನು ಮೂಲತತ್ತ್ವವಾಗಿರುವೆ.
(“ಆಡೋರೇಶನ್ ಆಫ್ ದಿ ಡಿವೈನ್ ಮದರ್”, ಎಮ್. ಪಿ.ಪಂಡಿತ್, ಪುಟ.62 ನೋಡಿ).

ವಿವರಣೆ :
ಗಾಯತ್ರಿಯೇ ಮೊದಲಾದ ವೈದಿಕಮಂತ್ರಗಳಲ್ಲಿ ಆ ಮಾತುಗಳ ಅನುಪೂರ್ವಿಯ ಉಚ್ಚಾರಣವು ಫಲವುಳ್ಳದ್ದಾದರೂ, ಆ ಮಂತ್ರದ ಅರ್ಥ ತಿಳಿದುಕೊಳ್ಳುವುದು ಮುಖ್ಯ. ಆ ಮಂತ್ರಾರ್ಥಗಳನ್ನು ತಿಳಿಯುವುದೂ, ಶ್ರೀವಿದ್ಯೆಯೇ ಮೊದಲಾದವುಗಳಲ್ಲಿ ನಾದಸ್ವರೂಪಲಾಗಿಯೂ, (ಇದರಲ್ಲಿ ಮಂತ್ರಜಪ ಪುರಶ್ಚರ್ಯೆಯಿಂದ ದೇವಿಯ ಪ್ರಸಾದವು ಲಭಿಸುತ್ತದೆ), ಪ್ರಾಕೃತವಾದ ಭಾಷೆಯಲ್ಲಿರುವ ಮಂತ್ರಗಳಲ್ಲಿ ಕ್ರಿಯಾ ಕಲಾರೂಪಳಾಗಿಯೂ, ಹಂಸಮಂತ್ರದಲ್ಲಿ (ಬಾಯಲ್ಲಿ ಉಚ್ಚರಿಸದೆ ಉಚ್ಛಾಸ ನಿಃಶ್ವಾಸ ಮತ್ತು ಅನ್ವೇಕ್ಷಣರೂಪದಲ್ಲಿರುವ ಮಂತ್ರಗಳಲ್ಲಿ) ಸ್ಥಿರಅಂಶರೂಪಾಳಾಗಿಯೂ ನೀನಾಗಿದ್ದೀಯೆ.

ಸಂಸ್ಕೃತದಲ್ಲಿ :
ಬ್ರಹ್ಮಮುಖಾಬ್ಜೇ ವಾಗ್ವನಿತಾ ವಕ್ಷಸಿ ವಿಷ್ಣೋಃ ಶ್ರೀರ್ಲಲಿತಾ
ಶಂಭುಶರೀರೇ ಭಾಗಮಿತಾ ವಿಶ್ವಶರೀರೇ ವ್ಯೋಮ್ನಿ ತತಾ ||18||

ತಾತ್ಪರ್ಯ :
ವಾಗ್ದೇವಿಯಾಗಿ ನೀನು ಬ್ರಹ್ಮನ ಮುಖಕಮಲದಲ್ಲಿ ನೆಲಸಿರುವೆ, ಅಂದವಾದ ಲಕ್ಷ್ಮಿಯಾಗಿ ನೀನು ವಿಷ್ಣುವಿನ ವಕ್ಷಸ್ಥಲದಲ್ಲಿ ನೆಲಸಿರುವೆ, ಶಿವನ ಶರೀರದಲ್ಲಿ ನೀನು ಅರ್ಧಾಂಗಿಯಾಗಿ ನೆಲಸಿರುವೆ, ಬ್ರಹ್ಮಾಂಡ ಶರೀರದಲ್ಲಿ ನೀನು ಆಕಾಶ ರೂಪದಲ್ಲಿ ಹರಡಿಕೊಂಡಿರುವೆ.
(“ಆಡೋರೇಶನ್ ಆಫ್ ದಿ ಡಿವೈನ್ ಮದರ್”, ಎಮ್. ಪಿ.ಪಂಡಿತ್, ಪುಟ.61 ನೋಡಿ).

ವಿವರಣೆ :
ಬ್ರಹ್ಮನ ಮುಖದಲ್ಲಿ ಸರಸ್ವತಿಯಾಗಿಯೂ, ವಿಷ್ಣುವಿನ ವಕ್ಷಸ್ಥಳದಲ್ಲಿ ಲಾವಣ್ಯಮಯಳಾಗಿಯೂ, ಶಿವನ ದೇಹದಲ್ಲಿ ಅರ್ಧಭಾಗವುಳ್ಳವಳಾಗಿಯೂ, ಸರ್ವೇಶ್ವರನಾದ ಆಕಾಶದಲ್ಲಿ ಎಲ್ಲೆಡೆ ವ್ಯಾಪಿಸಿದವಳಾಗಿಯೂ ಆಗಿದ್ದೀಯೆ.

ಸಂಸ್ಕೃತದಲ್ಲಿ :
ಭೂಗ್ರಹಗೋಲೈಃ ಕಂದುಕಿನೀ ವಿಷ್ಟಪಧಾನೇ ಕೌತುಕಿನೀ
ಯಾವದನಂತಂ ವೈಭವಿನೀ ಪ್ರಾಣಿಷು ಭೂಯಸ್ಸಂಭವಿನೀ ||19||

ತಾತ್ಪರ್ಯ :
ನಿನ್ನ ಕ್ರೀಡೆಯಲ್ಲಿ, ಭೂಮಿ, ಗ್ರಹಗಳು ಹಾಗೂ ನಕ್ಷತ್ರಗಳು ಕೇವಲ ಚೆಂಡುಗಳು; ನಿನ್ನ ಕುತೂಹಲಕರವಾದ ಕ್ರೀಡೆಯೆಂದರೆ ಪ್ರಪಂಚದ ಆರೈಕೆಯನ್ನು ನೋಡಿಕೊಳ್ಳುವುದು. ಈ ಅನಂತಾಕಾಶವು ನಿನ್ನ ಮಹಿಮಾನ್ವಿತಾ ಸ್ವತ್ತು. ವಿಭಿನ್ನ ಯೋನಿಗಳಲ್ಲಿ ಹುಟ್ಟು ಮರುಹುಟ್ಟುಗಳು ನಿನ್ನ ಕ್ರೀಡಾವಿನೋದ.

ವಿವರಣೆ :
ಭೂಮಿ ಮತ್ತು ಗ್ರಹಗಳೇ ಮೊದಲಾದವುಗಳಿಂದ ಆಟದ ಚೆಂಡುಳ್ಳ, ಜಗತ್ತನ್ನು ಧರಿಸಿರುವುದರಲ್ಲಿ ಕುತೂಹಲವುಳ್ಳ, ಆಕಾಶದ ಪರಿಮಾಣವಿರುವಷ್ಟುವಿಭುತ್ವಧರ್ಮವುಳ್ಳವಳೂ, ಅಥವಾ ಆಕಾಶದಷ್ಟು ಅನಂತವಾದ ವೈಭವವುಳ್ಳ, ಪ್ರಾಣಿಗಳಲ್ಲಿ ಪುನಃ ಪುನಃ ಪುನರ್ಜನ್ಮವುಳ್ಳವಳೂ ನೀನಾಗಿದ್ದೀಯೆ.

ಸಂಸ್ಕೃತದಲ್ಲಿ :
ಕಂಜಭವಾಂಡೇ ಮನ್ಡಲಿನೀ ಪ್ರಾಣಿಶರೀರೇ ಕುಂಡಲಿನೀ
ಪಾಮರಭಾವೇ ಸಲ್ಲಲನಾ ಪಂಡಿತಭಾವೇ ಮೋದಘನಾ ||20||

ತಾತ್ಪರ್ಯ :
ಬ್ರಹ್ಮಾಂಡದಲ್ಲಿ ನೀನು ಎಲ್ಲ ಕಕ್ಷೆಗಳಲ್ಲೂ ಮಂಡಲಿನೀ ರೂಪದಲ್ಲಿರುವೆ. ಜೀವಿಗಳಲ್ಲಿ ನೀನು ಕುಂಡಲಿನಿಯಾಗಿ ಕಂಡುಬರುವೆ. ಸಾಮಾನ್ಯ ಮನುಷ್ಯರಲ್ಲಿ ನೀನು ಸಾಮಾನ್ಯ ಸ್ತ್ರೀಯಾಗಿರುವೆ. ಜ್ಞಾನಿಗಳಿಗೆ ನೀನು ಪರಮಾನಂದದ ಖಜಾನೆ.

ವಿವರಣೆ :
ಕಮಲದಲ್ಲಿರುವ ಬ್ರಹ್ಮಾಂಡದಲ್ಲಿ ಸೂರ್ಯನೇ ಮೊದಲಾದ ಮಂಡಲದ ರೂಪದಲ್ಲಿರುವವಳಾಗಿಯೂ, ಪ್ರಾಣಿಗಳ ಶರೀರದಲ್ಲಿ ಆಧಾರಶಕ್ತಿಯ ರೂಪದಲ್ಲಿರುವವಳಾಗಿಯೂ, ಅಜ್ಞಾನಿಯ ಅಭಿಪ್ರಾಯದಲ್ಲಿಸ್ತ್ರೀಯಾಗಿಯೂ, ಪಂಡಿತರ ಅಭಿಪ್ರಾಯದಲ್ಲಿ ಅನಂದಸ್ವರೂಪಳಾಗಿಯೂ, ಸಾಂದ್ರ ಅನಂದಸ್ವರೂಪಿಣಿಯಾಗಿಯೂ ಇರುತ್ತೀಯೆ.

ಸಂಸ್ಕೃತದಲ್ಲಿ :
ನಾರ್ಯಪಿ ಪುಂಸಾ ಮೂಲವತೀ ತನ್ವ್ಯಪಿ ಶಕ್ತ್ಯಾ ವ್ಯಾಪ್ತಿಮತಿ
ವ್ಯಾಪ್ತಿಮತೀತ್ವೇ ಗುಪ್ತಿಮತೀ ಚಿತ್ರವಿಚಿತ್ರಾ ಕಾsಪಿ ಸತೀ ||21||

ತಾತ್ಪರ್ಯ :
ನೀನು ಸ್ತ್ರೀ, ಆದರೂ ಮನುಷ್ಯನಿಂದ ಹುಟ್ಟಿದೆ. ಸೂಕ್ಷ್ಮರೂಪದಲ್ಲಿದ್ದರೂ ಎಲ್ಲೆಡೆ ವ್ಯಾಪಿಸಿರುವ ಶಕ್ತಿ, ಅಷ್ಟೆಲ್ಲಾ ವ್ಯಾಪಿಸಿದ್ದರೂ ನೀನು ನಮ್ಮ ದೃಷ್ಟಿಯಿಂದ ಮರೆಯಾಗಿರುವೆ. ನೀನು ಅಪರೂಪದ ಸ್ತ್ರೀ, ಅದ್ಭುತಗಳಲ್ಲಿ ಅದ್ಭುತ.

ವಿವರಣೆ :
ಸ್ತ್ರಿಯಾಗಿದ್ದರೂ ಪುರುಷನಿಂದ ಅವನ ಮೂಲಶಕ್ತಿಯಾಗಿಯೂ, ಸುಂದರಿಯಾಗಿ ಸೂಕ್ಷ್ಮಳಾಗಿದ್ದರೂ ಎಲ್ಲೆಡೆ ವ್ಯಾಪಿಸಿರುವವಳಾಗಿಯೂ, ಸರ್ವತ್ರವ್ಯಾಪ್ತಳಾಗಿದ್ದರೂ ನಿಗೂಢವಾಗಿರುವವಳಾಗಿಯೂ, ಅತ್ಯದ್ಭುತಳಾದ, ಅಸದೃಶಳಾದ ದೇವಿಯಾಗಿಯೂ ಇದ್ದೀಯೆ.

ಸಂಸ್ಕೃತದಲ್ಲಿ :
ದೀಧಿತಿರೂಪಾ ಚಿತ್ತಮಯೀ ಪ್ರಾಣಶರೀರಾsಪ್ಯದ್ವಿತಯೀ
ಬ್ರಹ್ಮಶರೀರಂ ಬ್ರಹ್ಮವಿಭಾ ಬ್ರಹ್ಮವಿಭೂತಿರ್ಬ್ರಹ್ಮಪರಂ ||22||

ತಾತ್ಪರ್ಯ :
ಜ್ಞಾನರೂಪಿ ಮನಸ್ಸಿನೊಡನೆ; ತನ್ನ ಶರೀರಕ್ಕೆ ಪ್ರಾಣವಾಗಿ, ಆದಾಗ್ಯೂ ಅದ್ವೈತ; ಅವಳು ಬ್ರಹ್ಮನ ಶರೀರ, ಬ್ರಹ್ಮನ ಹೊಳಪು, ಬ್ರಹ್ಮನ ವೈಭವ ಮತ್ತು ಬ್ರಹ್ಮನೇ ಅವಳು.

ವಿವರಣೆ :
ಪ್ರಕಾಶಸ್ವರೂಪಳಾಗಿ, ಚಿತ್ತರೂಪಿಣಿಯಾಗಿಯೂ, ಪ್ರಾಣರೂಪದ ಶರೀರವುಳ್ಳವಳಾಗಿದ್ದರೂ ಏಕಪ್ರಕಾರವಾಗಿಯೂ, ಬ್ರಹ್ಮನ ಶರೀರವು ಬ್ರಹ್ಮನ ಪ್ರಭೆಯಾಗಿಯೂ, ಬ್ರಹ್ಮನ ಐಶ್ವರ್ಯವು ಪರಬ್ರಹ್ಮವು, ಆ ಪಾರ್ವತಿದೇವಿಯಾಗಿದ್ದಾಳೆ.

ಸಂಸ್ಕೃತದಲ್ಲಿ :
ವಿಷ್ಟಪಮಾತಾ ಭೂರಿಕೃಪಾ ವಿಷ್ಟಪರಾಜ್ಞೀ ಭೂರಿಬಲಾ
ವಿಷ್ಟಪರೂಪಾ ಶಿಷ್ಟನುತಾ ವಿಷ್ಟಪಪಾರೇ ಶಿಷ್ಟಮಿತಾ ||23||

ತಾತ್ಪರ್ಯ :
ವಿಶ್ವದ ಮಾತೆಯಾದ ಅವಳು ಸಂಪೂರ್ಣವಾದ ಕಾರುಣ್ಯಮೂರ್ತಿ; ವಿಶ್ವದ ರೂಪ, ಶ್ರೇಷ್ಠ ಜ್ಞಾನಿಗಳು ಪೂಜಿಸುವವಳು, ವಿಶ್ವದಿಂದ ಹೊರಗೆ ಅವಳು ಅಸ್ತಿತ್ವದಲ್ಲಿರುವಳು.

ವಿವರಣೆ :
ಪ್ರಪಂಚದ ತಾಯಿಯಾಗಿ ಅತಿಹೆಚ್ಚಿನ ಕೃಪೆಯುಳ್ಳವಳಾಗಿಯೂ, ಪ್ರಪಂಚದ ಮಹಿಷಿಯಾಗಿ ಅತಿಹೆಚ್ಚಿನ ಶಕ್ತಿಯುಳ್ಳ, ಪ್ರಪಂಚದ ಸ್ವರೂಪಳಾಗಿ ಶಿಷ್ಟಜನರಿಂದ ಸ್ತೋತ್ರಮಾಡುವವಳಾಗಿಯೂ, ಪ್ರಪಂಚದ ಕೊನೆಯಲ್ಲಿ ಉಳಿಯುವವಳಾಗಿಯೂ ಆಗಿದ್ದೀಯೆ.

ಸಂಸ್ಕೃತದಲ್ಲಿ :
ದುರ್ಜನಮೂಲೋಚ್ಛೇದಕರೀ ದೀನಜನಾರ್ತಿಧ್ವಂಸಕರೀ
ಧೀಬಲಲಕ್ಷ್ಮೀನಾಶಕೃಶಂ ಪುಣ್ಯಕುಲಂ ನಃ ಪಾತು ಶಿವಾ ||24||

ತಾತ್ಪರ್ಯ :
ದುಷ್ಟಶಕ್ತಿಗಳ ಬೇರನ್ನು ಅವಳು ಕತ್ತರಿಸಿ ಹಾಗೂ ತುಳಿತಕ್ಕೊಳಗಾದವರ ಅಡೆತಡೆಗಳನ್ನು ನಾಶಮಾಡುವಳು. ಜ್ಞಾನದ ವಿನಾಶದಿಂದಾಗಿ ಸೋಮಾರಿತನವನ್ನು ಮೈಗೂಡಿಸಿಕೊಂಡಿರುವ ಮನುಕುಲವನ್ನು ರಕ್ಷಿಸೆಂದು ನಾನು ದೇವಿಯಲ್ಲಿ ಪ್ರಾರ್ಥಿಸುವೆ.

ವಿವರಣೆ :
ದುರ್ಜನರನ್ನು ಬುಡಸಮೇತ ನಾಶಪಡಿಸುವ, ದೀನಜನರ ದುಃಖವನ್ನು ನಾಶಮಾಡುವ, ಬುದ್ಧಿಶಕ್ತಿ ಮತ್ತು ಸಂಪತ್ತು ಇವುಗಳ ನಾಶದಿಂದ ಕೃಶವಾಗಿರುವ ನಮ್ಮ ಪವಿತ್ರವಾದ ಮಾನವ ಕುಲವನ್ನು ಅಥವಾ ಭಾರತೀಯ ಕುಲವನ್ನು ರಕ್ಷಿಸಲಿ.

ಸಂಸ್ಕೃತದಲ್ಲಿ :
ಚಂದ್ರಕಿರೀಟಾಂಭೋಜದೃಶಃ ಶಾಂತಿಸಮೃದ್ಧಂ ಸ್ವಾಂತಮಿಮೇ
ಸಮ್ಮದಯಂತು ಶ್ರೋತ್ರಸುಖಾಃ ಸನ್ಮಣಿಬಂಧಾಃ ಸೂರಿಪತೇಃ ||25||   500

ತಾತ್ಪರ್ಯ :
ಗಣಪತಿ ಮುನಿಗಳು ಮಣಿಬಂಧ ಛಂದಸ್ಸಿನಲ್ಲಿ ರಚಿಸಿದ ಈ ಶ್ಲೋಕಗಳು ಕಿವಿಗಳಿಗೆ ಇಂಪಾಗಿ, ಸಂಪೂರ್ಣ ಶಾಂತಿ ಹಾಗೂ ಅಭ್ಯುದಯವನ್ನು ಹೊಂದಿರುವ ಮನಸ್ಸುಳ್ಳ ಈಶ್ವರನ ಪತ್ನಿಯನ್ನು ಅನಂದಪಡಿಸುವುದು.

ವಿವರಣೆ :
ಕಿವಿಗಿಂಪಾಗಿರುವ ಪಂಡಿತ ಸಾರ್ವಭೌಮನ ಈ ನಿರ್ದುಷ್ಟವಾದ ಗುಣಗಳಿಂದ ಕೂಡಿರುವಮಣಿಬಂಧವೆಂಬ ಛಂದಸ್ಸಿನಲ್ಲಿ ನಿಬದ್ಧವಾಗಿರುವ ಸ್ತೋತ್ರಗಳು ಚಂದ್ರನನ್ನು ಕಿರೀಟದಲ್ಲಿ ಹೊಂದಿರುವ ಪರಶಿವನ ಸುಂದರಿಯ ಶಾಂತಿಯಿಂದ ಪೂರ್ಣವಾಗಿರುವ ಮನಸ್ಸನ್ನು ಅನಂದಗೊಳಿಸಲಿ.

ಇಪ್ಪತ್ತನೇ ಸ್ತಬಕವು ಮುಗಿಯಿತು

ಐದನೇ ಶತಕವು ಮುಕ್ತಾಯವಾಯಿತು

















Comments