ಬೇಂದ್ರೆ ವೈದಿಕ ಗೀತೆಗಳು


ಬೇಂದ್ರೆ ವೈದಿಕ ಗೀತೆಗಳು

ಬೇಂದ್ರೆಯವರ ಅನೇಕ ಕವನಗಳು ಸ್ಪಷ್ಟವಾಗಿಯೇ ವೇದದ ತತ್ತ್ವಗಳನ್ನೂ ಮರ್ಮಗಳನ್ನೂ, ಸಂಕೇತ, ಧ್ವನಿಗಳನ್ನೂ, ಪ್ರತಿಮೆಗಳನ್ನೂ ಬಳಸಿಕೊಂಡು ಆ ದಿವ್ಯಪ್ರಜ್ಞೆಯನ್ನು ಕನ್ನಡದಲ್ಲಿಳಿಸಲು ಯತ್ನಿಸಿವೆ.

ಈ ದರ್ಶನದ ಹಿನ್ನೆಲೆಯಲ್ಲಿ "ಪರಾಕೀ" ಸಂಕಲನದ "ಅಗ್ನಿ-ಸೋಮ" ಎಂಬ ಕವನದಲ್ಲಿನ ಆಧ್ಯಾತ್ಮಿಕ ಹಾಗೂ ವೈದಿಕ ನೆಲೆಗಳ ಬಗೆಗೆ ಪ್ರೊ||ಕೆ.ಎಸ್.ನಾರಾಯಣಾಚಾರ್ಯರ ವಿಶ್ಲೇಷಣೆಯನ್ನು ಪ್ರಸ್ತುತ ಪಡಿಸಲು ಪ್ರಯತ್ನಿಸುವೆ:

"ನಮ್ಮ ಬಾಳು ಹಾಲಂದ್ರ ಹಾಲು
ನೀರ ಅಂದ್ರ ನೀರು
ಹಾಲು ತುಟ್ಟಿ ಆಗ್ಯದ ಇತ್ತೀಚೆ"

ಈ ಆಡು ಭಾಷೆಯ ಸಾಲುಗಳು ಸಾಮಾನ್ಯರಿಗೆ ಅಂಥದೇನು ವಿಶೇಷ ಎನಿಸುವುದಿಲ್ಲ. ಈ ರೀತಿಯ ಸಾಲುಗಳಲ್ಲಿ ಮುಂದೆ ಶೀರ್ಷಿಕೆಯ ಅನ್ವಯ, ಅರ್ಥ, ಸಾಮಾನ್ಯ ಓದುಗರಿಗೆ ಆಗುವುದು ಕಷ್ಟ. ಈ ಸಾಲಿನ ಕೀಲಿಕೈ ನೋಡಿ !
ಹಾಲು ಅಂದರೆ ಕ್ಷೀರ, ಅಮೃತ, ವೇದದಲ್ಲಿ ಸೋಮತತ್ತ್ವಕ್ಕೆ ಸಂಕೇತ.
ಹಾಗೆಯೇ, ನೀರು ಎಂದರೆ ನಾರ - ಇದು ನಾರಾಯಣ ತತ್ತ್ವಕ್ಕೆ ಸಂಕೇತ ಅಲ್ಲವೇ !
ಈಗ ಹಾಲು "ತುಟ್ಟಿ" ಎಂದರೆ, ಅಮೃತವು ಯಾರಿಗೂ ಎಟುಕುತ್ತಿಲ್ಲ !
ಸೋಮಲತೆ ಬೆಳೆಯುವುದು ಬೆಟ್ಟದ ಮೇಲೆ, ನೆಲದಲ್ಲಲ್ಲ. ಸೋಮಪ್ರಜ್ಞೆ - ಬ್ರಹ್ಮಾನಂದಾನುಭವದ ರುಚಿ - ಬೆಳೆಯಲು ಓದುಗ "ಎತ್ತರ"ಕ್ಕೇರಬೇಕು. ಇತ್ತ ನೀರು ಗಟ್ಟಿಯಾಗಿ (ಮಂಜುಗಡ್ಡೆಯಂತೆ), ಜೀವಪೋಷಕವಾಗಿ ಹರಿಯುವ ಬದಲು, ಜೀವ ಶತ್ರುವಾದ ಹಿಮ ಆಗುತ್ತಿದೆ. ಕಾಯಬೇಕಾದ ನಾರಾಯಣನೇ (ನೀರು) ಕೊಂದರೆ ಹೇಗೆ ? ಆದರೆ ಹಾಲೂ ನೀರೂ ಕೂಡುವ ವಸ್ತುಗಳನ್ನು (ಎರಡನೇ ಪದ್ಯದಲ್ಲಿ) "ಬೆಂಕಿಯ ಮೇಲಿಟ್ಟು" (ಅಗ್ನಿ ತತ್ತ್ವದಲ್ಲಿ), "ನೀರು ಹಾರಿಸಿದರs" ಹಾಲು ಉಕ್ಕಿ ಬೆಂಕ್ಯಾಗ ಬೀಳ್ತದ ! ಇದು ಸಾಮಾನ್ಯವಾಗಿ ನಡೆಯುವ ಕ್ರಿಯೆ, ಇದರಲ್ಲಿ ಕವಿ ಏನು ಕಂಡ ? ನೋಡಿ ! ನೀರನ್ನು "ಹಾರಿಸು"ವುದಕ್ಕೆ (ಆವಿ ಮಾಡಲು), ಹಾಲಿನಿಂದ ಬೇರ್ಪಡಿಸಲು, ಯತ್ನಿಸಿದರೆ, ಹಾಲು ಬೆಂಕಿಯಲ್ಲೇ ಬೀಳುತ್ತದೆ. ಸೋಮನ ನಾರಾಯಣನ ಸಂಬಂಧ ಬೇರ್ಪಡಿಸಲು ಅಗ್ನಿಯನ್ನು ಉಪಯೋಗಿಸಿದರೆ, ಆ ದ್ವಂದ್ವಕ್ಕೆ ಸಹನೆಯಾಗುವುದಿಲ್ಲ. ಅದು ಮೂರನೆಯ ಪದ್ಯದ "ಗೆಳೆತ"ನಕ್ಕೆ, ಅದರ ಗುಟ್ಟಿನ ಅನ್ವೇಷಣೆಗೆ, ಕವಿಗೆ ಎಡೆ ಮಾಡುತ್ತದೆ. ಹಾಲಿನಲ್ಲಿ ಬೆಣ್ಣೆ, ತುಪ್ಪ ಇದೆ. ತುಪ್ಪದ ಪರೀಕ್ಷೆ ವಾಸನೆ - ಬೆಂಕಿಯಲ್ಲಿ ಆಗುತ್ತದೆ. ಅಗ್ನಿಗೆ ಈ ಘೃತವೇ ಆಹಾರ. ಅದಕ್ಕೆ ಇಲ್ಲಿ ತೃಪ್ತಿಯಿಲ್ಲ.

"ತುಪ್ಪದಾಗ ಇರಬೇಕು ಬೆಂಕಿ ಬೀಜಾ
ಅಂತ ಅಡ್ರಾಸ್ತಾನ ಅಗ್ನಿರಾಜಾ !"

ಅಗ್ನಿಯ ಆಯುಷ್ಯದ ಬೀಜಾಕ್ಷರ ಘೃತದಲ್ಲೇ ಇದೆ."ಆಯುರ್ವೈಘೃತಂ" ಎಂದು ವೇದೋಕ್ತಿ. "ಘೃತ" ಎಂದರೆ ಜ್ಞಾನ ಎಂಬ ಶ್ಲೇಷೆ ವೇದದಲ್ಲುಂಟೆಂದು ಅರವಿಂದರು ತೋರಿಸಿದ್ದಾರೆ.

"ಅಗ್ನೀ - ಸೋಮ
ಕೂಡ್ಯ ಅಂತಾವ ಆದಿತ್ಯಸಾಮ
ಜೀವನಾ ಪಾವನಾ ಆಗಬೇಕಾದ್ರ
ನಾ(ವೆ)s ಆಗಬೇಕು ಪಾವಕಾ"

ಅಗ್ನಿ "ಪಾವಕ" ಸೋಮ "ಪಾವನ", "ಪವಮಾನ"; ಎಂದೂ ಜೀವನ ಶುದ್ಧಿಕಾರಕ ದೈವೀ ಮುಖಗಳೇ. ಹೀಗಾಗಿ ಈ ದ್ವಂದ್ವ ಬಹಳ ಬೆಲೆಯುಳ್ಳದ್ದು. ನಾವು ಅಗ್ನಿಯಾದರೆ, ಜೀವನ ಸೋಮ ಆಗುತ್ತದೆ ! ಆನಂದ ಪ್ರವಾಹವಾಗುತ್ತದೆ.

"ಆಗ ಬಾಳಿನ ಹೋಳಿನ್ಯಾಗೂ ಜೀವಾ
ಭಲಾ ಭಲಾ ಅಂತಾನ ಶಿವಾ "

ಜೀವನದ ಪ್ರತಿಕ್ಷಣದಲ್ಲೂ ಇದು ಆದರೆ, ಜೀವನ ಮಂಗಳಮಯ.
"ಇಂದಿನ ಹವಾಮಾನನ ಬ್ಯಾರೆ" ಎಂದು ಕವಿಗಳ, ಋತುಮಾನ ವ್ಯತ್ಯಾಸ ಗುರುತಿಸಿ "ಋತಂ ಋತಾಯ ಪವತೇ - ಇಂದ್ರಾಯೇಂದ್ರೋ ಪವಸ್ವ" - ಎಂಬ ಸೋಮ ಮಂಡಲದ ಮಂತ್ರಗಳನ್ನು ನೆನಪಿಸುತ್ತಾರೆ. ನಾವು ಋತಕ್ಕೆ ಬದ್ಧವಾದರೆ, ಋತು ಸರಿಯಾಗಿರುತ್ತದೆ. ಸೋಮ-ಪ್ರವಾಹ ಇರುವುದೇ ಪರಮೇಶ್ವರನ (ಇಂದ್ರನ) ತೃಪ್ತಿಗಾಗಿ. ಆದರೆ ಈಗ ಹಾಲೆಲ್ಲಾ ನೀರಾಗಿ, ಅದರಲ್ಲಿ ಅಗ್ನಿಯಲ್ಲಿ ಬೀಳುವ ಹಾಲಿನ ಅಂಶ ಕಡಿಮೆಯಾಗಿದೆ ! ತ್ಯಾಗವಿಲ್ಲದೆ, ಘೃತಾರ್ಪಣೆಯಿಲ್ಲದೆ ಅಗ್ನಿ ಹೇಗೆ ಬದುಕಬಲ್ಲ ?
ಸೋಮಾಹುತಿಯಿಲ್ಲದ ಅಗ್ನಿ, ವೈದಿಕರಿಗೆ ಅಕಲ್ಪನೀಯ ! ಏಕೆಂದರೆ ಜೀವನವೇ ಒಂದು ಅಗ್ನೀ, ಓಮೀಯ ! “ತ್ಯಾಗದಿಂದಲೇ ಬಾಳುಎಂಬುದಕ್ಕೆ, ಅಗ್ನಿಯ ಬಾಳಿಗೂ, ಸೋಮನ ತ್ಯಾಗಕ್ಕೂ ಇಲ್ಲಿ ಕವಿಗೆ ಸಂಬಂಧ ಕಾಣುತ್ತದೆ. ಇಂದು ಸಮಾಜಕ್ಕೆ ಅದು ಕಾಣುತ್ತಿಲ್ಲ. ಬಾಳು ಯಾವುದು, ಹಾಳು ಯಾವುದು ಎಂಬುದು ಹೊಳೆಯುತ್ತಿಲ್ಲ. ಶಿವನ ಆಸನದಲ್ಲಿ ಶವವಿದ್ದು, ಭವನೇ ಅಭವ ಆಗಿ, “ಮಸಣದಲ್ಲಿ ಮಾವಿನ ಮರ ಹುಟ್ಟಿದಾಗಈ ವಿಪರ್ಯಾಸ ದಲ್ಲಾದರೂ ಜ್ಞಾನೋದಯ ಆದೀತೇ ? ನಾಗರೀಕತೆಗೇಬರಬಂದಿದೆ! ಅಗ್ನೀಷೋಮೀಯ ಸಂಬಂಧ ಯಾರಿಗೆ ಬೇಕು ?

ಗಂಗಾವತರಣದಲ್ಲಿನತುಂಬಿಕವನವನ್ನು ಅವಲೋಕಿಸಿದಾಗ -

ಇದೂ ತುಂಬಿ ಅದೂ ತುಂಬಿ ಯಾವುದೂ ತುಂಬಿ ಇರದೇ
ತುಂಬಿ ಕಳೆದರೂ ತುಂಬಿ ಉಳಿದರೂ ತುಂಬಿ ತುಂಬಿ ಬರದೇ
ಜನನ ಮರಣದಲಿ ಅಮೃತವೆಂದಿಗೂ ಅಹುದು ತುಂಬಿ ತುಂಬಿ
ಮೈದುಂಬಿ ತುಂಬಿ ಹಲಜೀವ ದೇವ ಜಗದಂಬಿ ತುಂಬಿ ತುಂಬಿ

ಹೀಗೆ ಆರಂಭವಾಗುವ ಈ ಇಡೀ ಕವನ
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣ ಮೇವಾವಶಿಷ್ಯತೇ
ಎಂಬ ಅಥರ್ವಣ ಶಾಂತಿಪಾಠಕ್ಕೆ ಕಾವ್ಯಾತ್ಮಕ ಸುಂದರ ವ್ಯಾಖ್ಯೆಯಂತಿದೆ.
ತುಂಬಿಶಬ್ದ, ಕವನದ ಎಲ್ಲ ಸಾಲುಗಳಲ್ಲೂ, ಅಲ್ಲಿ ಸಾಂಕೇತಿಕವಾಗಿ ಬರುವ ಎಲ್ಲ ವಸ್ತುಗಳಲ್ಲೂ ತುಂಬಿ ತುಂಬಿ ಬರುತ್ತಾ, ನಾದದ ಹೊನಲಿನಲ್ಲಿ ಈ ವೈದಿಕ ಸತ್ಯ ಗೀತರೂಪದಲ್ಲೇ ಮೈದಾಳುತ್ತದೆ. ಪ್ರಕೃತಿಯ ವ್ಯಾಪಾರದಲ್ಲೂ, ಜಡಕ್ರಿಯೆಗಳಲ್ಲೂ ಕಾಣಬರುವ ಈಪೂರ್ಣತೆ”, ಈ ಈಶ ತುಂಬಿದ ಜಗತ್ತಿನ ಸಾಫಲ್ಯ ಭಾವ, ಪ್ರೇಮದಲ್ಲಿ ಹೇಗೆ ಸುಂದರವಾಗಿ ಅಭಿವ್ಯಕ್ತವಾಗಿದೆ ! ಯಾವ ಭಾಷ್ಯಕಾರನೂ ಈವರೆಗೆ ಮಾಡದ ಅನ್ವಯ, ಭಾಷ್ಯ ಇಲ್ಲಿದೆ.

ಇದೇ ಕವನದ ಮುಂದಿನ ಭಾಗವನ್ನು ನೋಡಿ -
ತುಂಬಿನಿಂದ ತುಟಿ ವರೆಗು ತುಂಬಿ ತುದಿವರೆಗು ತುಂಬಿ ತುಂಬಿ
ಅಂಗಾಂಗ ತುಂಬಿ ಲಿಂಗಾಂಗ ತುಂಬಿ ಲಿಂಗನಾಂಗ ತುಂಬಿ
ಆಚಾರ ತುಂಬಿ ಉಚ್ಚಾರ ತುಂಬಿ ಸಂಚಾರ ತುಂಬಿ ತುಂಬಿ
ವಿಶ್ರಾಂತಿ ತುಂಬಿ ಸ್ಥಿರ ಶಾಂತಿ ತುಂಬಿ ಕಡುಕಾಂತಿ ತುಂಬಿ ತುಂಬಿ

ಅಣುರೇಣು ತೃಣಕಾಷ್ಠಗಳೂ ಒಂದಕ್ಕೊಂದು ಸ್ಪಂದಿಸುವುದು ಈ ಈಶ ತುಂಬಿದ ಭಾವದಿಂದಲೇ ಎಂಬ ವ್ಯಾಖ್ಯಾನವು ಎಷ್ಟು ಸುಂದರ ಹಾಗೂ ಚೇತೋಹಾರಿ ಅಲ್ಲವೇ ! ವೈದಿಕ ಪ್ರಕ್ರಿಯೆ, ದೃಷ್ಟಿಗಳು ತುಂಬಿದ ಇಲ್ಲಿ, ಕಾವ್ಯ ಹೇಗೆ ಸೌಂದರ್ಯದಿಂದ ಚಿಮ್ಮುತ್ತಿದೆ ನೋಡಿ. ಇದೆಲ್ಲಪಾರಲೌಕಿಕವೇ?” ಅಥವಾಸ್ಥಿತಿ”, ಯಿಂದಗತಿಅಳಿದ ರೀತಿಯೋ ?

ತಾ ಲೆಕ್ಕಣಿಕೆಕವನದಲ್ಲಿ ಬರುವ--ಮ ಸಂವಾದ”, ಓಂಕಾರದ ಬೇಂದ್ರೆ ವ್ಯಾಖ್ಯೆಯಾಗಿದೆ. ಮೊದಲ ಸಾಲೇ ಪ್ರಣವಾರ್ಥ ತಿಳಿಸುತ್ತದೆ.

ಊರ್ಧ್ವ ಎಂದರೂ, ಮಧ್ವ ಎಂದರೂ, ಅಧ್ವ ಎಂದರೂ ಧ್ವನಿ ಭೇದಾ

ಇದರ ಮರ್ಮ ಹೀಗಿದೆ: “ಊರ್ಧ್ವದ ಊ, “ಮಧ್ವದ ಮ, “ಅಧ್ವದ ಅ ಇವು ಬೇರೆ ಗತಿಯಲ್ಲಿ ಓಂಕಾರದ ಅವಯವಗಳು. ಸರಿಯಾಗಿ ಜೋಡಿಸಿದರೆ ಮೊದಲು ಅಧ್ವ, ಆಮೇಲೆ ಊರ್ಧ್ವ, ಕೊನೆಗೆ ಮಧ್ವ ಬರಬೇಕು! ಅಧ್ವ ಎಂದರೆ ದಾರಿ, ಅದು ಮೇಲಕ್ಕೆ, ಊರ್ಧ್ವ ಗತಿ ಆದರೆ, ಅಲ್ಲಿ ಪಾದದಲ್ಲಿ ಜೇನನ್ನೇ ತುಂಬಿಕೊಂಡ ವಿಷ್ಣು ಪದ ಸಿಗುತ್ತದೆ; “ಮಧ್ವಎಂಬುದುವಿಷ್ಣೋಃ ಪದೇ ಪರಮೋ ಮಧ್ವ ಉತ್ಸಃಎಂಬ ವಿಷ್ಣುಸೂಕ್ತದಲ್ಲಿ ಬರುವ ಪದ. (ಆ ವಿಷ್ಣು ಪಾದ ಮಧುವನ್ನು ಭಕ್ಷಿಸುವವರೆಂಬ ಅರ್ಥದಲ್ಲಿ ಮಧ್ವಾಚಾರ್ಯರಿಗೆ ಆಮೇಲೆ ಬಂದುದು ಆ ಹೆಸರು. ಬೇಂದ್ರೆಯವರಿಗೆ ಇಲ್ಲಿ ಮೂಲದ ಧ್ವನಿ ವಿವಕ್ಷೆಯಲ್ಲಿದೆ) ನಮ್ಮ ಗತಿ ವಿಷ್ಣು ಲೋಕದತ್ತ ಇದ್ದು, ನಾವು ದೇವರ ಪಾದದ ಸೇವೆಯ ಜೇನಿನ ಸುಖ ಪಡೆಯಬೇಕೆಂಬುದು ಓಂಕಾರದ ಸಂದೇಶ. “ಎಂಬುದು ವಿಷ್ಣು ವಾಚಕ. “ಮ್ಎಂಬುವನು ಜೀವ. ಇವರ ಆಕಾರ ವಾಚ್ಯನಿಗಾಗಿಯೇ ಇದ್ದಾನೆ. “ಆಯೈವ ಮ್ಎಂಬ ಹಿರಿಯರ ವಿವರಣೆಯಲ್ಲಿ, ಇಲ್ಲಿ ಮೂಲದಎಂಬುದರಲ್ಲಿ ಚತುರ್ಥೀ ವಿಭಕ್ತಿ ಲುಪ್ತವಾಗಿ, ಅಧ್ಯಾಹಾರವಾಗಿದೆ. ಸೇರಿಸಿಕೊಂಡಾಗ ಗತಿ, ಮೇಲಾಗಿ ಗಮ್ಯ ಸಿಗುತ್ತದೆ. ಇದರಲ್ಲಿ ಹರಿ ಹರ ಜಗಳವಿಲ್ಲದೆ ನೋಡಿ ಎಂಬುದು ಕವಿಯ ಮುಂದಿನ ಸಾಲುಗಳ ವ್ಯಂಗ್ಯ. “ಹರ”, ಪ್ರಸ್ತರವಾಗಿ ಗುಡ್ಡದಲ್ಲಿ (ಗುಡ್ಡದಂತೆ ಲಿಂಗಾಕಾರದಲ್ಲಿ) ನಿಂತರೆ, “ಹರಿಹೊಳೆಯಾಗಿ ಹರಿಯುತ್ತಾನೆ! ಏಕೆಂದರೆಹರ”, ಸ್ಥಾಣು, ಸ್ಥಿರ. “ಹರಿ”, ನೀರ, ನಾರಾಯಣ, ಚರ. ಸ್ಥಿರಚರಗಳು ಗತಿಪಡೆದು ಸೇರುವ ಗುರಿ - ಓಂಕಾರ. ಇದಕ್ಕೆ ಹರಿಹರರಿಬ್ಬರ ಕೃಪೆಯೂ ಬೇಕು. “ಹರ”, ಬಾಣನ ಮನೆ ಕಾಯ್ದರೆ, ಹರಿ ಬಲಿಯ ಮನೆ ಕಾಯ್ದ !

ಹರನಾ ಬಲೀ ಅಂದಾ” (ನಾನು ಬಲಿಷ್ಠ ಎಂದ !)

ಹರಿನಾ ವಾಮನಾಅಂದ (ಹಾಗೇ ಆಗಲಿ, ನಾನೇ ಕುಳ್ಳ ಆಗಲಿ ಎಂದ !) ಬಾಣಾಸುರ ಯುದ್ಧದಲ್ಲಿ ಹರ, “ಬಲ” “ತೋರಿಸಿದರೆ”, ಬಲಿ ನಾಚಿಗೆಯಲ್ಲಿ ಹರಿವಾಮನತ್ವತೋರಿಸಿದ! ಇದರಿಂದ ಬಲಿ ಇಂದ್ರ ಆದ, ವಾಮನ ಉಪೇಂದ್ರ ಆದ”! ಇಬ್ಬರೂನೀ ನಿಜಾ !” ಅಂದರು ! ಓಂಕಾರದ ಸತ್ಯಕ್ಕೆ ಇಬ್ಬರೂ ಅಂಕಿತ ಹಾಕಿದಂತೆ !

ಈ ಪ್ರಣವ, ಜೈನರಿಗೂ ಬೌದ್ಧರಿಗೂ ಸಹ ಪೂಜ್ಯ ಸಂಕೇತ ! ಇದನ್ನು ಕವನದ ಕೊನೇ ಸಾಲುಗಳು ಸೂಚಿಸುತ್ತವೆ. ಬ್ರಹ್ಮ ಮೌನದಲ್ಲಿ ಇದನ್ನು ಸಮ್ಮತಿಸುತ್ತದೆ.

ಪ್ರತಿಬಿಂಬಗಳುಕವನ ಸಂಕಲನದಲ್ಲಿನಬ್ರಹ್ಮ ಏಕತಾನಕವನದಲ್ಲಿತತ್ತ್ವಮಸಿಮಹಾವಾಕ್ಯಕ್ಕೆ ಮಾರ್ಮಿಕ ಕಾವ್ಯಾತ್ಮಕ ವಿವರಣೆ ನೀಡಿದ್ದಾರೆ. ಸೃಷ್ಟಿಯ ಪೂರ್ವದಲ್ಲಿ ಕೇವಲ ಕಾರಣಾವಸ್ಥೆಯಲ್ಲಿ, ಅವಿಭಕ್ತ ನಾಮರೂಪದ ಜಗತ್ತನ್ನು ಬೀಜದಂತೆ ತನ್ನೊಳಗೆ ಇಟ್ಟುಕೊಂಡುತತ್ಎನಿಸಿದ ದೇವರು, ಸೃಷ್ಟಿಯಾದ ಮೇಲೆ ಕಾರ್ಯದಲ್ಲೂ, ವಿಭಕ್ತನಾಮರೂಪದ ಜಗತ್ತಿನಲ್ಲಿ ತಾನು ಹುದುಗಿಕೊಂಡು, ಒಂದೊಂದರಲ್ಲೂತ್ವಂಆಗಿರುತ್ತಾ, ಕಾರಣಕಾರ್ಯಗಳ ಏಕತೆಯನ್ನು ಬಿಂಬಿಸುವ ಈ ವಾಕ್ಯದಲ್ಲಿಆ ಒಂದೇ ಎಲ್ಲದರಲ್ಲಿದೆ. ಈ ಎಲ್ಲ ಅವನಲ್ಲೇ ಇದೆಎಂಬ ಸಮಾಧಾನ, ಶಾಂತಿ, ಸಮರಸ ಕಾಣುತ್ತದೆ. ಏಕದಾತ್ಮ್ಯಮಿದಂ ಸರ್ವಂ ಎಂಬ ಅದೇ ಪ್ರಕರಣದ ಮುಂದಿನ ವಾಕ್ಯ. “ಈ ಎಲ್ಲವೂ ಅವನನ್ನೇ ಆತ್ಮವನ್ನಾಗಿ ಹೊಂದಿದೆಎಂದು ಬಾಯಿ ಬಿಟ್ಟೇ ಹೇಳಿಇದಂ - ಸರ್ವಂಗಳಲ್ಲಿ ಸಂಬಂಧ ಹೇಳುತ್ತದೆ. (ನಾಕುತಂತಿಯಲ್ಲೂ ಈ ಧ್ವನಿ ಬಹಳ ಬರುತ್ತದೆ.) ಜಗತ್ತು ಮಾತ್ರ ಇದನ್ನರಿಯದೇ ಸಾಯುತ್ತಿದೆ ಎಂಬುದು ಕವಿಯ ವ್ಯಥೆ.

ಏಕವಿದ್ದರೂ ಸರ್ವವೇಕೆ ಒಳಗೊಳ್ಳಬಾರದಣ್ಣಾ ?”

ಎಂಬ ಪ್ರಶ್ನೆ, ಈ ಸರ್ವವನ್ನು ಮಾಯೆ, ಮಿಥ್ಯೆ ಎಂದು ಭಾವಿಸುವ ಸಂಕುಚಿತಾರ್ಥದ ವೇದಾಂತಿಗೆ ಕೇಳಿದ್ದು !

ಸಾಂತವೆಲ್ಲ ಅನಂತ್ಯಮುಖವು ಅದಕೇಕೆ ತೋರ ಸಣ್ಣ ?”

ಕಾಲ ದೇಶದ ವರ್ತಮಾನಗಳಲ್ಲಿಅಂಶವಿದ್ದರೂ, ಪ್ರತಿ ವಸ್ತುವಿನಲ್ಲೂ ಅನಂತ್ಯದ ಮುಖ ಏಕೆ ಕಾಣುತ್ತಿಲ್ಲ ?” “ಸಾಂತವನ್ನೇಕೆ ಸಣ್ಣದಾಗಿ ಕಾಣಬೇಕು ? ದೃಷ್ಟಿಯೇ ಸಣ್ಣದಲ್ಲವೇ ಇಲ್ಲಿ ? ಜ್ಞಾನ ಆನಂದಗಳಲ್ಲಿ ಸಮರಸತೆ ಇದ್ದು ಅನುಭವಿಸಿ ನೋಡಿದರೆ, ಜಗತ್ತಿನ ನಾನಾತ್ವ, ಬ್ರಹ್ಮ ವಸ್ತುವಿನ ಏಕತ್ವಗಳಲ್ಲಿ ವಿರೋಧ ಕಾಣಿಸಲಾರದು. ಸರ್ವಂ ಖಲ್ವಿದಂ ಬ್ರಹ್ಮ ಎಂಬುದೇ ಸರಿಯಾದ ದರ್ಶನ.

ಜ್ಞಾನದಲಿ ಆನಂದವಿರಲಿ, ಆನಂದದಲಿ ಜ್ಞಾನ
ಬ್ರಹ್ಮಮಾನದಲ್ಲಿ ಬ್ರಹ್ಮಗಾನದಲ್ಲಿ ಬ್ರಹ್ಮ ಏಕತಾನ

ಬ್ರಹ್ಮದಮಾನಎಂದರೆ ಅದರ ಅಳತೆ. ಅದೇ ದೊಡ್ಡದು. ಹೆಸರೇ ಹೇಳುವಂತೆ, ಅದರ ಗಾನವೂ ಪ್ರಣವ. ಇದರಲ್ಲಿ ಮೂರು ಮಾತ್ರೆಗಳಿದ್ದರೂ, “ಗಾನಒಂದೇ ಆಗಿರುವಾಗ, ಏಕವೂ ಅನೇಕವನ್ನು ಏಕೆ ಒಳಗೊಳ್ಳಬಾರದು? ಬ್ರಹ್ಮಗಾನವೂ ಹಿರಿದೇ! ತಂತಿಗಳು ನಾಲ್ಕಾದರೂ, ಒಂದೇ ಸ್ವರದಲ್ಲಿ ಸೇರಿದಾಗ ಮೇಳವಾಗುವಂತೆ - ಜಗತ್ತಿನ ಉಲಿಗಳೆಲ್ಲ ಒಂದೇ ಬ್ರಹ್ಮದ ಏಕತಾನ - ಇದರಲ್ಲಿ ಅಪಸ್ವರವೇ ಇಲ್ಲ. ಅದನ್ನು ಕೇಳುತ್ತಾ ಬ್ರಹ್ಮದ ಜಗದ್ರೂಪವನ್ನು ನೋಡಿದರೆ, ಸರ್ವಂ ಸಮಂಜಸಂ ! ಇದಕ್ಕೆ ಬೇಕಾದ ಸಿದ್ಧತೆಯನ್ನು ಕವನದ ಉಳಿದ ನಾಲ್ಕು ಚೌಪದಿಗಳು ವಿವರಿಸುತ್ತವೆ.

ಮಮತೆಯಲ್ಲೂ ಸಮತೆ ಬೇಕು. ವಿಶ್ರಾಂತಿಯಲಿ ಶಾಂತಿ
ದುಃಖ ಸುಲಿದು ಸುಖವುಣ್ಣಬೇಕು, ನಗೆಯಲ್ಲಿ ಬೇಡ ಭ್ರಾಂತಿ ...ಇತ್ಯಾದಿ

ಕವನದ ಒಂದೊಂದು ಉಕ್ತಿಯೂ ಒಂದೊಂದು ಜೀವನ ಸೂತ್ರದಂತೆ, ಮಂತ್ರದಂತೆ, ಮೂಡಿಬಂದಿರುವುದು ಇಲ್ಲಿ ಸೋಜಿಗ.

ಸಹಜವೆಂದು ಇದ್ದಂತೆ ಇರಲು ಅದು ಶುದ್ಧವಲ್ಲ ಹಾದಿ

ಹುಟ್ಟಿನಿಂದ ಪ್ರಾಣಿಯೇ ಆಗಿರುವ ಮಾನವ, ಆ ಪ್ರಾಣಿತ್ವ ಸಹಜ ಸ್ವಭಾವಕ್ಕೇ ಅಂಟಿಕೊಂಡು ನಿಂತರೆ, ಅದು ಪೂರ್ಣತೆಗೆ ಹಾದಿಯಾಗದು ! ಅದು ಬಂಧನವೇ ಮುಕ್ತಿಯೇ?

ಬುದ್ಧರಂತೆ ತಿಣುಕುವುದೇಕೆ ಸಿದ್ಧಮಾರ್ಗ ಬೇರೆ
ಭುಕ್ತಿಮುಕ್ತಿ ಬಾಯ್ಗೂಡಿಸಿಹವು ಯೋಗಕ್ಕೆ ಇದುವೇ ಮೇರೆ

ಸಿದ್ಧಪುರುಷರಾಗಿಯೂ ಬುದ್ಧರಂತೆ ನಟಿಸುವವರ ಮಾರ್ಗ ಬೇರೆ. ಭುಕ್ತಿಮುಕ್ತಿಗಳ ಸಂಗಮದ ಹಾದಿ ನಮಗೆ ಸಾಕು. ಇದೇ ಯೋಗ. ಅದರ ವಿವರ ಹೀಗೆ-

ದೇಹದಲ್ಲಿ ಸೌಂದರ್ಯವಿರಲಿ, ಆರೋಗ್ಯ ಪ್ರಾಣದಲ್ಲಿ
ಮನಸ್ಸಿನಲ್ಲಿ ಉತ್ಥಾನವಿರಲಿ, ಆನಂದ ಜೀವನಲ್ಲಿ
ಕರ್ಮದಲ್ಲಿ ಬೆಳಗಿರಲಿ, ಜೀವನವು ಧರ್ಮದಲ್ಲಿ ಕಾಮ
ಕಾಲಿಕೈಯ್ಯಕೈದಾಗಿ ಕುಣಿಸುವಾ ಕೃಷ್ಣಯೋಗ ನೇಮ.”

ಇದು ಗೀತಾತಾತ್ಪರ್ಯ. “ನಿಮಿತ್ತ ಮಾತ್ರಂ ಭವ”; “ಯುದ್ಧ್ಯಸ್ವಎಂಬ ಕೃಷ್ಣವಾಣಿಗೆಕಾಲಿಯಕೈಯ್ಯಕೈದುಆಗುವುದು ಕವಿಯ ರೂಪಕ. ಕೃಷ್ಣ, ಕಾಲ, ಅವನ ಯೋಗಮಾಯೆ, ಕಾಲಿ, ಕೃಷ್ಣನ ಕೈ ಉಪಕರಣವಾಗುವುದೂ, ಕಾಲಿಯ ಕೈ ಕೈದಾಗುವುದೂ (ಕೈದು - ಕತ್ತಿ) ಒಂದೇ ಅರ್ಥದಲ್ಲಿ ಸಮಗ್ರ ಗೀತಾ ಸಂದೇಶವನ್ನು ಇಲ್ಲಿತತ್ತ್ವಮಸಿಪ್ರಕರಣಕ್ಕೆ ಅನ್ವಯಿಸಿ, ಕವನ ಹೆಣೆದಿರುವುದೂ ಕವಿಯ ಒಂದು ಜಾಣ್ಮೆಯೇ !

ಪರಾಕಿಸಂಕಲನದಲ್ಲಿನಆತ್ಮಚಿಂತನಎಂಬ ಕವನದಲ್ಲಿ - ಈಗ Step Dance ಎಂದು ಕರೆಯಲ್ಪಡುವ ಛಂದಸ್ಸಿಗೆ ಲಯಕ್ಕೆ ಹೊಂದಬಹುದಾದ ಗತಿಯಲ್ಲಿ ರಚಿಸಲ್ಪಟ್ಟ ಈ ಕವನ ಬೇಂದ್ರೆಯವರು ಸಾಹಿತ್ಯದೇವತೆಗೆ ವಿದಾಯ ಹೇಳುವ ಭಾವದಲ್ಲಿ, ಇದರಾಚೆಗೆ ಹೇಳುವುದು ಏನೂ ಇಲ್ಲವೆಂಬ - sense of finality - ಭಾವನೆಯಲ್ಲಿಯೇ ಉದ್ದಕ್ಕೂ ಹರಿದು ಬಂದಿದೆ. ಬೇಂದ್ರೆ ಹೃದಯದ, ಕಾವ್ಯದ, ಸುಪ್ತಗಂಗೆಯಂಥ ಅಂತರ್ಧ್ವನಿ, ಅದರ ದಿಕ್ಕುಗಳು ಇಲ್ಲಿ ಸ್ಫುಟವಾಗುತ್ತವೆ.
ಬೇಂದ್ರೆಯವರ ಕೆಲವೇ ಕೆಲವು ಕವನಗಳನ್ನು ಆರಿಸಿಕೊಂಡು ವಿವರಿಸಲು ಪ್ರಯತ್ನಿಸಲಾಗಿದೆ. ಎಲ್ಲ ಕವನಗಳನ್ನೂ ವಿವರಿಸಲು ಅಸಾಧ್ಯದ ಮಾತು ಎಂದರೆ ತಪ್ಪಾಗಲರದಲ್ಲವೇ !

ಮೂಲ : ಬೇಂದ್ರೆ ಕಾವ್ಯದಲ್ಲಿ ಆಧ್ಯಾತ್ಮದ ನೆಲೆ ಮತ್ತು ಆರ್ಷದೃಷ್ಟಿ- ಪ್ರೊ|| ಕೆ.ಎಸ್.ನಾರಾಯಣಾಚಾರ್ಯ

Comments