ಉಮಾಸಹಸ್ರಮ್ - 8ನೇ ಸ್ತಬಕ


ಉಮಾಸಹಸ್ರಮ್

ಪುಷ್ಪಗುಚ್ಛ (ಸ್ತಬಕ) - 8
ಛಂದಸ್ಸು - ಅನುಷ್ಟುಬ್ದೃತ್ತಂ
ಮೂರು ಉಪಾಖ್ಯಾನಗಳು

ಸ್ತಬಕದಲ್ಲಿ ದೇವಿಯನ್ನು ಮಹತ್ತರ ಕಾರ್ಯವಾದ ಮಧು ಕೈಟಭ ಇತ್ಯಾದಿ ರಾಕ್ಷಸರನ್ನು ಸಂಹಾರಮಾಡಿದ ಕಾರ್ಯಕ್ಕಾಗಿ ಪೂಜಿಸಲಾಗುವುದು.

ಸಂಸ್ಕೃತದಲ್ಲಿ :

ತಮಸಾಮಭಿತೋ ಹಂತಾ ಚನ್ಡಿಕಾಹಾದವಾಸರಃ
ಸತಾಂ ಹೃದಯರಾಜೀವವಿಕಾಸಾಯ ಪ್ರಕಲ್ಪತಾಂ ||1||

ತಾತ್ಪರ್ಯ :

ಹೇಗೆ ಮುಂಜಾನೆಯ ಬೆಳಕು ಅಜ್ಞಾನದ ಕತ್ತಲನ್ನು ದೂರಮಾಡುವುದೋ ಹಾಗೇ ಚಂಡಿಕಾ ದೇವಿಯ ಮುಂಜಾನೆಯ ಮಂದಹಾಸವು ಅಜ್ಞಾನವನ್ನು ದೂರಮಾಡುವುದು. ಆ ಮಂದಹಾಸವು ಧರ್ಮಶ್ರದ್ಧೆಯುಳ್ಳ ಜನಗಳ ಹೃದಯಕಮಲದಲ್ಲಿ ಅರಳಲಿ.

ವಿವರಣೆ :

ದೇವಿಯ ಮಂದಹಾಸವು ನಮ್ಮ ಹೃದಯದ ಒಳಗಡೆಯಿರುವ ಕತ್ತಲೆಯನ್ನು ಹೋಗಲಾಡಿಸಲಿ. ಕಮಲವನ್ನು ಸೂರ್ಯೋದಯವು ಅರಳುವಂತೆ ಮಾಡುತ್ತದೆ. ಅದರಂತೆ ದೇವಿಯ ಮಂದಹಾಸವೆಂಬ ಹಗಲು ನಮ್ಮೆಲ್ಲರ ಹೃದಯದಲ್ಲಿರುವ ಕತ್ತಲೆಯನ್ನು ಕಳೆಯಲಿ.

ಸಂಸ್ಕೃತದಲ್ಲಿ :

ಯಾ ನಿದ್ರಾ ಸರ್ವಭೂತಾನಾಂ ಯೋಗನಿದ್ರಾ ರಮಾಪತೇಃ
ಈಡ್ಯತಾಂ ಸಾ ಮಹಾಕಾಲೀ ಮಹಾಕಾಲಸಖೀ ಸಖೇ ||2||

ತಾತ್ಪರ್ಯ :

ಸಮಸ್ತ ಜೀವಿಗಳಲ್ಲಿ ನಿದ್ರಾರೂಪದಲ್ಲಿರುವ ಮಹಾಕಾಳಿಯು ವಿಷ್ಣುವಿನಲ್ಲಿ ಯೋಗನಿದ್ರೆಯಾಗಿ ಅಭಿವ್ಯಕ್ತಗೊಳ್ಳುವಳು. , ಭಕ್ತನೇ ! ಮಹಾಕಾಳನ ಪತ್ನಿಯಾದ ಮಹಾಕಾಳಿಯ ವೈಭವವನ್ನು ವರ್ಣಿಸು.
ಎಲ್ಲ ಜೀವಿಗಳ ನಿದ್ರೆಯು ಅವರ ನೆನಪುಗಳನ್ನು ಕುಂಠಿತಗೊಳಿಸುತ್ತದೆ.

ವಿವರಣೆ :

ಇದು ಆಸ್ತಿಕನಾದ ಭಕ್ತನನ್ನು ಕುರಿತು ಹೇಳಿದುದಾಗಿದೆ. ಅಯ್ಯಾ ಭಕ್ತನೇ, ನೀನು ಯಾವ ದೇವಿಯು ಎಲ್ಲ ಪ್ರಾಣಿವರ್ಗದಲ್ಲಿಯೂ ಜಗತ್ತನ್ನೇ ಮರೆಸುವ ನಿದ್ರಾಸ್ವರೂಪಿಣಿಯಾಗಿದ್ದಾಳೋ, ಯಾರು ರಮಾಪತಿಯಾದ ವಿಷ್ಣುವಿನ ಯೋಗನಿದ್ರಾಸ್ವರೂಪಿಣಿಯಾಗಿದ್ದಾಳೋ, ಯಾರು ಮಹಾಕಾಲನಾದ ಪರಮೇಶ್ವರನ ಪ್ರಿಯ ಮಡದಿಯಾಗಿದ್ದಾಳೋ ಆ ದೇವಿಯು ನಿನ್ನಿಂದ ನಮಸ್ಕರಿಸಲ್ಪಡಲಿ.

ಸಂಸ್ಕೃತದಲ್ಲಿ :

ವಿರಿಂಚಿನಾ ಸ್ತುತೇ ಮಾತಃ ಕಾಲಿ ತ್ವಂ ಚೇನ್ನ ಮುಂಚಸಿ
ಮಧುಕೈಟಭಸಂಹಾರಂ ಕರೋತು ಕಥಮುಚ್ಯತಃ ||3||

ತಾತ್ಪರ್ಯ :

, ಮಾತೆ ! ಮಹಾವಿಷ್ಣುವಿನಲ್ಲಿ ನಿನ್ನ ಯೋಗನಿದ್ರೆಯ ಅಭಿವ್ಯಕ್ತತೆಯು ಬ್ರಹ್ಮನು ನಿನ್ನನ್ನು ಪ್ರಶಂಸಿಸಿದ ಕೂಡಲೇ ಅದು ವಿಷ್ಣುವನ್ನು ತೊರೆಯಿತು. ಇಲ್ಲದಿದ್ದರೆ ಹೇಗೆ ವಿಷ್ಣುವು ಮಧು ಕೈಟಭ ದಾನವರನ್ನು ಸಂಹರಿಸಲು ಸಾಧ್ಯವಾಗುತ್ತಿತ್ತು?

ದೇವಿಯು ವಿಷ್ಣುವನ್ನು ತನ್ನ ಯೋಗನಿದ್ರೆಯ ಪಾಶದಿಂದ ಬಿಡುಗಡೆ ಮಾಡಿದ ನಂತರವೇ ವಿಷ್ಣುವು ರಾಕ್ಷಸರನ್ನು ಸಂಹಾರ ಮಾಡಲು ಸಾಧ್ಯವಾಯಿತು.

ವಿವರಣೆ :

ದೇವಿಯೇ ! ನೀನು ಅಚ್ಯುತನನ್ನು ಬಿಡದಿದ್ದರೆ, ಅವನು ಮಧು ಕೈಟಭರನ್ನು ನಿಗ್ರಹ ಮಾಡಲು ಹೇಗೆ ಸಾಧ್ಯವಾಗುತ್ತಿತ್ತು? ನೀನು ಚತುರ್ಮುಖ ಬ್ರಹ್ಮನಿಂದ ಸ್ತೋತ್ರಮಾಡಲ್ಪಟ್ಟವಳು.

ಕಾಳಿಕಾದೇವಿಯು ಶ್ರೀಹರಿಯ ಕಣ್ಣುಗಳಲ್ಲಿ ವಾಸಮಾಡುತ್ತಾಳೆ. ಅವಳನ್ನು ಬ್ರಹ್ಮನು ಸ್ತುತಿಸುತ್ತಾನೆ. ಅವಳಿಂದ ಬಿಡಲ್ಪಟ್ಟ ವಿಷ್ಣುವು ಮಧು ಕೈಟಭರನ್ನು ಸಂಹರಿಸಿದನು.

ಸಂಸ್ಕೃತದಲ್ಲಿ :

ವಾಸವಃ ಕಾಶನೀಕಾಶಯಶೋಲಂಕೃತದಿಙುಖಃ
ಮಹೋಗ್ರವಿಕ್ರಮಾದ್ಯಸ್ಮಾದಾಸೀದಾಜೌ ಪರಾಙುಖಃ ||4||

ತಾತ್ಪರ್ಯ :

ಮುಂದಿನ ಹತ್ತು ಶ್ಲೋಕಗಳಲ್ಲಿ ಕವಿಯು ಮಹಿಷಾಸುರನ ಮಹಾ ಶಕ್ತಿಯನ್ನು ( ಈ ಅಸುರನನ್ನು ಸಂಹರಿಸಿ ಅವನ ನಿರಂಕುಶ ಪ್ರಭುತ್ವಕ್ಕೆ ಇತಿಶ್ರೀ ಹಾಡಿದ ದೇವಿಯ  ಅಪಾರ ಶಕ್ತಿಯನ್ನು ಸ್ಥಾಪಿಸಲು) ವರ್ಣಿಸುವರು.

ಇಂದ್ರನ ಪರಿಶುದ್ಧ ಖ್ಯಾತಿಯು ದಶದಿಕ್ಕುಗಳಲ್ಲಿ ಪಸರಿಸಿದ್ದರೂ ಅವನನ್ನು ಮಹಾನ್ ಶಕ್ತಿಶಾಲೀ ವೀರ ಹಾಗೂ ಪರಾಕ್ರಮಿ ಮಹಿಷನು ಯುದ್ಧದಲ್ಲಿ ಸೋಲಿಸಿದನು.

ಕಷಾನಿಕಷಯಶಾಸ್ ಖ್ಯಾತಿ - ಕಶಪುಷ್ಪದಂತೆ ಬೆಳ್ಳಗಿರುವುದು; ಶ್ವೇತ ವರ್ಣದ ಕಶಿ ಪುಷ್ಪವು ಶುಭ್ರ ಖ್ಯಾತಿಯನ್ನು ಸೂಚಿಸುತ್ತದೆ.

ವಿವರಣೆ :

ಮಹಿಷನು ಅತ್ಯಂತ ಹೆಚ್ಚಾದ ಪ್ರಚಂಡವಾದ ಪರಾಕ್ರಮದಿಂದ ಕೂಡಿದ್ದನು. ಇಂದ್ರನು ಹತ್ತು ದಿಕ್ಕುಗಳಲ್ಲಿಯೂ ಪ್ರಕಾಶಿಸುವ ಪರಾಕ್ರಮದಿಂದ ಕೂಡಿದ್ದನು. ಅವನ ಕೀರ್ತಿಯು ಕಾಶಪುಷ್ಪದಂತೆ ಬೆಳಗುತ್ತಿತ್ತು. ಅಂತಹ ಇಂದ್ರನು ಮಹಿಷಾಸುರನಿಂದ ಪರಾಜಿತನಾದನು.

ಸಂಸ್ಕೃತದಲ್ಲಿ :

ಯತ್ಪ್ರತಾಪೇನೆ ಸಂತಪ್ತೋ ಮನ್ಯೇ ಬಾಡಬರೂಪಭೃತ್
ಭಗವಾನನಲೋsದ್ಯಾಪಿ ಸಿಂಧುವಾಸಂ ನ ಮುಂಚತಿ ||5||

ತಾತ್ಪರ್ಯ :

ಮಹಿಷಾಸುರನ ಪರಾಕ್ರಮವು ಅಗ್ನಿಯನ್ನೇ ಸುಡಲು ಪ್ರಾರಂಭಿಸಿದಾಗ ಅಗ್ನಿಯು ಬಡಬ ರೂಪಧರಿಸಿ ಸಮುದ್ರದೊಳಗಿನ ತನ್ನ ವಾಸಸ್ಥಾನದಲ್ಲಿದ್ದವನು ಹೊರಬರಲು ಆಗಲಿಲ್ಲ.

ಸಮುದ್ರದ ಆಳದಲ್ಲಿ ಅಗ್ನಿಯು ಬಡಬಾಗ್ನಿ ರೂಪದಲ್ಲಿ ಇರುವನೆಂದು ಪುರಾತನ ಕಾಲದ ನಂಬಿಕೆ.

ವಿವರಣೆ :

ಆ ಮಹಿಷನು ತನ್ನ ಪ್ರಭಾವದಿಂದ ಅಗ್ನಿಗೂ ಸಂತಾಪವನ್ನುಂಟು ಮಾಡಿದನು. ಅದರಿಂದ ಸಂತಪ್ತನಾದ ಅಗ್ನಿಯು ಬಡಬಾ ಎಂದರೆ ಹೇಸರಗತ್ತೆಯ ರೂಪದಿಂದ ಇಂದಿಗೂ ಸಮುದ್ರದಲ್ಲಿ ತಾಪ ನಿವಾರಣೆಗೋಸ್ಕರ ವಾಸಿಸುತ್ತಿದ್ದಾನೆ.

ಸಂಸ್ಕೃತದಲ್ಲಿ :

ಕುರ್ವಾಣೇ ಭೂತಕದನಂ ಯಸ್ಮಿನ್ವಿಸ್ಮಿತಚೇತಸಃ
ಏಷ ಏವಾಂತಕೋ ನಾಹಮಿತ್ಯಾಸೀದಂತಕಸ್ಯ ಧೀಃ ||6||

ತಾತ್ಪರ್ಯ :

ಸಾವಿನ ದೇವತೆ ಯಮನು ಕ್ರೂರಿ ಮಹಿಷಾಸುರನು ಪ್ರಜೆಗಳನ್ನು ನಿರ್ದಯವಾಗಿ ಸಂಹಾರಮಾಡುವುದನ್ನು ಕಂಡು ಮಹಿಷಾಸುರನೇ ಯಮರಾಜನೊ, ತಾನಲ್ಲವೆಂದು ಆಶ್ಚರ್ಯ ಚಕಿತನಾದನು.

ವಿವರಣೆ :

ಈ ಮಹಿಷನು ಪ್ರಾಣಿವರ್ಗದ ಸಂಹಾರವನ್ನು ಮಾಡುವ ರೀತಿಯನ್ನು ನೋಡಿದ ಯಮನು, ನಾನು ಅಂತಕನಲ್ಲ, ಈ ಮಹಿಷನೇ ಜಗತ್ತಿನ ಅಂತಕನು ಎಂದು ಆಶ್ಚರ್ಯದಿಂದ ಉದ್ಗರಿಸಿದನು.

ಸಂಸ್ಕೃತದಲ್ಲಿ :

ರಣೇ ಯೇನಾತಿರಸ್ಕೃತ್ಯ ತ್ಯಕ್ತೋ ರಾಕ್ಷಸ ಇತ್ಯತಃ
ಚಿರಾಯ ಹರಿದಿಶೇಷು ಕೋಣೇಶಃ ಪ್ರಾಪ್ತವಾನ್ಯಶಃ ||7||

ತಾತ್ಪರ್ಯ :

ನೈರುತ್ಯ ದಿಕ್ಕಿನಲ್ಲಿ ದೇವತೆ, ನಿರುತಿಯು ಅತ್ಯುನ್ನತ ಸ್ಥಾನವಾದಕೋನೇಶಸ್ಥಾನವನ್ನು ಹೊಂದಿದ್ದರಿಂದ ಹಾಗೂ ಅವನೂ ಸಹ ರಾಕ್ಷಸ ವಂಶಕ್ಕೆ ಸೇರಿದವನಾದ್ದರಿಂದ ಮಹಿಷಾಸುರನು ಅವನಮೇಲೆ ಯುದ್ಧಮಾಡಲಿಲ್ಲ.

ವಿವರಣೆ :

ಆ ಮಹಿಷನು ಯುದ್ಧದಲ್ಲಿ ನೈಋತ್ಯದ ಅಧಿಪತಿಯನ್ನು ಅವಮಾನಗೊಳಿಸಲಿಲ್ಲ. ಏಕೆಂದರೆ ಅವನೂ ರಾಕ್ಷಸನೆ. ರಾಕ್ಷಸ ಜಾತಿಯ ಅಭಿಮಾನದಿಂದ ಅವನನ್ನು ಅವಮಾನಗೊಳಿಸಲಿಲ್ಲ. ಆದ್ದರಿಂದ ಅವನು ಬಹುಕಾಲದವರೆಗೂ ಯಶಸ್ಸನ್ನು ಪಡೆದನು.

ಸಂಸ್ಕೃತದಲ್ಲಿ :

ಯನ್ನಿಯಂತುಮಶಕ್ತಸ್ಯ ಕುರ್ವಾಣಮಸತೀಃ ಕ್ರಿಯಾಃ
ನಿಯಂತುರಸತಾಮಾಸೀತ್ಪಾಶಿನೋ ಮಲಿನಂ ಯಶಃ ||8||

ತಾತ್ಪರ್ಯ :

ಮಹಿಷಾಸುರನ ದುಷ್ಟ ಕಾರ್ಯಗಳನ್ನು ತಡೆಯಲಾಗದೇ ಇದ್ದದ್ದರಿಂದ ದುಷ್ಟ ಜನಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಶಕ್ತಿಯಿರುವ ವರುಣನ ಖ್ಯಾತಿಗೆ ಕಳಂಕಬಂದಿತು.

ವಿವರಣೆ :

ವರುಣನು ಕೆಟ್ಟಕೆಲಸ ಮಾಡುವವರನ್ನು ಅಡಗಿಸುತ್ತಾನೆಂದು ಪ್ರಸಿದ್ಧಿಯಿದೆ. ಆದರೆ ಕೆಟ್ಟ ಕೆಲಸಗಳನ್ನೇ ಮಾಡುತ್ತಿದ್ದ ಮಹಿಷನನ್ನು ವರುಣನು ಅಡಗಿಸಲಾರದವನಾದನು. ಆದ್ದರಿಂದ ಅವನ ಯಶಸ್ಸು ಕಡಿಮೆಯಾಯಿತು.

ಸಂಸ್ಕೃತದಲ್ಲಿ :

ಬಾಹುವೀರ್ಯಪರಾಭೂತೋ ಯಸ್ಯ ಪ್ರಾಯೇಣ ಮಾರುತಃ
ಬಭೂವ ಕ್ಷಣದಾಂತೇಷು ರತಾಂತಪರಿಚಾರಕಃ ||9||

ತಾತ್ಪರ್ಯ :

ಮಹಿಷಾಸುರನ ಪರಾಕ್ರಮದಿಂದ ವಾಯುವು ಸೋತು ಅವನ ಆಳಾಗಿ ಅವನನ್ನು ಅಸುರನು ತನ್ನ ಪತ್ನಿಯೊಂದಿಗೆ ರಾತ್ರೆಯಲ್ಲಿ ಅಂತಃಪುರದಲ್ಲಿದ್ದಾಗ ತಂಗಾಳಿಯನ್ನು ಬೀಸುವಂತೆ ಉಪಯೋಗಿಸಿಕೊಳ್ಳಲಾಯಿತು.

ವಿವರಣೆ :

ವಾಯುವು ಮಹಿಷನ ಬಾಹುವೀರ್ಯದಿಂದ ಪರಾಜಿತನಾಗಿ ಅವನಿಗೆ ಸುರತಕ್ರಿಯೆಯ ಕೊನೆಯಲ್ಲಿ ಉಪಚರಿಸುವ ಸೇವಕನಂತೆ ಮೆಲ್ಲಗೆ ಬೀಸುತ್ತಿದ್ದನು.

ಸಂಸ್ಕೃತದಲ್ಲಿ :

ನಿಧಿನ್ಯೇನ ಜಿತೋ ಹಿತ್ವಾ ರಾಜರಾಜಃ ಪಲಾಯಿತಃ
ಸ್ಪಷ್ಟಂ ಬಭಾಣ ಮಾಧುರ್ಯಂ ಪ್ರಾಣಾನಾಮಖಿಲಾದಪಿ ||10||

ತಾತ್ಪರ್ಯ :

ಮಹಿಷಾಸುರನಿಂದ ಸೋಲಲ್ಪಟ್ಟ ರಾಜರುಗಳ ರಾಜನಾದ ಕುಬೇರನುಜೀವವು ಎಲ್ಲಕ್ಕಿಂತ ಅಮೂಲ್ಯವಾದದ್ದುಎಂಬ ನಾಣ್ಣುಡಿಯನ್ನು ನಿಜವಾಗಿಸಲು ಎಲ್ಲ ಸಂಪತ್ತನ್ನೂ ಅಲ್ಲೇ ಬಿಟ್ಟು ಓಡಿಹೋದನು.

ವಿವರಣೆ :

ಕುಬೇರನು ಈ ಮಹಿಷನ ಉಪಟಳವನ್ನು ಸಹಿಸಲಾರದೆ ಮಹಾಪದ್ಮನೇ ಮೊದಲಾದ ನವನಿಧಿಗಳನ್ನು ಬಿಟ್ಟೋಡಿದನು. ಪ್ರಪಂಚದಲ್ಲಿ ಎಲ್ಲ ವಸ್ತುಗಳಿಗಿಂತಲೂ ಪ್ರಾಣಗಳೇ ಎಲ್ಲರಿಗೂ ಪ್ರಿಯತಮವಾದುದು ಎಂಬುದನ್ನು ಜಗತ್ತಿಗೆ ಸಾರಿ ಹೇಳಿದನು.

ಸಂಸ್ಕೃತದಲ್ಲಿ :

ಯಸ್ಮಿನ್ನುತ್ತರಪೂರ್ವಸ್ಯಾ ದಿಶ ಏಕಾದಶಾಧಿಪಾಃ
ಕುಂಠಾ ಬಭೂವುರಾತ್ಮೀಯಕಂಠೋಪಮಿತಕೀರ್ತಯಃ ||11||

ತಾತ್ಪರ್ಯ :

ಈಶಾನ್ಯ ದಿಕ್ಕಿನಲ್ಲಿ ಹನ್ನೊಂದು ರುದ್ರರೂ ಮಹಿಷಾಸುರನೆದುರು ಸೋತದ್ದರಿಂದ ಅವರ ಖ್ಯಾತಿಗೆ ಅವರ ಕತ್ತಿನಲ್ಲಿರುವ  ಕಪ್ಪು ಕಪ್ಪುಬಣ್ಣದಂತೆ ಮಸಿಬಳಿಯಿತು.

ಕವಿಯು ರುದ್ರರ ಕತ್ತಿನಲ್ಲುಂಟಾಗಿರುವ ನೀಲಿ ಬಣ್ಣವನ್ನು ಅವರ ಖ್ಯಾತಿಗೆ ಮಸಿ ಬಳಿದಿದ್ದಕ್ಕೆ ಹೋಲಿಕೆ ಮಾಡಿರುವನು. ರುದ್ರನ ಕಂಠವು ನೀಲಿಯಾಗಿರುವುದು ಅವನು ಸಮುದ್ರ ಮಥನದಲ್ಲಿ ಉತ್ಪತ್ತಿಯಾದ ವಿಷವನ್ನು ಕುಡಿದಿದ್ದರಿಂದ. ಅಜ, ಏಕ, ಅಹಿರ್ಬುಧ್ನ್ಯ, ಪಿನಾಕಿ, ಮಹೇಶ್ವರ, ಅಪರಾಜಿತ, ಶಾದ್ ವೃಷಕಪಿ, ತ್ರಸಿಕ, ಶಭು, ಹರಣ ಮತ್ತು ಈಶ್ವರರು ಹನ್ನೊಂದು ರುದ್ರರು.

ವಿವರಣೆ :

ಮಹಿಷಾಸುರನ ಎದುರಿನಲ್ಲಿ ಈಶಾನ್ಯ ದಿಕ್ಕಿನಲ್ಲಿದ್ದ ಹನ್ನೊಂದು ಜನ ರುದ್ರರು ಶಕ್ತಿಹೀನರಾದರು. ಅವರ ಕೀರ್ತಿಯು ಅವರ ಕಂಠದಂತೆ ಶುಭ್ರತೆಯನ್ನು ಬಿಟ್ಟು ಮಲಿನವಾಯಿತು. ಶಿವನ ಕಂಠವು ನೀಲಿಯ ಬಣ್ಣವುಳ್ಳದ್ದು ಎಂಬುದು ಸುಪ್ರಸಿದ್ಧವಾದ ವಿಷಯವೇ. ಅದರಂತಾಯಿತು ಎಂದರೆ ಮಾಲಿನವಾಯಿತು ಎಂದರ್ಥ.

ಸಂಸ್ಕೃತದಲ್ಲಿ :

ನಿಜಶುದ್ಧಾಂತಕಾಂತಾನಾಮಾನನೈರೇವ ನಿರ್ಜಿತಂ
ಲಲಜ್ಜೇ ಯಃ ಪುನರ್ಜಿತ್ವಾ ಶೂರಮಾನಿ ಸುಧಾಕರಂ ||12||

ತಾತ್ಪರ್ಯ :

ಅಪಾರ ಪರಾಕ್ರಮಿಯಾದ ಮಹಿಷಾಸುರನು ಚಂದ್ರನನ್ನು ಸೋಲಿಸಿದಾಗ ಅವನಿಗೆ ನಾಚಿಕೆಯಾಯಿತೇಕೆ ಎಂದರೆ ಚಂದ್ರನು ಆಗಲೇ ಅಂತಃಪುರದಲ್ಲಿರುವ ಸ್ತ್ರೀಯರೆಲ್ಲರ ಸುಂದರ ಮುಖಗಳಿಂದ ಸೋಲಿಸಲ್ಪಟ್ಟಿದ್ದನು.

ಶೂರರು ತಾವು ಸೋಲಿಸಿದ ವ್ಯಕ್ತಿಯು ಆಗಲೇ ಸೋತಿರುವನೆಂದು ತಿಳಿದಾಗ ನಾಚಿಕೆಯನ್ನು ಅನುಭವಿಸುವರು.

ವಿವರಣೆ :

ಶುರಮಾನಿಯಾದ ಆ ಮಹಿಷನು, ತನ್ನ ಅಂತಃಪುರದ ಕಾಂತೆಯರಿಂದ ಜಯಿಸಲ್ಪಟ್ಟ ಚಂದ್ರನನ್ನು ಪುನಃ ಜಯಿಸಿ ನಾಚಿದನು. ಅಂದರೆ ಅವನ ಅಂತಃಪುರದ ಸ್ತ್ರೀಯರು ಚಂದ್ರನಿಗಿಂತ ಸುಂದರಿಯರಾಗಿದ್ದರು. ಆಗಲೇ ಸೋತವನನ್ನು ಪುನಃ ಸೋಲಿಸುವುದು, ತನ್ನನ್ನು ಶೂರನೆಂಬುವುದಾಗಿ ತಿಳಿದವನಿಗೆ ಅವಮಾನವಲ್ಲವೇ?

ಸಂಸ್ಕೃತದಲ್ಲಿ :

ಬಾಲಸ್ಯೇವ ಕ್ರೀಡನಕೈಃ ಪ್ರವೀರೈರ್ಯಸ್ಯ ಖೇಲತಃ
ಲೀಲಾಕಂದುಕಧೀರಾಸೀದ್ದೇವೇ ದೀಧಿತಿಮಾಲಿನಿ ||13||

ತಾತ್ಪರ್ಯ :

ಮಹಿಷಾಸುರನು ಪ್ರಬಲ ಶತ್ರುಗಳೊಂದಿಗಿನ ಯುದ್ಧವನ್ನು ಮಕ್ಕಳಾಟಿಕೆಯಂತೆ ಪರಿಗಣಿಸುತ್ತಿದ್ದನು. ಆದ್ದರಿಂದ ಪ್ರಕಾಶಿಸುವ ಸೂರ್ಯನು ಒಂದು ಆಟದ ಚೆಂಡಿನಂತೆ ಅವನಿಗೆ ಅನಿಸಿತ್ತು.

ವಿವರಣೆ :

ಬಾಲಕರು ಆಟದ ಸಮಾನುಗಳಿಂದ ಕೂಡಿ ಕ್ರೀಡಿಸುವಂತೆ ಮಹಿಷಾಸುರನು ವೀರರೊಡನೆ ಹೋರಾಡುತ್ತಿದ್ದನು. ಅಂದರೆ ಅವರೆಲ್ಲರೂ ಅವನಿಗೆ ಆಟದ ಸಾಮಾನಿನಂತಿದ್ದರು. ಅಂತಹವನಿಗೆ ಸೂರ್ಯದೇವನು ಆಟದ ಚಂಡಿನಂತಾದನು.

ಸಂಸ್ಕೃತದಲ್ಲಿ :

ತ್ರಿಯಾಮಾಚರಶುದ್ಧಾಂತಭ್ರೂವಿಲಾಸನಿವಾರಣಂ
ವಿಷ್ಣೋಃ ಸುದರ್ಶನಂ ಚಕ್ರಂ ಯಸ್ಯ ನಾಪಶ್ಯದಂತರಂ ||14||

ತಾತ್ಪರ್ಯ :

ವಿಷ್ಣುವಿನ ಆಯುಧವಾದ ಸುದರ್ಶನ ಚಕ್ರವು ರಾಕ್ಷಸರ ಅಂತಃಪುರದಲ್ಲಿರುವ ಹೆಂಗಸರ ಸಂತೋಷಕ್ಕೆ ಇತಿಶ್ರೀ ಹಾಡಿತ್ತಾದರೂ, ಅದಕ್ಕೆ ಮಹಿಷಾಸುರನ ಮೇಲೆ ಯಾವುದೇ ಪ್ರಭಾವವನ್ನು ಉಂಟುಮಾಡಲಾಗಲಿಲ್ಲ.

ವಿವರಣೆ :

ವಿಷ್ಣುವಿನ ಸುದರ್ಶನ ಚಕ್ರವು ರಾಕ್ಷಸರ ಅಂತಃಪುರದಲ್ಲಿನ ಸ್ತ್ರೀಯರ ಭ್ರೂವಿಲಾಸಗಳನ್ನು ನಿಲ್ಲಿಸುವಂತಹದು. ಅಂದರೆ ರಾಕ್ಷಸಿಯರಿಗೆ ದುಃಖವನ್ನು ನೀಡುವಂತಹುದು. ರಾಕ್ಷಸರೆಲ್ಲರ ವಿನಾಶಕ್ಕೆ ಕಾರಣವಾದುದು ಅದು. ಮಹಿಷನನ್ನು ನಿಗ್ರಹಿಸಲು ಅವನಲ್ಲಿ ಅವಕಾಶವನ್ನೇ ಪಡೆಯಲಿಲ್ಲ.

ಸಂಸ್ಕೃತದಲ್ಲಿ :

ಮಹಿಷಂ ತಂ ಮಹಾವೀರ್ಯಂ ಯಾ ಸರ್ವಸುರದೇಹಜಾ
ಅವಧೀದ್ದಾನವಂ ತಸ್ಯೈ ಚಂಡಿಕಾಯೈ ನಮೋ ನಮಃ ||15||

ತಾತ್ಪರ್ಯ :

ಸಮಸ್ತ ದೇವತೆಗಳಿಂದ ಹೊರಬಂದು ಭಯಾನಕ ಮಹಿಷಾಸುರನನ್ನು ಸಂಹಾರಮಾಡಿದ ದೇವಿ ಚಂಡಿಕಳಿಗೆ ನನ್ನ ಪ್ರಾರ್ಥನೆಯನ್ನು ಸಲ್ಲಿಸುವೆ.

ವಿವರಣೆ :

ಹೀಗೆ ಮಹಾವಿರನಾದ ಹಾಗೂ ದಾನವನಾದ ಮಹಿಷನನ್ನು, ಸಮಸ್ತ ದೇವತೆಗಳ ತೇಜೋರಾಶಿಯಿಂದ ಆವಿರ್ಭವಿಸಿದ ಯಾವ ದೇವಿಯು ನಿಗ್ರಹಿಸಿದ್ದಳೋ ಆ ಚಂಡಿಕಾದೇವಿಗೆ ನಮಸ್ಕಾರಗಳು.

ಅವಳನ್ನೇ ಮಹಿಷಾಸುರಮರ್ಧಿನಿ ಎನ್ನುತ್ತಾರೆ. ದುರ್ಗಾ ಸಪ್ತಶತಿಯಲ್ಲಿ -
ತತಃ ಸಮಸ್ತ ದೇವತಾನಾಂ ತೇಜೋರಾಶಿ ಸಮುದ್ಭವಾಂ
ತಾಂ ವಿಲೋಕ್ಯ ಮುದಂ ಪ್ರಾಪುರಮರಾ ಮಹಿಷಾರ್ದಿತಾಃ ||”

ಸಂಸ್ಕೃತದಲ್ಲಿ :

ಮುಖಂ ತವಾಸೇಚನಕಂ ಧ್ಯಾಯಂ ಧ್ಯಾಯಂ ನಿರಂತರಂ
ಮೃಗೇಂದ್ರವಾಹೇ ಕಾಲೇನ ಮೃಡಸ್ತ್ವನ್ಮುಖತಾಂ ಗತಃ ||16||

ತಾತ್ಪರ್ಯ :

, ಸಿಂಹವಾಹಿನಿ ಮಾತೆ ! ಶಿವನು ಸತತವಾಗಿ ನಿನ್ನ ಆರಾಧ್ಯ ಮುಖವನ್ನು ಉದ್ದೇಶಿಸಿ ಧ್ಯಾನಮಾಡಿ ಕೊನೆಗೆ ನಿನ್ನ ರೂಪವನ್ನು ಪಡೆಯುವನು (ಅರ್ಧನಾರೀಶ್ವರನಾಗಿ).

ವಿವರಣೆ :

ಸಿಂಹವಾಹಿನಿಯಾದ ತಾಯಿಯೇ ! ಎಷ್ಟು ನೋಡಿದರೂ ತೃಪ್ತಿಯಾಗದ ಸೌಂದರ್ಯವುಳ್ಳ ನಿನ್ನ ಮುಖವನ್ನು ಧ್ಯಾನ ಮಾಡಿ ಪರಶಿವನು ಕಾಲಕ್ರಮದಲ್ಲಿ ನಿನ್ನಂತೆಯೇ ಮುಖವುಳ್ಳವನಾದನು. ಅಂದರೆ ಅರ್ಧನಾರೀಶ್ವರನಾದನು. ಧ್ಯಾನ ಮಾಡುವವನು, ತಾನು ಏನನ್ನು ಧ್ಯಾನ ಮಾಡುವನೋ ಅದರಂತಾಗುತ್ತಾನಲ್ಲವೇ ?

ಸಂಸ್ಕೃತದಲ್ಲಿ :

ಕಾರ್ತಿಕೀಚಂದ್ರವದನಾ ಕಾಲಿಂದೀವೀಚಿದೋರ್ಲತಾ
ಅರುಣಾಂಭೋಜಚರಣಾ ಜಯತಿ ತ್ರಿರುಚಿಃ ಶಿವಾ ||17||

ತಾತ್ಪರ್ಯ :

ಮೂರು ವಿಧದ ಹೊಳಪಿನ ಮುಖವುಳ್ಳ ದೇವೀ ಶಿವಾಳಿಗೆ ಜಯವಾಗಲಿ. ಕಾರ್ತೀಕ ಮಾಸದ ಚಂದ್ರನ ಕಾಂತಿಯನ್ನು ಅವಳ ಮುಖವು ಹೋಲುತ್ತದೆ, ಕೈಗಳು ಯಮುನಾ ನದಿಯ ಅಲೆಗಳನ್ನು ಮತ್ತು ಕಾಲುಗಳು ಕೆಂಪಾದ ಕಮಲ ಪುಷ್ಪವನ್ನು ಹೋಲುತ್ತವೆ.

ಶಿವಾಳಿಗೆ ಮೂರು ವಿಧದ ಬೇರೆ ಬೇರೆ ಬಣ್ಣಗಳಾದ - ಚಂದ್ರನಂತೆ ಶ್ವೇತ ಬಣ್ಣದ ಮುಖ, ಕೈಗಳು ಯಮುನಾ ನದಿಯಂತೆ ಕಪ್ಪು ಬಣ್ಣ ಮತ್ತು ಕಾಲ್ಗಳು ಕೆಂಪಾದ ಕಮಲ ಪುಷ್ಪದಂತೆ. ದೇವಿಯ ಈ ಮೂರು ಬಣ್ಣಗಳು ಶ್ರುತಿಯು ವಿವರಿಸುವಂತೆ, ಅಜಾಮೀಕಮ್ ಲೋಹಿತಶುಕ್ಲಕೃಷ್ಣಾಮ್ ಮೂರು ಗುಣಗಳನ್ನು ಸೂಚಿಸುತ್ತವೆ.

ವಿವರಣೆ :

ಪಾರ್ವತೀದೇವಿಯು ಕೃತ್ತಿಕಾ ನಕ್ಷತ್ರದೊಂದಿಗೆ ಕೂಡಿದ ಹುಣ್ಣಿಮೆಯ ಚಂದ್ರನ ಕಾಂತಿಯುಳ್ಳವಳಾಗಿದ್ದಾಳೆ. ಯಮುನಾನದಿಯ ಅಲೆಗಳಂತಿರುವ, ಬಳ್ಳಿಯಂತಿರುವ ತೋಳುಗಳುಳ್ಳವಳಾಗಿದ್ದಾಳೆ. ಕೆಂಪಾದ ಕಮಲದಂತೆ ಪಾದಗಳುಳ್ಳವಳಾಗಿದ್ದಾಳೆ. ಹೀಗೆ ಬಿಳುಪು, ಕಪ್ಪು ಮತ್ತು ಕೆಂಪು ಬಣ್ಣಗಳಿಂದ ದೇವಿಯು ಅಜಾಮೇಕಾಂ ಲೋಹಿತಕೃಷ್ಣರೂಪಾಂ ಎಂದು ವೇದದಲ್ಲಿ ಹೇಳಿ ಬ್ರಹ್ಮಸ್ವರೂಪವನ್ನು ಪಡೆದವಳು ಎಂದಾರ್ಥವಾಗುವುದು.

ಸಂಸ್ಕೃತದಲ್ಲಿ :

ಯತ್ತೇ ಕಚಭರಃ ಕಾಲೋ ಯದ್ಬಾಹುರ್ಲೋಕರಕ್ಷಕಃ
ಯುಕ್ತಂ ದ್ವಯಂ ಶಿವೇ ಮಧ್ಯಸ್ತ್ವಸನ್ನಾಕೋ ನ ನಾಕರಾಟ್ ||18||

ತಾತ್ಪರ್ಯ :

, ಶಿವೆ ! ನಿನ್ನ ದಟ್ಟವಾದ ಕೂದಲುಗಳು ಕಪ್ಪಾಗಿದ್ದು (ಕಪ್ಪು /ನಾಶಗೊಳಿಸುವ) ಮತ್ತು ಕೈಗಳು ಪ್ರಪಂಚವನ್ನು ರಕ್ಷಿಸಲು ಇರುವುದು. ನಿನ್ನ ನವಿರಾದ ಮಧ್ಯಭಾಗವು (ನಡು) ಸ್ವರ್ಗಲೋಕದ ಅಧಿಪತಿ ಇಂದ್ರನನ್ನೊಳಗೊಂಡ ಸ್ವರ್ಗವನ್ನು ಪ್ರತಿನಿಧಿಸುತ್ತದೆ.

ದೇವಿಯು ತಾನೇ ರಕ್ಷಣೆ ಹಾಗೂ ವಿನಾಶ ಕಾರ್ಯಗಳನ್ನು ಮಾಡುವುದರಿಂದ ಇಂದ್ರನಿಗೆ ಏನೂ ಕೆಲಸವಿರುವುದಿಲ್ಲ.

ವಿವರಣೆ :

ಸರ್ವವ್ಯಾಪಿಯಾದ ಮಹಾಕಾಲನು ಕೇಶಪಾಶವಾಗಿದ್ದಾನೆ. ಲೋಕರಕ್ಷಕನಾದ ವಿಷ್ಣುವು ಆಕೆಯ ಬಾಹುಗಳಾಗಿದ್ದಾನೆ. ಇಂದ್ರನು ಸ್ವರ್ಗಾಧಿಪತಿಯಾಗಿ ಅವಳ ಮಧ್ಯಭಾಗವಾಗಿದ್ದಾನೆ. ಆದರೆ ಅವನಿಗೆ ಸ್ವರ್ಗವಿಲ್ಲ ಎನ್ನುವುದಿಲ್ಲ. ಅಂದರೆ ಸ್ವರ್ಗ ಇದ್ದೇ ಇರುತ್ತದೆ. ಕವಿಸಮಯದಂತೆ ಮಧ್ಯಭಾಗವು ಉತ್ತಮ ಸ್ತ್ರೀಯರಿಗೆ ಶೂನ್ಯವಾದರೂ ಇಂದ್ರನಿಗೆ ಸ್ವರ್ಗವೆಂಬುದು ಉಂಟೇ ಉಂಟು ಎಂದು ಭಾವ.

ಸಂಸ್ಕೃತದಲ್ಲಿ :

ಸ್ವದೇಹಾದೇವ ಯಾ ದೇವೀ ಪ್ರದೀಪಾದಿವ ದೀಪಿಕಾ
ಆವಿರ್ಭಭೂವ ದೇವಾನಾಂ ಸ್ತುವತಾಂ ಹರ್ತುಮಾಪದಃ ||19||

ತಾತ್ಪರ್ಯ :

ದೇವತೆಗಳು ತಮ್ಮ ಕಷ್ಟನಿವಾರಣೆಗಾಗಿ ದೇವಿಯನ್ನು ಆಹ್ವಾನಿಸಿದಾಗ ಅವಳು ಒಂದು ದೀಪದಿಂದ ಮತ್ತೊಂದು ದೀಪವನ್ನು ಹಚ್ಚುವಂತೆ ತನ್ನ ಶರೀರದಿಂದಲೇ ಮತ್ತೊಂದು ಶರೀರ(ಕೌಶಿಕಿ)ವನ್ನು ಹೊಂದುತ್ತಾಳೆ.

ಈ ಶ್ಲೋಕದಲ್ಲಿನ ವಿವರಣೆಗಳು ಈ ಸ್ತಬಕದ 23ನೇ ಶ್ಲೋಕದಲ್ಲಿ ವಿವರಿಸಿರುವ ದೇವಿಯ ಕೌಶಿಕಿ ರೂಪಕ್ಕೆ ಸಂಬಂಧಿಸಿರುವುದು.

ವಿವರಣೆ :

ಯಾವ ದೇವಿಯು ಕೌಶಿಕೆಯ ರೂಪದಿಂದ ಆವಿರ್ಭವಿಸಿದಳು. ಅವಳು ಆವಿರ್ಭವಿಸಿದುದು ದೀಪದಿಂದ ಹೊರಬಂದ ದೀಪದಂತಿತ್ತು. ಆಕೆಯು ಸ್ತೋತ್ರಮಾಡುತ್ತಿದ್ದ ದೇವತೆಗಳ ವಿಪತ್ತನ್ನು ಹೋಗಲಾಡಿಸಲು ಆವಿರ್ಭವಿಸಿದಳು. ಒಬ್ಬಳೇ ಆದ ದೇವಿಯಿಂದ ಅನೇಕ ಶಕ್ತಿಗಳು ಹೊರಬಂದು ಅವಳಲ್ಲೇ ಲಯವಾಗುತ್ತವೆ ಎಂದು ಸಪ್ತಶತಿಯಲ್ಲಿ ಹೇಳಲ್ಪಟ್ಟಿದೆ.

ಸಂಸ್ಕೃತದಲ್ಲಿ :

ಧೈರ್ಯಚಾತುರ್ಯಗಾಂಭೀರ್ಯವೀರ್ಯಸೌಂದರ್ಯಶಾಲಿನೀಂ
ರತ್ನಂ ನಿತಂಬಿನೀಜಾತೌ ಮೇನಿರೇ ಯಾಂ ಸುರಾಸುರಾಃ ||20||

ತಾತ್ಪರ್ಯ :

ದೇವಾಸುರರು ದೇವಿಯ ಕೌಶಿಕಿ ರೂಪವನ್ನು ಮಹಿಳೆಯರ ಪವಿತ್ರವಾದ ವಜ್ರವೆಂದು ಪರಿಗಣಿಸುವರು. ಅವಳಿಗೆ ಧೈರ್ಯ, ಕೌಶಲ್ಯತೆ, ಘನತೆ, ಶಕ್ತಿ ಮತ್ತು ಸೌಂದರ್ಯಗಳ ಶ್ರೇಷ್ಟ ಗುಣಗಳು ವರವಾಗಿರುವುದು.

ವಿವರಣೆ :

ದೇವತೆಗಳು ಮತ್ತು ಅಸುರರು ಧೈರ್ಯ, ಚಾತುರ್ಯ ಮತ್ತು ಗಾಂಭೀರ್ಯಾದಿಗಳಿಂದ ಬೆಳಗುತ್ತಲಿದ್ದ ಆ ಕೌಶೀತಕೀ ದೇವಿಯನ್ನು ಸ್ತ್ರೀ ಜಾತಿಯಲ್ಲಿ ಅತಿ ಶ್ರೇಷ್ಠಳನ್ನಾಗಿ ತಿಳಿದರು.

ಸಂಸ್ಕೃತದಲ್ಲಿ :

ಯದೀಯಹುಂಕೃತ್ಯನಲೇ ಧೂಮ್ರಾಕ್ಷೋsಭವದಾಹುತಿಃ
ಸಮಾಪ್ತಿಂ ಭೀಷಣಂ ಯಾವನ್ನೈವಾವಾಪ ವಿಕತ್ಥನಂ ||21||

ತಾತ್ಪರ್ಯ :

ಧೂಮ್ರಾಕ್ಷನು ತನ್ನ ಬಗ್ಗೆ ತಾನೇ ಪ್ರಶಂಸೆ ಮಾಡಿಕೊಳ್ಳುತ್ತಿದ್ದಾಗ, ಯುದ್ಧಭೂಮಿಯಲ್ಲಿ ದೇವಿಯ ಘೋರವಾದ ಹೂಂ ಕಾರವನ್ನು ಕೇಳಿದೊಡನೆ ಅವನು ಬಲಿ ಪೀಠದ ಮೇಲಿನ ಬಲಿಪಶುವಿನಂತಾದ.

ವಿವರಣೆ :

ಧೂಮ್ರಕ್ಷಾನು ಶುಂಭಾಸುರನ ಸೇನಾನಿಯಾಗಿದ್ದನು. ಅವನು ದೇವಿಯೊಂದಿಗೆ ಯುದ್ದಮಾಡುತ್ತಾ ಆತ್ಮ ಶ್ಲಾಘನೆಯನ್ನು ಮಾಡಿಕೊಳ್ಳುತ್ತಿದ್ದನು. ಅವನು ಹೀಗೆ ತನ್ನನ್ನು ಹೊಗಳಿ ಮುಗಿಸುವುದರೊಳಗಾಗಿ ದೇವಿಯ ಹೂಂಕಾರವೆಂಬ ಅಗ್ನಿಗೆ ಆಹುತಿಯಾದನು.

ಸಂಸ್ಕೃತದಲ್ಲಿ :

ಚಾಮುಂಡಾಶಿವದೂತ್ಯೌ ಯತ್ ಕಲೇ ದಾರುಣವಿಕ್ರಮೇ
ಭಕ್ಷಯಾಮಾಸತುರ್ಮೂರ್ತೀಃ ಕೀರ್ತಿಭಿಃ ಸಹ ರಕ್ಷಸಾಂ ||22||

ತಾತ್ಪರ್ಯ :

ಚಾಮುಂಡಾ ಮತ್ತು ಶಿವದ್ಯುತಿಗಳು ದೇವಿಯ ಎರಡು ಘೋರವಾದ ಯೋಧರ ಅಂಶರೂಪಗಳು. ಅವರು ರಾಕ್ಷಸರ ದೈಹಿಕ ರೂಪವನ್ನು ಬಲಿತೆಗೆದುಕೊಳ್ಳುವುದಲ್ಲದೆ ಅವರ ಖ್ಯಾತಿಯನ್ನೂ ನಾಶಮಾಡುವರು.

ವಿವರಣೆ :

ಯಾವ ದೇವಿಯು ಚಾಮುಂಡಾ ಮತ್ತು ಶಿವದೂತಿ ಎಂಬ ಕ್ರೂರತ್ವ ಮತ್ತು ಪರಾಕ್ರಮದ ಪ್ರತೀಕವಾದ ಎರಡು ಕಲೆಗಳು ರಾಕ್ಷಸರ ಶರೀರಗಳಂತೆಯೇ ಅವರ ಕೀರ್ತಿಗಳನ್ನು ನುಂಗಿಬಿಟ್ಟರೋ.

ಸಂಸ್ಕೃತದಲ್ಲಿ :

ಯಸ್ಯಾಃ ಶೂಲೇ ಜಗಾಮಾಸ್ತಂ ಯಶಃ ಶುಂಭನಿಶುಂಭಯೋಃ
ನಮಾಮಿ ವಿಮಲಶ್ಲೋಕಾಂ ಕೌಶಿಕೀಂ ನಾಮ ತಾಮುಮಾಂ ||23||

ತಾತ್ಪರ್ಯ :

ಶುಂಭ ನಿಶುಂಭರ ಖ್ಯಾತಿಯು ಕೌಶಿಕಿಯ ತ್ರಿಶೂಲದ ತುದಿಯಲ್ಲಿ ನಾಶವಾಯಿತು. ಅಂತಹ ವೈಭವೋಪೇತ ಉಮಾ ದೇವಿಯ ರೂಪವಾದ ಕೌಶಿಕಿಯ ಮುಂದೆ ನಾನು ನಮಸ್ಕರಿಸುವೆ.

ವಿವರಣೆ :

ಯಾವ ದೇವಿಯ ಶೂಲಾಯುಧದಲ್ಲಿ ಶುಂಭನಿಶುಂಭರ ಯಶಸ್ಸೂ ಅಸ್ತಂಗತವಾದವೋ, ನಿರ್ಮಲ ಕೀರ್ತಿಯುಳ್ಳ ಕೌಶೀತಕೀ ಎಂಬ ಪ್ರಸಿದ್ಧಳಾದ ಆ ಉಮಾದೇವಿಯನ್ನು ನಮಸ್ಕರಿಸುತ್ತೇನೆ.

ಸಂಸ್ಕೃತದಲ್ಲಿ :

ಯಶೋದಾಗರ್ಭಜನನಾದ್ ಯಶೋದಾಂ ಗೋಕುಲಸ್ಯ ತಾಂ
ವಂದೇ ಭಗವತೀಂ ನಂದಾಂ ವಿಂಧ್ಯಾಚಲನಿವಾಸಿನೀಂ ||24||

ತಾತ್ಪರ್ಯ :

ವಿಂಧ್ಯ ಪರ್ವತದಲ್ಲಿ ವಾಸಿಸುವ ನಂದಾದೇವಿ ಹಾಗೂ ಭಗವತಿಯರಿಗೆ ನಾನು ನಮಸ್ಕರಿಸುವೆ. ನಂದಾದೇವಿಯು ಗೋಕುಲಕ್ಕೆ ತಾನು ಯಶೋದೆಯ ಗರ್ಭದಲ್ಲಿ ಜನಿಸುವ ಮೂಲಕ ಗೌರವವನ್ನು ತಂದಳು.

ದೇವಕೀಯ ಪುತ್ರ ಕೃಷ್ಣನನ್ನು ಕಂಸನ ಭಯದಿಂದಾಗಿ ನಂದನ ಮನೆಗೆ ಕರೆತಂದು, ಯಶೋದೆಯ ಮಗಳನ್ನು ವಸುದೇವನು ಕೊಂಡೊಯ್ದ. ಭಾಗವತದಲ್ಲಿ ದೇವಿಯು ಯಶೋದೆಯ ಗರ್ಭದಲ್ಲಿ ನಂದಾದೇವಿಯಾಗಿ ಜನ್ಮತಾಳಿದಳೆಂದು ವಿವರಿಸಲಾಗಿದೆ.

ವಿವರಣೆ :

ಯಶೋದಾದೇವಿಯ ಗರ್ಭದಲ್ಲಿ ಜನಿಸಿದ್ದಾದ್ದರಿಂದ ನಂದಗೋಕುಲಕ್ಕೆ ಯಶಸ್ಸನ್ನು ತಂದುಕೊಟ್ಟ, ವಿಂಧ್ಯಪರ್ವತ ಅಧಿಷ್ಠಾನ ದೇವತೆಯಾದ, ಪೂಜ್ಯಳಾದ ನಂದಾದೇವಿಯನ್ನು ನಮಸ್ಕರಿಸುತ್ತೇನೆ.

ಸಂಸ್ಕೃತದಲ್ಲಿ :

ಅಂಬಿಕಾಮುಪತಿಷ್ಠಂತಾಮೇತಾಶ್ಚಂಡೀಮನುಷ್ಟುಭಃ
ಪ್ರಸನ್ನಾಃ ಸಾಧ್ವಲಂಕಾರಾಃ ಸಿದ್ಧಪದ್ಮೇಕ್ಷಣಾ ಇವ ||25||                        200

ತಾತ್ಪರ್ಯ :

ಅನುಷ್ಟುಪ್ ಛಂದಸ್ಸಿನಲ್ಲಿ ವಿವಿಧ ರೀತಿಯ ಪದಗಳಲ್ಲಿ ಅಲಂಕರಿಸಿದ ದೇವಿಯನ್ನು ಕುರಿತ ಪ್ರಾರ್ಥನೆಯು ದೇವಿ ಚಂಡಿಯನ್ನು (ಸ್ವರ್ಗಲೋಕದ ಅಪ್ಸರೆಯರಂತೆ) ತೃಪ್ತಿಪಡಿಸಲಿ.

ವಿವರಣೆ :

ಅನುಷ್ಟುಪ್ ಛಂದೋಬದ್ಧವಾದ ಈ ಶ್ಲೋಕಗಳು ಪ್ರಸನ್ನವಾದ ಶಬ್ದಾರ್ಥಗಳಿಂದ ಕೂಡಿವೆ. ಹೀಗಿದ್ದು ಸಿದ್ಧರೆಂಬ ದೇವಯೋನಿಯ ಸುಂದರಿಯರು ದೇವಿಯನ್ನು ಸೇವಿಸುವಂತೆ ಇವುಗಳೂ ಸೇವಿಸಲಿ.

ಇಲ್ಲಿಗೆ ಎರಡನೇ ಶತಕದ ಎಂಟನೆಯ ಸ್ತಬಕವು ಸಂಪೂರ್ಣವಾಯಿತು.

ದ್ವಿತೀಯ ಶತಕಂ ಸಮಾಪ್ತಃ
























Comments