ಪುಷ್ಪಗುಚ್ಛ
(ಸ್ತಬಕ)
- 7
ಛಂದಸ್ಸು
- ವಸಂತಮಾಲಿಕಾವೃತ್ತ
ವ್ಯೋಮಶರೀರ
ಹಾಗೂ ಸಪ್ತ ಮಾತೃಕಾದಿವಿಭೂತಿಯ
ವಿವರಣೆ
ಸಂಸ್ಕೃತದಲ್ಲಿ
:
ವಾಣೀಸರೋರುಹದೃಶೋ ಹಯರಾಜಹಂಸೋ
ವಕ್ತ್ರಾರವಿಂದನಿಲಯಾದ್ಬಹಿರಾಗತಾಯಾಃ
ಆಲಾಪಕಾಲದರಹಾಸ ಇಹ
ಸ್ಥಿತಾನಾಂ
ಕ್ಷೇಮಂ ಕರೋತು ಸುತರಾಂ
ಹರಸುಂದರೀಯಃ ||1||
ತಾತ್ಪರ್ಯ :
ಮಾತುಕಥೆಯ ಮಧ್ಯದಲ್ಲಿ
ಕಮಲ ಪುಷ್ಪದಂತಿರುವ ಹರನ ಪ್ರೀತಿಪಾತ್ರಳ ಮುಖದಲ್ಲಿ ಮೃದುವಾದ ನಗುವು ಪ್ರಕಟಗೊಳ್ಳುತ್ತಿತ್ತು. ಕಮಲ
ಪುಷ್ಪವನ್ನೇ ತನ್ನ ವಾಸಸ್ಥಾನವಾಗಿಸಿಕೊಂಡಿರುವ ಸರಸ್ವತಿಯ ವಾಹನವಾದ ಹಂಸವನ್ನು ಹೋಲುವ ಆ ಸೌಮ್ಯ ನಗುವು
ಈ ಭೂಮಿಯಲ್ಲಿರುವ ಜನಗಳನ್ನು ರಕ್ಷಿಸಲಿ.
ಕಮಲ ಪುಷ್ಪವು ಸಾಮಾನ್ಯವಾಗಿ
ಲಕ್ಷ್ಮಿಯ ವಾಸಸ್ಥಾನ. ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ ಹೇಗೆ ಕಮಲ ಪುಷ್ಪವನ್ನು
ಸರಸ್ವತಿಯ ವಾಸಸ್ಥಾನವೆಂದು ಪರಿಗಣಿಸಲಾಗಿದೆ ಎಂಬುದು. ಇನ್ನೊಂದು
ರೀತಿಯಲ್ಲಿ ನೋಡಿದರೆ ಈ ವಿಧದ ವರ್ಣನೆಯು ಸರಿಯಾಗಿಯೇ ಇರುವುದು, ಏಕೆಂದರೆ
ಇದೇ ಕಮಲ ಪುಷ್ಪವು ಸರಸ್ವತಿಯ ಪತಿಯಾದ ಬ್ರಹ್ಮನ ವಾಸಸ್ಥಾನವೂ ಹೌದು. ರಾಜಹಂಸ (ಹಂಸ) ಮತ್ತು
ಪಾರ್ವತಿಯ ಮಂದಹಾಸಗಳನ್ನು ಎರಡೂ ಪರಿಶುದ್ಧ ಬಿಳುಪಿನಿಂದ ಕೂಡಿರುವುದರಿಂದ ಹೋಲಿಸಲಾಗಿದೆ.
ವಿವರಣೆ :
ಪಾರ್ವತೀದೇವಿಯು ಮಾತನಾಡುವಾಗ
ಕಾಣಿಸಿಕೊಳ್ಳುವ ಮಂದಹಾಸವು ಮುಖಕಮಲವೆಂಬ ವಾಸಗೃಹದಿಂದ ಹೊರಬರುವ ವಾಣೀ ಎಂಬ ಸುಂದರಿಯ ಕುದುರೆಯಾದ
ರಾಜಹಂಸದಂತಿದೆ.
ಸಂಸ್ಕೃತದಲ್ಲಿ
:
ನಾದೋsಸಿ
ವಾಗಸಿ ವಿಭಾsಸಿ ಚಿದಸ್ಯಖಂಡಾ
ಖಂಡೀಭವಂತ್ಯಪಿ ಚಿದಸ್ಯಖಿಲೇಂದ್ರಕಾಂತೇ
ತತ್ತಾದೃಶೀಂ ನಿಖಿಲಶಕ್ತಿಸಮಷ್ಟಿಮೀಶೇ
ತ್ವಾಮಂತರಿಕ್ಷಪರಿಕ್ಲಪ್ತತನುಂ
ನಮಾಮಿ ||2||
ತಾತ್ಪರ್ಯ :
ಓ, ಮಹಾದೇವನ
ಪ್ರೀತಿಪಾತ್ರಳೆ ! ನೀನು ಆದಿಸ್ವರೂಪದ ನಾದ (ಅನಾಹತನಾದ), ನಯವಾದ
ಪದ, ಸ್ವಯಂ
ಜ್ಯೋತಿಪ್ರಕಾಶ, ವೈಯುಕ್ತಿಕ ಜ್ಞಾನವಾಗಿ ಭಿನ್ನವಾಗಿದ್ದರೂ, ನಿಶ್ಚಿತವಾದ
ಅನಂತ ಜ್ಞಾನ. ಹೇ ಈಶ್ವರಿ! ನಿನ್ನ ಮುಂದೆ ನಾನು
ನಮಸ್ಕರಿಸುವೆ. ನಿನ್ನ ರೂಪವು ಸಮಸ್ತ ಆಕಾಶವನ್ನು ಆವರಿಸಿದೆ; ನೀನು
ಸಮಸ್ತ ಶಕ್ತಿಗಳ ಸಂಯೋಗ.
ಕವಿಯು ಇಲ್ಲಿ ತನಗೆ
ದೇವಿಯ ಜ್ಯೋತಿರೂಪ ಮತ್ತು ನಾದದ ಬಗ್ಗೆ ಅರಿವಿದ್ದರೂ ಅವನು ಉಮಾದೇವಿಯನ್ನು ಸ್ತ್ರೀರೂಪದಲ್ಲೇ ಪೂಜಿಸಲು
ಬಯಸುತ್ತಾನೆ. ದೈವೀ ಮಾತೆಯು ಸಾಂದರ್ಭಿಕ ನಾದ, ಅನಾಹತ
ನಾದ, ಹಾಗೂ ಅವುಗಳಿಂದ ಸಮಸ್ತ ಸೃಷ್ಟಿಯೂ ಘಟಿಸುವುದು. ಅವಳು
ಅಭಿವ್ಯಕ್ತ ಪದ, ಶಬ್ದ,
ಶಕ್ತಿಯಿಂದ ಸೃಷ್ಟಿಯಾಗುವ ಮಾತು. ಅವಳು
ಪ್ರಕಾಶಮಾನವಾಗಿ ಬೆಳಗುವ ಜ್ಞಾನದೀಪ.
ಅವಳು ಅನಂತ ಮತ್ತು ಭಿನ್ನವಾಗದಿರುವ, ಅಖಂಡವಾದ
ಜ್ಞಾನ. ಆದರೂ ಅವಳು ಸೀಮಿತ ಜ್ಞಾನವಾಗಿ ಕಂಡುಬಂದು ಅದು ವಿಶ್ವದಲ್ಲಿ
ಕೋಟ್ಯಾಂತರ ರೂಪಗಳಾಗಿ ಪರಿವರ್ತಿತವಾಗಿ,
ಅವುಗಳೂ ಸಹ ಅವಳ ಜ್ಞಾನದ ಸೂತ್ರೀಕರಣವು. ಅವಳು
ವ್ಯಕ್ತ ಹಾಗೂ ಅವ್ಯಕ್ತಳು ಮತ್ತು ಸೀಮಿತ ಮತ್ತು ಅನಂತ.
ವಿವರಣೆ :
ಸರ್ವೇಶ್ವರನ ಸುಂದರಿಯೆ ! ನೀನು
ಕಾರಣಾವಸ್ಥೆಯಲ್ಲಿರುವ ಪ್ರಣವಸ್ವರೂಪಿಣಿಯಾಗಿಯೂ, ಕಾರ್ಯರೂಪವಾದ ಶಬ್ದವಾಗಿಯೂ
ಇದ್ದೀಯೆ. ಜ್ಯೋತಿಸ್ವರೂಪಿಣಿಯೂ ಆಗಿರುವೆ. ನೀನು
ಯಾವ ಭೇದವೂ ಇಲ್ಲದ ಚಿತ್ಸ್ವರೂಪಳು.
ಹಾಗೆಯೇ ಸಮಸ್ತವಾದ ಭಿನ್ನಭಿನ್ನವಾದ ಚಿತ್ಸ್ವರೂಪಿಣಿಯೂ ಆಗಿದ್ದೀಯೆ. ಈಶ್ವರಿಯೆ ! ಸಮಸ್ತ
ಶಕ್ತಿಸ್ವರೂಪಿಣಿಯಾದ ನಿನ್ನನ್ನು ನಾದಜ್ಯೋತಿ ರೂಪದಿಂದ ಆಕಾಶವೆಲ್ಲವನ್ನೂ ವ್ಯಾಪಿಸಿ ಇರುತ್ತಿರುವವಳನ್ನಾಗಿ
ನಾನು ಧ್ಯಾನಿಸಿ ನಮಸ್ಕರಿಸುತ್ತೇನೆ.
ಸಂಸ್ಕೃತದಲ್ಲಿ
:
ವಿಶ್ವಪ್ರಸಿದ್ಧವಿಭವಾಸ್ತ್ರಿಷು
ವಿಷ್ಟಪೇಷು
ಯಾಃ ಶಕ್ತಯಃ ಪ್ರವಿಲಸಂತಿ
ಪರಃಸಹಸ್ರಾಃ
ತಾಸಾಂ ಸಮಷ್ಟಿರತಿಚಿತ್ರನಿಧಾನದೃಷ್ಟಿಃ
ಸೃಷ್ಟಿಸ್ಥಿತಿಪ್ರಲಯಕೃದ್
ಭುವನೇಶ್ವರಿ ತ್ವಮ್ ||3||
ತಾತ್ಪರ್ಯ :
ಓ ವಿಶ್ವ ಸಾಮ್ರಾಜ್ಞಿಯೆ ! ವಿಶ್ವದ
ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣೀಭೂತಳು, ಮೂರೂ
ಲೋಕಗಳಲ್ಲಿ ಹರಡಿರುವ ಸಾವಿರ ಪಟ್ಟು ಪ್ರಸಿದ್ಧವಾದ ವೈಭವವುಳ್ಳ ಅದ್ಭುತವಾದ ಸಂಯೋಜಿತ ಶಕ್ತಿಯ ನಿಧಿಯ
ಮನೆಯೇ ನೀನು.
ಪಾರ್ವತಿಯು ಸ್ತ್ರೀರೂಪ
ಮಾತ್ರವಲ್ಲದೆ ಅವಳು ವಿಶ್ವದ ಸೃಷ್ಟಿಕರ್ತೆ,
ಸಲಹುವವಳು ಹಾಗೂ ವಿನಾಶ ಮಾಡುವವಳೂ ಸಹ.
ವಿವರಣೆ :
ತ್ರಿಭುವನದ.ಮಾತೆ ! ವಿಶ್ವದಲ್ಲಿ
ಸಾಮರ್ಥ್ಯವುಳ್ಳ ಶಕ್ತಿಗಳು ಯಾವುದು ಇರುವುದೋ ಅವೆಲ್ಲವೂ ನೀನೆ. ಅವು
ಸಾವಿರಾರು ಸಂಖ್ಯೆಯಲಿದ್ದರೂ ಎಲ್ಲವೂ ನೀನೆ.
ನನ್ನ ದೃಷ್ಟಿಯಲ್ಲಿ ಈ ಎಲ್ಲ ಆಶ್ಚರ್ಯಗಳ ಖಜಾನೆಯನ್ನೇ ಉಳ್ಳವಳಾಗಿದ್ದು, ಸೃಷ್ಟಿ, ಸ್ಥಿತಿ, ಲಯಗಳನ್ನು
ಮಾಡುವವಳಾಗಿ ನೀನಿರುವೆ.
ಸಂಸ್ಕೃತದಲ್ಲಿ
:
ಜಾನೇ ನ ಯತ್ತವ ಜಗಜ್ಜನಯಿತ್ರಿ
ರೂಪಂ
ಸಂಕಲ್ಪ್ಯತೇ ಕಿಮಪಿ
ತನ್ಮನಸೋ ಬಲೇನ
ಸಂಕಲ್ಪಿತಸ್ಯ ವಪುಷಃ
ಶ್ರಿತಶೋಕಹಂತ್ರಿ
ವಿನ್ಯಸ್ಯತೇ ತವ ವಚೋತಿಗಧಾಮ
ನಾಮ||4||
ತಾತ್ಪರ್ಯ :
ಓ ವಿಶ್ವ ಸೃಷ್ಟಿಕಾರಿಣಿಯೆ ! ನಿನ್ನನ್ನು
ನಂಬಿದವರ ದುಃಖಗಳನ್ನು ನಿವಾರಿಸುವವಳೆ!
ನಿನ್ನ ನಿಜರೂಪವು ನನಗೆ ಅರಿಯದು. ಆದ್ದರಿಂದ
ನನ್ನ ಮನಸ್ಸಿನ ಶಕ್ತಿಯ ಮೇರೆಗೆ ಒಂದು ರೂಪವನ್ನು ಕಲ್ಪಿಸಿಕೊಳ್ಳುವೆ ಮತ್ತು ಆ ರೂಪಕ್ಕೆ ಅನೇಕ ಹೆಸರುಗಳನ್ನಿಡುವೆ. ಏನೇ
ಆದರೂ, ಯಾವ ಹೆಸರನ್ನಿಟ್ಟರೂ ಅದು ನಿನ್ನ ನಿಜವಾದ ರೂಪದ ಬಗ್ಗೆ ಸರಿಯಾದ
ಪರಿಕಲ್ಪನೆಯಿಲ್ಲದೇ ಕೇವಲ ನಿಗದಿತ ಮಹತ್ವವುಳ್ಳದ್ದು.
ವಿವರಣೆ :
ತ್ರಿಭುವನಮಾತೆ ! ನಿನ್ನ
ನಿಜರೂಪವನ್ನು ನಾನರಿಯೆ. ಹೀಗಾಗಿ ನಾನು ಭಾವನಾಬಲದಿಂದ ಒಂದು ರೂಪವನ್ನು ಕಲ್ಪಿಸಿಕೊಳ್ಳುವೆ. ಹಾಗೆ
ಕಲ್ಪಿಸಿದ ರೂಪಕ್ಕೆ ಒಂದು ಹೆಸರನ್ನು ನೀಡುವೆ. ಹೀಗೆ ಆ ರೂಪಕ್ಕೆ ಇಟ್ಟ
ಹೆಸರಿನ ಪ್ರಭಾವವು, ವಾಕ್ ಮನಸ್ಸು ಹಾಗೂ ಚಕ್ಷುವಿಗೆ ಅಗೋಚರವಾಗಿರುವುದು.
ಸಂಸ್ಕೃತದಲ್ಲಿ
:
ಕಾಮಂ ವದಂತು ವನಿತಾಮಿತಿಹಾಸದಕ್ಷಾ-
ಸ್ತ್ವಾಂ ಸರ್ವಲೋಕಜನಯಿತ್ರಿ
ಸದೇಹಬಂಧಾಂ
ಸತ್ಯಂ ಚ ತದ್ಭವತು
ಸಾ ತವ ಕಾsಪಿ ಲೀಲಾ
ದಿವ್ಯಂ ರಜಸ್ತು ತವ
ವಾಸ್ತವಿಕಂ ಶರೀರಂ ||5||
ತಾತ್ಪರ್ಯ :
ಓ ಸಮಸ್ತ ವಿಶ್ವದ ಸೃಷ್ಟಿಕರ್ತೆ, ಪುರಾಣ
ಕಥೆಗಳಲ್ಲಿ ಅನುಭವವಿರುವವರು ನಿನಗೆ ಸ್ತ್ರೀರೂಪವನ್ನು ಕಲ್ಪಿಸಬಹುದು. ಅದು
ಒಂದು ನಿನ್ನ ಲೀಲಾರೂಪವಿರಲಿ. ಆದರೆ ನಿನ್ನ ನಿಜವಾದ ರೂಪವು ಬ್ರಹ್ಮಾಂಡದ ದೈವೀ ಕಣ.
ಕವಿಯು ಈ ಸ್ತೋತ್ರದ
ಮೊದಲನೇ ಶ್ಲೋಕದಿಂದಲೇ ದೇವಿಯ ವಿವಿಧ ರೂಪಗಳನ್ನು ವಿವರಿಸತೊಡಗಿದ್ದಾನೆ.
ವಿವರಣೆ :
ಇತಿಹಾಸವನ್ನು ಬಲ್ಲವರು
ಶರೀರರೂಪದಲ್ಲಿರುವ ನಿನ್ನನ್ನು ಸ್ತ್ರೀಯಾಗಿ ಪರಿಗಣಿಸಲಿ. ಸಮಸ್ತ
ಲೋಕದ ಜನನಿಯೇ ! ಅದು ಸತ್ಯವಾಗಲಿ. ಆದರೆ
ನಿನ್ನ ವಾಸ್ತವಿಕ ಶರೀರವು ಆಕಾಶದಲ್ಲಿ ಸೂಕ್ಷ್ಮವಾದ ರಜೋರೂಪದಲ್ಲಿರುವುದು. (ಈ
ವಿಷಯವನ್ನು ಮೊದಲನೇ ಸ್ತಬಕದಲ್ಲಿ ಸಾ ತತ್ತ್ವತೇ ಸಮಂತಾತ್ ಮೊದಲಾದ ಶ್ಲೋಕಗಳಲ್ಲಿ ವಿವರಿಸಲಾಗಿದೆ).
ಸಂಸ್ಕೃತದಲ್ಲಿ
:
ಭೂಜನ್ಮಪಾಂಸುಭಿರಗರ್ಹಿತಶುದ್ಧರೂಪಾ
ಯಾ ಕಾsಪಿ
ಪಾಂಸುಪಟಲೀ ವಿಪುಲೇsನ್ತರಿಕ್ಷೇ
ಸಾ ತೇ ತನುಃ ಸುಮಹತೀ
ವರದೇ ಸುಸೂಕ್ಷ್ಮಾ
ತಾಮೇವ ದೇವಸರಣಿಂ ಕಥಯಂತಿ
ಧೀರಾಃ ||6||
ತಾತ್ಪರ್ಯ :
ಓ ದೇವಿ ! ಅಪಾರವಾದ
ಆಕಾಶದಲ್ಲಿ ನಿನ್ನ ಅಭಿವ್ಯಕ್ತವು ಸಣ್ಣ ಕಣಗಳು. ಅದು ಅತಿ ದೊಡ್ಡದಕ್ಕಿಂತ
ದೊಡ್ಡದು ಮತ್ತು ಅತಿ ಸಣ್ಣದಕ್ಕಿಂತ ಸಣ್ಣದು.
ಅದು ಮೃಣ್ಮಯ ಕಣಗಳಿಂದ ಕಳಂಕಿತವಾಗದ ಪರಿಶುದ್ಧ ರೂಪ. ಜ್ಞಾನಿಗಳು
ಇದನ್ನು ನಿನ್ನ ದೇವಯಾನ, ದೈವೀಪಥವೆಂದು ಪರಿಗಣಿಸುವರು.
ವಿವರಣೆ :
ಸಕಲ ಇಷ್ಟಾರ್ಥಗಳನ್ನು
ಈಡೇರಿಸುವ ಮಾತೆ ! ಆಕಾಶದಲ್ಲಿರುವ ಸೂಕ್ಷ್ಮ ರೇಣುಗಳು ನಿನ್ನ ಶರೀರವೆಂದು ಯೋಗಿಗಳು
ಹೇಳುವರು. ಅದು ಭೂಮಿಯಲ್ಲಿನ ಪ್ರಾಕೃತವಾದ ಧೂಳಿನಿಂದ ಸಂಬಂಧವನ್ನು ಹೊಂದಿರುವುದಿಲ್ಲ
ಮತ್ತು ಸ್ವತಃ ಸಿದ್ಧವಾಗಿರುತ್ತದೆ.
ಅದು ಸ್ಥೂಲ ಬುದ್ಧಿ ಹಾಗೂ ಇಂದ್ರಿಯಗಳಿಗೆ ಎಟುಕುವುದಿಲ್ಲ. ಯೋಗಿಜನರ
ಸೂಕ್ಷ್ಮ ದೃಷ್ಟಿಗೆ ಗೋಚರಿಸುತ್ತದೆ.
ತಿಳಿದವರು ಅದನ್ನು ದೇವಸರಣಿ ಎಂದೂ, ಬ್ರಹ್ಮವಿತ್ತುಗಳು
ಹೋಗುವ ಅರ್ಚಿರಾದಿ ಮಾರ್ಗವೆಂದೂ ಹೇಳುವರು.
ಸಂಸ್ಕೃತದಲ್ಲಿ
:
ಯಾ ದೇವೀ ದೇವಸರಣಿರ್ಭವಮಗ್ನದುರ್ಗಾ
ವೈರೋಚನೀತಿ ಕಥಿತಾ
ತಪಸಾ ಜ್ವಲಂತೀ
ರಾಜೀವಬಂಧುಮಹಸಾ ವಿಹಿತಾಂಗರಾಗಾ
ಸಾ ತೇ ತನುರ್ಭವತಿ
ಸರ್ವಸುಪರ್ವವರ್ಣ್ಯೇ ||7||
ತಾತ್ಪರ್ಯ :
ಓ ದೇವಿ ! ಸಮಸ್ತ
ದೇವತೆಗಳಿಂದ ವರ್ಣಿಸಲ್ಪಟ್ಟವಳೇ,
ನಿನ್ನ ರೂಪವು ಮಹಾನ್ ಸೌರದೀಪಗಳಿಂದ ಅಲಂಕರಿಸಲ್ಪಟ್ಟ ದೈವೀ
ರೂಪವು. ಪ್ರಾಪಂಚಿಕ ವಿಷಯಗಳಲ್ಲಿ ಮುಳುಗಿರುವವರಿಗೆ ನಿನ್ನ ದೈವೀ ಪಥವು (ದೇವಸರಣಿ) ತಲುಪಲಾಗುವುದಿಲ್ಲ. ನಿನ್ನನ್ನು
ವೈರೋಚನಿ ಎಂದು ಕರೆಯುವರು. ನೀನು ತಪಸ್ಸಿನಿಂದ ಕೂಡಿದ ಮಹಾನ್ ಸೂರ್ಯ ಪ್ರಕಾಶದ ಭವ್ಯವಾದ
ಶಕ್ತಿ.
ಪ್ರಪಂಚದ ಬೆಳಕಾದ ಸ್ವರಲೋಕವನ್ನು
ತಲುಪುವ ದೈವೀಪಥದಲ್ಲಿರುವ ಪ್ರಬುದ್ಧ ಆತ್ಮಗಳು ಸ್ಥಾಪಿಸಿದ ಭವ್ಯವಾದ ದೈವೀ ಕಣಗಳೇ ದೇವಿಯ ರೂಪ. ಅವಳನ್ನು
ಕೇವಲ ಪ್ರಬುದ್ಧ ಆತ್ಮಗಳು ಮಾತ್ರ ಸಾಧನೆಯ ಮೂಲಕ ಸಾಧಿಸಬಹುದು. ಇದೇ
ರೀತಿಯ ವಿವರಣೆಗಳನ್ನು ದುರ್ಗಾ ಸೂಕ್ತದ ಈ ಮಂತ್ರದಲ್ಲೂ ಕಾಣಬಹುದು :
“ತಾಮಗ್ನಿವರ್ಣಾಂ ತಪಸಾ
ಜ್ವಲಂತೀಂ ವೈರೋಚನೀಂ ಕರ್ಮಫಲೇಷು ಜುಷ್ಟಾಮ್ ದುರ್ಗಾ ದೇವೀಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ ||”
ವಿವರಣೆ :
ಆ ದೇವಸರಣಿಯು ಸಂಸಾರದಲ್ಲಿ
ಮಗ್ನರಾಗಿರುವುದರಿಂದ ಹೊಂದಲಾಗದು.
ಅದು ಸರ್ವೇಶ್ವರನ ತೇಜಸ್ಸಿನಿಂದ ಬೆಳಗುತ್ತದೆ. ಆತ್ಮನಲ್ಲೇ
ನೆಟ್ಟ ದೃಷ್ಟಿಯುಳ್ಳ ಬುದ್ಧಿಗೇ ಎಟುಕುತ್ತದೆ. ಕಮಲಬಂಧುವಾದ ಸೂರ್ಯನಿಂದ
ಮಾಡಲ್ಪಟ್ಟ ಅಂಗರಾಗವುಳ್ಳದ್ದಾಗಿರುತ್ತದೆ.
ಸಮಸ್ತ ದೇವತೆಗಳಿಂದ ವರ್ಣಿಸಲ್ಪಡುವವಳೇ ! ಅದು
ನಿನ್ನ ಶರೀರವಾಗಿರುತ್ತದೆ.
ಸಂಸ್ಕೃತದಲ್ಲಿ
:
ಪ್ರಾಣಾಸ್ತವಾತ್ರ ಹೃದಯಂ
ಚ ವಿರಾಜತೇsತ್ರ
ನೇತ್ರಾಣಿ ಚಾತ್ರ ಶತಶಃ
ಶ್ರವಣಾನಿ ಚಾತ್ರ
ಘ್ರಾಣಾನಿ ಚಾತ್ರ ರಸನಾನಿ
ತಥಾ ತ್ವಚಶ್ಚ
ವಾಚೋsತ್ರ
ದೇವಿ ಚರಣಾನಿ ಚ ಪಾಣಯೋsತ್ರ
||8||
ತಾತ್ಪರ್ಯ :
ಓ ದೇವಿ ! ನಿನ್ನ
ಜೀವನವು ವಿಶ್ವದಲ್ಲಿನ ಸಮಸ್ತ ಜೀವಿಗಳ ಜೀವಗಳಿಗೆ ಶಕ್ತಿಯನ್ನು ತುಂಬುವುದು ಹಾಗೂ ಅದು ಹೃದಯ, ವಾಕ್, ನೂರಾರು
ಕಣ್ಣುಗಳು, ಕಿವಿಗಳು, ಮೂಗುಗಳು, ನಾಲಿಗೆ, ಚರ್ಮ, ಪಾದ
ಮತ್ತು ಕೈಗಳ ರೂಪದಲ್ಲಿರುವುದು.
ದೇವಿಯ ಜೀವ ಶಕ್ತಿಯನ್ನು
ಹಿಂದೆ ವಿವರಿಸಿರುವಂತೆ ದೈವೀ ಪಥದಲ್ಲಿನ ದೈವೀ ಕಣಗಳಿಗೆ ಹೋಲಿಸಬಹುದು. ಹೃದಯವೆಂಬ
ಏಕ ಪದವನ್ನು ಜ್ಞಾನದ ಏಕೈಕ ಮೂಲವನ್ನಾಗಿ ಉಪಯೋಗಿಸಲಾಗಿದೆ ಮತ್ತು ಎಲ್ಲ ವೈಯುಕ್ತಿಕ ರೂಪಗಳ ಉಳಿದ
ಅಂಗಾಂಗಗಳಾದ ಕೈ, ಕಾಲು ಇತ್ಯಾದಿಗಳನ್ನು ಅನೇಕ ವೈಯುಕ್ತಿಕ ಆತ್ಮಗಳನ್ನಾಗಿ ನೋಡಲಾಗಿದೆ.
ವಿವರಣೆ :
ದೇವಿಯೇ ! ಸಮಸ್ತವಾದ
ಕಣ್ಣು, ಕಿವಿ,
ಮೂಗು,
ನಾಲಗೆ,
ಮತ್ತು ಚರ್ಮ ರೂಪವಾದ ಜ್ಞಾನೇಂದ್ರಿಯಗಳೂ, ವಾಕ್, ಪಾಣಿ, ಪಾದ, ಪಾಯು, ಉಪಸ್ಥೆಯೇ
ಮೊದಲಾದ ಕರ್ಮೇಂದ್ರಿಯಗಳೂ ಜಗನ್ಮಾತೆಯಾದ ಉಮಾದೇವಿಯ ದಿವ್ಯರೇಣು ಶರೀರದಲ್ಲಿ ಇರುತ್ತವೆ.
ಸಂಸ್ಕೃತದಲ್ಲಿ
:
ಸರ್ವತ್ರ ಪಶ್ಯಸಿ ಶೃಣೋಷಿ
ಚ ಸರ್ವತೋsಮ್ಬ
ಸರ್ವತ್ರ ಖಾದಸಿ ವಿಜಿಘ್ರಸಿ
ಸರ್ವತೋsಪಿ
ಸರ್ವತ್ರ ಚ ಸ್ಪೃಶಸಿ
ಮಾತರಭಿನ್ನಕಾಲೇ
ಕಃ ಶಕ್ನುಯಾನ್ನಿಗದಿತುಂ
ತವ ದೇವಿ ಭಾಗ್ಯಮ್ ||9||
ತಾತ್ಪರ್ಯ :
ಓ, ಮಾತೆ ! ಶಾಶ್ವತ
ಶಕ್ತಿ, ನೀನು ಏಕಕಾಲದಲ್ಲಿ ಸಮಸ್ತ ವಿಶ್ವದ ಎಲ್ಲೆಡೆಯೂ ಎಲ್ಲವನ್ನೂ
ಅಂದರೆ ನೋಡುವುದು, ಕೇಳುವುದು, ವಾಸನೆಯನ್ನು ಗ್ರಹಿಸುವುದು, ಸೇವಿಸುವುದು, ಇತ್ಯಾದಿಗಳನ್ನು
ಕೂಡಿದ ಕ್ರಿಯೆಗಳನ್ನು ನಿರ್ವಹಿಸುವೆ.
ಕಾಲ,
ದೇಶಗಳಿಂದ ತಡೆರಹಿತವಾದ ನಿನ್ನ ಅಪಾರ ಶಕ್ತಿಯನ್ನು ಯಾರಾದರೂ
ಹೇಗೆ ವಿವರಿಸಬಲ್ಲರು?
ವಿವರಣೆ :
ಮಾತೆ ! ಸಮಸ್ತ
ಜಗತ್ತಿನ - ನೋಡುವುದು, ಕೇಳುವುದು, ಮೂಸಿ
ನೋಡುವುದು, ಮುಟ್ಟಿನೋಡುವುದು ಇತ್ಯಾದಿ ಜ್ಞಾನೇಂದ್ರಿಯಗಳ ಕೆಲಸಗಳನ್ನು
ನೀನೇ ಮಾಡುತ್ತೀಯೆ. ಈ ರೀತಿಯಿರುವ ನಿನ್ನ ಐಶ್ವರ್ಯವನ್ನು ಯಾರು ತಾನೇ ವರ್ಣಿಸುವರು?
ಸಂಸ್ಕೃತದಲ್ಲಿ
:
ಸರ್ವತ್ರ ನಂದಸಿ ವಿಮುಂಚಸಿ
ಸರ್ವತೋsಮ್ಬ
ಸರ್ವತ್ರ ಸಂಸರಸಿ ಗರ್ಜಸಿ
ಸರ್ವತೋsಪಿ
ಸರ್ವತ್ರ ದೇವಿ ಕುರುಷೇ
ತವ ಕರ್ಮಜಾಲ-
ವೈಚಿತ್ರ್ಯಮೀಶ್ವರಿ
ನಿರೂಪಯಿತುಂ ಕ್ಷಮಃ ಕಃ ||10||
ತಾತ್ಪರ್ಯ :
ಓ, ಮಾತೆಯೇ ! ನೀನೇ
ಎಲ್ಲೆಡೆ ಹರಡಿರುವ ಪರಮಾನಂದದ ಮೂರ್ತಿವೆತ್ತವಳಾಗಿ ಸಂತೋಷವನ್ನು ಪಡೆಯುತ್ತೀಯೆ. ನೀನು
ಸಾದಾ ಕ್ರಿಯೆಗಳಲ್ಲಿ ತೊಡಗಿರುವೆ;
ಘರ್ಜನೆಯ ಧ್ವನಿಯ ಮೂಲಕ ಎಲ್ಲೆಡೆ ಓಡಾಡುವೆ. ಹೇ
ಈಶ್ವರಿಯೇ ! ನಿನ್ನ ದೈವೀ ಲೀಲೆಗಳ ಅಚ್ಚರಿಗಳನ್ನು ಗ್ರಹಿಸಿ ಮತ್ತು ವಿವರಿಸುವ
ಸಾಮರ್ಥ್ಯವು ಯಾರಿಗಿರುವುದು?
ವಿವರಣೆ :
ಹೇ, ದೇವಿ ! ಎಲ್ಲೆಡೆ
ನೀನು ಆನಂದಿಸುತ್ತೀಯೆ ಮತ್ತು ವಿಸರ್ಜನ ಕ್ರಿಯೆಯನ್ನು ಮಾಡುವೆ. ಇದರಿಂದ
ಜನನೇಂದ್ರಿಯಗಳ ಕ್ರಿಯೆಯನ್ನು ವಿವರಿಸಿದಂತಾಯಿತು. ಹಾಗೇ ನಡೆಯುವುದು, ಮಾತನಾಡುವುದು, ಮಾಡುವುದು
ಎಲ್ಲವನ್ನೂ ನೀನೇ ಮಾಡುವೆ. ಇದರಿಂದ ಕರ್ಮೇಂದ್ರಿಯಗಳ ಕ್ರಿಯೆಗಳನ್ನು ನೀನೇ ಮಾಡುವೆ. ಈ
ರೀತಿಯಾದ ಕ್ರಿಯಾ ಕಲಾಪಗಳನ್ನು ಯಾರು ತಾನೇ ವರ್ಣಿಸಲು ಸಮರ್ಥರು?
ಸಂಸ್ಕೃತದಲ್ಲಿ
:
ವಿಶ್ವಾಂಬಿಕೇ ತ್ವಯಿ
ರುಚಾಂ ಪತಯಃ ಕಿಯಂತೋ
ನಾನಾವಿದಾಬ್ಧಿಕಲಿತಾ
ಕ್ಷಿತಯಃ ಕಿಯತ್ಯಃ
ಬಿಂಬಾನಿ ಶೀತಮಹಸಾಂ
ಲಸತಾಂ ಕಿಯಂತಿ
ನೈತಶ್ಚ ವೇದ ಯದಿ ಕೋ
ವಿಬುಧೋ ಬಹುಜ್ಞಃ ||11||
ತಾತ್ಪರ್ಯ :
ಓ, ವಿಶ್ವ
ಮಾತೆಯೇ ! ನಿನ್ನಲ್ಲಿ ಎಷ್ಟು ಸೂರ್ಯರಿರುವರೆಂದು; ಅನೇಕ
ಸಮುದ್ರಗಳಿಂದಾವೃತವಾದ ಎಷ್ಟು ಭೂಮಿಗಳಿರುವುದು; ಎಷ್ಟು ಚಂದ್ರರುಗಳು
ನಿನ್ನಲ್ಲಿ ಬೆಳಗುತ್ತಿರಬಹುದು ಎಂಬುದನ್ನು ಯಾರು ಬಲ್ಲರು? ನಿನ್ನ
ಈ ವೈಭವವನ್ನು ಅರಿಯದಿರುವವರನ್ನು ಜ್ಞಾನಿಗಳೆಂದು ಯಾರನ್ನಾದರೂ ಹೇಗೆ ಪರಿಗಣಿಸಬಹುದು?
ವಿವರಣೆ :
ಹೇ, ವಿಶ್ವಮಾತೆ ! ನಿನ್ನಲ್ಲಿ
ಅದೆಷ್ಟು ಸೂರ್ಯರುಗಳಿರುವರು. ನಾನಾ ರೀತಿಯ ಸಮುದ್ರಗಳಿಂದ ಕೂಡಿದ ಭೂಮಿಗಳೆಷ್ಟಿವೆ? ಪ್ರಕಾಶಿಸುವ
ತಂಪುಕಿರಣಗಳ ಚಂದ್ರರು ಎಷ್ಟಿರುವರು?
ಇವುಗಳನ್ನು ಅರಿಯದಿದ್ದರೆ ವಿಶೇಷಜ್ಞನಾದರೂ ಹೇಗೆ ಪಂಡಿತನಾಗುವನು? ಆ
ಸೂರ್ಯ ಚಂದ್ರ ಭೂಮಿಗಳಿಗೆ ನೀನೇ ಆಧಾರವಾಗಿರುವೆ. ಈ ವಿಚಾರವನ್ನು ಮೊದಲನೇ
ಶತಕದ ಎರಡನೇ ಸ್ತಬಕದಲ್ಲಿ ವಿವರಿಸಲಾಗಿದೆ.
ಸಂಸ್ಕೃತದಲ್ಲಿ
:
ಅವ್ಯಕ್ತಶಬ್ದಕಲಯಾsಖಿಲಮಂತರಿಕ್ಷಂ
ತ್ವಂ ವ್ಯಾಪ್ಯ ದೇವಿ
ಸಕಲಾಗಮಸಂಪ್ರಗೀತೇ
ನಾದೋsಸ್ಯುಪಾಧಿವಶತೋsಥ
ವಚಾಂಸಿ ಚಾಸಿ
ಬ್ರಾಹ್ಮೀಂ ವದಂತಿ
ಕವಯೋsಮುಕವೈಭವಾಂ ತ್ವಾಂ ||12||
ಮುಂದಿನ
ಏಳು ಶ್ಲೋಕಗಳಲ್ಲಿ ಕವಿಯು ಉಮಾದೇವಿಯನ್ನು ಏಳು ವಿಶ್ವ ಮಾತೆಯನ್ನಾಗಿ ಅವಳ ಅಭಿವ್ಯಕ್ತತೆಯನ್ನು
ಕೊಂಡಾಡುತ್ತಾರೆ.
ತಾತ್ಪರ್ಯ : ಬ್ರಾಹ್ಮೀ ಮಾತೃಕಾ
ರೂಪದ ವೈಭವ
ಓ, ದೇವಿ ! ಸಮಸ್ತ
ಆಗಮಗಳಿಂದ ವರ್ಣಿಸಲ್ಪಟ್ಟವಳೇ,
ನೀನು ಸಮಸ್ತ ವಿಶ್ವದ ಮಧ್ಯಭಾಗದಲ್ಲಿ ಪಸರಿಸಿರುವ ಅಸ್ಪಷ್ಟ
ಪದದ (ಪ್ರಣವ)
ಒಂದು ಭಾಗವಾದ ಆದಿಸ್ವರೂಪದ ನಾದ (ಶಬ್ದ), ಮತ್ತು
ನಂತರದ ಅಧಿಕ ಘಟನೆಗಳಿಂದಾಗಿ ನೀನು ಮಾತನಾಡುವ ಶಕ್ತಿ. ನಿನ್ನನ್ನು
ಮೇಧಾವಿ ಕವಿಗಳಾದ ಬ್ರಹ್ಮಿ, ಸೃಷ್ಟಿಕರ್ತ ಬ್ರಹ್ಮನ ಶಕ್ತಿಗಳು ನಿನ್ನ ಕಾರಣ ಮತ್ತು ಪರಿಣಾಮಗಳ
ವೈಭವದಿಂದಾಗಿ ವರ್ಣಿಸುವರು.
ದೇವಿಯು ಅಸ್ಪಷ್ಟಳಾದ್ದರಿಂದ
ಕಾರಣ ಮತ್ತು ಅವಳು ಸ್ಪಷ್ಟಳಾದ್ದರಿಂದ ಪರಿಣಾಮ ಕೂಡ. ಅವಳೇ
ನಾದ, ಆದಿಸ್ವರೂಪದ ನಾದ (ಪ್ರಣವ), ಇದು
ಅಭಿವ್ಯಕ್ತಿಯಾಗಬೇಕಾದ ಸ್ಥಿತಿಗೆ ಕಾರಣಸಂಬಂಧಿ ಸ್ಥಿತಿ. ಅವಳು
ಮದ್ಯಪ್ರಪಂಚವನ್ನು ಪ್ರಣವ ನಾದವಾಗಿ ಆವರಿಸಿರುವಳು. ಅವಳು ಪರಿಣಾಮವೂ ಕೂಡ, ಅಂದರೆ, ವ್ಯಕ್ತ
ಪ್ರಪಂಚದ ನಾದ, ಸ್ಪಷ್ಟವಾದ ಮಾತು. ವ್ಯಕ್ತ
ಹಾಗೂ ಅವ್ಯಕ್ತವೆರಡರ ಪದವು, ದೈವೀ ಪೌಷ್ಟಿಕಾಂಶವೆಂದು ಕರೆಯಲ್ಪಡುವ ಬ್ರಹ್ಮನ ಶಕ್ತಿ - ಬ್ರಾಹ್ಮಿ
ಮತ್ತು ಸೃಷ್ಟಿಕರ್ತ ಪುರುಷ.
ವಿವರಣೆ :
ಸಮಸ್ತ ತಂತ್ರಗಳಿಂದ
ಸ್ತುತಿಸಲ್ಪಡುವ ಮಾತೆ ! ನೀನು ಪ್ರಣವ ಶಬ್ದವಾಗಿದ್ದೀಯೆ. ಆ
ಶಬ್ದದ ಅಂಶವಾದ ನಾದದಿಂದ ಆಕಾಶವೆಲ್ಲವನ್ನೂ ವ್ಯಾಪಿಸಿರುವೆ. ಕಾರ್ಯ
ಮತ್ತು ಉಪಕರಣಾದಿಗಳ ಸಂಬಂಧದಿಂದ ವ್ಯಕ್ತವಾದ ಮಾತೂ ನೀನೇ. ಹೀಗೆ
ಕಾರಣ ಮತ್ತು ಕಾರ್ಯರೂಪವಾದ ವಾಕ್ಕು ನೀನಾಗಿರುವೆ. ಇಂತಹ ಐಶ್ವರ್ಯವುಳ್ಳ
ನಿನ್ನನ್ನು ಸೂರಿಗಳು ಬ್ರಹ್ಮನಿಗೆ ಸಂಬಂಧಿಸಿದ “ಬ್ರಾಹ್ಮೀಶಕ್ತಿ” ಎನ್ನುತ್ತಾರೆ.
ಸಂಸ್ಕೃತದಲ್ಲಿ
:
ನಾನಾವಿಧೈರ್ಭುವನಜಾಲಸವಿತ್ರಿ
ರೂರ್ಪೈ-
ವ್ಯಾಪ್ತೈಕನಿಷ್ಕಲಗಭೀರಮಹಸ್ತರಂಗೈಃ
ವ್ಯಕ್ತಂ ವಿಚಿತ್ರಯಸಿ
ಸರ್ವಮುಖರ್ವಶಕ್ತೇ
ಸಾ ವೈಷ್ಣವೀ ತವ ಕಲಾ
ಕಥಿತಾ ಮುನೀಂದ್ರೈಃ ||13||
ತಾತ್ಪರ್ಯ :
ಓ, ದೇವಿ ! ಅನಿಯಮಿತ
ಶಕ್ತಿಯುಳ್ಳ, ಪ್ರಪಂಚಗಳ ಜಾಲದ ಸೃಷ್ಟಿಕರ್ತೆ, ನೀನು
ಕಣ್ಮುಂದೆಯೇ ವ್ಯಾಪಕ ಅಲೆಗಳ, ಏಕೈಕ,
ಮಾರ್ಗವಿಲ್ಲದ, ಅಗಾಧವಾದ
ಬೆಳಕಿನಂತಹ ವೈವಿಧ್ಯ ರೂಪದ ಸುಂದರ ಪ್ರಪಂಚವನ್ನು ಸೃಷ್ಟಿಸುತ್ತೀಯೆ. ಮಹಾನ್
ಋಷಿ ಮುನಿಗಳು ನಿನ್ನ ಈ ವಿಶೇಷವಾದ ಶಕ್ತಿಯನ್ನು ವೈಷ್ಣವಿ ಎಂದು ಕರೆಯುವರು.
ಅವ್ಯಕ್ತದಿಂದ ವ್ಯಕ್ತವಾಗುವ
ಎಲ್ಲವನ್ನೂ, ರೂಪಸಹಿತವಾಗಿ ಕಾಣುವಂತೆ, ತನ್ನಲ್ಲೇ
ಇರುವ ಏಕೈಕ ಬೆಳಕಿನ ಬಹುರೂಪವನ್ನಾಗಿ,
ಸಮಸ್ತ ಹಾಗೂ ಸರ್ವವ್ಯಾಪಿಯಾಗುವಂತೆ ಹೊರತಂದಿದೆ. ಈ
ವಿಧದ ಅನೇಕ ರೂಪಗಳಲ್ಲಿ ವ್ಯಕ್ತಪಡಿಸುವ ಶಕ್ತಿಯನ್ನು ಋಷಿ ಮುನಿಗಳು ಸರ್ವಾಂತರ್ಯಾಮಿ ಭಗವಂತನಾದ ವಿಷ್ಣುವಿನ
ಹೆಸರಾಂತ ಶಕ್ತಿ ವೈಷ್ಣವಿ ಎಂದು ಗುರುತಿಸುತ್ತಾರೆ.
ವಿವರಣೆ :
ಹೇ, ವಿಶ್ವಮಾತೆ ! ಅತ್ಯಧಿಕ
ಶಕ್ತಿಸ್ವರೂಪಿಣಿಯೆ ! ನಿನ್ನ ಸರ್ವತ್ರ ವ್ಯಾಪಿಸಿರುವ ಅದ್ವಿತೀಯವಾದ, ಅಂಶವಿಲ್ಲದ
ಗಂಭೀರವಾದ ತೇಜಸ್ಸಿನ ಅಲೆಗಳಿಂದ ಸಮಸ್ತವಾದ ಪ್ರಪಂಚವೆಲ್ಲವೂ ಸ್ಪಷ್ಟಗೊಳಿಸಲ್ಪಡುತ್ತವೆ. ಆ
ನಿನ್ನ ಕಲೆಯು ತಾಪಸೋತ್ತಮರಿಂದ ವೈಷ್ಣವೀಕಲೆ ಎನ್ನಲ್ಪಡುತ್ತದೆ.
ಸಂಸ್ಕೃತದಲ್ಲಿ
:
ವ್ಯಕ್ತಿತ್ವಮಂಬ ಹೃದಯೇ
ಹೃದಯೇ ದಧಾಸಿ
ಯೇನ ಪ್ರಭಿನ್ನ ಇವ
ಬದ್ಧ ಇವಾಂತರಾತ್ಮಾ
ಸೇಯಂ ಕಲಾ ಭುವನನಾಟಕಸೂತ್ರಭರ್ತ್ರಿ
ಮಾಹೇಶ್ವರೀತಿ ಕಥಿತಾ
ತವ ಚಿದ್ವಿಭೂತಿಃ ||14||
ತಾತ್ಪರ್ಯ :
ಓ, ಮಾತೆ ! ವಿಶ್ವ
ನಾಟಕರಂಗದಲ್ಲಿ ನಡೆಯುವ ಸಮಸ್ತ ಆಗು ಹೋಗುಗಳ ಮೇಲೆ ನಿನಗೆ ಸಂಪೂರ್ಣ ಹತೋಟಿಯಿರುವುದು; ಪ್ರತ್ಯೇಕ
ಅಸ್ತಿತ್ವದ ಭಾವನೆ ಮತ್ತು ಪ್ರತಿಯೊಂದು ಹೃದಯದೊಳಗಿನ ಅಂತರಾತ್ಮವು ತಾನು ಬಂಧಿಯಾಗಿರುವೆನೆಂದು ಹಾಗೂ
ವಿಭಿನ್ನವಾಗಿರುವೆ ಎಂಬ ಭಾವನೆಯನ್ನು ಹೊಂದಿರುವ ಪ್ರತ್ಯೇಕ ಅಸ್ತಿತ್ವವನ್ನು ನೀನು ಧರಿಸುವೆ. ಈ
ಅರಿವಿನ ಶಕ್ತಿಯ ಮಹಿಮೆಯನ್ನು ಮಾಹೇಶ್ವರಿ ಎಂದು ಕರೆಯುವರು.
ದೈವೀ ಮಾತೆಯು ವಿಶ್ವದಲ್ಲಿ
ನಡೆಯುವ ನಾಟಕವನ್ನು ಸೂತ್ರಧಾರಿಯಾಗಿ ನಿರ್ದೇಶಿಸುವ ನಿರ್ದೇಶಕಿ. ಪ್ರತಿಯೊಂದು
ಜೀವಿಯಲ್ಲೂ ನಿನ್ನ ಅರಿವಿನ ಶಕ್ತಿಯ ಒಂದಂಶವನ್ನು ಸೃಷ್ಟಿಸಿ ಆ ಜೀವಿಯಲ್ಲಿ ನಾನು ಎಂಬ ಭಾವನೆಯನ್ನುಂಟುಮಾಡಿ, ಎಲ್ಲ
ಅರಿವು ಒಂದೇ ಆದರೂ ಈ ಸೃಷ್ಟಿಕ್ರಿಯೆಯ ಮೂಲಕ ಪ್ರತಿಯೊಂದು ಜೀವಿಯೂ ತಾನು ಬೇರೊಂದು ಜೀವಿಗಿಂತ ಬೇರೆಯೆಂಬ
ಭಾವನೆಯನ್ನುಂಟುಮಾಡುವುದು. ಈ ವ್ಯಾವಹಾರಿಕ ಭಿನ್ನತೆಯಲ್ಲದೇ, ಆ
ಜೀವಿಯು ತಾನೆ ಬೇರೊಂದೇ ವೈಯುಕ್ತಿಕ ರೂಪಕ್ಕೆ ಹೊಂದಿಕೊಂಡಿರುವುದಾಗಿ (ಒಂದು
ರೀತಿಯಲ್ಲಿ ಅದು ಸದಾ ಸ್ವತಂತ್ರವಾಗಿದ್ದರೂ)
ಭಾವಿಸುತ್ತದೆ. ಈ
ರೀತಿಯ ವಿಭಿನ್ನತೆಯನ್ನು ಅನುಭವಿಸುವ ಶಕ್ತಿಯು ಅರಿವಿನ ಶಕ್ತಿಯ ನಾಟಕ ಮತ್ತು ಇದನ್ನು ಹೃದಯದಲ್ಲಿ
ದಾಖಲಿಸಿದ ಪರಬ್ರಹ್ಮನ ಮಾಯಾಶಕ್ತಿ ಮಾಹೇಶ್ವರಿ ಎಂದು ಗುರುತಿಸಲಾಗಿದೆ.
“ಭ್ರಮಯನ್ ಸರ್ವಭೂತಾನಿ
ಹ್ರಿದ್ದೇಶೀರ್ಜುನ ತಿಷ್ಠತಿ” - ಗೀತ.
ವಿವರಣೆ :
ಪ್ರಪಂಚವೆಂಬ ನಾಟಕರಂಗದ
ಸೂತ್ರಧಾರಿಣಿಯೇ ! ಪ್ರತಿಯೊಂದು ಶರೀರದಲ್ಲಿರುವ ಆತ್ಮನೊಬ್ಬನೇ. ಆದರೆ
ನಿನ್ನ ಕಲೆಯೊಂದರಿಂದಾಗಿ ಪ್ರತಿಯೊಂದು ಹೃದಯದಲ್ಲೂ ಪುರುಷನಲ್ಲಿ ಬೇರೆ ಬೇರೆಯಾಗಿಯೂ, ಬಂಧನಕ್ಕೊಳಗಾದವನಂತೆ
ಕಾಣುವನು. ಅಖಂಡವಾದ ಚಿತ್ತಿನ ಐಶ್ವರ್ಯವಾದ ಈ ಕಲೆಯನ್ನು “ಮಾಹೇಶ್ವರೀಕಲೆ” ಎನ್ನುವರು.
ಸಂಸ್ಕೃತದಲ್ಲಿ
:
ಆಹಾರಶುದ್ಧಿವಶತಃ ಪರಿಶುದ್ಧಸತ್ತ್ವೇ
ನಿತ್ಯಸ್ಥಿರಸ್ಮೃತಿಧರೇ
ವಿಕಸತ್ಸರೋಜೇ
ಪ್ರಾದುರ್ಭವಸ್ಯಮಲತತ್ತ್ವವಿಭಾಸಿಕಾ
ಯಾ
ಸಾ ತ್ವಂ ಸ್ಮೃತಾ ಗುರುಗುಹಸ್ಯ
ಸವಿತ್ರಿ ಶಕ್ತಿಃ||15||
ತಾತ್ಪರ್ಯ :
ಕೌಮಾರಿ
ಮಾತೃಕಾಳ ವೈಭವ
ಯಾರ ಅಂತರಂಗವು ಆಹಾರ
ಶುದ್ಧೀಕರಣದಿಂದ ಪರಿಶುದ್ಧವಾಗಿದೆಯೋ ಮತ್ತು ಯಾರ ನೆನಪುಗಳು ಸದಾ ಸ್ಥಿರವಾಗಿದೆಯೋ ಅವರ ಹೃದಯಕಮಲದಲ್ಲಿ
ಹೊರಸೂಸುವ ಪರಿಶುದ್ಧ ಸತ್ಯದ ಜ್ಯೋತಿಯಾಗಿ ನೀನು ವ್ಯಕ್ತಗೊಳ್ಳುವೆ. ಓ, ಗುರುಗುಹನ
ಮಾತೆಯೇ ! ಆ ನಿನ್ನ ಶಕ್ತಿಯನ್ನು ಸ್ಕಂದ ಶಕ್ತಿ ಎನ್ನಲಾಗುವುದು.
ಆಹಾರ ಎಂದರೆ ಬರೇ ತಿನ್ನುವ
ಪದಾರ್ಥವಷ್ಟೇ ಅಲ್ಲ; ಅದು ಇನ್ನೂ ಹೆಚ್ಚಿನದು. ಇಂದ್ರಿಯಗಳ
ಮೂಲಕ ಮಾನಸಿಕವಾಗಿ, ಮನಸಿನ ಮೂಲಕ ಸೇವಿಸುವ ಸೇವನೆ. ವಿವೇಚನೆ
ಮತ್ತು ಶಿಸ್ತಿನಿಂದ ಆಧ್ಯಾತ್ಮಿಕವಲ್ಲದ ಅಂಶಗಳನ್ನು ಮತ್ತು ಕಂಪನಗಳನ್ನು ತಿರಸ್ಕರಿಸುವ, ಹಾಗೂ
ಬಾಹ್ಯಪ್ರಕೃತಿಯಿಂದ ಬೇರ್ಪಡುವುದರಿಂದ ಜೀವಸತ್ತ್ವದ ಪರಿಶುದ್ಧತೆಯನ್ನು ಹೊಂದುವರು. ಇದರ
ಫಲವಾಗಿ ಅರಿವಿನ ಶಕ್ತಿಯು ವೃದ್ಧಿಯಾಗುವುದು,
ಸ್ಥಿರತೆಯನ್ನು ಹೊಂದುವ ಸಾಮರ್ಥ್ಯವು ಹೆಚ್ಚುವುದು. ಅಂತಹ
ವ್ಯಕ್ತಿಯ ವಿಕಸಿತ ಹೃದಯದಲ್ಲಿ ದೈವೀ ಮಾತೆಯ ವಿಶೇಷ ಶಕ್ತಿಯು ಶುದ್ಧ ಸತ್ಯದ ಜ್ಯೋತಿಯ ಮೂಲಕ ವ್ಯಕ್ತವಾಗುವುದು. ಇದನ್ನು
ಸ್ಕಂದ ಶಕ್ತಿಯೆಂದು ಆಚರಿಸಲಾಗುವುದು.
ಸ್ಕಂದನನ್ನು ಕುಮಾರ ಎಂದೂ ಕರೆಯಲಾಗುವುದು. ಹಾಗಾಗಿ, ಸ್ಕಂದಶಕ್ತಿಯನ್ನು
ಕೌಮಾರೀ ಎಂದೂ ಕರೆಯಲಾಗುವುದು.
ಛಾಂದೋಗ್ಯ ಶೃತಿಯಲ್ಲಿ ಇದರಬಗ್ಗೆ ವಿವರಗಳಿವೆ.
ವಿವರಣೆ :
ಸಾತ್ವಿಕ ಆಹಾರಗಳನ್ನು
ಸ್ವೀಕರಿಸುವುದರಿಂದ ಮನಸ್ಸಿನ ಶುದ್ಧಿಯುಂಟಾಗುವುದು. ಅಲ್ಲಿ
ನಿತ್ಯ ಹಾಗೂ ಸ್ಥಿರವಾದ ಪ್ರಜ್ಞೆಯು ಉಂಟಾಗುತ್ತದೆ. ಹೇ, ವಿಶ್ವಮಾತೆ ! ಆ
ನಿನ್ನ ಶಕ್ತಿಯು ಗುರುಗುಹನಾದ ಕುಮಾರಸ್ವಾಮಿಯ ಶಕ್ತಿ.
ಸಂಸ್ಕೃತದಲ್ಲಿ
:
ಹವ್ಯಂ ಯಯಾ ದಿವಿಷದೋ
ಮಧುರಂ ಲಭಂತೇ
ಕವ್ಯಂ ಯಯಾ ರುಚಿಕರಂ
ಪಿತರೋ ಭಜಂತೇ
ಅಶ್ನಾತಿ ಚಾನ್ನಮಖಿಲೋsಪಿ
ಜನೋ ಯಯೈವ
ಸಾ ತೇ ವರಾಹವದನೇತಿ
ಕಲಾsಮ್ಬ ಗೀತಾ||16||
ತಾತ್ಪರ್ಯ :
ವಾರಾಹೀ
ಮಾತೃಕಾದ ವೈಭವ
ಓ, ಮಾತೆ ! ದೇವತೆಗಳು
ನಿನ್ನ ಶಕ್ತಿಯಿಂದಲೇ ಸಿಹಿಯಾದ ಹವ್ಯದ ನೇವೇದ್ಯವನ್ನು ಸ್ವೀಕರಿಸುವರು; ಪಿತೃಗಳು
ರುಚಿಯಾದ ಕವ್ಯವನ್ನು ಸ್ವೀಕರಿಸುವರು ಮತ್ತು ಸಮಸ್ತ ಮಾನವ ಕುಲವು ಆಹಾರವನ್ನು ವರಾಹಿವದನವೆಂದು (ವಾರಾಹಿ
ಶಕ್ತಿ) ಹೊಗಳುತ್ತಾ ತಿನ್ನುವರು.
ಸಮಸ್ತ ಸೃಷ್ಟಿಯೆಲ್ಲೆಡೆ
ತಿನ್ನುವ ಮತ್ತು ಸಮೀಕರಣ ಶಕ್ತಿಯು ದೈವೀ ಜ್ಞಾನಶಕ್ತಿಯ ಹೊಮ್ಮುವಿಕೆ. ಮನುಷ್ಯನಿಗೆ
ಆಹಾರವನ್ನು ತಿನ್ನುವ, ಜೀರ್ಣಿಸಿಕೊಳ್ಳುವ ಮತ್ತು ಆಹಾರವನ್ನು ಸವಿಯುವ ಸಂತೋಷವೇ ವರಾಹಿ. ಸಮಸ್ತ
ಜೀವಿಗಳು ಅಹಾರವನ್ನು ಆನಂದದಿಂದ ಸವಿಯುವದರ ಹಿಂದಿನ ಶಕ್ತಿಯೇ ದೇವಿ.
ವಿವರಣೆ :
ಹೇ, ಜಗನ್ಮಾತೆ ! ಯಾವ
ನಿನ್ನ ಕಲೆಯಿಂದ ದೇವತೆಗಳು ಮಧುರವಾದ ಹವಿಸ್ಸುಗಳನ್ನು ಪಡೆಯುತ್ತಾರೋ, ಯಾವ
ನಿನ್ನ ಕಲೆಯಿಂದ ಪಿತೃಗಳು ರುಚಿಕರವಾದ ಕವ್ಯವೆಂಬ ತಮ್ಮ ಅನ್ನವನ್ನು ಸೇವಿಸುತ್ತಾರೋ, ಯಾವ
ನಿನ್ನ ಕಲೆಯಿಂದ ಮನುಷ್ಯರು ಅನ್ನವನ್ನು ತಿನ್ನುವರೋ, ಆ
ನಿನ್ನ ಕಲೆಯನ್ನು ವಾರಾಹೀ ಶಕ್ತಿಯೆನ್ನುವರು.
ಎಲ್ಲರಿಗೂ ಭೋಜನ ಶಕ್ತಿ
ನೀಡುವವಳೂ, ಅಲ್ಲಲ್ಲಿ ನಿಂತು ಅವುಗಳನ್ನು ಉಪಭೋಗಿಸುವವಳೂ ವಾರಾಹೀ ಎಂದು
ಕರೆಯಲ್ಪಡುವಳು. ಅದರಿಂದಲೇ ಎಲ್ಲ ದೇವತೆಗಳೂ, ಪಿತೃಗಳೂ, ಮನುಷ್ಯರೂ, ಭೋಜನ
ಸಾಮರ್ಥ್ಯವುಳ್ಳವರಾಗುವರು ಎಂಬ ಸಾರಾಂಶ.
ಸಂಸ್ಕೃತದಲ್ಲಿ
:
ದೃಷ್ಟಾನ್ನಿಹಂಸಿ ಜಗತಾಮವನಾಯ
ಸಾಕ್ಷಾ-
ದನ್ಯೈಶ್ಚ ಘಾತಯಸಿ
ತಪ್ತಬಲೈರ್ಮಹದ್ಭಿಃ
ದಂಭೋಲಿಚೇಷ್ಟಿತಪರೀಕ್ಷ್ಯಬಲಾ
ಬಲಾರೇಃ
ಶಕ್ತಿರ್ನ್ಯಗಾದಿ ತವ
ದೇವಿ ವಿಭೂತಿರೇಷಾ ||17||
ತಾತ್ಪರ್ಯ :
ಓ, ದೇವಿ ! ನೀನು
ಇಂದ್ರನ ಶಕ್ತಿಯುತ ಆಯುಧವಾದ ವಜ್ರಾಯುಧದಂತೆ ಅಭೇದ್ಯಳು. ಪ್ರಪಂಚವನ್ನು
ದುಷ್ಟರಿಂದ ರಕ್ಷಿಸಲು ನೀನು ಸ್ವತಃ ಆ ದುಷ್ಟರನ್ನು ನಿರ್ಮೂಲಮಾಡುವೆ ಮತ್ತು ನಿನ್ನ ಅನುಯಾಯಿಗಳ ಮೂಲಕವೂ
ಪ್ರಜ್ವಲಿಸುವ ಶಕ್ತಿಯೊಂದಿಗೆ ದುಷ್ಟರನ್ನು ನಾಶಮಾಡುವೆ. ಈ
ನಿನ್ನ ವೈಭವವನ್ನು ಇಂದ್ರ ಶಕ್ತಿಯೆಂಬುದಾಗಿ,
ಇಂದ್ರಾಣಿ ಎಂದು ವರ್ಣಿಸಲಾಗಿದೆ.
ವಿವರಣೆ :
ಹೇ, ಮಾತೆ ! ನೀನು
ಜಗತ್ತನ್ನು ರಕ್ಷಿಸಲು ದುಷ್ಟರನ್ನು ನೀನೇ ನಿಗ್ರಹಿಸುವೆ. ತಪೋಬಲ
ಉಂಟಾದ ಮಹಾತ್ಮರ ಮೂಲಕವಾಗಿಯೂ ದುಷ್ಟರನ್ನು ನಿಗ್ರಹಿಸುವೆ. ನಿನ್ನ
ಬಲಪರೀಕ್ಷೆಯು ವಜ್ರಾಯುಧಕ್ಕೆ ಮಾತ್ರ ಸಾಧ್ಯವೇನೋ? ಇಂದ್ರಶಕ್ತಿಯನ್ನು
ಇಂದ್ರಾಣೀ ಶಕ್ತಿಯೆನ್ನುವರು. ಒಟ್ಟಿನಲ್ಲಿ ದೇವಿಯ ದುಷ್ಟ ನಿಗ್ರಹ ಶಕ್ತಿಯನ್ನು ಇಂದ್ರಾಣೀಶಕ್ತಿ
ಎನ್ನುವರು.
ಸಂಸ್ಕೃತದಲ್ಲಿ
:
ಸಂಕಲ್ಪರಕ್ತಕಣಪಾನವಿಮೃದ್ಧಶಕ್ತ್ಯಾ
ಜಾಗ್ರತ್ಸಮಾಧಿಕಲಯೇಶ್ವರಿ
ತೇ ವಿಭೂತ್ಯಾ
ಮೂಲಾಗ್ನಿಚಂಡಶಶಿಮುಂಡತನುತ್ರಭೇತ್ರ್ಯಾ
ಚಾಮುಂಡಯಾ ತನುಷು ದೇವಿ
ನ ಕಿಂ ಕೃತಂ ಸ್ಯಾತ್ ||18||
ತಾತ್ಪರ್ಯ :
ಚಾಮುಂಡ
ಮಾತ್ರಿಕೆಯ ವೈಭವ
ಓ, ದೇವಿಯೆ ! ಕೇಂದ್ರೀಕೃತ
ಆಲೋಚನೆಯ ರಕ್ತಬಿಂದುವನ್ನು ಕುಡಿದು ಹಿಗ್ಗುವ ನಿನ್ನ ಚಾಮುಂಡಾ ಶಕ್ತಿಯಿಂದ ನಮ್ಮ ದೈಹಿಕ ರೂಪದಲ್ಲಿ
ಮಾಡಲಸಾಧ್ಯವಾದದ್ದು ಯಾವುದು? ಮೂಲಾಧಾರ ಚಕ್ರದಲ್ಲಿ ನೆಲೆಸಿರುವ ಚಂಡ ರಕ್ಕಸನನ್ನು ಮತ್ತು
ಎಚ್ಚರದ ಸ್ಥಿತಿಯಲ್ಲಿನ ಸಮಾಧಿಯಾದ
ಸಹಸ್ರಾರದಲ್ಲಿನ ಮುಂಡ, ಚಂದ್ರರನ್ನು ನಿನ್ನ ಹಿಡಿತಕ್ಕೆ ತೆಗೆದುಕೊಳ್ಳುವೆ.
ದೇವಿಯ ಶಕ್ತಿಯು ಹೊರ
ರಕ್ಷಣಾ ಗೋಡೆಗಳನ್ನು / ಗಂಟುಗಳನ್ನು (ಕವಚ) ಭೇದಿಸಿ, ಮೂಲಾಧಾರದಲ್ಲಿನ
ಚಂಡನೆಂದು ಮತ್ತು ಸಹಸ್ರಾರದಲ್ಲಿನ ಮುಂಡನೆಂದು ಕರೆಯುವ ತಡೆಗಳನ್ನು ಭೇದಿಸಿ ಪರಮಾನಂದವನ್ನು ಬಿಡುಗಡೆಗೊಳಿಸುವುದು. ಇದನ್ನೇ
ಚಾಮುಂಡಿಯ ಶಕ್ತಿಯೆನ್ನುವರು. ಆನಂದದ ಹರಿವನ್ನು ತಡೆಯುವ ಶಕ್ತಿಯನ್ನು ಮುಂಡ ಅಥವಾ ಮನಸ್ಸು
ಎನ್ನುವರು.
ಕವಿಯು ಇಲ್ಲಿ ದೇವಿಯ
ಕಾರ್ಯವಾದ ಚಂಡ ಮುಂಡ ರಾಕ್ಷಸರ ಸಂಹಾರಕ್ಕೆ ಆಧ್ಯಾತ್ಮಿಕ ವಿಶೇಷತೆಯನ್ನು ನೀಡಿರುವರು. ದೇವಿಯು
ರಕ್ತಬೀಜಾಸುರನ ರಕ್ತ ಬಿಂದುಗಳನ್ನು
(ಅದು ನೆಲದ ಮೇಲೆ ಬಿದ್ದಾಗ ಉತ್ಪತ್ತಿಯಾಗುವ
ಅನೇಕ ದುಷ್ಟರ ಸೃಷ್ಟಿಯನ್ನು ತಡೆಯುವ ಉದ್ದೇಶದಿಂದ) ಕುಡಿಯುವಳು.
“ಯಾಸ್ಮತ್ ಚಂಡಂ
ಚ ಮುಂಡಂ ಚ ಗೃಹೀತ್ವಾ ತ್ವಮುಪಾಗತ, ಚಾಮುಂಡೇತಿ ತತೋ
ಲೋಕೇ ಖ್ಯಾತಾ ದೇವಿ ಭವಿಷ್ಯತಿ”
-
ದುರ್ಗಾ
ಸಪ್ತಶತಿ
ವಿವರಣೆ :
ಹೇ, ಮಾತೆ ! ನಿನ್ನ
ಏಳನೇ ಕಲೆಯನ್ನು ಚಾಮುಂಡೀ ಮಾತೃಕೆಯೆನ್ನುವರು. ಆ ಕಲೆಯು ಸಂಕಲ್ಪಗಳೆಂಬ
ರಕ್ತಕಣಗಳ ಪಾನದಿಂದ ಅಭಿವೃದ್ಧಿಗೊಂಡ ಶಕ್ತಿಯುಳ್ಳವಳಾಗಿದ್ದಾಳೆ. ಎಚ್ಚರದ
ಸಮಾಧಿಯೆಂಬ ಕಲೆಯಿಂದ ಮೂಲಾಗ್ನಿ ಅಂದರೆ ಕುಲಕುಂಡವೆಂಬ ಅಗ್ನಿಯೇ ಚಂಡ-ಮುಂಡರೆಂಬ
ಅಸುರರು. ಇವರಿಬ್ಬರ ಕವಚಗಳನ್ನು ಸೀಳುವೆ. ಇದರಿಂದಾಗಿ
ನಮ್ಮ ಶರೀರದಲ್ಲಿ ಏನನ್ನು ತಾನೇ ನೀನು ಮಾಡಿದಂತಾಗುವುದಿಲ್ಲ.
ಇಲ್ಲಿ ದೇವಿಯು ನಮ್ಮ
ಶರೀರದಲ್ಲಿ ಮೂಲಾಗ್ನಿಯಲ್ಲಿರುವ ಗ್ರಂಥಿಗಳನ್ನು ಬಿಡಿಸುತ್ತಾಳೆಂದು ಅರ್ಥ. ಇಲ್ಲಿ
ದುರ್ಗಾ ಸಪ್ತಶತಿಯಲ್ಲಿ ಹೇಳಲ್ಪಡುವ ಚಾಮುಂಡಿಯಿಂದ ಮಾಡಲ್ಪಡುವ ರಕ್ತಬೀಜಾಸುರ, ಚಂಡ-ಮುಂಡಾದಿಗಳ
ನಿಗ್ರಹಗಳಿಗೆ ಆಧ್ಯಾತ್ಮರೂಪವನ್ನು ನೀಡಲಾಗಿದೆ.
ಒಟ್ಟಿನಲ್ಲಿ ಈ ಶ್ಲೋಕದಲ್ಲಿ
ಸಂಕಲ್ಪೋಪಸಂಹಾರ. ಮೂಲಾಗ್ನಿಯು ಜ್ವಲಿಸುವುದಕ್ಕೆ ಅಡ್ಡಿಯಾಗಿರುವ ಧೂಮವನ್ನು ಹೋಗಲಾಡಿಸುವುದು
ಸಹಸ್ರಾರದ ಪ್ರಾವರಣವಾದ ಮನಸ್ಸನ್ನು ನಿಗ್ರಹಿಸುವುದು ಇವು ದೇವಿಯ ಯಾವ ಕಲೆಯಿಂದ ನಡೆಯುವುದೋ ಅದೇ
ಚಾಮುಂಡಾ ಮಾತೃಕೆ.
ಸಂಸ್ಕೃತದಲ್ಲಿ
:
ತ್ವಂ ಲೋಕರಾಜ್ಞಿ ಪರಮಾತ್ಮನಿ
ಮೂಲಮಾಯಾ
ಶಕ್ರೇ ಸಮಸ್ತಸುರಭರ್ತರಿ
ಜಾಲಮಾಯಾ
ಛಾಯೇಶ್ವರಾಂತರಪುಮಾತ್ಮನಿ
ಯೋಗಮಾಯಾ
ಸಂಸಾರಸಕ್ತಹೃದಯೇಷ್ವಸಿ
ಪಾಶಮಾಯಾ||19||
ತಾತ್ಪರ್ಯ :
ಓ, ವಿಶ್ವಸಾಮ್ರಾಜ್ಞಿಯೇ ! ಅತ್ಯುನ್ನತ
ದೇವತೆಯಲ್ಲಿನ ನಿನ್ನ ಮಾಯೆಯು
“ಮೂಲಮಾಯೆ”; ದೇವತೆಗಳೊಡೆಯನಾದ
ಇಂದ್ರನಲ್ಲಿ ಇದನ್ನು “ನಿಗೂಢ ಮಾಯೆ”; ಸೂರ್ಯನ ಪಥದಲ್ಲಿನ
ಅಂತರಂಗದ ಚೇತನದಲ್ಲಿ ಇದನ್ನು
“ಯೋಗ ಮಾಯೆ”; ಪ್ರಪಂಚಕ್ಕೆ
ಅಂಟಿರುವ ಹೃದಯಗಳಲ್ಲಿ ನಿನ್ನನ್ನು
“ಬಂಧಿಸುವ ಮಾಯೆ”.
ಮಾಯೆಯು ಭಗವಂತನ ಸ್ವಶಕ್ತಿ, ಅವನಿಂದ
ಬೇರ್ಪಡಿಸಲಾಗದ ದೈವೀ ಶಕ್ತಿ. ದೇವನ ಅಭಿವ್ಯಕ್ತಿಯಲ್ಲಿ ಸಮತೋಲನವಿರುವಂತೆ, ಅವಳ
ಸೂತ್ರೀಕರಣ ಹಾಗೂ ಕಾರ್ಯಗಳಲ್ಲಿಯೂ ಸಹ ಸಮತೋಲನವನ್ನು ಕಾಯ್ದುಕೊಳ್ಳುವಳು. ಅವಳು
ಅನೇಕ ರೂಪವನ್ನು ಧರಿಸುವಳು ಮತ್ತು ಅವಳು ಒಂದರಿಂದ ಅನೇಕ ರೂಪಗಳನ್ನು ಧರಿಸುವುದರಲ್ಲಿ ಪ್ರವೀಣೆ. ಮಹೋನ್ನತದ
ಎತ್ತರದ ಸ್ಥಿತಿಯಲ್ಲಿ ಅವಳು
ಸಮಸ್ತ ಸೃಷ್ಟಿಯ ಮೂಲದ ಶಕ್ತಿ;
ಅವಳ ಉದರದಿಂದ ಎಲ್ಲವೂ ನಡೆಯುತ್ತದೆ.
ವಿವರಣೆ :
ಹೇ, ಜಗನ್ಮಾತೆ ! ನೀನು
ಪರಮಾತ್ಮನಲ್ಲಿ ಮೂಲಮಾಯಾ ಎನ್ನಲ್ಪಡುವೆ.
“ಇಂದ್ರೋ ಮಾಯಾಭಿಃ ಪುರುರೂಪ ಈಯತೇ” ಎಂಬ
ವೇದೋಕ್ತಿಯಂತೆ ಜಾಲಮಾಯೆಯಾಗಿದ್ದೀಯೆ.
ಛಾಯಾಪತಿಯಾದ ಸೂರ್ಯನ ಒಳಗಡೆ ಯೋಗಮಾಯೆಯಾಗಿರುವೆ. ಈ
ಯೋಗಮಾಯೆಯ ವಿಷಯವು ದುರ್ಗಾ ಸಪ್ತಶತಿಯಲ್ಲೂ,
ಭಗವದ್ಗೀತೆಯಲ್ಲೂ ಪ್ರಸಿದ್ಧವಾಗಿದೆ. ಸಂಸಾರವಂದಿಗರಲ್ಲಿ “ಪಾಶಮಾಯೆ” ಎಂದಾಗಿರುವೆ. ಅಂದರೆ
ನೀನು ಸಂಸಾರಬಂಧನವನ್ನುಂಟು ಮಾಡುವವಳಾಗಿರುವೆ. ಈ ನಾಲ್ಕು ಶಕ್ತಿಗಳೂ
ನೀನೊಬ್ಬಳೇ ಆಗಿದ್ದೀಯೆ.
ಸಂಸ್ಕೃತದಲ್ಲಿ
:
ತ್ವಂ ಭೂತಭರ್ತರಿ ಭವಸ್ಯನುಭೂತಿನಿದ್ರಾ
ಸೋಮಸ್ಯಪಾತರಿ ಬಿಡೌಜಸಿ
ಮೋದನಿದ್ರಾ
ಸಪ್ತಾಶ್ವಬಿಂಬಪುರುಷಾತ್ಮನಿ
ಯೋಗನಿದ್ರಾ
ಸಂಸಾರಮಗ್ನಹೃದಯೇಷ್ವಸಿ
ಮೋಹನಿದ್ರಾ||20||
ತಾತ್ಪರ್ಯ :
ಸಮಸ್ತ ಜೀವಿಗಳ ದೈವವಾದ
ಶಿವನಲ್ಲಿನ ನಿದ್ರಾನುಭವವೇ ನೀನು;
ಇಂದ್ರನಲ್ಲಿನ ನಿದ್ರೆಯ ಆನಂದದಲ್ಲಿ, ಸೋಮರಸ
ಕುಡಿಯುವುದರಲ್ಲಿ, ಸಪ್ತಾಶ್ವದ ಸೂರ್ಯ ಪಥದಲ್ಲಿರುವ ವಿಷ್ಣುವಿನ ಯೋಗನಿದ್ರೆಯಲ್ಲಿ, ಪ್ರಾಪಂಚಿಕ
ವಿಷಯಗಳಲ್ಲಿ ಮುಳುಗಿರುವವರ ಹೃದಯದಲ್ಲಿನ ಮಾಯಾ ನಿದ್ರೆಯಲ್ಲಿ ನೀನೇ ಇರುವೆ.
ವಿವರಣೆ :
ಸಮಸ್ತ ಪ್ರಾಣಿಗಳ ರಕ್ಷಕಳೆ ! ಈಶ್ವರನಲ್ಲಿ
ಅನುಭೂತಿಯೆಂಬ ನಿದ್ರೆಯಾಗಿರುವೆ.
ಸೋಮಪಾನ ಮಾಡುವ ಇಂದ್ರನಲ್ಲಿ ಆನಂದನಿದ್ರೆಯಾಗಿರುವೆ. ಸೂರ್ಯಮಂಡಲದೊಳಗಿರುವ
ವಿಷ್ಣುವಿನಲ್ಲಿ ಯೋಗನಿದ್ರೆಯಾಗಿರುವೆ.
ಸಂಸಾರದಲ್ಲಿ ಮುಳುಗಿರುವವರಲ್ಲಿ ಮೋಹನಿದ್ರೆಯಾಗಿರುವೆ.
ಸಂಸ್ಕೃತದಲ್ಲಿ
:
ವಿಷ್ಣುಶ್ಚಕಾರ ಮಧುಕೈಟಭನಾಶನಂ
ಯನ್-
ಮುಕ್ತಃ ಸಹಸ್ರದಲಸಂಭವಸಂಸ್ತುತಾ
ಸಾ
ಕಾಲೀ ಘನಾಂಜನನಿಭಪ್ರಭದೇಹಶಾಲಿ-
ನ್ಯುಗ್ರಾ ತವಾಂಬ ಭುವನೇಶ್ವರಿ
ಕೋsಪಿ ಭಾಗಃ ||21||
ತಾತ್ಪರ್ಯ :
ಓ, ಜಗನ್ಮಾತೆಯೆ ! ವಿಷ್ಣುವನ್ನು
ನೀನು ನಿನ್ನ ಯೋಗನಿದ್ರೆಯಿಂದ ಬಿಡುಗಡೆಗೊಳಿಸಿದಾಗ ಅವನು ಮಧು ಕೈಟಭರನ್ನು ನಾಶಮಾಡಿದ. ಸಾವಿರದಳದ
ಕಮಲ ಪುಷ್ಪದಲ್ಲಿ ಜನಿಸಿದ ಬ್ರಹ್ಮನು ನಿನ್ನನ್ನು ವರ್ಣಿಸಿರುವನು. ಕಪ್ಪುಅಂಜನ
ಪರ್ವತದಂತೆ ಪ್ರಕಾಶಿಸುತ್ತಿರುವ ಭಯಾನಕ ರೂಪದ ಕಾಳಿಯು ನಿನ್ನ ರೂಪದಲ್ಲಿ ಒಂದಂಶವನ್ನು ಬಿಂಬಿಸುವುದಿಲ್ಲವೇ ?
ಈ ಶ್ಲೋಕವು ಮಧು ಕೈಟಭ
ರಾಕ್ಷಸರ ವಿನಾಶಮಾಡಿದ ವಿಷ್ಣುವನ್ನು ಸೂಚಿಸುವುದು. ದೇವೀ ಮಾಹಾತ್ಮ್ಯ ಚರಿತದಲ್ಲಿ
ವಿವರಿಸಿರುವ ಮೂರು ರೂಪಗಳಾದ ಕಾಳಿ,
ಮಹಿಷಾಸುರಮರ್ಧಿನಿ ಮತ್ತು ಕೌಶಿಕಿ ರೂಪಗಳನ್ನು ಕವಿಯು ಮೂರು
ಶ್ಲೋಕಗಳಲ್ಲಿ ವರ್ಣಿಸಿರುವರು.
ವಿವರಣೆ :
ಯಾವ ವಿಷ್ಣುವು ಯೋಗನಿದ್ರೆಯಿಂದ
ಹೊರಬಂದು ಮಧುಕೈಟಭರನ್ನು ನಿಗ್ರಹಿಸಿದನೋ,
ಯಾರು ಕಮಲದಲ್ಲಿ ಹುಟ್ಟಿದ ಬ್ರಹ್ಮನಿಂದ ಸ್ತುತಿಸಲ್ಪಟ್ಟಳೋ, ಯಾರು
ದಟ್ಟವಾದ ಕಾಡಿಗೆಯಂತೆ ಇರುವ ದೇಹದಿಂದ ಬೆಳಗುತ್ತಾಳೋ, ಆ
ದೇವಿಯು ಕಾಲಿ ಎಂಬ ಹೆಸರನ್ನುಳ್ಳವಳು.
ಅದೂ ಆಕೆಯ ಕಲೆಯಾಗಿದೆ.
ಸಂಸ್ಕೃತದಲ್ಲಿ
:
ವಿದ್ಯುತ್ಪ್ರಭಾಮಯಮಧೃಷ್ಯತಮಂ
ದ್ವಿಷದ್ಭಿ-
ಶ್ಚಂಡಪ್ರಚಂಡಮಖಿಲಕ್ಷಯಕಾರ್ಯಶಕ್ತಂ
ಯತ್ತೇ ಸವಿತ್ರಿ ಮಹಿಷಸ್ಯ
ವಧೇ ಸ್ವರೂಪಂ
ತಚ್ಚಿಂತನಾದಿಹ ನರಸ್ಯ
ನ ಪಾಪಭೀತಿಃ ||22||
ತಾತ್ಪರ್ಯ :
ಹೇ, ಮಾತೆ ! ಮಹಿಷಾಸುರನನ್ನು
ಸಂಹಾರ ಮಾಡುವ ಸಮಯದಲ್ಲಿ ನೀನು ತಾಳಿದ ಮಿಂಚಿನ ವೇಗದ ಜ್ವಾಲೆಯಿಂದ ಕೂಡಿದ ಸರ್ವವನ್ನೂ ನಾಶಪಡಿಸುವ
ಮತ್ತು ಅಜೇಯವಾದ ನಿನ್ನ ಘೋರ ರೂಪವನ್ನು ಯಾರು ಧ್ಯಾನಿಸುವರೋ ಅವರು ಸರ್ವಪಾಪಗಳಿಂದ ಮುಕ್ತರಾಗುವರು.
ಸಮಸ್ತ ನಕಾರಾತ್ಮಕ
ಶಕ್ತಿಗಳನ್ನು ನಾಶಮಾಡುವ ಮಹಿಷಾಸುರಮರ್ಧಿನಿಯ ಭಯಾನಕ ರೂಪವು ಈ ಪ್ರಪಂಚದಲ್ಲಿ ಪಾಪ ಮಾಡುವ ಪ್ರಲೋಭನೆಯನ್ನೂ
ನಾಶಮಾಡಬಲ್ಲದು.
ವಿವರಣೆ :
ಹೇ, ಜಗನ್ಮಾತೆಯೆ ! ಮಹಿಷಾಸುರನನ್ನು
ಸಂಹರಿಸಲು ನೀನು ಅಂದು ಸ್ವೀಕರಿಸಿದ ಸ್ವರೂಪವು ಮಿಂಚಿನಂತೆ ನೋಡಲಸಾಧ್ಯವಾಗಿತ್ತು. ಶತ್ರುಗಳಿಂದ
ಸಮೀಪಕ್ಕೆ ಹೋಗಲೂ ಅಸಾಧ್ಯವಾಗಿತ್ತು.
ಅಂತಹ ನಿನ್ನ ರೂಪವನ್ನು ಧ್ಯಾನ ಮಾಡಿದರೆ ಮನುಷ್ಯನಿಗೆ ಯಾವ
ಪಾಪದ ಭೀತಿಯೂ ಇರುವುದಿಲ್ಲ.
ಸಂಸ್ಕೃತದಲ್ಲಿ
:
ಶುಂಭಂ ನಿಶುಂಭಮಪಿ
ಯಾ ಜಗದೇಕವೀರೌ
ಶೂಲಾಗ್ರಶಾಂತಮಾಸೌ
ಮಹತೀ ಚಕಾರ
ಸಾ ಕೌಶಿಕೀ ಭವತಿ ಕಾಶಯಶಾಃ
ಕೃಶೋದ-
ರ್ಯಾತ್ಮಾಂಗಜಾ ತವ
ಮಹೇಶ್ವರಿ ಕಶ್ಚಿದಂಶಃ ||23||
ತಾತ್ಪರ್ಯ :
ಓ, ಮಹೇಶ್ವರಿ ! ಮಹಾನ್
ಶೂರರಾದ ಶುಂಭ ನಿಶುಂಭ ರಾಕ್ಷಸರನ್ನು ಕೌಶಿಕಿ ಅಸ್ತ್ರದ ತುದಿಯಲ್ಲಿ ಸೇರಿಸಿ ಅವರ ಜೀವವನ್ನು ತೆಗೆದದ್ದು
ನಿನ್ನ ಹೊಳೆಯುವ ರೂಪ.
ದೇವಿ ಚರಿತದಲ್ಲಿ ದೇವಿಯ
ಸುಪ್ರಸಿದ್ಧ ರೂಪದ ಬಗ್ಗೆ “ಕೌಶಿಕೀ ನಾಮ ಸ ದುರ್ಗ ಹಂತ್ರಿ ಶುಂಭ ನಿಶುಂಭಯೋಃ” ಎಂಬುದಾಗಿ
ವಿವರಿಸಲ್ಪಟ್ಟಿದೆ.
ವಿವರಣೆ :
ಹೇ, ಮಹೇಶ್ವರಿಯೆ ! ಶುಂಭ
ನಿಶುಂಭರಿಬ್ಬರೂ ಕೂಡಿ ಅಸದೃಶರಾದ ಜಗತ್ತಿನ ವೀರರಾಗಿದ್ದರೂ ಅವರಿಬ್ಬರನ್ನೂ ನೀನು ಶೂಲಾಯುಧದ ತುದಿಯಿಂದ
ಶಕ್ತಿಯುಡುಗಿದವರನ್ನಾಗಿ ಮಾಡಿದೆ.
ಕಾಶಪುಷ್ಪದಂತೆ ನಿರ್ಮಲವಾದ ಕೀರ್ತಿಯುಳ್ಳ, ಕೃಶೋದರಿಯಾದ (ತೆಳುವಾದ
ಮೈಯುಳ್ಳ) ನಿನ್ನ ಶರೀರದಿಂದುಂಟಾದ ಆ ಮೂರ್ತಿಯು, ಕೌಶಿಕೀ
ಎಂಬ ಹೆಸರಿನಿಂದ ಕೂಡಿ ಅಸದೃಶವಾದ ನಿನ್ನ ಅಂಶವಾಗಿದೆ.
ಸಂಸ್ಕೃತದಲ್ಲಿ
:
ಮಾಯೇ ಶಿವೇ ಶ್ರಿತವಿಪದ್ವಿನಿಹಂತ್ರಿ
ಮಾತಃ
ಪಶ್ಯ ಪ್ರಸಾದಭರಶೀತಲಯಾ
ದೃಶಾ ಮಾಂ
ಏಷೋಹಮಾತ್ಮಜಕಲತ್ರಸುಹೃತ್ಸಮೇತೋ
ದೇವಿ ತ್ವದೀಯಚರಣಂ
ಶರಣಂ ಗತೋsಸ್ಮಿ
||24||
ತಾತ್ಪರ್ಯ :
ಓ, ಶಿವೆ ! ಮಾಯೆ ! ಮಾತೆ ! ನಿನ್ನ
ಭಕ್ತರ ತೊಂದರೆಗಳನ್ನು ನಿವಾರಿಸುವವಳೆ
! ನನ್ನೆಡೆಗೆ ಕರುಣಾಪೂರಿತ ನೋಟದಿಂದ
ನೋಡು. ಓ,
ದೇವಿ
! ನಾನು ಹಾಗೂ ನನ್ನ ಬಂಧು ಬಾಂಧವರೊಂದಿಗೆ
ನಿನ್ನ ಚರಣಗಳಲ್ಲಿ ಆಶ್ರಯವನ್ನು ಬೇಡುತ್ತಾ ನಮಗೆ ರಕ್ಷಣೆಯನ್ನು ನೀಡು.
ವಿವರಣೆ :
ಹೇ, ಜಗನ್ಮಾತೆ ! ನೀನು
ಕಪಟನಾಟಕಸೂತ್ರಧಾರಿಣಿ, ಮಂಗಳಸ್ವರೂಪಿಣಿ ಹಾಗೂ ನಿನ್ನನ್ನಾಶ್ರಯಿಸಿದವರ ವಿಪತ್ತುಗಳನ್ನೆಲ್ಲ
ಪರಿಹರಿಸುವವಳಾಗಿರುವೆ. ಹೇ ಮಾತೆ ! ಅನುಗ್ರಹದಿಂದ ಕೂಡಿದ, ತಣ್ಣನೆಯಿರುವ
ನಿನ್ನ ನೋಟದಿಂದ ನನ್ನನ್ನು ನೋಡಿ ಅನುಗ್ರಹಿಸು. ನಾನು ಹಾಗೂ ನನ್ನ ಬಂಧು
ಬಾಂಧವರೆಲ್ಲರ ಜೊತೆಯಲ್ಲಿ ನಿನ್ನ ಪಾದಾರವಿಂದಗಳಲ್ಲಿ ಶರಣಾಗತನಾಗಿದ್ದೇನೆ. ಅಂದರೆ
ದೇವಿಯು ತನ್ನನ್ನು ಆಶ್ರಯಿಸಿದವರನ್ನು ಮಾತ್ರ ಅನಿಷ್ಟಪರಿಹಾರ ಮಾಡಿ ಅವರನ್ನು ಇಷ್ಟಾನುಗ್ರಹಗಳಿಂದ
ಪರಿಪೂರ್ಣರನ್ನಾಗಿಸುವಳು. ಆದ್ದರಿಂದಲೇ ಸಪ್ತಶತಿಯಲ್ಲಿ “ತ್ವಾಮಾಶ್ರಿತಾಹ್ಯಾಶ್ರಯತಾಂ
ಪ್ರಯಾಂತಿ” ಎನ್ನಲಾಗಿದೆ.
ಸಂಸ್ಕೃತದಲ್ಲಿ
:
ಧಿನ್ವಂತು ಕೋಮಲಪದಾಃ
ಶಿವವಲ್ಲಭಾಯಾ-
ಶ್ಚೇತೋ ವಸಂತತಿಲಕಾಃ
ಕವಿಕುಂಜರಸ್ಯ
ಆನಂದಯಂತು ಚ ಪದಾಶ್ರಿತಸಾಧುಸಂಘಂ
ಕಷ್ಟಂ ವಿಧೂಯ ಸಕಲಂ
ಚ ವಿಧಾಯ ಚೇಷ್ಟಮ್ ||25|| 175
ತಾತ್ಪರ್ಯ :
ಮಹಾನ್ ಕವಿಯಾದ ಗಣಪತಿಯ, ಕೋಮಲ
ಪದಗಳಿಂದ ವಸಂತತಿಲಕ ಛಂದಸ್ಸಿನಲ್ಲಿ ರಚಿತವಾದ ಸ್ತೋತ್ರವು ಶಿವನ ಪತ್ನಿಯ ಹೃದಯವನ್ನು ಸಂತೋಷಪಡಿಸಲಿ. ಧರ್ಮಶ್ರದ್ಧೆಯುಳ್ಳ
ಜನಗಳ ಗುಂಪಿನಲ್ಲಿ ಎಲ್ಲರೂ ತಾವು ಏನನ್ನು ಆಶಿಸಿದ್ದರೋ ಅದನ್ನು ಗಳಿಸಿ ಸಂತೋಷಿಸಲಿ ಹಾಗೂ ದೇವಿಯನ್ನು
ಈ ಶ್ಲೋಕಗಳ ಮೂಲಕ ಆರಾಧಿಸುತ್ತಾ ತಮ್ಮ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿಕೊಳ್ಳಲಿ.
ವಿವರಣೆ :
ಕೋಮಲವಾದ ಪದಗಳಿಂದ
ಕೂಡಿದ “ವಸಂತತಿಲಕಾ” ಎಂಬ ಛಂದಸ್ಸಿನಿಂದ
ಕವಿಶ್ರೇಷ್ಟನಾದ ಗಣಪತಿ ಮುನಿಯಿಂದ ರಚಿಸಲ್ಪಟ್ಟ ಈ ಶ್ಲೋಕಗಳು ಶಿವನ ವಲ್ಲಭೆಯಾದ ಪಾರ್ವತಿದೇವಿಯ ಮನಸ್ಸನ್ನು
ಸಂತೋಷಪಡಿಸಲಿ. ಹಾಗೇ ಆಕೆಯ ಚರಣವನ್ನಾಶ್ರಯಿಸಿರುವ ಸಾಧು ಸಜ್ಜನರಿಗೆ ಅನಿಷ್ಟಪರಿಹಾರ
ಹಾಗೂ ಇಷ್ಟಾರ್ಥಗಳು ಸಿದ್ಧಿಸಲಿ.
ಇಲ್ಲಿಗೆ
ಎರಡನೇ ಶತಕದ ಏಳನೇ ಸ್ತಬಕವು ಸಂಪೂರ್ಣವಾಯಿತು.
Comments
Post a Comment