ಸಂಬಂಧಗಳು - ಒಂದು ವಿಶ್ಲೇಷಣೆ

ಸಂಬಂಧಗಳು - ಒಂದು ವಿಶ್ಲೇಷಣೆ 

ಸಂಬಂಧಗಳು ಎಂದ ಕೂಡಲೇ ನಮ್ಮ ಮನಸ್ಸಿಗೆ ಹೊಳೆಯುವುದು ಮನುಷ್ಯ - ಮನುಷ್ಯರ ನಡುವಿನ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಒಡನಾಟಗಳು. ಅನೇಕ ವಿಧವಾದ ಸಂಬಂಧಗಳು ಉಂಟಾಗಬಹುದು.
ಒಬ್ಬ ವ್ಯಕ್ತಿಗೆ ಉಂಟಾಗಬಹುದಾದ ಸ್ವಾಭಾವಿಕ ಸಂಬಂಧಗಳೆಂದರೆ -
೧. ತಂದೆ, ತಾಯಿ, ಅಕ್ಕ, ಅಣ್ಣ, ತಂಗಿ, ತಮ್ಮ ಇತ್ಯಾದಿ - ಇವುಗಳು ರಕ್ತ ಸಂಬಂಧಗಳು
೨. ಸ್ನೇಹಿತ, ಗುರುಗಳು, ಸಹಪಾಠಿಗಳು, ಸಹೋದ್ಯೋಗಿಗಳು ಇತ್ಯಾದಿ - ಇವುಗಳು ಸಾಮಾಜಿಕ ಸಂಬಂಧಗಳು
ಈ ಜಗತ್ತನ್ನು ಪ್ರವೇಶಿಸುವ ವ್ಯಕ್ತಿಯೊಬ್ಬನಿಗೆ ತನ್ನ ಬದುಕಿನ ಉದ್ದಕ್ಕೂ ಸ್ಥಾಪಿಸಿಕೊಳ್ಳುವ ಸಂಬಂಧಗಳು ಹತ್ತು ಹಲವಾರು. ಈ ಸಂಬಂಧದ ಪರಿಕಲ್ಪನೆಯು ಅದರ ಸ್ವರೂಪದ ನಿಷ್ಕರ್ಷೆಯೊಂದಿಗೆ ಪ್ರಾರಂಭವಾಗಬೇಕಾಗುತ್ತದೆ. ಈ ವಿಧದ ಸಂಬಂಧಗಳಿಗೆ ಮೂಲತಃ ಜೈವಿಕ ಹಾಗೂ ಭಾವನಾತ್ಮಕ ನೆಲೆಗಳಿರುತ್ತವೆ.
ಮೇಲೆ ತಿಳಿಸಿದ ತಂದೆ, ತಾಯಿ, ಅಕ್ಕ, ಅಣ್ಣ, ತಂಗಿ, ತಮ್ಮ ಇತ್ಯಾದಿ ವಿಧದ ಸಂಬಂಧಗಳು ಜೈವಿಕ ಸಂಬಂಧಗಳು ಹಾಗೂ ಈ ವಿಧದ ಸಂಬಂಧಗಳ ಮೇಲೆ ವ್ಯಕ್ತಿಯ ಯಾವುದೇ ನಿಯಂತ್ರಣ ಇರುವುದಿಲ್ಲ. ಹುಟ್ಟುವ ವ್ಯಕ್ತಿಯು ಇಂಥವರೇ ತನ್ನ ತಂದೆ ತಾಯಿಗಳೆಂದು ಆರಿಸಿಕೊಂಡು ಬರಲಾಗುವುದಿಲ್ಲ. ಅದು ಅವನ ನಿಯಂತ್ರಣದಲ್ಲಿರುವುದಿಲ್ಲ. ಈ ವಿಧವಾದ ಜೈವಿಕ ಸಂಬಂಧಗಳ ಜೊತೆ ಜತೆಗೇ ಭಾವನಾತ್ಮಕ ಸಂಬಂಧಗಳು ಅಪ್ರಜ್ಞಾಪೂರ್ವಕವಾಗಿ ಬೆಳೆದುಕೊಳ್ಳತೊಡಗುತ್ತದೆ. ತಾಯಿಗೆ ತನ್ನ ಮಗುವಿನ ಮೇಲಿನ ಮಮತೆ, ಪ್ರೀತಿ, ವಾತ್ಸಲ್ಯಗಳು ಬೆಸುಗೆಗೊಳ್ಳತೊಡಗುತ್ತದೆ. ಈ ವಿಧದ ಭಾವನೆಗಳು ಸಂಬಂಧಗಳ ಮೂಲಕ ಹುಟ್ಟಿಕೊಳ್ಳುತ್ತವೆ. ಈ ವಿಧದ ಭಾವನಾತ್ಮಕ ಸಂಬಂಧಗಳು ಹುಟ್ಟಿನೊಂದಿಗೆ ಬರುವುದಿಲ್ಲ. ಅವುಗಳನ್ನು ವ್ಯಕ್ತಿಯು ಕಾಲ ಕ್ರಮದಲ್ಲಿ ಬೆಳೆಸಿಕೊಳ್ಳುತ್ತಾನೆ. ಅಂದರೆ ಭಾವಗಳು ಮೊದಲು ಹುಟ್ಟಿ ನಂತರ ವ್ಯಕ್ತಿಯು ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾನೆ. ಭಾವನಾತ್ಮಕ ಸಂಬಂಧಗಳ ಪಟ್ಟಿಯಲ್ಲಿ ಮೇಲೆ ತಿಳಿಸಿದ ಸ್ನೇಹಿತ, ಗುರುಗಳು, ಸಹೋದ್ಯೋಗಿ, ಸಹಪಾಠಿ ಇತ್ಯಾದಿ ಸಂಬಂಧಗಳು ಸೇರುತ್ತವೆ. ಈ ವಿಧವಾದ ಸಂಬಂಧಗಳ ಮೂಲಕ ವ್ಯಕ್ತಿಯು ತನ್ನ ಆಶೋತ್ತರಗಳು, ಕನಸುಗಳು, ಭಾವತೀವ್ರತೆಯ ಕ್ಷಣಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಾನೆ.
ಈ ವಿಧದ ಭಾವನಾತ್ಮಕ ಸಂಬಂಧಗಳ ಪೈಕಿ ಜೀವನ ಸಂಗಾತಿ - ಗಂಡ ಅಥವಾ ಹೆಂಡತಿಯ ಸಂಬಂಧಗಳು ಉತ್ಪತ್ತಿಯಾಗಬಹುದಲ್ಲವೇ?
ಈಗ ಉತ್ಪತ್ತಿಯಾಗುವ ಮುಖ್ಯ ಪ್ರಶ್ನೆಯೆಂದರೆ ಜೈವಿಕ, ಭಾವನಾತ್ಮಕ ಸಂಬಂಧಗಳು ಎಲ್ಲಿಯವರೆಗೆ ಇರುತ್ತದೆ ಎಂಬುದು.
ವ್ಯಕ್ತಿಯು ಹುಟ್ಟಿನೊಡನೆ ಬೆಳೆಸಿಕೊಳ್ಳುವ ಜೈವಿಕ ಸಂಭಂಧಗಳು ತನ್ನ ಜೈವಿಕ ಸಂಬಂಧಿಯು ಜೀವಿಸಿರುವವರೆಗೆ ಮಾತ್ರವೇ ಅಥವಾ ಅನಂತರವೂ ಮುಂದುವರೆಯುತ್ತವೆಯೇ? ಹಾಗೆ ಮುಂದುವರೆದರೆ ಅದು ಯಾವ ರೀತಿಯಲ್ಲಿ? ಜೈವಿಕ ಸಂಬಂಧಿಯು ಪಂಚಭೂತಗಳಲ್ಲಿ ವಿಲೀನವಾದ ನಂತರ ಯಾವ ವಿಧದಲ್ಲಿ ಸಂಬಂಧವು ಮುಂದುವರೆಯುತ್ತದೆ ಹಾಗೂ ಎಲ್ಲಿಯವರೆಗೆ?
ಇದೇ ಪ್ರಶ್ನೆಯು ಭಾವನಾತ್ಮಕ ಸಂಬಂಧಗಳಾದ ಪತಿ, ಪತ್ನಿ ವಿಚಾರದಲ್ಲೂ ಉತ್ಪತ್ತಿಯಾಗಬಹುದಲ್ಲವೇ? ನಿಮಗೆ ಗೊತ್ತಿರುವ ವಿಶ್ಲೇಷಣೆಗಳನ್ನು ಹಂಚಿಕೊಳ್ಳಿ.







Comments