ಉಮಾಸಹಸ್ರಮ್ - 6ನೇ ಸ್ತಬಕ


ಪುಷ್ಪಗುಚ್ಛ (ಸ್ತಬಕ) - 6
ಛಂದಸ್ಸು - ಮದಲೇಖಾವೃತ್ತಂ
ಮಹಾಭಾಗ್ಯಂ

ಸಂಸ್ಕೃತದಲ್ಲಿ :

ಹರ್ತಾರಃ ಶಶಿಕೀರ್ತೇಃ ಕರ್ತಾರೋ ನವಭಾಸಾಂ
ಭರ್ತಾರೋ ಮಮ ಸಂತು ಸ್ಕಂದಾಂಬಾದರಹಾಸಾಃ ||1||

ತಾತ್ಪರ್ಯ :

ಚಂದ್ರನ ಖ್ಯಾತಿಯನ್ನು ಕಳವು ಮಾಡಿ, ಹೊಸ ಬೆಳಕನ್ನೇ ಸೃಷ್ಟಿಸಿದ ಸ್ಕಂದನ ಮಾತೆಯ ಮಂದಹಾಸವು ನನ್ನನ್ನು ಪೋಷಿಸಲಿ.

ದೇವಿಯ ನಗೆಯಿಂದ ಉತ್ಪತ್ತಿಯಾಗುವ ಬೆಳಕು ಚಂದ್ರನ ಬೆಳಕಿಗಿಂತ ಪ್ರಕಾಶಮಾನವಾದದ್ದು.

ವಿವರಣೆ :

ಚಂದ್ರನಂತಹ ನಿರ್ದಿಷ್ಟವಾದ ಕೀರ್ತಿಯನ್ನು ತರುವ, ಆಶ್ರಿತರಿಗೆ ಹೊಸ ಹೊಸದಾದ ಅಭ್ಯುದಯಗಳನ್ನು ತರುವ ಸ್ಕಂದನ ತಾಯಿಯಾದ ಪಾರ್ವತೀದೇವಿಯ ಮಂದಹಾಸವು ನನ್ನ ಪೋಷಕವಾಗಲಿ.

ಸಂಸ್ಕೃತದಲ್ಲಿ :

ದಿಗ್ವಲ್ಲೀಷ್ವತಿಶುಭ್ರಾಂ ಕುರ್ವಂತಃ ಕುಸುಮರ್ದ್ಧಿಂ
ಭೂಯಾಸುಸ್ತವ ಭೂತ್ಯೈ ಮನ್ಮಾತುಃ ಸ್ಮಿತಲೇಶಾಃ ||2||

ತಾತ್ಪರ್ಯ :

ಯಥೇಚ್ಛವಾದ ಶುದ್ಧ ಪುಷ್ಪಮಂಜರಿಯನ್ನು ಎಲ್ಲ ದಿಕ್ಕುಗಳಿಗೂ ಬಳ್ಳಿಯಂತೆ ಸೃಷ್ಟಿಸುವ ನನ್ನ ತಾಯಿಯ ಮಂದಹಾಸವು ನಿಮಗೆ ಅಭ್ಯುದಯವನ್ನು ತಂದು ಕೊಡಲಿ.

ವಿವರಣೆ :

ದಿಕ್ಕುಗಳೆಂಬ ಬಳ್ಳಿಗಳಲ್ಲಿ ಅತಿ ಶುದ್ಧವಾದ ಪುಷ್ಪಸಮೃದ್ಧಿಯನ್ನುಂಟುಮಾಡುವ, ನನ್ನ ತಾಯಿಯ ಮಂದಹಾಸಗಳು ನಿಮ್ಮೆಲ್ಲರಿಗೂ ಐಶ್ವರ್ಯ ಸಮೃದ್ಧಿಯನ್ನುಂಟು ಮಾಡಲಿ.

ಸಂಸ್ಕೃತದಲ್ಲಿ :

ಏಕಶ್ಚೇತ್ತವ ಶಕ್ತೋ ಬ್ರಹ್ಮಾಂಡಸ್ಯ ಭವಾಯ
ಭರ್ಗಪ್ರೇಯಸಿ ಹಾಸಃ ಕಿಂ ಸ್ತೋತ್ರಂ ತವ ಭೂಯಃ ||3||

ತಾತ್ಪರ್ಯ :

, ಪ್ರೀತಿಯ ಭರ್ಗ ! ನಿನ್ನ ಒಂದು ಮಂದಹಾಸವೇ ಸಮಸ್ತ ವಿಶ್ವವನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ. ನಿನ್ನನ್ನು ವರ್ಣಿಸಲು ಇದಕ್ಕಿಂತ ಬೇರೇನು ಬೇಕು?

ವಿವರಣೆ :

ಶಿವಕಾಂತೆಯೇ ! ನಿನ್ನ ಅಲ್ಪವಾದ ಮಂದಹಾಸವು ಈ ಜಗತ್ತನ್ನು ಸೃಷ್ಟಿಸುವುದೆಂದರೆ ನಿನ್ನ ಸ್ತೋತ್ರವು ಅದೆಂತಹ ಮಂಗಳಗಳನ್ನುಂಟುಮಾಡಬಹುದು?

ಸಂಸ್ಕೃತದಲ್ಲಿ :

ಉದ್ಯಾನೇ ವಿಯದಾಖ್ಯೇ ಕಾಲಿ ತ್ವಾಂ ವಿಹರಂತೀಂ
ಗೋಲೈಃ ಕಂದುಕಕಲ್ಪೈರಲ್ಪಾ ವಾಕ್ಕಿಮು ಮಾತಿ ||4||

ತಾತ್ಪರ್ಯ :

, ಕಾಳಿ ! ಬಾಹ್ಯಾಕಶದ ಉದ್ಯಾನವನದಲ್ಲಿ ಗ್ರಹಗಳನ್ನೆ ಚೆಂಡಾಗಿಸಿ ಅವುಗಳೊಂದಿಗೆ ಆಡುತ್ತಿರುವ ನಿನ್ನ ಶಕ್ತಿಯನ್ನು, ಈ ಅತ್ಯಲ್ಪ ಪದಗಳು ಹೇಗೆ ಅಳೆಯುವುದು?

ವಿವರಣೆ :

ಪೂಜ್ಯೆಯಾದ ತಾಯಿಯೇ ! ನೀನು ಅನಂತ ಬ್ರಹ್ಮಾಂಡಕೋಟಿಗಳಿಗೆ ನಿನ್ನಲ್ಲಿ ಇರಲು ಅವಕಾಶವನ್ನು ಕಲ್ಪಿಸುತ್ತೀಯೆ. ಅಲ್ಲಿರುವ ಜ್ಯೋತಿಸ್ಸುಗಳು ಚಂಡಿನಂತೆ ನಿನ್ನ ವಿಹಾರದ ಸಾಮಗ್ರಿಗಳಾದರೆ, ತಾಯಿಯೆ ! ನೀನು ಇಂತಹವಳು ಎಂದು ಮಾತಿನಲ್ಲಿ ಅಳೆಯುವುದಕ್ಕಾದೀತೇ ?

ಸಂಸ್ಕೃತದಲ್ಲಿ :

ಖಂ ಕ್ರೀಡಾಭವನಂ ತೇ ಕಃ ಕಾರ್ಯಾಲಯ ಏಷಃ
ಪೃಥ್ವೀಯಂ ಬಹುಲಾನ್ನಾ ಮಾತರ್ಭೋಜನಶಾಲಾ ||5||

ತಾತ್ಪರ್ಯ :

, ಮಾತೆ ! ಆಕಾಶವೇ ನಿನ್ನ ಕ್ರೀಡಾಂಗಣ, ಸ್ವರ್ಗವೇ ನಿನ್ನ ಕೆಲಸಮಾಡುವ ಸ್ಥಳ ಮತ್ತು ಸಂಪನ್ಮೂಲಭರಿತವಾದ ಭೂಗ್ರಹವೇ ನಿನ್ನ ಸಂತೋಷಪಡುವ ಸ್ಥಳ.

ಮೂರು ಪ್ರಪಂಚಗಳಾದ ಭೂಃ (ಭೂಮಿ), ಭುವಃ (ಮಧ್ಯದ ಪ್ರದೇಶ), ಮತ್ತು ಸ್ವಃ (ಸ್ವರ್ಗ)ಗಳೇ ಮಾತೆಯ ಸಂತೋಷಿಸುವ, ಕಾರ್ಯಪ್ರವೃತ್ತಳಾಗುವ ಮತ್ತು ಕ್ರೀಡೆಯ ಸ್ಥಳಗಳು. ಅನಂತ ಆಕಾಶವೇ ನಿನ್ನ ಗ್ರಹಗಳೊಂದಿಗೆ ಕ್ರೀಡೆಯಾಡುವ ಸ್ಥಳವಾಗಿದೆ. ಇದರ ಮೇಲಿರುವ ಜ್ಯೋತಿಯಿಂದಾವೃತವಾದ  ಸೂರ್ಯಲೋಕವೇ ವಿಶ್ವವನ್ನು ಆಳುವ ಮತ್ತು ಸಂಘಟಿಸುವ ಸ್ಥಳ; ಇಲ್ಲಿಂದಲೇ ದೇವತೆಗಳು ನಿನ್ನ ಆಡಳಿತವನ್ನು ಜಾರಿಗೆ ತರುವರು. ಇಷ್ಟಲ್ಲದೆ, ಸಂಪದ್ಭರಿತವಾದ ಭೂಮಿಯು ನಿನ್ನ ಸಂತೋಷದ ಸ್ಥಳವಾಗಿದೆ.

ವಿವರಣೆ :

ತಾಯಿಯೇ ! ಸರ್ವವ್ಯಾಪಕವಾದ ಈ ಆಕಾಶವು (ಭುವರ್ಲೋಕ) ನಿನ್ನ ವಿಹಾರಸ್ಥಳವಾಗಿದೆ. ಈ ಭೂಮಿಯು ನಿನಗೆ ಭೋಜನಶಾಲೆ. ಅಂದರೆ ಸಮಸ್ತ ದೇವತೆಗಳ ಭೋಗಭೂನಿ. ಆದಿತ್ಯನು ಕಾರ್ಯಾಲಯವಾಗಿದ್ದಾನೆ. ಹೀಗೆ ಭೂಃ, ಭುವಃ, ಸುವಃ - ಇವು ಮೂರೂ ಕ್ರಮವಾಗಿ ಭೋಜನ, ವಿಹಾರ, ಕಾರ್ಯನಿರ್ವಾಹ ಸ್ಥಳವಾಗಿದೆ.

ಸಂಸ್ಕೃತದಲ್ಲಿ :

ಬುದ್ಧೀನಾಮಸಿ ದಾತ್ರೀ ಸಿದ್ಧೀನಾಮಸಿ ನೇತ್ರೀ
ವೀರ್ಯಾಣಾಮಸಿ ಪೇಟೀ ಕಾರ್ಯಾಣಾಮಸಿ ಧಾಟೀ ||6||

ತಾತ್ಪರ್ಯ :

ಸಮಸ್ತ ಜ್ಞಾನವನ್ನು ಹೊಂದಲು ನೀನು ಬುದ್ಧಿಯನ್ನು ದಯಪಾಲಿಸುವೆ ಹಾಗೂ ಎಲ್ಲ ಸಾಧನೆಗಳಿಗೂ ನೀನೇ ಪೋಷಕಳು. ಎಲ್ಲ ಸಾಹಸಕಾರ್ಯಗಳಿಗೂ ನೀನು ಭಂಡಾರ. ಎಲ್ಲ ವಿಧದ ಪ್ರಯತ್ನಗಳಲ್ಲೂ ನೀನೇ ಮುಂಚೂಣಿಯಲ್ಲಿರುವವಳು.

ಶಕ್ತಿಯು ಅಮೋಘವಾದ ಸಿದ್ಧಿಗಳಾದ ಅಣಿಮಾ ಮಹಿಮಾ ಇತ್ಯಾದಿಗಳಿಗೆ ಶಕ್ತಿಯೇ ಪೋಷಕಳು.

ವಿವರಣೆ :

ತಾಯಿಯೇ ! ನಿನ್ನ ಪ್ರಭಾವವನ್ನು ಏನು ಹೇಳಲಿ ? ನೀನು, ಶಾಸ್ತ್ರಗಳನ್ನು ಅಭ್ಯಸಿಸಿ ಅವುಗಳಿಂದ ಉಂಟಾಗುವ ಶಕ್ತಿಯನ್ನು ನೀಡುವವಳು. ನೀನೇ ಸರ್ವ ಉದ್ಯಮಗಳ ಫಲಸ್ವರೂಪಿಣಿಯಾಗಿರುವವಳು. ಅಣಿಮಾದಿ ಅಷ್ಟಸಿದ್ಧಿಗಳನ್ನು ನೀಡುವವಳು. ಅಷ್ಟೇ ಅಲ್ಲ, ಸಮಸ್ತವಿಧವಾದ ಶಕ್ತಿಗೂ ನೀನೇ ಮೂಲಾಧಾರವಾಗಿದ್ದೀಯೆ. ಕರ್ತವ್ಯ ಕಾರ್ಯಗಳನ್ನು ಅಭಿಮುಖೀಭೂತಳಾಗಿ ಮಾಡಿಸುವವಳೂ ನೀನೆ ಆಗಿದ್ದೀಯೆ.

ಸಂಸ್ಕೃತದಲ್ಲಿ :

ವಿದ್ಯಾನಾಮಸಿ ಭಾವೋ ಹೃದ್ಯಾನಾಮಸಿ ಹಾವಃ
ದೇವಾನಾಮಸಿ ಲೀಲಾ ದೈತ್ಯಾನಾಮಸಿ ಹೇಲಾ ||7||

ತಾತ್ಪರ್ಯ :

ಎಲ್ಲ ಶಿಕ್ಷಣಗಳ ಮೂಲತತ್ತ್ವವೇ ನೀನು, ಎಲ್ಲ ಸೌಂದರ್ಯಗಳಲ್ಲಡಗಿರುವ ಉಲ್ಲಾಸವೇ ನೀನು, ಸಮಸ್ತ ದೇವತೆಗಳ ಮೋಡಿ ಮತ್ತು ಅಸುರರ ತಿರಸ್ಕಾರ.

ವಿವರಣೆ :

ತಾಯಿಯೆ ! ಸಮಸ್ತ ವಿಧವಾದ ವೇದಗಳಿಗೂ ನೀನೇ ತಾತ್ಪರ್ಯವಾಗಿರುವೆ. ರಮಣೀಯವಾದ ಪದಾರ್ಥಗಳಲ್ಲಿರುವ ವಿಲಾಸವೇ ನೀನು. ದೇವತೆಗಳ ಜೀವನದಲ್ಲಿರುವ ಆಕರ್ಷಕತೆಯೇ ನೀನು. ದೈತ್ಯರನ್ನು ತಿರಸ್ಕರಿಸುವ ಶಕ್ತಿಯೇ ನೀನು.

ಸಂಸ್ಕೃತದಲ್ಲಿ :

ಗಂತೄಣಾಮಸಿ ಚೇಷ್ಟಾ ಸ್ಥಾಣೂನಾಮಸಿ ನಿಷ್ಠಾ
ಲೋಕಾನಾಮಸಿ ಮೂಲಂ ಲೋಕಾದೇರಸಿ ಜಾಲಮ್ ||8||

ತಾತ್ಪರ್ಯ :

ನೀನೇ ಚಲಿಸುವ ಸಮಸ್ತ ವಸ್ತುಗಳ ಕ್ರಿಯಾತ್ಮಕ ಶಕ್ತಿ ಮತ್ತು ಸ್ಥಿರ ರೂಪದ ಎಲ್ಲ ವಸ್ತುಗಳ ಸ್ಥಿರತೆಯೇ ನೀನು. ಪ್ರಪಂಚದಲ್ಲಿನ ಸಮಸ್ತವಾದ, ಅದು ಚಲಿಸುವ ಅಥವಾ ಸ್ಥಿರವಸ್ತುಗಳೇ ಆಗಿದ್ದರೂ ಅವುಗಳ ಆದಿಸ್ವರೂಪವೇ ನೀನಾಗಿರುವೆ.

ವಿವರಣೆ :

ತಾಯಿಯೇ ! ಗಮನವುಳ್ಳ ಪದಾರ್ಥಗಳ ಗತಿಯೇ ನೀನಾಗಿದ್ದೀಯೆ. ಸ್ಥಿರವಾಗಿರುವ ಪದಾರ್ಥಗಳಲ್ಲಿರುವ ಸ್ಥಿರತೆಯೇ ನೀನು. ಸಮಸ್ತ ಲೋಕಗಳ ಮೂಲಕಾರಣವೇ ನೀನು. ನೀನು ಅದೇ ಲೋಕಗಳ ಮಾಯಾಮಯವಾದ ಕಾರಣವೇ ಆಗಿದ್ದೀಯೆ.

ಸಂಸ್ಕೃತದಲ್ಲಿ :

ದೇವೀ ವ್ಯಾಪಕತೇಜಃ ಶಕ್ತಿಸ್ತತ್ತ್ವವಿಚಾರೇ
ಅತ್ಯಂತಂ ಸುಕುಮಾರೀ ನಾರೀ ಮೂರ್ತಿವಿಚಾರೇ ||9||

ತಾತ್ಪರ್ಯ :

ನಿನ್ನನ್ನು ಸಮಸ್ತ ತತ್ತ್ವಗಳ ಮೂಲಕ ನೋಡಿದರೂ ನೀನು ಎಲ್ಲೆಡೆ ವ್ಯಾಪಿಸಿರುವ ಹೊಳಪು ಮತ್ತು ಭೌತಿಕ ಶರೀರ ರೂಪದಲ್ಲೂ ಸಹ ನೀನೇ ಆರಾಧ್ಯಳಾದ ದೇವಿ.

ವಿಶ್ವವನ್ನು ಅದರ ಮೂಲತತ್ತ್ವದ ಆಧಾರದ ಮೇಲೆ ವಿಶ್ಲೇಷಿಸಿದಲ್ಲಿ, ಮೂಲ ಅಸ್ತಿತ್ತ್ವದ ಸತ್ಯತೆಯ ಆಧಾರದ ಮೇಲೆ ಕೂಡಾ, ದೈವೀ ಮಾತೆಯು ಸರ್ವವ್ಯಾಪಿಯಾದ ಜ್ಞಾನಪ್ರಕಾಶದ ಶಕ್ತಿಯಾಗಿರುವಳು. ಭೌತಿಕ ರೂಪದಲ್ಲೂ ಅವಳನ್ನು ನೋಡಿದಾಗಲೂ, ಅವಳ ಆಕಾರವು ಅತ್ಯಂತ ಸೌಂದರ್ಯದಿಂದ ಹಾಗೂ ಮನಮೋಹಕತೆಯಿಂದ ಕೂಡಿರುವುದು. ನಿರಾಕಾರ ದರ್ಶನದಲ್ಲೂ, ಅವಳೇ ಕ್ರಿಯಾತ್ಮಕ ಶಕ್ತಿ. ರೂಪಗಳ ಅಂಶದಿಂದ ದೃಷ್ಟಿಸಿದಾಗಲೂ ಅವಳು ತನ್ನ ಅಪರಿಮಿತ ಸೌಂದರ್ಯವನ್ನು ಪ್ರಕಟಪಡಿಸುವಳು.

ವಿವರಣೆ :

ಪಾರ್ವತಿದೇವಿಯು ಜಗತ್ತೆಲ್ಲವನ್ನೂ ವ್ಯಾಪಿಸಿರುವ ಸರ್ವೇಶ್ವರನ ಶಕ್ತಿಯೇ ಆಗಿದ್ದಾಳೆ. ವಿಚಾರ ಮಾಡಿದಲ್ಲಿ ಜಗತ್ತಿನ ಎಲ್ಲ ಶಕ್ತಿಯೂ ಅವಳೇ. ಶರೀರವಿರುವಂತಹವಳನ್ನಾಗಿ ಆಲೋಚಿಸಿದರೆ ಪರ್ವತ ರಾಜಕುಮಾರಿಯಾಗಿ ಸುಕುಮಾರಿಯಾದ ಉಮಾದೇವಿಯಾಗಿ ನಾರಿಯಾಗಿಯೂ ಇದ್ದಾಳೆ.

ಸಂಸ್ಕೃತದಲ್ಲಿ :

ಕ್ವ ಜ್ಯೋತಿರ್ಮಹತೋsಸ್ಮಾದಾಕಾಶಾದಪಿ ಭೂಯಃ
ತತ್ಸರ್ವಂ ವಿನಯಂತೀ ತನ್ವಂಗೀ ಕ್ವ ನು ನಾರೀ ||10||

ತಾತ್ಪರ್ಯ :

ದೇವಿಯ ಭವ್ಯವಾದ, ಕಾಂತಿಯುತವಾದ ಜ್ಯೋತಿಯು ಆಕಾಶಕ್ಕಿಂತಲೂ ಅಗಾಧವಾದದ್ದು. ಸಮಸ್ತ ವಸ್ತುಗಳ ಚಲನೆಯ ಮೂಲವಾಗಿರುವ ಅವಳನ್ನು ಸೂಕ್ಷ್ಮವಾದ ಮಹಿಳೆಯೆಂದು ಹೇಗೆ ಪರಿಗಣಿಸುವುದು ?

ವಿವರಣೆ :

ಆಕಾಶವು ಎಲ್ಲಕ್ಕಿಂತ ದೊಡ್ಡದು. ಅದಕ್ಕಿಂತಲೂ ದೊಡ್ಡದಾದ ಜ್ಯೋತಿಯು ಆ ಪರಮೇಶ್ವರ ಜ್ಯೋತಿಯು. ಅದನ್ನು ಜಗತ್ತಿನ ಕಾರ್ಯಕ್ಕೋಸ್ಕರ ಚಲಿಸುವಂತೆ ಮಾಡುವ ಸುಂದರಿಯಾದ ಸ್ತ್ರೀಜ್ಯೋತಿಯು ಅದೆಂತಹುದು ?

ಸಂಸ್ಕೃತದಲ್ಲಿ :

ದೇವೇಂದ್ರಾಯ ವಿಭುತ್ವಂ ಸೂರ್ಯಾಯೋಸ್ರಸಹಸ್ರಂ
ಊಷ್ಮಾಣಂ ದಹನಾಯ ಜ್ಯೋತ್ಸ್ನಾಮೋಷಧಿರಾಜೇ ||11||

ಇಲ್ಲಿಂದ ಮುಂದಿನ ಐದು ಶ್ಲೋಕಗಳಲ್ಲೂ ದೇವಿಯ ಅದ್ಭುತ ಕಾರ್ಯಗಳ ಬಗ್ಗೆ ವಿವರಣೆ ಇರುವುದು. ದೇವಿಯೇ ವಿಶ್ವದ ಸಮಸ್ತ ಶಕ್ತಿಗಳ ಮೂಲ.

ತಾತ್ಪರ್ಯ :

, ದೇವಿ ! ನೀನೇ ದೇವತೆಗಳ ರಾಜನಿಗೆ ಅಧಿಕಾರವನ್ನು, ಸೂರ್ಯನಿಗೆ ಸಹಸ್ರ ಕಿರಣಗಳನ್ನು, ಅಗ್ನಿಗೆ ಶಾಖವನ್ನು ಹಾಗೂ ಚಂದ್ರನಿಗೆ ಬೆಳಕನ್ನು ನೀಡುತ್ತಿರುವೆ.

ವಿವರಣೆ :

ಇಂದ್ರನಿಗೆ ತ್ರಿಲೋಕಾಧಿಪತಿತ್ವವನ್ನೂ ಸೂರ್ಯನಿಗೆ ಸಾವಿರಾರು ಕಿರಣಗಳನ್ನೂ ಅಗ್ನಿಗೆ ಸುಡುವ ಸಾಮರ್ಥ್ಯವನ್ನೂ ಚಂದ್ರನಿಗೆ ಬೆಳದಿಂಗಳನ್ನೂ ನೀಡಿರುವವಳು.

ಸಂಸ್ಕೃತದಲ್ಲಿ :

ವಾತಾಯಾಮಿತವೀರ್ಯಂ ವಿಸ್ತಾರಂ ಗಗನಾಯ
ಸಾಂದ್ರತ್ವಂ ವಸುಧಾಯೈ ತೋಯಾಯ ದ್ರವಭಾವಂ ||12||

ತಾತ್ಪರ್ಯ :

ನೀನು ವಾಯುವಿಗೆ ಮಿತಿಯಿಲ್ಲದ ಶಕ್ತಿಯನ್ನು, ಆಕಾಶಕ್ಕೆ ಅನಂತತ್ತ್ವವನ್ನು, ಭೂಮಿಗೆ ಸಾಂದ್ರತ್ವವನ್ನು ಮತ್ತು ನೀರಿಗೆ ದ್ರವತೆಯನ್ನು ನೀಡಿರುವೆ.

ಸಂಸ್ಕೃತದಲ್ಲಿ :

ಮಾಹಾಭಾಗ್ಯಮಪಾರಂ ಕೋಟಿಭ್ಯೋ ವಿಬುಧಾನಾಂ
ಚಿತ್ರಾಃ ಕಾಶ್ಚನ ಸಿದ್ಧೀರ್ಲಕ್ಷೇಭ್ಯೋ ಮನುಜಾನಾಂ ||13||

ತಾತ್ಪರ್ಯ :

ಕೋಟಿ ಸಂಖ್ಯೆಯಲ್ಲಿರುವ ದೇವತೆಗಳಿಗೆ ಅಪರಿಮಿತವಾದ ಐಶ್ವರ್ಯವನ್ನು, ಲಕ್ಷಸಂಖ್ಯೆಯಲ್ಲಿ ಮನುಷ್ಯರಿಗೆ ಅದ್ಭುತವಾದ ಸಿದ್ಧಿಗಳನ್ನು ನೀಡುವವಳಾಗಿದ್ದಾಳೆ.

ಸಂಸ್ಕೃತದಲ್ಲಿ :

ಸ್ಥಾಣುಭ್ಯೋ ಧೃತಿಶಕ್ತಿಂ ಗಂತೃಭ್ಯೋ ಗತಿಶಕ್ತಿಂ
ಕಸ್ಮಾಚ್ಚಿನ್ನಿಜಕೋಶಾದೇಕಾ ದೇವಿ ದದಾನಾ ||14||

ತಾತ್ಪರ್ಯ :

, ದೇವಿ ! ನೀನು ನಿನ್ನ ಶಕ್ತಿಯ ನಿಧಿಯಿಂದ ಸ್ಥಿರತೆಯನ್ನು ಎಲ್ಲ ಜಡ ವಸ್ತುಗಳಿಗೂ ನೀಡುವೆ ಮತ್ತು ಚಲಿಸುವ ವಸ್ತುಗಳಿಗೆ ಕ್ರಿಯಾತ್ಮಕ ಶಕ್ತಿಯನ್ನು ನೀಡುವೆ.

ವಿವರಣೆ :

ಪ್ರಪಂಚದಲ್ಲಿ ಚರಾಚರ ಪದಾರ್ಥಗಳು ಅನಂತವಾಗಿರುತ್ತವೆ. ಅಚರ ಪದಾರ್ಥಗಳಿಗೆ ಸ್ಥಿರವಾಗಿ ನಿಲ್ಲುವ ಶಕ್ತಿಯನ್ನೂ ಚರಪದಾರ್ಥಗಳಿಗೆ ಗತಿಸಾಮರ್ಥ್ಯವನ್ನೂ ದೇವಿಯೇ ತನ್ನ ಕೋಶಾಗಾರದಿಂದ, ಬೊಕ್ಕಸದಿಂದ ನೀಡುತ್ತಾಳೆ.

ಸಂಸ್ಕೃತದಲ್ಲಿ :

ಆಶ್ಚರ್ಯಂ ವಿದಧಾನಾ ಸರ್ವಂ ವಸ್ತು ದಧಾನಾ
ಹಂತ ತ್ವಂ ಮಮ ಮಾತಃ ಕಾಚಿತ್ಕೋಮಲಗಾತ್ರೀ ||15||

ತಾತ್ಪರ್ಯ :

, ಮಾತೆ ! ಆಶ್ಚರ್ಯವೆಂದರೆ, ನಿನ್ನಂಥ ಕೋಮಲ ಹೆಂಗಸು ಇಡೀ ವಿಶ್ವದ ಹೊರೆಯನ್ನು ಹೊರುವೆ!

ವಿವರಣೆ :

ಹೇ ಮಾತೆ ! ನೀನು ಪ್ರಪಂಚದ ಎಲ್ಲ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡುವವಳಾಗಿಯೂ, ಎಲ್ಲ ಪದಾರ್ಥಗಳ ಆಧಾರವಾಗಿಯೂ ಇದ್ದೀಯೆ. ಆಶ್ಚರ್ಯ ! ನೀನು ಅಸಾಧಾರಣ ಕೋಮಲಾಂಗಿಯೂ ಆಗಿದ್ದೀಯೆ.

ಸಂಸ್ಕೃತದಲ್ಲಿ :

ಶ್ರೋಣೀಭಾರನತಾಯಾಂ ಕಸ್ಯಾಂಚಿತ್ತನುಗಾತ್ರ್ಯಾಂ
ಈದೃಕ್ಷಾ ಯದಿ ಶಕ್ತಿಃ ಕಾವೇತೋ ನನು ಮಾಯಾ ||16||

ತಾತ್ಪರ್ಯ :

ಈ ವಿಧದ ಶಕ್ತಿಯನ್ನು ತೆಳ್ಳಗಿರುವ ಹಾಗೂ ತನ್ನ ನಡುವಿನ ಭಾರದಿಂದ ಬಗ್ಗಿರುವ ಮಹಿಳೆಯೊಬ್ಬಳಿಗೆ ನಿಯೋಜಿಸಿರುವುದು ರಹಸ್ಯದ ವಿಷಯವೇನಲ್ಲ !

ವಿವರಣೆ :

ನತಾಂಗಿಯಾಗಿರುವ ಒಬ್ಬ ಸುಂದರಿಯಲ್ಲಿ ಈ ರೀತಿಯಾದ ಶಕ್ತಿ ಇರುವುದಾದರೆ, ಇದಕ್ಕಿಂತ ಹೆಚ್ಚಿನ ಮಾಯೆಯುಂಟೆ ?

ಸಂಸ್ಕೃತದಲ್ಲಿ :

ರೂಪಂ ತೇ ತನುಗಾತ್ರಂ ವಾಣೀ ತೇ ಮೃದುನಾದಾ
ಚಾಪಂ ತೇ ಮಧುರೇಕ್ಷುಃ ಪಾಣಿಸ್ತೇ ಸುಕುಮಾರಃ ||17||

ತಾತ್ಪರ್ಯ :

ನೀನು ಬಹು ನಾಜೂಕಿನ ರೂಪವುಳ್ಳವಳು, ಸುಮಧುರ ಕಂಠವುಳ್ಳವಳು, ನೀನು ಸಿಹಿಯಾದ ಕಬ್ಬಿನ ಜಲ್ಲೆಯಂತೆ ಬಾಗಿ ಬಳುಕುವವಳು ಹಾಗೂ ನಿನ್ನ ಕೈಗಳು ಅತ್ಯಂತ ಕೋಮಲವಾದುದು.

ವಿವರಣೆ :

ನೀನು ಸುಂದರಿ, ನಿನ್ನ ಧ್ವನಿಯು ಅತ್ಯಂತ ಸುಮಧುರವಾದುದು, ನಿನ್ನ ಧನುಸ್ಸು ಕಬ್ಬಿನ ಜಲ್ಲೆಯಾಗಿದೆ. ನಿನ್ನ ಹಸ್ತ ಸುಕೋಮಲವಾದುದು.

ಸಂಸ್ಕೃತದಲ್ಲಿ :

ಲೋಲೇ ಲೋಚನಯುಗ್ಮೇ ಭೀರುತ್ವಂ ಪ್ರಕಟಂ ತೇ
ಬ್ರಹ್ಮಾಂಡಂ ತ್ವದಧೀನಂ ಶ್ರದ್ಧಾತ್ತಾಮಿಹ ಕೋ ವಾ ||18||

ತಾತ್ಪರ್ಯ :

, ಮಾತೆ ! ನಿನ್ನ ಮಿನುಗುವ ಕಣ್ಣುಗಳು ಆಶ್ಚರ್ಯಚಕಿತವಾದ ದೃಷ್ಟಿಯನ್ನು ಬೀರುತ್ತಿರುವಾಗ, ಸಮಸ್ತ ವಿಶ್ವವೂ ನಿನ್ನ ಅಧೀನದಲ್ಲಿರುವುದು ಎಂಬುದನ್ನು ಯಾರು ನಂಬುವರು ?

ವಿವರಣೆ :

ದೇವಿಯೇ ! ಚಂಚಲವಾದ ನಿನ್ನ ಕಣ್ಣುಗಳಲ್ಲಿ ಭಯಪಟ್ಟಿರುವುದು ಪ್ರಕಟವಾಗುತ್ತದೆ. ಆದರೆ ಬ್ರಹ್ಮಾಂಡವೆಲ್ಲವೂ ನಿನಗೆ ಅಧೀನವಾಗಿರುತ್ತದೆ. ಈ ವಿಷಯದಲ್ಲಿ ಯಾರು ನಂಬಿಕೆಯಿಡುತ್ತಾರೆ?

ಸಂಸ್ಕೃತದಲ್ಲಿ :

ಭ್ರೂಭಂಗಂ ಕುರುಷೇ ಚಿನ್ಮುಗ್ಧೇ ಗೌರಿ ಮುಖಾಬ್ಜೇ
ಭೂತಾನ್ಯಪ್ಯಯಿ ಬಿಭ್ಯತ್ತೇಜೇರನ್ನಪಿ ತಾರಾಃ ||19||

ತಾತ್ಪರ್ಯ :

ಓ ಮುಗ್ಧೆ ಗೌರೀ ! ನೀನು ಹುಬ್ಬುಗಂಟಿಕ್ಕಿಕೊಂಡು ಕೋಪದಿಂದ ದೃಷ್ಟಿಸಿದಾಗ ಸಮಸ್ತ ಜೀವಿಗಳೂ ಗಡ ಗಡನೆ ನಡುಗುತ್ತವೆ. ಅಷ್ಟೇ ಏಕೆ, ನಕ್ಷತ್ರಗಳೂ ಸಹ ನಿನ್ನ ಕೋಪೋದ್ರಿಕ್ತ ಮುಖವನ್ನು ಕಂಡಾಗ ಭಯಭೀತತೆಯಿಂದ ಕಂಪಿಸುವವು.

ವಿವರಣೆ :

ತಾಯಿಯೆ ! ಸುಂದರವಾದ ನಿನ್ನ ಮುಖದಲ್ಲಿ ನೀನು ಹುಬ್ಬುಗಂಟಿಕ್ಕಿದ್ದೇ ಆದರೆ ಪೃಥಿವಿಯೇ ಮೊದಲಾದ ಪಂಚಭೂತಗಳು ಬೆದರುತ್ತವೆ. ನಕ್ಷತ್ರಗಳೆಲ್ಲವೂ ನಡುಗುತ್ತವೆ. “ಭೀಷ್ಮಾಸ್ಮಾದ್ವಾತಃ ಪವತೇಎಂದಲ್ಲವೇ ವೇದಗಳು ಉಲಿಯುವುದು ?

ಸಂಸ್ಕೃತದಲ್ಲಿ :

ಶುದ್ಧಾಂತೇಶ್ವರಿ ಶಂಭೋರಿಚ್ಛಾ ಚೇತ್ತವ ಕಾsಪಿ
ಘೋರೋsಗ್ನಿಸ್ತೃಣುಗರ್ಭಾದ್ಘೋರಾಗ್ನೇರಪಿ ಶೈತ್ಯಂ ||20||

ತಾತ್ಪರ್ಯ :

, ಶಂಭುವಿನ ಪ್ರೀತಿಪಾತ್ರಳೇ ! ನೀನು ಇಷ್ಟಪಟ್ಟಲ್ಲಿ ಹೊತ್ತಿ ಉರಿಯುತ್ತಿರುವ ಹುಲ್ಲು ಕಡ್ಡಿಯಿಂದ ಜ್ವಾಲೆಯು ಹೊರಬರುವುದು ಮತ್ತು ಉರಿಯುತ್ತಿರುವ ಜ್ವಾಲೆಯ ಮಧ್ಯದಲ್ಲಿ ಶೀತಲವಾಗಿರುವುದು.

ವಿವರಣೆ :

ಶಂಭುವಿನ ಅಂತಃಪುರದ ಸ್ವಾಮಿನಿಯೆ ! ನಿನಗೆ, ನೀನು ಅಪೇಕ್ಷಿಸಿದರೆ, ಅಸ್ತ್ರವಿದ್ಯೆಗಳಲ್ಲಿ ಪ್ರಸಿದ್ಧವಾಗಿರುವಂತೆ ಕೆಲಸಕ್ಕೆ ಬಾರದ ಹುಲ್ಲಿನಿಂದ ಹೊರಬರುವ ಭಯಂಕರವಾದ ಅಗ್ನಿಯೂ, ಭಯಂಕರವಾದ ಅಗ್ನಿಯಿಂದ ಶೀತಲತೆಯೂ ಆಗುವುದು.

ಸಂಸ್ಕೃತದಲ್ಲಿ :

ದ್ರಷ್ಟುಂ ವಿಶ್ವಮಪಾರಂ ಭಾರಸ್ತೇ ದಯಿತಸ್ಯ
ಕರ್ತುಂ ಕಾರ್ಯಮಶೇಷಂ ಶ್ರೀಮಾತಸ್ತವ ಭಾರಃ ||21||

ತಾತ್ಪರ್ಯ :

, ಮಾತೆ ! ಸಮಸ್ತ ವಿಶ್ವವು ಸಾಕ್ಷೀಭೂತವಾಗಿರುವುದನ್ನು ವೀಕ್ಷಿಸುವುದು ನಿನ್ನ ಪತಿಯ ಕರ್ತವ್ಯ ಹಾಗೂ ನಿನ್ನ ಜವಾಬ್ದಾರಿಯು ಸೃಷ್ಟಿಕ್ರಿಯೆಯನ್ನು ನೆರವೇರಿಸುವುದು.

ವಿವರಣೆ :

ಹೇ ಮಾತೆ ! ಸಮಸ್ತ ಅಪಾರವಾದ ಪ್ರಪಂಚವನ್ನು ಸರ್ವೇಶ್ವರನು ನೋಡುವನು. ಜಗತ್ತಿಗೆ ಅಭಿಮುಖವಾಗುವುದಷ್ಟೇ ಶಿವನ ಕಾರ್ಯಭಾರವು. ಸೃಷ್ಟಿಯ ಕಾರ್ಯಕ್ರಮವನ್ನು ಮಾಡುವುದು ನಿನ್ನ ಭಾರವಾಗಿರುತ್ತದೆ. ಸಮಸ್ತ ಕಾರ್ಯಗಳನ್ನು ನಿರ್ವಹಿಸುವವಳು ನೀನು. ಶಿವನು ನೀನು ಮಾಡಿದ್ದನ್ನು ಒಪ್ಪುತ್ತಾ ಸಾಕ್ಷಿಯಾಗಿರುತ್ತಾನೆ.

ಸಂಸ್ಕೃತದಲ್ಲಿ :

ಸಾಕ್ಷೀ ಕೇವಲಮೀಶಃ ಕರ್ತುಂ ಭರ್ತುಮುತಾಹೋ
ಹರ್ತುಂ ವಾsಖಿಲಮಂಬ ತ್ವಂ ಸಾಕ್ಷಾದ್ಧೃತದೀಕ್ಷಾ ||22||

ತಾತ್ಪರ್ಯ :

ಈಶ್ವರನು ಕೇವಲ ಸಾಕ್ಷಿಯಷ್ಟೆ. ಓ ಮಾತೆ ನೀನು ವಿಶ್ವದ ಸಮಸ್ತ ಸೃಷ್ಟಿ, ಸ್ಥಿತಿ, ಲಯಗಳ ಜವಾಬ್ದಾರಿಯನ್ನು ತೆಗೆದುಕೊಂಡಿರುವೆ.

ಶಿವ-ಶಕ್ತಿಯರು ಒಂದೇ ಆದರೂ, ಸ್ಪಷ್ಟಪಡಿಸುವ ಉದ್ದೇಶವಾಗಿ ಅವರು ಎರಡು ಸ್ಥಾನಗಳು. ಸೃಷ್ಟಿ, ಸ್ಥಿತಿ, ಲಯಗಳ ಕಾರ್ಯಗಳಲ್ಲಿ ಪ್ರವೃತ್ತಳಾಗುವವಳು ಶಕ್ತಿ ಮತ್ತು ಶಿವನು ಈ ಕಾರ್ಯದಲ್ಲಿ ಕೇವಲ ಸಾಕ್ಷಿ ಮಾತ್ರ. ಹಾಗಿದ್ದರೂ ಸಹ ಕೇವಲ ಸಾಕ್ಷಿಯ ಮೂಲಕ ಶಿವನು ಒಪ್ಪಿಗೆ, ಮತ್ತು ಶಕ್ತಿಯು ನಡೆಸುವ ಎಲ್ಲ ಕಾರ್ಯಗಳನ್ನೂ  ಮಂಜೂರು ಮಾಡುವನು ಶಿವ. ಈ ರೀತಿಯಲ್ಲಿ ಅವರಿಬ್ಬರ ಮಧ್ಯೆ ಪರಸ್ಪರ ಅನ್ಯೋನ್ಯತೆ ಇರುವುದು. ಸ್ಥಿರವಾದ ಹಾಗೂ ಕ್ರಿಯಾತ್ಮಕ ಸ್ಥಿತಿಗಳು ಒಂದರಿಂದ ಮತ್ತೊಂದು ಭಿನ್ನವಲ್ಲ. ಸ್ಥಿರಾತ್ಮಕವು ಕ್ರಿಯಾತ್ಮಕವನ್ನು ಬೆಂಬಲಿಸುತ್ತದೆ ಹಾಗೂ ಕ್ರಿಯಾತ್ಮಕವು ಸ್ಥಿರಾತ್ಮಕದ ಅನುಮೋದನೆಯನ್ನು ಜಾರಿಗೆ ತರುವುದು.

ವಿವರಣೆ :

ಹೇ ಮಾತೆ ! ಈಶ್ವರನು ಕೇವಲ ಸಾಕ್ಷಿರೂಪನಾಗಿರುತ್ತಾನೆ. ನೀನೋ ಅಂದರೆ ಸಮಸ್ತವಾದ ಪ್ರಪಂಚವನ್ನು ಸೃಷ್ಟಿಸಲು ಅಥವಾ ರಕ್ಷಿಸಲು ಅಥವಾ ಉಪಸಂಹಾರಮಾಡಲು ಸ್ವೀಕೃತವ್ರತಳಾಗಿರುತ್ತೀಯೆ. ನಿನ್ನನ್ನು ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಮಾಡುವವಳನ್ನಾಗಿ ಹೇಳಿ, ಪರಮೇಶ್ವರನನ್ನು ಸಾಕ್ಷಿರೂಪವನ್ನಾಗಿ ಹೇಳಿ, ಅವನನ್ನು ನೀನು ಮಾಡುವ ಕಾಯಕಗಳಲ್ಲಿ ಅನುಮತಿ ಕೊಡುವವನನ್ನಾಗಿ ಹೇಳಿ ಶಿವ-ಪಾರ್ವತಿಯರ ಪರಸ್ಪರ ಸಂಬಂಧವನ್ನು ಹೇಳಿದಂತಾಯಿತು.

ಸಂಸ್ಕೃತದಲ್ಲಿ :

ಕಾರಂಕಾರಮುಮೇ ಯದ್ ಬ್ರಹ್ಮಾಂಡಾನಿ ನಿಹಂಸಿ
ತನ್ಮನ್ಯೇ ಸುರಮಾನ್ಯೇ ಬಾಲೈವಾsಮ್ಬ ಸದಾ ತ್ವಂಮ್ ||23||

ತಾತ್ಪರ್ಯ :

, ಉಮಾದೇವಿಯೆ ! ದೇವತೆಗಳಿಂದ ಪೂಜಿಸಲ್ಪಡುವ, ಹೇ ಮಾತೆ ! ನನಗನ್ನಿಸುವುದೇನೆಂದರೆ ನೀನು ವಿಶ್ವವನ್ನು ಸೃಷ್ಟಿಸುತ್ತೀ ಹಾಗೂ ಅದನ್ನು ನಾಶಪಡಿಸುವೆ ಮತ್ತು ಇದೇ ಕೆಲಸವನ್ನು ಪುನರಾವರ್ತಿಸುತ್ತಿರುವೆ. ಇದು ಮಕ್ಕಳಾಟದಂತಿದ್ದು ನೀನು ಸಹ ಸದಾ ಬಾಲೆಯಂತೇ ಇರುವೆ.

ಬೊಂಬೆಯನ್ನು ಮಾಡುವುದು ನಂತರ ಅದನ್ನು ಚಚ್ಚಿ, ಒಡೆದು ಹಾಕುವುದು ಮಕ್ಕಳ ಸಾಮಾನ್ಯ ವರ್ತನೆ. ಇದನ್ನೇ ದೇವಿಯ ಕ್ರಿಯೆಗಳಾದ ಪ್ರಪಂಚ ಸೃಷ್ಟಿ ಹಾಗೂ ವಿನಾಶ ಹಾಗೂ ಮತ್ತೊಂದು ಪ್ರಪಂಚದ ಸೃಷ್ಟಿಯಲ್ಲಿ ಅವಳ ಬಾಲ್ಯದಲ್ಲಿನ ವರ್ತನೆಯನ್ನು ಕವಿಯು ಕಾಣುತ್ತಾನೆ.

ವಿವರಣೆ :

ಹೇ ಮಾತೆ ! ನೀನು ಬ್ರಹ್ಮಾಂಡಗಳನ್ನು ಸೃಷ್ಟಿಸಿ, ನಾಶ ಪಡಿಸುತ್ತೀಯೆ ಮತ್ತೆ ಇನ್ನೊಂದು ಬ್ರಹ್ಮಾಂಡವನ್ನು ಸೃಷ್ಟಿಸುತ್ತೀಯೆ. ಆದ್ದರಿಂದ ನಿನಗೆ ಯಾವಾಗಲೂ ಬಾಲ್ಯವೇ ಎಂಬುದಾಗಿ ನಾನು ಯೋಚಿಸುವೆ. ಬಾಲ್ಯದಲ್ಲಿ ಮಕ್ಕಳು ಆಟದ ಇಷ್ಟಾರ್ಥಗಳನ್ನು ಸೃಷ್ಟಿಸಿ ಅವುಗಳನ್ನು ನಾಶಪಡಿಸಿ ಮತ್ತೆ ಮರು ಸೃಷ್ಟಿಮಾಡುವರು. ನೀನೂ ಕೂಡಾ ಅದೇ ರೀತಿ ಮಾಡಿ ಸದಾ ಬಾಲೆಯಂತಿರುವೆ.

ಸಂಸ್ಕೃತದಲ್ಲಿ :

ಲೀಲೋಜ್ಜೀವಿತಕಾಮೇ ರಾಮೇ ಶಂಕರಸಕ್ತೇ
ತ್ವತ್ಪಾದಾರ್ಚನಸಕ್ತಂ ಭಕ್ತಂ ಮಾಂ ಕುರು ಶಕ್ತಮ್ ||24||

ತಾತ್ಪರ್ಯ :

, ಸುಂದರಾಂಗಿಯೆ ! ನೀನು ಪ್ರೀತಿ ದೇವತೆಯ ಜೀವನವನ್ನು ಪುನರುಜ್ಜೀವಿತಗೊಳಿಸಿ ಶಂಕರನೊಂದಿಗಿನ ಮಿಲನಕ್ಕಾಗಿ ಹಾತೊರೆಯುವೆ. , ಮಾತೆ! ನಿನ್ನ ಭಕ್ತನಾದ ನನಗೂ ನಿನ್ನ ಪಾದಗಳನ್ನು ಸೇವಿಸಲು ಅಧಿಕಾರ ಕೊಡು.

ವಿವರಣೆ :

ತಾಯಿಯೇ ! ನೀನು, ಶಿವನ ನೇತ್ರಾಗ್ನಿಯಿಂದ ಬೂದಿಯಾದ ಮನ್ಮಥನನ್ನು ಅನಾಯಾಸವಾಗಿ ನಿನ್ನ ಲೀಲಾನೋಟದಿಂದಲೇ ಬದುಕಿಸಿದೆ. ನೀನು ಶಿವನಲ್ಲಿ ಅನುರಕ್ತೆಯಾದ ಸುಂದರಿ. ನಾನು ನಿನ್ನ ಪಾದ ಸೇವನೆಯಲ್ಲಿ ಆಸಕ್ತನಾಗಿದ್ದೇನೆ. ನನ್ನನ್ನು ನಿನ್ನ ಸೇವೆಗೋಸ್ಕರ ಶಕ್ತಿಸಂಪನ್ನನಾಗಿ ಮಾಡು. “ನಾಯಮಾತ್ಮಾ ಬಲಹೀನೇ ನ ಲಭ್ಯಃಎಂಬುದಾಗಿ ಉಪನಿಷತ್ತೇ ಹೇಳುವುದು.

ಸಂಸ್ಕೃತದಲ್ಲಿ :

ಏತಾಃ ಪಾವನಗಂಧಾಃ ಸರ್ವೇಶಪ್ರಮದೇ ತೇ
ಹೈರಂಭ್ಯೋ ಮದಲೇಖಾಃ ಸಂತೋಷಾಯ ಭವಂತು ||25||   150

ತಾತ್ಪರ್ಯ :

, ದೇವನ ಪ್ರೀತಿಪಾತ್ರಳೆ ! ನಿನ್ನ ಮಗನಾದ ಗಣಪತಿಯ ಮದಲೇಖಾ ಛಂದಸ್ಸಿನಲ್ಲಿ ಪರಿಶುದ್ಧವಾಗಿರುವ ಈ ಶ್ಲೋಕಗಳು ನಿನ್ನನ್ನು ಮುದಗೊಳಿಸಲಿ.

ಕವಿ ವಾಸಿಷ್ಠ ಗಣಪತಿಯು ತನ್ನನ್ನು ದೇವಿಯ ಪುತ್ರನ ಸ್ಥಾನದಲ್ಲಿ ಕಲ್ಪಿಸಿಕೊಳ್ಳುತ್ತಾನೆ.

ವಿವರಣೆ :

ಸರ್ವೇಶ್ವರನ ಪ್ರಮದೆಯೆ ! ಪವಿತ್ರವಾದ ವಾಸನೆಯುಳ್ಳ ಗಣಪತಿಗೆ ಸಂಬಂಧಿಸಿದ ಮದಲೇಖೆಗಳು ನಿನಗೆ ಸಂತೋಷವನ್ನುಂಟುಮಾಡಲಿ. ಇಲ್ಲಿ ತಾನು ಗಣಪತಿಯ ರೂಪವಾಗಿ, ನನ್ನ ಈ ಮದಲೇಖೆಯೆಂಬ ಛಂದಸ್ಸಿನಿಂದ ಕೂಡಿದ ಶ್ಲೋಕಗಳು ಗಣಪತಿಯ ಮದಲೇಖೆಯಂತೆ ನಿನಗೆ ಸಂತೋಷವುಂಟುಮಾಡಲಿ.

ಇಲ್ಲಿಗೆ ಎರಡನೆಯ ಶತಕದ ಆರನೆಯ ಸ್ತಬಕವು ಸಂಪೂರ್ಣವಾಯಿತು.

Comments