ಉಮಾಸಹಸ್ರಮ್ - 5ನೇ ಸ್ತಬಕ



ಉಮಾಸಹಸ್ರಮ್ - ದ್ವಿತೀಯ ಶತಕ
ಪುಷ್ಪಗುಚ್ಛ (ಸ್ತಬಕ) - 5
ಛಂದಸ್ಸು - ಉಪಜಾತಿವೃತ್ತಂ
ಪರಿಣಯಃ

ಸಂಸ್ಕೃತದಲ್ಲಿ :

ಶ್ರೀಖಂಡಚರ್ಚಾಮಿವ ಕಲ್ಪಯಂತ್ಯೋ
ಮುಹುಃ ಕಪೋಲೇಷು ಸಖೀಜನಸ್ಯ
ಶ್ರೀಕಂಠಕಾಂತಾಹಸಿತಾಂಕುರಾಣಾಂ
ಶ್ರೀಮಂತಿ ಕುರ್ವಂತು ಜಗಂತಿ ಭಾಸಃ ||1||

ತಾತ್ಪರ್ಯ :

ಶ್ರೀಕಂಠನ ಪತ್ನಿಯಾದ ಉಮಾದೇವಿಯ ಮುಖದಿಂದ ಮೊಗ್ಗಿನಂತಹ ಮುಗುಳ್ನಗೆಯ ಕಾಂತಿಯು, ಅವಳ ಸಖಿಯರ (ಸ್ನೇಹಿತೆಯರ) ಕೆನ್ನೆಗಳ ಮೇಲೆ ಅಲಂಕಾರಿಕ ಚಂದನದ ಹಿಟ್ಟಿನಂತೆ ಕಂಡುಬಂದಿರುವುದು, ಅದು ಪ್ರಪಂಚವನ್ನು ಮಂಗಳಕರವನ್ನಾಗಿಸಲಿ.

ಇಲ್ಲಿ ಕವಿಯು ಹೊಸದಾಗಿ ವಿವಾಹವಾದ ಉಮಾದೇವಿಯ ಮುಗುಳ್ನಗೆಯನ್ನು ವಿವರಿಸುತ್ತಾನೆ. ಆ ಮುಗುಳ್ನಗೆಯು ಅವಳ ಗೆಳತಿಯರಿಗೆ ಪ್ರಣಯ ಹಾಸ್ಯದ ವಿವರಣೆಗಳನ್ನು ಕೊಂಡೊಯ್ದು ಅವರನ್ನು ನಾಚುವಂತೆ ಮಾಡಿದೆ.

ವಿವರಣೆ :

ಪರ್ವತರಾಜಪುತ್ರಿಗೆ ಜಯಾ ಮತ್ತು ವಿಜಯಾ ಎಂಬ ಇಬ್ಬರು ಆತ್ಮೀಯ ಸಖಿಯರುಂಟು. ಪಾರ್ವತಿಯ ಮುಖದಲ್ಲುಂಟಾಗುವ ಮಂದಹಾಸದ ಕಾಂತಿಯು, ಆ ಸಖಿಯರ ಕಪೋಲಗಳಲ್ಲಿ ಗಂಧದ ಲೇಪವನ್ನು ಮಾಡಿದಂತಿರುತ್ತದೆ. ಶಿವಪುರಾಣದಲ್ಲಿ ಪಾರ್ವತಿಯ ಸಖಿಯರಾದ ಜಯಾ ಹಾಗೂ ವಿಜಯಾ ಅವರುಗಳ ಬಗ್ಗೆ ಉಲ್ಲೇಖವಿರುವುದು, ಹಾಗೆಯೇ ಕಾಳಿದಾಸಾದಿ ಕವಿಗಳೂ ಕೂಡ ಪಾರ್ವತಿಗೆ ಅನೇಕ ಸಖಿಯರಿರುವುದರ ಬಗ್ಗೆ ಹೇಳಿರುವರು.

ಸಂಸ್ಕೃತದಲ್ಲಿ :

ಕೀರ್ತಿರ್ವಲಕ್ಷಾ ಕುಸುಮಾಯುಧಸ್ಯ
ಸ್ವರ್ಣಾದ್ರಿಕೋದಂಡಕಯೋನ್ನತಸ್ಯ
ದರಸ್ಮಿತಶ್ರೀರ್ದ್ವಿರದಾಸ್ಯಮಾರ್ತು-
ದ್ರಾಘೀಯಸಂ ವೋ ವಿತನೋತು ಭೂತಿಮ್ ||2||

ತಾತ್ಪರ್ಯ :

ಗಜಾನನನ ಮಾತೆ ಉಮಾದೇವಿಯ ಮಂದಹಾಸದ ಕಾಂತಿಯು ಬಂಗಾರದ ಮೇರುಪರ್ವತವನ್ನೇ ಬಿಲ್ಲನ್ನಾಗಿಸಿಕೊಂಡ ಶಿವನನ್ನು ಗೆದ್ದ ಪರಿಶುದ್ಧ ಖ್ಯಾತಿಯ ಮನ್ಮಥನನ್ನು ಸೂಚಿಸುತ್ತದೆ. ಆ ಮಂದಹಾಸವು ನಿಮಗೆ ದೀರ್ಘಕಾಲ ಅಭ್ಯುದಯವನ್ನು ಕರುಣಿಸಲಿ.

ಮೇರುಪರ್ವತವನ್ನೇ ಬಿಲ್ಲನ್ನಾಗಿಸಿಕೊಂಡ ಶಿವನನ್ನೇ, ಮನ್ಮಥನು ತನ್ನ ಪುಷ್ಪಬಾಣಗಳಿಂದ ಸೋಲಿಸಿದನು. ಮನ್ಮಥನ ಈ ವಿಜಯವು, ಶಿವನ ಕೋಪವು ಅವನನ್ನು  ಸುಟ್ಟು ಬೂದಿಮಾಡಿದರೂ, ಶಿವ - ಪಾರ್ವತಿಯರ ಪರಿಣಯಕ್ಕೆ ನಾಂದಿ ಹಾಡಿತು.

ವಿವರಣೆ :

ತ್ರಿಪುರಾಸುರರನ್ನು ನಿಗ್ರಹಿಸಲು ಶಿವನು ಮೇರುಪರ್ವತವನ್ನೇ ಧನುಸ್ಸನ್ನಾಗಿಸಿಕೊಂಡನು. ಮೇರುಪರ್ವತಕ್ಕಿಂತ ಎತ್ತರನಾದ ವ್ಯೋಮಕೇಶನಿಗೆ ಪಾರ್ವತಿದೇವಿಯಲ್ಲಿ ಪ್ರೀತಿ ಉತ್ಪತ್ತಿಯಾಗಲು ಮನ್ಮಥನು ತನ್ನ ದೇಹವನ್ನೇ ಆಹುತಿಯಾಗಿ ಕೊಟ್ಟನು. ಕಲ್ಲಿನ ಬೆಟ್ಟವನ್ನು ಆಯುಧವಾಗಿ ಉಳ್ಳ ಶಿವನನ್ನು ಪುಷ್ಪಾಯುಧನಾದ ಮನ್ಮಥನು ಜಯಿಸಿದನೆಂದರೆ ಅದು ಅವನ ಅಲೌಕಿಕ ಪ್ರಭಾವವನ್ನು ವ್ಯಕ್ತಪಡಿಸುವುದು.

ಮನ್ಮಥನು ಜಗತ್ತೇಲ್ಲವನ್ನೂ ಜಯಿಸಿರುವನು. ಆದರೆ ಪರಶಿವನ ಜಯದಿಂದಲೇ ಅವನ ಕೀರ್ತಿಯು ಬೆಳ್ಳಗಾಯಿತು. ಪಾರ್ವತಿ-ಪರಮೇಶ್ವರರ ಸಮಾಗಮದಿಂದ ಜಗತ್ತೆಂಬ ಮಗುವು ಜನಿಸಿ ಮನ್ಮಥನ ಜಯವು ಪಾವನವಾಯಿತು.

ಮನ್ಮಥನ ಜಯದಿಂದ ಉಂಟಾದ ಕೀರ್ತಿಯಂತಿರುವ ಮಂದಹಾಸವು ನಮ್ಮೆಲ್ಲರಿಗೂ ಚಿರಕಾಲವಿರುವ ಸಂಪತ್ತನ್ನು ನೀಡಲಿ.

ಸಂಸ್ಕೃತದಲ್ಲಿ :

ಪ್ರಮಥ್ಯಮಾನಾಮೃತರಾಶಿವೀಚಿ-
ಪ್ರೋದ್ಗಚ್ಛದಚ್ಛಾಚ್ಛತುಷಾರಕಲ್ಪಾಃ
ಯುಷ್ಮಾಕಮಿಚ್ಛಾಂ ವಿದಧತ್ವಮೋಘಾಂ
ವಿಘ್ನೇಶಮಾತುರ್ದರಹಾಸಲೇಶಾಃ ||3||

ತಾತ್ಪರ್ಯ :

ವಿಘ್ನೇಶನ ಮಾತೆಯ ಸೌಮ್ಯ ಮಂದಹಾಸವು ವೇಗದಲ್ಲಿ ನಡೆದ ಸಮುದ್ರ ಮಥನದಲ್ಲಿ ಹೊರಚೆಲ್ಲಿದ ಅಲೆಗಳಿಂದ ಪರಿಶುದ್ಧವಾದ ಹಾಗೂ ಕೊರೆಯುವ ನೀರಿನ ಹನಿಗಳಂತೆ ಇರುವುದು. ಆ ಮಂದಹಾಸವು ನಿಮ್ಮ ಆಶೋತ್ತರಗಳನ್ನು ತಪ್ಪದೇ ಈಡೇರಿಸಲಿ.

ವಿವರಣೆ :

ಪಾರ್ವತಿಯ ಮಂದಹಾಸವು, ಕಡೆಯಲ್ಪಡುತ್ತಿರುವ ಕ್ಷೀರಸಮುದ್ರದ ಅತ್ಯಂತ ಸ್ವಚ್ಛವಾಗಿರುವ ತುಂತುರುಗಳಂತೆ ತಂಪಾಗಿರುತ್ತದೆ. ವಿಘ್ನೇಶನ ತಾಯಿಯಾದ, ಆ ದೇವಿಯ ಮಂದಹಾಸಲೇಶವು ನಿಮ್ಮೆಲ್ಲರ ಆಶೋತ್ತರಗಳನ್ನು ಪೂರೈಸಲಿ.

ಆದ್ದರಿಂದ ದೇವಿಯು ಸುಖಸ್ಪರ್ಶದಿಂದ ತಿಳಿಯಲ್ಪಡುತ್ತಾಳೆ. ಸಾಮಾನ್ಯವಾಗಿ ಸ್ಥೂಲಸ್ಪರ್ಶದ ಅನುಭವ ಗೋಚರವಾಗುವುದಿಲ್ಲ ಎಂದು ಭಾವ.

ಸಂಸ್ಕೃತದಲ್ಲಿ :

ಚಂದ್ರಾತಪಃ ಕಶ್ಚನ ಸಂಪ್ರಸನ್ನೋ
ಮಹೇಶನೇತ್ರಾತಿಥಿತರ್ಪಣೋ ನಃ
ಮನೋಭಿಲಾಷಂ ಸಫಲೀಕರೋತು
ಮಹೇಶ್ವರೀಹಾಸಲವಪ್ರಕಾಶಃ ||4||

ತಾತ್ಪರ್ಯ :

ಮಹೇಶ್ವರಿಯ ವಿವರಿಸಲಾಗದ ಮನೋಹರವಾದ, ಮಹೇಶ್ವರನ ಕಣ್ಣಿಗೆ ಹಬ್ಬವನ್ನುಂಟುಮಾಡುವ, ಚಂದ್ರನ ಬೆಳಕಿನಂತಹ ಮಂದಹಾಸದ ಹೊಳಪು ನಮ್ಮ ಹೃದಯದಲ್ಲಿನ ಆಸೆಗಳನ್ನು ಪೂರೈಸಲಿ.

ಮಹೇಶ್ವರಿಯ ಶಾಂತಿಯಿಂದ ಕೂಡಿದ ಮಂದಹಾಸವು ಹೇಗೆ ಅತಿಥಿಗಳು ಒಳ್ಳೆಯ ಆತಿಥ್ಯದಿಂದ ಸಂತಸ ಪಡುವರೋ ಅದೇ ರೀತಿ ಮಹೇಶ್ವರನ ಕಣ್ಣುಗಳು ಈ ಮಂದಹಾಸವನ್ನು ನೋಡಿ ಸಂತೋಷ ಹಾಗೂ ತೃಪ್ತಿಯನ್ನು ಅನುಭವಿಸುವುದು. ಚಂದ್ರನ ಬೆಳಕು ಇಲ್ಲಿ ಶಾಂತಿಯನ್ನು ಹಾಗೂ ತಂಪನ್ನು ಅರ್ಥೈಸುತ್ತದೆ ಮತ್ತು ಅಮೃತದ ಕೇಂದ್ರ (ಶಾಂತಿ, ಶೀತಲ ಮತ್ತು ಅಮಿೃತಗರ್ಭ).

ವಿವರಣೆ :

ಪರಶಿವನ ಕಣ್ಣುಗಳು, ಸದಾ ದೇವಿಯ  ಸುಪ್ರಸನ್ನವಾದ ಮುಖವನ್ನು ನೋಡುವ ಬಯಕೆವುಳ್ಳವುಗಳಾಗಿವೆ.

ಸಂಸ್ಕೃತದಲ್ಲಿ :

ವಲಕ್ಷವಕ್ಷೋಜಪಟಾಂಚಲೇನ
ಚಲೇನ ಸಾರ್ಧಂ ಕೃತಕೇಲಯೋ ನಃ
ಪುರತ್ರಯಾರಾತಿಕಲತ್ರಹಾಸ-
ಭಾಸೋ ನಿರಾಸಂ ವಿಪದಾಂ ಕ್ರಿಯಾಸು ||5||

ತಾತ್ಪರ್ಯ :

ಮೂರು ನಗರಗಳ ಶತ್ರುವಿನ ಮಡದಿಯ ಎದೆಯ ಮೇಲಿರುವ ಶ್ವೇತ ವಸ್ತ್ರದ ತುಯ್ದಾಡುತ್ತಿರುವ ತುದಿಯೊಂದಿಗೆ ಆಟವಾಡುತ್ತಿರುವ ಮಂದಹಾಸದ ಹೊಳಪು ನಮ್ಮೆಲ್ಲ ತೊಂದರೆಗಳಿಗೆ ಅಂತ್ಯವನ್ನು ತಂದುಕೊಡಲಿ.

ವಿವರಣೆ :

ಪಾರ್ವತೀದೇವಿಯು ಬೆಳ್ಳಗಿರುವ ವಕ್ಷೋತ್ತರೀಯದಿಂದ ಅಲಂಕೃತಳಾಗಿದ್ದಾಳೆ. ತ್ರಿಪುರಾಂತಕನಾದ ಪರಶಿವನ ಮಡದಿಯಾದ ಪಾರ್ವತಿಯ ಮಂದಹಾಸಗಳ ಪ್ರಕಾಶವು ಅವಳ ಉತ್ತರೀಯದೊಂದಿಗೆ ಸರಸವಾಡುತ್ತಿದೆಯೋ ಎಂಬಂತಿದೆ. ಅಂತಹ ದೇವಿಯ ಮಂದಹಾಸದ ಪ್ರಕಾಶದ ಲೇಶವು ನಮ್ಮ ವಿಪತ್ತುಗಳನ್ನೆಲ್ಲ ಪರಿಹರಿಸಲಿ.

ಸಂಸ್ಕೃತದಲ್ಲಿ :

ಭೂಯಾಸುರಾಯಾಸಹರಾಣಿ ತಾನಿ
ಸ್ಮಿತಾನಿ ಭೂತೇಶಮೃಗೀದೃಶೋ ನಃ
ಯೇಷಾಂ ತ್ವಿಷೋ ಬಿಭ್ರತಿ ದಿಗ್ವಧೂಟೀ-
ಗಂಡೇಷು ಕರ್ಪೂರಪರಾಗಲೀಲಾಮ್ ||6||

ತಾತ್ಪರ್ಯ :

ಸದಾಶಿವನ ಸೌಂದರ್ಯವತಿಯಾದ ಪತ್ನಿಯ ಹಿತವಾದ ಮುಗುಳ್ನಗುವು ನಮ್ಮ ದುಃಖಗಳನ್ನು ದೂರಮಾಡಲಿ. ಆ ಮುಗುಳ್ನಗೆಯ ಹೊಳಪು ಸ್ತ್ರೀವರ್ಗದ ಕೆನ್ನೆಗಳ ಮೇಲೆ ಇರುವಂಥ ಕರ್ಪೂರದ ಧೂಳಿನ ಸೊಬಗನ್ನು ಹೋಲುವುದು.

ಇಲ್ಲಿ ಎಲ್ಲ ದಿಕ್ಕುಗಳನ್ನು ಸ್ತ್ರೀವರ್ಗಕ್ಕೆ ಹೋಲಿಸಿ ಮತ್ತು ಉಮಾದೇವಿಯ ಮಂದಹಾಸವನ್ನು ಮಹಿಳೆಯರ ಸೌಂದರ್ಯವನ್ನು ವೃದ್ಧಿಗೊಳಿಸುವ ಸೌಂದರ್ಯವರ್ಧಕಗಳಿಗೆ ಹೋಲಿಸಲಾಗಿದೆ.

ವಿವರಣೆ :

ದೇವಿಯ ಮಂದಹಾಸವು ಎಲ್ಲಾ ದಿಗಂಗನೆಯರ ಕಪೋಲಭಿತ್ತಿಗಳಲ್ಲಿ ಕರ್ಪೂರದ ಧೂಳಿನಂತೆ ಕೆಲಸಮಾಡಿ ಅಲಂಕರಿಸುತ್ತವೆ. ದೇವಿಯ ಆ ಮಂದಹಾಸವು ನಮ್ಮೆಲ್ಲರ ಆಯಾಸಗಳನ್ನು ಪರಿಹರಿಸಲಿ.

ಸಂಸ್ಕೃತದಲ್ಲಿ :

ಕುರ್ವಂತು ಕಾಮಂ ಸಫಲಂ ತ್ವ ಮದೀಯಂ
ಕುಲಾದ್ರಿಕನ್ಯಾಹಸಿತಾನಿ ತಾನಿ
ಯೇಷಾಂ ಮಯೂಖೈಃ ಕ್ರಿಯತೇ ಸಿತಾರ್ದೇ-
ಉದ್ಯಾನವಾಟೀಷು ನವೋ ವಸಂತಃ ||7||

ತಾತ್ಪರ್ಯ :

ಮಹಾನ್ ಪರ್ವತದ ಪುತ್ರಿಯ ನಗುವಿನ ಕಿರಣಗಳು ಹಿಮಾಲಯದಲ್ಲಿನ ತೋಟದಲ್ಲಿನ ನವ ವಸಂತವನ್ನು ಸೃಷ್ಟಿಸಿದೆ. ಆ ನಗುವು ನನ್ನ ಆಸೆಗಳನ್ನು ಈಡೆರಿಸಲಿ.

ವಿವರಣೆ :

ದೇವಿಯ ಮಂದಹಾಸಗಳು ಹಿಮಾಲಯ ಪರ್ವತದ ಉದ್ಯಾನಗಳ ಉಪವನಗಳ ಸಾಲಿನಲ್ಲಿ ನಿತ್ಯನೂತನವಾದ ವಸಂತ ಋತುವನ್ನುಂಟುಮಾಡುತ್ತದೆ. ಆ ಮಂದಹಾಸಗಳು ನನ್ನ ಇಷ್ಟಾರ್ಥಗಳೆಲ್ಲವನ್ನೂ ಸಫಲಗೊಳಿಸಲಿ.

ಸಂಸ್ಕೃತದಲ್ಲಿ :

ಆಮ್ರೇಡಿತಂ ಭೂಷಣಚಂದ್ರಭಾಸಾಂ
ನಾಸಾವಿಭೂಷಾಮಹಸಾಂ ದ್ವಿರುಕ್ತಿಃ
ಪುರಾರಿನಾರೀಸ್ಮಿತಕಾಂತಯೋ ಮೇ
ಪೂರ್ಣಾನಿ ಕುರ್ವಂತು ಸಮೀಹಿತಾನಿ ||8||

ತಾತ್ಪರ್ಯ :

ಪುರಾರಿಯ ಗೃಹಿಣಿಯ ಮಂದಹಾಸದ ಹೊಳಪು, ಶಿವನ ಶಿರದಲ್ಲಿ ಆಭರಣದಂತಿರುವ ಚಂದ್ರನ ಹೊಳಪು, ಮತ್ತು ಅವಳ ಮೂಗುತಿಯಿಂದ ಸತತವಾಗಿ ಪ್ರಕಾಶಿಸುವಂತಿದೆ. ಆ ಹೊಳೆಯುವ ಮಂದಹಾಸವು ನನ್ನ ಇಷ್ಟಾರ್ಥಗಳೆಲ್ಲವನ್ನೂ ಪೂರೈಸಲಿ.

ವಿವರಣೆ :

ದೇವಿಯ ಮಂದಹಾಸವು ಹರನ ಶಿರೋಭೂಷಣವಾದ ಚಂದ್ರನ ಕಾಂತಿಯನ್ನು ಹಾಗೂ ದೇವಿಯ ಮೂಗುತಿಯ ಕಾಂತಿಯನ್ನೂ ಇಮ್ಮಡಿಗೊಳಿಸುತ್ತವೆ. ದೇವಿಯ ಆ ಮಂದಹಾಸಗಳು ನನ್ನ ಇಷ್ಟಾರ್ಥಗಳೆಲ್ಲವನ್ನೂ ಪೂರೈಸಲಿ.

ಸಂಸ್ಕೃತದಲ್ಲಿ :

ನಿರ್ಮಾಯ ವಿಶ್ವಾಲಯಮಂಬ ಶರ್ವ-
ಸ್ತ್ವಯಾ ಸಮಂ ಶಿಲ್ಪವಿದಾ ಸ ಶಿಲ್ಪೀ
ವಿಹರ್ತುಮಿಚ್ಛನ್ನಯಿ ವೋಢುಮೈಚ್ಛ-
ನ್ನಾರೀಂ ಭವಂತೀಂ ಪುರುಷೋ ಭವಂಸ್ತ್ವಾಮ್ ||9||

ತಾತ್ಪರ್ಯ :

, ದೇವಿ ! ಶ್ರೇಷ್ಠ ಶಿಲ್ಪಿಯಾದ ಶರ್ವನು ನಿನ್ನೊಂದಿಗೆ ಸೃಷ್ಟಿ ಕ್ರಿಯೆಯ ಕಲೆಯಲ್ಲಿ ನಿಷ್ಣಾತನಾಗಿ, ವಿಶ್ವವನ್ನು ಸೃಷ್ಟಸಿದನು. ಅನಂತರ ಓ, ಮಾತೆ ! ದೈವೀ ಕ್ರೀಡೆಯ ಸಲುವಾಗಿ ಅವನು ಪುರುಷ ರೂಪವನ್ನು ತಾಳಿ ನಿನಗೆ ಸ್ತ್ರೀರೂಪವನ್ನು ಉಂಟುಮಾಡಿದನು.

ವಿವರಣೆ :

ತಾಯಿಯೇ ! ಆ ಪರಶಿವನು ವಿಶ್ವವನ್ನು ನಿರ್ಮಿಸುವ ಶಿಲ್ಪಕಲೆಯಲ್ಲಿ ಚತುರನು. ನೀನೂ ಕೂಡ ಆ ಕಲೆಯಲ್ಲಿ ಚತುರೆ. ನಿನ್ನೊಡನೆ ಕೂಡಿ ಈ ಪ್ರಪಂಚವೆಂಬ ಮನೆಯನ್ನು ನಿರ್ಮಿಸಿ ಅದರಲ್ಲಿ ನಿನ್ನೊಡನೆ ರಮಿಸಬೇಕೆಂದು ಬಯಸಿದನು. ಅದಕ್ಕೋಸ್ಕರ ತಾನು ಪುರುಷನಾಗಿ ನೀನು ಸ್ತ್ರೀಯಾಗಿ ಭಾರ್ಯೆಯಾಗಬೇಕೆಂದು ಅಪೇಕ್ಷಿಸಿದನು.

ಸಂಸ್ಕೃತದಲ್ಲಿ :

ದಿವ್ಯಂ ದುಕೂಲಂ ಧವಲಂ ದಧಾನಾ
ವೇಣ್ಯಾ ಫಣೀಂದ್ರೋಪಮಯಾ ಲಸಂತೀ
ಪ್ರಫುಲ್ಲರಾಜೀವವಿಲೋಚನಾ ತ್ವಂ
ಪ್ರಪಂಚಭರ್ತುರ್ನಯನಾನ್ಯಹಾರ್ಷೀಃ ||10||

ತಾತ್ಪರ್ಯ :

, ಮಾತೆ ! ಸಂಪೂರ್ಣವಾಗಿ ಅರಳಿದ ಕಮಲದಂತಹ ಕಣ್ಣುಗಳನ್ನುಳ್ಳ, ಶ್ವೇತವರ್ಣದ ದೈವೀ ವಸ್ತ್ರವನ್ನು ಧರಿಸಿ ಮತ್ತು ಸರ್ಪದಂತೆ ಹೆಣೆದಿರುವ ಜಡೆಯಿಂದ ಹೊಳೆಯುತ್ತಿರುವ ನೀನು ಮಹೇಶ್ವರನ ಕಣ್ಣುಗಳನ್ನು ಕದ್ದಿರುವೆ.

ವಿವರಣೆ :

ತಾಯಿಯೇ ! ಅರಳಿದ ಕಮಲಗಳಂತೆ ಕಣ್ಣುಳ್ಳ, ಸರ್ಪರಾಜನಂತೆ ಭವ್ಯವಾಗಿ ಹೆಣೆದ ತಲೆಗೂದಲಿನಿಂದ ಕೂಡಿದವಳಾಗಿ, ಭವ್ಯವಾದ ಬೆಳ್ಳಗಿರುವ ರೇಷ್ಮೆ ಸೀರೆಯನ್ನು ಉಟ್ಟವಳಾಗಿ, ಆ ಪರಶಿವನ ಕಣ್ಣುಗಳನ್ನು ನಿನ್ನ ಕಡೆಗೆ ಸೆಳೆದೆ.

ಸಂಸ್ಕೃತದಲ್ಲಿ :

ಪ್ರತ್ಯಂಗಬಂಧಂ ಜ್ವಲದುತ್ತಮಂ ತೇ
ಭುಜಂಗರಾಜೋಪಮವೇಣಿರೂಪಂ
ಆತ್ಮೈಕನಿಷ್ಠಸ್ಯ ಚ ವಿಶ್ವಭರ್ತರ್ಯ-
ಆರಾಧಯಾಮಾಸ ವಿಲೋಚನಾನಿ ||11||

ತಾತ್ಪರ್ಯ :

ನಿನ್ನ ದೇಹದ ಉಜ್ವಲವಾದ ಪ್ರತಿಯೊಂದು ಭಾಗಗಳು ನಿನ್ನ ಜಡೆಯು, ಸರ್ಪಗಳ ರಾಜ, ವಿಶ್ವದ ಅಧಿಪತಿಯಾದ  ಮುಕ್ಕಣ್ಣನಲ್ಲಿ ಹಿತವಾಗಿರುವುದು.

ವಿವರಣೆ :

ಮುಖ, ಕುಚ ಮತ್ತು ಭುಜಗಳೇ ಮೊದಲಾದ ಬಂಧನಗಳಲ್ಲಿ ಶ್ರೇಷ್ಠವಾದ, ಸರ್ಪರಾಜನಂತಿರುವ ನಿನ್ನ ಹೆಣೆದ ಕೂದಲು, ಸದಾ ಆತ್ಮನಲ್ಲೇ ನೆಲೆಸಿನಿಂತಿರುವ ಪರಶಿವನ ಎಲ್ಲ ಕಣ್ಣುಗಳನ್ನೂ (ಅಗ್ನಿಮಯವಾದ ಮೂರನೇ ಕಣ್ಣನ್ನೂ ಶಾಂತಗೊಳಿಸಿ) ಆಕರ್ಷಿಸಿದವು.

ಸಂಸ್ಕೃತದಲ್ಲಿ :

ಅಭೂಸ್ತ್ವಮಾದ್ಯಸ್ಯ ಮನೋಮದಾಯ
ಸ ಚಾಪಿ ತೇ ಪ್ರೀತಿಪದಂ ಬಭೂವ
ನ ಕೇವಲಂ ವಾಂ ಸಕಲಸ್ಯ ಚಾಸೀ-
ದ್ದಾಂಪತ್ಯಬಂಧಸ್ಯ ತದಂಬ ಬೀಜಮ್ ||12||

ತಾತ್ಪರ್ಯ :

, ಮಾತೆ ! ವಿಶ್ವದಲ್ಲಿ ಮೊದಲಿಗೆ ಬಂದವನು ನಿನ್ನನ್ನು ಪ್ರೀತಿಯಿಂದ ಇಷ್ಟಪಟ್ಟು ಹಾಗೂ ಅವನು ನಿನಗೆ ಅತ್ಯಂತ ಪ್ರೀತಿಪಾತ್ರನಾಗಿರುವನು. ಅವನೊಂದಿಗಿನ ನಿನ್ನ ವಿವಾಹ ಸಂಬಂಧವು ಲೋಕದಲ್ಲಿ ವೈವಾಹಿಕ ಪದ್ಧತಿಯನ್ನು ಪ್ರಾರಂಭಿಸಿತು.

ವಿವರಣೆ :

ತಾಯಿಯೇ ! ನೀನು ಆ ಆದಿಪುರುಷನಿಗೆ ಮನಸ್ಸಿನಲ್ಲಿ ಸಂತೋಷವುಂಟಾಗುವಂತೆ ಮಾಡಿದೆ. ಅವನೂ ಕೂಡ ನಿನಗೆ ಪ್ರೀತಿಯ ಮೂಲಸ್ಥಾನವಾದ. ನಿಮ್ಮೀರ್ವರ ಈ ದಾಂಪತ್ಯ ಜೀವನವು ನಿಮಗೆ ಮಾತ್ರ ವಿರಸವಿಲ್ಲದ ದಾಂಪತ್ಯಕ್ಕೆ ಕಾರಣವಾಗಲಿಲ್ಲ. ಅದು ಪ್ರಪಂಚದ ದಾಂಪತ್ಯಜೀವನಕ್ಕೆ ಕಾರಣವಾಯಿತು.

ಸಂಸ್ಕೃತದಲ್ಲಿ :

ತವಾತಿಕಾಂತಾ ನಯನಾಂತವೃತ್ತಿ-
ರ್ಹಾಸಃ ಪುರಾರೇಶ್ಚ ನವೇಂದುಹಾರೀ
ಉಭೌ ವಿವಾಹೋತ್ಸವಪೂರ್ವರಂಗಂ
ನಿರ್ವರ್ತಯಾಮಾಸತುರಾದಿರಾಮೇ ||13||

ತಾತ್ಪರ್ಯ :

, ಆದಿಸ್ವರೂಪದ ಸೌಂದರ್ಯವತಿಯೇ ! ನಿನ್ನ ಸೆರೆಹಿಡಿಯುವ ಕುಡಿನೋಟ ಮತ್ತು ಶಿವನ ಶಿರದ ಮೇಲಿರುವ ಉದಯಿಸುವ ಚಂದ್ರನಂತೆ ಕಂಗೊಳಿಸುವ ಸುಂದರವಾದ ಮಂದಹಾಸವು ನಿನ್ನ ವಿವಾಹ ಸಮಾರಂಭಕ್ಕೆ ಪೂರ್ವರಂಗವನ್ನು ಸೃಷ್ಟಿಸಿದೆ.

ವಿವರಣೆ :

ಪಾರ್ವತಿದೇವಿಯು ಅತ್ಯಂತ ರಮಣೀಯವಾದ ತನ್ನ ಕಡೆಗಣ್ಣೋಟದಿಂದ ಪರಶಿವನನ್ನು ನೋಡುವಳು. ಪರಶಿವನೂ ಕೂಡ ಸುಂದರವಾದ ಅರ್ಧಚಂದ್ರನಂತಿರುವ ಕಿರುನಗೆಯಿಂದ ಅದಕ್ಕುತ್ತರಿಸುತ್ತಾನೆ. ಹೀಗೆ ಜಗತ್ಸುಂದರಿಯ ಕಟಾಕ್ಷವಿಲಾಸ ಮತ್ತು ಶಂಕರನ ಕಿರುನಗೆ ಇವೆರಡೂ ವಿವಾಹೋತ್ಸವದ ಪೂರ್ವಕರಂಗಗಳಾಗಿ (ವಿಘ್ನಗಳ ಉಪಶಮನಕ್ಕೆ ಮಿಂಚುವ ಕ್ರಿಯೆಗಳಂತೆ) ಆದವು.

ಸಂಸ್ಕೃತದಲ್ಲಿ :

ದಾತುಂ ಪ್ರಭುಃ ಸಾಂತ್ವಯಿತುಂ ಸಮರ್ಥಃ
ಕರ್ತುಂ ಕ್ಷಮಸ್ತರ್ಜಯಿತುಂ ಚ ಶಕ್ತಃ
ಸಂರಕ್ಷತಾನ್ಮಾಂ ತವ ಸರ್ವ ವಂದ್ಯೇ
ಕರಸ್ತುಷಾರಾಂಶುಭೃತಾ ಗೃಹೀತಃ ||14||

ತಾತ್ಪರ್ಯ :

, ಮಾತೆ ! ಶಿವನು ಮದುವೆಯ ಸಂದರ್ಭದಲ್ಲಿ ಹಿಡಿದಿರುವ ನಿನ್ನ ಬಲ ಹಸ್ತವು ಭಕ್ತರ ಆಕಾಂಕ್ಷೆಗಳನ್ನು ಪೂರೈಸುವ ಮತ್ತು ಅವರನ್ನು ಸಂತೈಸುವ ಶಕ್ತಿಯುಳ್ಳದ್ದು. ನಿನ್ನ ಹಸ್ತವು ಎಲ್ಲ ಕಾರ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಶತ್ರುಗಳನ್ನು ಬೆದರಿಸುವ ಶಕ್ತಿಯೂ ಇದೆ. , ದೇವಿ, ನಿನ್ನ ಆ ಹಸ್ತವು ನನ್ನನ್ನು ರಕ್ಷಿಸಲಿ.

ವಿವರಣೆ :

ಸಮಸ್ತರಿಂದ ಸ್ತೋತ್ರಮಾಡಲ್ಪಡುವ ದೇವಿಯೆ ! ನಿನ್ನ ಬಲ ಹಸ್ತ ಚಂದ್ರಚೂಡನ ಕೈಯಿಂದ ಹಿಡಿಯಲ್ಪಟ್ಟಿದೆ. ಅದು ಭಕ್ತರಿಗೆ ಏನನ್ನು ಬೇಕಾದರೂ ಕೊಡಬಲ್ಲದು. ಅವರ ಇಷ್ಟಾರ್ಥಗಳನ್ನು ಪೂರೈಸಬಲ್ಲದು. ತನಗೆ ತೋರಿದಂತೆ ಏನನ್ನು ಬೇಕಾದರೂ ಮಾಡಬಲ್ಲದು. ಹಾಗೆಯೇ ಶತ್ರುಗಳನ್ನು ಬೆದರಿಸಲೂ ಕೂಡ ಸಮರ್ಥವಾಗಿದೆ. ಅಂತಹ ನಿನ್ನ ಬಲಹಸ್ತವು ನನ್ನನ್ನು ಎಲ್ಲಕಡೆಯಿಂದಲೂ ಕಾಪಾಡಲಿ.

ಸಂಸ್ಕೃತದಲ್ಲಿ :

ಸ್ಪ್ರಷ್ಟುಂ ನ ಶಕ್ಯಾ ಪರಮೇ ಪರೈಸ್ತ್ವಂ
ಸ ಚಾನ್ಯಯಾ ಚಿಂತಯಿತುಂ ನ ಶಕ್ಯಃ
ತ್ವಮೇವ ಶರ್ವಸ್ಯ ಸ ಏವ ತೇsಮ್ಬ
ದಾಂಪತ್ಯಮೇವಂ ಯುವಯೋಸ್ತು ಸತ್ಯಮ್ ||15||

ತಾತ್ಪರ್ಯ :

, ಮಾತೆ ! ನಿನ್ನನ್ನು ಶಿವನ ಹೊರತು ಯಾರೂ ಬಯಸಲಾರರು (ಮುಟ್ಟಲಾರರು) ಮತ್ತು ನಿನ್ನನ್ನು ಹೊರತು ಮತ್ಯಾರೂ ಶಿವನಿಗೆ ಸಂಗಾತಿಯಾಗಲಸಾಧ್ಯ. ನೀನು ಶಿವನಿಗೆ ಸೇರಿದವಳು ಮತ್ತು ಶಿವನು ನಿನಗೆ ಸೇರಿದವನು. ನಿಮ್ಮಿಬ್ಬರ ಸಮಾಗಮವೇ ಪರಮಸತ್ಯ.

ಶಿವ-ಶಕ್ತಿಯರ ವಿವಾಹ ಮಾತ್ರ ನಿಜವಾದ ಬಂಧನ; ಪ್ರಪಂಚದಲ್ಲಿ, ಶಿವನೇ ಪುರುಷ ಜನಾಂಗದ ಮೂಲ ಹಾಗೂ ಶಕ್ತಿಯೇ ಸ್ತ್ರೀ ಜನಾಂಗದ ಮೂಲ.

ವಿವರಣೆ :

ಉಮಾದೇವಿಯೇ ! ನೀನು ಇತರರಿಂದ ಮುಟ್ಟಲಾಗದವಳು. ಆ ಶಿವನೂ ಕೂಡ ನಿನ್ನೊಬ್ಬಳನ್ನು ಬಿಟ್ಟು ಯಾರಿಂದಲೂ ಚಿಂತಿಸಲೂ ಆಗದವನು. ಹೀಗೆ ಅವನಿಗೆ ನೀನೊಬ್ಬಳೇ, ನಿನಗೆ ಅವನೊಬ್ಬನೇ. ಹೀಗಾಗಿ ನಿಮ್ಮೀರ್ವರ ದಾಂಪತ್ಯವು ಸತ್ಯವಾದುದಾಗಿದೆ.

ಸಂಸ್ಕೃತದಲ್ಲಿ :

ನಿಜಾದ್ವತಂಸೇಂದುತ ಇಂದುಮನ್ಯ-
ಮುತ್ಪಾದ್ಯ ತೇ ಶಂಭುರದಾದ್ವತಂಸಮ್
ಮೂರ್ತಾಮಿವಾಸೌ ಶುಭಗಾತ್ರಿ ರಾತ್ರಿಂ
ಪ್ರಾಪ್ಯ ತ್ವದೀಯಾಂ ಕಬರೀಂ ಚಕಾಸೇ ||16||

ತಾತ್ಪರ್ಯ :

, ಪವಿತ್ರವಾದ ಅಂಗಗಳುಳ್ಳ ದೇವಿಯೇ! ಶಿವನು ತನ್ನ ಶಿರದಲ್ಲಿದ್ದ ಚಂದ್ರನಿಂದ ಮತ್ತೊಂದು ಚಂದ್ರನನ್ನು ನಿನಗೆ ಉಡುಗೊರೆಯನ್ನಾಗಿ ನೀಡಲು ಸೃಷ್ಟಿಸಿದನು. ನಿನಗೆ ಕೊಡಲ್ಪಟ್ಟ ಆ ಚಂದ್ರನು ನಿನ್ನ ಕೇಶದಲ್ಲಿ ಹೊಳೆಯುತ್ತಿದೆ ಹಾಗೂ ಅದು ರಾತ್ರೆಯ ಸಾಕಾರವಾಗಿದೆ.

ವಿವರಣೆ :

ವಿವಾಹಕಾಲದಲ್ಲಿ ವರನು ವಧುವಿಗೆ ಪಾರಿತೋಷಕವನ್ನು ನೀಡಬೇಕು. ಆದ್ದರಿಂದ ಚಂದ್ರಶೇಖರನು ತನ್ನ ತಲೆಯಲ್ಲಿ ಅಲಂಕಾರವಾಗಿರುವ ಚಂದ್ರನಿಂದ ಮತ್ತೊಂದು ಚಂದ್ರನನ್ನು ಸೃಷ್ಟಿಸಿ ನಿನಗೆ ನೀಡಿದನು. ಆ ಚಂದ್ರನು ಆಕಾರ ಪಡೆದಿರುವ ರಾತ್ರಿಯಂತಿರುವ ನಿನ್ನ ಕೇಶಪಾಶವನ್ನು ಸೇರಿ ಪ್ರಕಾಶಿಸಿತು.

ಸಂಸ್ಕೃತದಲ್ಲಿ :

ಬಭೂವಿತಾಗೇಂದ್ರಗೃಹೇ ಯದಾ ತ್ವಂ
ಸ ಚೇಶ್ವರಸ್ತತ್ರ ಚಕಾರ ವಾಸಮ್
ವಿಲೋಕಮಾನಸ್ತವ ದೇವಿ ವಿದ್ಯುತ್
ಪಾಂಚಾಲಿಕಾಯಾಃ ಕಮನೀಯಭಾವಮ್ ||17||

ತಾತ್ಪರ್ಯ :

, ದೇವಿಯೇ ! ನೀನು ನಿನ್ನ ತವರು ಮನೆಯಾದ ಹಿಮಾಲಯ ಪರ್ವತದಲ್ಲಿ ಇರುತ್ತಿರುವಾಗ ಶಿವನೂ ಅಲ್ಲೇ ಇದ್ದು ನಿನ್ನ ಮೋಹಕ ರೂಪವನ್ನು ನೋಡುತ್ತಿದ್ದನು.

ವಿವರಣೆ :

ದೇವಿಯೇ ! ನೀನು ನಿನ್ನ ತಂದೆಯ ಮನೆಯಾದ ಹಿಮಾಲಯದಲ್ಲಿ ವಾಸಿಸುತ್ತಿದ್ದಾಗ ಶಂಕರಮಹಾದೇವನೂ ಕೂಡ ಅಲ್ಲೇ ವಾಸಿಸುತ್ತಿದ್ದನು. ಆಗ ಆತನು ಮಿಂಚಿನ ಗೊಂಬೆಯಂತಿದ್ದ ನಿನ್ನ ಮೋಹಕ ರೂಪವನ್ನು ನೋಡುತ್ತಾ ಆನಂದಿಸುತ್ತಿದ್ದನು.

ಸಂಸ್ಕೃತದಲ್ಲಿ :

ಸಿದ್ಧಂ ಸ ವಾಂ ಸಾಧಯಿತುಂ ಪ್ರವೃತ್ತೋ
ಯೋಗಂ ಪ್ರದಗ್ಧೋ ಮದನಶ್ಚ ಕಲ್ಪೇ
ವಶೀತಿ ಕೀರ್ತಿಂ ಗಿರಿಶಸ್ಯ ಭರ್ತುಂ
ತುಭ್ಯಂ ತ್ವಪರ್ಣೇತಿ ಯಶಶ್ಚ ಕರ್ತುಮ್ ||18||

ತಾತ್ಪರ್ಯ :

, ಮಾತೆ ! ಮನ್ಮಥನು ನಿಮ್ಮಿಬ್ಬರ ಮಿಲನವನ್ನುಂಟು ಮಾಡುವ ಪ್ರಯತ್ನದಲ್ಲಿ ಉರಿದು ಬೂದಿಯಾದದ್ದು ಸರ್ವರಿಗೂ ತಿಳಿದೇ ಇದೆ. ಇದರಿಂದ ಕೊನೆಗೆ ಶಿವನು ನಿನಗೆ ಮಾತ್ರ ಮೀಸಲಾದವನು ಎಂಬ ಬಿರುದನ್ನು ಸಂಪಾದಿಸಿಕೊಂಡನು ಹಾಗೂ ನೀನು ಅಪರ್ಣ ಎಂಬ ಬಿರುದನ್ನು ಪಡೆದೆ.

ಪಾರ್ವತಿಯನ್ನು ಅಪರ್ಣ ಎಂದೂ ಕರೆಯಲಾಗುವುದು ಏಕೆಂದರೆ ಅವಳು ಶಿವನನ್ನು ಪತಿಯನ್ನಾಗಿ ಪಡೆಯುವ ಸಲುವಾಗಿ ತಪಸ್ಸನ್ನಾಚರಿಸುತ್ತಿದ್ದಾಗ,  ಆಹಾರವನ್ನು ತ್ಯಜಿಸುವುದಲ್ಲದೇ ಎಲೆಯನ್ನೂ ತಿನ್ನುವುದನ್ನು ನಿಲ್ಲಿಸಿದಳು. ಕಾಳಿದಾಸನೂ ಕೂಡ ತನ್ನಕುಮಾರಸಂಭವಮಹಾಕಾವ್ಯದಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದಾನೆ.

ವಿವರಣೆ :

ತಾಯಿಯೇ ! ನಿನಗೂ ಶಿವನಿಗೂ ಕೂಡ ಇರುವ ಸಂಬಂಧವು ನಿತ್ಯವಾದುದಾಗಿದೆ. ಆ ಮನ್ಮಥನು ಇದನ್ನು ಹೊಸತಾಗಿ ಮಾಡಲು ಹೋಗಿ ಸುಟ್ಟು ಬೂದಿಯಾದನು. ಆದರೆ ಆ ಕೆಲಸವು ಪರಶಿವನಿಗೆ ಜಿತೇಂದ್ರಿಯನೆಂಬ ಯಶಸ್ಸನ್ನು ಉಂಟುಮಾಡಿತು ಹಾಗೂ ನಿನಗೆ ಅಪರ್ಣಾ ಎಂಬ ಯಶಸ್ಸನ್ನುಂಟು ಮಾಡುವುದರಲ್ಲೂ ಸಮರ್ಥವಾಯಿತು.

ಸಂಸ್ಕೃತದಲ್ಲಿ :

ಘೋರಂ ತಪಶ್ಚೇಂದ್ರಚಿತಂ ತ್ವಯಾsಪಿ
ಪ್ರಾಗ್ರೂಪಭರ್ತುಃ ಸಮನುಗ್ರಹಾಯ
ವಿಹಾಯ ಯತ್ನಂ ಕ ಇಹಾಖಿಲಾsಮ್ಬ
ಸಂಬದ್ಧಮುಪ್ಯರ್ಥಮುಪೈತು ಜಂತುಃ ||19||

ತಾತ್ಪರ್ಯ :

ಹೇ, ಎಲ್ಲರ ಮಾತೆ ! ನಿನ್ನ ಹಿಂದಿನ ಜನ್ಮದಲ್ಲಿ ಪತಿಯಾಗಿದ್ದ ಶಿವನಿಂದ ಒಲವನ್ನು ಪಡೆಯಲು ತೀವ್ರವಾದ ತಪಸ್ಸನ್ನಾಚರಿಸಿದೆ. ಈ ಪ್ರಪಂಚದಲ್ಲಿ ಸ್ವಪ್ರಯತ್ನವಿಲ್ಲದೇ ಯಾರೂ ಯಾವುದೇ ಆಸೆಗಳನ್ನು ತೀರಿಸಿಕೊಳ್ಳುವುದಕ್ಕೆ ಆಗುವುದು.

ಪಾರ್ವತಿಯ, ತಾನು ಪೂರ್ವಜನ್ಮದಲ್ಲಿ ಶಿವನ ಪತ್ನಿಯಾಗಿದ್ದರೂ (ಸತಿ ದೇವಿ) ಈ ಜನ್ಮದಲ್ಲಿ ಅವನನ್ನು ಪುನಃ ಪತಿಯನ್ನಾಗಿ ಪಡೆಯಲು ಆಚರಿಸಿದ ಕಠಿಣ ತಪಸ್ಸಿನ ಬಗ್ಗೆ ಎಲ್ಲರಿಗೂ ತಿಳಿದದ್ದೇ.

ವಿವರಣೆ :

ತಾಯಿಯೇ ! ನೀನು ಪೂರ್ವಜನ್ಮದಲ್ಲಿ ಸತಿಯಾಗಿದ್ದು ಪರಶಿವನಿಗೆ ಪತ್ನಿಯಾಗಿದ್ದೆ. ಅವನನ್ನೇ ಈ ಜನ್ಮದಲ್ಲಿ ಪುನಃ ಪತಿಯಾಗಿ ಪಡೆಯಲು ಮತ್ತು ಅವನ ಅನುಗ್ರಹವನ್ನು ಪಡೆಯಲು ನೀನು ಅದೆಷ್ಟು ಘೋರ ತಪಸ್ಸನ್ನಾಚರಿಸಿದೆ. ಹೀಗಿರುವಾಗ ಯಾವನಾದರೂ ತನ್ನ ಇಷ್ಟಾರ್ಥಗಳನ್ನು ಪ್ರಯತ್ನವಿಲ್ಲದೇ ಪಡೆಯಲು ಸಾಧ್ಯವಾಗುತ್ತದೆಯೇ ? ಪ್ರತಿಯೊಬ್ಬರೂ ಅವರವರ ಇಷ್ಟಾರ್ಥಗಳನ್ನು ಪಡೆಯಲು ಪ್ರಯತ್ನಪಡಲೇ ಬೇಕೆಂಬುದು ಕವಿಯ ಅಭಿಪ್ರಾಯ.

ಸಂಸ್ಕೃತದಲ್ಲಿ :

ಜ್ವಲತ್ಕಪರ್ದೋ ದಹನಾಂಕಭಾಲಃ
ಕಪಾಲಮಾಲೀ ಕರಿಕೃತ್ತಿವಾಸಾಃ
ಭುಜಂಗಭೂಷೋ ಭಸಿತಾಂಗರಾಗಃ
ಪುಷ್ಪೇಷು ವೈರೀ ಪುರುಷಾಟ್ಟಹಾಸಃ ||20||

ತಾತ್ಪರ್ಯ :

ಮನ್ಮಥನ ಶತೃವಾದ ಶಿವನು ಅನೇಕ ವೈಚಿತ್ರ್ಯವುಳ್ಳವನು. ಅವುಗಳೆಂದರೆ ಶಿರದ ಮೇಲೆ ಜಟಾಜೂಟ, ಹಣೆಯ ಮಧ್ಯದಲ್ಲಿ ಬೆಂಕಿಯ ಗುರುತು, ಕತ್ತಿನಲ್ಲಿ ಕಪಾಲಗಳ ಮಾಲೆ ಮತ್ತು ಗಜಚರ್ಮದ ವಸ್ತ್ರಧರಿಸಿರುವುದು. ಅವನನ್ನು  ಸರ್ಪದಿಂದ ಅಲಂಕರಿಸಿ, ಭಸ್ಮವನ್ನೇ ಕಾಂತಿವರ್ಧಕವನ್ನಾಗಿ ಉಪಯೋಗಿಸುವ ಮತ್ತು ಅವನ ನಗೆಯು ಭಯಾನಕವಾದದ್ದು.

ವಿವರಣೆ :

ಜಾಜ್ವಲ್ಯಮಾನವಾದ ಜಟೆಗಳ ಸಮೂಹವುಳ್ಳ, ಹಣೆಯಲ್ಲಿ ಅಗ್ನಿಯನ್ನುಳ್ಳ, ತಲೆಬುರುಡೆಗಳ ಮಾಲೆಯುಳ್ಳ, ಆನೆಯ ಚರ್ಮವನ್ನು ಬಟ್ಟೆಯಾಗುಳ್ಳ, ಹಾವುಗಳನ್ನು ಅಲಂಕಾರವಾಗಿ ಧರಿಸಿರುವ, ಬೂದಿಯನ್ನು ಶರೀರದಲ್ಲಿ ಲೇಪನೆಮಾಡಿಕೊಂಡಿರುವವನು, ಮನ್ಮಥನ ವೈರಿಯು ಮತ್ತು ಕಿವಿಗಡಚುಕ್ಕುವ ಅಟ್ಟಹಾಸದ ನಗುವುಳ್ಳವನಾಗಿದ್ದಾನೆ.

ಸಂಸ್ಕೃತದಲ್ಲಿ :

ಶ್ಮಶಾನವಾಸೀ ಪುರುಷಸ್ತ್ರಿಶೂಲೀ
ಜಹಾರ ತೇ ಚೇದನಘಾಂಗಿ ಚೇತಃ
ದೃಷ್ಟಾಂತಮರ್ಥೋsಯಮವಾಪ ನೈವ
ಪ್ರೀತಿರ್ಬಹಿಃಕಾರಣಮಾಶ್ರಿತೇತಿ ||21||

ತಾತ್ಪರ್ಯ :

, ಪಾಪರಹಿತ ದೈವೀ ಮಾತೆ ! ನಾವು ತ್ರಿಶೂಲವನ್ನು ಕೈಯಲ್ಲಿ ಹಿಡಿದ, ಸ್ಮಶಾನದಲ್ಲಿ ವಾಸಿಸುವ ವ್ಯಕ್ತಿಯು ನಿನ್ನ ಪ್ರೀತಿಯನ್ನು ಅಪಹರಿಸುದವನೆಂದು ಅರಿತ ಮೇಲೆ,  ಪ್ರೀತಿಯು ಬಾಹ್ಯಸೌಂದರ್ಯದ ಮೇಲೆ ಅವಲಂಬಿತವಾಗದ್ದೆಂಬ ಹೇಳಿಕೆಯನ್ನು ನಾವು ಒಪ್ಪಬೇಕಾದದ್ದೆ !

ವಿವರಣೆ :

ಸ್ಮಶಾಣದಲ್ಲಿ ವಾಸಿಸುವವನು ತ್ರಿಶೂಲವನ್ನು ಕೈಯಲ್ಲಿ ಹಿಡಿದಿರುವವನು ಪುರುಷನು. ಯಾವ ಕುಂದೂ ಇಲ್ಲದ ದೇವಿಯೆ ! ನಿನ್ನ ಮನಸ್ಸನ್ನು ಆಗ ಸ್ತ್ರೀ- ಪುರುಷರ ಪ್ರೇಮವು ಹೊರಗಡೆಯ ಅಂಗಸೌಂದರ್ಯಾದಿಗಳನ್ನು ಆಶ್ರಯಿಸಿರುತ್ತದೆ ಎಂಬುದಕ್ಕೆ ಉದಾಹರಣೆ ಇಲ್ಲದಂತಾಯಿತಲ್ಲವೇ ?

ಸಂಸ್ಕೃತದಲ್ಲಿ :

ರೂಪಂ ಪುರಾರೇರಥವಾ ತದೇತತ್
ಸೇಯಂ ಚ ಚೇಷ್ಟಾ ಸಮಯಾಂತರೇಷು
ಕಾಂತಂ ವಪುಃ ಕಾಂತತರಾಶ್ಚ ಲೀಲಾ-
ಸ್ತ್ವಯಾ ಸಮಂ ಖೇಲಿತುಮೇಷ ಧತ್ತೇ ||22||

ತಾತ್ಪರ್ಯ :

ಮೇಲೆ ವಿವರಿಸಿದ ಶಿವನ ರೂಪವು ವಿಶೇಷ ಸಂದರ್ಭದಿಂದ ಹುಟ್ಟಿದ್ದು. ನಿನ್ನೊಂದಿಗೆ ಮಧುರ ಕ್ಷಣಗಳನ್ನು ಕಳೆಯುವಾಗ ಅವನು ಆಹ್ಲಾದಕರವಾದ ರೂಪವನ್ನು ಧರಿಸಿ ಸಂತೋಷವನ್ನುಂಟು ಮಾಡುವ ನಡವಳಿಕೆಯನ್ನು ಪ್ರದರ್ಶಿಸುವನು.

ವಿವರಣೆ :

ಮಹಾದೇವನು ಹಿಂದಿನ ಶ್ಲೋಕದಲ್ಲಿ ಹೇಳಿದ ಶೃಂಗಾರರಸ ವಿರೋಧೀ ರೂಪಗಳನ್ನು ಬೇರೆ ಸಮಯದಲ್ಲಿ ಧರಿಸುವನು. ನಿನ್ನೊಡನಿರುವಾಗ ಅತ್ಯಂತ ಆಕರ್ಷಕವಾದ ರೂಪವನ್ನು ಪಡೆದಿರುತ್ತಾನೆ ಮತ್ತು ಪರಮ ಮನೋಹರವಾದ ಲೀಲೆಗಳನ್ನು ಪ್ರದರ್ಶಿಸಿ
ನಿನ್ನನ್ನು ಸಂತೋಷಗೊಳಿಸುತ್ತಾನೆ.

ಸಂಸ್ಕೃತದಲ್ಲಿ :

ಪ್ರಹೃಷ್ಟಯಕ್ಷಃ ಸಮವೇತಸಿದ್ಧೋ
ನೃತ್ಯದ್ಗಣೇಂದ್ರೋ ವಿಕಸನ್ಮುನೀಂದ್ರಃ
ಭೂಯೋsಪಿ ಯೋಗೋ ಯುವಯೋರ್ಹಿಮಾದ್ರೌ
ಬಭಾರ ಮಾತರ್ಮಹಮದ್ವಿತೀಯಂ ||23||

ತಾತ್ಪರ್ಯ :

, ಮಾತೆಯೇ ! ನಿನ್ನ ಹಾಗೂ ಶಿವನ ಸಮಾಗಮವಾದಾಗ, ಯಕ್ಷರು ಅತ್ಯಂತ ಆನಂದಿತರಾದರು, ಸಿದ್ಧರೆಲ್ಲರೂ ಒಂದೆಡೆ ಸೇರಿ ಕುಣಿದು ಕುಪ್ಪಳಿಸಿದರು, ಎಲ್ಲ ಶಿವಗಣಗಳೂ ಹರ್ಷದಿಂದ ನಾಟ್ಯವಾಡಿದರು. ಈ ಸಮಾಗಮವು ಹಿಮಾಲಯದಲ್ಲಿ ಸಾಟಿಯಿಲ್ಲದ ವೈಭವ ಮತ್ತು ಉತ್ಸಾಹದಿಂದ ಕೂಡಿತ್ತು.

ಇದು ಸತಿಯ ಪುನರ್ಜನ್ಮದಲ್ಲಿ ಪಾರ್ವತಿಯಾಗಿ ಜನ್ಮತಾಳಿ ಶಿವನೊಂದಿಗೆ ಎರಡನೇ ಬಾರಿ ಹಿಮಾಲಯದಲ್ಲಿ ಸಮಾಗಮವಾದ ಸಮಯವನ್ನು ಸೂಚಿಸುತ್ತದೆ.

ವಿವರಣೆ :

ತಾಯಿಯೆ ! ನೀವಿಬ್ಬರೂ ಹಿಮಾಚಲದಲ್ಲಿ ಪುನರ್ಮಿಲನವನ್ನು ಪಡೆದಾಗ ದೇವಯೋನಿಗಳಾದ ಯಕ್ಷರೆಲ್ಲರೂ ಸಂತೋಷಗೊಂಡರು. ಸಿದ್ಧರೆಲ್ಲರೂ ಒಂದೆಡೆ ಸೇರಿದರು. ಪ್ರಮಥಗಣಗಳು ಕುಣಿದು ಕುಪ್ಪಳಿಸಿದವು. ತಾಪಸರೆಲ್ಲರೂ ಉಲ್ಲಸಿತರಾದರು. ಹೀಗೆ ನಿಮ್ಮೀರ್ವರ ಸಮಾಗಮವು ಅನುಪಮವಾದ ದೊಡ್ಡ ಉತ್ಸವವೇ ಆಯಿತು.

ಸಂಸ್ಕೃತದಲ್ಲಿ :

ಮಹೇಶ್ವರಸ್ತ್ವಾಂ ಪರಿಣೀಯ ಲೇಭೇ
ಯಾವಾತ್ಮಜೌ ದ್ವಾವನಘಾಂಗಿ ಮುಖ್ಯೌ
ಏಕಸ್ತಯೋರ್ಭ್ರಾಮ್ಯತಿ ವಿಶ್ವಮತ್ತುಂ
ಭೂಭೃತ್ತಟೀರಾಶ್ರಯತೇ ಬತಾನ್ಯಃ ||24||

ತಾತ್ಪರ್ಯ :

, ಪಾಪರಹಿತ ದೇವಿಯೆ ! ನಿನ್ನನ್ನು ವಿವಾಹವಾದ ನಂತರ ಶಿವನು ಎರಡು ಮಕ್ಕಳನ್ನು ಪಡೆದನು. ಅವರಲ್ಲಿ ಒಬ್ಬನು, ಗಣೇಶ, ಆಹಾರವನ್ನು ಅರಸುತ್ತಾ ಸಮಸ್ತ ವಿಶ್ವವನ್ನು ಸುತ್ತುವನು ಮತ್ತು ಇನ್ನೊಬ್ಬ, ಷಣ್ಮುಖನು, ಪರ್ವತದ ಗಿರಿ, ಕಂದರಗಳಲ್ಲಿ ಆಶ್ರಯವನ್ನು ಪಡೆಯುವನು.

ಗಣಪತಿಯು ಭಕ್ತರು ನಡೆಸುವ ಪುಣ್ಯಕಾರ್ಯಗಳಲ್ಲಿ ಬಂದೊದಗುವ ವಿಘ್ನಗಳನ್ನು ನಿವಾರಿಸಿ, ಆಶೀರ್ವದಿಸಲು ಪ್ರಪಂಚ ಪರ್ಯಟನವನ್ನು ಮಾಡುವನು ಮತ್ತು ಷಣ್ಮುಖನು, ತನ್ನ ಭಕ್ತರ ಹೃದಯ ಕಣಿವೆಗಳಲ್ಲಿ ವಾಸಿಸುತ್ತಿದ್ದು ಅವರಿಗೆ ಜ್ಞಾನವನ್ನು ನೀಡುವನು.

ವಿವರಣೆ :

ಅನಪಾಂಗಿಯೆ ! ಮಹೇಶ್ವರನು ನಿನ್ನನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದನು. ಅದರಲ್ಲಿ ಒಬ್ಬನು ಆಹಾರಕ್ಕಾಗಿ ಪ್ರಪಂಚವನ್ನೇ ಸುತ್ತುತ್ತಾನೆ (ಗಣಪತಿಯ ಭೋಜನಪ್ರಿಯತೆ ಪ್ರಸಿದ್ಧವಾದುದಾಗಿದೆ). ಇನ್ನೊಬ್ಬನು ಗಿರಿಪ್ರದೇಶಗಳಲ್ಲಿ ಸುತ್ತುತ್ತಾನೆ. ಏಕೆಂದರೆ ಅವನಿಗೆ ಗುಹನೆಂದೇ ಪ್ರಸಿದ್ಧಿಯಿದೆ. ಅವನಿಗೆನಗರಂಧ್ರಕೃತ್ಮತ್ತು ಗುಹನೆಂಬ ಹೆಸರಿದೆ.

ಸಂಸ್ಕೃತದಲ್ಲಿ :

ಸಂಕೀರ್ತಯಂತ್ಯೋ ಜಗತಾಂ ಜನನ್ಯಾಃ
ಕಲ್ಯಾಣವಾರ್ತಾಃ ಕಮನೀಯಕೀರ್ತೇಃ
ಇಮಾಃ ಪ್ರಮೋದಾಯ ಸತಾಂ ಭವಂತು
ಸಂದರ್ಭಶುದ್ಧಾ ಉಪಜಾತಯೋ ನಃ ||25||                             125

ತಾತ್ಪರ್ಯ :

ಉಪಜಾತಿವೃತ್ತಂನಲ್ಲಿ ರಚಿಸಿರುವ ಈ ಮಾತೆಯ(ಪಾರ್ವತಿಯ) ಶಿವನೊಂದಿಗಿನ ವಿವಾಹ ಹಾಗೂ ನಂತರದ ಘಟನೆಗಳು ಸಮಸ್ತರನ್ನೂ ಮೋಡಿಮಾಡುವ ಹಾಗೂ ಶ್ಲಾಘಿಸುವ ಶ್ಲೋಕಗಳು ಜ್ಞಾನಿಗಳನ್ನು ಸಂತೋಷಪಡಿಸಲಿ.

ವಿವರಣೆ :

ಪರಮ ರಮಣೀಯವಾದ ದೇವಿಯ ಈ ವಿವಾಹದ ವಿಚಾರಗಳನ್ನು ಹೇಳಿ, ಕೇಳಿ ಆನಂದಿಸುವವರಿಗೆ ಈ ಶುದ್ಧವಾದ ವಾಕ್ಯಗಳಿಂದ ಶುದ್ಧವಾಗಿರುವ ಮತ್ತು ಉಪಜಾತಿ ಛಂದಸ್ಸಿನಲ್ಲಿ ಕಟ್ಟಲ್ಪಟ್ಟಿರುವ ಈ ಶ್ಲೋಕಗಳು ಮಂಗಳವನ್ನುಂಟುಮಾಡಲಿ.

ಇಲ್ಲಿಗೆ ಎರಡನೇ ಶತಕದ ಐದನೆಯ ಸ್ತಬಕವು ಸಮಾಪ್ತಿಯಾಯಿತು.




Comments