ಪುಷ್ಪಗುಚ್ಛ
(ಸ್ತಬಕ)
- 2
ಸರ್ಗಾದಿವರ್ಣನಂ
ಛಂದಸ್ಸು-
ಪಂಚಚಾಮರವೃತ್ತಂ
ಶಿವ ಮತ್ತು ಶಕ್ತಿಯರ
ಸ್ಪಷ್ಟ ಮತ್ತು ಅಸ್ಪಷ್ಟ ರೂಪ ಹಾಗೂ ಅವರಿಬ್ಬರ ನಡುವಿನ ಅತೀಂದ್ರಿಯ ಬಂಧನವನ್ನು ವಿವರಿಸಿ ಮತ್ತು
ಅದನ್ನು ಸ್ಥಾಪಿಸುವುದೇ ಈ ಸ್ತಬಕದ ವಿಷಯ.
ಕವಿಯು ಇಲ್ಲಿ ಸೂಕ್ಷ್ಮವಾಗಿ ಸೃಷ್ಟಿಯ ರಚನೆಯನ್ನು ವಿವರಿಸಿ
ನಂತರ ತನ್ನ ಇಷ್ಟದೈವವಾದ ಉಮಾ ದೇವಿಯನ್ನು
“ಪಂಚಚಾಮರ ಛಂದಸ್ಸಿನಲ್ಲಿ” ಸ್ತುತಿಸುತ್ತಾರೆ.
ಸಂಸ್ಕೃತದಲ್ಲಿ
:
ಸಹಾದರೇಣ ಯೋ ವಲಕ್ಷಪಾರಿಜಾತಮಾಲಯಾ
ಗಲಸ್ಥಲೀವಿಭೂಷಯಾ ಧ್ವನಿಂ
ವಿನೈವ ಭಾಷತೇ
ಮಹೇಶಪುಣ್ಯಯೋಷಿತೋ
ಮನೋಜ್ಞಹಾಸ ಏಷ ಮೇ
ವಿಭೂತಯೇ ಪ್ರಕಲ್ಪತಾಂ
ವಿಧೂತಯೇ ಚ ಪಾಪ್ಮನಾಮ್ ||1||
ತಾತ್ಪರ್ಯ :
ಮಹೇಶ್ವರನ ಪ್ರಶಂಸನೀಯ
ಪತ್ನಿ, ಉಮಾದೇವಿಯ ಮನಮೋಹಕ ಮುಗುಳು ನಗೆಯು ಅವಳ ಕುತ್ತಿಗೆಯಲ್ಲಿ ಆಭರಣದಂತೆ
ಕಂಗೊಳಿಸುವ ಶ್ವೇತವರ್ಣದ ಪಾರಿಜಾತ ಮಾಲೆಯೊಂದಿಗೆ ರಹಸ್ಯವಾಗಿ ಹಾಗೂ ವಿನಯದಿಂದ ಸಂಭಾಷಣೆಯಲ್ಲಿ ನಿರತವಾಗಿರುವಂತೆ
ಕಾಣುತ್ತಿದೆ. ಉಮಾದೇವಿಯು ನನಗೆ ಅಭ್ಯುದಯವನ್ನು ದಯಪಾಲಿಸಿ ಮತ್ತು ನನ್ನ ಪಾಪಗಳನ್ನು
ನಿರ್ಮೂಲಮಾಡಲಿ ಎಂದು ಪ್ರಾರ್ಥಿಸುವೆ.
ಇಲ್ಲಿ ದೇವಿಯ ಮಂದಹಾಸ ಮತ್ತು ಪಾರಿಜಾತ ಮಾಲೆಗಳಲ್ಲಿ ಸಾರೂಪ್ಯವಿರುವುದರಿಂದ
ಇದು ಸಮಾಲಂಕಾರ.
ವಿವರಣೆ :
ದೇವಿಯ ನಿರ್ಮಲವಾದ
ಮುಗುಳ್ನಗೆ ಹಾಗೂ ಶ್ವೇತವರ್ಣದ ಪಾರಿಜಾತ ಪುಷ್ಪವು ಪರಸ್ಪರ ಹೋಲಿಕೆಯುಳ್ಳದ್ದಾಗಿದೆ. ಪುಣ್ಯ (ಪುಣ್ಯಯೋಷಿತ) ಪದವನ್ನು “ಸತ್ಕಾರ್ಯದ
ಫಲ”ವೆಂದು ಅರ್ಥೈಸಿದಾಗ “ಶಿವನ
ಸತ್ಕಾರ್ಯಗಳ ಫಲವೇ ಪಾರ್ವತಿ”ಯೆಂದೂ ಅರಿಯಬಹುದು. ಇದರ
ಮುಂದುವರೆದ ಅರ್ಥವೆಂದರೆ ಪಾರ್ವತಿಯು ತನ್ನ ತಪಸ್ಸಿನ ಫಲವಾಗಿ ಶಿವನನ್ನು ಪತಿಯನ್ನಾಗಿ ಪಡೆದರೆ ಶಿವನೂ
ಸಹ ತನ್ನ ತಪಸ್ಸಿನ ಫಲವಾಗಿ ಪಾರ್ವತಿಯನ್ನು ಪತ್ನಿಯನ್ನಾಗಿ ಪಡೆದನು.
ಸಂಸ್ಕೃತದಲ್ಲಿ
:
ನಿರಂತರಶ್ರಿತೇ ಸದಾ
ಕೃಪಾರಸಪ್ರವಾಹಿನೀ
ವಿಲಾಸಿನೀತನುರ್ವಿಭೋಃ
ಪುಮಾಕೃತೇರ್ವಿಮೋಹಿನೀ
ಸುಧಾತರಂಗಕಲ್ಪಹಾಸಭಾಸುರಾನನಾ
ಶಿವಾ
ಪದಾಬ್ಜಲಂಬಿನೋ ಧುನೋತು
ಪಾಪ್ಮನಃ ಫಲಂ ಮಮ ||2||
ತಾತ್ಪರ್ಯ :
ಉಮಾ ದೇವಿಯು ತನ್ನಲ್ಲಿ
ಆಶ್ರಯವನ್ನು ಪಡೆದು ಬಂದವರ ಮೇಲೆ ಸತತವಾಗಿ ಆಶೀರ್ವಾದದ ಮಳೆಯನ್ನೇ ಹರಿಸುತ್ತಾಳೆ. ಪುರುಷ
ರೂಪದ ಶಿವನಿಗಾಗಿ ದೇವಿಯು ಆಕರ್ಷಕ ರೂಪವನ್ನು ಧರಿಸುವಳು. ನಾನು
ಅವಳ ಪವಿತ್ರ ಪಾದಪದ್ಮಗಳಲ್ಲಿ ಆಶ್ರಯವನ್ನು ಪಡೆದಿರುವೆ. ಹೊಳೆಯುವ
ಮುಖ ಹಾಗೂ ಅಮೃತಧಾರೆಯಂತಹ ಮಂದಹಾಸವುಳ್ಳ ಶಿವೆ, ದೇವಿಯು ನನ್ನ ಪಾಪಗಳನ್ನು
ಹೊಡೆದೋಡಿಸಲಿ.
ವಿವರಣೆ :
ಇಲ್ಲಿ ಮಹಾಶಕ್ತಿಯನ್ನು
ಪುರುಷಾಕಾರ ಮತ್ತು ವಿಲಾಸಿನೀ ಆಕಾರ ಉಳ್ಳದ್ದನ್ನಾಗಿ, ಎರಡು
ರೀತಿಯಾಗಿ ವರ್ಣಿಸಿರುವುದರಿಂದ ಉಲ್ಲೇಖಾಲಂಕಾರವಾಗುತ್ತದೆ.
ಸಂಸ್ಕೃತದಲ್ಲಿ
:
ಕರೋತಿ ಯಾ ಬಿಭರ್ತಿ
ಯಾ ನಿಹಂತಿ ಯಾ ಜಗತ್ತ್ರಯಂ
ಸಮಂತತೋ ವಿಭಾತಿ ಯಾ
ನ ದೃಶ್ಯತೇ ಕ್ವಚಿಚ್ಚ ಯಾ
ಅತೀವ ಗುಪ್ತರೂಪಿಣೀ
ಗುರೂಪದೇಶಮಂತರಾ
ನ ಶಕ್ಯತೇ ಬುಧೈಶ್ಚ
ಬೋದ್ಧುಮಂಧಕಾರಿಸುಂದರೀ ||3||
ತಾತ್ಪರ್ಯ :
ಅಂಧಕಾಸುರನ ಶತ್ರುವಿನ
ಪತ್ನಿ, ಸೃಷ್ಟಿ, ಸ್ಥಿತಿ, ಲಯಗಳ
ಕಾರಣೀಭೂತಳು, ದೇವಿ ಉಮಾ. ಅವಳು ಎಲ್ಲೆಲ್ಲೂ ಪ್ರಕಾಶಮಾನಳಾಗಿ
ಬೆಳಗುತ್ತಿದ್ದರೂ ಭೌತಿಕ ನೇತ್ರಗಳಿಗೆ ಕಾಣಿಸಳು. ಮಾರ್ಗದರ್ಶಕನಿಂದ ವಿಧಿವತ್ತಾದ ಮಾರ್ಗದರ್ಶನವಿಲ್ಲದೇ ಜ್ಞಾನಿಗಳಿಗೂ ಸಹ ಗ್ರಹಿಸಲಸಾಧ್ಯ, ದೇವಿಯ
ಅತ್ಯಂತ ನಿಗೂಢ ರೂಪ.
ವಿವರಣೆ :
ಸಮಸ್ತ ಸೃಷ್ಟಿ, ಸ್ಥಿತಿ, ಲಯಗಳ
ಕಾರಣೀಭೂತವಾದ ಶಕ್ತಿಯು ಭೌತಿಕ ಕಣ್ಣುಗಳಿಗೆ ಕಾಣಿಸುವುದಿಲ್ಲ. ಅವಳು
ಉತ್ಕೃಷ್ಟತೆಯಲ್ಲಿ ನಿಗೂಢ ಹಾಗೂ ಕಾಣಿಸದೇ ಇರುವವಳು. ಅವಳನ್ನು
ಸಾಕ್ಷಾತ್ಕರಿಸಿಕೊಳ್ಳುವ ಶಕ್ತಿಯನ್ನುಳ್ಳ ಜ್ಞಾನಿಗಳಿಗೂ ಸಹ ಸ್ವತಃ ಅವಳನ್ನು ಸಾಮಾನ್ಯವಾಗಿ ವೀಕ್ಷಿಸಲಾರರು. ಗುರುವಿನ
ಮಾರ್ಗದರ್ಶನದಿಂದ ಮಾತ್ರ ತೆರೆಯಲ್ಪಟ್ಟ ಅಂತಃಶ್ಚಕ್ಷುವಿನಿಂದ ಮಾತ್ರ ಸರ್ವೋಚ್ಚ ಶಕ್ತಿಯನ್ನು ಗ್ರಹಿಸಲು
ಸಾಧ್ಯ. ದೇವಿಯ ಇರುವಿಕೆಯನ್ನು ಅರಿಯಲು ಹಾಗೂ ಅನುಭವಿಸಲು ಗುರುವಿನ
ದಯೆಯಿರಲೇಬೇಕು.
ಸಂಸ್ಕೃತದಲ್ಲಿ
:
ಮಹಾಂಧಕಾರಬಂಧುರಸ್ಯ
ಭೂತಸಂಚಯಸ್ಯ ಯಾ
ವಿನಿದ್ರಿತಸ್ಯ ಸರ್ವಬೀಜಧಾಮ್ನಿ
ಮೌನಮುದ್ರಿತೇ
ಸಮಂತತೋ ವಿಜೃಂಭಣಾಯ
ಭಾಸನಾಯ ಚಾಭವನ್
ಮಹದ್ವಿಧಾಯ ಚೇಷ್ಟಿತಂ
ಮಮೇಯಮಿಷ್ಟದೇವತಾ ||4||
ತಾತ್ಪರ್ಯ :
ಸಮಸ್ತ ಬೀಜಗಳ ಖಜಾನೆಯೊಳಗಿನ
ಗಾಢಾಂಧಕಾರದಲ್ಲಿ, ನಿಷ್ಕ್ರಿಯವಾಗಿ,ನಿದ್ರಾವಸ್ಥೆಯಲ್ಲಿರುವ
ಸಮಸ್ತ ಜೀವಿಗಳನ್ನೂ ದೇವಿ
ಉಮಾ ಎಚ್ಚರಗೊಳಿಸುವಳು. ಅವರಲ್ಲಿ ಬಾಹ್ಯ ಕ್ರಿಯೆಗಳನ್ನು ಪ್ರಾರಂಭಿಸಲು ಚೈತನ್ಯವನ್ನು
ಉದ್ದೀಪನಗೊಳಿಸುವ ನನ್ನ ಅತ್ಯಂತ ಪ್ರೀತಿಪಾತ್ರ ದೈವವೇ ಉಮಾ.
ವಿವರಣೆ :
ಉಮಾದೇವಿಯು ನಾದಾತೀತವಾಗಿ
ನಿಷ್ಕಂಪವಾಗಿರುವ, ಸಮಸ್ತ ಬೀಜಗಳ ಕಾರಣವಾಗಿರುವ ಸೂಕ್ಷ್ಮಾಕಾಶರೂಪವಾದ ಪರಮಪುರುಷನ
ಶರೀರದಲ್ಲಿ ಲಯಾವಸ್ಥೆಯಲ್ಲಿರುತ್ತಾಳೆ.
ಮಹಾಂಧಕಾರದಲ್ಲಿರುತ್ತಲಿರುವ ಸಮಸ್ತ ಪ್ರಾಣಿ ಸಮೂಹಗಳನ್ನು ಸ್ಪಷ್ಟಗೊಳಿಸಿ
ಅದರದರ ಕಾರ್ಯದಲ್ಲಿ ತೊಡಗಿಸಲು ಮಹತ್ ಕಾಯಕವನ್ನು ಮಾಡಿ, ಸರ್ವಶಕ್ತಳಾದಳು. ಅವಳೇ
ನನ್ನ ಇಷ್ಟದೇವತೆಯಾದ ಉಮಾದೇವಿಯು ಎಂದು ಕವಿಯು ವರ್ಣಿಸುತ್ತಾರೆ.
ಸಂಸ್ಕೃತದಲ್ಲಿ
:
ಮಹೇಶಗರ್ಭತಃ ಸಮಸ್ತಭೂತಬೀಜಕೋಶತಃ
ಕಿರಂತ್ಯಶೇಷವಿಶ್ವಮಪ್ಯಪಾರದಿವ್ಯವೈಭವಾ
ವಿಚಿತ್ರಚೇಷ್ಟಯಾssದ್ಯಯಾ
ವಿಧೂತನಾಥನಿದ್ರಯಾ
ಜಗನ್ನುತಾ ಜಯತ್ಯಸಾವನಾದಿಶಕ್ತಿರದ್ಭುತಾ ||5||
ತಾತ್ಪರ್ಯ :
ದೇವಿ ಉಮಾ ತನ್ನ ನಿಗೂಢವಾದ
ಕ್ರಿಯೆಯಿಂದ ಸೃಷ್ಟಿ ಕಾರ್ಯವನ್ನು ಪ್ರಾರಂಭಿಸುವ ಮೊದಲು ತನ್ನ ಪತಿಯಾದ ಶಿವನನ್ನು ಅವನ ಯೋಗನಿದ್ರೆಯಿಂದ
ಎಬ್ಬಿಸುತ್ತಾಳೆ. ಪರಮಪುರುಷನ ಗರ್ಭದಿಂದ ಅವಳು ಸಮಸ್ತವಿಶ್ವವನ್ನೂ ಹೊರತರುತ್ತಾಳೆ. ಎಲ್ಲರಿಂದಲೂ
ಪ್ರಶಂಸಿಸಲ್ಪಟ್ಟ ಆ ಅದ್ಭುತ ಕಾಲಾತೀತ ಶಕ್ತಿಗೆ ಜಯವಾಗಲಿ.
ವಿವರಣೆ :
ಈಶ್ವರನನ್ನು ಅವನ ಯೋಗನಿದ್ರೆಯಿಂದ
ಎಚ್ಚರಿಸದಿದ್ದರೆ ದೇವಿಯ ಸೃಷ್ಟಿ ಕ್ರಿಯೆಯು ಆಗುವುದೇ ಇಲ್ಲ. ಅವನ
ಗರ್ಭದೊಳಗೆ ಬೀಜರೂಪದಲ್ಲಿರುವ ಸಮಸ್ತವನ್ನೂ ಶಕ್ತಿಯ ಅದ್ಭುತ ಶಕ್ತಿಯೇ ಅಭಿವ್ಯಕ್ತಿಗೊಳಿಸುವುದು. ಮಹಾದೇವನು
ವಿಶ್ವದ ವಸ್ತುಕಾರಣವಾದರೆ, ಶಕ್ತಿಯು ನಿಮಿತ್ತಕಾರಣ. ಆದ್ದರಿಂದ
ಶಿವನನ್ನು ಯೋಗನಿದ್ರೆಯಿಂದ ಹೊರತರುವ ದೇವಿಯ ಕಾರ್ಯವೇ ವಿಶ್ವದ ಅಭಿವ್ಯಕ್ತಿಗೆ ಅತ್ಯಂತ ಮಹತ್ತರವಾದ
ಕಾರ್ಯ. ವಿಶ್ವ ಸೃಷ್ಟಿಗೆ ಎರಡೂ ಅತಿಮುಖ್ಯವಾದದ್ದು.
ಸಂಸ್ಕೃತದಲ್ಲಿ
:
ಭವಂ ಭಣಂತಿ ತಾಂತ್ರಿಕಾಸ್ತ್ವದಾಶ್ರಯಂ
ತಮವ್ಯಯಂ
ಸಮಾಮನಂತಿ ವೈದಿಕಾಃ
ಸದರ್ಚಿತೇ ಸದಾಹ್ವಯಂ
ನ ಕಶ್ಚಿದರ್ಥಭೇದ ಏತದಾಖ್ಯಯೋರ್ಧ್ವಯೋರ್ಭವೇ-
ದ್ಭಿದೇಯಮಾದಿಮಂ ಪದಂ
ಪುಮಾನ್ಪರಂ ನಪುಂಸಕಮ್ ||6||
ತಾತ್ಪರ್ಯ :
ಸಾತ್ವಿಕರಿಂದ ಪೂಜಿಸಲ್ಪಟ್ಟ
ಭಗವಂತನಲ್ಲಿ ತಂತ್ರಶಾಸ್ತ್ರ ಪ್ರಮಾಣವನ್ನು ಒಪ್ಪುವವರು ನಿನ್ನ ಆಶ್ರಯದಲ್ಲಿರುವ ಅಕ್ಷಯವಾದ ಆ ಪುರುಷನನ್ನು
ಭವನೆಂದು ಕರೆಯುತ್ತಾರೆ. ವೈದಿಕರು ಅವನನ್ನು ಸತ್ ಎಂದು ಕರೆಯುವರು. ಸತ್
ಹಾಗೂ ಭವ ಎಂಬ ಎರಡು ಪದಗಳಿಗೂ ಅರ್ಥಭೇದವಿಲ್ಲ. “ಭವತೀತಿ ಭವಃ” ಭೂ
ಸತ್ತಾಯಾಂ ಎಂಬ ಧಾತುವಿನಿಂದ ನಿಷ್ಪನ್ನವಾದ ಶಬ್ದವು. “ಅಸ್ತೀತಿ
ಸತ್” ಅಸಭುವಿ ಎಂಬ ಧಾತುವಿನಿಂದ ಉಂಟಾದ ಶಬ್ದವು. ಇವುಗಳಲ್ಲಿ
ಲಿಂಗಭೇದ ಮಾತ್ರ ಇದೆ. ಮೊದಲನೇ ಶಬ್ದ ಭವವು ಪುಲ್ಲಿಂಗವಾದರೆ ಎರಡನೇ ಶಬ್ದ ಸತ್ ನಪುಂಸಕ
ಲಿಂಗ.
ಸಂಸ್ಕೃತದಲ್ಲಿ
:
ಸ ಚೇದ್ಭವೋsಭಿಧಾನತೋ
ಭವಾನ್ಯಸಿ ತ್ವಮವ್ಯಯೇ
ಸಮೀರ್ಯತೇ ಸ ಸದ್ಯದಿ
ತ್ವಮಂಬ ಭಣ್ಯಸೇ ಸತೀ
ನ ತೇsಸ್ತಿ
ಭಾವತಾ ನ ಶಕ್ತಿರೂಪಿಣೀ ಹಿ ವಿದ್ಯಸೇ
ನ ವೇದ್ಮಿ ಕಾಲಿಕೇ
ಕಥಂ ಸತೋsಸತಶ್ಚ ಭಿದ್ಯಸೇ ||7||
ತಾತ್ಪರ್ಯ :
ಓ, ಚಿರಂತನ
ದೇವಿಯೇ! ಶಿವನನ್ನು ಭವ ಎಂದು ಕರೆದರೆ ನೀನೇ ಭವಾನಿ. ಓ, ಮಾತೆ! ಶಿವನನ್ನು
ಸತ್ ಎಂದು ಪರಿಗಣಿಸಿದರೆ ನೀನು ಸತಿ.
ಸತ್ ನ ಅಸ್ತಿತ್ತ್ವ ಹಾಗೂ ಶಕ್ತಿಸ್ವರೂಪವೇ ನೀನು. ಓ, ಕಾಲಿಕೆ ! ನಿನ್ನನ್ನು
ಹೇಗೆ ಅಸತ್ ಎಂದು ಕೆಲವರು ಪರಿಗಣಿಸುತ್ತಾರೆ ಎಂಬುದನ್ನು ನಾನರಿಯೆ.
ಕವಿಯ ಪ್ರಕಾರ ಅವರು
ವಿಶ್ವದ ಉಗಮದ ಮೂಲವಾದ ಉಮಾ ದೇವಿಯನ್ನು ಅಸತ್ ಎಂದು ಪರಿಗಣಿಸುವುದನ್ನು ಊಹಿಸಲಸಾಧ್ಯ ಎನ್ನುತ್ತಾರೆ.
ಸಂಸ್ಕೃತದಲ್ಲಿ
:
ಜಗದ್ವಿಧಾನಕಾರ್ಯತಃ
ಪುರಾ ಸುರಾಸುರಸ್ತುತೇ
ತ್ವಮಂಬ ಜೀವಿತಂ ಭವಸ್ಯಭಾವಮೂಲವಾದಿನಾಂ
ವಿಕಲ್ಪವರ್ಜಿತಾ ಮತಿಃ
ಪ್ರಬೋಧಮೂಲವಾದಿನಾಂ
ರಸೋsನಪೇಕ್ಷ
ಉತ್ತಮಃ ಪ್ರಮೋದಮೂಲವಾದಿನಾಮ್
||8||
ತಾತ್ಪರ್ಯ :
ದೇವಾಸುರರಿಂದ ಅರ್ಚಿತಳಾದ
ಓ, ಮಾತೆಯೇ ! ಜಗತ್ತು ಸೃಷ್ಟಿಯಾಗುವ
ಮೊದಲು ಅಭಾವವಿತ್ತು ಎಂದು ಕೆಲವರು ಹೇಳುತ್ತಾರೆ. “ದೇವಾನಾಂ ಪೂರ್ವ್ಯೇ
ಯುಗೇ ಅಸತಃ ಸದಜಾಯತ” “ಅಸದ್ವಾ ಇದ ಮಗ್ರ ಆಸೀತ್” ಇತ್ಯಾದಿ
ವೇದವಾಕ್ಯವು ಜಗತ್ತಿನ ಮೂಲವು ಅಭಾವವೆಂದು ಹೇಳುತ್ತವೆ. ಆಗಲೂ
ನೀನೇ ಅವರ ಜೀವಿತವಾಗುತ್ತೀಯೆ.
ಚಿತ್ಸ್ವರೂಪವೇ ಜಗತ್ತಿನ ಮೂಲವೆಂದು ಹೇಳುವವರ ಮತದಲ್ಲಿ ಚಿತ್ಸ್ವರೂಪವೇ
ನೀನಾಗುತ್ತೀಯೆ. ಹಾಗೆಯೇ ಜಗತ್ತಿನ ಮೂಲವು ಆನಂದವೆಂದು ಹೇಳುವವರ ಮತದಲ್ಲಿ ನೀನೇ
ಆನಂದಸ್ವರೂಪಳಾಗಿ ಜಗತ್ತಿನ ಮೂಲವಾಗುತ್ತೀಯೆ.
ಒಟ್ಟಿನಲ್ಲಿ ಯಾರು ಯಾವುದನ್ನೇ ಆಗಲಿ ಜಗತ್ತಿನ ಮೂಲವೆನ್ನುತ್ತಾರೋ
ಅದೆಲ್ಲವೂ ನೀನೇ ಆಗಿರುತ್ತೀಯೆ ಎಂದು ಭಾವ.
ಸಂಸ್ಕೃತದಲ್ಲಿ
:
ಭವತ್ಯಸಾವತೋ ಭವಾನ್ಯನಾದಿರಂತವರ್ಜಿತಾ
ಜಗಂತಿ ಮಾತಿ ನಿತ್ಯಮೋರಸೌ
ತದಭ್ಯುಧಾಯ್ಯುಮಾ
ರಸಾತ್ಮಿಕೋಶ್ಯತೇsಖಿಲೈರಸೌ
ತತಃ ಶಿವೋಚ್ಯುತೇ
ಪರೈವಮೀಶಿತುಶ್ಚಿತಿಸ್ತ್ರಿಧಾ
ಬುಧೈರುದೀರ್ಯತೇ ||9||
ತಾತ್ಪರ್ಯ :
ಸತ್ ಎಂಬ ಮಹಾನ್ ಶಕ್ತಿಸ್ವರೂಪದಲ್ಲಿ
ಅನಂತಕಾಲದಲ್ಲಿ ಅಸ್ತಿತ್ವದಲ್ಲಿರುವುದ ರಿಂದ
(ಭವ) ಈ
ಶಕ್ತಿಯೇ ಭವಾನಿ. “ಉ”
ಅಕ್ಷರದ ಮೂಲಕ ವಿಶ್ವಸೃಷ್ಟಿಯಾಗಿರುವುದರಿಂದ ಅದನ್ನು ಅಳೆಯಲು
ಶಕ್ತಿಯಿರುವುದು ಕೇವಲ ಉಮಾ ದೇವಿಗೆ ಮಾತ್ರ.
ಮತ್ತೊಂದು ರೀತಿಯಲ್ಲಿ ನೋಡಿದರೆ ಅವಳೇ ಶಿವನ ಅಳೆಯಲಾಗದ ಶಕ್ತಿ. ಅವಳನ್ನು “ಶಿವಾ” ಎಂದೂ
ಕರೆಯಲಾಗುವುದೇಕೆಂದರೆ ರಸ ಹಾಗೂ ಆನಂದಗಳ ಅಭಿವ್ಯಕ್ತಿಯೆಂದು.ಜ್ಞಾನಿಗಳು
ಈಶ್ವರನ ಪರಾಚಿತ್ ನ ಮೂರು ಶಕ್ತಿಗಳನ್ನು
“ಭವಾನಿ”, “ಉಮ” ಮತ್ತು “ಮ” ಎಂಬುದಾಗಿ
ಗೊತ್ತುಪಡಿಸಿರುವರು.
ಇದೇ ಸ್ತೋತ್ರದ ಮತ್ತೊಂದೆಡೆಯಲ್ಲಿ
ಕವಿಯು ಅ ಉ ಮ ಅಕ್ಷರಗಳ ಸಂಯೋಗದಿಂದ ಉಂಟಾದ “ಓಂ” ಕಾರವನ್ನು
ತಿರುಗುಮುರುಗಾಗಿ ಉಚ್ಚರಿಸಿದಲ್ಲಿ ಅದು ಉಮಾ ಎಂದಾಗುತ್ತದೆ ಎನ್ನಬಹುದು.
ವಿವರಣೆ :
“ಅಸೌ ಭವತಿ” ಇವಳು ಇರುತ್ತಾಳೆ ಎಂಬ
ನಿರ್ವಚನಕ್ಕೆ ಅನುಸಾರವಾಗಿ “ಭವಾನೀ”
ಎಂದು ಕರೆಯಲ್ಪಡುತ್ತಾಳೆ. ಅವಳು
ಆದಿ ಮತ್ತು ಅಂತವಿಲ್ಲದವಳಾಗಿದ್ದಾಳೆ.
“ಉ” ಎಂದರೆ
ಶಿವನಾಗುತ್ತಾನೆ. “ಓಃ”
ಎಂದರೆ ಶಿವನ ಎಂದರ್ಥ. ಮಾಙ-ಮಾನೆ
ಎಂಬ ಧಾತುವಿನಿಂದ “ಮಾ”
ಎಂದರೆ ಅಳೆಯುವುದು ಎಂದರ್ಥ ಬಂದು ಶಿವನಿಂದ ಉತ್ಪನ್ನವಾಗುವ
ವಸ್ತುಗಳನ್ನು ಅಳೆಯುವವಳು ಎಂದಾಗುತ್ತದೆ.
ಮಾ ಎಂದರೆ, ಮಾನಶಕ್ತಿ. ಆ
ಕಾರಣದಿಂದಾಗಿ “ಉಮಾ”
ಎನಿಸಿಕೊಳ್ಳುತ್ತಾಳೆ. ಉಮಾ -- ಉಃ = ಶಿವ, ಓಃ = ಶಿವನ, ಮಾ = ಮಾನಶಕ್ತಿಃ - ಇದು
ಕವಿ ಕಲ್ಪಿತವಾದದ್ದಾದರೂ ತತ್ತ್ವಬೋಧಕವಾಗಿದೆ. ಎಲ್ಲರಿಂದಲೂ ಇವಳು
ರಸಾತ್ಮಿಕೆಯಾಗಿರುವುದರಿಂದ ಶಿವಾ ಎನಿಸಿಕೊಳ್ಳುತ್ತಾಳೆ. ವಶ - ಕಾನ್ತೌ
ಎಂಬ ಧಾತುವಿನಿಂದ ವರ್ಣವ್ಯತ್ಯಾಸದಿಂದ ಉಂಟಾದ ಶಬ್ದವೇ ಶಿವ ಶಬ್ದ. ಆನಂದಸ್ವರೂಪಳಾಗಿರುವುದರಿಂದ
ಎಲ್ಲರಿಂದಲೂ ಆಸೆಪಡಲ್ಪಟ್ಟಿರುವುದರಿಂದ ಶಿವಾ ಎಂದು ಹೇಳಲ್ಪಟ್ಟಿದ್ದಾಳೆ. ಹೀಗೆ
ಈಶ್ವರನ ಪರಾಶಕ್ತಿಯು ಮೂರು ಬಗೆಯಾಗಿ ಹೇಳಲ್ಪಟ್ಟಿದ್ದಾಳೆ.
ಸಂಸ್ಕೃತದಲ್ಲಿ
:
ಚಿತಿಃ ಪರೈವ ಕಾಮನಾ
ರಸೇನ ಕೇನಚಿದ್ಯುತಾ
ಚಿತಿಃ ಪರೈವ ಸರ್ವದಾsಪ್ಯನಸ್ತ್ಯಜಸ್ಯ
ತು ಕ್ರಿಯಾ
ಚಿತಿಃ ಪರೈವ ಗೋಚರಾವಭಾಸಿಕಾ
ಮತಿಃ ಸ್ಮೃತಾ
ತ್ರಿತೈವಮನ್ಯಥಾ ಚಿತೇಶ್ಚಿರಂತನೈರುದೀರ್ಯತೇ ||10||
ತಾತ್ಪರ್ಯ :
ಅತ್ಯುನ್ನತ ಚಿಚ್ಛಕ್ತಿಯು (ಚಿತ್) ಆನಂದದೊಡನೆ
ಐಕ್ಯವಾದಾಗ ಅದೇ ಆಸೆ (ಸಂಕಲ್ಪ)ವಾಗುತ್ತದೆ. ಅಸ್ಪಷ್ಟವಾದ
ಅತ್ಯುನ್ನತ ಚಿಚ್ಛಕ್ತಿಯು ಸದಾ ಕ್ರಿಯೆಯೊಂದಿಗೆ ಸಹಕರಿಸುತ್ತದೆ. ಸರ್ವೋಚ್ಛ
ಜ್ಞಾನವನ್ನು (ಚಿತ್)
ಹೊರಪ್ರಪಂಚವನ್ನು ಗುರುತಿಸುವುದಕ್ಕೆ ಸಹಕಾರಿಯಾಗುವ ವಿವೇಕವೆಂದು
ಕರೆಯುತ್ತಾರೆ. ಹೀಗೆ ಜ್ಞಾನಿಗಳು ಈಶ್ವರನ ಚಿಚ್ಛಕ್ತಿಯನ್ನು ಅಪೇಕ್ಷೆ, ಕ್ರಿಯೆ, ವಿವೇಕಿಯೆಂದು
ಹೊಗಳುವರು.
ವಿವರಣೆ :
ಪರಮೋಚ್ಛ ಜ್ಞಾನವು
ಆನಂದದ ಸಹಯೋಗದೊಂದಿಗೆ ವೇದೋಪನಿಷತ್ತಿನಲ್ಲಿ ಹೇಳಿರುವಂತೆ - “ಅವನು
ಆಶಿಸಿದನು” ತನ್ನ ಇಚ್ಛಾಶಕ್ತಿಯೊಂದಿಗೆ ಕಾರ್ಯಪ್ರವೃತ್ತವಾಗುತ್ತದೆ. “ಸೋ
ಕಾಮಯತ” ಮತ್ತು
“ಸಮಸ್ತ ವಿಶ್ವವನ್ನೂ ಪರಮಾನಂದವೇ ಸೃಷ್ಟಿಸಿದೆ “ಆನಂದೀನ
ಇಮಾನಿ ಭೂತಾನಿ ಜಾಯಂತೆ”. ಅದು ಇಡೀ ವಿಶ್ವದಲ್ಲೂ ಹಾಗೂ ವೈಯುಕ್ತಿಕವಾದ ಎರಡೂ ಹಂತಗಳಲ್ಲಿ ಇಚ್ಛಾಶಕ್ತಿ, ಹಾಗೂ ಕಾಮನಾಶಕ್ತಿಯಾಗುತ್ತದೆ. ಇದರ
ವ್ಯಕ್ತಪಡಿಸುವ ಮಾರ್ಗದಲ್ಲಿ ಅನೇಕ ಬದಲಾವಣೆಗಳಾಗುವುದು ಉದಾ: ಮುಖ್ಯವಾದ
ಕಾಮನೆ, ಸ್ವಾರ್ಥಪೂರಿತ ಪ್ರಚೋದನೆ, ಇತ್ಯಾದಿ. ಯಾವುದೇ
ವಿರೋಧಾಭಾಸವಿದ್ದರೂ ಮೂಲದಲ್ಲಿ ಇರುವುದೇ ಚಿಚ್ಛಕ್ತಿ.
ಪರಮೋಚ್ಚ ಅಸ್ಥಿತ್ವವು
ಪ್ರಕಟಗೊಳ್ಳದೇ ಇದ್ದಾಗಲೂ ಪ್ರರಬ್ರಹ್ಮನ ಚಿಚ್ಛಕ್ತಿಯು ಶಕ್ತಿಯುತವಾಗಿರುತ್ತದೆ. ನಾಸದೀಯ
ಸೂಕ್ತ( ಋಗ್ವೇದ 10.129)ದಲ್ಲಿ ವಿವರಿಸಿರುವಂತೆ - “ಸೃಷ್ಟಿಯ
ಮೊದಲು ಗಾಳಿಯೇ ಇಲ್ಲದಿದ್ದಾಗ ತನ್ನ ಶಕ್ತಿಯಿಂದಲೇ ಅದು ತಾಳಿಕೊಂಡಿತ್ತು”. ಅಂದರೆ
ಉಸಿರಾಟವು ಗಾಳಿಯಿಲ್ಲದಿದ್ದಾಗಲೂ ದ್ರವರೂಪದಲ್ಲಿ ಇತ್ತು ಎಂದು. ಈ
ಶಕ್ತಿಯೇ ಸೃಷ್ಟಿಸ್ಥಿತೆಯೆಡೆಗೆ ಮುಂದುವರೆಯಿತು ಹಾಗೂ ಕ್ರಿಯಾತ್ಮಕ ಶಕ್ತಿಕ್ರಿಯೆಯಾಯಿತು. ಈ
ಕ್ರಿಯಾಶಕ್ತಿಯೇ ಸ್ಥೂಲ ಸೂಕ್ಷ್ಮ ಹಂತದಲ್ಲಿನ ಸಮಸ್ತ ಚಟುವಟಿಕೆಗಳ ಮೂಲದಲ್ಲಿ ವ್ಯಕ್ತವಾಗುವುದು. ದೈವೀಕ
ಅಸ್ಥಿತ್ವದಲ್ಲಿ ಈ ಚಟುವಟಿಕೆಯು ಅಂತರ್ಗತವಾಗಿರುವುದು.
ಕಣ್ಣಿಗೆ ಕಾಣುವ ಪ್ರಪಂಚವನ್ನು
ಗುರುತಿಸಲು ಸಹಾಯಮಾಡುವ ಮತಿಜ್ಞಾನವು (ಜ್ಞಾನ) ಸದಾ
ಚಿಚ್ಛಕ್ತಿಯೊಂದಿಗೆ ಹೊಂದಿಕೊಂಡಿರುತ್ತದೆ.
ಜ್ಞಾನವು, ಅರಿವಿನ ಶಕ್ತಿಯಂತೆ
ಕಾರ್ಯವೆಸಗುವ, ಹಾಗೂ ಅಸ್ಥಿತ್ವವನ್ನು ಪರಿಗಣಿಸಿ ಹಾಗೂ ಅವುಗಳನ್ನು ಅರ್ಥವಾಗುವ
ರೀತಿಯಲ್ಲಿ ರಚಿಸುವುದೇ ಸರ್ವೋಚ್ಚ ಶಕ್ತಿ.
ಸಮಸ್ತ ವಿಶ್ವ ಹಾಗೂ ವೈಯುಕ್ತಿಕ ನೆಲೆಯಲ್ಲಿ ಸಂಪೂರ್ಣ ಜ್ಞಾನದ ಮೂಲವಾದ ಈ ಶಕ್ತಿಯೇ ಜ್ಞಾನಶಕ್ತಿ. ಈ
ಜ್ಞಾನಶಕ್ತಿಯ ಶಾಖೆಗಳು ಅನೇಕ,
ಉದಾಹರಣೆ - ಚಿಂತನೆ, ತರ್ಕ, ಅಂತಃಪ್ರಜ್ಞೆ, ಇತ್ಯಾದಿ.
ಹೀಗಾಗೆ ಅನಾದಿಕಾಲದಿಂದಲೂ
ಜ್ಞಾನಿಗಳು ಈಶ್ವರನ ಚಿಚ್ಛಕ್ತಿಯನ್ನು ಜ್ಞಾನಕ್ರಿಯೆಯ ಸಂಕಲ್ಪಶಕ್ತಿಯೆಂದು ವರ್ಣಿಸುವರು.
ಸಂಸ್ಕೃತದಲ್ಲಿ
:
ಚಿಕೀರ್ಷತಿ ಪ್ರಭೌ
ಜ್ವಲತ್ತ್ವದೀಯಕೀಲಸಂತರ್ತೇ -
ವಿಕೀರ್ಣಧೂಮಜಾಲಮೇತದಂಬರಸ್ಥಲಂ
ತತಂ
ವಿಸೃಷ್ಟಿತಃ ಪುರಾsಸಿ
ಯಾ ಶಿವಪ್ರಭುತ್ವರೂಪಿಣೀ
ಪೃಥಕ್ಪ್ರಭುಶ್ಚ ಲಕ್ಷಿತಾsಸಿ
ಸಾ ಸವಿತ್ರಿ ಪುಷ್ಕರೇ ||11||
ತಾತ್ಪರ್ಯ :
ಈಶ್ವರನು ವಿಸ್ತಾರವಾದ
ಈ ಆಕಾಶವನ್ನು ಜ್ವಲಿಸುತ್ತಿರುವ ನಿನ್ನ ಜ್ವಾಲಾಮಾಲೆಯಿಂದ ಎರಚಲ್ಪಟ್ಟ ಧೂಮಜಾಲವುಳ್ಳದ್ದಾಗಿ ಮಾಡಲು
ಬಯಸಿದಾಗ ಸೃಷ್ಟಿಗೆ ಮುಂಚಿತವಾಗೇ ನೀನು ಪ್ರಭುವಾಗಿದ್ದೆಯೋ ಆ ನೀನೇ, ಜಗತ್ತಿನ
ಮಾತೆ! ಆಕಾಶದಲ್ಲಿ ಪೃಥಕ್ ಪ್ರಭುವಾಗಿ ಸೃಷ್ಟಿಗೆ ಆಧಾರವಾದ ವಿಶಾಲ
ಆಕಾಶದಲ್ಲಿ ಸ್ವರೂಪವನ್ನು ಪಡೆಯುವೆ.
ಸೃಷ್ಟಿಪೂರ್ವದಲ್ಲಿ
ಪುರುಷನಿಗಿಂತ ಬೇರೆಯಲ್ಲದೆ ಪ್ರಭುವಾಗಿದ್ದ ಶಕ್ತಿಯು ಸೃಷ್ಟಿಯ ನಂತರವೂ ಬೇರೆಯಾಗಿ ಪ್ರಭುವಾಗಿ ಕಾಣಲ್ಪಡುತ್ತೀಯೆ
ಎಂದು ತಾತ್ಪರ್ಯ.
ಸಂಸ್ಕೃತದಲ್ಲಿ
:
ಪುನರ್ವಿಪಾಕತೋ ಘನೀಭವದ್ಭಿರಕ್ಷಿಗೋಚರೈ -
ಸ್ತತಸ್ತತಃ ಸಮುಜ್ಜ್ವಲೈಃ
ಖಸೂಕ್ಷ್ಮರೇಣುಗೋಲಕೈಃ
ಅಜಾಂಡವೃಕ್ಷಕೋಟಿಕಂದಬೃಂದವದ್ವ್ಯಧಾಃ
ಪುರಾ
ಮಹೇಶದೃಷ್ಟಿಮಯ್ಯುಮೇsಮ್ಬ
ಮಂಡಲಾನಿ ಭಾಸ್ವತಾಮ್ ||12||
ತಾತ್ಪರ್ಯ :
ಕವಿಯು ಈ ಶ್ಲೋಕದಲ್ಲಿ
ಸೃಷ್ಟಿಕ್ರಮವನ್ನು ವಿವರಿಸುತ್ತಾರೆ.
ಹಿಂದಿನ ಶ್ಲೋಕದಲ್ಲಿ ಹೊಗೆಯಂತಿರುವ ಸೂಕ್ಷ್ಮದ್ರವ್ಯಗಳು ಆಕಾಶದಲ್ಲಿ
ಬಿಡಲ್ಪಡುತ್ತವೆ ಎಂಬದನ್ನು ಅರಿತೆವು.
ಪರಿಣಾಮವಿಶೇಷದಿಂದಾಗಿ ಅವುಗಳೇ ಆಕಾಶದಲ್ಲಿ ಸೂಕ್ಷ್ಮವಾದ ರೇಣುಗಳ (ಅಣು) ಪಿಂಡಗಳಿಂದ, ಸೂರ್ಯಮಂಡಲಗಳನ್ನು (ಅಥವಾ
ನಕ್ಷತ್ರಮಂಡಲ) ಉಂಟುಮಾಡಿದೆ. ಅವುಗಳು ಬ್ರಹ್ಮಾಂಡಗಳೆಂಬ
ಸಹಸ್ರ ಕೋಟಿ ಸಂಖ್ಯೆಯ ಮರಗಳ ಬೇರುಗಳಂತೆ
(ಮೂಲಾಂಶ) ಆಕಾಶದಲ್ಲಿ
ನಕ್ಷತ್ರಮಂಡಲಾಕಾರವಾಗಿ ಸ್ಥಾಪಿಸಿದೆ.
ಇಲ್ಲಿ ಅಂಬ ಮತ್ತು
ಮಹೇಶದೃಷ್ಟಿಮಯಿ ಎಂಬ ಎರಡೂ ಸಂಬೋಧನಗಳಾಗಿವೆ.
ಉಪನಿಷತ್ತಿನಲ್ಲಿ “ತದೈಕ್ಷತ” ಎಂಬುದಾಗಿ
ಭಗವಂತನ ಈಕ್ಷಣ(ನೋಟ)ವೇ ಸೃಷ್ಟಿನಿಮಿತ್ತವೆಂದು ಹೇಳಲಾಗಿದೆ. ಆ
ಸೃಷ್ಟಿಯೇ ಜಗನ್ನಿಮಿತ್ತಕಾರಣವಾದ ತಪಶ್ಶಕ್ತಿಯು. ಆದ್ದರಿಂದ “ಮಹೇಶದೃಷ್ಟಿಮಯಿ” ಎಂಬ
ಸಂಬೋಧನೆಯು ಮಹಾಶಕ್ತಿಗೆ ಯುಕ್ತವಾಗಿದೆ.
ಮಹೇಶ್ವರನಿಂದಾಗಿ ನಾನಾ ವಿಧವಾದ ಕೃತ್ಯಪರಾಯಣಳಾಗಿ ಮಹಾಶಕ್ತಿಯು
ಆಗುತ್ತಾಳೆಂದು ಅರಿಯಬೇಕು.
ವಿವರಣೆ :
ಕವಿಯು ಸೌರಮಂಡಲದಿಂದ
ಪ್ರಾರಂಭಿಸಿ ಸೃಷ್ಟಿಕ್ರಮವನ್ನು ವಿವರಿಸುವರು. ಪ್ರತಿಯೊಂದು ಸೌರಮಂಡಲಕ್ಕೂ
ಸೂರ್ಯನೇ ಮೂಲ ಹಾಗೂ ಸೂರ್ಯನನ್ನು ಅನೇಕ ಗ್ರಹಗಳು ವಿಶ್ವದಲ್ಲಿನ ಸಮಸ್ತ ಮರಗಿಡಗಳ ಬೇರಿನಂತೆ ಸುತ್ತುವರೆದಿವೆ. “ದೃಷ್ಟಿ
ದರ್ಶನ” ಶಬ್ದವು ವಿಶ್ವ ಸೃಷ್ಟಿಗೆ ಮೂಲಕಾರಣವೆಂದು ವಿವರಿಸಲಾಗಿದೆ. ಆದ್ದರಿಂದಲೇ, ಇಲ್ಲಿ
ದೇವಿಯನ್ನು ಶಿವನ ತಪಸ್ಸಿನ ಶಕ್ತಿಯನ್ನು ಸೂಚಿಸುವ “ಶಿವನ ದೃಷ್ಟಿ”ಯೆಂದೇ
ಸಂಬೋಧಿಸಲಾಗುವುದು. ಉಪನಿಷತ್ತಿನಲ್ಲೂ ದೃಷ್ಟಿಯನ್ನೇ ಸೃಷ್ಟಿಯ ಮೂಲಕಾರಣವೆಂಬುದಾಗಿ
ವರ್ಣಿಸಲಾಗಿದೆ.
ಸಂಸ್ಕೃತದಲ್ಲಿ
:
ತಪೋಗ್ನಿಧೂಮಜಾಲಕೇ
ಭವಂತಿ ತೈಜಸಾಣವೋ
ಭವಂತಿ ಜೀವನಾಣವೋ ಭವಂತಿ
ಪಾರ್ಥಿವಾಣವಃ
ಕ್ರಮೇಣ ತದ್ವಿಸೃಷ್ಟಿರೀಶಶಕ್ತಿಪಾಕವೈಭವೇ
ಸಹಸ್ರಭಾನುಮಂಡಲಂ ತು
ಗೋಚರಾದಿ ಗೃಹ್ಯತಾಮ್ ||13||
ತಾತ್ಪರ್ಯ :
ತಪೋಗ್ನಿಯ ಧೂಮಸಮೂಹದಲ್ಲಿ
ಆಕಾಶವೆಂಬ ಕ್ಷೇತ್ರದಲ್ಲಿ ಸೃಷ್ಟಿಯ ಆದಿಯಲ್ಲಿ ಅತ್ಯಂತ ಸೂಕ್ಷ್ಮವಾದ ತೇಜಸ್ಸಿಗೆ ಸಂಬಂಧಿಸಿದ ಅಣುಗಳು
ಹುಟ್ಟುವುದು. ಭೂಮಿಗೆ ಸಂಬಂಧಿಸಿದ ಘನವಾದ ಅಣುಗಳುಂಟಾಗುವುದು. ಮೊದಲು
ತೈಜಸವಾದ ಅಣುಗಳು, ನಂತರ ನೀರಿಗೆ ಸಂಬಂಧಿಸಿದ ಅಣುಗಳು, ನಂತರ
ಪಾರ್ಥಿವವಾದ ಅಣುಗಳು ಕ್ರಮವಾಗಿ ಸೃಷ್ಟಿಸಲ್ಪಡುತ್ತವೆ. ಇವುಗಳು
ಈಶ್ವರನ ಕಾರ್ಯಪರಿಪಾಕದ ಪ್ರಭಾವದಿಂದುಂಟಾಗುತ್ತವೆ. ಸೂರ್ಯ ಮಂಡಲವೇ ನಮಗೆ
ಪ್ರತ್ಯಕ್ಷವಾಗುವ ಪದಾರ್ಥಗಳಿಗೆ ಮೂಲ.
ಸಂಸ್ಕೃತದಲ್ಲಿ
:
ಮಯೂಖಮಾಲಿಮಂಡಲೇ ನಿಧಾಯ
ಪಾದಮುಗ್ರಯಾ
ಮಯೂಖಶಕ್ತಿರೂಪಯಾ ತ್ವಯಾsಮ್ಬ
ಚೇಷ್ಟಮಾನಯಾ
ಖಕೋಶತಃ ಸಮಾಹೃತೈಃ
ಪುನಸ್ತ್ರಿರೂಪರೇಣುರ್ಭಿ -
ವ್ಯಧಾಯಿ ಮಂಗಲಾದಿಭಿಃ
ಸಹ ಗ್ರಹೈರಿಯಂ ಮಹೀ ||14||
ತಾತ್ಪರ್ಯ :
ಓ, ದೇವಿಯೇ! ಸೃಷ್ಟಿಕ್ರಿಯೆಯು
ಪ್ರಾರಂಭವಾದಾಗ, ಪ್ರಕಾಶಮಾನವಾದ ಕಿರಣಗಳ ರೂಪದಲ್ಲಿ ನೀನು ಸೂರ್ಯಮಂಡಲದ ಮೇಲೆ
ನಿನ್ನ ಒಂದು ಪಾದವನ್ನು ಭದ್ರವಾಗಿ ಊರಿದೆ.
ನಂತರ ನೀನು ಈ ಭೂಮಿಯನ್ನು, ಮಂಗಳ
ಇತ್ಯಾದಿ ಆಕಾಶಕಾಯಗಳೊಂದಿಗೆ ಮೂರು ವಿಧದ ವಸ್ತುಗಳನ್ನು ಆಕಾಶದಿಂದ ಸೃಷ್ಟಿಸಿದೆ.
ವಿವರಣೆ :
ದೇವಿಯು ತನ್ನ ಪಾದವನ್ನು
ಸೌರವ್ಯೂಹದ ಮೇಲೆ ಭದ್ರವಾಗಿ ಊರುವುದರ ಮೂಲಕ ಭಿನ್ನವಾದ ಗ್ರಹಗಳ ಸೃಷ್ಟಿಯನ್ನು ಸೂಚಿಸಿರುವಳು. ಇದೇ
ವಿವಿಧ ತಾರಾ ವ್ಯವಸ್ಥೆಗಳ ಹಾಗೂ ನಕ್ಷತ್ರ ಸಮೂಹಗಳ ಸೃಷ್ಟಿಯ ಪ್ರಾರಂಭದ ಹಂತ.
ಮತ್ತೊಂದು ರೀತಿಯಲ್ಲಿ, ಆಕಾಶವೆಂಬ
ಮೂಲದಿಂದ ಪುನಃ ತರಲ್ಪಟ್ಟ ತೇಜಸ್ಸು-ನೀರು ಮತ್ತು ಅನ್ನಗಳೆಂಬ ಉಪಾದಾನದ್ರವ್ಯಗಳಿಂದ ಈ ಭೂಮಿಯು ಮಂಗಳಾದಿಗ್ರಹಗಳೊಡನೆ
ನಿರ್ಮಿಸಲ್ಪಟ್ಟಿತು. ದೇವಿಯು ಸೂರ್ಯಮಂಡಲದಲ್ಲಿ ಕಾಲಿಟ್ಟದ್ದು ಮಾಹಾನುಗ್ರವೆಂದು
ಭಾವ.
ಸಂಸ್ಕೃತದಲ್ಲಿ
:
ವಿಸರ್ಜನೇನ ಭೂಯಸಾsಪಿ
ದೇವ್ಯತೃಪ್ತಯೇಯತಾ
ವಿಚೇಷ್ಟಿತಂ ವಿಲಕ್ಷಣಂ
ಪುನರ್ವ್ಯಧೀಯತ ತ್ವಯಾ
ಇಹಾಂತರೇ ವಸುಂಧರಾಮಯೂಖಮಾಲಿಬಿಂಬರ್ಯೋ-
ಅಮುಷ್ಯ ಕರ್ಮಣಃ ಸವಿತ್ರಿ
ಚಂದ್ರಮನ್ಡಲಂ ಫಲಂ ||15||
ತಾತ್ಪರ್ಯ :
ಓ, ದೇವಿಯೇ! ಸೃಷ್ಟಿಕ್ರಿಯೆಯ
ಮೊದಲನೇ ಹಂತದ ಕ್ರಿಯೆಯಿಂದ ನಿನಗೆ ಸಮಾಧಾನವಾಗದೇ ಮತ್ತಷ್ಟು ವಿಸ್ಮಯಕಾರಿ ಕೆಲಸಗಳನ್ನು ಮಾಡಲು ಪ್ರಾರಂಭಿಸಿದೆ. ಹೇ
ಮಾತೆ, ಈ ಮುಂದಿನ ಕೆಲಸಗಳ ಫಲವೇ ಭೂಮಿ ಮತ್ತು ಸೂರ್ಯರ ಮಧ್ಯೆ ಸೃಷ್ಟಿಯಾದ
ಚಂದ್ರಮಂಡಲ.
ವಿವರಣೆ :
ದೇವಿಗೆ ಮಂಗಳಾದಿ ಗ್ರಹಗಳೊಂದಿಗೆ
ಭೂಮಿಯ ಸೃಷ್ಟಿ ಕ್ರಿಯೆಯು ತೃಪ್ತಿಯನ್ನು ತರದೇ ಇದ್ದದ್ದರಿಂದ, ಆಕೆಯು
ವಿಲಕ್ಷಣವಾದ ಮತ್ತೊಂದು ಸೃಷ್ಟಿಗೆ ತೊಡಗಿದಳು ಹಾಗೂ ಅದರ ಫಲವಾಗಿ ಚಂದ್ರಮಂಡಲವು ಸೃಷ್ಟಿಯಾಯಿತು. ಇದು
ಒಂದು ಅದ್ಭುತ ಹಾಗೂ ವಿಸ್ಮಯಕಾರಿ ಸೃಷ್ಟಿ.
ಸಂಸ್ಕೃತದಲ್ಲಿ
:
ವಧೂಪುಮಾಕೃತೀ ತತೋ
ಬಭೂವಥುರ್ಯುವಾಂ ಶಿವೇ
ತ್ವಮೀಶ್ವರಶ್ಚ ಲೀಲಯಾ
ವಿಹರ್ತುಮತ್ರ ವಿಷ್ಟಪೇ
ಅಹೋ ಪ್ರಭುಂ ನಭಸ್ತನುಂ
ತ್ವದೀಯಗರ್ಭಸಂಭವಾ-
ದ್ಭಣಂತಿ ಕಾಲಿ ತತ್ರ
ಚಿತ್ರಭಾಷಣಾಸ್ತ್ವದಾತ್ಮಜಂ ||16||
ತಾತ್ಪರ್ಯ :
ಓ, ಶಿವೆ! ನೀನು
ಮತ್ತು ಈಶ್ವರನು ಹೆಣ್ಣು ಹಾಗೂ ಗಂಡಿನ ರೂಪ ತಾಳಿ ವಿಹರಿಸಲು ಮನಸ್ಸು ಮಾಡಿದಿರಿ. ಓ, ಕಾಳಿಯೇ! ಒಂದು
ವಿಚಿತ್ರವಾದ ಹೇಳಿಕೆಯೆಂದರೆ, ಆಕಾಶರೂಪದಲ್ಲಿರುವ ಶಿವನು ನಿನ್ನ ಸಂತಾನವೆಂದು ಭಾವಿಸುವರು, ಏಕೆಂದರೆ
ನಿನ್ನ ಗರ್ಭದಿಂದ ಶಿವನು ಜನ್ಮಿಸಿದನೆಂದು.
ವಿವರಣೆ :
ಆದಿತ್ಯ ಮಂಡಲದಲ್ಲಿ
ಶಿವನು ಬಂಗಾರದ ಬಣ್ಣವುಳ್ಳ ಪುರುಷ ಆಕಾರವನ್ನು ದೇವಿಯ ಗರ್ಭದಿಂದ ಧರಿಸಿದನು. ಆ
ಪುರುಷನನ್ನೇ ಅದಿತಿಯ ಮಗ ಆದಿತ್ಯನೆಂದು ಕರೆಯುವರು ಹಾಗೂ ಶಕ್ತಿಯನ್ನು ಅದಿತಿಯೆಂದೂ ಕರೆಯುವರು. ಮುಂದಿನ
ಶ್ಲೋಕದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ. ಇಲ್ಲಿ “ಆಕಾರ” ಪದವನ್ನು
ಬರೇ ಕೈ ಕಾಲುಗಳಿಂದ ಕೂಡಿದ ಮನುಷ್ಯಾಕೃತಿಯೆಂದು ಪರಿಗಣಿಸದೇ ಅದನ್ನು ನಿಗೂಢವಾದ ದೈವೀ ಆಕಾರವೆಂದು
ಪರಿಗಣಿಸಬೇಕು.
ಸಂಸ್ಕೃತದಲ್ಲಿ
:
ಪುಮಾನಥೋ ಸ ಬಿಂಬತೋ
ಹಿರಣ್ಮಯೋ ದಿವಾಕರೇ
ಧಿಯಾsಪಿ
ನೈವ ಕೇವಲಂ ಹಿರಣ್ಮಯೇನ ವರ್ಷ್ಮಣಾ
ಇದಂ ತು ಕಾರ್ಯರೂಪಮನ್ಯದುಚ್ಯತೇ
ಬುಧೈಃ ಪ್ರಭೋ-
ರಿಹಾಂತರೇ ನೃಣಾಂ ಪುನರ್ವಪುಸ್ತದಂಬ
ಬಿಂಬಿತಮ್ ||17||
ತಾತ್ಪರ್ಯ :
ಸೂರ್ಯಮಂಡಲದಲ್ಲಿರುವ
ಪುರುಷನು ಕೇವಲ ವಿಗ್ರಹಮಾತ್ರದಿಂದ ಸ್ವರ್ಣರೂಪನಲ್ಲ. ಅವನು
ಜ್ಞಾನದಿಂದಲೂ ಸ್ವರ್ಣಮಯನು. ಆದಿತ್ಯಮಂಡಲದಲ್ಲಿ ವೇದಗಳಲ್ಲಿ ಹೇಳಲ್ಪಡುವ ಯಾವ ಪುರುಷನಿದ್ದಾನೋ
ಅವನು ಕೇವಲ ಆಕಾರಮಾತ್ರದಿಂದಲ್ಲದೆ ಜ್ಞಾನದಿಂದಲೂ ಸ್ವರ್ಣಮಯನು. ಇಲ್ಲಿ
ಸ್ವರ್ಣಮಯ ಎಂದಿರುವುದು “ದಿವ್ಯ”ವೆನ್ನುವ ಅರ್ಥದಲ್ಲಿ, ನಮಗೆ
ಗೊತ್ತಿರುವ ಭೌತಿಕ ಆಕಾರಗಳಿಗಿಂತ ಭಿನ್ನವಾದುದು ಎನ್ನುವುದಕ್ಕಾಗಿ ಎಂದು ಅರಿಯಬೇಕು. “ಹಿತ
ರಮಣೀಯಂ” ಹಿರಣ್ಯಂ ಎಂಬುದಾಗಿ ಅದು ಹಿತವಾಗಿಯೂ ಹಾಗೂ ರಮಣೀಯವಾಗಿಯೂ ಇರುವುದು. ಹೀಗಾಗಿ, ಹೇ ಮಾತೆ! ಜನಗಳ
ಹೃದಯದಲ್ಲಿ ಮತ್ತೊಂದು ರೂಪವು ಸ್ಥಾಪಿತವಾಯಿತು.
ವಿವರಣೆ :
ಶಿವನು ಪ್ರಜ್ವಲಿಸುವ
ಬಂಗಾರದಾಕಾರದ ಮೂಲಕ ಜನಗಳ ಹೃದಯದಲ್ಲಿ ಪ್ರವೇಶಿಸಿದನು. ಇದು
ಬರೀ ಪ್ರತಿಬಿಂಬ ಮಾತ್ರವಲ್ಲದೇ ನಿಜವಾದದ್ದಲ್ಲ. “ಬಂಗಾರದ” ಪದವು
ದೈವೀ ರೂಪವೆಂದು ಸೂಚಿಸುತ್ತದೆ ಮತ್ತು ಬಂಗಾರದಂತಹ ಬುದ್ಧಿಯು ಜ್ಞಾನವನ್ನು ಸೂಚಿಸುತ್ತದೆ. ಮುಂದಿನ
ಶ್ಲೋಕದಲ್ಲಿ ಮತ್ತೊಂದು ರೂಪವನ್ನು ಸೂಚಿಸಿದೆ.
ಸಂಸ್ಕೃತದಲ್ಲಿ
:
ಸ್ವಯಂ ಚ ಕಾಂಚನಪ್ರಕಾಶವರ್ಷ್ಮಣಾ
ಪ್ರಭಾಕರೇ
ತಥಾsನ್ತರೇ
ನೃಣಾಂ ಚ ತಸ್ಯ ಬಿಂಬಿತಾsಸಿ ಸನ್ನಿಧೌ
ರಸಸ್ಯ ದೇವತಾsಸಿ
ದೇವಿ ಪುಷ್ಕರೇ ದಿವಾಕರೇ
ಮಯೂಖದೇವತಾsಸಿ
ಭೋಗದೇವತಾsಸಿ ದೇಹಿಷು ||18||
ತಾತ್ಪರ್ಯ :
ಓ, ದೇವಿ! ನೀನು
ಸೂರ್ಯನಲ್ಲಿರುವ ಬಂಗಾರದ ಪ್ರಭೆಯ ರೂಪದಲ್ಲಿ ಪ್ರಕಟಿತಳಾಗಿರುವೆ. ಈ
ರೂಪವು ಜನಗಳ ಹೃದಯದಲ್ಲಿ ಜ್ಞಾನಜ್ಯೋತಿಯಾಗಿ ಪ್ರತಿಬಿಂಬಿತವಾಗಿದೆ. ನೀನೇ
ಭೂಮಿ ಮತ್ತು ಆಕಾಶದ ನಡುವಿನಲ್ಲಿರುವ ಅಂತರಿಕ್ಷದಲ್ಲಿ ಆನಂದದ ದೇವತೆ (ರಸ) ಹಾಗೂ
ಇದು ಸೋಮ ಶಕ್ತಿಯನ್ನು ಸೂಚಿಸುವುದು
(ಭೋಗ), (ಸೋಮೋ
ವಾ ಅನ್ನಂ ಅಗ್ನಿರನ್ನಾದ ಬ್ರಹ್ಮಣ).
ಸೂರ್ಯನಲ್ಲಿರುವ ಕಾಂತಿದೇವತೆ ಮತ್ತು ಮಾನವರಲ್ಲಿರುವ ಆನಂದದ ದೇವತೆ ಹಾಗೂ ಇದು ಅಗ್ನಿ ಶಕ್ತಿಯನ್ನು
ಪ್ರತಿನಿಧಿಸುತ್ತದೆ (ಭೋಕ್ತ್ರಿತ್ತ್ವ).
ವಿವರಣೆ :
ದೇವಿಯು ಭಾಸ್ಕರನಲ್ಲಿ
ಚಿನ್ನದಂತೆ ಪ್ರಕಾಶಮಾನವಾದ ಆಕಾರ ಉಳ್ಳವಳು ಹಾಗೂ ಈಶ್ವರನ ಸನ್ನಿಧಿಯಲ್ಲಿ ಮತ್ತು ಮನುಷ್ಯರ ಹೃದಯದಲ್ಲಿ
ಬಿಂಬಿತಳಾಗಿರುವಳು. ದೀಪದಲ್ಲಿ ಪ್ರಭೆಯಂತೆ, ಶಕ್ತನಾದವನಲ್ಲಿ
ಶಕ್ತಿಯಂತೆ ಪ್ರಕಾಶಿಸುವಳು. ಭೂಃ,
ಭುವಃ ಮತ್ತು ಸುವಃ ಎಂಬ ತ್ರಿಲೋಕಗಳಲ್ಲೂ ದೇವಿಯು ಬೇರೆ ಬೇರೆ
ಪ್ರಕಟಗೊಳ್ಳುವಳು. ಆಕಾಶದಲ್ಲಿ ರಸ ದೇವತೆಯಾದರೆ ಸೂರ್ಯನಲ್ಲಿ ಮಯೂಖ ದೇವತೆ ಹಾಗೂ
ಮನುಷ್ಯರಲ್ಲಿ ಭೋಗದೇವತೆಯಾಗಿರುವಳು.
ಸಂಸ್ಕೃತದಲ್ಲಿ
:
ವಿಸರ್ಜನೇನ ಭೂಯಸಾ
ನಭಸ್ಯಮುತ್ರ ಭಾಸ್ಕರೇ
ಮಹೀಷು ಚಾಂಬಿಕೇ ಯುವಾಂ
ವಿಧಾಯ ದೇಹಿನೋ ಬಹೂನ್
ಕ್ಷಿತೇಃ ಸುಧಾಕರಂ
ಗತಾನ್ ಪಿತ್ರೂನ್ ವಿನೇತುಮವ್ಯಯೇ
ತನೂ ಚ ತತ್ರ ಬಭ್ರಥುಃ
ಪ್ರಪಂಚರಾಜ್ಞಿ ಮಾಯಯಾ ||19||
ತಾತ್ಪರ್ಯ :
ಓ, ಅಂಬಿಕೆ! ನೀವಿಬ್ಬರೂ
ಸೂರ್ಯಲೋಕ, ಭೂಲೋಕ ಹಾಗೂ ಆಕಾಶಗಳ ಅಗಾಧ್ಸ ಸೃಷ್ಟಿಯನ್ನು ಮಾಡಿರುವಿರಿ. ಓ, ವಿಶ್ವದ
ಸನಾತನ ದೇವಿಯೇ, ನೀವಿಬ್ಬರೂ ತೋರಿಕೆಗಾಗಿ ಜೀವರಾಶಿಗಳು ಚಂದ್ರಲೋಕದೆಡೆಗೆ ಪಯಣಿಸುವ
ಜೀವರಾಶಿಗಳಿಗೆ ಮಾರ್ಗದರ್ಶಿಯಾಗಿರುವಿರಿ.
ದೇವಿಯ ಹಾಗೂ ಈಶ್ವರರ ನಿವಾಸಸ್ಥಾನವು ತ್ರಿಲೋಕ - ಮನುಷ್ಯಲೋಕ, ಪಿತೃಲೋಕ, ದೇವಲೋಕವೆಂದು
ಇಲ್ಲಿ ವಿವರಿಸಲಾಗಿದೆ.
ವಿವರಣೆ :
ಆಕಾಶದಲ್ಲಿ, ಸೂರ್ಯನಲ್ಲಿ, ಭೂಮಿಯಲ್ಲಿ
ಜಗನ್ಮಾತೆಯಾದ ಅಂಬಿಕೆ ಹಾಗೂ ಜಗತ್ತಿಗೆ ಪಿತನಾದ ಮಹಾದೇವ -ಇವರಿಬ್ಬರೂ
ಅಯಯಾ ಲೋಕಗಳಿಗೆ ಉಚಿತವಾದ ಜೀವರಾಶಿಗಳನ್ನು
ಸೃಷ್ಟಿಮಾಡಿ ಭೂಮಿಯ ದೆಸೆಯಿಂದ ಚಂದ್ರಲೋಕಕ್ಕೆ ಧೂಮಮಾರ್ಗದಿಂದ ಹೋದವರನ್ನು ಶಿಕ್ಷಿಸಲು, ಪುರುಷನಾದ
ಈಶ್ವರನೂ, ಶಕ್ತಿಸ್ವರೂಪಿಣಿಯಾದ ದೇವಿಯೂ ಬೇರೆ ಬೇರೆ ನಿಮಗುಚಿತವಾದ ದೇಹಗಳನ್ನು
ಸ್ವೀಕರಿಸಿದಿರಿ. ಹೀಗಾಗಿ ಅವರನ್ನು ಮಾಯಾಶರೀರಧಾರಿಗಳೆಂಬ ಭಾವನೆ.
ಸಂಸ್ಕೃತದಲ್ಲಿ
:
ನಭೋsನ್ತರೇ
ಹಿರಣ್ಮಯಂ ವಿಭುಂ ಪ್ರಚಕ್ಷತೇ ಹರಂ
ದಿನೇಶಬಿಂಬಬಿಂಬಿತಂ
ಭಣಂತಿ ಪಂಕಜಾಸನಂ
ಇಹಾಸ್ಮದಂತರಾಲಯಂ ವದಂತಿ
ವಿಷ್ಣುಮಚ್ಯುತಂ
ಸವಿತ್ರಿ ಜನ್ಮಿನಾಮಿಯಂ
ತ್ರಿಮೂರ್ತಿವಾದಿಧೋರಣಿ ||20||
ತಾತ್ಪರ್ಯ :
ಓ, ಮಾತೆ! ಹಿರಣ್ಯವರ್ಣನು
ಪ್ರಪಂಚದ ಮಧ್ಯದಲ್ಲಿ (ಅಂತರಿಕ್ಷ) ಹರನಾಗಿ ಪ್ರಕಟಗೊಂಡನು, ಸೂರ್ಯನಲ್ಲಿ
ಬ್ರಹ್ಮನೂ ಮತ್ತು ನಮ್ಮೊಳಗಿರುವವನು ಹರಿ
(ವಿಷ್ಣು) ಎಂಬುದಾಗಿ
ತ್ರಿಮೂರ್ತಿಗಳ ಸಿದ್ಧಾಂತಗಳನ್ನು ಪ್ರಚುರಪಡಿಸುವ ಜನಗಳು ಗುರುತಿಸುತ್ತಾರೆ.
ಮೂರು ಲೋಕಗಳಾದ ಭೂಃ, ಭುವಃ, ಸ್ವಃ
ಗಳನ್ನು ನಿರ್ದೇಶಿಸುವ ಪುರುಷನನ್ನು ಪೌರಾಣಿಕ ಹಿನ್ನೆಲೆಯಲ್ಲಿ ತ್ರಿಮೂರ್ತಿಗಳೆಂದು ವರ್ಣಿಸಲಾಗಿದೆ.
ವಿವರಣೆ :
ಸಮಸ್ತ ಜೀವಿಗಳಿಗೆ
ಮಾತೆಯಾದ ಉಮಾದೇವಿಯೇ! ಆಕಾಶದಲ್ಲಿ, ಅದಕ್ಕಿಂತ ಸೂಕ್ಷ್ಮವಾಗಿ
ವ್ಯಾಪಿಸಿರುವ ಹಿರಣ್ಮಯನಾದ ಪುರುಷನನ್ನು ಶಿವನನ್ನಾಗಿ ಆರಾಧಿಸುತ್ತಾರೆ. ಸೂರ್ಯಮಂಡಲದಲ್ಲಿ
ಇರುವ ಪುರುಷನನ್ನು ಬ್ರಹ್ಮನೆಂದೂ,
ಭೂಮಿಯಲ್ಲಿ ನಮ್ಮೆಲ್ಲರ ಶರೀರದಲ್ಲಿ ಹೃದಯವನ್ನು ಆಶ್ರಯಿಸಿ
ಇರುತ್ತಿರುವವನನ್ನು ವಿಷ್ಣುವೆಂದೂ ಹೇಳುವುದು ತ್ರಿಮೂರ್ತಿಗಳ ಸಂಪ್ರದಾಯವಾದಿಗಳ ಸಂಪ್ರದಾಯ.
ಸಂಸ್ಕೃತದಲ್ಲಿ
:
ನಭೋನ್ತರೇ ಪ್ರಚಕ್ಷತೇ
ಹಿರಣ್ಮಯಾಂಗಮೀಶ್ವರಂ
ದಿನೇಶಬಿಂಬಪೂರುಷಂ
ಹಿರಣ್ಯಗರ್ಭಮಾಖ್ಯಯಾ
ವಿರಾಜಮಾನಮಕ್ಷರಂ ವಿರಾಜಮಂತರೇ
ನೃಣಾಂ
ಸವಿತ್ರಿ ತತ್ತ್ವವೇದಿನಾಮಿಯಂ
ತಿ ನಾಮಕಲ್ಪನಾ ||21||
ತಾತ್ಪರ್ಯ :
ಸವಿತ್ರಿಯಾದ ಮಾತೆಯೇ! ಆಕಾಶದಲ್ಲಿರುವ
ಈಶ್ವರನನ್ನು ಹಿರಣ್ಮಯಾಂಗನೆಂದು ಕರೆಯುವರು.
ಸೂರ್ಯಮಂಡಲದಲ್ಲಿರುವ ಈಶ್ವರನನ್ನು ಹಿರಣ್ಯಗರ್ಭನೆಂದೂ, ಮನುಷ್ಯರ
ಹೃದಯಗಳಲ್ಲಿ ವಿರಾಜಮಾನನಾಗಿರುವವನನ್ನು
(ಪ್ರಕಾಶಿಸುತ್ತಿರುವವನನ್ನು) ವಿರಾಜನೆಂದೂ
ವೇದಾಂತಿಗಳು ನಾಮಕಲ್ಪನೆಯನ್ನು ಮಾಡುವರು.
ವಿವರಣೆ :
ಯಾವಾಗ ಸದಾಚಾರದ ಉಲ್ಲಂಘನೆಯಾಗುವುದೋ, ಯಾವಾಗ
ಜನಗಳು ಸನ್ಮಾರ್ಗವನ್ನು ತೊರೆಯುತ್ತಾರೋ ಮತ್ತು ದುಷ್ಟತನವು ಪ್ರಾಬಲ್ಯವಾದಾಗ, ಹಿರಣ್ಯಗರ್ಭನಿಂದ
ಬೆಳಕಿನ ಕಿರಣವೊಂದು ಅವತಾರ ರೂಪದಲ್ಲಿ ಭೂಮಿಯ ಮೇಲೆ ಕೆಳಗಿಳಿಯಿತೆಂದು ಹಿರಿಯರು ವಿವರಿಸುತ್ತಾರೆ. ಗೀತೆಯಲ್ಲೂ
ಭಗವಾನ್ ಶ್ರೀಕೃಷ್ಣನೂ ಇದನ್ನೇ ಹೇಳುತ್ತಾನೆ.
ಈ ಅವತಾರಗಳು ಅನೇಕ
ವಿಧದವಾಗಿರುವುದು : ಪರಿಪೂರ್ಣ, ಆವೇಶ (ಭಾವನಾತ್ಮಕ), ಅಂಶ
(ಭಾಗಷಃ)
ಮತ್ತು ಕಾಲ. ಇದಲ್ಲದೇ
ಇನ್ನೂ ಕೆಲವೆಂದರೆ ಋಷಿ, ಮುನಿ
(ತಪಸ್ವಿ), ಪ್ರಚಾರಕ, ದೂತ (ಸಂದೇಶವಾಹಕ), ಮತ್ತು
ಕುಮಾರ ಅವತಾರಗಳು. ಅವತಾರ ಪುರುಷರು ಭೂಮಿಯಮೇಲೆ ಅವತರಿಸುವ ಮೊದಲು ಸಾಮಾನ್ಯವಾಗಿ
ಕೆಲವು ಅಸಾಮಾನ್ಯ ಘಟನೆಗಳು ಘಟಿಸುವುದು.
ಉಮಾಸಹಸ್ರಮ್ ಕೃತಿಯ ಕವಿಗಳಾದ ಶ್ರೀ.ಗಣಪತಿ
ಮುನಿಗಳು ಜನ್ಮಿಸುವ ಸಮಯದಲ್ಲೂ ಇಂತಹ ಘಟನೆಗಳು ಘಟಿಸಿದ್ದವು. (ಹೆಚ್ಚಿನ
ವಿವರಗಳಿಗೆ ಅವರ ಜೀವನ ಚರಿತ್ರೆ
- “ಮಹಾತಪಸ್ವಿ” ಯನ್ನು
ಓದಿ).
ಸಂಸ್ಕೃತದಲ್ಲಿ
:
ಹಿರಣ್ಮಯಾಂಗಮಂಬರೇ
ವದಂತಿ ಸೋಮಮಂಬಿಕೇ
ದಿವಾಕರಸ್ಯ ಮಂಡಲೇ
ತು ಬಿಂಬಿತಂ ಪುರಂದರಂ
ಶರೀರಿಣಾಮಿಹಾಂತರೇsಗ್ನಿಮಾಲಪಂತಿ
ಭಾಸುರಂ
ಚಿರಂತನೋಕ್ತಿದರ್ಶಿನಾಮಿಯಂ
ಶಿವೇ ಪ್ರಣಾಲಿಕಾ ||22||
ತಾತ್ಪರ್ಯ :
ಓ, ಅಂಬಿಕೆ! ಪುರಾತನ
ಪದ್ಧತಿಯಲ್ಲಿನ ವೈದಿಕ ಮಂತ್ರದ್ರಷ್ಟಾರರ ಪ್ರಕಾರ ಆಕಾಶದಲ್ಲಿರುವ ಹಿರಣ್ಯಪುರುಷನನ್ನು “ಸೋಮ” ಎನ್ನುವರು. ಅವನು
ಸೂರ್ಯಮಂಡಲದ ನಡುವೆ ಪ್ರತಿಫಲಿಸಿದಾಗ ಅವನನ್ನು ಪುರಂಧರ (ಇಂದ್ರ) ಎಂದು
ಪರಿಗಣಿಸಲಾಗಿದೆ. ಓ,
ಶಿವೆ!
ಭೂಮಿಯಲ್ಲಿನ ಜನಗಳ ಹೃದಯದಲ್ಲಿ ಬೆಳಗುವವನನ್ನು ಅಗ್ನಿಯೆಂದು
ಮಂತ್ರದ್ರಷ್ಟಾರರು ಕರೆಯುವರು.
ವಿವರಣೆ :
ಭುವರ್ಲೋಕವಾದ ಅಂತರಿಕ್ಷದಲ್ಲಿ
ಜ್ಯೋತಿರ್ಮಯನಾದ ಪುರುಷನನ್ನು ಸೋಮನೆಂದು ಹೇಳುವರು. ಸೂರ್ಯಮಂಡಲದಲ್ಲಿರುವ
ಪುರುಷನನ್ನು ಇಂದ್ರನೆಂದು ಹೇಳುವರು.
(ಇಂದ್ರನೇ ಸೂರ್ಯನಾಗಿದ್ದಾನೆಂದು ವೇದದಲ್ಲಿ
ಪ್ರಸಿದ್ಧವಾಗಿದೆ). “ಯದದ್ಯಕಚ್ಚ ವೃತ್ರಹನ್ ಉದಗಾ ಅಭಿ ಸೂರ್ಯ ಸರ್ವಂ ತದಿಂದ್ರತೇ
ವಶೇ” ಎಂದು ವೇದದಲ್ಲಿ ಹೇಳಿದೆ. ನಮ್ಮ
ಶರೀರದಲ್ಲಿ ಪ್ರಕಾಶಮಾನವಾದ “ಅಗ್ನಿ”
ಎಂದು ಆ ಪುರುಷನನ್ನು ಹೇಳುತ್ತಾರೆ. ಹೇ, ದೇವಿಯೇ! ಇದು
ಮಂತ್ರದ್ರಷ್ಟಾರರ ಪದ್ಧತಿಯಾಗಿದೆ.
ಹಿಂದಿನ ಎಲ್ಲ ಶ್ಲೋಕಗಳಲ್ಲಿ ಹೇಳಲ್ಪಟ್ಟ “ಹಿರಣ್ಮಯತ್ವವು” ದಿವ್ಯತ್ವವನ್ನು
ಸೂಚಿಸುವ ಜ್ಯೋತಿರ್ಮಯತೆಯೆಂದು ತಿಳಿಯಬೇಕು.
ಸಂಸ್ಕೃತದಲ್ಲಿ
:
ಸರೋರುಹಾಕ್ಷವಾಗ್ವಧೂಮನೋಹರೌ
ತು ಪೂರ್ವವ-
ತ್ಸುದಾಂಶುಬಿಂಬಪೂರುಷಸ್ತು
ರುದ್ರಸಂಜ್ಞಕಃ ಶಿವೇ
ಹಿರಣ್ಮಯೋsನ್ತರಿಕ್ಷಜಾತ
ಈಶ್ವರಃ ಸದಾಶಿವಃ
ಸದೇವ ವಸ್ತು ಕಾಂಚನಾಂಗಿ
ಪಂಚಮೂರ್ತಿವಾದಿನಾಮ್ ||23||
ತಾತ್ಪರ್ಯ :
ಓ, ಹಿರಣ್ಯವರ್ಣ
ದೈವವೇ! ಸೂರ್ಯನ ವಾಸಸ್ಥಾನದಲ್ಲಿರುವ ದೈವವು ಸರಸ್ವತಿಯ ಪತಿಯಾದ ಸೃಷ್ಟಿಕರ್ತನಾದ
ಬ್ರಹ್ಮ, ಕಮಲನಯನ ವಿಷ್ಣು, ಇವರಿಬ್ಬರೂ
ನನ್ನ ಹೃದಯದಲ್ಲೇ ನೆಲಸಿರುವರು.
ಓ,
ಶಿವೆ!
ಸೋಮನಲ್ಲಿರುವ ದೈವವೇ ರುದ್ರ, ಹಿರಣ್ಯವರ್ಣನಾದ
ಈಶ್ವರನು ಅಂತರಿಕ್ಷದಲ್ಲಿ ಜನಿಸಿರುವ ಮಹೇಶ್ವರ ಮತು ಸರ್ವಾಂತರ್ಯಮಿಯಾದ ಪರಬ್ರಹ್ಮನೇ ಸದಾಶಿವ. ಇವೇ ಪಂಚಮೂರ್ತಿವಾದಿನಿ ದೈವದ ಐದು ರೂಪಗಳು.
ಶೈವ ಮತ್ತು ಶಾಕ್ತರ
ಪಂಚಯತ್ತ್ವದಲ್ಲಿ - ಬ್ರಹ್ಮ, ವಿಷ್ಣು, ರುದ್ರ, ಮಹೇಶ್ವರ
ಮತ್ತು ಸದಾಶಿವ ಇವರುಗಳೇ ಪರಮಾತ್ಮನ ಐದು ರೂಪಗಳು.
ವಿವರಣೆ :
ಬ್ರಹ್ಮ, ವಿಷ್ಣು, ರುದ್ರ, ಮಹೇಶ್ವರ, ಸದಾಶಿವನೆಂಬುದಾಗಿ
ಪಂಚಮೂರ್ತಿಗಳು ಶೈವ-ಶಾಕ್ತ ಆಗಮಗಳಲ್ಲಿ ಪ್ರಸಿದ್ಧವಾಗಿವೆ. ಇವರಲ್ಲಿ
ಸರೋರುಹಾಕ್ಷ ವಿಷ್ಣುವು ಮತ್ತು ಬ್ರಹ್ಮನು,
ಇವರಿಬ್ಬರಲ್ಲಿ ಒಬ್ಬನಾದ ವಿಷ್ಣುವು ನಮ್ಮೆಲ್ಲರ ಹೃದಯದಲ್ಲಿ
ನೆಲಸಿರುವವನಾಗಿಯೂ, ಬ್ರಹ್ಮನು ಆದಿತ್ಯಮಂಡಲದಲ್ಲಿರುವವನಾಗಿಯೂ ಪ್ರಸಿದ್ಧರಾಗಿದ್ದಾರೆ. ಚಂದ್ರಬಿಂಬದಲ್ಲಿರುವವನು
ರುದ್ರಮೂರ್ತಿಯಾದರೆ, ಅಂತರಿಕ್ಷಲೋಕದಲ್ಲಿರುವವನು ಭುವರ್ಲೋಕಾಧಿಷ್ಠಾತೃವಾದ ವ್ಯಾಪಕನದ
ಮಹೇಶ್ವರನಾಗಿದ್ದಾನೆ. ಸತ್ತ್ವದ ವಸ್ತುವೇ ಸದಾಶಿವ. ಇದೇ
ಪಂಚಮೂರ್ತಿವಾದಿಗಳ ಸಿದ್ಧಾಂತ.
ಸಂಸ್ಕೃತದಲ್ಲಿ
:
ಪ್ರಭೋಃ ಪ್ರಮಾssದಿತಸ್ತತಃ
ಪ್ರಮಾವತೀ ಸ್ವಯಂ ಪೃಥಗ್
ವಿಹಾಯಸಾ ಶರೀರಿಣೀ
ಪ್ರಭೌ ತತೋ ಹಿರಣ್ಮಯೇ |
ಹಿರಣ್ಮಯಾಂಗನಾಕೃತಿರ್ನಭೋsನ್ತರೇ
ಚ ಭಾಸ್ಕರೇ
ತಥಾsನ್ತರೇಷು
ದೇಹಿನಾಂ ಮಹೇಶ್ವರೀ ಜಯತ್ಯುಮಾ
||24||
ತಾತ್ಪರ್ಯ :
ಪ್ರಾರಂಭದಲ್ಲಿ ದೇವಿಯೇ
ಪರಮಾತ್ಮನ ಅರಿವು (ಚಿತ್ ಪ್ರಮ) ನಂತರ ವಿಶ್ವದ ಜಾಗೃತಿಯಾಗಿ
ಎರಡನೇ ರೂಪವಾಗಿರುವಳು. ಆಕೆಯ ಮೂರನೇ ರೂಪವೇ ಆಕಾಶ, ದಕ್ಷ. ನಾಲ್ಕನೇ
ರೂಪವು ಮೂರು ಸ್ತರಗಳಾದ ಭುಃ, ಭುವಃ,
ಮತ್ತು ಭೂಮಿಯ ಸ್ವಃತೇ, ಮಧ್ಯ
ಪ್ರದೇಶವಾದ ಆಕಾಶ ಮತ್ತು ಸ್ವರ್ಗಲೋಕಗಳಿಂದ ಸುತ್ತುವರೆದಿರುವುದು. ಅವಳ
ಐದನೇ ರೂಪವು ಸೂರ್ಯನಲ್ಲಿರುವ ಹಿರಣ್ಯವರ್ಣ ಮತ್ತು ಜನಗಳ ಹೃದಯದಲ್ಲಿ ಮಹೇಶ್ವರಿಯಸ್ಗಿ ಪ್ರಕಾಶಿಸುತ್ತಿರುವ
ಉಮ ಆರನೇ ರೂಪವು.
ದೇವಿ ಉಮಾಳ ಆರು ಅಭಿವ್ಯಕ್ತಿಗಳಲ್ಲಿ, ಮೂರು
ರೂಪಗಳು ಸೃಷ್ಟಿಪೂರ್ವದ್ದು ಮತ್ತು ಉಳಿದ ಮೂರು ರೂಪಗಳು ಸೃಷ್ಟಿಯ ನಂತರದ್ದು.
ವಿವರಣೆ :
ಆರು ರೂಪಗಳಲ್ಲಿ ಮೂರು
ರೂಪಗಳು ಸೃಷ್ಟಿಗೆ ಮೊದಲಿನದಾಗಿಯೂ ಎರಡನೇ ಮೂರು ರೂಪಗಳು ಸೃಷ್ಟಿಗೆ ಉಪಯುಕ್ತವಾಗಿರುವುದು. ಮೊದಲು
ಪ್ರಭುವಾದ ಪುರುಷನ “ಚಿತ್”
ರೂಪಿಣಿಯಾಗಿ, ಅನಂತರ ತಾನೇ ಬೇರೆಯಾಗಿ
ಜ್ಞಾನವುಳ್ಳವಳಾಗಿರುವಳು. ಮೊದಲು ಅವ್ಯಕ್ತ ಪುರುಷನ ಜೊತೆಯಲ್ಲಿ ಅಭಿನ್ನಳಾಗಿಯೂ ಅನಂತರ
ಅವನಿಂದ ಬೇರೆಯಾಗಿ ಸೃಷ್ಟಿಗೆ ನಿಮಿತ್ತಕಾರಣವಾಗುವಳು. ಅನಂತರ
ಆಕಾಶ ಶರೀರವುಳ್ಳವಳಾಗುವಳು. ಅನಂತರ ಭೂಃ, ಭುವಃ, ಸುವಃ, ಎಂಬ
ತ್ರೈಲೋಕ್ಯಸೃಷ್ಟಿಯಲ್ಲಿರುವ ಅಂತರಿಕ್ಷದಲ್ಲಿ ಹಿರಣ್ಮಯಪುರುಷನಲ್ಲಿ ಹಿರಣ್ಮಯವಾದ ಅಂಗನೆಯಾಗಿರುವಳು. ಮನುಷ್ಯನ
ಹೃದಯಗಳಲ್ಲಿ ಉಮಾಮಹೇಶ್ವರಿಯಾಗಿ ಉತ್ಕರ್ಷದಿಂದಿರುತ್ತಾಳೆ.
ಸಂಸ್ಕೃತದಲ್ಲಿ
:
ಮದೀಯಮಂಬಿಕಾsಖಿಲಸ್ಯ
ವಿಷ್ಟಪಸ್ಯ ದುಷ್ಟದೀ-
ದವಿಷ್ಠಪಾದಪಂಕಜಾ ಧುನೋತು
ಕಷ್ಟಜಾಲಕಂ |
ಇಮೇಚ ಕೋಮಲೈಃ ಪದೇರಮೂಲ್ಯತಲ್ಪಶಾಲಿನ-
ಸ್ತದೀಯಮಂಚರೂಪತಾಂ
ಭಜಂತು ಪಂಚಚಾಮರಾಃ ||25|| (50)
ತಾತ್ಪರ್ಯ :
ದುಷ್ಟರಿಗೆ ಎಟುಕದೇ
ಇರುವ ವಿಶ್ವದ ಮಾತೆಯ ಪಾದಪದ್ಮಗಳು ನನ್ನ ತೊಂದರೆಗಳನ್ನು ನಿವಾರಿಸಲಿ. ಪಂಚಚಾಮರ
ಛಂದಸ್ಸಿನಲ್ಲಿ ಹೆಣೆದಿರುವ ಎಲ್ಲ ಶ್ಲೋಕಗಳೂ ಸೂಕ್ಷ್ಮ ಹಾಗೂ ಸುಖಕರವಾದ ಹಾಸಿಗೆಯಾಗಲಿ ದೇವಿಗೆ.
ಕವಿಯು “ಶಯ್ಯಾ
ಹಾಸಿಗೆ” ಪದವನ್ನು ತನ್ನ ಎರಡನೇ ಸ್ತಬಕದಲ್ಲಿನ ಶ್ಲೋಕಗಳಲ್ಲಿ ಉಪಯೋಗಿಸಿರುವ
ಪದಗಳು ಸುಲಲಿತ ಹಾಗೂ ಮೃದುವಾದ ಪದಗಳಿಂದ ಹೆಣೆಯಲಾಗಿದೆ. ಪಂಚಚಾಮರ
ಪದವನ್ನು ದೇವಿಯ ಹರ್ಷಭರಿತ ಸಂಗಾತಿಯಾದ ಪರಮೇಶ್ವರನನ್ನು ಸೂಚಿಸುತ್ತದೆ.
ಎರಡನೇ
ಸ್ತಬಕ
(ಪುಷ್ಪಗುಚ್ಛ)ವು ಸಂಪೂರ್ಣವಾಯಿತು
Comments
Post a Comment