ಉಮಾಸಹಸ್ರಮ್
ಪ್ರಸ್ತಾವನೆ
ಧ್ಯಾನಮಗ್ನರಾದ ಮಹರ್ಷಿಗಳ
ಯೋಗದೃಷ್ಟಿಗೆ ಕಾಣಬಂದುದೇ ದೇವಾತ್ಮ ಶಕ್ತಿ. ಆಕೆ ಅಜೆ, ತೇಜೋಮಯಿ; ಅಮೃತರೂಪಿಣಿ. ಕಾಲ ದೇಶ ವಸ್ತುಗಳೆಲ್ಲ ಅವಳ ಅದ್ಭುತ ಕಲಾಕೃತಿಗಳು. ಅಸಂಖ್ಯ ದೇಹ ಮನಸ್ಸುಗಳೆಲ್ಲ ಅವಳ ರಂಗ-ರಚನೆಗಳು. ಸಾಮಾನ್ಯ ದೃಷ್ಟಿಗೆ ಅಗೋಚರಳು; ಶಬ್ದಪರಿಧಿಗೆ ನಿಲುಕದಾಕೆ ಅವರ್ಣನೀಯಳು. ಲೋಕಹಿತಾರ್ಥವಾಗಿ ಆವಿರ್ಭಾವಗೊಂಡ ಅವಳ ಒಂದಂಶವೇ ಉಮೆ, ಹೈಮವತಿ. ಆಕೆಯನ್ನು ಕುರಿತಾದ ಅದ್ಭುತ ರಚನೆಯೇ “ಉಮಾಸಹಸ್ರಮ್”.
ಈ ಕೃತಿಯ ರಚನಾಕರ್ತೃಗಳು
ಅಸಾಮಾನ್ಯ ವಿದ್ವಾಂಸರಾದ ಕಾವ್ಯಕಂಠ ವಾಸಿಷ್ಠ ಗಣಪತಿ ಮಹಾಮುನಿಗಳು. ಅವರು ಕವಿಗಳು, ದಾರ್ಶನಿಕ ಚಿಂತಕರು, ತಪಸ್ವಿಗಳು ಹಾಗೂ ವಾಗ್ದೇವತಾರಾಧಕರು. ಅವರ ಭಕ್ತಿ-ಪರವಶತೆಯಲ್ಲಿ ಮೂಡಿಬಂದುದೇ ಈ ಉಮಾಸಹಸ್ರಮ್ ಸುಂದರ ಶಕ್ತಿಕಾವ್ಯ ಹಾಗೂ ಮೇರು ಕೃತಿ.
ಸಾವಿರ ಸಂಸ್ಕೃತ ಪದ್ಯಗಳು; ಮಧುರ, ರಸಪೂರ್ಣ. ಉಮಾಸಹಸ್ರಮ್ ನಲ್ಲಿ
ಕಂಡುಬರುವುದು ಇಹಪರ ಬಣ್ಣನೆ, ದೇವತಾ ವರ್ಣನೆ, ಉಪಾಸನಾಕ್ರಮಕಥನ, ಅಲ್ಲಲ್ಲಿ ತತ್ತ್ವಜ್ಞಾನ ಸ್ಪರ್ಶನ, ಉಮಾದರ್ಶನ !
ಗಣಪತಿಮುನಿಯು ಅವರ
ಮಾತಾಪಿತೃಗಳಿಗೆ ಮಧ್ಯಮ ಪುತ್ರ. ಇವರ ಪೂರ್ವಜರು ಆಂಧ್ರಪ್ರದೇಶದವರಾಗಿದ್ದು ವಿಶಾಖಪಟ್ಟಣ ಪ್ರದೇಶದ ಬೊಬ್ಬಿಲಿ ಎಂಬ ಸ್ಥಳದಲ್ಲಿನ
ಕಲವರಾಯ ಎಂಬ ಗ್ರಾಮಕ್ಕೆ ಸೇರಿದವರು. ಇವರ ಹಿಂದಿನವರು ಚೋಳದೇಶದ ಕುಂಭಕೋಣ ನಗರದ ಸಮೀಪದಲ್ಲಿ ವಾಸವಾಗಿದ್ದರು. ಇವರು ಋಗ್ವೇದಿಗಳು ಹಾಗೂ ಅಯ್ಯಾಲಸ ಸೋಮಯಾಜಿಗಳ ವಂಶದವರು.
ಗಣಪತಿ ಮುನಿಗಳು 18-11-1878 ರಂದು ಜನ್ಮಿಸಿದರು. ಕಾಲಕ್ರಮೇಣ ಇವರು ಮೊದಲಿಗೆ ಕಂಚಿಕ್ಷೇತ್ರಕ್ಕೆ ಬಂದು ಅನಂತರ
ಅರುಣಾಚಲ (ತಿರುವಣ್ಣಾಮಲೈ) ಕ್ಷೇತ್ರಕ್ಕೆ ಬಂದು ಅಲ್ಲಿದ್ದ ವೆಂಕಟರಮಣ ಸ್ವಾಮಿಗಳನ್ನು ಪ್ರಾಸಂಗಿಕವಾಗಿ
ಎರಡು ಬಾರಿ ಸಂದರ್ಶಿಸಿದರು. ಅನಂತರ ಅವರ ಜೀವನದ ಮಹತ್ತರವಾದ ಮತ್ತೊಂದು ಅಧ್ಯಾಯವು ಪ್ರಾರಂಭವಾಯಿತು. ದಿನಾಂಕ
18-11-1907ರಲ್ಲಿ ವೆಂಕಟರಮಣ ಸ್ವಾಮಿಗಳ ಸಂದರ್ಶನದಿಂದ ಕೃತಾರ್ಥರಾಗಿ ಅವರಲ್ಲಿ
ಶಿಷ್ಯತ್ವವನ್ನು ಪಡೆದರು. ನಂತರ ಗಣಪತಿಮುನಿಗಳೇ ವೆಂಕಟರಮಣ ಸ್ವಾಮಿಗಳನ್ನು “ಭಗವಾನ್ ಶ್ರೀರಮಣ ಮಹರ್ಷಿ” ಎಂದು ಲೋಕಕ್ಕೆ ಪರಿಚಯಿಸಿದರು. ಗಣಪತಿಮುನಿಗಳ ಬಗೆಗೆ ಹೆಚ್ಚಿನ ವಿಷಯವನ್ನು ಅರಿಯಬೇಕಾದರೆ ಅವರ
ಮೊಮ್ಮಗ ಏ.ವಿ.ರಮಣರು ತೆಲುಗಿನಲ್ಲಿ ರಚಿಸಿರುವ ಜೀವನ ಚರಿತ್ರೆ “ಮಹಾತಪಸ್ವಿ” ಪುಸ್ತಕದ ಆಂಗ್ಲ ಭಾಷಾಂತರದ ಅದೇ ಹೆಸರಿನ ಕೃತಿಯನ್ನು ತಪ್ಪದೇ
ಎಲ್ಲ ಅಭಿಮಾನುಗಳೂ ಓದಲೇಬೇಕು. ಇದು ಒಂದು ಅದ್ಭುತ ಕೃತಿ.
ಈ ಮೊದಲೇ ಹರಸಹಸ್ರವೆಂಬ
ಕಾವ್ಯವನ್ನು ಬರೆದು ಪ್ರಸಿದ್ಧರಾಗಿದ್ದ ಗಣಪತಿ ಮುನಿಗಳು ಈಗ ರಮಣ ಮಹರ್ಷಿಗಳನ್ನು ತಮಗೆ ಆಚಾರ್ಯರನ್ನಾಗಿ
ಅನುಗ್ರಹಿಸಿದ ಉಮಾದೇವಿಯನ್ನು ಭಕ್ತಿಪರವಶರಾಗಿ “ಉಮಾಸಹಸ್ರಮ್” ಸ್ತೋತ್ರಕಾವ್ಯವನ್ನು ರಚಿಸಿದರು. ಇದು ಅವರ ಎಲ್ಲ ಕೃತಿಗಳ ಪೈಕಿ ಮೇರು ಕೃತಿ. ಇದನ್ನು ಇಪ್ಪತ್ತು ದಿನಗಳಲ್ಲಿ ಬರೆದು ಮುಗಿಸಬೇಕೆಂಬ ದೃಢ ಸಂಕಲ್ಪ ಮಾಡಿದರು. ಕೊನೆಯ ಇನ್ನೂರು ಶ್ಲೋಕಗಳನ್ನು ತಮಗೆ ತೀವ್ರ ಅಸ್ವಸ್ಥತೆಯುಂಟಾಗಿದ್ದರೂ
ಐದು ಶಿಷ್ಯರಿಗೆ ಕ್ರಮವಾಗಿ ಶ್ಲೋಕಗಳ ಒಂದೊಂದು ಸಾಲುಗಳನ್ನೂ ಹೇಳಿ ಬರೆಸಿ ಇಪ್ಪತ್ತನೇ ದಿನ ರಾತ್ರೆ
ಎಂಟು ಘಂಟೆಗೆ ಮುಗಿಸಿ ಶ್ರೀ ರಮಣ ಮಹರ್ಷಿಗಳ ಅನುಗ್ರಹಕ್ಕೆ ಪಾತ್ರರಾದರು. ಗಣಪತಿ ಮುನಿಗಳು ಗಣೇಶನ ಅವತಾರವಾದರೆ ರಮಣ ಮಹರ್ಷಿಗಳು ಸ್ಕಂದನ
ಅವತಾರ ಹಾಗಾಗಿ ಅವರಿಬ್ಬರು ಸೋದರರು.
ಉಮಾಸಹಸ್ರಮ್ ಸ್ತೋತ್ರಗ್ರಂಥವು
ನಲವತ್ತು ಸ್ತಬಕಗಳಿಂದ (ಪುಷ್ಪಗುಚ್ಛ) ಕೂಡಿದೆ. ಪ್ರತಿ ಸ್ತಬಕದಲ್ಲೂ ಇಪ್ಪತ್ತೈದು ಶ್ಲೋಕಗಳಿವೆ. ಪ್ರತಿಯೊಂದು ಸ್ತಬಕವನ್ನೂ ಒಂದೊಂದು ವೃತ್ತದಲ್ಲಿ (ಛಂದಸ್ಸಿನಲ್ಲಿ) ಒಟ್ಟು ಇಪ್ಪತ್ತೊಂಬತ್ತು ವೃತ್ತಗಳಲ್ಲಿ (ಕೆಲವು ವೃತ್ತಗಳನ್ನು ಮತ್ತೆ ಉಪಯೋಗಿಸಲಾಗಿದೆ) ರಚಿಸಲಾಗಿದೆ. ಇಲ್ಲಿ ಸರ್ವೇಶ್ವರಿಯ ಪರಮಾರ್ಥಸ್ವರೂಪ, ವೈದಿಕ ಹಾಗೂ ತಾಂತ್ರಿಕ ರೂಪಗಳು, ದೇವಿಯ ಅನುಗ್ರಹದ ಉಪಾಯ, ದೇವಿಯ ಪ್ರಸಾದ, ಹತ್ತು ಮಹಾವಿದ್ಯೆಗಳ ತತ್ತ್ವ, ಉಪನಿಷತ್ತಿನ ವಿದ್ಯೆಗಳ ಸಾಧನಗಳು, ಇತ್ಯಾದಿ ಪ್ರಕರಣಗಳು ಹೃದಯಂಗಮವಾಗಿ ಹೇಳಲ್ಪಟ್ಟಿದೆ. ಇದರ ತೆಲುಗು ಅನುವಾದ ಹಾಗೂ ವ್ಯಾಖ್ಯಾನಗಳು ಅನೇಕವಿವೆ. ಕನ್ನಡದಲ್ಲೂ ಇಡೀ ಕೃತಿಯನ್ನು ತರ್ಕ-ವೇದಾಂತ ವಿದ್ವಾನ್ ಡಾ||ಎಂ.ಇ.ರಂಗಾಚಾರ್ ಅವರು ಅನುವಾದಿಸಿದ್ದಾರೆ. ಹಾಗೂ ಈ ಸ್ತೋತ್ರವನ್ನು ಪ್ರತಿಯೊಂದು ಸ್ತಬಕ್ಕೂ ಬೇರೆ ಬೇರೆ
ರಾಗವನ್ನು ಹಾಕಿ ಸುಶ್ರಾವ್ಯವಾಗಿ, ಸಂಸ್ಕೃತದಲ್ಲಿ ಡಾಕ್ಟರೇಟ್ ಹಾಗೂ ಸಂಗೀತ ವಿದ್ವಾಂಸರಾದ ಶ್ರೀ.ಬಿ.ಇ.ಕಮಲ ಕುಮಾರ್ ಹಾಡಿದ್ದಾರೆ. ಅದರ ಸೀ.ಡಿ.ಯು ಮಾರುಕಟ್ಟೆಯಲ್ಲಿ
ಲಭ್ಯ.
ನಾನು ಈ ಕೃತಿಯ ಪ್ರತಿಯೊಂದು
ಸಂಸ್ಕೃತ ಶ್ಲೋಕವನ್ನೂ ಕನ್ನಡಲಿಪಿಯಲ್ಲಿ ಬರೆದು, ಅವುಗಳ ತಾತ್ಪರ್ಯ ಹಾಗೂ ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಿದ ವಿವರಣೆಗಳನ್ನು ಕನ್ನಡದಲ್ಲಿ
ಪ್ರಸ್ತುತ ಪಡಿಸಲು ಪ್ರಯತ್ನಿಸಿರುವೆ.
ಗುರುಧ್ಯಾನಮ್
ಹಂಸಾಭ್ಯಾಂ ಪರಿವೃತ್ತಪತ್ರಕಮಲೈರ್ದಿವೈರ್ಜಗತ್ಕಾರಣೈ-
ರ್ವಿಶ್ವೋತ್ಕೀರ್ಣಮನೇಕದೇಹನಿಲಯೈಃ
ಸ್ವಚ್ಛಂದಮಾತ್ಮೇಚ್ಛಯಾ
ತದ್ಯೋತಂ ಪದಸಂಭವಂ
ತು ಚರಣಂ ದೀಪಾಂಕುರಗ್ರಹಿಣಮ್
ಪ್ರತ್ಯಕ್ಷಾಕ್ಷರವಿಗ್ರಹಂ
ಗುರುಪದಂ ಧ್ಯಾಯೇದ್ವಿಭುಂ ಶಾಶ್ವತಮ್ ||
-
ಗುರುಗೀತದಿಂದ
ಪ್ರಥಮ ಶತಕ
ಪುಷ್ಪಗುಚ್ಛ (ಸ್ತಬಕ) - 1
ವ್ಯೋಮಶರೀರ ಹಾಗೂ ಸ್ತ್ರೀರೂಪದ ವಿವರಣೆ
ಛಂದಸ್ಸು - ಆರ್ಯಾವೃತ್ತ
ಸಂಸ್ಕೃತದಲ್ಲಿ:
ಅಖಿಲಜಗನ್ಮಾತೋಮಾ ತಮಸಾ ತಾಪೇನ ಚಾಕುಲಾನಸ್ಮಾನ್
ಅನುಗೃಹ್ಣಾತ್ವನುಕಂಪಾಸುಧಾರ್ದ್ರಯಾ
ಹಸಿತಚಂದ್ರಿಕಯಾ ||1||
ತಾತ್ಪರ್ಯ :
ಹೇ ಸಮಸ್ತ ವಿಶ್ವದ
ಮಾತೆ, ಉಮಾ! ನಾವೆಲ್ಲರೂ ಅಜ್ಞಾನ ಹಾಗೂ ಮೂರು ವಿಧವಾದ ದುಃಖಗಳಿಂದ ಪರಿತಪಿಸುತ್ತಿರು
ವೆವು. ತಂಪಾದ ಚಂದ್ರನ ಬೆಳಕನ್ನೂ
ನಾಚಿಸುವ ದೇವಿಯ ದಯೆಯೆಂಬ ಅಮೃತದಿಂದ ತೊಯ್ದಿರುವ ತನ್ನ ಮಂದಹಾಸದಿಂದ ನಮ್ಮನ್ನು ಅನುಗ್ರಹಿಸಲಿ.
ವಿವರಣೆ :
ಚಂದ್ರನ ಬೆಳದಿಂಗಳಿನಿಂದ
ಕತ್ತಲೆಯು ನಾಶವಾಗಿ ದುಃಖಗಳು ಉಪಶಮನ ವಾಗುವುದು. ದೇವಿಯ ಮಂದಹಾಸದಿಂದ ಅಜ್ಞಾನ ನಾಶ ಹಾಗೂ ದುಃಖವೂ ಶಮನವಾಗುವುದು. ತಮಸ್ಸು ಜ್ಞಾನವನ್ನು ಆವರಿಸುವ ಜಾಡ್ಯ. ಅದು ಆನಂದವನ್ನನುಭವಿಸಲು ಅಡ್ಡಿಯನ್ನುಂಟು ಮಾಡುವುದು. ಇವೆರಡೂ (ತಮಸ್ಸು ಹಾಗೂ ಅಜ್ಞಾನ) ದೇವಿಯ ಮಂದಹಾಸದ ಅನುಗ್ರಹದಿಂದ ನಿವಾರಣೆ ಆಗುತ್ತದೆ. ದೇವಿಯ ಮಂದಹಾಸವು ಚಿದಾನಂದ ಸ್ವರೂಪವಾದದ್ದು. ಅದು ಜ್ಞಾನಪ್ರಕಾಶದಿಂದ ನಮ್ಮ ಜಡತ್ವವನ್ನು ಅಮೃತಾನಂದ ಪ್ರವೇಶದಿಂದ ದೂರಮಾಡಲಿ. ಅನುಗ್ರಹವೆಂದರೆ, ಅನುಸರಿಸಿ ಹಿಡಿಯುವುದು (ಅನುಕೃತ್ಯ ಗ್ರಹಣಂ) ಉಮಾದೇವಿಗೂ ನಮಗೂ ನಡುವೆ ಅಂತರವಿಲ್ಲದಂತೆ ಸದಾ ಧಾರೆಯ ಮೂಲಕ
ಆಕೆಯ ನಗುವು (ಹಸಿತವು) ಕೆಲಸಮಾಡಲಿ ಎಂದು ತಾತ್ಪರ್ಯ.
ಗಣಪತಿ ಮುನಿಗಳ ಹೃದಯದಲ್ಲಿ
ಸದಾ ವಾಸಿಸುವ ದೈವವೇ ಮಾತೆ ಉಮಾ. ಗಣಪತಿ ಮುನಿಗಳ ಪ್ರಕಾರ ಉಮಾ ಹೆಸರಿನಲ್ಲಿ ಉ ಅಕ್ಷರವು ಶಿವನನ್ನು ಪ್ರತಿನಿಧಿಸಿದರೆ, ಮ ಅಕ್ಷರವು ಅವನನ್ನು ಅಳೆಯುವ ಶಕ್ತಿ. ಈ ಶಕ್ತಿಯು ನಾಮ ಹಾಗೂ ರೂಪಗಳನ್ನು ಹೊರತಾಗಿರುವುದು. ಈ ಪರಮೋಚ್ಚ ಶಕ್ತಿಯು ಗಣಪತಿ ಮುನಿಯನ್ನು ಸದಾ ಅನುಗ್ರಹಿಸುತ್ತಿರು
ವುದು.
ಆರ್ಯಾವೃತ್ತ ಛಂದಸ್ಸಿನಲ್ಲಿರುವ
ಈ ಶ್ಲೋಕವು ಶ್ಲೇಷೋಜ್ಜೀವಿತವಾದ ರೂಪಾಲಂಕಾರದಲ್ಲಿ ಹೇಳಲ್ಪಟ್ಟಿದೆ.
ಸಂಸ್ಕೃತದಲ್ಲಿ:
ನಿಖಿಲೇಷು ಪ್ರವಹಂತೀಂ ನಿರುಪಾಧಿ ವಿಮರ್ಶ-
ಯೋಗದೃಶ್ಯೋರ್ಮಿಮ್
ಅಜರಾಮಜಾಮಮೇಯಾಂ ಕಾಮಪಿ ವಂದೇ ಮಹಾಶಕ್ತಿಮ್ ||2||
ಮೊದಲನೇ ಶ್ಲೋಕದಲ್ಲಿ
ಸಾಮುದಾಯಿಕವಾದ ಮಂಗಳವನ್ನು ವಿವರಿಸಲಾಗಿದೆ. ಈಗ ಎರಡನೇ ಶ್ಲೋಕದಲ್ಲಿ ಉಮಾದೇವಿಯನ್ನು ಮಹಾಶಕ್ತಿಸ್ವರೂಪಿಣಿಯೆಂದು ವರ್ಣಿಸಲಾಗಿದೆ.
ತಾತ್ಪರ್ಯ :
ಇಹಪರಗಳೆರಡರಲ್ಲೂ ಹರಿಯುತ್ತಿರುವ
ಸಮಸ್ತಪದಾರ್ಥಗಳಲ್ಲಿಯೂ, ಹಾಗೂ ಸೃಷ್ಟಿಯ ಸಕಲ ವಸ್ತುಗಳಲ್ಲೂ ಜೀವನಾಧಾರವಾಗಿ ಹರಿಯುತ್ತಿರುವ ಆ ಮಹಾಶಕ್ತಿಗೆ ನಮಸ್ಕರಿಸುವೆ.
ವಿವರಣೆ :
ಜಮೀನುಗಳು ಹೇಗೆ ನದಿಯ
ನೀರನ್ನೇ ಆಧಾರವಾಗಿಸಿಕೊಂಡು ನದೀಮಾತೃಕಗಳಾಗಿರುವುದೋ ಹಾಗೆಯೇ ಸೃಷ್ಟಿಯ ಸಕಲ ವಸ್ತುಗಳೂ ಮಹಾಶಕ್ತಿಯನ್ನೇ
ಆಧಾರವಾಗಿ ಹೊಂದಿರುವುದು. ಧ್ಯಾನ ಮತ್ತು ಧ್ಯಾನಸ್ಥನು ನಿರಂತರ ಧಾರೆಯಂತೆ ಕಾಣುವರು. ಆ ಯೋಗದಲ್ಲಿ ಸರ್ವತ್ರ ಪ್ರವಹಿಸುತ್ತಿರುವ ಮಹಾಶಕ್ತಿಯು ಪ್ರತ್ಯಕ್ಷವಾಗದಿದ್ದರೂ, ಅದರ ಅಂಶದಿಂದ ಅಲೆಗಳು ಅನುಭವಕ್ಕೆ ಬರುತ್ತವೆ. ಅಲೆಗಳಿರುವ ಮಹಾಶಕ್ತಿಯ ಅನುಭವವಾಗಿ ಬಿಟ್ಟರೂ ಅಲೆಗಳು ಯೋಗಚಕ್ಷುಸ್ಸಿಗೆ
ಲಭ್ಯವಾಗುತ್ತವೆ. ಈ ಅಲೆಗಳು ಮಹಾ ಶಕ್ತಿಯು
ಚಲನಾತ್ಮಕವಾದ ಅಲ್ಪಾಂಶಗಳನ್ನು ಪ್ರಕಾಶಪಡಿಸುತ್ತವೆ. ಮಹಾಶಕ್ತಿಯು ವಿಕಾರವಿಲ್ಲದ್ದು, ಅಕ್ಷಯವಾದುದು.
ಸಂಸ್ಕೃತದಲ್ಲಿ;
ಸಾ ತತ್ತ್ವತಃ ಸಮಂತಾತ್ಸತ್ಯಸ್ಯ
ವಿಭೋಸ್ತತಾ ತಪಶ್ಯಕ್ತಿಃ
ಲೀಲಾಮಹಿಲಾವಪುಷಾ ಹೈಮವತೀ
ತನುಷು ಕುಂಡಲಿನೀ ||3||
ತಾತ್ಪರ್ಯ :
ವಾಸ್ತವದಲ್ಲಿ ಇವಳು (ದೇವಿ) ಸರ್ವಾಂತರ್ಯಾಮಿಯಾದ ಹಾಗೂ ಸತ್ಯ ದೇವನಾದ ಶಿವನ ತಪಸ್ಸಿನ ಶಕ್ತಿ; ಇವಳು ಹಿಮವಂತನ ಪುತ್ರಿಯಾಗಿ ಸ್ತ್ರೀರೂಪದಲ್ಲಿ ಪ್ರಕಟಗೊಂಡಿರುವಳು
ಹಾಗೂ ಇವಳು ನಮ್ಮ ಶರೀರದಲ್ಲಿ ಕುಂಡಲಿನೀ ಶಕ್ತಿಯಾಗಿರುವಳು.
ವಿವರಣೆ :
ದೇವಿಯ ಮೂರು ರೂಪಗಳನ್ನು
ಇಲ್ಲಿ ಪ್ರಸ್ತುತಿ ಪಡಿಸಲಾಗಿದೆ. ದೇವಿಯ ಮೂಲರೂಪವು ಶಿವನ ಸತ್ಯದ ಪ್ರಜ್ಞೆಯ ಪ್ರಾಯೋಗಿಕ ಶಕ್ತಿಯಾಗಿದೆ. ಭಕ್ತರ ಪ್ರಯೋಜನಕ್ಕಾಗಿ ಹಿಮವಂತನ ಮಗಳಾದ ಹೈಮವತಿ ಎಂಬ ಸ್ತ್ರೀ
ರೂಪದಲ್ಲಿ ಆಕೆಯ ಎರಡನೇ ಅಭಿವ್ಯಕ್ತಿ ಮೂರನೇ ರೂಪವಾಗಿ, ಪ್ರತಿ ಮಾನವನ ದೇಹದ ಕೇಂದ್ರದಲ್ಲಿ ಕುಂಡಲಿನಿ, ದೈವಿಕ ಶಕ್ತಿಯಾಗಿ ಮೂರನೇ ರೂಪದ ಮೂಲಕ ತನ್ನನ್ನು ತಾನೇ ಕೇಂದ್ರವಾಗಿಸಿಕೊಂಡಳು. ಈ ದೈವೀ ಶಕ್ತಿಯು ಉಪಯೋಗಿಸದ ಶಕ್ತಿಯಾಗಿ ಅದು ಕಾರ್ಯರೂಪಕ್ಕೆ
ಬಂದಾಗ ವ್ಯಕ್ತಿಯನ್ನು ಬಿಡುಗಡೆ ಮಾಡುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ.
ಆಕೆಯ ಅಸ್ತಿತ್ವದ ಈ
ಮೂರು ವಿಧಾನಗಳಲ್ಲಿ ಯಾವುದಾದರೂ ಅಥವಾ ಎಲ್ಲವನ್ನೂ ಅವಳು ಅರಿತುಕೊಳ್ಳಬಹುದು.
ಸಂಸ್ಕೃತದಲ್ಲಿ:
ಪರಮಃ ಪುರುಷೋ ನಾಭಿರ್ಲೋಕಾನಾಂ
ಸತ್ಯ ಉಚ್ಯತೇ ಲೋಕಃ
ಪರಿತಸ್ತತಃ ಸರಂತೀ
ಸೂಕ್ಷ್ಮಾ ಶಕ್ತಿಸ್ತಪೋ ಲೋಕಃ ||4||
ತಾತ್ಪರ್ಯ :
ಸಮಸ್ತ ಲೋಕಗಳೂ ಸತ್ಯಲೋಕದ
ಪರಮ ಪುರುಷನ ನಾಭಿಯಲ್ಲಿ ಸ್ಥಾಪಿಸಲ್ಪಟ್ಟಿರುವುದು. ಸತ್ಯಲೋಕವನ್ನು ಆವರಿಸಿಕೊಂಡಿರುವ ಸೂಕ್ಷ್ಮ ಶಕ್ತಿಯೇ ತಪೋಲೋಕ.
ವಿವರಣೆ :
ಹೇಗೆ ಚಕ್ರದ ಕೇಂದ್ರಬಿಂದುವಿನಿಂದ ಕಡ್ಡಿಗಳು ಎಲ್ಲದಿಕ್ಕುಗಳಿಗೂ ಹೊರಹೊಮ್ಮುವುದೋ ಹಾಗೇ
ವಿಶ್ವದಲ್ಲಿನ ಎಲ್ಲ ಲೋಕಗಳೂ ಸತ್ಯಲೋಕವೆಂಬ ಸತ್ಯದ ಅರಿವಿನ ಮಟ್ಟದ ಕೇಂದ್ರಬಿಂದುವಿನ ಮೂಲಕ ಹೊರಹೊಮ್ಮಿದೆ. ಈ ಜ್ಞಾನ ಶಕ್ತಿ, ಚಿತ್ ಶಕ್ತಿಯು ಸಮಸ್ತ ವಿಶ್ವದ ಸೃಷ್ಟಿಯ ಮೂಲ.
ಸಮಸ್ತವಾದ ಪ್ರಪಂಚಕ್ಕೂ
ಕೇಂದ್ರಬಿಂದುವಾಗಿ, ಪರಮಪುರುಷನು ಸತ್ಯಲೋಕವೆಂಬ
ಮತ್ತೊಂದು ಹೆಸರಿನಿಂದ ಬೆಳಗುತ್ತಾನೆ. ಅವನ ಸುತ್ತಲೂ ವಿಸ್ತರಿಸಿ ಪಸರಿಸಿ ಪ್ರಕಾಶಿಸುವ ಆ ಶಕ್ತಿಯು ತಪೋಲೋಕವೆನಿಸಿಕೊಳ್ಳುತ್ತದೆ. ಪ್ರಾಣಿಗಳಿಂದ ಪ್ರಾಣವನ್ನು ಬೇರ್ಪಡಿಸಲಾಗದಿರುವಂತೆ, ಪರಮಪುರುಷನಿಂದ ಆ ಶಕ್ತಿಯನ್ನು ಬೇರ್ಪಡಿಸಲಾಗುವುದಿಲ್ಲ. ಹೀಗೆ ಪ್ರಮಪುರುಷನು ಮತ್ತು ಅವನ ಶಕ್ತಿಯು ಸತ್ಯ-ತಪೋಲೋಕರೂಪದಿಂದಿರುವಿಕೆಯನ್ನು ಕವಿಯು ನಿರೂಪಿಸಿದ್ದಾನೆ.
ಸಂಸ್ಕೃತದಲ್ಲಿ:
ಅಂತರ್ಗೂಢಾರ್ಥಾನಾಂ
ಪುರುಷಾಗ್ನೇರ್ಧೂಮಕಲ್ಪ ಉದ್ಗಾರಃ
ಶಕ್ತಿಜ್ವಾಲಾಃ ಪರಿತಃ
ಪ್ರಾಂತೇಷ್ವಭವಜ್ಜನೋ ಲೋಕಃ ||5||
ತಾತ್ಪರ್ಯ :
ಪರಬ್ರಹ್ಮನಲ್ಲಿ ಅಡಗಿರುವ ಸೂಕ್ಷ್ಮ ವಿಷಯವು ಹೊರಬಂದು; ಸತ್ಯಲೋಕ ಮತ್ತು ಅದನ್ನು ವ್ಯಾಪಿಸಿರುವ ಶಕ್ತಿಯ ಹೊಳೆಯಂತೆ; ಹೇಗೆ ಜ್ವಾಲೆಯ ಶಕ್ತಿಯು ಹೊಗೆಯೊಂದಿಗೆ ಬೆಂಕಿಯಿಂದ ಹೊರಬರುವುದೋ
ಹಾಗೆ ವ್ಯಾಪಿಸುವುದು.ಇದನ್ನೇ ಜನೋಲೋಕ - ಪರಮಾನಂದದ ಹಂತವೆಂದು ಕರೆಯಲಾಗುವುದು.
ವಿವರಣೆ :
ಪರಬ್ರಹ್ಮನಲ್ಲಿ, ತಪಸ್ಸಿನ ಹಂತದಲ್ಲಿ (ತಪೋಲೋಕ) ಸಮಸ್ತ ಸೃಷ್ಟಿಯು ಬೀಜರೂಪದಲ್ಲಿ ಇರುವುದು. ತಪಸ್ಸಿನ ಶಕ್ತಿಶಾಲಿಯಾದ ಹರಿವು ಹೊರಹೊಮ್ಮಿ ಸುತ್ತಾ ಪಸರಿಸಿ ಜನೋಲೋಕದ ರೂಪವನ್ನು ಪಡೆಯಿತು. ಸತ್ಯಲೋಕ, ತಪೋಲೋಕ ಮತ್ತು ಜನೋಲೋಕಗಳ ಪರಿಕಲ್ಪನೆಗಳನ್ನು ಸಚ್ಚಿದಾನಂದ ಸ್ವರೂಪವಾದ ಪರಮಪುರುಷನೆಂದು
ಅಂದರೆ ಸತ್ಯ, ಅರಿವು (ಚಿತ್) ತಪಸ್ಸಿನ ಶಕ್ತಿಯಾಗಿ ಹಾಗೂ ಆನಂದವು ಜ್ಞಾನ ರೂಪದಲ್ಲಿರುವುದೆಂದು ವರ್ಣಿಸಲಾಗಿದೆ.
ಈ ಜನ-ತಪ-ಸತ್ಯಗಳೆಂಬ ಮೂರು ಲೋಕಗಳನ್ನು ಬೇರ್ಪಡಿಸಲು ಆಗುವುದಿಲ್ಲ ಹಾಗೂ ನಿತ್ಯವೂ ಆಗಿರುತ್ತದೆ. ಪರಮಪುರುಷನಿಗೆ ಸರ್ವಶಕ್ತಿಯು ನಿಸರ್ಗದತ್ತವಾಗಿದೆ. ಆ ಮಹಾ ಶಕ್ತಿಯು, ಆ ಪರಮಪುರುಷನಲ್ಲಿರುವ, ಗೂಢಾರ್ಥಗಳನ್ನು ಹೊರಹಾಕುವ ಸ್ವಭಾವದವಳಾಗುದ್ದಾಳೆ. ಆದ್ದರಿಂದಲೇ ಲೋಕಗಳ ಸ್ಥಿತಿಯನ್ನು ಬಲ್ಲವರು, ಸಪ್ತಲೋಕವಾದಿಗಳೂ ಸತ್ಯಾದಿಲೋಕಗಳನ್ನೂ ನಿತ್ಯವೆಂದೂ ಅಕೃತಗಳೆಂದೂ
ಬಣ್ಣಿಸುವರು. ಪರಾಶರ ಮಹರ್ಷಿಗಳು “ಜನಿಸ್ತವಸ್ತಧಾ ಸತ್ಯಮಿತಿ ಚಾಕೃತಕಿ ತ್ರಯೀಂ” ಎನ್ನುತ್ತಾರೆ.
ಒಟ್ಟಾರೆ ಜ್ಞಾನಿಗಳು
ಹೇಳುವ, ಸಚ್ಚಿದಾನಂದರೂಪವಾದ, ಅದ್ವಿತೀಯವಾಗಿ ಒಂದೇ ಆಗಿರುವ ಆ ಪರವಸ್ತು ಸೃಷ್ಟಿ ಸಂಬಂಧದಿಂದಾಗಿ
ಲೋಕತ್ರಯರೂಪವಾಗಿರುತ್ತಾ ಜಯಿಸುತ್ತದೆಂದು ಕವಿಯ ಆಶಯ. ಆದ್ದರಿಂದ ಸತ್ತೇ - ಸತ್ಯಲೋಕ. ಚಿತ್ತು - ತಪಶ್ಶಕ್ತಿರೂಪವಾದುದು, ಜನೋಲೋಕವು ಆನಂದರೂಪವೆಂದು ತಿಳಿಯಬೇಕು.
ಸಂಸ್ಕೃತದಲ್ಲಿ :
ಅತಿಸೂಕ್ಷ್ಮಧೂಮಕಲ್ಪಂ ಲೋಕಂ ತತಮಾಯಯಾsನ್ಯಯಾ ನಾಕಂ
ಏತಂ ತತೋsಪಿ ಸೂಕ್ಷ್ಮಾ ವ್ಯಾಪ್ತಾsನ್ತರತಃ ಪರಾ ಶಕ್ತಿಃ ||6||
ತಾತ್ಪರ್ಯ :
ಸೂಕ್ಷ್ಮವಾದ ಹೊಗೆಯಂತೆ
ಕಾಣುವ ಪರಮಾನಂದ ಪ್ರಪಂಚವನ್ನು (ಜ್ಞಾನ ಲೋಕ) ನಾಕವೆಂದು ಗುರುತಿಸಲಾಗಿದೆ. ಪರಮೋಚ್ಚ ಶಕ್ತಿಯು (ಪರಾಶಕ್ತಿ) ಇದಕ್ಕಿಂತ ಸೂಕ್ಷ್ಮವಾಗಿ ಹರಡಿಕೊಂಡಿದೆ.
ವಿವರಣೆ :
ಶಕ್ತಿಯುತ ಜ್ಞಾನಲೋಕದ ತಪಸ್ಸೇ ಹೊಗೆಯೊಳಗೆ ಜ್ವಲಿಸುವ ಜ್ವಾಲೆ. ಇದನ್ನು ನಾಕ ಅಥವಾ ಸ್ವರ್ಗ - ಅಜ್ಞಾನ ಹಾಗೂ ದುಃಖಗಳಿಂದ ಹೊರತಾದ ಪರಮಾನಂದದ ಹಂತ (ಆನಂದಮಯ ಲೋಕ) ಎಂದೂ ಕರೆಯಲಾಗುವುದು. ನಾಕವನ್ನು ಜೀವಾತ್ಮನು ತಲುಪಬಹುದಾದ ಪರಮಾನಂದದ ಹಂತವೆಂದೂ ಗುರುತಿಸಲಾಗುವುದು.
ಸಂಸ್ಕೃತದಲ್ಲಿ:
ಧೂಮಾಂತರೂಷ್ಮಕಲ್ಪಾ
ಶುದ್ಧಜ್ವಾಲೋಪಮಾ ಚ ಯಾ ಶಕ್ತಿಃ
ತಾಂ ದಿವಮಾಹುಃ ಕೇಚನ
ಪರಮಂ ವ್ಯೋಮಪಾರೇ ಪ್ರಾಹುಃ ||7||
ತಾತ್ಪರ್ಯ:
ಹೊಗೆಯ ಮಧ್ಯದಲ್ಲಿರುವ
ಪ್ರಕಾಶಮಾನವಾದ ಪರಿಶುದ್ಧವಾದ ಜ್ವಾಲೆಯಂತೆ ಇರುವ ತಪಸ್ಸಿನ ಶಕ್ತಿಯನ್ನು “ದಿವ” ಎಂದು ಕೆಲವರು ಕರೆದರೆ ಮತ್ತೆ ಕೆಲವರು ಅದನ್ನು ಅಗಾಧವಾದ ಆಕಾಶ “ವ್ಯೋಮ” (ಪರಮಾಕಾಶ) ಎಂದು ಕರೆಯುವರು.
ವಿವರಣೆ :
ಕೆಲವರು ಧೂಮದೊಳಗಡೆ ಇರುವ ಶಕ್ತಿಜ್ವಾಲೆಯನ್ನು ತಪಶ್ಶಕ್ತಿಕಲೆಯಿಂದ ಕೂಡಿರುವ ಸ್ವರ್ಗವೆಂದು
ಹೇಳುವರೆಂದು ಅಭಿಪ್ರಾಯಭೇದವನ್ನು ಕವಿಯು ಹೇಳುತ್ತಾರೆ.
ಹೊಗೆಯೊಳಗೆ ತಾಪವಿರುವಂತೆ ಜನೋಲೋಕದೊಳಗೆ ಶುದ್ಧವಾದ ಜ್ವಾಲೆಯಂತೆ ಶಕ್ತಿ ಇರುತ್ತದೆ. ಅದನ್ನು ಸ್ವರ್ಗವೆಂದೂ ಹಾಗೂ ಪರಮವ್ಯೋಮವೆಂದೂ ಗುರುತಿಸುತ್ತಾರೆ.
ಪರಮವ್ಯೋಮವನ್ನು ಋಗ್ವೇದದಲ್ಲಿ “ಋಚೋ ಅಕ್ಷರೇ ಪರಮೇ ವ್ಯೋಮನ್” ಎಂಬುದಾಗಿ ಪ್ರಸಿದ್ಧವಾಗಿದೆ. ಹಾಗೇಯೇ ತೈತ್ತಿರೀಯದಲ್ಲೂ “ಯೋ ವೇದ ನಿಹಿತಂ ಗುಹಾಯಾಂ ಪರಮೇ ವ್ಯೋಮನ್” ಎಂಬುದಾಗಿ ವಿವರಿಸಲಾಗಿದೆ.
ಕೆಲವರು ಸೃಷ್ಟಿಗೆ
ಅತ್ಯಂತ ಪ್ರಮುಖವಾದ ಪದಾರ್ಥಗಳಿಂದ ಕೂಡಿರುವ, ಪರಮಪುರುಷನಿಂದ ಹೊರಬರುವ ಪದಾರ್ಥಗಳ ಸಮೂಹವನ್ನು ಸ್ವರ್ಗವೆಂದು ಹೇಳುವರು. ಮತ್ತೆ ಕೆಲವರು ಜ್ವಾಲೆಯಂತಿರುವ ಶಕ್ತಿಯನ್ನೇ ಸ್ವರ್ಗವೆನ್ನುವರು. ಅದನ್ನೇ ಪರಮಾಕಾಶವೆಂದೂ ವಿವರಿಸುತ್ತಾರೆ.
ಸಂಸ್ಕೃತದಲ್ಲಿ:
ಉದ್ಗೀರ್ಣಧೂಮಕಲ್ಪೋ
ಯೋsಯಮಪಾರೋ ಮಹಾಂಜನೋ ಲೋಕಃ
ವ್ಯೋಮಾಂತರಿಕ್ಷಗಗನಪ್ರಭೃತಿಭಿರಭಿದಾಭಿರಾಹುಸ್ತಂ ||8||
ತಾತ್ಪರ್ಯ :
ಹೊಗೆಯಿಂದ ಹೊರಬಂದ
ಅನಂತ ಹಾಗೂ ಮಹಾನ್ ಜ್ಞಾನಲೋಕವನ್ನು ಮಹತ್ತಾದ ಮತ್ತು ವಿಶಾಲವಾದ ಆಕಾಶ (ವ್ಯೋಮ), ಭೂಮಿ ಹಾಗೂ ಸ್ವರ್ಗಗಳ ನಡುವಿನ ಆಕಾಶ (ಅಂತರಿಕ್ಷ), ಮತ್ತು ದಿವ್ಯವಾದ ಆಕಾಶ (ಗಗನ) ಎಂಬ ಅನೇಕ ಹೆಸರಿನಿಂದ ಕರೆಯುತ್ತಾರೆ.
ವಿವರಣೆ :
ಕವಿಯು, ಜನೋಲೋಕವನ್ನು ಉಪಾಧಿಯಾಗುಳ್ಳ
ಶಕ್ತಿಯನ್ನು ಪರಮವ್ಯೋಮವೆಂದು ಅರಿಯುವುದಾದರೆ, ಆಗ ಜಗಲೋಕವು ವ್ಯೋಮವೆಂದೂ ಹೇಳಲ್ಪಡುತ್ತದೆಂದು ಹೇಳಿ ಅವೆರಡಕ್ಕೂ ಇರುವ ಭೇದವನ್ನು ಹೇಳುವರು.
ಹೊರಬಂದ ಹೊಗೆಯಂತಿರುವ
ಅಪಾರವಾದ, ಮಹತ್ತಾಗಿರುವ ಯಾವ
ಜನೋಲೋಕವಿರುವುದೋ ಅದನ್ನೇ ವ್ಯೋಮವೆಂದೂ, ಅಂತರಿಕ್ಷವೆಂದೂ, ಗಗನವೇ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ.
ಹೀಗೆ ಜನೋಲೋಕವೆಂಬುದು
ಆಕಾಶವೆಂಬ ಪದದಿಂದ ಹೇಳಲ್ಪಡುವುದಾದರೆ, ಅದು ಆನಂದ ಸ್ವರೂಪವಾಗಿರುವುದರಿಂದ ಆನಂದವೇ ಆಕಾಶವೆಂದಂತಾಯಿತು.
“ಯದೇಶ ಆಕಾಶ ಆನಂದೋ ನ ಸ್ಯಾತ್,
ಆಕಾಶ ಶರೀರಂ ಬ್ರಹ್ಮ, ಆನಂದಾಧ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ”
ಎಂಬ ವೇದವಾಕ್ಯಗಳೂ
ಹಾಗೆ ಹೇಳುತ್ತಿವೆ. ಆ ಆಕಾಶವು ಬ್ರಹ್ಮಶರೀರ
ಆಗಿರುವುದರಿಂದ ಹುಟ್ಟು ಇಲ್ಲ. ಅದೇ ಸಮಸ್ತ ಜಗತ್ತಿಗೂ ಉಪಾದಾನ ಕಾರಣ. ಆಕಾಶದಲ್ಲಿ ಶಕ್ತಿಯ ಪ್ರಕಾಶವು ನಿಗೂಢವಾಗಿರುತ್ತದೆ. ಪರಮಾಕಾಶದಲ್ಲಿ ಸ್ಪಷ್ಟವಾಗಿರುತ್ತದೆ.
ಸಂಸ್ಕೃತದಲ್ಲಿ:
ಪ್ರಾಂತೇಷು ಕೋsಪಿ ಶಕ್ತೇಃ ಪೃಥಗಾತ್ಮಾ ವಿಯದುಪಾಧಿಸಂಗೇನ
ಪರಮಾತ್ಮನೋ ವಿಭಕ್ತಃ
ಸ್ವಯಮಭಿಮಂತಾ ವಿನಿಷ್ಪೇದೇ ||9||
ತಾತ್ಪರ್ಯ :
ಜ್ಞಾನಲೋಕ ಹಾಗೂ ತಪೋಲೋಕಗಳ
ನಡುವಿನಲ್ಲಿ ಇರುವ ಪ್ರಜ್ವಲಿಸುವ ಶಕ್ತಿಯಂತೆ (ಸಂಧಿ ಪ್ರಾಂತ) ಅಭಿಮಾನದ ಸಹಯೋಗದೊಂದಿಗೆ ಅವ್ಯಕ್ತವಾದ ಹಾಗೂ ಪ್ರತ್ಯೇಕ ಇರುವಿಕೆಯು (ಪೃತಗಾತ್ಮ) ಪರಮಾತ್ಮನಿಂದ ಹೊರಹೊಮ್ಮಿತು.
ವಿವರಣೆ :
ಪರಮಾತ್ಮನು ಪರಮ ಸತ್ಯ. ಪ್ರತ್ಯೇಕ ಅಸ್ತಿತ್ವವಿದೆಯೆಂಬ ಭಾವನೆಯುಳ್ಳ ಆತ್ಮವು (ಅಭಿಮಾನಿ) ಅವ್ಯಕ್ತ ಪರಮಾತ್ಮನಿಗಿಂತ ಭಿನ್ನವಾದದ್ದು.
ಮುಂದೆ ಸೃಷ್ಟಿಸಲ್ಪಡುವ
ಸಮಸ್ತ ಲೋಕಗಳಿಗೂ ಜನೋಲೋಕವು ನಿಮಿತ್ತ ಮಾತ್ರವಾಗಿಯೂ, ತಪೋಲೋಕವು ಉಪಾದಾನಕಾರಣವಾಗಿರುತ್ತದೆ.
ತಪೋಲೋಕ ಜನೋಲೋಕಗಳ
ಸಂಧಿಪ್ರದೇಶದಲ್ಲಿ ಜನೋಲೋಕದ ಆಕಾಶದ ಉಪಾಧಿಸಂಬಂಧದಿಂದ ಇವನು ಇಂಥವನು ಎಂದು ನಿಶ್ಚಯಸಲಾಗದಿರುವ ಪರಮಪುರುಷನಿಂದ
ಬೇರೆಯಾಗಿ ತೋರಿಕೊಳ್ಳುತ್ತಾ ಆತನು ಸ್ವಾಭಿಮಾನದಿಂದ ಕಾಣಿಸಿಕೊಂಡನು.
ಸಂಸ್ಕೃತದಲ್ಲಿ:
ದಕ್ಷಃ ಪರೋಕ್ಷಮುದಿತಃ ಪಂಥಾ ಏಷ ತ್ವಿಷಾಂ ಜನೋ ಲೋಕಃ
ತದ್ಗರ್ಭೇ ಲಬ್ಧಾತ್ಮಾ ಕಥಿತಾ ದಾಕ್ಷಾಯಣೀ ಶಕ್ತಿಃ ||10||
ತಾತ್ಪರ್ಯ :
ಬೆರಗುಗೊಳಿಸುವ ಬೆಳಕಿನ
ಮಾರ್ಗ, ಆಕಾಶ (ಜ್ಞಾನಲೋಕ)ವನ್ನು ಸಾಂಕೇತಿಕವಾಗಿ ದಕ್ಷ ಎನ್ನಲಾಗುವುದು. ಈ ದಕ್ಷನ ಗರ್ಭದಲ್ಲಿ ಅಂತರ್ಗತವಾದ ಜೀವಾತ್ಮವೇ ದಾಕ್ಷಾಯಣೀ.
ವಿವರಣೆ :
ಶಕ್ತಿಯನ್ನು ದಕ್ಷನ
ಸಂತತಿಯೆಂದು ವಿವರಿಸಲಾಗಿದೆ. ದಕ್ಷನ (ಪರೋಕ್ಷ) ಸಾಂಕೇತಿಕ ಉಲ್ಲೇಖವು ಕವಿಯ ಕಲ್ಪನೆಯಲ್ಲ. ವೇದ ಹಾಗೂ ಉಪನಿಷತ್ತುಗಳಲ್ಲಿ ಕಂಡುಬರುವ “ಪರೋಕ್ಷ ಪ್ರಿಯ ಇವ ದೇವಃ” ಮತ್ತು “ನಿನ್ಯ ವಾಚಾಂಸಿ” ವಾಕ್ಯಗಳು ಮಂತ್ರಗಳ ಅರ್ಥಗಳನ್ನು ಸಾಂಕೇತಿಕವಾಗಿ ಬಿಂಬಿಸುತ್ತವೆ. ಮಂತ್ರಗಳ ಅತೀಂದ್ರಿಯ ಭಾವ, “ದಕ್ಷನು ಅದಿತಿಯಿಂದ ಜನ್ಮಿಸಿದ ಮತ್ತು ಅದಿತಿಯು ದಕ್ಷನಿಂದ
ಜನ್ಮತಾಳಿದಳು” ಎಂಬುದರ ಬಗ್ಗೆ ಮುಂದಿನ
ಶ್ಲೋಕದಲ್ಲಿ ಕಾಣಬಹುದು.
ಸಂಸ್ಕೃತದಲ್ಲಿ:
ಸತ್ಯಾಃ ಪ್ರಾಗಪಿ ಶಕ್ತೇಃ
ಪ್ರಾದುರ್ಭಾವಃ ಸ ಕೀರ್ತ್ಯತೇ ಪ್ರಥಮಃ
ಈಶಾಭಿಮಾನಮಯ್ಯಾಃ ಪೃಥಗಭಿಮಾನಿತ್ವನಿಷ್ಪತ್ತ್ಯಾ ||11||
ತಾತ್ಪರ್ಯ :
ಮೊತ್ತಮೊದಲಿನ ಶಕ್ತಿಯ
ಅವತರಣಿಕೆಯನ್ನು ಸತಿ ಎಂದು ಕರೆಯಲಾಗುವುದು. ಈ ಸತಿಯೇ ಮುಂದಿನ ಅವತಾರದಲ್ಲಿ ದಾಕ್ಷಾಯಣಿಯಾಗಿ ಪರಮಶಿವನೊಂದಿಗೆ ಬೇರೆಯದೇ ಆದ ರೂಪದಲ್ಲಿ
ಸಹಬಾಳ್ವೆ ಮಾಡುವಳು.
ವಿವರಣೆ:
ಶಕ್ತಿಸ್ವರೂಪಿಣಿಯಾದ
ದಾಕ್ಷಾಯಣಿಯ ಪ್ರಾದುರ್ಭಾವವನ್ನು ಹೇಳುವೆ. ಪರಮಪುರುಷನ ಅಭಿಮಾನಪಾತ್ರಳಾದ ದಕ್ಷನೆಂಬ ಬೇರೆ ಆತ್ಮನ ತೋರಿಕೆಗೂ ಮೊದಲು ಇದ್ದ ಶಕ್ತಿಗೆ, ವ್ಯಕ್ತ ಎಂಬ ಆತ್ಮಾಭಿಮಾನವಿರುವುದೆಂಬ ಕಾರಣದಿಂದ ಅದು ಮೊದಲನೇ
ಪ್ರಾದುರ್ಭಾವ. ಹುಟ್ಟೇ ಇಲ್ಲದ ಶಕ್ತಿಗೆ
ಬೇರೆ ಅಭಿಮಾನಿರೂಪದಿಂದ ಜನ್ಮವು ಉಕ್ತವಾಗುತ್ತದೆ. ಇವಳೇ ಪುರಾಣದಲ್ಲಿನ “ಸತಿ” ಎನ್ನುತ್ತೇವೆ.
ಸಂಸ್ಕೃತದಲ್ಲಿ:
ಆಕಾಶಸ್ಯ ಸುತೈವಂ ಲಕ್ಷಣಯಾ
ವಸ್ತುತಃ ಪ್ರಸೂಃ ಶಕ್ತಿಃ
ಅದಿತೇರ್ದಕ್ಷೋ ದಕ್ಷಾದದಿತಿರಿತಿ
ಶ್ರುತಿರಬಾಧೈವಂ ||12||
ತಾತ್ಪರ್ಯ :
ಶಕ್ತಿಯು ದಕ್ಷ (ಆಕಾಶ)ನ ಪುತ್ರಿ; ಆದಾಗ್ಯೂ ನಿಜಸ್ಥಿತಿಯಲ್ಲಿ
ದಕ್ಷನು ಶಕ್ತಿಯಿಂದ ಜನ್ಮ ತಾಳಿದನು. ಆದ್ದರಿಂದ, ವೇದಗಳಲ್ಲಿನ ಹೇಳಿಕೆಯಂತೆ “ದಕ್ಷನು ಅದಿತಿಯಿಂದ ಜನ್ಮತಾಳಿದನು ಮತ್ತು ಅದಿತಿಯು ದಕ್ಷನಿಂದ
ಜನ್ಮತಾಳಿದಳು” ಸರಿಯಾಗಿದೆ.
ವಿವರಣೆ :
ಋಗ್ವೇದದಲ್ಲಿನ 10.72.45 ಶ್ಲೋಕವು -
“ಅದಿತೇರ್ದಕ್ಷೋಜಾಯತ ದಕ್ಷಾದ್ ಅದಿತಿಃ ಪರಿ” - ಈ ಶ್ಲೋಕವು ಪುರುಷ ಮತ್ತು ಶಕ್ತಿಯು ಕೇವಲ ಕ್ರಿಯಾತ್ಮಕವಾದದ್ದೆಂಬ
ವ್ಯತ್ಯಾಸವನ್ನು ಖಚಿತಪಡಿಸುತ್ತದೆ.
ಸಂಸ್ಕೃತದಲ್ಲಿ:
ಜಗತಾಂ ಮಾತಾಪಿತರೌ
ಸತೀಭವೌ ಕೇsಪಿ ಪಂಡಿತಾಃ ಪ್ರಾಹುಃ
ಅದಿತಿಪ್ರಜಾಪತೀ ತಾವಪರೇಷಾಂ
ಭಾಷಯಾ ವಿದುಷಾಂ ||13||
ತಾತ್ಪರ್ಯ :
ಕೆಲವು ವಿದ್ವಾಂಸರುಗಳು
ಸತಿ ಮತ್ತು ಭವರನ್ನು ವಿಶ್ವದ ಮಾತಾ ಪಿತೃಗಳೆಂದು ಗುರುತಿಸಿದರೆ, ಮತ್ತೆ ಕೆಲವು ವಿದ್ವಾಂಸರುಗಳು ಇದನ್ನು ಒಪ್ಪದೇ ಪ್ರಜಾಪತಿಯನ್ನು
ತಂದೆಯೆಂದೂ ಮತ್ತು ಅದಿತಿಯನ್ನು ದೇವತೆಗಳ ಮಾತೆಯೆಂದು ಗುರುತಿಸುತ್ತಾರೆ.
ಗಣಪತಿ ಮುನಿಗಳ ಹೇಳಿಕೆಯಂತೆ
ಸರ್ವಶಕ್ತಿಯು ಗಂಡು ಮತ್ತು ಹೆಣ್ಣು - ಪುರುಷ ಮತ್ತು ಶಕ್ತಿಯು ನಾಟಕೀಯ ರೀತಿಯಲ್ಲಿ ಪ್ರಕಟಿತವಾಗುವರು.
ಸಂಸ್ಕೃತದಲ್ಲಿ:
ದಿವ್ಯಪುಮಾಕೃತಿಮೀಶೇ
ಬಿಭ್ರತಿ ಲೀಲಾರ್ಥಮಸ್ಯ ರಮಣಾಯಾ
ದಿವ್ಯವನಿತಾಕೃತಿಂ
ಸಾ ಬಭಾರ ಮಾತಾ ಚ ಭುವನಾನಾಂ ||14||
ತಾತ್ಪರ್ಯ :
ದೇವನು ನಾಟಕೀಯವಾಗಿ
ದೈವೀ ಮಾನವನ ಮತ್ತು ಶಕ್ತಿಯ ರೂಪವನ್ನು ತಾಳಿದರೆ, ವಿಶ್ವಮಾತೆಯು ತನ್ನ ಸ್ವಾಮಿಯ ದೈವೀ ಕನ್ಯೆಯ ರೂಪವನ್ನು ತಾಳುವಳು.
ವಿವರಣೆ :
ಈಶ್ವರನಾದ ಪುರುಷನು
ಲೀಲೆಗೋಸ್ಕರ ಸ್ವರ್ಗಲೋಕೋಚಿತವಾದ ಪುರುಷನ ಆಕಾರವನ್ನು ಧರಿಸಿದಾಗ ಜಗತ್ತಿನ ತಾಯಿಯಾದ ಆಕೃತಿಯು ದಿವ್ಯವಾದ
ವನಿತೆಯ ಆಕಾರವನ್ನು ತಾಳಿದಳು.
ಸಂಸ್ಕೃತದಲ್ಲಿ:
ಭಾಸುರಹೇಮಾಭರಣಾಂ ಬಹುಶೋಭಾಮೀಶ್ವರಪ್ರಮೋದಕಲಾಂ
ಮೂರ್ತಿಂ ಪಾವನಕೀರ್ತಿಂ
ತಾಂ ಹೈಮವತೀಮುಮಾಮಾಹುಃ ||15||
ತಾತ್ಪರ್ಯ :
ಝಗಝಗಿಸುವ ಬಂಗಾರದ ಒಡವೆಯನ್ನು ಧರಿಸಿದ ಅನೇಕ ವಿಧವಾದ ಹೊಳಪಿನಿಂದ ತನ್ನ ಸ್ವಾಮಿಯನ್ನು ಸಂತುಷ್ಟಗೊಳಿಸುವ
ಮತ್ತು ವೈಭವದಿಂದ ಕಂಗೊಳಿಸುವ ಆ ಸೌಂದರ್ಯವತಿಯನ್ನು ಉಮಾ, ಹೈಮವತಿ ಎಂದು ಕರೆಯಲಾಗುವುದು.
ವಿವರಣೆ :
ಉಮಾ ಶಬ್ದದ ನಿರ್ವಚನವು
ಮುಂದೆ ಮಾಡಲ್ಪಡುತ್ತದೆ. ಇಲ್ಲಿ “ಉಮಾ” ಶಬ್ದವು “ಅವ” ಧಾತುವಿನಿಂದ ಉತ್ಪನ್ನವಾಗಿದೆ. ವೇದದಲ್ಲಿಯೂ ಸಹ “ಓಮಿಸೋ”, “ರಕ್ಷಕ ದೇವಾ” ಎಂದು “ಅವ” ಧಾತುವಿನಿಂದಲೇ ನಿಷ್ಪತ್ತಿಯನ್ನು ಹೇಳಿದೆ.
“ಹೈಮವತೀ” ಶಬ್ದಕ್ಕೆ ಹಿಮವಂತನ
ಪುತ್ರಿ ಎಂಬರ್ಥವು ಉಚಿತವಾಗಿದ್ದರೂ, ಪ್ರಕೃತಾರ್ಥದ ಪ್ರಕಾರ ಹೈಮ = ಸುವರ್ಣದಂತೆ ಕಾಂತಿಯುಳ್ಳವಳು ಎಂದು ಅರ್ಥೈಸುವುದು ಸರಿಯೆನಿಸುತ್ತದೆ.
ಆಕಾಶದಲ್ಲಿ “ಯಕ್ಷ”ವೊಂದು ಕಾಣಿಸಿಕೊಂಡಾಗ ಅಗ್ನಿಯಾದಿಗಳು ಅದನ್ನು ಅರಿಯದೇ ಹಿಂತಿರುಗಿ ಬಂದಾಗ ಇಂದ್ರನು ಬಂದು
ಅದೇ ಆಕಾಶದಲ್ಲಿ ಒಬ್ಬ ಸ್ತ್ರೀಯನ್ನು ಕಂಡನು. ಆದ್ದರಿಂದಲೇ ಕೇನೋಪನಿಷತ್ತಿನಲ್ಲಿ -
“ಸ ಇಂದ್ರಃ ತಸ್ಮಿನ್ನೇವಕಾಶೇ ಸ್ತ್ರೀಯಮಾಜಗಾಮ
ಬಹುಶೋಭನಾಮುಮಾಂ ಹೈಮವತೀಮ್|
ತಾಂ ಹೋವಾಚ ಕಿಮೇತದ್ಯಕ್ಷಮಿತಿ ||
ಸಾ ಬ್ರಹ್ಮೇತಿ ಹೋವಾಚ |
ತತ ಏವ ಹೈಮವತೀಮುಮಾಂ ಬಹುಶೋಭಮಾನಾಂ ||”
ಎಂದು ಹೇಳಲ್ಪಟ್ಟಿದೆ.
ಸಂಸ್ಕೃತದಲ್ಲಿ:
ತಸ್ಯ ಪ್ರಥಮಃ ಸಾಕ್ಷೀ ಭುವನಜುಷಾಂ ನಯನಶಾಲಿನಾಂ ಮಧ್ಯೇ
ವಪುಷಃ ಕೀಲಾದಿಸದೃಶೋ ನಿರುಪಮಪುಣ್ಯೋ ನಿಲಿಂಪಪತಿಃ ||16||
ತಾತ್ಪರ್ಯ :
ಪವಿತ್ರಳಾದ ಪಾರ್ವತಿಯನ್ನು
ಮೊಟ್ಟ ಮೊದಲಿಗೆ ವೀಕ್ಷಿಸಿದವನೇ ದೇವತೆಗಳ ಅಧಿಪತಿಯಾದ ಇಂದ್ರ. ಸಮಸ್ತ ವಿಶ್ವದಲ್ಲೂ ಅವನೇ ದೈವಾನುಗ್ರಹಕ್ಕೆ ಪಾತ್ರನಾದವನು.
ಉಮಾದೇವಿಯು ದೇವತೆಗಳ
ಮುಂದೆ ಪ್ರತ್ಯಕ್ಷಳಾದದ್ದಕ್ಕೆ 15ನೇ ಶ್ಲೋಕದಲ್ಲಿ ವಿವರಿಸಿರುವಂತೆ ಕೇನೋಪನಿಷತ್ತಿನಲ್ಲಿ ಉಲ್ಲೇಖವಿರುವುದು.
ಸಂಸ್ಕೃತದಲ್ಲಿ:
ಪಲ್ಲವಮೃದು ವೇದಿಗತಜ್ವಲಪವಿತ್ರಂ
ಮಹಾರ್ಘಮಣಿಕಾಂತಂ
ನವಚಂದ್ರಖಂಡಸೌಮ್ಯಂ
ಶಿವಸದೃಶಸ್ತತ್ಸ್ಮರಾಮಿ ವಪುಃ ||17||
ತಾತ್ಪರ್ಯ :
ಕೋಮಲವಾದ ಹೊಚ್ಚ ಹೊಸ ಎಲೆಯಂತೆ, ಯಜ್ಞಕುಂಡದಲ್ಲಿನ ಪವಿತ್ರವಾದ ಅಗ್ನಿಯಂತೆ, ಹೊಳೆಯುತ್ತಿರುವ ಅಮೂಲ್ಯ ರತ್ನದಂತೆ, ಶಿವನಿಗೆ ಸುಂದರವಾದ ಹುಣ್ಣಿಮೆ ಚಂದ್ರನಂತೆ ಆಹ್ಲಾದಕರವಾಗಿ ಉಮಾ ದೇವಿಯ ದಿವ್ಯ ಶರೀರವು ಕಂಡುಬರುವುದೆಂದು
ಕವಿಯು ವರ್ಣಿಸುತ್ತಾನೆ.
ಗಣಪತಿ ಮುನಿಗಳಿಗೆ
ತಾವು ತಮ್ಮ ಪೂರ್ವ ಜನ್ಮದಲ್ಲಿ ಅಥವಾ ತಮ್ಮ ಯೋಗ ಶಕ್ತಿಯಿಂದ ಬೇರೆ ಪ್ರಪಂಚದಲ್ಲೋ ಅಥವಾ ತಮ್ಮ ಸಹಜ
ಸಿದ್ಧಿಯ ಶಕ್ತಿಯಿಂದಲೋ ಉಮಾ ದೇವಿಯ ದಿವ್ಯ ಶರೀರವನ್ನು ದರ್ಶಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳುತ್ತಾರೆ.
ಸಂಸ್ಕೃತದಲ್ಲಿ:
ಕೇಚನ ಗೌರೀಂ ದೇವೀಂ ಶೀತಾದ್ರೇರ್ದೇವತಾತ್ಮನೋ ಜಾತಾಂ
ಕಥಯಂತಿ ಸ್ತ್ರಿಯಮುತ್ತಮಲಾವಣ್ಯಾಸ್ವಾದಿತೋ ಗಣ್ಯಾಂ ||18||
ತಾತ್ಪರ್ಯ :
ಕೆಲವರು ಈ ದೈವೀ ಸುಂದರಿಯನ್ನು
ಹಿಮಾಲಯದ ಪುತ್ರಿಯೆಂದು ಹೇಳಿ, ಅವರು ಆಕೆಯನ್ನು ಸುಂದರವಾದ ಸ್ತ್ರೀಯರಲ್ಲೇ ಅತ್ಯಂತ ಸೌಂದರ್ಯವತಿಯೆಂದು ಪರಿಗಣಿಸುತ್ತಾರೆ.
ವಿವರಣೆ :
ಹಿಮಾಲಯ ಪರ್ವತವು ಸರ್ವದೇವಾತ್ಮಕವಾದುದು. ಪರಮಶೀತವಾದ ಪರ್ವತವೂ ಆಗಿರುವ ಆ ಪರ್ವತದ ಮಗಳೆಂಬುದಾಗಿ ಗೌರಿಯನ್ನು
ಕೆಲವರು ಹೇಳುತ್ತಾರೆ. ಅವಳನ್ನು ಅತ್ಯಂತ ಸುಂದರಿಯರ
ಮಧ್ಯದಲ್ಲಿ ಮೊದಲಿಗಳನ್ನಾಗಿಯೂ ಕೆಲವರು ಹೇಳುತ್ತಾರೆ.
ಸಂಸ್ಕೃತದಲ್ಲಿ:
ಸತ್ಯೈವ ಭವತು ಸೇಯಂ ಕಥಾ ತಥಾsಪಿ ಪ್ರಭಾಷಿತಾಂ ಭಕ್ತೈಃ
ತಾಂ ಮೂರ್ತಿಮಾದಿಸದೃಶೋ ಜಾನೀಯಾತ್ಕಮಪಿ ತೇಜೋಂಶಂ ||19||
ತಾತ್ಪರ್ಯ :
ಆಕೆಯನ್ನು ಆಕೆಯ ಭಕ್ತರು
ಗೌರಿ (ಗೌರವವರ್ಣವನ್ನು ಉಳ್ಳವಳು) ಎಂದು ಹೊಗಳುವುದು ಸತ್ಯವಾದದ್ದೇ. ಹೀಗಿದ್ದೂ ಆಕೆಯ ತೇಜಸ್ಸಿನಿಂದ ಕೂಡಿದ ಮೂಲ ರೂಪ, ಸರ್ವೋಚ್ಚ ಪ್ರಜ್ಞೆಯನ್ನು ಗುರುತಿಸಬೇಕು.
ಸಂಸ್ಕೃತದಲ್ಲಿ:
ಮನ್ಯಂತೇ ಕೇsಪಿ ಘನಂ ಪರ್ವತಮುಕ್ತಂ
ನಿಗೂಢಯಾ ವಾಚಾ
ಪ್ರಾದುರ್ಭವತಿ ಗಭೀರಧ್ವನಿರವಿಷಹ್ಯಾ ಯತಃ ಶಕ್ತಿಃ ||20||
ತಾತ್ಪರ್ಯ :
ಹಲವರು ವೇದಭಾಷೆಯಲ್ಲಿ
ಮೋಡವನ್ನು (ಘನ) ಸಾಂಕೇತಿಕವಾಗಿ ಪರ್ವತವೆಂದು ಪರಿಗಣಿಸುವರು. ಈ ಮೋಡದಿಂದ ಉಂಟಾಗುವ ಶಬ್ದವು (ಗುಡುಗು) ಹಾಗೂ ಅದರಿಂದ ಬಿಡುಗಡೆಯಾದ ವಿದ್ಯುಚ್ಚಕ್ತಿಯ ಕಿರಣಗಳು ಮತ್ತು ಮಿಂಚುಗಳನ್ನು ಉಮಾದೇವಿಯ
ಪರ್ಯಾಯವಾದ ಪಾರ್ವತಿಗೆ ಹೋಲಿಸಲಾಗಿದೆ.
ಮತ್ತೊಂದು ಅರ್ಥ :
ವೇದಗಳ ಅತೀಂದ್ರಿಯ
ಭಾಷೆಯಲ್ಲಿ ಮಳೆತರುವ ಕಪ್ಪು ಮೋಡಗಳನ್ನು ಪರ್ವತ ಎಂದು ಬಣ್ಣಿಸಲಾಗಿದೆ. ಈ ಮೋಡಗಳಿಂದ ಉತ್ಪತ್ತಿಯಾಗುವ ಭಾರಿ ಶಬ್ದ ಅಥವಾ ಗುಡುಗು ಹಾಗೂ
ಅಸಾಧಾರಣ ಶಕ್ತಿ, ವಿದ್ಯುತ್ ಶಕ್ತಿಯನ್ನು
ಪರ್ವತದ ಪುತ್ರಿ, ಪಾರ್ವತಿಯೆಂದು ಗುರುತಿಸುವರು.
ವಿವರಣೆ :
ಪಾರ್ವತಿಯನ್ನು ಪರ್ವತ ರಾಜನ ಮಗಳೆಂದು ಹಾಗೂ ಈ ಪರ್ವತಗಳ ರಾಜನೇ ಹಿಮಾಲಯ ಪರ್ವತ ಶ್ರೇಣಿಗಳು. ಪಾರ್ವತಿಯು ಸಮಸ್ತ ವಿಶ್ವದ ಮಾತೆಯಾದರೆ ಅವಳು ಹೇಗೆ ಪರ್ವತ
ರಾಜನ ಪುತ್ರಿ? ಆದ್ದರಿಂದ ಈ ಕಥೆಗೆ
ಮತ್ಯಾವುದಾದರೂ ಗಹನವಾದ ಅರ್ಥವಿರಬೇಕು.
ಒಮ್ಮೆ ಗಣಪತಿ ಮುನಿಗಳು (ಉಮಾಸಹಸ್ರಮ್ ಕೃತಿಯ ಕರ್ತೃ) ಒರಿಸ್ಸಾ ರಾಜ್ಯದ, ದಂತಾವನಿಯ ಜಮೀನ್ದಾರನ ಮನೆಗೆ ಹೋಗಿ ಅಲ್ಲಿ ಅನೇಕ ವಿದ್ವಾಂಸರ
ಸಭೆಯಲ್ಲಿ ತನ್ನ ಜ್ಞಾನ ಪ್ರದರ್ಶನದ ನಂತರ ಸಂಜೆಗೆ ಜಮೀನ್ದಾರನು ಮಾಡಿಕೊಟ್ಟ ಎತ್ತಿನಗಾಡಿಯಲ್ಲಿ ತನ್ನ
ತಮ್ಮ ಶಿವರಾಮ ಶಾಸ್ತ್ರಿಯೊಂದಿಗೆ ಐದು ಕಿಲೋ ಮೀಟರ್ ದೂರದಲ್ಲಿನ ಧನ-ಮಂಡಲ ರೈಲ್ವೇ ನಿಲ್ದಾಣದೆಡೆಗೆ ನಿಧಾನವಾಗಿ ಪಯಣಿಸುತ್ತಿರುವಾಗ
ಸ್ವಲ್ಪ ಸಮಯದಲ್ಲೇ ಕುಂಭ-ದ್ರೋಣ ಮಳೆಯು ಶುರುವಾಗಿ ಕತ್ತಲಿನಲ್ಲಿ ಮುಂದುವರೆಯುವುದೇ ಅಸಾಧ್ಯವಾಗಿ ಎತ್ತಿನ ಗಾಡಿಯಲ್ಲಿದ್ದವರೆಲ್ಲರೂ
ನೀರಿನಲ್ಲಿ ಸಂಪೂರ್ಣವಾಗಿ ನೆನೆದರು ಹಾಗೂ ಎತ್ತುಗಳಿಗೂ ಆ ಕಗ್ಗತ್ತಲಿನಲ್ಲಿ ದಾರಿಕಾಣದೆ ಮುಂದುವರೆಯಲು
ಅಸಾಧ್ಯವಾಯಿತು ಹಾಗೂ ಗಾಡಿಯನ್ನು ನಡೆಸುತ್ತಿದ್ದ ಸೇವಕನಿಗೆ ಮುಂದು ಯಾವ ಅಪಾಯ ಕಾದಿದೆಯೋ ಎಂದು ಸಂಪೂರ್ಣವಾಗಿ
ಅಧೀರನಾದನು. ಆ ಸಂದರ್ಭದಲ್ಲಿ ಗಣಪತಿ
ಮುನಿಗಳು ಉಮಾ ದೇವಿಯನ್ನು ಕುರಿತು ಕಣ್ಣುಗಳನ್ನು ಮುಚ್ಚಿ ಪ್ರಾರ್ಥಿಸತೊಡಗಿದರು. ಕ್ಷಣ ಮಾತ್ರದಲ್ಲಿ ಕಪ್ಪು ಮೋಡಗಳಿಂದ ಕಣ್ಣು ಕೋರೈಸುವ ಮಿಂಚು
ಅವರೆದುರು ಬಡಿಯಿತು. ಅದರ ಪ್ರಭಾವದಿಂದ ಎತ್ತುಗಳ
ಕಣ್ಣುಗಳು ಕ್ಷಣ ಮಾತ್ರ ಕುರುಡಾಯಿತು ಹಾಗೂ ಎತ್ತಿನ ಗಾಡಿ ನಡೆಸುತ್ತಿದ್ದ ಸೇವಕನಿಗೆ ಮಿಂಚಿನ ಬೆಳಕಿನಲ್ಲಿ
ಮುಂದಿರುವ ಅಗಾಧವಾದ ಪ್ರಪಾತವು ಗೋಚರಿಸಿ ಅವನು ಗಾಡಿಯನ್ನು ಕೂಡಲೇ ನಿಲ್ಲಿಸಿ ಅಲ್ಲಿಂದ ನಿಧಾನವಾಗಿ
ಮುಖ್ಯ ರಸ್ತೆಗೆ ಗಾಡಿಯನ್ನು ತಿರುಗಿಸಿದನು. ಹೀಗಾಗಿ ಕೋರೈಸುವ ಮಿಂಚು ಎಲ್ಲರನ್ನೂ ಪ್ರಾಣಾಪಾಯದಿಂದ ಪಾರುಮಾಡಿತು. ಅಲ್ಲಿಂದ ಅವರುಗಳು ರೈಲ್ವೆ ನಿಲ್ದಾಣವನ್ನು ತಲುಪುವವರೆಗೂ ಆಗಾಗ್ಗೆ
ಮಿಂಚು ಬಂದು ಅವರಿಗೆ ಮಾರ್ಗವನ್ನು ತೋರಿಸುತ್ತಿತ್ತು. ಇಷ್ಟೆಲ್ಲದರ ಮಧ್ಯೆ ಗಣಪತಿ ಮುನಿಗಳು ಧ್ಯಾನದಿಂದ ಹೊರಬಂದಿರಲೇ
ಇಲ್ಲ. ಅವರು ಮಾತೆ ಉಮಾದೇವಿಯ
ಪ್ರಾರ್ಥನೆಯಲ್ಲೇ ಸಂಪೂರ್ಣವಾಗಿ ಮಗ್ನರಾಗಿದ್ದರು. ರೈಲ್ವೆ ನಿಲ್ದಾಣ ಬಂದಾಗಲೇ ಅವರ ತಮ್ಮನು ಎಚ್ಚರಿಸಿದಾಗಲೇ ಅವರು ಧ್ಯಾನದಿಂದ ಹೊರಬಂದಿದ್ದು. ಹೀಗೆ ಮಾತೆ ಉಮಾದೇವಿಯ ಕರುಣೆಯಿಂದ ಅವಳ ಮಿಂಚಿನ ರೂಪದಲ್ಲಿ
ಭಯಂಕರ ಅಪಾಯವು ದೂರಾಯಿತು.
ಎತ್ತಿನ ಗಾಡಿಯು ರೈಲ್ವೆ
ನಿಲ್ದಾಣವನ್ನು ಕತ್ತಲಿನಲ್ಲೇ ಸಮೀಪಿಸಿ, ಇನ್ನೇನು ರೈಲು ಕಂಬಿಯನ್ನು ದಾಟಬೇಕು, ಅಷ್ಟರಲ್ಲೇ ಮತ್ತೊಂದು ದೊಡ್ಡದಾಗ ಕಣ್ಣುಕೋರೈಸುವ ಮಿಂಚೊಂದು ಬಡಿದು ಎತ್ತುಗಳನ್ನು ಮುಂದೆ
ಹೋಗದಂತೆ ತಡೆಯಿತು. ಈ ಸಂದರ್ಭದಲ್ಲಿ ಗೂಡ್ಸ್
ಗಾಡಿಯೊಂದು ವೇಗವಾಗಿ ರೈಲ್ವೇ ನಿಲ್ದಾಣವನ್ನು ದಾಟಿ ಮುಂದೆ ಹೋಯಿತು. ಮಿಂಚು ಮತ್ತೊಮ್ಮೆ ಇವರೆಲ್ಲರನ್ನೂ ಭೀಕರ ಅಪಾಯದಿಂದ ರಕ್ಷಿಸಿತು.
“ಪರ್ವತಶ್ಚ ಪುಲೋಮಾಚಯಃ
ಸಜಲೋಯಂ ಧನಾಧನಃ
ಪಾರ್ವತೀತಿ ತಟಿದ್ದೇವೀಂ ಪೌಲೋಮೀತಿ ಚ ತಾಂ ವಿದುಃ ||”
ಪರ್ವತ ಮತ್ತು ಪುಲೋಮ
ಪದಗಳು ಮಳೆ-ತರುವ ಮೋಡಗಳನ್ನು ಅರ್ಥೈಸುತ್ತವೆ. ಆದ್ದರಿಂದ, ಈ ಮೋಡಗಳಿಂದ ಉದ್ಭವಿಸುವ ಮಿಂಚನ್ನು ಪಾರ್ವತಿ ಮತ್ತು ಪೌಲೋಮಿ ಎಂದು ಕರೆಯಲಾಗುವುದು.
“ಶೈವಾನಾಂ ಭಾಷಯಾ
ದೇವಿ ತ್ವಂ ತಟಿದ್ದೇವಿ ಪಾರ್ವತಿ
ಇಂದ್ರಾಣಾಂ ಭಾಷಯಾ ಮಾತಃ ಪೌಲೋಮಿ ತ್ವಮನಾಮಯೆ ||”
-
ಪ್ರಚಂಡ ಚಂಡೀ ತ್ರಿಶತಿ
ಹೇ ತಟಿತ್ ದೇವಿ! ಶೈವರು ನಿನ್ನನ್ನು ಪಾರ್ವತಿ ಎಂದೂ ಮತ್ತು ಇಂದ್ರನ ಆರಾಧಕರು
ಪೌಲೋಮಿ ಎಂದೂ ಕರೆಯುತ್ತಾರೆ.
ಸಂಸ್ಕೃತದಲ್ಲಿ ಮೋಡಕ್ಕೆ 33 ಹೆಸರುಗಳಿವೆ. ಅದರಲ್ಲಿ ಹದಿಮೂರನೇ ಹೆಸರು “ಪರ್ವತ” ಎಂದು. ಈ ಮೋಡಗಳಿಂದ ಹೊರಬರುವ ಶಕ್ತಿಯೇ ಮಿಂಚು ಅಥವಾ ವಿದ್ಯುತ್ ಶಕ್ತಿ. ಈ ಶಕ್ತಿಯೇ ಆಕಾಶ, ಭೂಮಿ, ಗಾಳಿ, ನೀರು ಮತ್ತು ಎಲ್ಲ ಶಕ್ತಿಗಳು.
ಮಾತೆ ಪಾರ್ವತಿ ದೇವಿಯ
ಜನನ ಹಾಗೂ ಕಲ್ಯಾಣವನ್ನು ಅದ್ಧೂರಿಯಾಗಿ ಆಚರಿಸುವುದು ಭಾರತ ದೇಶದ ಸಂಪ್ರದಾಯಗಳಲ್ಲಿ ಅತಿಮುಖ್ಯವಾದದ್ದು. ಯಾವುದೇ ಸೃಷ್ಟಿಗೂ ಒಂದು ಆಕಾರವಿರಲೇಬೇಕು. ಆ ಆಕಾರವೇ “ತಟಿತ್” ಅಥವಾ ಮಿಂಚು. ವಿದ್ಯುತ್ ಶಕ್ತಿಯಲ್ಲಿ ಬೆಂಕಿಯು ಇರಲೇ ಬೇಕು. ಇದರಿಂದ ಹೊರಹೊಮ್ಮುವುದೇ ಶಬ್ದ. ಗಣಪತಿಯು ಶಬ್ದಗಳ ದೈವ. ಹೀಗಾಗಿ ಅವನು ಮಿಂಚಿನ ಅಥವಾ ವಿದ್ಯುತ್ ಶಕ್ತಿಯಿಂದ ಜನಿಸುವ
ಶಬ್ದ ಬ್ರಹ್ಮ. ಹೀಗಾಗಿ ಅವನು “ವೈದ್ಯುತಾಗ್ನಿ”. ಇವುಗಳೇ ಜಗನ್ಮಾತೆಯ ಹಾಗೂ ಅವಳ ಪುತ್ರ ಗಣಪತಿಯ ಅತೀಂದ್ರಿಯ
ರೂಪಗಳು.
ಮಾತೆಯ ಅನಂತ ರೂಪವನ್ನು
ಅರಿಯಲು ನಾವು ಅಂತವನ್ನು ದಾಟಿ ಮಾತೆಯನ್ನು ಕೇವಲ ಪರ್ವತ ರಾಜಕುಮಾರಿಯನ್ನಾಗಿ ನೋಡದೆ ವಿಶ್ವಮಾತೆಯನ್ನಾಗಿ
ಅರಿಯಬೇಕು. ನಮ್ಮ ದೃಷ್ಟಿಯು ವೈಯುಕ್ತಿಕದಿಂದ
ಹೊರಬಂದು ವಿಸ್ತಾರವನ್ನು ಹೊಂದಿ ವಿಶ್ವದ ದೃಷ್ಟಿಯನ್ನು ಹೊಂದಬೇಕು. ಗಣಪತಿ ಮುನಿಗಳಿಗೆ ಇದುವರೆಗೂ ಮಾತೆಯನ್ನು ವೈಯುಕ್ತಿಕವಾಗಿ
ಬಲ್ಲವರಾಗಿದ್ದು ಈ ಅನುಭವದಿಂದ ಅವಳ ವಿಶ್ವಾತ್ಮಕತೆಯನ್ನು ವಿದ್ಯುತ್ ಶಕ್ತಿಯ ಮೂಲಕ ಮಿಂಚಿನ ರೂಪವನ್ನು
ಸಂಪೂರ್ಣವಾಗಿ ಮನಗಂಡು ಅವಳ ಬಗೆಗಿನ ಅಚಲವಾದ ವಿಶ್ವಾಸವು ಮತ್ತಷ್ಟು ಆಳವಾಯಿತು.
ಸಂಸ್ಕೃತದಲ್ಲಿ :
ಆಕಾಶೋ ಗೋಲೇಭ್ಯೋ ಯದ್ವಿತರತಿ ನಿಜರಜಶ್ಚಯಾದನ್ನಂ
ನೇಶಾಯ ಕೀರ್ತ್ಯತೇ ಸಾ ಸಂಸಾರೇ ದಕ್ಷಯಾಗಕಥಾ ||21||
ಶ್ಲೋಕ 21 ಹಾಗು 22ರಲ್ಲಿ ಕವಿಯು ದಕ್ಷಯಾಗದ ಪೌರಾಣಿಕ ಕಥೆಗೆ ಸಾಂಕೇತಿಕ ಅರ್ಥವನ್ನು ಕೊಟ್ಟಿರುವರು.
ತಾತ್ಪರ್ಯ :
ಪರಮಾತ್ಮನಿಂದ ಹೊರಬಂದ
ಪ್ರತ್ಯೇಕ ಅಸ್ಥಿತ್ವವಿರುವ ಜೀವವನ್ನು ಆಕಾಶ ಅಥವಾ ದಕ್ಷನೆಂದು ಹಿಂದಿನ ಶ್ಲೋಕಗಳಲ್ಲಿ ವಿವರಿಸಲಾಗಿದೆ. ಆಕಾಶದಲ್ಲಿನ ಜ್ಯೋತಿರ್ಮಂಡಲದಲ್ಲಿ ಜೀವಿಸುವುದಕ್ಕೆ ಬೇಕಾದ
ಸಮಸ್ತ ಸಾಮಗ್ರಿಗಳನ್ನೂ ಸೃಷ್ಟಿಸಲಾಯಿತು. ಶಂಕರ ಭಗವಾನನು ತನಗೆ ಪೌರಾಣಿಕ ಘಟನೆಯಾದ ದಕ್ಷಯಾಗದಲ್ಲಿ ಯಾವುದೇ ಸ್ಥಾನವು ದೊರಕದೇ ಇದ್ದಾಗ
ದಕ್ಷನು ಸೃಷ್ಟಿಸಿದ ಮೂಲಭೂತ ವಸ್ತುಗಳು ಕೇವಲ ಪ್ರಾಪಂಚಿಕ ಜೀವಿಗಳ ಸೇವನೆಗೆ ಮಾತ್ರವೇ ಹೊರತು ದೇವನ
ಸೇವೆಗಾಗಿ ಅಲ್ಲವೆಂದು ಸ್ಪಷ್ಟಪಡಿಸುತ್ತಾನೆ.
ವಿವರಣೆ :
ಪರಮಾತ್ಮನಿಂದ ವಿಭಕ್ತವಾದ ಆಕಾಶವೇ ದಕ್ಷನಾಯಿತು ಎಂದು ಹಿಂದೆಯೇ ಹೇಳಪಟ್ಟಿತು. ಅದರಿಂದಲೇ ಸಮಸ್ತ ಜಗತ್ತಿಗೂ ಬೇಕಾದ ಸಾಮಗ್ರಿಯು ಹೊರಹಾಕಲ್ಪಟ್ಟಿತು. ಅದು ಕೇವಲ ಸೃಷ್ಟಿಗೋಸ್ಕರ ಕೊಡಲ್ಪಡುತ್ತದೆ. ಆದರೆ ಈಶ್ವರನಿಗಲ್ಲ. ಆದ್ದರಿಂದ ದಕ್ಷನೆಂಬ ಆಕಾಶದ ಉದರದಲ್ಲಿರುವ ಶಕ್ತಿಯು ಎಲ್ಲೆಡೆ
ವ್ಯಾಪಿಸಿದ್ದರೂ, ಒಳಗೆ ನಿಗೂಢವಾಗಿರುವುದರಿಂದ, ಬಾಹ್ಯದೃಷ್ಟಿಯಿಂದ ಕಾಣದಾದಳು ಎನ್ನುವುದೇ ದಕ್ಷಯಾಗದ ಕಥೆ.
ಸಮಸ್ತಕ್ಕೂ ಉಪಾದಾನ (ಮುಖ್ಯ),ಕಾರಣವಾದ ಆಕಾಶವೆಂಬ ದ್ರವ್ಯವು ಖಗೋಳವಾದ ಜ್ಯೋತಿಮಂಡಲಕ್ಕೆ ತನ್ನಲ್ಲಿರುವ ರೇಣು ಸಮೂಹದಿಂದ
ಜನನ-ಜೀವನ ಪೋಷಕವಾದ ದ್ರವ್ಯವನ್ನು
ಕೊಡುತ್ತದೆ. ಆದರೆ ಅದು ಪರಮಪುರುಷನಿಗೇನನ್ನೂ
ಕೊಡುವುದಿಲ್ಲ. ಇದೇ ಸಂಸಾರದಲ್ಲಿ ಸಿದ್ಧವಾಗಿರುವ
ಕಥೆ.
ಸಂಸ್ಕೃತದಲ್ಲಿ :
ವ್ಯಾಪ್ತಾsಪಿ ಯನ್ನಿಗೂಢಾ ಬಹಿರೀಕ್ಷಕಬುಧ್ಯಪೇಕ್ಷಯಾ ನಷ್ಟಾ
ಶಕ್ತಿರ್ಯಾಗೇ ತಸ್ಮಿನ್ನವಸಾನಂ
ತದುದಿತಂ ಸತ್ಯಾಃ ||22||
ತಾತ್ಪರ್ಯ :
ದಕ್ಷ (ಆಕಾಶ) ನನ್ನು ಸುತ್ತುವರೆದಿರುವ ಶಕ್ತಿಯು ಸುಪ್ತವಾದದ್ದು. ಅದನ್ನು ಅರಿಯಲು ಪ್ರಯತ್ನಿಸಿದಾಗ ಅದು ಕಾಣುವುದಿಲ್ಲ. ಇದನ್ನು ಪೌರಾಣಿಕ ಕಥೆಯಲ್ಲಿ ದಕ್ಷಯಾಗದಲ್ಲಿ ಸತಿ ದೇವಿಯ (ದಾಕ್ಷಾಯಣಿಯ) ಸಾವಿನ ಮೂಲಕ ಸಂಕೇತಿಸಲಾಗಿದೆ.
ಸಂಸ್ಕೃತದಲ್ಲಿ :
ಪರ್ವತನಾಮ್ನೋ ವೈದಿಕಭಾಷಾಯಾಂ
ಯದಿಯಮತಿಬಲಾ ಶಕ್ತಿಃ
ಘನತೋ ಭವತಿ ವ್ಯಕ್ತಾ
ತದಭಿಹತಂ ಪಾರ್ವತೀಜನನಮ್ ||23||
ತಾತ್ಪರ್ಯ :
ವೇದದಲ್ಲಿ ಮೋಡಗಳಿಗೆ
ಸಮಾನಾರ್ಥವಾದ ಪರ್ವತ ಎಂದರೆ ಮಹಾನ್ ಶಕ್ತಿಯೆಂದು ಸಾಂಕೇತಿಕ ಭಾಷೆಯಲ್ಲಿ. ಮೋಡಗಳಿಂದ ಹೊರಹೊಮ್ಮುವ ಶಕ್ತಿಯು ಪ್ರಕಾಶಮಾನವಾದ ಬೆಳಕಿನಿಂದ
ಕೂಡಿದ ಪಾರ್ವತಿಯ ಜನನವನ್ನು ಸಂಕೇತಿಸುತ್ತದೆ.
ವಿವರಣೆ :
ಪಾರ್ವತೀ ಎಂಬ ಶಬ್ದವು
ವೇದಭಾಷೆಯಲ್ಲಿ ಹೇಳಲ್ಪಟ್ಟಿರುವ ರೀತಿಯನ್ನು ಕವಿಯು ಈ ಶ್ಲೋಕದಲ್ಲಿ ಹೇಳುವರು.
ಈ ಅತ್ಯಂತ ಬಲವುಳ್ಳ
ಮಹಾಶಕ್ತಿಯು ನಿಗೂಢವಾಗಿ ಅರ್ಥಗಳನ್ನು ತಿಳಿಸುವ ವೇದಭಾಷೆಯಲ್ಲಿ ಪಾರ್ವತಿಯೆಂದು ಹೇಳಲ್ಪಟ್ಟಿದೆ. ಪರ್ವತವೆಂದರೆ ಮೋಡ ಎಂದು ವೇದವು ಹೇಳುತ್ತದೆ. ಈ ಮೋಡದಿಂದ ಮಿಂಚೆಂಬ ಜ್ಯೋತಿಯು ಉತ್ಪನ್ನವಾಗುತ್ತದೆ. ಅಂತಹ ಶಕ್ತಿಯೇ ಪಾರ್ವತಿ ಎಂದು ಹೇಳಲ್ಪಟ್ಟಿದೆ. ಪಾರ್ವತಿಯು ವೈದ್ಯುತವಾದ ಜ್ಯೋತಿಸ್ವರೂಪಿಣಿ.
ಸಂಸ್ಕೃತದಲ್ಲಿ :
ತೇಜೋಂಶತಃ ಶಿವಾವಿಹ
ಹಿಮಾಚಲೇsನುಗ್ರಹಾಯ ಭೂಮಿಜುಷಾಂ
ದತ್ತೋ ಯತ್ಸಾನ್ನಿಧ್ಯಂ
ಲೀಲಾಚಾರಿತ್ರಮನ್ಯದಿದಮ್ ||24||
ತಾತ್ಪರ್ಯ :
ಭೂಮಿಯ ಮೇಲಿನ ತಮ್ಮ
ಭಕ್ತರನ್ನು ಆಶೀರ್ವದಿಸುವ ಸಲುವಾಗಿ ಶಿವ ಮತ್ತು ಪಾರ್ವತಿಯರು ಹಿಮಾಲಯ ಪರ್ವತದಲ್ಲಿ ಕಾಂತಿಯುಕ್ತ
ರೂಪದಲ್ಲಿ ಕಾಣಿಸುವರು. ಅವರ ದೈವೀ ಉಪಸ್ಥಿತಿಯ ಮತ್ತೊಂದು ವಿನೋದದ ಲೀಲೆ.
ವಿವರಣೆ :
ನಮ್ಮೆಲ್ಲ ಭಕ್ತರ ಅನುಗ್ರಹಕ್ಕಾಗಿ ದೇವಭೂಮಿಯಾದ ಹಿಮಾಚಲಕ್ಷೇತ್ರದಲ್ಲಿ ದಿವ್ಯಜ್ಯೋತಸ್ಸಿನ
ಕಲಾವಿಶೇಷರೂಪದಿಂದ ಪಾರ್ವತೀಪರಮೇಶ್ವರರು ದರ್ಶನವನ್ನು ನೀಡುತ್ತಾರೆ. ಈ ರೀತಿಯ ವಿನೋದವು ಭಕ್ತರಿಗೋಸ್ಕರ ಮಂಡಿಸಲ್ಪಟ್ಟ ಚರ್ಯೆಯೇ
ಸರಿ. ತೇಜೋಮಯವಾದ ದೇಹವುಳ್ಳ
ಸೂಕ್ಷ್ಮದೃಷ್ಟಿಗೆ ಗೋಚರಿಸುವ ಪಾರ್ವತೀಪರಮೇಶ್ವರರು ಹಿಮಾಚಲಕ್ಷೇತ್ರದಲ್ಲಿ ಅಧಿಷ್ಠಾನವುಳ್ಳವರಾಗಿದ್ದಾರೆ.
ಸಂಸ್ಕೃತದಲ್ಲಿ :
ಏತಾಸಾಮರ್ಯಾಣಾಂ ಜಾನಂತಃ
ಶಾಸ್ತ್ರಸಮ್ಮತಂ ಭಾವಂ
ಜಾನೀಯುರ್ಭವಮಹಿಷೀಂ
ಭುವನಾನಾಮಂಬಿಕಾಂ ದೇವೀಮ್ ||25||
ತಾತ್ಪರ್ಯ :
ಪವಿತ್ರ ಗ್ರಂಥಗಳ ಪ್ರಕಾರ
ಆರ್ಯ ಛಂದಸ್ಸಿನಲ್ಲಿ ರಚಿಸಲ್ಪಟ್ಟ ಮೇಲೆ ವಿವರಿಸಿದ ಶ್ಲೋಕಗಳ ಸಹಾಯದಿಂದ ಈ ಸ್ತೋತ್ರದ ಓದುಗರು ವಿಶ್ವಮಾತೆ
ಹಾಗೂ ಶಿವನ ಪತ್ನಿ - ಉಮಾದೇವಿಯ ದೈವೀ ದೃಷ್ಟಿಯನ್ನು
ಅರಿತುಕೊಳ್ಳಲಿ.
ವಿವರಣೆ :
ಈ ಶ್ಲೋಕದಲ್ಲಿ ಕವಿಯು
ಮೊದಲನೇ ಪುಷ್ಪಗುಚ್ಚವನ್ನು (ಸ್ತಬಕವನ್ನು) ಉಪಸಂಹಾರಮಾಡುತ್ತಾನೆ. ಈ ಸ್ತಬಕದಲ್ಲಿ ಆರ್ಯಾ ಎಂಬ ಛಂದಸ್ಸಿನಲ್ಲಿ ಪದ್ಯಗಳನ್ನು ರಚಿಸಲಾಗಿದೆ. ವೇದಶಾಸ್ತ್ರಗಳಿಗೆ ಅನುಕೂಲವಾದ ಈ ಪದ್ಯಗಳ ಅರ್ಥವನ್ನು ತಿಳಿದ
ವಿದ್ವಾಂಸರು ಆ ಪರಶಿವನ ಲಲನೆಯನ್ನು ಜಗತ್ತಿನ ದೇವಿಯನ್ನಾಗಿ ತಿಳಿಯುತ್ತಾರೆ ಅಂದರೆ ಜಗನ್ಮಾತೆಯಾದ
ಉಮಾದೇವಿಯ ಸ್ವರೂಪವನ್ನು ತಿಳಿದವರಾಗುತ್ತಾರೆ.
ಇಲ್ಲಿಗೆ ಮೊದಲನೆಯ ಶತಕದ ಮೊದಲನೆಯ ಸ್ತಬಕವು ಸಂಪೂರ್ಣವಾಯಿತು.

Comments
Post a Comment