ಉಮಾಸಹಸ್ರಮ್ - ಪುಷ್ಪಗುಚ್ಛ (ಸ್ತಬಕ) - 4


ಪುಷ್ಪಗುಚ್ಛ (ಸ್ತಬಕ) - 4

ಛಂದಸ್ಸು - ಗೀತಿವೃತ್ತಂ
ಆಧ್ಯಾತ್ಮಿಕವಿಭೂತಿಯ ವರ್ಣನೆ

ಸ್ತಬಕದಲ್ಲಿ ಉಮಾದೇವಿಯ ದೈವೀ ಅಭಿವ್ಯಕ್ತಿಯು ಕುಂಡಲಿನೀ ಶಕ್ತಿಯಾಗಿ ವೈಭವೀಕರಿಸಲಾಗಿದೆ

ಸಂಸ್ಕೃತದಲ್ಲಿ :

ಅಮೃತಾಂಶುಬಿಂಬಸಾರಾದ್ ಭಯೋsಪಿ ವಿನಿರ್ಗತೋ ಭೃಶಂ ಸೂಕ್ಷ್ಮಃ
ಸಾರೋ ಗೌರೀವದನಾದ್ ದರಹಾಸೋ ಹರತು ದುಃಖಜಾಲಂ ನಃ ||1||

ತಾತ್ಪರ್ಯ :

ಗೌರಿಯ ಅತ್ಯಂತ ಮಧುರವಾದ ಮುಗುಳು ನಗೆಯು ಆನಂದಕರವಾದ ಚಂದ್ರನ ಬೆಳಕಿಗಿಂತ ಪರಮಾನಂದಕರವಾಗಿದ್ದು, ನಮ್ಮ ದುಃಖಗಳನ್ನು ತೊಡೆದುಹಾಕಲಿ.

ವಿವರಣೆ :

ಚಂದ್ರಬಿಂಬದ ಸಾರದಂತಿರುವ ಗೌರೀವದನದಿಂದ ಹೆಚ್ಚಾಗಿ ಹೊರಬಂದಿರುವ ಅತ್ಯಂತ ಸೂಕ್ಷ್ಮವಾದ ಮಂದಹಾಸವು ನಮ್ಮ ದುಃಖಜಾಲವನ್ನು ಹೋಗಲಾಡಿಸಲಿ.

ಸಂಸ್ಕೃತದಲ್ಲಿ :

ಕುಲಕುಂಡೇ ಪ್ರಾಣುವಂತೀ ಚೇತಂತೀ ಹೃದಿ ಸಮಸ್ತಜಂತೂನಾಂ
ಮೂರ್ಧನಿ ವಿಚಿಂತಯಂತೀ ಮೃತ್ಯುಂಜಯಮಹಿಷಿ ವಿಜಯತೇ ಭವತಿ||2||

ತಾತ್ಪರ್ಯ :

, ಮೃತ್ಯುಂಜಯನ ರಾಣಿಯೇ ! ಸಾವನ್ನು ಗೆದ್ದವಳೇ, ಮೂಲಾಧಾರ ಚಕ್ರಕುಲಕುಂಡದಲ್ಲಿ ಶಬ್ದವನ್ನು ಉತ್ಪತ್ತಿಮಾಡಿ ನೀನು ಆಳುತ್ತಿರುವೆ ಹಾಗೂ ಇದರ ಮೂಲಕ ಎಲ್ಲ ಜೀವಿಗಳ ಹೃದಯದಲ್ಲೂ ಜ್ಞಾನದ ಉದ್ದೀಪನೆಯನ್ನುಂಟುಮಾಡಿ ಮತ್ತು ತಲೆಯಲ್ಲಿ ಯೋಚನೆಯನ್ನು ಮಾಡುವಂತೆ ಪ್ರೇರೇಪಿಸುವೆ.

ಮಹಾ ಶಕ್ತಿಯು ನಮ್ಮೆಲ್ಲರ ದೈಹಿಕ ಶರೀರದೊಳಗೆ ಬೇರೆ ಬೇರೆ ಹಂತಗಳಾದ ಮೂಲಾಧಾರ, ಹೃದಯ ಹಾಗೂ ಮಸ್ತಕ (ಶಿರ) ಗಳಲ್ಲಿ ವಾಗ್ರೂಪಾ, ಚಿತ್ತಿರೂಪಾ ಮತ್ತು ಮನೋರೂಪಗಳಲ್ಲಿ ನೆಲೆಸಿರುವಳು. ಮಹಾ ಶಕ್ತಿಯು ವಿವಿಧ ಪ್ರಮುಖ ಕಾರ್ಯಗಳಾದ ಮಾತು ಪರ್ವಕನಂತೆ ಮೂಲಾಧಾರದಲ್ಲಿ, ಸ್ವಪ್ರಜ್ಞೆಯ ಅರಿವಿನಂತೆ ಹೃದಯದಲ್ಲಿ ಮತ್ತು ಮನಸ್ಸಿನ ವಿವಿಧ ಶಾಖೆಗಳಂತೆ ಶಕ್ತಿಯು ಆಲೋಚನೆ, ವಿವೇಚನೆ ಇತ್ಯಾದಿ ರೂಪಗಳಲ್ಲಿರುವಳು. ಮೃತ್ಯುಂಜಯಮಹಿಷಿ ಪದವು ಶಕ್ತಿಯು ಕಾಲನನ್ನು ಗೆದ್ದ ಶಿವನ ಅಮೃತರೂಪವೆಂಬುದನ್ನು ಸೂಚಿಸುತ್ತದೆ. ಪುರಾತನ ಕಾಲದ ಋಷಿಗಳು ಮಾತಿಗೆ ಸಂಬಂಧಿಸಿದಂತೆ ನಾಲ್ಕು ವಿಧದ ವ್ಯುತ್ಪತ್ತಿಗಳಾದ, ಪರಾ, ಪಶ್ಯನ್ತೀ, ಮಧ್ಯಮ ಹಾಗೂ ವೈಖರೀ ಗಳನ್ನು ಗುರುತಿಸುವರು. ಇವುಗಳಲ್ಲಿ ಕೊನೆಯದಾದ ವೈಖರೀ ಮಾತು ಮಾನವನ ಮಾತೆಂದು ಗುರುತಿಸಲಾಗಿದೆ.

ವಿವರಣೆ :

ಮೃತ್ಯುಂಜಯನ ಮಹಿಷಿಯಾದ ಉಮಾದೇವಿಯೆ! ನೀನು ಮೂಲಾಧಾರದಲ್ಲಿ ಶಬ್ದ ಮಾಡುತ್ತಾ, ಎಲ್ಲ ಜೀವಿಗಳ ಹೃದಯದಲ್ಲಿ ಜ್ಞಾನಸ್ವರೂಪಿಣಿಯಾಗಿ, ತಲೆಯಲ್ಲಿ ಜ್ಞಾನಸ್ವರೂಪಿಣಿಯಾಗಿ ಇರುವೆ ಹಾಗೂ ಪ್ರಕಾಶಿಸುವೆ. ಮೃತ್ಯುಂಜಯ ಮಹಿಷಿ! ಎನ್ನುವಾಗ ಮಹಿಷಿ ಪದವು, “ಮಹ ಪೂಜಾಯಾಂಎಂಬ ಧಾತುವಿನಿಂದ ಮಹ್ಯತೇ ಪೂಜ್ಯತೇ ಇತಿ ಮಹಿಷೀ ಎಂದು ಉತ್ಪನ್ನವಾಗಿದೆ.

ಪರಾ, ಪಶ್ಯಂತೀ, ಮಧ್ಯಮಾ,  ವೈಖರೀ ಎಂದು ನಾಲ್ಕು ರೀತಿಯಾಗಿ ಮಾತು ಇರುತ್ತದೆಂದು ಪ್ರಾಚೀನರು ಹೇಳುತ್ತಾರೆ. ಪರಾ ಎನ್ನುವುದು ಮೊದಲನೆಯದು. ಅನಭಿವ್ಯಕ್ತವಾದುದು. ಮೂಲಾಧಾರದಲ್ಲಿರುತ್ತದೆ.

ವಾಗ್ರೂಪಾ, ಮನೋರೂಪಾ, ಚಿತ್ತಿರೂಪಾ ಎಂಬುದಾಗಿ ಮಹಾಶಕ್ತಿಯು ನಮ್ಮ ಶರೀರದಲ್ಲಿ ಕ್ರಮವಾಗಿ, ಮೂಲಾಧಾರ, ಹೃದಯ, ಮಸ್ತಕಗಳಲ್ಲಿ ಪ್ರಕಾಶಿಸುತ್ತದೆ.

ಸಂಸ್ಕೃತದಲ್ಲಿ :

ತೇಜೋಜಲಾನ್ನಸಾರೈಸ್ತ್ರಯೋsಣವೋ ಮೂಲಹೃದಯಮಸ್ತೇಷು
ಪಾಕಾತ್ತೇ ನಿಷ್ಪನ್ನಾಸ್ತ್ರೈಲೋಕ್ಯವ್ಯಾಪಿಕೇsಮ್ಬಾ ದೇಹವತಾಮ್ ||3||

ತಾತ್ಪರ್ಯ :

ಲೋಕದ ಸಮಸ್ತ ಜೀವಿಗಳ ಮಾತೆಯೇ! ನೀನು ತ್ರಿಲೋಕಗಳಲ್ಲೂ ವ್ಯಾಪಿಸಿರುವೆ. ಮೂರು ಮೂಲಭೂತಗಳಾದ(ಅಣುಗಳು), ಅಗ್ನಿಯ ಅಸ್ಥಿತ್ತ್ವ, ನೀರು ಮತ್ತು ಆಹಾರವು ಮೂಲಾಧಾರ, ಹೃದಯ ಮತ್ತು ಮೆದುಳಿನಲ್ಲಿ ನಿನ್ನ ಶಕ್ತಿಯಿಂದ ಉಂಟಾಗುವುದು.

ಮಾತಿನ ಅಣುವಿನ ಸೂಕ್ಷ್ಮರೂಪವು ಅಗ್ನಿತತ್ತ್ವದಿಂದ ರೂಪುಗೊಂಡು ಮೂಲಾಧಾರದಲ್ಲಿ ಇರುವುದು. ಜಲತತ್ತ್ವದಿಂದ ರೂಪುಗೊಂಡ ಮುಖ್ಯ ಶಕ್ತಿ, ಪ್ರಾಣವು ಹೃದಯ ಪದ್ಮದಲ್ಲಿರುವುದು, ಆಹಾರ ತತ್ತ್ವದಿಂದ ರೂಪುಗೊಂಡ ಬುದ್ಧಿಯೊಳಗೆ (ಮೆದುಳು) ಮನಸ್ಸು ಮತ್ತು ಅನಾಹತ ಚಕ್ರವು ಇರುವುದು. ಛಾಂದೋಗ್ಯೋಪನಿಷತ್ತಿನ ಪ್ರಕಾರ, ಮನಸ್ಸು ಅನ್ನಮಯ (ಆಹಾರ), ಪ್ರಾಣವು ಆಪೋಮಯ (ನೀರು), ಮತ್ತು ಮಾತು ತೇಜೋಮಯ (ಅಗ್ನಿ).

ವಿವರಣೆ :

ತೇಜ, ಜಲ, ಮತ್ತು ಅನ್ನ ಇವುಗಳ ಸಾರವಾದ ಸೂಕ್ಷ್ಮಾಂಶಗಳಿಂದ ಮೂಲಾಧಾರ ಹೃದಯ ಮತ್ತು ತಲೆಗಳಲ್ಲಿ
ಕ್ರಮವಾಗಿ ವಾಕ್, ಪ್ರಾಣ ಮತ್ತು ಮಾನಸವಾದ ಅಣುವು ಉತ್ಪನ್ನವಾಗುತ್ತವೆ. ಇವೆಲ್ಲವೂ ದೇವಿಯು ಮಾಡುವ ಪಾಕಕ್ರಿಯೆಯಿಂದ ಆಗುತ್ತದೆ. ಇವೆಲ್ಲವೂ ಜಗದ್ವ್ಯಾಪಿನಿಯಾದ ಮಹಾಶಕ್ತಿಯ ಪಾಕಕ್ರಿಯೆಯ ಪ್ರಭಾವದಿಂದ ಶರೀರದಲ್ಲಿ ಉತ್ಪನ್ನವಾಗುತ್ತದೆ. “ಅನ್ನಮಶಿತಂ ತ್ರೇಧಾವಿಧೇಯತೇಎಂದು ಆರಂಭಿಸಿಅನ್ನಮಯಂ ಹಿ ಸೋಮ್ಯ ಮನಃ”, “ಆಪೋಮಯಃ ಪ್ರಾಣಃ”, “ತೇಜೋಮಯಃ ಪ್ರಾಣಃ”, “ತೇಜೋಮಯೀ ವಾಕ್ಎಂದು ಛಾಂದೋಗ್ಯ ಶೃತಿಯು ಈ ವಿಷಯವನ್ನು ಹೇಳುತ್ತದೆ.

ಸಂಸ್ಕೃತದಲ್ಲಿ :

ಪೂರ್ಣೇ ಶರೀರಶಿಲ್ಪೇ ದ್ವಾರೇಣ ಬ್ರಹ್ಮರಂಧ್ರಸಂಜ್ಞೇನ
ನಾಡೀಪಥೇನ ಗತ್ವಾ ತೈಜಸಮಣುಮಾವಿಶಸ್ಯಮೇಯಬಲೇ ||4||

ತಾತ್ಪರ್ಯ :

ಅಳೆಯಲಾಗದ ಶಕ್ತಿಯುಳ್ಳ ಓ ದೇವಿಯೆ! ಬ್ರಹ್ಮರಂಧ್ರದ ಮೂಲಕ ಸೃಷ್ಟಿಯಾದ ದೈಹಿಕರೂಪವನ್ನು ನೀನು ಪ್ರವೇಶಿಸುವೆ ಮತ್ತು ನರಮಂಡಲಗಳ (ನಾಡಿಚಕ್ರ) ಮೂಲಕ ಹಾದು ಹೋಗಿ ಅಗ್ನಿ ಅಂಶ (ಮೂಲಾಧಾರ)ವನ್ನು ಆಕ್ರಮಿಸುವುದು.

ದೈವೀ ಮಾತೆ, ಉಮಾದೇವಿಯು ಮಾನವನ ದೇಹದ ಅದ್ಭುತ ಹಾಗೂ ಸಂಕೀರ್ಣರಚನೆಯನ್ನು ತನ್ನ ಅಪರಿಮಿತ ಶಕ್ತಿಯೊಂದಿಗೆ ತಲುಪುವಳು. ಅನಂತರ ತನ್ನ ಅಪರಿಮಿತ ಶಕ್ತಿಯಿಂದ ತಲೆಯ ಮೇಲಿರುವ ಸೂಕ್ಷ್ಮ ರಂಧ್ರದ (ಬ್ರಹ್ಮರಂಧ್ರದ) ಮೂಲಕ ಪ್ರವೇಶಿಸುವಳು. ಅನಂತರ ಅವಳು ಮಧ್ಯನಾಡಿಯಾದ ಸುಷುಮ್ನಾ ನಾಡಿ (ಸೂಕ್ಷ್ಮ ನರಮಂಡಲದ), ನರವಾಹಿನಿಗಳ ಮೂಲಕ ನರವ್ಯೂಹವನ್ನು ಬೆನ್ನುಹುರಿಯ ಮೇಲಿಂದ ಕೆಳಗಿನವರೆಗೂ ಪ್ರವೇಶಿಸಿ ತನ್ನ ನಿಲ್ದಾಣವಾದಪರಾಎಂಬ ವಾಕ್ ನಲ್ಲಿರುವ ಮಹೋನ್ನತ ಮಾತಿನಲ್ಲಿ, ಅಗ್ನಿ ತತ್ತ್ವ, ಮೂಲಾಧಾರದೆಡೆಗೆ ಮುಂದುವರೆಯುವಳು.

ವಿವರಣೆ :

ಶರೀರವೆಂಬ ಶಿಲ್ಪವು ಪೂರ್ಣವಾದ ಮೇಲೆ ನೀನು ಬ್ರಹ್ಮರಂಧ್ರದ ನಾಡಿಯ ಮೂಲಕ ಒಳಗೆ ಹೋಗಿ ಮೂಲಾಧಾರದಲ್ಲಿರುವಪರಾಎಂಬ ವಾಕ್ಯವನ್ನು ಪ್ರವೇಶಿಸುತ್ತೀಯೆ. ಇಲ್ಲಿ ಬ್ರಹ್ಮರಂಧ್ರದಲ್ಲಿರುವ ನಾಡಿಯೆಂದರೆ ಸ್ಥೂಲವಾದ ನಾಡಿಯಲ್ಲಿ ತಲೆಯಿಂದ ಹಿಡಿದು ಮೂಲಾಧಾರದವರೆಗೂ ಇರುವ ನಾಡೀ ಸಮೂಹದ ಮಧ್ಯದಲ್ಲಿರುವ ಸೂಕ್ಷ್ಮವಾಗಿರುವ ಶಕ್ತಿಯನ್ನು ಪ್ರವಹಿಸುವಂತೆ ಮಾಡುವ ನಾಡಿ. ಇದನ್ನೇ ಮಧ್ಯನಾಡಿಯೆಂದೂ, ಸುಷುಮ್ನಾನಾಡಿಯೆಂದೂ ಹೇಳುತ್ತಾರೆ.

ಸಂಸ್ಕೃತದಲ್ಲಿ :

ಅಂಶೇನಾವಿಶ್ಯಾದೌ ಯಾಸಿ ಪುನಸ್ತಂ ತತಶ್ಚ ನಿರ್ಯಸಿ
ಮಾರ್ಗಾಭ್ಯಾಂ ದ್ವಾಭ್ಯಾಂ ತ್ವಂ ನಾಡ್ಯಾಃ ಪಶ್ಚಾತ್ ಪುರಶ್ಚ ಸಿದ್ಧಾಭ್ಯಾಮ್ ||5||

ತಾತ್ಪರ್ಯ :

ಮೊದಲಿಗೆ ನೀನು ನಿನ್ನ ಒಂದು ಭಿನ್ನಾಂಶದೊಂದಿಗೆ ಮೂಲಾಧಾರವನ್ನು ಪ್ರವೇಶಿಸಿ, ನಂತರ ಹೊರಬಂದೆ. ಅನಂತರ ಮತ್ತೊಂದು ಮಾರ್ಗದಿಂದ ಪ್ರವೇಶಿಸಿದೆ. ಹೀಗೆ, ನೀನು ಈಗಾಗಲೇ ಭೌತಿಕ ಶರೀರದಲ್ಲಿ ರೂಪಗೊಂಡಿರುವ ನರಮಂಡಲ (ನಾಡಿಚಕ್ರ) ದಲ್ಲಿನ ಹಿಂಭಾಗ ಹಾಗೂ ಮುಂಭಾಗದ ರಂಧ್ರಗಳೆರಡರ ಮೂಲಕವೂ ಪ್ರವೇಶಿಸಿ ಮತ್ತು ನಿರ್ಗಮಿಸುವೆ.

ಶಕ್ತಿಯು ಬ್ರಹ್ಮರಂಧ್ರದ ಶಿಖರದ ಮೂಲಕ ಮೂಲಾಧಾರದವರೆಗೂ ಕೆಳಗೆ ಹರಿದು ನಂತರ ಅವಳ ಹಿಂದಿರುಗುವ ಪಯಣವು ಮೂಲಾಧಾರದಿಂದ ಪ್ರಾರಂಭವಾಗಿ ಬ್ರಹ್ಮರಂಧ್ರದ ಪಯಣವನ್ನು ಇಲ್ಲಿ ವಿವರಿಸಲಾಗಿದೆ.

ವಿವರಣೆ :

ನೀನು ಮೊದಲು ಬಿಂದುಕಲಾಮಾತ್ರದಿಂದ ನಾಡಿಯಲ್ಲಿ ಪ್ರವೇಶಿಸಿ, ಅಲ್ಲಿಂದ ಮೊದಲೇ ಸಿದ್ಧವಾದ ಎರಡು ಮಾರ್ಗಗಳಿಂದ ಹೊರಬರುತ್ತೀಯೆ. ಇಲ್ಲಿನ ತಾತ್ಪರ್ಯವೇನೆಂದರೆ ಪರಾಶಕ್ತಿಯು ಮಧ್ಯನಾಡಿಯ ಮೂಲಕ ಶರೀರದಲ್ಲಿ ಪ್ರವೇಶಿಸುತ್ತಾಳೆ. ಹಿಂದಿರುವ ಮಾರ್ಗದಿಂದ ಬ್ರಹ್ಮರಂಧ್ರದ ಮಾರ್ಗದಿಂದ ಮೂಲಾಧಾರದಲ್ಲಿ ಶಕ್ತಿಯ ಪ್ರವೇಶವಾಗುತ್ತದೆ. ಮೂಲಾಧಾರವನ್ನು ಪ್ರವೇಶಮಾಡಿ ಅದೇ ನಾಡಿಯು ಮುಂದಿರುವ ಮಾರ್ಗದಲ್ಲಿ ಮೇಲಕ್ಕೆ ಬಂದು ಬ್ರಹ್ಮರಂಧ್ರದ ಮಾರ್ಗವಾಗಿ ಹೊರಬರುತ್ತದೆ. ಒಟ್ಟಿನಲ್ಲಿ ಶಕ್ತಿಯ ಒಳಪ್ರವೇಶಕ್ಕೂ ಮತ್ತು ಅದು ಹೊರಕ್ಕೆ ಹೋಗುವುದಕ್ಕೂ ಒಂದೇ ಮಾರ್ಗವಿಲ್ಲ. ಎರಡು ಮಾರ್ಗಗಳಿವೆ.

ಸಂಸ್ಕೃತದಲ್ಲಿ :

ಯಾತಾಯಾತವಿಹಾರೇ ಮಾತಸ್ತಸ್ಮಿನ್ ಭವತ್ಯುಪಾಧಿಸ್ತೇ
ಆರಭ್ಯ ಮಸ್ತಕಸ್ಥಲಮಾಮೂಲಾಧಾರಮಸ್ಥಿಪಂಜರಿಕಾ ||6||

ತಾತ್ಪರ್ಯ :

, ಮಾತೆಯೇ! ಮಾನವ ಶರೀರದ ಅಸ್ತಿಪಂಜರವು ಕೆಳಮಡಿಕೆಯಲ್ಲಿನದ್ದಾಗಿದ್ದು ಮಸ್ತಕದಿಂದ ಮೂಲಾಧಾರದವರೆಗೂ ಮತ್ತು ಅಲ್ಲಿಂದ ಮತ್ತೆ ಮಸ್ತಕದೆಡೆಗೂ ನಿನ್ನ ವಿಹಾರಕ್ಕೆ ಆಧಾರವಾಗಿರುವುದು.

ವಿವರಣೆ :

ಹಿಂದಿನ ಶ್ಲೋಕದಲ್ಲಿ ಬ್ರಹ್ಮರಂಧ್ರದಿಂದ ಶಕ್ತಿಯು ಪ್ರವೇಶಿಸಿ ಮೂಲಾಧಾರವನ್ನು ತಲುಪಿ ಅಲ್ಲಿಂದ ಮತ್ತೊಂದು ಮಾರ್ಗದಿಂದ ಅದು ನಿರ್ಗಮಿಸುವುದನ್ನು ವಿವರಿಸಲಾಯಿತು. ಓ ಮಾತೆಯೇ! ಈ ರೀತಿಯ ಯಾತಾಯಾತ ವಿಹಾರದಲ್ಲಿ ನಿನಗೆ, ತಲೆಯಿಂದ ಪ್ರಾರಂಭಿಸಿ ಮೂಲಾಧಾರದವರೆಗೆ ಇರುವ ಪಂಜರದಂತಿರುವ ಮೂಳೆಯು ನಿನಗಾಧಾರವಾಗಿರುತ್ತದೆ.

ಸಂಸ್ಕೃತದಲ್ಲಿ :

ನೃತನುಷು ವಿಹರಂತೀಂ ತ್ವಾಂ ಉಪಾಧಿವೀಣಾಕೃತೇರ್ಜಗನ್ಮಾತಃ
ಸಾದೃಶ್ಯಾತ್ ಕುಂಡಲಿನೀಂ ಪರೋಕ್ಷವಾದಿಪ್ರಿಯಾಃ ಪ್ರಭಾಷಂತೇ ||7||

ತಾತ್ಪರ್ಯ :

, ಮಾತೆಯೇ ! ಕೆಲವರು ಸಾಂಕೇತಿಕವಾಗಿ ನಿನ್ನನ್ನು ಕುಂಡಲಿನಿಯು ವೀಣೆಯ ಮೇಲೆ ಹರಿದಾಡುವಂತೆ ಕಾಣುತ್ತಾರೆ. ನೀನು ಚಲಿಸುವ ಮೂಳೆಗಳ ಹಂದರವನ್ನು  ಅದರ ಆಕಾರದ ಮೇಲೆ ತಂತಿವಾದ್ಯವಾದ ವೀಣೆಯೆನ್ನುವರು.

ಕುಂಡಲಿನಿ ಶಕ್ತಿಯ ಚಲಿಸುವ ಕೆಳಸ್ತರವನ್ನು ವೀಣೆಗೆ ಹಾಗೂ ಸರ್ಪಕ್ಕೆ (ಕುಂಡಲಿನಿ) ಹೋಲಿಸುವರು. ಸಾಮಾನ್ಯವಾಗಿ ಕುಲಕುಂಡ(ಕುಂಡಲಿನಿ) - ಮೂಲಾಧಾರ ಶಕ್ತಿಯು ನಿದ್ರಾಸ್ಥಿತಿಯಲ್ಲಿರುವುದೆಂದು ನಂಬಲಾಗಿದೆ. ಅದು ಎಚ್ಚರವಾದಾಗ ಯೋಗಾಶಕ್ತಿಯ ಆಧಾರದಿಂದ ಮಸ್ತಕದಲ್ಲಿನ ಸಹಸ್ರಾರವನ್ನು ಪ್ರವೇಶಿಸುತ್ತದೆ. ಹಾಗೂ ಕುಂಡಲಿನಿ ಶಕ್ತಿಯು ಸುರುಳಿ ಸುತ್ತಿಕೊಂಡಿರುವ ನಿದ್ರಾಸ್ಥಿತಿಯಲ್ಲಿರುವ ಸರ್ಪದಂತೆ ಕಾಣಿಸುವುದೆಂದು ನಂಬಲಾಗಿದೆ ಮತ್ತು ಅದು ಎಚ್ಚರವಾದಾಗ ಅತಿ ಉದ್ದಕ್ಕೆ ಹಿಗ್ಗುವುದು. ಆನಂದಲಹರಿಯಲ್ಲಿಯೂ ಇದೇ ರೀತಿಯ ವಿವರಗಳಿರುವುದು.

ವಿವರಣೆ :

ಜಗನ್ಮಾತೆಯು ಮನುಷ್ಯ ಶರೀರದಲ್ಲಿ ಹಿಂದೆ ವಿವರಿಸಿರುವ ರೀತಿಯಲ್ಲಿ ವಿಹರಿಸುವಳು. ಅವಳನ್ನು, ಅಸ್ಥಿಪಂಜರವು ವೀಣೆಯ ಆಕಾರದಲ್ಲಿ ಇರುವುದರಿಂದ ಗೂಢಭಾಷೆಯಲ್ಲಿ ವ್ಯವಹರಿಸುವವರು ಕುಂಡಲಿನೀ ಎನ್ನುವರು. ಮೂಲಾಧಾರದಿಂದ ತಲೆಯವರೆಗೂ ಶಕ್ತಿವಿಹಾರಾಶ್ರಯವಾದ ಅಸ್ಥಿಪಂಜರವು ವೀಣೆಯ ಆಕಾರದಲ್ಲಿರುವುದರಿಂದ ಕುಂಡಲಿನೀ ಎನ್ನಲ್ಪಡುತ್ತದೆ ಎಂಬ ಭಾವವು. ಅಸ್ಥಿಪಂಜರವೇ ಸರ್ಪದಾಕಾರದಲ್ಲಿರುವುದರಿಂದ ಕುಂಡಲಿನಿಯಾಗುತ್ತದೆ ಎನ್ನುವುದು ಸಮಂಜಸವಾಗಿದೆ.

ಕುಂಡಲಿನಿಯ ಕುರಿತಂತೆ ಪ್ರಾಚೀನರ ಅಭಿಪ್ರಾಯದಂತೆ, ಕುಲಕುಂಡವೆಂಬ ಹೆಸರುಳ್ಳ ಮೂಲಾಧಾರದಲ್ಲಿ ಶಕ್ತಿಯು ನಿದ್ರಿಸುತ್ತಾ, ಯೋಗ ಪ್ರಭಾವದಿಂದ, ಎಚ್ಚೆತ್ತು ಮೇಲಕ್ಕೆ ಹೋಗಿ ತಲೆಯಲ್ಲಿ ಸಹಸ್ರಾರವೆಂಬ ನಾಡಿಯನ್ನು ಪ್ರವೇಶಿಸುವುದು. ಕುಂಡಲಾಕಾರದಲ್ಲಿರುವ ಸರ್ಪವು ಮಲಗಿರುತ್ತಾ ಎಚ್ಚೆತ್ತಾಗ ತನ್ನ ಶರೀರವನ್ನು ಹೇಗೆ ಉದ್ದ ಮಾಡಿಕೊಂಡು ಹೆಡೆಯನ್ನು ವಿಸ್ತರಿಸಿ ಪ್ರಬಲವಾಗುತ್ತದೆಯೋ ಹಾಗೇ ಮಹಾಶಕ್ತಿಯೂ ಕೂಡಾ ಕುಂಡಲಿನೀ ಎಂಬೀ ಹೆಸರಿನಿಂದ ಆಧ್ಯಾತ್ಮದಲ್ಲಿ ಪ್ರಸಿದ್ಧವಾಗಿದ್ದಾಳೆ.

ಅವಾಪೂಸ್ವಾಂ ಭೂಮಿಂ ಭುಜಗನಿಭಮಧ್ಯಷ್ಟವಿಲಯಂ ಸ್ವಮಾತ್ಮಾನಂ ಕೃತ್ವಾ ಸ್ವಪಿಷಿಕುಲಕುಂಡೇಕುಹಿರಿಣಿ ಎಂದು ಆನಂದಲಹರಿಯಲ್ಲಿಯೂ ಹೇಳಲಾಗಿದೆ.

ಸಂಸ್ಕೃತದಲ್ಲಿ :

ನಭಸಃ ಶೀರ್ಷದ್ವಾರಾ ಪ್ರವಹಂತೀಂ ಯ ಇಹ ವಿಗ್ರಹೇ ಶಕ್ತಿಮ್
ಅನುಸಂದಧಾತಿ ನಿತ್ಯಂ ಕೃತಿನಸ್ತಸ್ಯೇತರೈರಲಂ ಯೋಗೈಃ ||8||

ತಾತ್ಪರ್ಯ :

ಆಕಾಶದಿಂದ ಭೌತಿಕ ಶರೀರದೊಳಕ್ಕೆ ಮಸ್ತಕದ ಮೂಲಕ ಸತತವಾಗಿ ಹರಿಯುವ ಶಕ್ತಿಯನ್ನು ನೋಡುವ ಮುನಿಗಳಿಗೆ ಬೇರೆ ಯಾವುದೇ ಯೋಗ ಅಭ್ಯಾಸದ ಅಗತ್ಯವಿರುವುದಿಲ್ಲ.

ದೈವೀ ಶಕ್ತಿ, ಪ್ರಜ್ಞೆಯ ಶಕ್ತಿಯು ಆಕಾಶದಿಂದ ಪರಿಶುದ್ಧವಾದ ಶರೀರದೊಳಕ್ಕೆ ನೆತ್ತಿಯಲ್ಲಿರುವ ಬ್ರಹ್ಮರಂಧ್ರದ ಮೂಲಕ ಪ್ರವಹಿಸುತ್ತದೆ. ಅದನ್ನು ಸ್ವೀಕರಿಸುವವನು ಮಾತ್ರ ಎಚ್ಚರಿಕೆಯಿಂದಿದ್ದು ಅದರ ಹಾದಿಯನ್ನು ಅರಿಯಬೇಕು. ಶರೀರದೊಳಕ್ಕೆ ಪ್ರವಹಿಸುವ ಈ ಶಕ್ತಿಗೆ ಯಾವುದೇ ಅಡೆತಡೆ ಹಾಗೂ ಯಾವುದೇ ವಿರಾಮವಿರುವುದಿಲ್ಲ. ಅದು ಅಧೋಮುಖವಾಗಿ ಪ್ರವಹಿಸುತ್ತಾ ಶರೀರದ ಆಳದ ಸ್ತರವನ್ನು ತಲುಪಿ ಮತ್ತು ಪ್ರಜ್ಞೆಯ ಕಾಲುವೆಯು ವ್ಯಾಪಕವಾಗಿ ತಲುಪುವುದು. ಈ ವಿಧದ ನಿರಂತರ ಎಚ್ಚರಿಕೆ, ಪ್ರಯತ್ನ ಮತ್ತು ಹರಿಯುವ ಶಕ್ತಿಗೆ ಎಡೆಮಾಡಿಕೊಡುವ ಕಾರ್ಯವು ಕಟ್ಟಕಡೆಗೆ ದೈವೀ ಶಕ್ತಿಯೊಂದಿಗಿನ ಐಕ್ಯತೆಯೆಡೆಗೆ ಮುನ್ನಡೆಸಿ, ಬೇರೆ ರೂಪದ ಯೋಗದ ಅವಶ್ಯಕತೆಯನ್ನು ದೂರಮಾಡುವುದು.

ವಿವರಣೆ :

ಆಕಾಶದಿಂದ ತಲೆಯ ಮೂಲಕ ಶರೀರದಲ್ಲಿ ಪ್ರವಹಿಸುವ ಶಕ್ತಿಯನ್ನು ಈ ಲೋಕದಲ್ಲಿ ಯಾವ ಸಾಧಕನು ಅನವರತವೂ ಅಡಿಗಡಿಗೆ ಕಾಣುತ್ತಿರುತ್ತಾನೋ ಆ ಪುಣ್ಯಪುರುಷನಿಗೆ ಇತರ ಯೋಗಗಳ ಅವಶ್ಯಕತೆಯಿಲ್ಲ. ಪ್ರಸನ್ನಳಾದ, ಅನವರತವೂ ಎಡೆಬಿಡದೆ ಪ್ರವಹಿಸುವ ಶಕ್ತಿಯ ಅನುಗ್ರಹವು ಸಿದ್ಧಿಸಿದರೆ ಇತರ ಯೋಗಗಳು ಸಿದ್ಧಿಸಿದಂತೆಯೇ ಸರಿ. ಆದ್ದರಿಂದ ಅವು ಅಪೇಕ್ಷಿತವಲ್ಲ.

ಸಂಸ್ಕೃತದಲ್ಲಿ :

ಸರ್ವೇಷು ವಿಶಸಿ ತುಲ್ಯಂ ನಿರ್ಗಚ್ಛಸಿ ತುಲ್ಯಮಂಬ ಭುವನಾನಾಮ್
ಜ್ಞಾತಾ ಚೇದಸಿ ಶಕ್ತ್ಯೈ ನ ಜ್ಞಾತಾ ಚೇದ್ಭವಸ್ಯಹಂಕೃತ್ಯೈ ||9||

ತಾತ್ಪರ್ಯ :

, ಸಮಸ್ತ ಪ್ರಪಂಚಗಳ ಮಾತೆಯೇ! ನೀನು ಎಲ್ಲರೊಳಗೂ ಒಂದೇ ತೀವ್ರವಾದ ಜೀವಶಕ್ತಿಯಿಂದ ಪ್ರವೇಶಿಸುವವಳು ಹಾಗೂ ಅದೇ ತೀವ್ರತೆಯಿಂದ ನಿರ್ಗಮಿಸುವವಳು. ಈ ಕ್ರಿಯೆಗಳ ಬಗ್ಗೆ ಅರಿವಿರುವ ಸಾಧಕರು ಧನ್ಯರು ಹಾಗೇ ಇದರ ಬಗ್ಗೆ, ಹಾಗೂ ನಿನ್ನ ಚಲನವಲನದ ಬಗ್ಗೆ ಅರಿವಿರದವರು ಅಜ್ಞಾನಿಗಳು ಮತ್ತು ಅಹಂಕಾರಿಗಳು.

ಮಹಾನ್ ಸೃಷ್ಟಿಕರ್ತೆ ಹಾಗೂ ದೈವೀ ಶಕ್ತಿಯು ಎಲ್ಲ ಜೀವಿಗಳನ್ನೂ ಒಂದೇ ರೀತಿಯಲ್ಲಿ ಪ್ರವೇಶಿಸಿ ನಂತರ ನಿರ್ಗಮಿಸುವಳು. ತಮ್ಮ ಶರೀರದೊಳಗೆ ದೇವಿಯ ಚಲನೆಯ ಬಗ್ಗೆ ಕೇವಲ ಕೆಲವರಿಗೆ ಮಾತ್ರ ಅರಿವುಂಟಾಗುವುದು. ದೇವಿಯ ಕ್ರಿಯೆಯಿಂದ ಅವರು ತಮ್ಮ ಆಧ್ಯಾತ್ಮದ ಅನ್ವೇಷಣೆಯಲ್ಲಿ ಶಕ್ತಿ ಹಾಗೂ ಬೆಂಬಲವನ್ನು ಪಡೆಯುತ್ತಾರೆ. ಯಾರಿಗೆ ದೇವಿಯ ಚಲನೆಯ ಬಗ್ಗೆ  ಅರಿವಾಗುವುದಿಲ್ಲವೋ ಅವರು ಅಹಂಭಾವದಿಂದ ಪ್ರಾಪಂಚಿಕ ವಿಷಯಗಳಲ್ಲಿ ಮುಳುಗಿರುತ್ತಾರೆ.

ವಿವರಣೆ :

ತಾಯಿಯೇ ನೀನು ಎಲ್ಲರಲ್ಲೂ ಸಮಾನವಾಗಿಯೇ ಯಾತಾಯತವನ್ನು ಮಾಡುತ್ತೀಯೆ. ಆದಾಗ್ಯೂ, ಶರೀರದೊಳಗೆ ಇಳಿಯುವ ಮತ್ತು ಅದರಿಂದ ಹೊರಬರುವ ನಿನ್ನನ್ನು ಯಾರು ತಿಳಿಯುತ್ತಾರೋ ಅವರು ಶಕ್ತಿವೃದ್ಧರಾಗುತ್ತಾರೆ. ಯಾರು ತಿಳಿಯುವುದಿಲ್ಲವೋ ಅವರು ಅಜ್ಞಾನಿಗಳು ಹಾಗೂ ಅಹಂಕಾರವುಳ್ಳವರಾಗುತ್ತಾರೆ.

ಸಂಸ್ಕೃತದಲ್ಲಿ :

ಅವತರಣಂ ಧ್ಯಾತಂ ಚೇದ್ ಆರೋಹಣಮದ್ಭುತಂ ಭವೇಚ್ಛಕ್ತೇಃ
ಯಸ್ಮಿನ್ನಿದಂ ಶರೀರಂ ಭವತಿ ಮಹದ್ವೈದ್ಯುತಾಗ್ನಿಯಂತ್ರಮಿವ ||10||

ತಾತ್ಪರ್ಯ :

ಶಕ್ತಿಯ ಆರೋಹಣವು  ಭವ್ಯವಾದ ವೇಗದಲ್ಲಿ ಮನುಷ್ಯನ ದೈಹಿಕ ರೂಪದಲ್ಲಿ ಮೂಲಾಧಾರದಿಂದ ಮೇಲೇರುವುದು ಹಾಗೂ ಆಕಾಶದಿಂದ ಅವಳ ಅವರೋಹಣವು ಅವನ ಶಿರದ (ಸಹಸ್ರಾರ) ಮೂಲಕ ಆಗುವುದನ್ನು ಯಾರು ಅನುಭವಿಸುತ್ತಾರೋ ಅವರ ಭೌತಿಕ ಶರೀರವು ವಿದ್ಯುತ್ ಅಗ್ನಿಯ ಯಂತ್ರದಂತಾಗುವುದು.

ವಿಜ್ಞಾನಿಗಳು ಬೆಳಕನ್ನು ಕೊಡುವ ಆಧುನಿಕ ವಿದ್ಯುತ್ ಯಂತ್ರಗಳನ್ನು ಕಂಡುಹಿಡಿದಿರುವರು. ಇದನ್ನು ಆಕಾಶದಿಂದ ಶಕ್ತಿಯು ತನ್ನ ಶಿರದ ಮೂಲಕ ಪ್ರವೇಶಿಸುವುದನ್ನು ಯಾರು ಅನುಭವಿಸುತ್ತಾರೋ ಅವರಿಗೆ ಹೋಲಿಸಲಾಗಿದೆ. ಈ ವಿಧದ ಯೋಗ ಶಕ್ತಿಯು, ಶಕ್ತಿಯ ಮೂಲಾಧಾರದಿಂದ ಸಹಸ್ರಾರದೆಡೆಗಿನ ಆರೋಹಣವನ್ನು ಅದ್ಭುತವಾಗುವಂತೆ ಮಾಡುವುದು.

ವಿವರಣೆ :

ಅವತರಣ ಧ್ಯಾನಫಲವನ್ನು ಇಲ್ಲಿ ವಿವರಿಸಲಾಗಿದೆ. ಶಕ್ತಿಯು ಶೀರ್ಷದ್ವಾರದಿಂದ ಶರೀರದೊಳಗೆ ಇಳಿಯುವುದನ್ನು ಧ್ಯಾನ ಮಾಡಿದ್ದೇ ಆದರೆ ಶಕ್ತಿಯ ಆರೋಹಣವು ಶಕ್ತಿಯುತವಾಗುತ್ತದೆ. ಈ ಆರೋಹಣವು ವಿಸ್ಮಯಕರವಾಗಿ ವೈದ್ಯುತಾಗ್ನಿಯಂತೆ ಬಲವುಳ್ಳದ್ದಾಗುವುದು.

ಸಂಸ್ಕೃತದಲ್ಲಿ :

ಆರೋಹಣಮಧ್ಯಾತೃಷು ಹೃದಯೇsಹಂಕಾರಮಾತ್ರನಿಷ್ಪತ್ಯೈ
ತದನು ಶರೀರಮಿದಂ ಸ್ಯಾತ್ ಸುಖಾಯ ದುಃಖಾಯ ವಾ ಯಥಾಭೋಗಮ್ ||11||

ತಾತ್ಪರ್ಯ :

ಶಕ್ತಿಯ ಹರಿವಿನ ಆರೋಹಣದ ಬಗ್ಗೆ ಎಚ್ಚೆತ್ತುಕೊಳ್ಳದೆ ಹಾಗೂ ಅರಿವಿಲ್ಲದಿದ್ದಾಗ ಹೃದಯದಲ್ಲಿ ನಕಾರಾತ್ಮಕವಾದ ಅಹಂಭಾವವು ರೂಪುಗೊಳ್ಳುವುದು.

ವಿವರಣೆ :

ಶರೀರದಲ್ಲಿ ಪ್ರವಹಿಸುತ್ತಿರುವ ಶಕ್ತಿಯ ಧ್ಯಾನದಲ್ಲಿ ಉದಾಸೀನರಾಗಿರುವವರಲ್ಲಿ ಆರೋಹಣವು, ಹೃದಯದಲ್ಲಿ ಅಹಂಕಾರಮಾತ್ರವನ್ನುಂಟುಮಾಡುತ್ತದೆ. ಅಶುದ್ಧವಾದ ಅಹಂಕಾರವುಳ್ಳ ಹೃದಯವಾಗುತ್ತದೆ. ಶುದ್ಧವಾದ ಅಹಂಕಾರದ ಸ್ಫೂರ್ತಿಯಾಗುವುದಿಲ್ಲ. ಅನಂತರ ಈ ಶರೀರವು ಭೋಗಾನುಸಾರವಾಗಿ, ಸುಖಾನುಭವವುಳ್ಳದ್ದಾಗುತ್ತದೆ. ಸಂಸಾರದಲ್ಲಿ ಶರೀರವು, ಸುಖ-ದುಃಖಾನುಭವಕ್ಕೆ ಮಾತ್ರ ಉಪಯುಕ್ತವಾಗುತ್ತದೆ. ಶಕ್ತಿಪ್ರಕಾಶ ವಿಕಾಸಾತ್ಮಕವಾದ ವೈದ್ಯುತಾಗ್ನಿಮಂತ್ರದಂತಾಗುವುದಿಲ್ಲ.

ಸಂಸ್ಕೃತದಲ್ಲಿ :

ಯಾ ವ್ಯಕ್ತಿತಾ ಜನಿಮತಾಮಹಂಕೃತಿಃ ಸಕಲಭೇದಧೀಭೂಮಿಃ
ಪೃಥಗಿವ ತವಾಂಬಿಕೇ ಸಾ ಸತ್ತೈವೋಪಾಧಿಸಂಶ್ರಯಾದ್ ಭಾಂತೀ ||12||

ತಾತ್ಪರ್ಯ :

, ಮಾತೆ ! ವ್ಯಕ್ತಿವಾದಕ್ಕೆ ಸಂಬಂಧಿಸಿದ ಎಲ್ಲ ಜೀವಿಗಳ ಅಹಂಭಾವವು ಬುದ್ಧಿಶಕ್ತಿಯಲ್ಲಿ ತಳಸ್ತರದಲ್ಲಿದ್ದು, ಅದು ವಿಭಿನ್ನವಾದ ಭಾವನೆಗಳಿಗೆ ಆಧಾರವಾಗುತ್ತದೆ.

ವಿವರಣೆ :

ಅಂಬಿಕೆಯೆ ! ಜಗತ್ತನ್ನು ವ್ಯಾಪಿಸಿರುವ ನಿನ್ನ ಮಹಾಶಕ್ತಿಯು ಪ್ರತಿವಸ್ತುವಿನಲ್ಲೂ ಬೇರೆ ಬೇರೆ ಆತ್ಮನಂತೆ ತೋರುತ್ತದೆ.

ಸಂಸ್ಕೃತದಲ್ಲಿ :

ಏತಾಮಾಹುರವಿದ್ಯಾಂ ಬೀಜಂ ಸಂಸಾರವೃಕ್ಷರಾಜಸ್ಯ
ಸರ್ವರಸಫಲಯುತಸ್ಯ ಪ್ರಾರಬ್ಧಜಲೇನ ದೇವಿ ದೋಹದಿನಃ ||13||

ತಾತ್ಪರ್ಯ :

, ದೇವಿ ! ಜನನ-ಮರಣಗಳ ವೃಕ್ಷದಲ್ಲಿ ಎಲ್ಲ ವಿಧವಾದ ರುಚಿಯಾದ ಹಣ್ಣುಗಳಿರುವುದು. ಈ ವೃಕ್ಷದ ಬೀಜವನ್ನೇ ಅವಿದ್ಯಾ ಎನ್ನುವರು. ಈ ವೃಕ್ಷವು ಪೂರ್ವ ಕರ್ಮವೆಂಬ ಜಲದಿಂದ ಬೆಳೆಯುವುದು.

ಇಲ್ಲಿ, ಭೂಮಿಯ ಮೇಲಿನ ಜೀವನವನ್ನು ವೃಕ್ಷಕ್ಕೆ ಹೋಲಿಸುವರು. ಅಜ್ಞಾನ (ಅವಿದ್ಯಾ) ಇದರ ಬೀಜ; ಭಾವನೆಗಳಾದ ಶೃಂಗಾರಗಳೇ ಇದರ ರಸ; ಉದ್ದೇಶವೇ ಇದರ ಹಣ್ಣುಗಳು (ಫಲ) ಮತ್ತು ಜಲವು ಇದರ ಪೂರ್ವ ಕರ್ಮಗಳು (ಪ್ರಾರಬ್ಧ ಕರ್ಮ).

ವಿವರಣೆ :

ಹಿಂದಿನ ಶ್ಲೋಕದಲ್ಲಿ ಭೇದಜ್ಞಾನವನ್ನು ಅವಿದ್ಯಾ ಎಂದು ಕವಿಯು ವರ್ಣಿಸಿರುವರು. ಮತ್ತೊಂದು ರೀತಿಯಲ್ಲಿ ಅದನ್ನೇ ಹೀಗೆ ವರ್ಣಿಸುತ್ತಾರೆ :

ಈ ಅವಿದ್ಯೆಯನ್ನೇ ಸಂಸಾರವೆಂಬ ಮರದ ಬೀಜ. ಈ ಮರವನ್ನು ವೃಕ್ಷರಾಜನೆನ್ನುತ್ತಾರೆ. ಇದರಲ್ಲಿ ಬಿಡುವ ಫಲದಲ್ಲಿ ನವರಸಗಳೂ ಒಳಗೊಂಡಿರುವುದು. ಇಲ್ಲಿರುವ ಪದಗಳನ್ನು ಸಂಸಾರದ ಪರವಾಗಿಯೂ, ಮರದ ಪರವಾಗಿಯೂ ಅರ್ಥೈಸಬಹುದು. ಸಂಸಾರದ ಪರವಾಗಿ ರಸ ಎಂಬ ಪದಕ್ಕೆ ಅರ್ಥ ಹೇಳಿದಾಗ ಶೃಂಗಾರಾದಿ ನವರಸಗಳಿಂದ ಅದು ಕೂಡಿರುವುದು ಎಂದರ್ಥ. ವೃಕ್ಷ(ಮರ)ದ ಪರವಾಗಿ ಅರ್ಥೈಸಿದಾಗ ಕಹಿ, ಸಿಹಿ, ಹುಳಿ, ಒಗಚು ಮೊದಲಾದ ರಸಗಳಿಂದ ಕೂಡಿರುವುದೆಂದು ಅರ್ಥ. ಸಂಸಾರದ ಪರವಾಗಿ ಸಂಸಾರದ ಫಲವು ಉಪಯೋಗವೆಂದು ಅರ್ಥ. ಮರದ ಪರವಾಗಿ ಅರ್ಥ ಮಾಡಿದಾಗ ಫಲವೇ ಆಗುತ್ತದೆ. ಎರಡೂ ಫಲದಿಂದ ಕೂಡಿರುವುದೆಂದು ಭಾವ. ಎರಡೂದೋಹದಿಎಂಬ ಜಲವುಳ್ಳದ್ದಾಗಿರುತ್ತದೆ. ಸಂಸಾರವು ಪ್ರಾರಬ್ದವೆಂಬ ಬಲದಿಂದ ದೋಹದಿ - ಇಷ್ಟವುಳ್ಳದ್ದಾಗುತ್ತದೆ. ವೃಕ್ಷವು ಹೂ ಬಿಡುವ ಮೊದಲು ಇರುವ ಅವಸ್ಥೆಯನ್ನು ದೋಹದಿ ಎನ್ನುತ್ತಾರೆ. ಅದರಿಂದ ಅದು ದೋಹದಿಯಾಗುತ್ತದೆ. ಶಬ್ದಾರ್ಣವವೆಂಬ ಗ್ರಂಥವು ಮರಗಳದೋಹದಿಬಗ್ಗೆ ಹೀಗೆ ಹೇಳುತ್ತದೆ :

ಕರು-ಗುಲ್ಮ-ಲತಾದೀನಾಂ ಅಕಾಲೇ ಕುತಲೈಃ ಕೃತಂ ಪುಷ್ಪಾದ್ಯುತ್ಪಾದ ಕೇಂದ್ರವೂಂ ದೋಹರಂ ಸ್ಯಾತ್

ಈ ಶ್ಲೋಕದಲ್ಲಿರಸ” “ಫಲ” “ಬೀಜ”, “ದೋಹದಎಂಬ ಪದಗಳಲ್ಲಿ ಶ್ಲೇಷದಿಂದ ಕೂಡಿದ ರೂಪಕವಿದೆ. ಆದ್ದರಿಂದ ಇದು ಸಾವಯವ ರೂಪಾಲಂಕಾರವಾಗುತ್ತದೆ.

ಸಂಸ್ಕೃತದಲ್ಲಿ :

ವ್ಯಕ್ತಿತ್ವಾರ್ಪಕದೇಹೇ ನಿಮ್ನೇ ಕುಲ್ಯೇವ ಜನಿಮತಾಂ ಮಾತಃ
ಪ್ರವಹತ್ಯನಾರತಂ ತೇ ಶಕ್ತಿಶ್ಚಿತ್ರಾಣಿ ದೇವಿ ತನ್ವನಾ ||14||

ತಾತ್ಪರ್ಯ :

ಸಮಸ್ತ ಜೀವಿಗಳಿಗೆ ಮಾತೆಯೆ ! ಯಾವ ದೈಹಿಕ ಶರೀರವು ಅಹಂಭಾವದ ಪ್ರಜ್ಞೆಯನ್ನು ಬಿಟ್ಟುಕೊಡುವುದೋ ಅದರಲ್ಲಿ ನಿನ್ನ ಶಕ್ತಿಯು ಅನೇಕ ಪವಾಡಗಳನ್ನು ಸೃಷ್ಟಿಸುವುದು. ಹೇಗೆ ನೀರು ಮೇಲಿಂದ ಕೆಳಗಡೆಗೆ ಯಾವುದೇ ಅಡೆತಡೆಯಿಲ್ಲದೇ ಸತತವಾಗಿ ಹರಿಯುವುದೋ ಅದೇ ರೀತಿ ಶಕ್ತಿಯೂ ಆ ದೇಹದಲ್ಲಿ ಹರಿಯುವುದು.

ನಕಾರಾತ್ಮಕ ಅಹಂ (ಅಹಂಕಾರ) ದೇವಿಯ ಶಕ್ತಿಯು ಹರಿಯುವುದಕ್ಕೆ ಅಡ್ಡಿಯಾಗುತ್ತದೆ. ಅಹಂಕಾರವನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟಾಗ ಮಾತ್ರವೇ ಶಕ್ತಿಯ ಪ್ರವಾಹವು ಸರಾಗವಾಗಿ ಹರಿಯುವುದು.

ವಿವರಣೆ :

ನಾನು ಬೇರೆಯಾದವನು ಎಂಬ ಭಾವನೆಯಿಂದ ಕೂಡಿದ ಅಹಂಕಾರ ಭಾವನೆಯನ್ನು ಉಂಟುಮಾಡುವ ಈ ದೇಹದಲ್ಲಿ ನಿನ್ನ ಶಕ್ತಿಯು ಆಶ್ಚರ್ಯಕರವಾದ ಕೆಲಸಗಳನ್ನು ಮಾಡುತ್ತಾ ಮೇಲಿಂದ ಕೆಳಕ್ಕೆ ಹರಿಯುವ ಕಾಲುವೆಯಂತೆ ನಿರಂತರವಾಗಿ ಹರಿಯುತ್ತಿರುತ್ತದೆ.

ಸಂಸ್ಕೃತದಲ್ಲಿ :

ಸಾರಮಪಾಮಣುಭೂತಂ ಹೃದಯಸ್ಥಂ ಸೂರಯೋ ವಿದುಶ್ಚಿತ್ತಂ
ಶ್ರೇಷ್ಠಂ ಪ್ರಾಣಂ ಕೇಚನ ಪಂಚಾನಿಲಮೂಲಭೂತಮಾಹುರಿಮಮ್ ||15||

ತಾತ್ಪರ್ಯ :

ನೀರಿನಲ್ಲಿರುವ ಅಣುವಿನ ಸತ್ತ್ವಸಾರವೇ ಹೃದಯದಲ್ಲಿರುವ ಚಿತ್ ಎಂಬುದಾಗಿ ಜ್ಞಾನಿಗಳು ಆಲೋಚಿಸುವರು. ಇನ್ನು ಕೆಲವು ಪಂಡಿತರು ಈ ನೀರಿನ ಸಾರವೇ ಬಹು ಮುಖ್ಯವಾದ ಜೀವಬಲ(ಮುಖ್ಯ ಪ್ರಾಣ)ವೆಂದೂ ಹಾಗೂ ಇದೇ ಐದು ಉಸಿರುಗಳು (ಗಾಳಿ).

ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನಗಳು ಜೀವದ ಪಂಚ ಶಕ್ತಿಗಳು. ಉಪನಿಷತ್ತಿನ ಪ್ರಕಾರ ಹೃದಯದೊಳಗಿರುವ ನೀರಿನ ಸಾರವೇ ಜೀವನದ ಮುಖ್ಯಪ್ರಾಣ.

ವಿವರಣೆ :

ವಿದ್ವಾಂಸರುಚಿತ್ತವನ್ನು ಅತ್ಯಂತ ಸೂಕ್ಷ್ಮವಾದುದೆಂದು ವರ್ಣಿಸುತ್ತಾರೆ. ಛಾಂದೋಗ್ಯೋಪನಿಷತ್ತಿನಲ್ಲಿ ಪ್ರಾಣವನ್ನು ನೀರಿನ ಸಾರವಾದ ಭಾಗವೆಂದು ವರ್ಣಿಸಲಾಗಿದೆ. “ಚಿತ್ತಂಪದದ ಮೂಲ ಧಾತುವನ್ನು ಪರಿಶೀಲಿಸಿದಾಗ ಅದುಜ್ಞಾನಪದಕ್ಕೆ ಪರ್ಯಾಯವಾಗುವುದು. ನೀರಿನ ಸಾರವಾಗಿರುವ ಪಂಚಪ್ರಾಣಗಳಿಗೆ ಮೂಲಭೂತಕಾರಣವಾಗಿರುವ ಪ್ರಾಣವೆಂದು ಹೇಳುವರು. ಉಪನಿಷತ್ತಿನ ಪ್ರಕಾರ, ನೀರಿನ ಸಾರವಾದ ಪ್ರಾಣವು ಹೃದಯದಲ್ಲಿರುವುದು ಎಂಬ ಭಾವ.

ಸಂಸ್ಕೃತದಲ್ಲಿ :

ಮನ ಏವ ಚಿತ್ತಸಂಜ್ಞಂ ವ್ಯವಹರತಾಂ ವಿಭಜನಾನಭಿಜ್ಞಾನಾಂ
ಕವಿಲೋಕವ್ಯವಹಾರಸ್ತದಧೀನಸ್ತತ್ತ್ವಧೀರ್ಭವತ್ಯನ್ಯಾ ||16||

ತಾತ್ಪರ್ಯ :

ಮನಸ್ಸು ಹಾಗೂ ಜ್ಞಾನ (ಚಿತ್)ಗಳ ನಡುವಿನ ವ್ಯತ್ಯಾಸವನ್ನರಿಯದ ಅಜ್ಞಾನಿಗಳು ಎರಡೂ ಒಂದೇ ಎಂದು ಭಾವಿಸುವರು. ಅಷ್ಟೇ ಏಕೆ ಕೆಲವು ವಿದ್ವಾಂಸರೂ ಸಹ ಇದೇ ವಿಧದ ತಪ್ಪುಗ್ರಹಿಕೆಯುಳ್ಳವರಾಗಿರುವರು. ಅದೇನೇ ಇರಲಿ, ನಿಜ ಸ್ಥಿತಿಯೆಂದರೆ ಈ ಎರಡೂ ಪದಗಳು ಬೇರೆ ಬೇರೆ.

ವಿವರಣೆ :

ಮನಸ್ಸು ಬೇರೆ, ಚಿತ್ತವೆಂಬುದೇ ಬೇರೆಯಾಗಿರುತ್ತದೆ ಎಂಬ ವಿಭಾಗವನ್ನರಿಯದೇ ವ್ಯವಹರಿಸುವವರಿಗೆ ಮನಸ್ಸೇ ಚಿತ್ತವೆಂಬುದಾಗುವುದು. ಕವಿಗಳೂ ಸಹ ವಿಭಾಗವನ್ನರಿಯದ ಜನರಂತೆಯೇ ವ್ಯವಹರಿಸುತ್ತಾರೆ. ಆದರೆ ತತ್ತ್ವವಿವೇಚನೆಯನ್ನು ಮಾಡುವ ಬುದ್ಧಿಯೇ ಬೇರೆಯಾಗಿರುತ್ತದೆ. ಮನಸ್ಸೇ ಬೇರೆ ಚಿತ್ತವೇ ಬೇರೆ.

ಸಂಸ್ಕೃತದಲ್ಲಿ :

ತದನಾಹತಸ್ಯ ವಿಲಸದ್ ದಕ್ಷಿಣತೋ ದಹರನಾಮಕಗುಹಾಯಾಂ
ಚಿತ್ತಂ ಕುಲಕುಂಡಾತ್ತೇ ಕಾsಪ್ಯನುಗೃಹ್ಣಾತಿ ದೇವಿ ರಶ್ಮಿಕಲಾ ||17||

ತಾತ್ಪರ್ಯ :

, ದೇವಿ ! ಕುಲಕುಂಡದಿಂದ ಕೆಲವು ವಿಶಿಷ್ಟವಾದ ಕಾಂತಿಬೀರುವ ಕಿಡಿಗಳು ಚಿತ್ತದೆಡೆಗೆ ಆಶೀರ್ವಾದದಂತೆ ಸಿಂಪಡಿಸುವುದು. ಚಿತ್ತವು ಯೋಗಿಗಳಿಗೆ ಮಾತ್ರ ಗೋಚರಿಸುವ ಅನಾಹತ ಚಕ್ರದ ಬಲಭಾಗದಲ್ಲಿರುವ ದಹರ ಎಂಬ ಗುಹೆಯಲ್ಲಿರುವುದು.

ಭಗವಾನ್ ರಮಣ ಮಹರ್ಷಿಗಳು ತಮ್ಮ ರಮಣಗೀತೆಯಲ್ಲಿ, ಸ್ವಪ್ರಕಾಶದ ಆತ್ಮದ ವಾಸಸ್ಥಳವೇ ಹೃದಯ ಎಂಬುದಾಗಿ ವಿವರಿಸಿರುವರು. ಹಾಗಿದ್ದರೆ, ದೇವಿಯ ಕೆಲವು ವಿಶಿಷ್ಟವಾದ ಬೆಳಕಿನ ಕಿರಣಗಳು ಮೂಲಾಧಾರದಿಂದ ಹೃದಯದಲ್ಲಿರುವ ಚಿತ್ತದೆಡೆಗೆ ಹರಿಯುವುದು ಎಂದು ಏಕೆ ಹೇಳುವರು? ಇದರಲ್ಲಿ ಯಾವುದೇ ತಪ್ಪಿರುವುದಿಲ್ಲ. ಪಂಚಭೂತಗಳಿಂದಾದ ಶರೀರದ ಸೃಷ್ಟಿಯ ಮೂಲವೇ ಮೂಲಾಧಾರ ಎಂಬುದು ಸರ್ವವಿದಿತ. ಆದ್ದರಿಂದ, ಶಕ್ತಿಯ ಕಿರಣಗಳು ಮೂಲಾಧಾರದಿಂದ ಹೃದಯವನ್ನು ಸುತ್ತುವರೆದಿರುವ ನರಗಳೆಡೆಗೆ (ಅವುಗಳು ವಿವಿಧ ಕ್ರಿಯೆಗಳನ್ನು ನಡೆಸುವ ಸಾಮರ್ಥ್ಯವನ್ನು ಉಂಟುಮಾಡುವ) ಹರಿಯುವುದು. ಇದನ್ನುಚಿತ್ತಕಲ” - ಹೃದಯದಲ್ಲಿನ ಸ್ವಪ್ರಕಾಶದ ಚಿತ್ತದ ಕಾಂತಿಬೀರುವ ಕಿಡಿಗಳೆಂದು ವಿವರಿಸುವರು.

ವಿವರಣೆ :

ಯೋಗಿಗಳಿಂದ ಕಾಣಲ್ಪಟ್ಟ, ಆರು ಚಕ್ರಗಳಲ್ಲಿ ಒಂದಾದ ಹಾಗೂ ವಕ್ಷಸ್ಥಳದ ಮಧ್ಯದಲ್ಲಿ, ಬಲಭಾಗದಲ್ಲಿ ದಹರವೆಂಬ ಹೃದಯ ಗುಹೆಯಿದೆ. ಅದು ಮೂಲಾಧಾರ ಚಕ್ರದಲ್ಲಿ ಪ್ರಕಾಶಿಸುವ ನಿನ್ನ ಪ್ರಕಾಶದ ಅಂಶದಿಂದ ಅನುಗ್ರಹಿಸಲ್ಪಟ್ಟಿದೆ. ದಹರಾಕಾಶವೆಂಬ ಹೃದಯವು, ಹೃದಯಪೀಠದ, ಬಲಭಾಗದಲ್ಲಿರುತ್ತದೆ ಎಂದು ರಮಣಮಹರ್ಷಿಗಳು ತಮ್ಮ ರಮಣಗೀತಾದಲ್ಲಿ ವಿವರಿಸಿರುವರು. ಅದೇ ಆತ್ಮಸ್ಫೂರ್ತಿ ಸ್ಥಾನವಾಗಿದೆ.

ತಸ್ಯ ದಕ್ಷಿಣತೋ ಧಾಮ ಹೃತ್ಪೀಠೇನೈವ ವಾಮತಃ
ತಸ್ಮಾತ್ಪ್ರವಹತಿ ಜ್ಯೋತಿಃ ಸಹಸ್ರಾರಸುಷುಮ್ನಯಾ ||
                    ರಮಣಗೀತಾ

ಸಂಸ್ಕೃತದಲ್ಲಿ :

ಚಿತ್ತಮಣು ಶ್ಲಿಷ್ಟಂ ತೇ ಕಲಯಾsಙುಷ್ಠಪ್ರಮಾಣಮಿವ ಭಾಸಾ
ದರ್ಪಣಮಮಲಬ್ರಹ್ಮಪ್ರತಿಬಿಂಬಾಕರ್ಷಕಂಶಿವೇ ಭವತಿ ||18||

ತಾತ್ಪರ್ಯ :

, ಶಿವೆ ! ನಿನ್ನ ವೈಶಿಷ್ಟ್ಯಪೂರ್ಣವಾದ ಪ್ರಕಾಶದೊಂದಿಗೆ ವಿಲೀನವಾದ ಬೆಳಗುತ್ತಿರುವ ಚಿತ್ತವು ಶುದ್ಧವಾದ ಕನ್ನಡಿಯು ಹೆಬ್ಬೆಟ್ಟಿನಾಕಾರದಲ್ಲಿ ಕಂಡುಬರುವ ಬ್ರಹ್ಮನ ಪ್ರತಿಬಿಂಬವನ್ನು ಆಕರ್ಷಿಸುವುದು.

ಅಣುವು ಅತಿ ಸೂಕ್ಷ್ಮವಾದದ್ದರಿಂದ ಕಣ್ಣಿಗೆ ಕಾಣುವುದಿಲ್ಲ. ಚಿತ್ತವು ಹೃದಯದ ವಿಕಿರಣದ ರೂಪದಲ್ಲಿ ಕನ್ನಡಿಯಂತಾಗಿ ಪರಿಶುದ್ಧ ಬ್ರಹ್ಮನ ಪ್ರತಿಬಿಂಬವನ್ನು ಆಕರ್ಷಿಸುವುದು. ಅಂದರೆ ಪರಿಶುದ್ಧ ಬ್ರಹ್ಮನು ಚಿತ್ ನಲ್ಲಿನ ಆತ್ಮರೂಪದ ಅಣುವಾಗಿ ಕಂಡುಬರುವುದು. ಅರಿವು (ಚಿತ್ತ) ಕನ್ನಡಿಯಂತೆ, ಪರಿಶುದ್ಧ ಬ್ರಹ್ಮನು ಪ್ರತೀಕದಂತೆ ಕಲ್ಪಿಸಿಕೊಳ್ಳಲಾಗಿ, ಮತ್ತು ಆತ್ಮವು (ಸ್ವಯಂ) ಪ್ರತಿಫಲನ.

ವಿವರಣೆ :

ಹೇ, ಶಿವೆ ! ನಿನ್ನ ಅಂಶವಿಶೇಷದಿಂದ ಪ್ರಕಾಶಿಸುವ, ನಿನ್ನ ಆಲಿಂಗನದಿಂದಾಗಿ ಪ್ರಕಾಶಿಸುವ ಚಿತ್ತ ಅಂಗುಷ್ಠಪ್ರಮಾಣದಂತೆ ಹೃದಯದಲ್ಲಿ ಪ್ರಕಾಶಿಸುತ್ತದೆ. “ಅಂಗುಷ್ಠಮಾತ್ರಃ ಪುರುಷಃಎಂಬುದಾಗಿ ವೇದವೂ ಹೇಳುವುದು. ಇಲ್ಲಿ ಹೃದಯ ಎಂಬುದು ಉಪಾಧಿ. ಅಲ್ಲಿ ಕಾಣಿಸಿಕೊಳ್ಳುವ ಚಿತ್ ನ್ನು ಚಿತ್ತವು ಪ್ರಕಾಶಗೊಳಿಸುತ್ತದೆ. ಆ ರೀತಿಯಾದ ಚಿತ್ತವು ಪರಬ್ರಹ್ಮತತ್ತ್ವದ ಪ್ರತಿಬಿಂಬವನ್ನು ಪ್ರತಿಬಿಂಬಿಸುವ ಕನ್ನಡಿಯಾಗುತ್ತದೆ. ಅತ್ಯಂತ ಸೂಕ್ಷ್ಮವಾದ ಚಿತ್ತದಲ್ಲಿ ಅಖಂಡವಾದ ಬ್ರಹ್ಮ ತತ್ತ್ವವು ಆತ್ಮರೂಪದಿಂದ ಪ್ರಕಾಶಿಸುತ್ತದೆ ಎಂದು ತಾತ್ಪರ್ಯ. ಚಿತ್ತವು ಉಪಾಧಿಯಾಗಿ ಕನ್ನಡಿಯ ಜಾಗದಲ್ಲಿದೆ. ಶುದ್ಧ ಬ್ರಹ್ಮವು ಕೇವಲ ಬಿಂಬವಾಗಿದೆ. ಆದ್ದರಿಂದ ಪ್ರತಿಬಿಂಬದಂತೆ ಆತ್ಮನು ಸ್ಫುರಿಸುತ್ತಾನೆ. ಈ ವಿಷಯದಲ್ಲಿ ರಮಣ ಮಹರ್ಷಿಗಳು ರಮಣಗೀತೆಯಲ್ಲಿ :-

ಹೃದಯಕುಹರಮಧ್ಯೇ ಕೇವಲಂ ಬ್ರಹ್ಮಮಾತ್ರಂ
ಹೃಹಮಹಮಿತಿಸಾಕ್ಷಾದಾತ್ಮರೂಪೇಣಭಾತಿ ||”          ರಮಣಗೀತಾ

ಸಂಸ್ಕೃತದಲ್ಲಿ :

ಅಂತರಮಾವರ್ತಾಭಂ ಪ್ರತಿಬಿಂಬಮಕಾಯಮೇತದೀಶಸ್ಯ
ಅಂಗುಷ್ಠಾಭಂ ಪ್ರಾಹುರ್ಮಾಹೇನೋಪಾಧಿಚೈತ್ತಭಾದಸ್ತೇ
||19||

ತಾತ್ಪರ್ಯ :

ನಿರಾಕಾರನಾದ ಶಿವನ ಪ್ರತಿಬಿಂಬವು ಆಕಾಶದಲ್ಲಿ ವರ್ತುಲಾಕಾರದಲ್ಲಿ ತಿರುಗುತ್ತಿರುವುದನ್ನು ಅದು ನಿಮ್ಮ ಶಕ್ತಿಯು ನಿಯೋಜಿಸಲಾದ ಚಿತ್ತದಲ್ಲಿ ಕಾಣುವ ಗಾತ್ರದ ಮೇಲೆಅಂಗುಷ್ಠಾಭಎಂದು ಕರೆಯಲಾಗುವುದು.

ನಿರಾಕಾರ ಶಿವನ ಆಕಾಶದಲ್ಲಿನ ಹೆಬ್ಬೆಟ್ಟಿನಾಕಾರದ ಪ್ರತಿಫಲನವು ಸಾಧ್ಯ, ಏಕೆಂದರೆ, ದೇವಿಯ ವೈಷಿಷ್ಟ್ಯಪೂರ್ಣ ಜೊತೆಯಿಂದಾಗಿ.

ವಿವರಣೆ :

ಚಿತ್ತಾಕಾಶದಲ್ಲಿ ಶರೀರವಿಲ್ಲದ ಶಿವನ ಪ್ರತಿಬಿಂಬವು ಪ್ರಕಾಶಿಸುತ್ತದೆ. ಹಾಗೂ ಅದು ಅಂಗುಷ್ಠಪರಿಮಾಣವುಳ್ಳದ್ದಾಗಿ ಪ್ರಕಾಶಿಸುತ್ತಿದೆ. ಅವೆರಡೂ ಕೂಡ ದೇವಿಯ ಉಪಾಧಿರೂಪದಿಂದ ಇರುವ ಚಿತ್ತದಿಂದ ಹಿಡಿಯಲ್ಪಟ್ಟ ಪ್ರಭೆಯಿಂದುಂಟಾದುದಾಗಿದೆ.

ಸಂಸ್ಕೃತದಲ್ಲಿ :

ದಂಪತ್ಯೋರ್ವಾಂ ರೂಪಪ್ರತಿಬಿಂಬೌ ಚಕ್ಷುಷೋಃ ಶಿವೇ ಭವತಃ
ಕುಲಕುಂಡೇ ಹೃದಯೇ ಚಾಪ್ಯರೂಪಯೋರೇವ ಕಶ್ಚಿದುಲ್ಲಾಸಃ ||20||

ತಾತ್ಪರ್ಯ :

, ಮಾತೆಯೆ ! ನಿನ್ನ ಹಾಗೂ ಈಶ್ವರನ ರೂಪಗಳ ಪ್ರತಿಬಿಂಬವು ಕುಲಕುಂಡ (ಮೂಲಾಧಾರ) ಹಾಗೂ ಹೃದಯ(ಅನಾಹತ) ಗಳಲ್ಲಿ ಕಂಡುಬರುವುದು. ನಿನ್ನ ಹಾಗೂ ಈಶ್ವರರ ಎರಡೂ ಕಡೆಯಲ್ಲಿನ ನಿರಾಕಾರಗಳ ಪ್ರತಿಬಿಂಬಗಳು ಹೊಳೆಯುತ್ತಿರುವುದು.

ವಿವರಣೆ :

ಛಾಂದೋಗ್ಯೋಪನಿಷತ್ತಿನಲ್ಲಿಯ ಏಷೋ ಕ್ಷಿಣಿ ಪುರುಷೋ ದೃಶ್ಯತೇ ಏಷ ಆತ್ಮೇತಿ ಹೋವಾಚನಮ್ಮ ಎರಡೂ ಕಣ್ಣಿನಲ್ಲಿ ಕಾಣಿಸುವ ಅದೇ ಆತ್ಮನೆಂದು ಹೇಳಿದೆ. ಇದನ್ನು ಅಕ್ಷಿವಿದ್ಯೆ ಎನ್ನುವರು. ಅವೆರಡೂ ಕಣ್ಣಿನಲ್ಲಿ ಕಾಣಿಸುವ ಜ್ಯೋತಿರ್ಮಯವಾದ ಆಕಾರಗಳು ಈಶ್ವರ ಮತ್ತು ಈಶ್ವರಿಯರ ಪ್ರತಿಬಿಂಬವೆಂದು ಹೇಳಲ್ಪಟ್ಟಿತು. ಹಾಗೆಯೇ ಮೂಲಾಧಾರದಲ್ಲಿ ಮತ್ತು ಹೃದಯದಲ್ಲಿ ಅವರಿಬ್ಬರೂ ರೂಪವಿಲ್ಲದಂತೆಯೇ ಇರುತ್ತಿದ್ದಾರೆಂದು ಈ ಶ್ಲೋಕದ ಉತ್ತರಾರ್ಧದಿಂದ ಹೇಳಿದ್ದಾರೆ.

ಸಂಸ್ಕೃತದಲ್ಲಿ :

ಚಿತ್ತಮಣೀಯೋ ವಿತ್ತಂ ಯ ಇದಂ ಮೂಲ್ಯೇ ಪ್ರಪಂಚತೋsಪ್ಯಧಿಕಂ
ಹೃದಯಗುಹಾಯಾಂ ನಿಹಿತಂ ಜಾನೀತೇ ಸ ವಿಜಹಾತಿ ಬಹಿರಾಶಾಃ ||21||

ತಾತ್ಪರ್ಯ :

ಯಾರು ತನ್ನ ಹೃದಯ ಗುಹೆಯಲ್ಲಿಡಲ್ಪಟ್ಟ ಅತಿ ಸೂಕ್ಷ್ಮಾಕಾರದಲ್ಲಿರುವ ಚಿತ್ತವನ್ನು ಬೆಲೆಯಲ್ಲಿ ಪ್ರಪಂಚಕ್ಕಿಂತಲೂ ಹೆಚ್ಚಿನ ಬೆಲೆಯುಳ್ಳದ್ದೆಂದು ಅರಿಯುವನೋ ಅವನು ಎಲ್ಲ ಬಾಹ್ಯ ಆಶೋತ್ತರಗಳನ್ನು ತ್ಯಜಿಸುವನು.

ಯಾವಾಗ ಸಾಧಕನು ತನ್ನ ಮನಸ್ಸನ್ನು ಬಾಹ್ಯ ಚಟುವಟಿಕೆಗಳಿಂದ ಹಿಂತೆಗೆದುಕೊಳ್ಳುವನೋ, ಅವನಿಗೆ ಅಂತರಂಗದ ಅರಿವುಂಟಾಗಿ, ಅದರ ಅಸ್ಥಿತ್ತ್ವದ ಮತ್ತು ಅದರ ಆಳವಾದ ಚಿತ್ತದ ಪದರಗಳ ಅರಿವಾಗುವುದು. ಇದೇ ಮಾರ್ಗದಲ್ಲಿ ಅವನ ಮನಸ್ಸು ಮತ್ತಷ್ಟು ಆಳವಾಗಿ ಶೋಧಿಸಿದಾಗ ಕತ್ತಲಿನಿಂದ ಕೂಡಿದ ಕಿರಿದಾದ ಮಾರ್ಗದ ಮೂಲಕ ಹೃದಯದಲ್ಲಿ ಗುಹೆಯಂತೆ ಕಾಣುವ ಕವಾಟದ ಬಳಿ ಅವನ ಮನಸ್ಸು ತಲುಪುವುದು. ಹೃದಯ ಗುಹೆಯಲ್ಲಿ ಸಾಂದ್ರತೆಯಿಂದ ಕೂಡಿದ ದೈವೀ ಚಿತ್ತವು ಇರುವುದು. ಅದು ಅತ್ಯಂತ ಸೂಕ್ಷ್ಮವಾದ ಆದರೆ ಸಮಸ್ತ ವಿಶ್ವಕ್ಕಿಂತ ಹೆಚ್ಚಿನ ಬೆಲೆಯುಳ್ಳ ಅಮೂಲ್ಯವಾದ ನಿಧಿ. ಯಾರು ಇದನ್ನು ತನ್ನ ಅಂತರಂಗದೊಳಗೆ ಕಂಡುಕೊಳ್ಳುವರೋ ಅವರಿಗೆ ಬೇರೆ ಯಾವುದೇ ವಿಷಯಗಳಲ್ಲಿ ಆಸಕ್ತಿಯಿರುವುದಿಲ್ಲ. ಬಾಹ್ಯದೆಡೆಗೆ ಸೆಳೆಯುವ ಎಲ್ಲ ಆಶೋತ್ತರಗಳೂ ತನ್ನಿಂದ ತಾನೇ ಬಿದ್ದುಹೋಗುವುದು.

ವಿವರಣೆ :

ದಹರಾಕಾಶದಲ್ಲಿರುವ, ಬೆಲೆಯಲ್ಲಿ ಪ್ರಪಂಚಕ್ಕಿಂತ ಉತ್ತಮವಾದ, ಅತ್ಯಂತ ಸೂಕ್ಷ್ಮವಾದ ಹಣವನ್ನು ಯಾರು ತಿಳಿಯುವನೋ ಅವನು ಹೊರಗಡೆಯಿಂದ ಎಲ್ಲ ಆಸೆಗಳನ್ನೂ ಬಿಟ್ಟುಬಿಡುತ್ತಾನೆ. ಆತ್ಮಲಾಭದಿಂದ ಆತ್ಮಕಾಮನಾದ ಅವನು ಆಪ್ತಕಾಮನಾಗುತ್ತಾನೆ. ಎಲ್ಲವನ್ನೂ ಹೊಂದಿದವನಾಗುತ್ತಾನೆ.

ಪರಮಾತ್ಮಾನಿಯರೋಕ್ತಃ ವಿರಕ್ತೋಪರಮಾತ್ಮಾನಿ
ಛಾಂದೋಗ್ಯೋಪನಿಷತ್ತು ಈ ರೀತಿ ಹೇಳುವುದು :-

ಯಚ್ಚಾಸ್ಯೇಹಾಸ್ತಿ ಯಚನಾಸ್ತಿ ಸರ್ವಂತದಸ್ಮಿನ್ ಸಮಾಹಿತಂ
ಅಥ ಯೇಚಾಸ್ಯೇಹ ಜೀವಾಃ ಪ್ರೇತಾ….ಅನೃತೇನ ಹಿ ಪ್ರತ್ಯುಢಾ ಇತಿ ||”

ಸಂಸ್ಕೃತದಲ್ಲಿ :

ಅಪ್ರಾಪ್ತಾ ಮೂರ್ಧಾನಾಂ ಹೃದಯಾತ್ ಸಂಪ್ರಸ್ಥಿತಾ ಧೃತಾ ನಾಡ್ಯಾ
ತ್ವದ್ರುಚಿರುಕ್ತಾ ಬುದ್ಧಿಸ್ತ್ವಯಿ ನಿಷ್ಠಾ ಭವತಿ ದೇವಿ ತನ್ನಿಷ್ಠಾ ||22||

ತಾತ್ಪರ್ಯ :

, ದೇವಿ ! ಜ್ಞಾನಿಗಳು ಹೃದಯದಿಂದ ಉತ್ಪತ್ತಿಯಾದ ನಿನ್ನ ಕಾಂತಿಯನ್ನು (ಚಿತ್ತ) ಅದು ಶಿರವನ್ನು ತಲುಪುವ ಮೊದಲೇ ಸ್ವೀಕರಿಸುವರು. ಚಿತ್ತದ ನಿಷ್ಠೆಯು ನಿನ್ನ ಕಾಂತಿಯಿಂದ ತುಂಬಿದ್ದು ಅದು ನಿಜಕ್ಕೂ ನಿನ್ನದೇ.

ವಿವರಣೆ :

ತಲೆಯ ಬುಡದವರೆಗೂ ತಲುಪದೆ ಹೃದಯದಿಂದ ಹೊರಟ ಸೂಕ್ಷ್ಮನಾಡಿಯಿಂದ ಹಿಡಿಯಲ್ಪಟ್ಟ ಬೋಧಜ್ವಾಲೆಯಲ್ಲಿರುವಾಕೆಯು, ದೇವಿಯಲ್ಲೇ ಇದ್ದಂತಾಗುತ್ತದೆ.

ಸಂಸ್ಕೃತದಲ್ಲಿ :

ಅನ್ನಮಯಾಣುಂ ಪ್ರಾಪ್ತಂ ಧೀಜ್ಯೋತಿಶ್ಚಂದ್ರಮಾರ್ಕಮಿವ ತೇಜಃ
ಪರಿಭಾಷ್ಯತೇ ಮಹೇಶ್ವರಿ ಮನ ಇತಿ ಸಂಕಲ್ಪಸಂಭವಸ್ಥಾನಮ್ ||23||

ತಾತ್ಪರ್ಯ :

, ಮಹೇಶ್ವರಿ ! ಬುದ್ಧಿಶಕ್ತಿಯ ಬೆಳಕು ಅಹಾರದ ಸತ್ವ(ಅಣು)ದೊಂದಿಗೆ ಬೆರೆತಾಗ ಅದನ್ನು ಯೋಚನೆ ಹಾಗೂ ಉದ್ದೇಶದ ಉಗಮವಾದ ಸೂರ್ಯನ ಬೆಳಕಿನ ಪ್ರತಿಬಿಂಬದಿಂದ ಬೆಳಗುವ ಚಂದ್ರನಂತಿರುವ, ಮನಸ್ಸೆನ್ನುವರು.

ಹೃದಯದಿಂದ ಹುಟ್ಟುವ ಬುದ್ಧಿಶಕ್ತಿಯ ಜ್ವಾಲೆಯನ್ನು ಅದು ಶಿರವನ್ನು ತಲುಪಿದಾಗ ಮನಸ್ಸೆಂದು ಕರೆಯುವರು.

ವಿವರಣೆ :

ಹೃದಯದಿಂದ ಹೊರಟ ಧೀಃಶಕ್ತಿಯ ಜ್ವಾಲೆಯು ತಲೆಯನ್ನು ತಲುಪದೆ ಧ್ಯಾನದಿಂದ ಧರಿಸಲ್ಪಟ್ಟರೆ ಅಲ್ಲಿ ಅದಕ್ಕೆ ಮನಸ್ಸೆಂದು ಹೆಸರಾಗುವುದು. (ಸಂಕಲ್ಪವುಂಟಾಗುವ ಸ್ಥಳವನ್ನು ಮನಸ್ಸೆನ್ನುತ್ತಾರೆಂದು ಭಾವ).

ಸಂಸ್ಕೃತದಲ್ಲಿ :

ಸಂಕಲ್ಪೇ ಸಂಕಲ್ಪೇ ಚಿಚ್ಛಕ್ತಿಂ ಮನಸಿ ವಿಸ್ಫುರಂತೀಂ ತ್ವಾಂ
ಯ ಉಪಾಸ್ತೇ ಸ ಜನಸ್ತೇ ಗೃಹ್ಣಾತಿ ಮಹೇಶವಲ್ಲಭೇ ಚರಣಮ್ ||24||

ತಾತ್ಪರ್ಯ :

ಮನಸ್ಸು ಪ್ರಕಾಶಿಸದಿದ್ದರೆ ಸಂಕಲ್ಪವುಂಟಾಗುವುದಿಲ್ಲ. ಹಾಗೊಮ್ಮೆ ಉಂಟಾದರೂ ಅದು ತಿಳಿಯುವುದಿಲ್ಲ. ಚಂದ್ರನಿಗೆ ಸೂರ್ಯನ ಪ್ರಕಾಶದಂತೆ ಮನಸ್ಸಿಗೆ ಪ್ರಕಾಶವು ಚಿಚ್ಛಕ್ತಿಯಿಂದಾಗುತ್ತದೆ. ಪ್ರತಿ
ಸಂಕಲ್ಪದಲ್ಲೂ ಆ ಚಿಚ್ಛಕ್ತಿಯು ಪ್ರಕಾಶಿಸುತ್ತದೆ. ಯಾರು ಸಂಕಲ್ಪವನ್ನು ಪ್ರಕಾಶಗೊಳಿಸುವ ಚಿಚ್ಛಕ್ತಿಯನ್ನು ಧ್ಯಾನಮಾಡುತ್ತಾನೋ ಅವನಿಂದ ನಿನ್ನ ಅಡಿದಾವರೆಗಳು ಹಿಡಿಯಲ್ಪಟ್ಟಂತಾಗುತ್ತದೆ. ಸಂಕಲ್ಪಗಳು ಗ್ರಹಣವಲ್ಲ. ಚಿತ್ಪ್ರಕಾಶದಲ್ಲಿ ನೋಡುವವನ ದೃಷ್ಟಿಯದ್ದು. ಸಂಕಲ್ಪದಲ್ಲಿ ದೃಷ್ಟಿಯು ಬಿಡಲ್ಪಡುತ್ತದೆ.

ಸಂಸ್ಕೃತದಲ್ಲಿ :

ಆಧಾರಚಕ್ರಶಯನೇ ಮಮೇಹ ನಿದ್ರಾಂ ವಿಹಾಯ ವಿಚಲಂತೀಂ
ಗೀತಯ ಏತಾಃ ಪರಮಾಮುಪತಿಷ್ಠಂತಾಂ ಜಗದ್ವಿಭೋಃ ಕಾಂತಾಮ್ ||25||        100

ತಾತ್ಪರ್ಯ :

ಗೀತಿ ಛಂದಸ್ಸಿನಲ್ಲಿ ರಚಿಸಿರುವ ಈ ಸ್ತೋತ್ರವು ಮೂಲಾಧಾರ ಚಕ್ರದಲ್ಲಿ ನೆಲಸುವ ಮಹಾದೇವನ ಪತ್ನಿಯಾದ ಮಹಾದೇವಿಯು ನನ್ನಲ್ಲಿ ಅರಿವು ಮೂಡಿಸಲಿ.

ಇವು  ಕವಿಯ ಕುಂಡಲಿನಿ ಶಕ್ತಿಯ ಮಂಗಳಾತ್ಮಕವಾದ ಸಾಹಿತ್ಯ. ಈ ಸ್ತಬಕದಲ್ಲಿನ ತತ್ತ್ವಗಳನ್ನು ಕವಿಯು ದೃಢಪಡಿಸಿರುವುದು ತನ್ನ ಗುರುಗಳಿಂದ ಪಡೆದ ಜ್ಞಾನದಿಂದ ಮತ್ತು ಕವಿಯ ಸ್ವಂತ ಅನುಭವ ಜ್ಞಾನದಿಂದ.

ವಿವರಣೆ :

ಮೂಲಾಧಾರದಲ್ಲಿ ಕುಂಡಲಿನೀಶಕ್ತಿಯು ನೆಲಸಿರುತ್ತದೆ. ಆ ಶಕ್ತಿಯೇ ಜಗದ ಪಿತನ ಕಾಂತೆಯಾದ ಉಮಾದೇವಿ. ಅವಳು ಎಚ್ಚೆತ್ತು ಸಂಚರಿಸುತ್ತಾಳೆ. ಈ ಸ್ತಬಕದಲ್ಲಿ ವಿವರಿಸಲ್ಪಟ್ಟಿರುವ ಶ್ಲೋಕಗಳು ಆ ದೇವಿಯನ್ನು ಸೇರಲಿ.

ಇದರ ಮಹಾಕವಿಯಾದ ಗಣಪತಿ ಮುನಿಯು ನೈಷ್ಠಿಕರು. ಈ ಸ್ತಬಕದಲ್ಲಿ ವಿವರಿಸಿರುವ ತತ್ತ್ವಗಳು ಛಾಂದೋಗ್ಯ ಶ್ರುತಿವಾಕ್ಯಗಳಿಂದಲೂ, ತಮ್ಮ ಗುರುವಾದ ರಮಣ ಮಹರ್ಷಿಗಳ ಉಪದೇಶಗಳಿಂದಲೂ ಹಾಗೂ ತನ್ನ ಅನುಭವದಿಂದಲೂ ಹೇಳಲ್ಪಟ್ಟಿವೆ.

ಇಲ್ಲಿಗೆ ಮೊದಲನೇ ಶತಕದ ನಾಲ್ಕನೆಯ ಸ್ತಬಕವು ಮಂಗಳವಾಯಿತು.

ಇಲ್ಲಿಗೆ ಮೊದಲನೆಯ ಶತಕವು ಸಂಪೂರ್ಣವಾಯಿತು.






Comments