ಪುಷ್ಪಗುಚ್ಛ
(ಸ್ತಬಕ)
- 3
ಛಂದಸ್ಸು
: ತನುಮಧ್ಯಾವೃತ್ತಂ
ಸಶರೀರಾಯಶ್ಚ
ಸಾಧನಂ
(ದೇವಿಯ ಭೌತಿಕ
ರೂಪದಲ್ಲಿನ ಸಾಧನೆಗಳು)
ಈ ಸ್ತಬಕದಲ್ಲಿ ಶಿವ
ಮತ್ತು ಶಕ್ತಿಯರ ಭೌತಿಕ ರೂಪವು ಅಸ್ತಿತ್ತ್ವದಲ್ಲಿದೆಯೋ ಇಲ್ಲವೋ ಎಂಬ ವಿಷಯವನ್ನು ಚರ್ಚಿಸಲಾಗಿದೆ ಮತ್ತು ಅವರು ಲೀಲಾರೂಪಗಳನ್ನು ಧರಿಸಿದರೆಂಬುದನ್ನು
ತಾತ್ವಿಕವಾಗಿ ದೃಢಪಡಿಸಿ ಅವರನ್ನು ಸ್ತುತಿಸಲಾಗಿದೆ.
ಸಂಸ್ಕೃತದಲ್ಲಿ
:
ಶುಭ್ರಸ್ಮಿತಲೇಶೋ ಮಾತುರ್ಮರುತಾನ್ನಃ
ಅಂತಸ್ತಿಮಿರಾಣಾಮಂತಂ
ವಿದಧಾತು ||1||
ತಾತ್ಪರ್ಯ :
ಮರುತ್ ದೇವತೆಗಳ ಮಾತೆಯ
ನಿರ್ಮಲವಾದ ಮಂದಹಾಸವು ನಮ್ಮನ್ನಾವರಿಸಿರುವ ಕತ್ತಲೆಯನ್ನು ಹಾಗೂ ಅನೇಕ ವಿಧದ ಅಜ್ಞಾನಗಳನ್ನು ಹೋಗಲಾಡಿಸಲಿ.
ಪರಮೇಶ್ವರನನ್ನು ಮರುತ್
ದೇವತೆಗಳ ಪಿತನಾದ ಇಂದ್ರನೆಂದು ಹಾಗೂ ಇಂದ್ರನ ಶಕ್ತಿ ಮತ್ತು ಅವನ ಪತ್ನಿ ಇಂದ್ರಾಣಿಯೇ ಶಿವೆ.
ವಿವರಣೆ :
ಶಚಿದೇವಿಯ ಶುಭ್ರವಾದ
ಹಾಸವು ನಮ್ಮೊಳಗಿರುವ ನಾನಾವಿಧವಾದ ಅಜ್ಞಾನಗಳೆಂಬ ಕತ್ತಲೆಯನ್ನು ನಾಶಮಾಡಲಿ.
ಮರುತ್ತುಗಳ ತಂದೆಯೇ
ಇಂದ್ರನು. “ಇದಿ ಪರಮೇಶ್ವರ್ಯೈ” ಎಂಬ
ಧಾತುವಿನಿಂದ ನಿಷ್ಪನ್ನವಾದ ಇಂದ್ರ ಶಬ್ದವು ಪರಮೇಶ್ವರನನ್ನು ಕುರಿತಾಗಿದೆ. ಇಂದ್ರನ
ಶಕ್ತಿ ಶಚಿದೇವಿಯು ಈಶ್ವರಿಯಾಗುತ್ತಾಳೆ.
ಅವಳನ್ನೇ ಇಂದ್ರಾಣಿ ಎಂದು ಹೆಸರಿಸಲಾಗಿದೆ.
ಸಂಸ್ಕೃತದಲ್ಲಿ
:
ಆದ್ಯೌ ಭುವನಾನಾಂ ಮಾತಾಪಿತರೌ
ತೌ
ದೇವಾಸುರಮರ್ತ್ಯೈರ್ವಂದ್ಯಾವವಿನಿಂದ್ಯೌ
||2||
ತಾತ್ಪರ್ಯ :
ವಿಶ್ವ ಸೃಷ್ಟಿಯಾದ
ಸಮಯದಿಂದ ಶಕ್ತಿ ಮತ್ತು ಶಿವ ಸಮಸ್ತ ಜಗತ್ತಿಗೆ ಮಾತಾ ಪಿತೃಗಳು. ಅವರು
ಯಾವುದೇ ಪ್ರಾಪಂಚಿಕ ಕುಂದು ಕೊರತೆಯಿಂದ ಹೊರತಾದವರು ಮತ್ತು ಅವರನ್ನು ದೇವಾಸುರರು ಹಾಗೂ ಮನುಜರೆಲ್ಲರೂ
ಪೂಜಿಸುವರು.
ವಿವರಣೆ :
ಇಂದ್ರ-ಇಂದ್ರಾಣಿರೂಪದ
ಶಿವೆ-ಶಿವರು ಜಗತ್ತಿನ ಆದಿಮಿಥುನರು ಹಾಗೂ ಅವರಿಗಿಂತ ಮೊದಲು ಯಾರೂ
ಜನಿಸಿಲ್ಲ. ಅವರು ಜಗತ್ತಿಗೆ ಮಾತಾ-ಪಿತರು. ದೇವತೆಗಳು, ಅಸುರರು, ಹಾಗೂ
ಮಾನವರುಗಳಿಂದ ಸ್ತುತಿಸಲ್ಪಟ್ಟವರು.
ಅವರು ಜಗತ್ತಿನ ವ್ಯಾಪಾರದಲ್ಲಿ ತಾವೇ ನಿಯುಕ್ತರಾಗಿದ್ದರೂ ಅದರಲ್ಲಿರುವ
ದೋಷಗಳಿಂದ ಮುಕ್ತರು.
ಸಂಸ್ಕೃತದಲ್ಲಿ
:
ಬ್ರೂತೇ ಪೃಥಗೇಕಸ್ತೌ
ವಿಗ್ರಹವಂತೌ
ಆಹೈಕಶರೀರಂ ದ್ವಂದ್ವಂ
ಕವಿರನ್ಯಃ ||3||
ತಾತ್ಪರ್ಯ :
ಶಿವ-ಶಕ್ತಿಯರ
ಬಗೆಗೆ ಎರಡು ವಿಧವಾದ ಅಭಿಪ್ರಾಯವುಂಟಾಗಿ ಅದು ನಿಗೂಢತೆಯನ್ನು ನಮ್ಮ ಮುಂದಿಡುತ್ತದೆ. ಕೆಲವರ
ಅಭಿಪ್ರಾಯದಲ್ಲಿ ಅವರಿಬ್ಬರೂ ಬೇರೆ ಬೇರೆ ರೂಪವುಳ್ಳವರೆಂದೂ ಹಾಗೂ ಮತ್ತೆ ಕೆಲವರ ಅನಿಸಿಕೆಯಂತೆ ಒಂದೇ
ರೂಪ(ಶರೀರ)ವುಳ್ಳವರೆಂದು.
ವಿವರಣೆ :
ಒಬ್ಬ ಕ್ರಾಂತದರ್ಶಿಯು
ಶಿವ-ಶಿವೆಯರನ್ನು ಬೇರೆ ಬೇರೆ ಶರೀರವುಳ್ಳವರೆಂದು ಹೇಳಿದರೆ, ಮತ್ತೊಬ್ಬನು
ಸ್ತ್ರೀ-ಪುರುಷರ ಒಂದೇ ಶರೀರವು ಎರಡು ರೀತಿ ಬೇರೆಬೇರೆಯಾಗಿದೆಯೆಂದು
ಅಭಿಪ್ರಾಯ ಪಡುವನು. (ಆದ್ದರಿಂದಲೇ ಅರ್ಧನಾರೀಶ್ವರರ ಕಲ್ಪನೆಯು ಲೋಕದಲ್ಲಿ ಉಂಟಾಗಿದೆ.) ಕವಿಗಳೆಂದರೆ
ಅವರು ಕಲ್ಪನಾಸಮರ್ಥರು. ಹೀಗಾಗಿ ಅವರು ಶಿವ-ಪಾರ್ವತಿಯರು
ಬೇರೆ ಬೇರೆ ಇರುವವರಲ್ಲವೆಂದು,
ಇದನ್ನು ಸಾಮಾನ್ಯರಿಗೆ ತಿಳಿಯಪಡಿಸಲು ಅವರಿಗೆ ಕೈ-ಕಾಲುಗಳನ್ನು
ಕಲ್ಪಿಸಿ, ಎರಡುಭಾಗವಾಗಿ ಮಾಡಿ, ಶಿವೆಗೆ
ಎಡಭಾಗವನ್ನೂ, ಶಿವನಿಗೆ ಬಲಭಾಗವನ್ನೂ ಕವಿಯು ನೀಡಿದ್ದಾನೆ.
ಸಂಸ್ಕೃತದಲ್ಲಿ
:
ಶಕ್ತಿಂ ತನುಶೂನ್ಯಾಮೀಶಂ
ಚ ಪುಮಾಂಸಂ
ವಕ್ತಿ ಪ್ರಮದಾಯಾಂ
ಸಂದೇಹಯುತೋsನ್ಯಃ
||4||
ತಾತ್ಪರ್ಯ :
ಕೆಲವು ಸಂದೇಹವಾದಿಗಳು
ಈಶ್ವರನಿಗೆ ಪುರುಷರೂಪವನ್ನು ಮಾತ್ರ ಕಲ್ಪಿಸಿ ಶಕ್ತಿಗೆ ಯಾವುದೇ ನಿರ್ದಿಷ್ಟ ಅಸ್ತಿತ್ತ್ವವನ್ನು ಕಲ್ಪಿಸಿಲ್ಲ.
ವಿವರಣೆ :
ಮತ್ತೊಬ್ಬ ಕ್ರಾಂತದರ್ಶಿಯು
ಸ್ತ್ರೀಯಲ್ಲಿ ಸಂದೇಹವುಳ್ಳವನಾಗಿ ಅವನು ಶಕ್ತಿಯನ್ನು (ಶಿವೆ) ಶರೀರವಿಲ್ಲದವಳನ್ನಾಗಿಯೂ, ಈಶ್ವರನನ್ನು (ಶಿವ) ಮಾತ್ರ
ಪುರುಷ ಶರೀರವುಳ್ಳವನನ್ನಾಗಿರುವನೆಂದು ಹೇಳುತ್ತಾನೆ. ಅವನ
ಪ್ರಕಾರ ಶಿವನಿಗೆ ಮಾತ್ರ ಶರೀರವಿರುತ್ತದೆ ಆದರೆ ಶಕ್ತಿಗೆ ಶರೀರವಿರುವುದಿಲ್ಲ. ಮತ್ತೊಬ್ಬನಿಗೆ
ಶಕ್ತಿಗೆ ಬೇರೆ ಆತ್ಮವೊಂದಿದೆ ಎನ್ನುವುದರಲ್ಲಿ ಸಂದೇಹವಿರುವುದು. ಶಕ್ತನಾದ
ಪುರುಷನಲ್ಲಿ ಶಕ್ತಿಯು ಒಳಸೇರುತ್ತದೆ ಎಂಬ ಕಾರಣದಿಂದ ಹೀಗೆ ಹೇಳುವನು.
ಸಂಸ್ಕೃತದಲ್ಲಿ
:
ಈಶಂ ಚ ತಮೇಕೇ ಸನ್ಮಾತ್ರಮುಶಂತಿ
ಬ್ರಹ್ಮೈಕಮಥಾನ್ಯೇ
ಗಾಯಂತಿ ನ ಶಕ್ತಿಂ ||5||
ತಾತ್ಪರ್ಯ :
ಕೆಲವರು ಈಶ್ವರನನ್ನು
ಮಾತ್ರ ಸತ್ಸ್ವರೂಪದ ಅಸ್ತಿತ್ವವುಳ್ಳವನೆಂದು ಭಾವಿಸಿದರೆ, ಉಳಿದವರು
ಈಶ್ವರನನ್ನು ಏಕೈಕ ಪರಮ ಶಕ್ತನಾದ ಅಸ್ತಿತ್ವವುಳ್ಳವ ಹಾಗೂ ಪರಬ್ರಹ್ಮನೆಂದೂ, ಶಕ್ತಿಗೆ
ಅಸ್ತಿತ್ವವಿಲ್ಲವೆಂದೂ ಭಾವಿಸುವರು.
ಉಪನಿಷತ್ತುಗಳು ಕೇವಲ
ಬ್ರಹ್ಮನನ್ನು ಸರ್ವಶಕ್ತನೆಂಬುದಾಗಿ ಸ್ತುತಿಸುತ್ತವೆ - “ಏಕಮೇವಾದ್ವಿತೀಯಂ
ಬ್ರಹ್ಮ”.
ವಿವರಣೆ :
ಶರೀರವುಳ್ಳ ಈಶ್ವರನನ್ನು
ಸತ್ಸ್ವರೂಪನೆಂದು ಅಭಿಪ್ರಾಯಪಡುತ್ತಾರೆ.
ಮತ್ತೆ ಕೆಲವರು ಶಕ್ತಿಯನ್ನು ಸ್ತುತಿಸುವುದಿಲ್ಲ. ಉಪನಿಷತ್ತುಗಳಂತೆ
ಬ್ರಹ್ಮನನ್ನು ಮಾತ್ರ ಸ್ತುತಿಸುತ್ತಾರೆ.
ಸಂಸ್ಕೃತದಲ್ಲಿ
:
ಕೇಚಿತ್ತನುಹೀನಂ ಪ್ರಜ್ಞಾಯುತಮೀಶಂ
ಶಕ್ತಿಂ ವಿದುರಸ್ಯ
ಪ್ರಜ್ಞಾಮವಿಕುಂಠಾಮ್ ||6||
ತಾತ್ಪರ್ಯ :
ಕೆಲವರು ಶಿವನನ್ನು
ರೂಪರಹಿತ ಆದರೆ ಅತೀಂದ್ರಿಯ ಜ್ಞಾನಿಯೆಂದು ಆಲೋಚಿಸುವರು ಮತ್ತು ಶಕ್ತಿಯನ್ನು ಅವನ ಅಜೇಯ ಪ್ರಜ್ಞೆಯನ್ನಾಗಿ
ಪರಿಗಣಿಸುವರು.
ವಿವರಣೆ :
ಕೆಲವರು ಈಶ್ವರನನ್ನು
ಪ್ರಜ್ಞಾಯುತನನ್ನಾಗಿ ಪರಿಗಣಿಸುವರು,
ಆದರೆ,
ಅವನನ್ನು ಶರೀರರಹಿತನನ್ನಾಗಿ ತಿಳಿಯುತ್ತಾರೆ. ಈ
ಈಶ್ವರನ ಅಪ್ರತಿಹತವಾದ ತೀವ್ರವಾದ ಪ್ರಜ್ಞಾಶಕ್ತಿಯನ್ನು ಕೊಂಡಾಡುತ್ತಾರೆ. ಅಂದರೆ
ಅಶರೀರನಾದ ಈಶ್ವರನ ಸ್ವತಂತ್ರವಾದ ಪ್ರಜ್ಞೆಯೇ ಶಕ್ತಿಯೆಂಬುದಾಗಿ ಹೇಳುತ್ತರೆಂಬ ಅರ್ಥ.
ಸಂಸ್ಕೃತದಲ್ಲಿ
:
ಉಕ್ತಂ ದಧತಸ್ತೈಃ ಕೇಚಿತ್
ಪುನರಾಹುಃ
ಮಾಯಾತನುಬಂಧಂ ನಾಥಸ್ಯ
ನ ಶಕ್ತೇಃ ||7||
ತಾತ್ಪರ್ಯ :
ಹಿಂದಿನ ಶ್ಲೋಕಗಳಲ್ಲಿ
ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಪಂಡಿತರು ಮುಂದುವರೆದು ಈಶ್ವರನು ತನ್ನ ಸ್ವಂತ ಸಂಕಲ್ಪದಿಂದ ಲೀಲಾವಿನೋದ
ರೂಪವನ್ನು ಧರಿಸುವನು ಹಾಗೂ ಈ ದೈವೀಲೀಲೆಯಲ್ಲಿ ಶಕ್ತಿಯ ಪಾತ್ರವೇನಿರುವುದಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ.
ವಿವರಣೆ :
ಮತ್ತೆ ಕೆಲವು ಪಂಡಿತರು
ಪ್ರಜ್ಞಾತ್ಮಕವಾದ ಶಕ್ತಿಯನ್ನು ಧರಿಸಿರುವ ಶಿವನಿಗೆ ಲೀಲೆಯಿಂದ ಶರೀರ ಸ್ವೀಕಾರವನ್ನು ಹೇಳುವರು. ಹಾಗೂ
ಶಕ್ತಿಗೆ ಶರೀರ ಸ್ವೀಕಾರವಿಲ್ಲವನ್ನುವರು.
ಸಂಸ್ಕೃತದಲ್ಲಿ
:
ನಿತ್ಯಂ ಸಶರೀರೌ ಯೇಷಾಂ
ಪಿತರೌ ತೌ
ಏಕೋsಪ್ಯಥವಾ
ತಾನ್ ಪ್ರತ್ಯಾಹ ನಿಸರ್ಗಃ||8||
ತಾತ್ಪರ್ಯ :
ಈಶ್ವರನೊಬ್ಬನೇ ಅಥವಾ
ಈಶ್ವರ-ಪಾರ್ವತಿಯರಿಬ್ಬರೂ ಶಾಶ್ವತವಾಗಿ ದೈಹಿಕ ರೂಪವನ್ನು ಈ ಪ್ರಪಂಚದಲ್ಲಿ
ಹೊಂದುವರೆಂಬ ನಿಶ್ಚಿತಾಭಿಪ್ರಾಯವನ್ನು ಪ್ರಕೃತಿಯು ತಪ್ಪೆಂದು ಸಾಬೀತುಪಡಿಸಿದೆ, ಏಕೆಂದರೆ
ಭೌತಿಕ ಪ್ರಪಂಚದಲ್ಲಿ ಯಾರಿಗೂ ಶಾಶ್ವತವಾಗಿ ದೈಹಿಕ ಶರೀರವನ್ನು ಹೊಂದಲು ಅಸಾಧ್ಯ. ಜನಿಸಿದ
ದೈಹಿಕ ಶರೀರವು ನಾಶವಾಗಲೇ ಬೇಕು,
ಅದು ಪ್ರಕೃತಿ ನಿಯಮ.
ವಿವರಣೆ :
ಯಾರ ಮತದಲ್ಲಿ ಯಾವ
ಪಿತೃಗಳಿಂದ ಶಿವ-ಪಾರ್ವತಿಯರು ಕಾಲತ್ರಯದಲ್ಲಿ ಶರೀರವುಳ್ಳವರೆಂದು ಅಂಗೀಕರಿಸಲ್ಪಟ್ಟಿದ್ದರೋ
ಅಥವಾ ಶಿವನೊಬ್ಬನೇ ಕಾಲತ್ರಯದಲ್ಲಿ ಶರೀರವುಳ್ಳವನಾಗಿರುತ್ತಾನೋ ಅಂತವರಿಗೆ ಪ್ರಕೃತಿಯೇ ಉತ್ತರಿಸುತ್ತದೆ.
ಎಲ್ಲಿಯೂ ಕೂಡ ಶರೀರದ
ನಿತ್ಯತ್ವವು ಕಾಣಲ್ಪಡುವುದಿಲ್ಲ.
ದೃಶ್ಯವಾದ ಶರೀರವು ಅನಿತ್ಯವಾಗಿರುತ್ತದೆ. ಏಕೆಂದರೆ
ಅದು ನಶ್ವರ. ಶರೀರವು ದೇಶ-ಕಾಲ-ನಿಮಿತ್ತಗಳನ್ನು
ಅಪೇಕ್ಷಿಸುತ್ತದೆ. ಆದ್ದರಿಂದ ಅದು ನಿತ್ಯವಾಗಲಾರದು. ಅದು
ಸ್ವಭಾವವಿರುದ್ಧವಾದುದು. ಹೀಗಾಗಿ ಶಿವ-ಶಿವೆಯರಿಬ್ಬರ ಅಥವಾ
ಶಿವನೊಬ್ಬನ ಶರೀರ ನಿತ್ಯವಾದದ್ದು ಎಂಬುದು ಸ್ವಭಾವವಿರುದ್ಧವಾದುದು. ಇದೇ
ಶರೀರ ನಿತ್ಯತ್ವವಾದವನ್ನು ಕುರಿತು ಪ್ರತಿವಚನವಾಗಿರುತ್ತದೆ.
ಸಂಸ್ಕೃತದಲ್ಲಿ
:
ಮಾತಾ ಪಿತರೌ ಯತ್ ತಾವೇಕಶರೀರೌ
ಚಿತ್ರಪ್ರಥನಾರ್ಥಾ
ಸಾ ಕಾಚನ ಲೀಲಾ ||9||
ತಾತ್ಪರ್ಯ :
ಶಿವ-ಪಾರ್ವತಿಯರ
ಐಕ್ಯತೆಯ ಪ್ರತೀಕವಾದ ಏಕಶರೀರದ ದೈವೀಲೀಲೆಯು ಅತಿ ಸುಂದರವಾದುದು.
ವಿವರಣೆ :
ಜಗತ್ತಿನ ಮಾತಾ-ಪಿತೃಗಳು
ಒಂದೇ ಶರೀರವುಳ್ಳವರೆಂಬುದು ಏನುಂಟೋ ಅದು ಅವರಿಬ್ಬರ ಅದ್ಭುತವಾದ ವಿಲಾಸವನ್ನು ಪ್ರಕಾಶಿಸುವ ಲೀಲೆಯಾಗಿದೆ. ಹೀಗೆ
ಹಿಂದಿನ ಎರಡು ಶ್ಲೋಕಗಳಲ್ಲಿ ಜಗತ್ತಿನ ತಾಯಿ ತಂದೆಯರ ಏಕಶರೀರತ್ವ ಮತ್ತು ಬೇರೆ ಶರೀರವಿರಬೇಕೆಂದು
ವಾದಿಸುವ ಈ ಎರಡೂ ಪಕ್ಷದ ಪಂಡಿತರಿಗೆ ಈ ಮೂಲಕ ಉತ್ತರಿಸಲಾಗಿದೆ.
ಸಂಸ್ಕೃತದಲ್ಲಿ
:
ಸನ್ಮಾತ್ರಕಥಾನಾಂ ಕಾರ್ಯೇ
ಮನುಜಾದೌ
ಧೀಸ್ವಾಂತವಿಕಾಸಃ ಸ್ಯಾತ್ಕಾರಣಹೀನಃ ||10||
ತಾತ್ಪರ್ಯ :
ಕೇವಲ “ಸತ್ (ಬ್ರಹ್ಮನ್)” ಮಾತ್ರವೇ
ಮಾನವ ಜಾತಿಯ ಸೃಷ್ಟಿಗೆ ಮೂಲ ಎಂಬುದು ಕೆಲವು ಪಂಡಿತರ ಅಭಿಪ್ರಾಯವಾದಲ್ಲಿ ಅದರಿಂದ ಅವರ ಬುದ್ಧಿಶಕ್ತಿ
ವಿಕಸನ ಹಾಗೂ ಮನಸ್ಸುಗಳು ನಿಷ್ಪ್ರಯೋಜಕವಾಗುವುದು.
ವಿವರಣೆ :
ಈಶ್ವರನು ಕೇವಲ ಸನ್ಮಾತ್ರನಾದ
ಬ್ರಹ್ಮಸ್ವರೂಪನು ಎಂದು ಅಭಿಪ್ರಾಯ ಪಡುವವರ ಪಕ್ಷದಲ್ಲಿ ಕಾರ್ಯರೂಪರಾದ ಮನುಜರಲ್ಲಿ ಬುದ್ಧಿ-ಮನಸ್ಸು
ಇವುಗಳ ವಿಕಾಸವು ಅಂದರೆ ಅಂತಃಕರಣ ವ್ಯಾಪಾರವು ಕಾರಣವಿಲ್ಲದಂತೆ ನಡೆಯಬೇಕಾಗುತ್ತದೆ. ಕಾರಣವಿಲ್ಲದೆ
ಕಾರ್ಯೋತ್ಪತ್ತಿಯಾಗುವುದಿಲ್ಲ.
ನಿರ್ವಿಶೇಷ ಸನ್ಮಾತ್ರ ವಸ್ತುವು ಕಾರಣವಾಗಿರುವಾಗ ಅಂತಃಕರಣವ್ಯಾಪರವು
ಹೇಗಾಗುವುದು?
ಸಂಸ್ಕೃತದಲ್ಲಿ
:
ಅದ್ವೈತಿಭಿರನ್ಯಾ ಮಾಯಾssಶ್ರಣೀಯಾ
ಶಕ್ತೇರತಿರಿಕ್ತಾ ಸಾ
ಕಿಂ ಕಿಮು ವಾದೈಃ ||11||
ತಾತ್ಪರ್ಯ :
ಸೃಷ್ಟಿಕ್ರಿಯೆಗೆ ಪ್ರೇರಣೆಯು
ಮಾಯೆಯೆಂಬ ಅಲೋಚನೆಯಡಿ ಅದ್ವೈತ ಸಿದ್ಧಾಂತದ ಪ್ರತಿಪಾದಕರು ಆಶ್ರಯವನ್ನು ಪಡೆಯುತ್ತಾರೆ. ಹೀಗಿದ್ದಾಗ, ಆ
ಪ್ರಭಾವವು ಶಕ್ತಿಯಲ್ಲದೆ ಬೇರೇನು?
ವಿವರಣೆ :
ಅದ್ವೈತಿಯು ಮಾಯೆಯನ್ನಾಶ್ರಯಿಸಿ
ತನ್ನ ಪಕ್ಷವನ್ನು ಸ್ಥಾಪಿಸುವನು.
ಅಲ್ಲೂ ಕೂಡಾ ಮಾಯೆ ಎನ್ನುವುದು ನಮ್ಮಿಂದ ಪ್ರತಿಪಾದಿಸಲ್ಪಡುವ
ಶಕ್ತಿಯೇ ಆಗಿದೆ ಎನ್ನುವನು.
ಅದ್ವೈತಿಗಳಿಂದ ಪುರುಷನಿಗಿಂತ
ಬೇರೆಯಾದ ಮಾಯೆಯು ಆಶ್ರಯಿಸಲ್ಪಡಬೇಕು.
ಆ ಮಾಯೆಯು ಶಕ್ತಿಗಿಂತ ಬೇರೆಯಲ್ಲ. ಅದು
ಶಕ್ತಿಯೇ ಸರಿ. ಹೀಗಾಗಿ ವಾದಗಳಿಂದ ಪ್ರಯೋಜನವಿಲ್ಲ.
ಸಂಸ್ಕೃತದಲ್ಲಿ
:
ನ ಸ್ಯಾತ್ ಪೃಥಗಾತ್ಮಾ
ಶಕ್ತೇಃ ಕಿಮುಪಾಧೇಃ
ಚಕ್ಷುಃ ಶ್ರಿತಚಿತ್ತೇರ್ವಿಶ್ವಾಕೃತಿತಾ
ವಾ ||12||
ತಾತ್ಪರ್ಯ :
ಶಕ್ತಿಗೆ ತನ್ನದೇ ಆದ
ಬೇರೆ ಅಸ್ಮಿತೆ ಇರಬಾರದೇ? ಅವಳೇ ವಿಶ್ವದಿಂದ ವಿಶಿಷ್ಟವಾದ ಮೂಲ ಪ್ರಜ್ಞೆ. ಆತ್ಮವು
ಸರ್ವವ್ಯಾಪಿಯಾದರೂ ಅದು ಶಕ್ತಿಯೊಂದಿಗೆ ಒಂದಾದಾಗ ಸೀಮಿತವಾಗುವುದು.
ವಿವರಣೆ :
ಶಕ್ತಿರೂಪ ಉಪಾಧಿಗಿಂತ
ಆತ್ಮನು ಏಕೆ ಬೇರೆ ಇರಬಾರದು? ದರ್ಶನೇಂದ್ರಿಯದಿಂದ ಕೂಡಿದ “ಚಿತ್”ಗಿಂತ
ವಿಶ್ವಾಕಾರವು ಬೇರೆ ಇರಬಹುದು ಅಲ್ಲವೇ?
ಹಾಗೆಯೇ ಶಕ್ತಿಗಿಂತ ಆತ್ಮನೂ ಬೇರೆಯಾಗಿರಬೇಕು.
ವಿಷಯ ಮತ್ತು ವಿಷಯಿಗಳಿಗೆ
ಮೂಲಸ್ವರೂಪದಲ್ಲಿ “ಚಿತ್”ನಲ್ಲಿ ಅಭೇದವಿರುತ್ತದೆ. ಹಾಗಿದ್ದರೂ
ವಿಷಯಾಕಾರವಾಗಿ ವಿವರ್ತವಾಗುವಾಗ ವಿಶ್ವದ ಪೃತಗ್ಭಾವವು ಇದ್ದೇ ಇರುವುದು. ಇಲ್ಲದಿದ್ದಲ್ಲಿ “ಜ್ಞಾತೃ-ಜ್ಞೇಯ” ಭಾವವೇ
ಇಲ್ಲದಂತಾಗುವುದು. ಹೀಗೆಯೇ ಉಪಾಧಿಭೂತವಾದ ಮಾಯೆಗಿಂತ ಅಥವಾ ಶಕ್ತಿಗಿಂತ ಆತ್ಮನು
ಬೇರೆಯಾಗುತ್ತಾನೆ.
ಸಂಸ್ಕೃತದಲ್ಲಿ
:
ಏಕಾಂತವಿದೇಹೌ ತೌ ಚೇದತಿಸೂಕ್ಷ್ಮೌ
ಲೀಲಾತನುಬಂಧಾಶಕ್ತಾವಭಿದೇಯೌ ||13||
ತಾತ್ಪರ್ಯ :
ಶಿವ-ಶಕ್ತಿಯರು
ಸೂಕ್ಷ್ಮ ಹಾಗೂ ರೂಪರಹಿತರಾಗಿದ್ದಲ್ಲಿ,
ಅವರುಗಳು ತಮ್ಮಿಚ್ಛೆಯಂತೆ ಲೀಲಾವಿನೋದ ರೂಪಗಳನ್ನು ಧರಿಸಲು
ಅಶಕ್ಯರಾಗುವರು.
ಶಿವ-ಶಕ್ತಿಯರು
ಅತಿ ಸೂಕ್ಷ್ಮ ಹಾಗೂ ಎಲ್ಲದರಿಂದಲೂ ಪ್ರತ್ಯೇಕವಾಗಿರುವರೆಂದು ನಾವು ಯೋಚಿಸಿದಲ್ಲಿ ಅವರುಗಳು ತಮ್ಮ
ಇಚ್ಛೆಯಂತೆ ದೈಹಿಕ ರೂಪವನ್ನು ಧರಿಸಲು ಅಶಕ್ಯರೆಂದು ತೀರ್ಮಾನಿಸಬೇಕಾಗುತ್ತದೆ. ಆದರೆ
ವಾಸ್ತವವಾಗಿ ಅದು ಹಾಗಲ್ಲ. ಅವರಿಗೆ ಇಚ್ಛಾ ರೂಪಗಳನ್ನು ಧರಿಸಲೂ ಹಾಗೂ ಅವುಗಳನ್ನು ಕಳಚಲೂ
ಸಮಾನ ಶಕ್ತಿಯುಂಟು. ಇಲ್ಲವಾದಲ್ಲಿ ಅವರುಗಳು ಸರ್ವಶಕ್ತರಾಗಲು ಅಸಾಧ್ಯ.
ಸಂಸ್ಕೃತದಲ್ಲಿ
:
ಭಕ್ತಾನನುಗೃಹ್ಣನ್
ದಿವ್ಯಾದ್ಭುತಲೀಲಃ
ತದ್ವಿಗ್ರಹಬಂಧೋ ಬೋಧ್ಯೋ
ಲಸದರ್ಥಃ||14||
ತಾತ್ಪರ್ಯ :
ಶಿವ-ಶಕ್ತಿಯರು
ತಮ್ಮ ಭಕ್ತರನ್ನಾಶೀರ್ವದಿಸುವ ಸಲುವಾಗಿ ತಮ್ಮೀಚ್ಛೆಯಂತೆ ದೈವೀ ಸ್ವರೂಪಗಳನ್ನು ಧರಿಸುವ ಕಾರ್ಯವು
ದೈವೀ ಲೀಲೆಯಲ್ಲಿ ಅಸಾಧಾರಣವಾದದ್ದು.
ಇದು ಅತ್ಯಂತ ಅರ್ಥಪೂರ್ಣವಾದದ್ದು.
ಶಿವ-ಶಕ್ತಿಯರಿಗೆ
ದೈಹಿಕ ರೂಪಗಳನ್ನು ಧರಿಸಲು ಪ್ರೇರಣೆ ಏನಿರಬಹುದು? ಭಕ್ತಿ ಮಾರ್ಗದಿಂದ
ಭಕ್ತರು ಶಿವ-ಶಕ್ತಿಯರ ದರ್ಶನವನ್ನು ಬಯಸುವ ಕಾರ್ಯವನ್ನು ಸುಲಭಗೊಳಿಸಲು ದೈಹಿಕ
ರೂಪವನ್ನು ಧರಿಸಬೇಕು. ಮನುಷ್ಯನ ಮನಸ್ಸಿಗೆ,ಸ್ಪರ್ಷಕ್ಕೆ
ಗೋಚರವಾದ, ನಿರಾಕಾರ ಸ್ಥಿತಿಯ ಬಗ್ಗೆ ಪ್ರೀತಿ ಹಾಗೂ ಆಕರ್ಷಣೆಗಳನ್ನು ಹೊಂದಲು
ಅಸಾಧ್ಯ. ಮನಸ್ಸಿಗೆ ಸ್ಪಷ್ಟವಾದ ದೈಹಿಕ ರೂಪಗಳೆಡೆಗೆ ಸಮೀಪಿಸುವುದು ಹಾಗೂ
ತಮ್ಮ ಮನಸ್ಸನ್ನು ಕೇಂದ್ರೀಕರಿಸುವುದು ಸುಲಭವಾದುದು. ದೈವವು
ಧರಿಸುವ ಪ್ರತಿಯೊಂದು ರೂಪವೂ ತನ್ನದೇ ಆದ ವೈಷಿಷ್ಟ್ಯವನ್ನು ಹೊಂದಿರುವುದು; ಹಾಗೂ
ಅದರಲ್ಲಡಗಿರುವ ಸತ್ಯತೆಯು ಪ್ರಸ್ತುತವಾದದ್ದು. ಶಿವ-ಶಕ್ತಿಯರು
ಸರ್ವಶಕ್ತರಾದ್ದರಿಂದ ಅವರಿಗೆ ಎಲ್ಲದರ ಮೇಲೂ ನಿಯಂತ್ರಣವಿರುವುದು.
ಸಂಸ್ಕೃತದಲ್ಲಿ
:
ಸ್ತ್ರೀತ್ವಂ ಯದಿ ನೇಷ್ಟಂ
ಪುಂಸ್ತ್ವಂ ಕುತ ಇಷ್ಟಂ
ನಾ ವಾ ಕಿಮು ನಾರೀ
ನ ಸ್ಯಾದನುಮೇಯಾ ||15||
ತಾತ್ಪರ್ಯ :
ಯಾವಾಗ ದೇವರ ಸ್ತ್ರೀರೂಪವು
ಅಪೇಕ್ಷಿತವಾಗುವುದಿಲ್ಲವೋ, ಆಗ ಪುರುಷರೂಪವೂ ಕೂಡಾ ಅಂಗೀಕೃತವಾಗುವುದಿಲ್ಲ. ಇದೇ
ತತ್ವವನ್ನು ಇಬ್ಬರಿಗೂ ಅನ್ವಯಿಸಬೇಕು.
ಪುರುಷರೂಪವನ್ನು ಕಲ್ಪಿಸಿಕೊಂಡಂತೆ ಸ್ತ್ರೀ ರೂಪವನ್ನು ಯಾಕೆ
ಕಲ್ಪಿಸಿಕೊಳ್ಳಬಾರದು?
ವಿವರಣೆ :
“ಕಪಿಲೋ ಯದಿ ಸರ್ವಜ್ಞೋ ಕಣಾದೋ ನೇತಿ ಕಾಪ್ರಮಾಮ್” ಎಂಬ
ನ್ಯಾಯದಿಂದ ಪುರುಷತ್ವವು ಅಂಗೀಕೃತವಾದರೆ ಸ್ತ್ರೀತ್ವವು ಏಕೆ ಅಂಗೀಕರಿಸಲ್ಪಡುವುದಿಲ್ಲ? ಎಂದು
ಪರವಸ್ತುವಿಗೆ ಪುರುಷತ್ವವನ್ನು ಮಾತ್ರ ಅಂಗೀಕರಿಸುವವರನ್ನು ಕೇಳುತ್ತಾನೆ.
ಸ್ತ್ರೀತ್ವವನ್ನು ಒಪ್ಪದಿದ್ದರೆ
ಪುರುಷತ್ವವನ್ನು ಹೇಗೆ ಪರವಸ್ತುವಿಗೆ ಒಪ್ಪುತ್ತೀರಿ? ಪುರುಷತ್ವವನ್ನು
ಊಹಿಸುವಂತೆಯೇ ಸ್ತ್ರೀತ್ವವನ್ನೂ ನೀವು ಊಹಿಸಬೇಕು.
ಸಂಸ್ಕೃತದಲ್ಲಿ
:
ತಸ್ಮಾತ್ ಪಿತರೌ ತೌ
ವಾಚ್ಯೌ ಮತಿಮಂತೌ
ಸೂಕ್ಷ್ಮಾವಪಿ ಭೂಯೋ
ಲೀಲಾತನುಮಂತೌ ||16||
ತಾತ್ಪರ್ಯ :
ಆದ್ದರಿಂದ ಅನಂತ ಸೂಕ್ಷ್ಮವಾಗಿದ್ದರೂ
ಲೀಲಾವಿನೋದಕ್ಕಾಗಿ ದೈವೀ ದಂಪತಿಗಳು ಭೌತಿಕ ಶರೀರವನ್ನು ಧರಿಸುವರೆಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.
ವಿವರಣೆ :
ಈಶ್ವರ ಮತ್ತು ಉಮಾದೇವಿ
ಇಬ್ಬರೂ, ಜ್ಞಾನವುಳ್ಳವರಾಗಿ, ಹೆಚ್ಚಾಗಿ
ಸೂಕ್ಷ್ಮವಾಗಿರುವುದರಿಂದ ನಮ್ಮ ಸ್ಥೂಲದೃಷ್ಟಿಗೆ ಸಿಗದಿದ್ದರೂ, ಲೀಲಾಶರೀರವುಳ್ಳವರಾಗಿ
ಹೇಳಲ್ಪಡಲು ಯೋಗ್ಯರಾಗಿದ್ದಾರೆ.
ಸಂಸ್ಕೃತದಲ್ಲಿ
:
ನಾಸ್ಮತ್ತನುವತ್ತೇ
ಶಕ್ತೀಶ್ವರಮೂರ್ತಿ
ಏಕಾಮೃತರೂಪಾ ತ್ವನ್ಯಾ
ಪ್ರಣವಾತ್ಮಾ ||17||
ತಾತ್ಪರ್ಯ :
ಶಕ್ತಿ ಮತ್ತು ಈಶ್ವರರ
ರೂಪವು ನಮ್ಮಂಥದ್ದಲ್ಲ. ಅಮೃತದಿಂದ ಮೈವೆತ್ತ ರೂಪವುಳ್ಳವಳಾದರೆ, ಈಶ್ವರನು
ಪ್ರಣವ, ಓಂಕಾರ ರೂಪನು ಹಾಗೂ ಜ್ಞಾನದ ಸಾಕಾರಸ್ವರೂಪನು.
ವಿವರಣೆ :
ಬ್ರಹ್ಮಾಂಡದಲ್ಲಿ ಶಿವ-ಉಮಾದೇವಿಯರ
ರೂಪವನ್ನು ಹೇಳಬೇಕೆಂದರೆ, ಅವರ ರೂಪವು ನಮ್ಮ ಶರೀರದಂತಲ್ಲ. ಹಾಗಾದಲ್ಲಿ
ಹೇಗಿರುತ್ತದೆ ಎಂದರೆ, ಒಂದು ಮೂರ್ತಿಯು ಅಮೃತಸ್ವರೂಪವಾದುದಾಗಿಯೂ (ಉಮಾದೇವಿ), ಮತ್ತೊಂದು
ಪ್ರಣವಸ್ವರೂಪದ್ದಾಗಿಯೂ ಆಗಿರುತ್ತದೆ.
ಸಂಸ್ಕೃತದಲ್ಲಿ
:
ದಿವ್ಯಂ ಘನತೇಜಃ ಕುರ್ವದ್
ಧ್ವನಿಮಂತಃ
ಸಂಪಶ್ಯದಶೇಷಂ ಮೂರ್ತಿಃ
ಪ್ರಣವಾತ್ಮಾ ||18||
ತಾತ್ಪರ್ಯ :
ದೈವ ಜ್ಯೋತಿಯು ಸಮಸ್ತ
ವಿಶ್ವದ ಜಾಗೃತಿಗೆ ಸಾಕ್ಷಿಯಾಗಿ,
ಓಂಕಾರ ನಾದವನ್ನು ಸೃಷ್ಟಿಮಾಡುವ ಸಮಸ್ತವೂ ಪ್ರಣವಸ್ವರೂಪ, ಶಿವ.
ಪ್ರಣವಾತ್ಮ ಈಶ್ವರನು
ಸಮಸ್ತವಿಶ್ವದಲ್ಲೂ ಆವರಿಸಿರುವ ಭವ್ಯವಾದ ದೈವೀ ಜ್ಯೋತಿಯಲ್ಲಿ ಅತಿ ಸೂಕ್ಷ್ಮ ರೂಪದಲ್ಲಿದ್ದು ಅಗ್ರಾಹ್ಯವಾದ
ಶಬ್ದವನ್ನು ಉತ್ಪತ್ತಿಮಾಡುವವನು.
ವಿವರಣೆ :
ನಮ್ಮೆಲ್ಲರೊಳಗೆ ಅನಾದೃಶವಾದ
ಅವ್ಯಕ್ತವಾದ ಧ್ವನಿಯನ್ನು ಮಾಡುತ್ತಲಿರುವ,
ಎಲ್ಲವನ್ನೂ ನೋಡುತ್ತಲಿರುವ ದಿವ್ಯವಾದ, ಸ್ಪರ್ಶಾನುಭವಯೋಗ್ಯವಾಗಿರುವ
ಜ್ಯೋತಿಯೇ ಪ್ರಣವಾತ್ಮಕವಾದ ಮೂರ್ತಿಯು.
ಅಣುವಿಗಿಂತ ಅಣುವಾಗಿರುವುದರಿಂದ
ಕೋಟಿ ಕೋಟಿ ಬ್ರಹ್ಮಾಂಡಗಳಲ್ಲಿ ಎಲ್ಲೆಡೆಯೂ ಸೂಕ್ಷ್ಮವಾಗಿರುತ್ತಾ, ಅವ್ಯಕ್ತನಾದವನ್ನು
ಮಾಡುತ್ತಾ ಯಾವ ಜ್ಯೋತಿಯು ಬೆಳಗುತ್ತದೆಯೋ ಅದೇ ಪ್ರಣವವನ್ನು ಶರೀರವಾಗುಳ್ಳವನು ಈಶ್ವರನು.
ಸಂಸ್ಕೃತದಲ್ಲಿ
:
ದಿವ್ಯೋ ಘನಸೋಮಃ ಸ್ಯಂದನ್
ರಸಮಂತಃ
ಭುಂಜನ್ ಭುವನೌಘಂ ಪೀಯೂಷಶರೀರಂ ||19||
ತಾತ್ಪರ್ಯ :
ಅಮೃತದಿಂದ ಕೂಡಿದ ದೈವೀ
ರೂಪದ, ಶಕ್ತಿಯು ವಿಶ್ವದಲ್ಲಿನ ಸೋಮದ ಆನಂದವನ್ನು ಅಂತರಂಗದಲ್ಲಿ ಅನುಭವಿಸುವಳು.
ವೇದದಲ್ಲಿ ಪವಮಾನ ಸೋಮವನ್ನು
ಅಮೃತಾತ್ಮನೆಂದು ಹೊಗಳಲಾಗಿದೆ.
ವಿವರಣೆ :
ಒಳಗೆ ಆನಂದವೆಂಬ ಪದದಿಂದ
ಹೇಳಲ್ಪಡುವ ಭೂತಸಾರಾತ್ಮಕವಾದ ರಸವನ್ನು ಪ್ರವಹಿಸುವಂತೆ ಮಾಡುವ, ಭೋಗ್ಯವಾದ
ಭುವನಜಾಲದ ಸಾರವನ್ನು ಸ್ವೀಕರಿಸಿ,
ಭೋಕ್ತೃವಾದವನಾಗಿ ಅಪ್ರಾಕೃತವಾದ ಒಂದುಗೂಡಿರುವ ಸೋಮದಂತಿರುವುದೇ
ಅಮೃತಾತ್ಮವಾದ ಶರೀರವು.
ಸಂಸ್ಕೃತದಲ್ಲಿ
:
ಬೋಧೋsನವಲಂಬೋ
ದಿವ್ಯಂ ಖಲು ತೇಜಃ
ಮೋದಃ ಪರಿಶುದ್ಧೋ ದಿವ್ಯಃ
ಖಲು ಸೋಮಃ ||20||
ತಾತ್ಪರ್ಯ :
ಜ್ಞಾನವು (ಬೋಧವು) ಯಾವ
ಷರತ್ತೂ ಇಲ್ಲದ ಮತ್ತು ಅನಂತವಾದ ದಿವ್ಯಜ್ಯೋತಿ ಹಾಗೂ ಪರಿಶುದ್ಧ ಸಂತೋಷವೇ ಸೋಮ.
ಇಲ್ಲಿ ಜ್ಯೋತಿ ಮತ್ತು
ಅಮೃತ ರೂಪಗಳ, ಪ್ರಣವ ಮತ್ತು ಸೋಮಸ್ವರೂಪಗಳ ಹಿಂದಿರುವ ತತ್ತ್ವವನ್ನು ಹೇಳಲಾಗಿದೆ. ಪರಿಶುದ್ಧ
ಸಂತೋಷವು ಬಾಹ್ಯ ವಸ್ತುವಿನ ಮೇಲೆ ಅವಲಂಬಿತವಾಗಿರುವುದಿಲ್ಲ.
ವಿವರಣೆ :
ನಿರುಪಾಧಿಕವಾದ ಬೋಧವೇ (ಜ್ಞಾನವೇ) ತೇಜಸ್ಸೆಂದು
ಹೇಳಲ್ಪಡುವುದು. ಪರಿಶುದ್ಧವಾದ ಮೋದವೇ ದಿವ್ಯಸೋಮವು. ವಿಷಯಾಲಂಬನವಿಲ್ಲದಿರುವುದೇ
ಪರಿಶುದ್ಧತ್ವ ಎಂದು ಅರಿಯಬೇಕು.
ಹೀಗೆ ಪ್ರಣವಾತ್ಮ ತೇಜಸ್ಸೂ, ಪೀಯೂಷಾತ್ಮವಾದ
ಸೋಮವೆಂಬ ಎರಡು ಮೂರ್ತಿಗಳ ತತ್ವವನ್ನು ವಿವರಿಸಲಾಗಿದೆ.
ಸಂಸ್ಕೃತದಲ್ಲಿ
:
ಸೋಮಾಂಶಮಹೋಂಶೌ ಯಾತೋ
ಘನಭಾವಂ
ಪಿತ್ರೋರ್ಭುವನಾನಾಂ
ಸಂಕಲ್ಪಮಹಿಮ್ನಾ ||21||
ತಾತ್ಪರ್ಯ :
ಸೋಮಾಂಶ ಹಾಗೂ ತೇಜೋಂಶಗಳು
ವಿಶ್ವದ ಮಾತಾ-ಪಿತೃಗಳ ಅಮೋಘವಾದ ಇಚ್ಛಾಶಕ್ತಿಯಿಂದ ಘನರೂಪವನ್ನು ತಾಳಿದವು. ಘನರೂಪದ
ಸೋಮವೇ ಚಂದ್ರನಾದರೆ, ತೇಜೋಂಶವು ಸೂರ್ಯ.
ವಿವರಣೆ :
ಪ್ರಪಂಚದ ಮಾತಾ ಪಿತೃಗಳಾದ
ಶಿವ-ಪಾರ್ವತಿಯರ ಸಂಕಲ್ಪ ಪ್ರಭಾವದಿಂದ ಸೋಮಾಂಶ ಮತ್ತು ತೇಜೋಂಶವು
ಘನರೂಪವನ್ನು ಹೊಂದುವುದು. ಅದರಲ್ಲಿ ಸೋಮಾಂಶವು ಚಂದ್ರ ಹಾಗೂ ಮಹೋಂಶ(ತೇಜೋಂಶ)ವು
ಘನೀಭೂತನಾದ ಸೂರ್ಯನಾಗುತ್ತಾನೆ.
ಸಂಸ್ಕೃತದಲ್ಲಿ
:
ಆರಾಧಯಸೀಶಂ ತಂ ಚಿನ್ಮಯಕಾಯಂ
ಆನಂದಮಯಾಂಗೀ ತ್ವಂ
ದೇವಿ ಕಿಲೇಯಮ್ ||22||
ತಾತ್ಪರ್ಯ :
ಓ, ದೇವಿಯೇ! ನೀನು
ನಿನ್ನ ಆನಂದಮಯ ರೂಪದಿಂದ ಶಿವನನ್ನು ಆರಾಧಿಸುವೆ. ನೀನು ಪರಮಾನಂದ ರೂಪವುಳ್ಳವಳು. ನೀನು
ಶಿವನನ್ನು ನಿನ್ನ ಆನಂದಮಯ ರೂಪದಿಂದ ಪೂಜಿಸುವೆ.
ವಿವರಣೆ :
ಹೇ ದೇವಿಯೇ, ನೀನು
ಆನಂದಮಯಳು. ಆನಂದಮಯವಾದ ಸ್ವರೂಪವುಳ್ಳ ನೀನು ಚಿನ್ಮಯಶರೀರನಾದ ಆ ಈಶ್ವರನನ್ನು
ಆರಾಧಿಸುತ್ತೀಯೆ. ನೀನು ನಿನ್ನ ಆನಂದಮಯವಾದ ಶರೀರವನ್ನು ಈಶ್ವರನಿಗರ್ಪಿಸಿ, ಅವನನ್ನು
ಆರಾಧಿಸುತ್ತೀಯೆ.
ಸಂಸ್ಕೃತದಲ್ಲಿ
:
ದಿವ್ಯಂ ತವ ಕಾಯಂ ದಿವ್ಯೇ
ತವ ವಸ್ತ್ರೇ
ದಿವ್ಯಾನಿ ತವಾಂಬ ಸ್ವರ್ಣಾಭರಣಾನಿ ||23||
ತಾತ್ಪರ್ಯ :
ಓ, ಮಾತೆಯೇ! ನಿನ್ನ
ರೂಪವು ದಿವ್ಯವಾದುದು. ನಿನ್ನ ವಸ್ತ್ರಗಳು ಮತ್ತು ಹಿರಣ್ಯ ಆಭರಣಗಳೂ ಸಹ ದಿವ್ಯವಾದದ್ದೇ. ಇಲ್ಲಿ
ಹಿರಣ್ಯ ವರ್ಣವು ದೈವತ್ವವನ್ನು ಸೂಚಿಸುತ್ತದೆ.
ವಿವರಣೆ :
ಹೇ, ದೇವಿಯೇ! ನೀನು
ಕೇನೋಪನಿಷತ್ತಿನಲ್ಲಿ ಸ್ತುತಿಸಲ್ಪಟ್ಟಿರುವ ಸ್ತೀಯಾಗಿರುವ ಉಮಾದೇವಿಯಾದ ಹೈಮವತಿಯೇ ಆಗಿದ್ದೀಯೆ. ನಿನ್ನನ್ನು
ನಾನು ಭಾಸುರ ಹೇಮಾಭರಣಾ ಎಂಬುದಾಗಿ ಸ್ತುತಿಸಿದ್ದೇನೆ. ಮುಂದೆಯೂ
ವರ್ಣಿಸಲ್ಪಡುವ ವಸ್ತ್ರಾಭರಣವುಳ್ಳವಳಾಗಿದ್ದೀಯೆ. ಎಲ್ಲೆಡೆಯೂ ನಿನ್ನ
ದಿವ್ಯತ್ವವನ್ನು ತಿಳಿದೇ ನನ್ನಿಂದ ಸ್ತುತಿಸಲ್ಪಟ್ಟಿರುವೆ ಎಂದು ಕವಿಯು ಅಭಿಪ್ರಾಯ ಪಡುವನು.
ಸ್ತೋತ್ರದಲ್ಲಿ ಕೆಲವೆಡೆ
ಪ್ರಾಕೃತಶರೀರವನ್ನು ವರ್ಣಿಸಿರುವಂತೆ ಕಂಡುಬಂದರೂ ನನ್ನ ಈ ಸ್ತೋತ್ರವು ವಾಸ್ತವಿಕವಾಗಿ ನಿನ್ನ ಅಪ್ರಾಕೃತವಾದ
ಶರೀರವನ್ನೇ ವರ್ಣಿಸುತ್ತದೆ ಎಂದು ತಿಳಿಯಬೇಕು.
ಸಂಸ್ಕೃತದಲ್ಲಿ
:
ಯದ್ದೇವಿ ವಿಲೋಕ್ಯಾsಸ್ಯಪ್ರಾಕೃತಕಾಯಾ
ಯುಕ್ತೀಃ ಸಮತೀತಾ ಸೇಯಂ
ತವ ಮಾಯಾ ||24||
ತಾತ್ಪರ್ಯ :
ಓ, ದೇವೀ! ನಿನ್ನ
ವರ್ಣನಾತೀತ ಮಾಯೆಯು ನಿನ್ನ ದೈವೀ ರೂಪವನ್ನು ವೀಕ್ಷಿಸಲು ಸಾಧ್ಯವಾಗುವಂತೆ ಮಾಡಿದೆ.
ವಿವರಣೆ :
ದೇವಿಯೇ! ನೀನು
ಅಪ್ರಾಕೃತವಾದ ದೇಹವುಳ್ಳವಳಾದಾಗ್ಯೂ ನಮಗೆ ನೋಡಲು ಆಗುತ್ತೀಯೆ. ಆ
ಶಕ್ತಿಯು, ಉಪಪಾದನೆ ಮಾಡುವ ಹೇತೂಕ್ತಿಗಳನ್ನು ಅತಿಕ್ರಮಿಸಿದೆ. ಅದು
ಅಘಟಿತ ಘಟನೆಯಲ್ಲಿ ಚತುರವಾದ ಮಾಯೆಯೆಂಬ ವಿಚಿತ್ರ ಶಕ್ತಿಯೇ ಆಗಿದೆ.
ಸಂಸ್ಕೃತದಲ್ಲಿ
:
ನವ್ಯಾಸ್ತನುಮಧ್ಯಾಃ
ಪ್ರತ್ನಾಂ ತನುಮಧ್ಯಾಮ್
ವಿದ್ವತ್ಸದಸೀಮಾಃ ಸಮ್ಯಕ್ಪ್ರಥಯಂತು ||25||
ತಾತ್ಪರ್ಯ :
ತನುಮಧ್ಯಾ ಛಂದಸ್ಸಿನಲ್ಲಿ
ರಚಿಸಿರುವ ಈ ಶ್ಲೋಕಗಳು ಉಮಾದೇವಿಯ ವೈಭವವನ್ನು ವರ್ಣಿಸಲಿ. ನಿರಂತರಳಾದ
ದೇವಿಯು (ತನುಮಧ್ಯ) ಜ್ಞಾನಿಗಳ ಸಭೆಯಲ್ಲಿ
ನೆಲೆಸಿರುವಳು.
ಜ್ಞಾನಿಗಳ ಮನದಲ್ಲಿ
ಉಮಾದೇವಿಯ ಬಗೆಗೆ ಉದ್ಭವಿಸಬಹುದಾದ ತಪ್ಪು ಗ್ರಹಿಕೆಗಳನ್ನು ತಾನು ರಚಿಸಿದ ಸ್ತೋತ್ರದಿಂದ ದೂರಮಾಡುವುದೆಂದು
ಹಾಗೂ ಸರಿಯಾದ ಜ್ಞಾನವು ಉಂಟಾಗುವುದೆಂದು ಕವಿಯು ಆಶಿಸುತ್ತಾನೆ.
ವಿವರಣೆ :
ಈ ಶ್ಲೋಕದ ಮೂಲಕ ಗಣಪತಿ
ಮುನಿಗಳು ಮೂರನೇ ಸ್ತಬಕವನ್ನು ಉಪಸಂಹಾರಮಾಡುತ್ತಾರೆ. ಈ
ಸ್ತಬಕವು “ತನುಮಧ್ಯಾ” ಛಂದಸ್ಸಿನಲ್ಲಿ ಗಣಪತಿ
ಮುನಿಗಳಿಂದ ಹೊಸದಾಗಿ ರಚಿಸಲ್ಪಟ್ಟಿದೆ.
ತನುಮಧ್ಯೆ ಎಂದರೆ ಸೂಕ್ಷ್ಮವಾದ ನಡುವುಳ್ಳ ಎಂದು. ಇದನ್ನು
ಪುರಾತನಳಾದ ಉಮಾದೇವಿಯನ್ನು ಕುರಿತೇ ಹೇಳಲಾಗಿದೆ. ಇವುಗಳನ್ನು ತಿಳಿದವರು
ವಿದ್ವತ್ಸಭೆಯಲ್ಲಿ ಚೆನ್ನಾಗಿ ಬೆಳಗಲಿ.
ಉಮಾತತ್ತ್ವವು ವಿದ್ವಾಂಸರಿಗೂ
ತಿಳಿಯಲಾಗದು. ಉಮಾ ತತ್ತ್ವದ ಅರಿವು ಅವರಿಗೇ ಆಗುವಂಥದ್ದು. ಇಲ್ಲಿ
ಸಮಾಲಂಕಾರವು ಹೇಳಲ್ಪಟ್ಟಿದೆ. ಎರಡು ಕಡೆಯೂ ತನುಮಧ್ಯತ್ವವಿರುವುದರಿಂದ ಅನುರೂಪ್ಯವಾಗಿದೆ. ತನುಮಧ್ಯಾ
ಛಂದಸ್ಸು ಪ್ರಸಿದ್ಧವಾದುದು. ಹಾಗೆಯೇ ತನುಮಧ್ಯೆಯಾದ ಉಮಾದೇವಿಯೂ ಪ್ರಸಿದ್ಧಳಾಗಿದ್ದಾಳೆ.
ಇಲ್ಲಿಗೆ
ಮೊದಲನೇ ಶತಕದ ಮೂರನೇ ಸ್ತಬಕವು (ಪುಷ್ಪಗುಚ್ಛವು) ಸಂಪೂರ್ಣವಾಗಿದೆ.
Comments
Post a Comment