ಯಾತು - ಕ್ರಿಯೆ ಒಂದು ವಿಶ್ಲೇಷಣೆ
ಸಂಸ್ಕೃತದ ಯಾತು ಪದಕ್ಕೆ ಸಮಾನಾರ್ಥವೆಂದರೆ ಜಾದು, ಇಂದ್ರಜಾಲ. ವಸ್ತುಗಳು ಒಳಗೊಂಡಿರುವ ಸಾಮರ್ಥ್ಯವನ್ನು
ಯಾತು-ಶಕ್ತಿ ಎಂದೆನ್ನುತ್ತಾರೆ. ಅದನ್ನು ತಿಳಿದುಕೊಳ್ಳುವುದೇ
ಯಾತು - ವಿದ್ಯೆ. ಅದನ್ನು ಅರಿತವನನ್ನು ಯಾತುಧಾನ
ಎಂದು ಕರೆಯುತ್ತಾರೆ. ಪುರಾಣಕಾಲದಲ್ಲಿ ರಾಕ್ಷಸರು ಈ ವಿದ್ಯೆಯನ್ನು ಅರಿತಿದ್ದರಿಂದಾಗಿ
ಅವರನ್ನು ಯಾತುಧಾನರೆಂದು ಗುರುತಿಸಲಾಗುತ್ತಿತ್ತು. ಈ ಸಾಮರ್ಥ್ಯದಿಂದಾಗಿ
ರಾಕ್ಷಸರು ಯಾವಾಗ ಬೇಕಾದರೂ ಬಗೆ ಬಗೆಯ ಆಕಾರವನ್ನು ಹೊಂದಬಲ್ಲವರಾಗಿದ್ದರು. ಯಾತು ಕ್ರಿಯೆಯ ಲೆಕ್ಕಾಚಾರದಂತೆ ವಿಶ್ವದ ಪ್ರತಿಯೊಂದು ವಸ್ತುವಿನಲ್ಲೂ ಒಂದು ಬಗೆಯ ಸುಪ್ತ
ಸಾಮರ್ಥ್ಯವಿದ್ದು, ಮಂತ್ರಗಳನ್ನು ಸರಿಯಾಗಿ ಉಚ್ಚರಿಸಿ ಅದನ್ನು ಎಚ್ಚೆತ್ತುಕೊಳ್ಳುವಂತೆ
ಮಾಡಿ ಅದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಸಾಧ್ಯವೆಂದು ಯಾತುಧಾನರ ವಾದ.
ಯಾತು ಆದಿಮಾನವನ ಬಾಳಿಗೆ ಮುಲಾಧಾರವೆನ್ನಿಸಿತ್ತು.
ನಿಗೂಢವೂ, ಅನಾಕಲನೀಯವೂ ಆದ ಸಾಮರ್ಥ್ಯವನ್ನು ಯಾತುಧಾನರು ಬಲವಾಗಿ ನಂಬಿದ್ದರು. ಈಶ್ವರನ ಕಲ್ಪನೆಯು ಅವರಿಗೆ ಸ್ಪಷ್ಟವಾಗಿದ್ದ ಕಾರಣ ಅವರಿಗೆ ಭಕ್ತಿ ಮೂಲಕ ಅವನನ್ನು ಒಲಿಸಿಕೊಳ್ಳುವ
ಅಗತ್ಯವೇ ಇರಲಿಲ್ಲ. ಈಶ್ವರ, ಪೂಜೆ, ಅನೇಕ ಬಗೆಯ ಉಪಾಸನಾ ಸಂಪ್ರದಾಯಗಳು, ಯಜ್ಞಗಳು ಮೊದಲಾದ ಪರಿಕಲ್ಪನೆಗಳೆಲ್ಲಾ
ಮೂಡಿದುದು ಸಂಸ್ಕೃತಿಯ ವಿಕಾಸದ ತರುವಾಯದಲ್ಲಿ.
ಅವರ ಪ್ರಕಾರ ಮಂತ್ರಗಳನ್ನು ವಿಧಿವತ್ತಾಗಿ ಉಚ್ಚರಿಸಿದರೆ ಇಚ್ಛಾಶಕ್ತಿ
ಹೆಚ್ಚುತ್ತದೆ ಎಂಬ ನಂಬಿಕೆ. ಹೀಗಿರುವಲ್ಲಿ ಯಾರ ಇಚ್ಛೆ, ಕೃಪೆ ಇಲ್ಲವೇ ಅವಕೃಪೆಯ ಪ್ರಶ್ನೆಯೇ ಹುಟ್ಟಿಕೊಳ್ಳುವುದಿಲ್ಲ. ಹಾಗಾಗಿ ಯಾತುವಿನ ಪರಿಕಲ್ಪನೆಯಲ್ಲಿ ಈಶ್ವರನ ಪ್ರಸನ್ನತೆಗಾಗಲಿ, ಕೋಪತಾಪಗಳಿಗಾಗಲಿ ಸ್ಥಾನವಿಲ್ಲ, ಹಾಗೂ ನೈತಿಕತೆಗೂ ಅವಕಾಶವಿಲ್ಲ.
ಯಾತು ಕ್ರಿಯೆಯು ಧರ್ಮಪರಿಕಲ್ಪನೆಯ ಮೊತ್ತ ಮೊದಲನೆಯ ಅವಸ್ಥೆಯೆನ್ನಿಸಿದೆ. ವಿಜ್ಞಾನಿಗಳ ಅಭಿಪ್ರಾಯದಲ್ಲಿ ಇದು ಮೊದಲ ಹಂತವೂ ಹೌದು. ಧರ್ಮ ಹಾಗೂ ವಿಜ್ಞಾನಗಳು ಸಮನಾಗಿ ನಂಬಿದುದು ಈ ಸಾಮರ್ಥ್ಯವನ್ನು. ವ್ಯತ್ಯಾಸವಿರುವುದು ಇವುಗಳ ಸಾಧನೆಗಳಲ್ಲಿ. ವಿಜ್ಞಾನದ ಒತ್ತು
ಇರುವುದು ಅನುಭವ, ಪ್ರಯೋಗಗಳ ಮೇಲೆ. ಯಾತು
- ಕ್ರಿಯೆಯ ಒತ್ತು ಮಾತ್ರ ಮಂತ್ರ - ತಂತ್ರಗಳ ಮೇಲೆ.
ಯಾತು-ಕ್ರಿಯೆಗೆ ಬೆಂಬಲಿಸುವ ಸಂಗತಿಗಳೆಂದರೆ ನಿಗೂಢತೆ,
ಮಂಕುಬುದ್ಧಿ, ಮೂಢನಂಬಿಕೆಗಳು. ವಿಶಿಷ್ಟವಾದ ಮಂತ್ರಗಳು ಹಾಗೂ ಅವುಗಳ ವಿಶಿಷ್ಟವಾದ ವಿಧಿಗಳೆಂದರೇನೆ ತಂತ್ರಗಳು.
ಇಂತಹ ಯಾತುಗಳನ್ನೊಳಗೊಂಡ ಕ್ರಿಯೆಗಳ ಮೂಲಕ ಮಾನವನು ಪುರಾತನ ಕಾಲದಲ್ಲಿ ತನ್ನ ಬಯಕೆಗಳನ್ನು
ಈಡೇರಿಸಿಕೊಳ್ಳುತ್ತಿದ್ದನು. ತಂತ್ರವಿದ್ಯೆಯಲ್ಲಿ ಶಿವ-ಶಕ್ತಿ, ಪ್ರಕೃತಿ-ಪುರುಷರ ಕೂಟಗಳಿಗೆ
ಪ್ರಾಮುಖ್ಯತೆ. ಇವುಗಳಿಂದ ಶಿವಪೂಜೆ, ಲಿಂಗಪೂಜೆ,
ಶಕ್ತಿಪೂಜೆ, ಪಶುಬಲಿ, ನರಬಲಿಗಳ
ಪರಿಕಲ್ಪನೆಗಳು ಹುಟ್ಟಿಕೊಂಡವು. ಕಾಲಾನಂತರ ಶಕ್ತಿಪೂಜೆಯಲ್ಲಿ ವಾಮಾಚರಣೆ
ಸ್ವೈರಾಚರಣೆ ಸೇರಿಕೊಂಡು ಹಲವು ಸಂಪ್ರದಾಯಗಳಲ್ಲಿ ಅನಿಷ್ಟವಾದ ನಡವಳಿಕೆಗಳು ರೂಢಿಯಲ್ಲಿ ಬಂದವು.
ಮೂಲ: ಶ್ರೀ ರಘುನಾಥ ಭಿಡೆ ಅವರ "ಮಹಾಭಾರತದ ಶಪಥಗಳು"
ಕೃತಿಯಿಂದ ಆಯ್ದ ಭಾಗಗಳು.
&&&&&&&
Comments
Post a Comment