ಉಮಾಸಹಸ್ರಮ್ - ತೃತೀಯ ಶತಕಂ


ಉಮಾಸಹಸ್ರಮ್ - ತೃತೀಯ ಶತಕಂ

ಪುಷ್ಪಗುಚ್ಛ (ಸ್ತಬಕ) – 9 ; ಛಂದಸ್ಸು ಆರ್ಯಾವೃತ್ತ - ಮಂದಹಾಸ ವರ್ಣನೆ
ಸಂಸ್ಕೃತದಲ್ಲಿ :

ಶಾರದವಲಕ್ಷಪಕ್ಷಕ್ಷಣದಾವೈಮಲ್ಯಶಿಕ್ಷಕೋsಸ್ಮಾಕಂ
ಜಾಗರ್ತು ರಕ್ಷಣಾಯ ಸ್ಥಾಣುಪುರಂಧ್ರೀಮುಖವಿಕಾಸಃ ||1||

ತಾತ್ಪರ್ಯ :

ಶಿವನ (ಸ್ಥಾನು) ಪತ್ನಿಯ ಮಂದಹಾಸವು ಶರತ್ಕಾಲದ ರಾತ್ರೆಯ ಚಂದ್ರನ ಬೆಳಕಿನಂತೆ ಶುಭ್ರವಾಗಿದೆ. ಆ ಮಂದಹಾಸವು ನಿರ್ಮಲವಾದ ಗುರುವಂತೆ ನಮ್ಮ ರಕ್ಷಣೆಯನ್ನು ಮಾಡಲು ಎಚ್ಚರದಿಂದಿರುವುದು.

ಉಮಾದೇವಿಯ ಮಂದಹಾಸವು ಚಂದ್ರನ ಬೆಳಕಿಗಿಂತ ಪ್ರಕಾಶಮಾನವಾಗಿದ್ದು ಅದನ್ನು ಇಲ್ಲಿ ಅವಳ ಮುಖಕಮಲವು ಅರಳುವಂತೆ ಇರುವುದು. ಅದು ಕತ್ತಲನ್ನು ನಿವಾರಿಸುವುದು, ಗುರುವಿನಲ್ಲಿನ ಕಲ್ಮಶವಾದ ಯೋಚನೆಗಳನ್ನು ನಿವಾರಿಸುವುದು. ದೇವಿಯ ಸದಾ ಎಚ್ಚರದಿಂದಿರುವ ಮಂದಹಾಸವು ಸಜೀವ ಮತ್ತು ನಿರ್ಜಿವ ಶತ್ರುಗಳ ಭಯವನ್ನು ಹಗಲೂ ರಾತ್ರೆಯಲ್ಲೂ ನಿವಾರಿಸುವುದು. ಈ ಮಂದಹಾಸವು ಭಕ್ತರನ್ನು ರಕ್ಷಿಸುವ ಜ್ಞಾನ ಜ್ಯೋತಿಯನ್ನು ಸಂಕೇತಿಸುತ್ತದೆ; ಗುರುವು ನಮ್ಮನ್ನು ಮುನ್ನಡೆಸುವ ಶಕ್ತಿಯಂತೆ ಅದು ಭಕ್ತರನ್ನು ಶುದ್ಧವಾದ ಆಲೋಚನೆಯೆಡೆಗೆ ಕೊಂಡೊಯ್ಯುತ್ತದೆ.

ವಿವರಣೆ :

ಶರತ್ಕಾಲದ ಶುಕ್ಲಪಕ್ಷದ ರಾತ್ರಿಯಂತೆ ನಿರ್ಮಲವಾಗಿರುವ, ಶಿವ ಸುಂದರಿಯ ಮುಖವನ್ನು ಅರಳಿಸುವ ದೇವಿಯ ಮಂದಹಾಸವು ನಮ್ಮೆಲ್ಲರನ್ನೂ ಕಾಪಾಡಲಿ.


ಸಂಸ್ಕೃತದಲ್ಲಿ :

ವ್ಯಾಖ್ಯಾನಂ ಹರ್ಷಸ್ಯ ಪ್ರತ್ಯಾಖ್ಯಾನಂ ಶರತ್ಸುಧಾಭಾನೋಃ
ದಿಶತು ಹೃದಯಪ್ರಸಾದಂ ಗೌರೀವದನಪ್ರಸಾದೋ ನಃ ||2||

ತಾತ್ಪರ್ಯ :

ಗೌರಿಯ ಆಕರ್ಷಕ ಮುಖವು ಶರತ್ಕಾಲದ ಚಂದ್ರನ ಆನಂದವನ್ನು ಕಡೆಗಣಿಸಿ ಆಕೆಯ ಮುಖವು ಆ ಆನಂದವನ್ನು ನಿರಾಕರಿಸುತ್ತದೆ. ಆ ಆಕರ್ಷಕ ಮುಖಭಾವವು ನಮ್ಮ ಹೃದಯಕ್ಕೆ ಶಾಂತಿಯನ್ನು ನೀಡಲಿ.

ವಿವರಣೆ :

ಸಂತೋಷವನ್ನುಂಟುಮಾಡುವ ಮತ್ತು ಮನಸ್ಸಿನ ಪ್ರಸನ್ನತೆಯನ್ನು ನೀಡುವ ಶರತ್ಕಾಲದ ಬೆಳದಿಂಗಳಿನಂತಿರುವ ಗೌರೀ ವದನದ ಮಂದಹಾಸವು ನಮ್ಮನ್ನು ಕಾಪಾಡಲಿ. ನಮಗೆ ಸಂತೋಷ ಮತ್ತು ಮನಃಪ್ರಸಾದಗಳನ್ನು ನೀಡಲಿ.

ಸಂಸ್ಕೃತದಲ್ಲಿ :

ಅಂತರ್ಗತಸ್ಯ ಹರ್ಷಕ್ಷೀರಸಮುದ್ರಸ್ಯ ಕಶ್ಚನ ತರಂಗಃ
ಹಾಸೋ ಹರಹರಿಣದೃಶೋ ಗತಪಂಕಂ ಮಮ ಕರೋತು ಮನಃ ||3||

ತಾತ್ಪರ್ಯ :

ಶಿವನ ಪತ್ನಿಯ ನಗುವು ಆನಂದದ ಹಾಲ್ಗಡಲಿನ ಅಲೆಗಳಂತಿದ್ದು ಅದು ನನ್ನ ಮನಸ್ಸಿನಲ್ಲಿನ ಮಾಲಿನ್ಯಗಳನ್ನು ದೂರಮಾಡಲಿ.


ವಿವರಣೆ :

ಒಳಗಿರುವ ಸಂತೋಷವೆಂಬ ಹಾಲ್ಗಡಲಿನ ಒಂದು ಅಲೆಯಂತಿರುವ ಶಿವಕಾಂತೆಯ ಮಂದಹಾಸವು ನನ್ನ ಮನಸ್ಸನ್ನು ಪಾಪವಿಲ್ಲದ್ದನ್ನಾಗಿ ಮಾಡಲಿ. ಇಲ್ಲಿ ನಗುವಿನಿಂದ ಪಾಪವೂ ಅಲೆಯಿಂದ ಕರ್ಮವೂ ದೂರಕ್ಕೆ ತಳ್ಳಲ್ಪಡುತ್ತದೆಂದು ಭಾವಿಸಬೇಕು.

ಸಂಸ್ಕೃತದಲ್ಲಿ :

ದಿಶಿ ದಿಶಿ ವಿಸರ್ಪದಂಶುಪ್ರಶಮಿತತಾಪಂ ಪರಾಸ್ತಮಾಲಿನ್ಯಂ
ಕುಶಲಾನಿ ಪ್ರದಿಶತು ನಃ ಪಶುಪತಿಹೃದಯೇಶ್ವರೀಹಸಿತಂ ||4||

ತಾತ್ಪರ್ಯ :

ಪಶುಪತಿಯ ಪ್ರಿಯತಮೆಯ ನಗೆಯ ಕಿರಣಗಳು ಸಮಸ್ತ ದಿಕ್ಕುಗಳಿಗೂ ಹರಡಿ ಅದು ಕೊಳೆ ಹಾಗೂ ತಾಪವನ್ನು ನಿವಾರಿಸಲಿ. ಅವಳ ನಗುವು ನಮಗೆ ರಕ್ಷಣೆಯನ್ನು ನೀಡಲಿ.

ವಿವರಣೆ :

ಎಲ್ಲ ದಿಕ್ಕುಗಳಲ್ಲಿಯೂ ಪಸರಿಸಿರುವ ಹಾಗೂ ಜಗತ್ತಿನ ತಾಪವನ್ನು ಶಾಂತಗೊಳಿಸುವ ಜಗತ್ತಿನ ಕಲ್ಮಶವನ್ನು ಹೋಗಲಾಡಿಸುವ ಪರಮಶಿವನ ಪ್ರೇಯಸಿಯಾದ ಪಾರ್ವತಿಯ ಮಂದಹಾಸವು ನಮ್ಮನ್ನು ಕಾಪಾಡಲಿ.

ಸಂಸ್ಕೃತದಲ್ಲಿ :

ಅಂತರ್ಗತಂ ಚ ತಿಮಿರಂ ಹರಂತಿ ವಿಹಸಂತಿ ರೋಹಿಣೀಕಾಂತಂ
ಹಸಿತಾನಿ ಗಿರಿಶಸುದೃಷೋ ಮಮ ಪ್ರಬೋಧಾಯ ಕಲ್ಪಂತಾಂ ||5||



ತಾತ್ಪರ್ಯ :

ಶಿವನ ಪತ್ನಿಯ ನಗೆಯು ಅಂತರಂಗದ ಕತ್ತಲನ್ನು ಹೊಡೆದೋಡಿಸಿ ಚಂದ್ರನನ್ನು ಅಣಕಿಸುತ್ತದೇಕೆಂದರೆ ಚಂದ್ರನ ಬೆಳಕು ಕೇವಲ ಬಾಹ್ಯದ ಕತ್ತಲನ್ನು ಮಾತ್ರ ನಿವಾರಿಸುತ್ತದೆ. ಆ ನಗೆಯು ನನ್ನಲ್ಲಿನ ಜಾಗೃತಿಯನ್ನು ಆರಂಭಿಸಲಿ.

ವಿವರಣೆ :

ಕೈಲಾಸಪತಿಯಾದ ಪರಶಿವನ ಕಾಂತೆಯಾದ ಪಾರ್ವತಿದೇವಿಯ ಮಂದಹಾಸವು ನಮ್ಮ ಅಂತರಂಗದ ಕತ್ತಲೆಯನ್ನು ಹೋಗಲಾಡಿಸುತ್ತದೆ. ಈ ಕಾರಣದಿಂದಲೇ ಅದು ಚಂದ್ರನನ್ನು ನೋಡಿ ಅಪಹಾಸ್ಯ ಮಾಡುತ್ತದೆ. ಚಂದ್ರನ ಕಾಂತಿಯು ಹೊರಗಡೆಯ ಕತ್ತಲನ್ನು ಅಷ್ಟಿಷ್ಟು ಹೋಗಲಾಡಿಸುತ್ತದೆ. ಒಳಗಿರುವ ಕತ್ತಲನ್ನು ಹೋಗಲಾಡಿಸುವ ಸಾಮರ್ಥ್ಯವು ಅವುಗಳಿಗಿಲ್ಲ. ಆದ್ದರಿಂದಲೇ ಮಂದಹಾಸವು ಚಂದ್ರನನ್ನು ಹಾಸ್ಯಮಾಡುತ್ತದೆ.

ಸಂಸ್ಕೃತದಲ್ಲಿ :

(ಭೂ) ಭಾಷಾತುಷಾರದೀಧಿತಿದೀಧಿತ್ಯಾ ಸಹ ವಿಹಾಯಸೋ ರಂಗೇ
ವಿಚರನ್ ಪುರಹರತರುಣೀದರಹಾಸೋ ಮೇ ಹರತ್ವೇನಃ ||6||

ತಾತ್ಪರ್ಯ :

ಶಿವನ ಶಿರದ ಆಭರಣವಾದ ಚಂದ್ರನ ಪ್ರಕಾಶದೊಂದಿಗೆ ಆಕಾಶದಲ್ಲಿ ಸಂಚರಿಸುವ ಶಿವನ ಪತ್ನಿಯ ಮಂದಹಾಸವು ನನ್ನ ಪಾಪಗಳನ್ನು ನಿವಾರಿಸಲಿ.

ವಿವರಣೆ :

ಪರಶಿವನ ತಲೆಗೆ ಅಲಂಕಾರವಾಗಿರುವ ಚಂದ್ರನ ಬೆಳದಿಂಗಳೊಂದಿಗೆ ಆಕಾಶವೆಂಬ ರಂಗಸ್ಥಳದಲ್ಲಿ ಪಾರ್ವತೀದೇವಿಯು ಮಂದಹಾಸವು ಸಂಚರಿಸುತ್ತದೆ. ಅಂದರೆ ಪರಶಿವನ ಜೊತೆಯಲ್ಲಿ ದೇವಿಯು ಆಕಾಶವೆಂಬ ರಂಗಸ್ಥಳದಲ್ಲಿ ಎಲ್ಲೆಡೆಯೂ ಶಿರೋಭೂಷಣವಾದ ಚಂದ್ರನ ಬೆಳದಿಂಗಳೊಂದಿಗೆ ಸಂಚರಿಸುತ್ತಾ ಎಲ್ಲೆಡೆಯೂ ನಗೆಯನ್ನು ಬೀರುತ್ತಾಳೆ. ಆ ದೇವಿಯ ಆ ಮಂದಹಾಸವು ನನ್ನ ಪಾಪಗಳನ್ನು ಹೋಗಲಾಡಿಸಲಿ.

ಸಂಸ್ಕೃತದಲ್ಲಿ :

ರುದ್ರಾಣೀದರಹಸಿತಾನ್ಯಸ್ಮಾಕಂ ಸಂಹರಂತು ದುರಿತಾನಿ
ಯೇಷಾಮುದಯೋ ದಿವಸೋ ಭೂಷಾಪಿಯೂಷಕಿರಣಸ್ಯ ||7||

ತಾತ್ಪರ್ಯ :

ರುದ್ರಾಣಿಯ ಅಮೃತರೇಖೆಯಿಂದ ಕೂಡಿರುವ ಮಂದಹಾಸವು ಉದಯಿಸಿದಾಗ ಶಿವನ ಆಭರಣವಾದ ಚಂದ್ರನಿಗೆ ಮುಂಜಾನೆಯಾಗುವುದು. ಆ ಮಂದಹಾಸವು ನಮ್ಮ ಪಾಪಗಳನ್ನು ತೊಲಗಿಸಲಿ.

ವಿವರಣೆ :

ಪರಶಿವನ ಶಿರೋಭೂಷಣವಾದ ಚಂದ್ರನ ಕಾಂತಿಯು ದೇವಿಯ ಮಂದಹಾಸದಿಂದ ಮಂಕಾಗುತ್ತದೆ. ಅಂದರೆ ಹಗಲಿನಲ್ಲಿ ಚಂದ್ರನಿದ್ದಂತಾಗುತ್ತದೆ. ಅಂತಹ ದೇವಿಯ ಮಂದಹಾಸವು ನಮ್ಮ ಪಾಪಗಳನ್ನು ಹೋಗಲಾಡಿಸಲಿ.

ಸಂಸ್ಕೃತದಲ್ಲಿ :

ಸ್ಕಂದಜನನೀಮುಖೇಂದೋರಸ್ಮಾನ್ ಪುಷ್ಣಾತು ಸುಸ್ಮಿತಜ್ಯೋತ್ಸ್ನಾ
ಮುನಿಮತಿಕೈರವಿಣೀನಾಮುಲ್ಲಾಸಕಯ್ಹಾ ಯದಾಯತ್ತಾ ||8||

ತಾತ್ಪರ್ಯ :

ಋಷಿಗಳ ಹೃದಯವು ನೈದಿಲೆ ಹೂವಿನಂತೆ. ಅವರ ಹೃದಯದಲ್ಲಿನ ಆನಂದವು ಸ್ಕಂದನ ಮಾತೆಯ ಚಂದ್ರನಂತಿರುವ ಮುಖದಿಂದ ಹೊರಹೊಮ್ಮುತ್ತಿರುವ ಚಂದ್ರನ ಬೆಳಕಿನಂತಿರುವ, ಮಂದಹಾಸದ ಮೇಲೆ ಅವಲಂಬಿಸಿರುವುದು. ಆ ಮಂದಹಾಸವು ನಮ್ಮನ್ನು ಪೋಷಿಸಲಿ.

ಇಲ್ಲಿಮತಿ” (ಮುನಿಮತಿಕೈರವಿಣೀ) ಪದವನ್ನು ಹೃದಯಕ್ಕೆ ಸಂಬಂಧಿಸಿದಂತೆ ಉಪಯೋಗಿಸಲಾಗಿದೆ. ಋಷಿಗಳ ಹೃದಯವನ್ನು ಚಂದ್ರನ ಬೆಳಕಿನಲ್ಲಿ ಅರಳುವ ನೀಲಿ ಬಣ್ಣದ ನೈದಿಲೆ ಪುಷ್ಪಕ್ಕೆ ಹೋಲಿಸಲಾಗಿದೆ.

ವಿವರಣೆ :

ಮುನಿಗಳ ಬುದ್ಧಿ ಎಂಬುದು ಕುಮುದ ಪುಷ್ಪ. ಆ ಕುಮುದ ಪುಷ್ಪಗಳ ವಿಕಾಸದ ಮಾತು ಪಾರ್ವತೀದೇವಿಯ ಮಂದಹಾಸವನ್ನು ಅವಲಂಬಿಸಿದೆ. ಅಂತಹ ಸುಬ್ರಹ್ಮಣ್ಯ ಸ್ವಾಮಿಯ ತಾಯಿಯ ಮುಖವೆಂಬ ಚಂದ್ರನ ನಗುವೆಂಬ ಬೆಳದಿಂಗಳು ನಮಗೆ ಪುಷ್ಟಿಯನ್ನು ನೀಡಲಿ.

ಸಂಸ್ಕೃತದಲ್ಲಿ :

ಕಮನೀಯಕಂಠಮಾಲಾಮುಕ್ತಾಮಣಿತಾರಕಾವಯಸ್ಯೋ ನಃ
ಕಾಮಾನ್ ವಿತರತು ಗೌರೀದರಹಾಸೋ ನಾಮ ಧವಲಾಂಶುಃ ||9||

ತಾತ್ಪರ್ಯ :

ಗೌರಿಯ ಚಂದ್ರನ ಬೆಳಕಿನಂತಿರುವ ಸೌಮ್ಯ ಮಂದಹಾಸವು, ನಮ್ಮ ಆಸೆಗಳನ್ನು ಈಡೇರಿಸಲಿ. ಇಲ್ಲಿ ಮಂದಹಾಸವು ಅವಳ ನಕ್ಷತ್ರದಂತೆ ಹೊಳೆಯುತ್ತಿರುವ ಸುಂದರವಾದ ಮುತ್ತಿನ ಹಾರದಂತೆ ಗೆಳೆಯನಂತೆ ಉಳಿದಿದೆ.

ಇಲ್ಲಿ ನಕ್ಷತ್ರ ಹಾಗೂ ಮುತ್ತುಗಳ ಹೊಳಪನ್ನು ತುಲನೆ ಮಾಡಲಾಗಿದೆ.

ವಿವರಣೆ :

ದೇವಿಯು ತನ್ನ ಕಂಠದಲ್ಲಿ ಮುಕ್ತಾಮಣಿಗಳನ್ನು ಧರಿಸಿದ್ದಾಳೆ. ಅವು ನಕ್ಷತ್ರಗಳಂತಿವೆ. ಅವುಗಳ ಮಿತ್ರನಂತಿದೆ ಮಂದಹಾಸವು. ಆ ಮಂದಹಾಸವೆಂಬ ಚಂದ್ರನು ನಮ್ಮ ಇಷ್ಟಾರ್ಥಗಳನ್ನು ನೆರವೇರಿಸಲಿ.

ಸಂಸ್ಕೃತದಲ್ಲಿ :

ಅನವದ್ಯಕಂಠಮಾಲಾಮುಕ್ತಾವಲಿಕಿರಣನಿವಹಸಹವಾಸೀ
ಹರದಯಿತಾದರಹಾಸೋ ಹರತು ಮಮಾಶೇಷಮಜ್ಞಾನಂ ||10||

ತಾತ್ಪರ್ಯ :

ಹರನ ಪತ್ನಿಯ ಸೌಮ್ಯ ಮುಗುಳು ನಗೆಯು ಅವಳ ಕಂಠೀಹಾರದಲ್ಲಿರುವ ಮುತ್ತುಗಳಿಂದ ಹೊರಹೊಮ್ಮುವ ಕಿರಣಗಳ ಗೊಂಚಲೊಡನೆ ಜೊತೆಯಲ್ಲಿರುವುದು. ಆ ಸೌಮ್ಯ ಮುಗುಳು ನಗೆಯು ನನ್ನಲ್ಲಿನ ಅಜ್ಞಾನವನ್ನು ಸಂಪೂರ್ಣವಾಗಿ ಕಳೆಯಲಿ.

ಇಲ್ಲಿಹರಾದಿತ್ಯಪದವನ್ನು ಉಪಯೋಗಿಸಿರುವುದು ಸೂಕ್ತವಾಗಿದೆ. ಏಕೆಂದರೆ, ಕವಿಯು ಇದನ್ನು ತನ್ನ ಅಜ್ಞಾನದ ಹರಣ ಎಂಬ ಅರ್ಥದಲ್ಲಿ ಉಪಯೋಗಿಸಿರುವರು.

ವಿವರಣೆ :

ದೇವಿಯ ಕಂಠದಲ್ಲಿ ನಿರ್ದಿಷ್ಟವಾದ ಮುತ್ತಿನ ಕಂಠೀಹಾರವಿದೆ. ಅದರಲ್ಲಿರುವ ಮುತ್ತುಗಳು ಪ್ರಕಾಶಮಾನವಾದ ಕಿರಣಗಳಿಂದ ಕೂಡಿದೆ. ಆ ಕಿರಣಗಳ ಜೊತೆಯಲ್ಲಿ ನಿತ್ಯ ಸಹವಾಸ ಮಾಡುವ ದೇವಿಯ ಮಂದಹಾಸವು ನಮ್ಮ ಅಜ್ಞಾನಗಳೆಲ್ಲವನ್ನೂ ನಾಶಮಾಡಲಿ.

ಸಂಸ್ಕೃತದಲ್ಲಿ :

ಞ ಇವ ಜ್ಞದೃಶ್ಯ ಉತ್ತಮ ಇಲಾಧರಾಧೀಶನಂದಿನೀಹಾಸಃ
ಪೂರ್ಣಂ ಕರೋತು ಮಾನಸಮಭಿಲಾಷಂ ಸರ್ವಮಸ್ಮಾಕಂ ||11||

ತಾತ್ಪರ್ಯ :

ಭೂಮಿಯನ್ನು ಹಿಡಿದಿಟ್ಟುಕೊಂಡಿರುವ ಹಿಮಾಲಯದ ಪುತ್ರಿಯ ಮಹೋನ್ನತ ಮಂದಹಾಸವು ಜ್ಞಾನ ಪದದಲ್ಲಿ ಕಾಣಿಸದೇ ಇರುವ ಮಹತ್ತರವಾದ  ಅಕ್ಷರದಂತೆ ಇರುವುದು. ಆ ಮಂದಹಾಸವು ನಮ್ಮ ಮನಸ್ಸಿನಲ್ಲಿ ಉದ್ಭವವಾಗುವ ಎಲ್ಲ ಆಸೆಗಳನ್ನೂ ಈಡೇರಿಸಲಿ.

ದೇವಿಯ ಸೌಮ್ಯವಾದ ಮುಗುಳು ನಗೆಯು ಮಹೋನ್ನತವಾದದ್ದು. “~ಅಕ್ಷರದ ಮಹತ್ವವನ್ನು ತೈತ್ತಿರೀಯಪ್ರತಿಶಾಖ್ಯದಲ್ಲಿ ಉಲ್ಲೀಖಿಸಲಾಗಿದೆ.

ವಿವರಣೆ :

ಜ್ಞಎಂಬ ಅಕ್ಷರವು ಜ ಕಾರ ಮತ್ತುಕಾರಗಳೆಂಬ ಸಂಯೋಗದಿಂದ ಆಗಿದೆ. ಅದನ್ನು ನಾವು ಯೋಚಿಸಿದರೆ ತಿಳಿಯುತ್ತದೆ. ಅವರಿಗೆ ಅದು ಪ್ರಕಾಶವಾಗಿ ಗೊತ್ತಾಗುತ್ತವೆ. ಅದರಂತಿರುವ ದೇವಿಯ ಮಂದಹಾಸವು ನಮ್ಮ ಎಲ್ಲ ಅಭಿಲಾಷೆಗಳನ್ನು ಪೂರ್ಣಗೊಳಿಸಲಿ.

ಸಂಸ್ಕೃತದಲ್ಲಿ :

ಆಲೋಕಮಾತ್ರತೋ ಯಃ ಶಂಕರಮಸಮಾಸ್ತ್ರಕಿಂಕರಂ ಚಕ್ರೇ
ಅಲ್ಪೋsಪ್ಯನಲ್ಪಕರ್ಮಾ ಹಾಸೋ ನಃ ಪಾತು ಸ ಶಿವಾಯಾಃ ||12||

ತಾತ್ಪರ್ಯ :

ಶಿವಾಳ ಮಂದಹಾಸವನ್ನು ನೋಡುತ್ತಿದ್ದಂತೆ ಶಿವನು ಮನ್ಮಥನ ಸೇವಕನಾಗಬೇಕಾಯಿತು. ಆ ಮಂದಹಾಸವು ಕಿರಿದಾಗಿದ್ದರೂ ಮಹತ್ತರ ಕಾರ್ಯಗಳನ್ನು ಮಾಡಿ ತೋರಿಸುವ ಶಕ್ತಿಯನ್ನು ಹೊಂದಿದೆ. ಆ ಮಂದಹಾಸವು ನಮ್ಮನ್ನು ರಕ್ಷಿಸಲಿ.

ವಿವರಣೆ :

ದೇವಿಯ ಯಾವ ಮಂದಹಾಸವು ಪರಾಶಿವನನ್ನು ಮನ್ಮಥನ ಸೇವಕನನ್ನಾಗಿ ಮಾಡಿತೋ, ಆ ಪಾರ್ವತೀದೇವಿಯ ಮಂದಹಾಸವು, ಅಲ್ಪವಾದರೂ ಅತ್ಯಧಿಕವಾದ ಕ್ರಿಯೆಯುಳ್ಳದ್ದಾಗಿದೆ. ಅದು ನಮ್ಮನ್ನು ಕಾಪಾಡಲಿ.

ಸಂಸ್ಕೃತದಲ್ಲಿ :

ಸ್ಮರಮತರತಮೀಶಂ ಯಃ ಕರೋತಿ ಭಾವಪ್ರಸಂಗಚಾತುರ್ಯಾ
ದ್ವಿಜಗಣಪುರಸ್ಕೃತೋsವ್ಯಾತ್ ಸ ಶಿವಾಹಾಸಪ್ರವಕ್ತಾ ನಃ ||13||

ತಾತ್ಪರ್ಯ :

ಶಿವಾಳ ಸಮ್ಮೋಹನಗೊಳಿಸುವ ಮುಗುಳ್ನಗೆಯು (ವಿವರಿಸುವ ರೂಪದಲ್ಲಿ) ಶಿವನನ್ನು ಬ್ರಾಹ್ಮಣದಲ್ಲಿ ಗೌರವಿಸಲ್ಪಡುವ ಮನ್ಮಥನಿಗೆ ಶರಣಾಗುವಂತೆ ಮಾಡಿದೆ. ಆ ಮುಗುಳ್ನಗೆಯು ನಮ್ಮನ್ನು ರಕ್ಷಿಸಲಿ.

ದ್ವಿಜಅಂದರೆ ಎರಡು ಬಾರಿ ಜನಿಸಿರುವವರು. ಇದು ಬ್ರಾಹ್ಮಣ ಹಾಗೂ ಕಷ್ಟವನ್ನು ಸಹಿಸಿಕೊಳ್ಳುವ ಸಾಮರ್ಥ್ಯವುಳ್ಳವರಿಗೆ ಅನ್ವಯಿಸುತ್ತದೆ. ಆದ್ದರಿಂದ ಹೇಳಿಕೆಯಾದದ್ವಿಜಗಣಪುರಸ್ಕೃತವು ದೇವಿಯ ಸೌಮ್ಯ ಮುಗುಳ್ನಗೆಯನ್ನು ಕಷ್ಟಸಹಿಷ್ಣುಗಳು ಹೊರತಂದಿರುವರು. ಇಲ್ಲಿ ಶಿವಾಳ ಮುಗುಳ್ನಗೆಯು ಪ್ರೀತಿಯ ಸಂದೇಶವನ್ನು ಶೃಂಗಾರಭಾವದ ಮೂಲಕ ಶಿವನಿಗೆ ಕಳುಹಿಸಲಾಗಿದೆ ಎಂಬ ಅರ್ಥವನ್ನು ಸೂಚಿಸುತ್ತದೆ.

ವಿವರಣೆ :

ದೇವಿಯ ಯಾವ ಮಂದಹಾಸವು ತನ್ನ ಅಭಿಪ್ರಾಯಗಳನ್ನು ಸೂಚಿಸುವ ಚತುರತೆಯಿಂದ ದ್ವಿಜಗುಣಪುರಸ್ಕೃತಃ ಅಂದರೆ, ದಂತಪಂಕ್ತಿಗಳಿಂದ ಮುಂದು ಮಾಡಲ್ಪಟ್ಟು ಬ್ರಾಹ್ಮಣಶ್ರೇಷ್ಠರಿಂದ ಮುಂದುವರಿಸಲ್ಪಟ್ಟು ಬೆಳಗುವ ದೇವಿಯ ಮಂದಹಾಸವೆಂಬ ಪ್ರವಚನಕಾರನು, ನಮ್ಮನ್ನು ಕಾಪಾಡಲಿ.

ಸಂಸ್ಕೃತದಲ್ಲಿ :

ರದವಾಸಸಾ ರಥೀ ಮಾಂ ಶರೀ ಕರೈಃ ಪಾತು ಪಾರ್ವತೀಹಾಸಃ
ಪಾವಕದೃಶಂ ಜಿಗೀಷೋಃ ಪಂಚಪೃಷತ್ಕಸ್ಯ ಸೇನಾನೀಃ ||14||

ತಾತ್ಪರ್ಯ :

ಪಾರ್ವತಿಯ ಮಂದಹಾಸವು ತುಟಿಗಳ ರಥದಲ್ಲಿ ಮನ್ಮಥನ ಸೈನಿಕರು ಕಾಂತಿಯ ರೂಪದಲ್ಲಿ ಬಾಣಗಳೊಂದಿಗೆ ಮುಕ್ಕಣ್ಣನನ್ನು ಜಯಿಸಲು ಸಾಗುತ್ತಿರುವಂತಿದೆ. ಆ ಮಂದಹಾಸವು ನನ್ನನ್ನು ರಕ್ಷಿಸಲಿ.

ಮನ್ಮಥನು ಪಾರ್ವತಿಯ ಮಂದಹಾಸದ ಸಹಾಯದೊಂದಿಗೆ ಶಿವನನ್ನು ಜಯಿಸುವನು. ಈ ಯುದ್ಧದಲ್ಲಿ ತುಟಿಯ ಮೇಲೆ ಇರುವ ಮಂದಹಾಸದ ಕಿರಣಗಳು ಬಾಣಗಳಾಗಿರುವುದು.

ಸಂಸ್ಕೃತದಲ್ಲಿ :

ಶಿವಹೃದಯಮರ್ಮಭೇದಿ ಸ್ಮಿತಂ ತದದ್ರೀಶವಂಶಮುಕ್ತಾಯಾಃ
ದಶನದ್ಯುತಿದ್ವಿಗುಣಿತಶ್ರೀಕಂ ಶೋಕಂ ಧುನೋತು ಮಮ ||15||

ತಾತ್ಪರ್ಯ :

ಪರ್ವತಗಳ ರಾಜನ ಮುದ್ದಾದ ಪಾರ್ವತಿಯ ಮಂದಹಾಸವು, ಹೊಳೆಯುತ್ತಿರುವ ಅವಳ ದಂತಪಂಕ್ತಿಯೊಡನೆ ಶಿವನ ಹೃದಯವನ್ನು ಭೇಧಿಸಿಕೊಂಡು ಹೋಗುವುದು. ಆ ಮಂದಹಾಸವು ನನ್ನ ದುಃಖವನ್ನು ನಿವಾರಿಸಲಿ.

ಪಾರ್ವತಿಯ ಮಂದಹಾಸವು ಶಿವನ ಹೃದಯವನ್ನು ಭೇದಿಸಲು ಶಕ್ಯವಾದರೂ, ಆ ಮಂದಹಾಸವು ಏಕೆ ನಮ್ಮಂಥವರ ಹೃದಯವನ್ನು ಪ್ರವೇಶಿಸಿ ನಮ್ಮ ದುಃಖಗಳನ್ನು ದೂರಮಾಡುವುದಿಲ್ಲ?

ವಿವರಣೆ :

ದೇವಿಯ ಮಂದಹಾಸವು ಅತಿಕಠಿಣವಾದ ಪರಶಿವನ ಗೂಢವಾದ ಹೃದಯದ ಜೀವಸ್ಥಾನವನ್ನು ಭೇದಿಸುವಂತಹುದು. ಅಂದರೆ ಅಲ್ಲಿ ಪ್ರವೇಶಿಸುವ ಸಾಮರ್ಥ್ಯವುಳ್ಳದ್ದು. ದಂತಪಂಕ್ತಿಗಳ ಕಾಂತಿಯಿಂದ ದ್ವಿಗುಣಿತವಾದ ಕಾಂತಿಯುಳ್ಳದ್ದು. ಆದ್ರಿರಾಜನಾದ ಹಿಮಾಲಯದ ವಂಶದ ಮುತ್ತಿನಂತಿರುವ ಆ ಮಂದಹಾಸವು ನನ್ನ ಶೋಕಗಳೆಲ್ಲವನ್ನೂ ಹೋಗಲಾಡಿಸಲಿ.

ಸಂಸ್ಕೃತದಲ್ಲಿ :

ಬ್ರಹ್ಮಾಂಡರಂಗಭಾಜೋ ನಟ್ಯಾಃ ಶಿವಸೂತ್ರಧಾರಸಹಚರ್ಯಾಃ
ಶ್ರೀವರ್ಧನೋsನುಲೇಪೋ ಮುಖಸ್ಯ ಹಾಸಃ ಪುನಾತ್ವಸ್ಮಾನ್ ||16||

ತಾತ್ಪರ್ಯ :

ವಿಶ್ವದ ನಾಟ್ಯರಂಗದ ನಿರ್ದೇಶಕನಾದ ಶಿವನ ನಾಟ್ಯಸಂಗಾತಿಯ ಮುಗುಳ್ನಗೆಯು ಮುಖದ ಹೊಳಪನ್ನು ವೃದ್ಧಿಸುವ ಕಾಂತಿವರ್ಧಕದಂತೆ ವರ್ತಿಸುತ್ತದೆ. ಆ ಮುಗುಳ್ನಗೆಯು ನಮ್ಮನ್ನು ಶುದ್ಧೀಕರಿಸಲಿ.

ವಿವರಣೆ :

ಬ್ರಹ್ಮಾಂಡವೇ ಒಂದು ನಾಟ್ಯಸ್ಥಳ. ಅಲ್ಲಿಯ ಸೂತ್ರಧಾರನೇ ಪರಶಿವನು. ಪಾರ್ವತಿಯು ಅವನ ಜೊತೆ ಅಭಿನಯಿಸುವ ನಟಿ. ಆ ನಟಿಯ ಮುಖಕಾಂತಿಯನ್ನು ಅಭಿವ್ಯಕ್ತಿಗೊಳಿಸುವ ಲೇಪನದ್ರವ್ಯವೇ ಅವಳ ಮುಖದಲ್ಲಿ ಬೆಳಗುವ ಮಂದಹಾಸವು. ಆ ಮಂದಹಾಸವು ನಮ್ಮನ್ನು ಪವಿತ್ರಗೊಳಿಸಲಿ.

ಸಂಸ್ಕೃತದಲ್ಲಿ :

ಅಧರಪ್ರವಾಲಶಯನೇ ನಾಸಾಭರಣಪ್ರಭಾವಿಲಾಸಿನ್ಯಾ
ರಮಮಾಣೋ ಹರರಮಣೀಹಾಸಯುವಾ ಹರತು ನಃ ಶೋಕಂ ||17||

ತಾತ್ಪರ್ಯ :

ಹರನ ಪತ್ನಿಯ ಮೊದಲ ಮೂಗುತಿಯಿಂದ ಹೊಳೆಯುವ ಹೊಳಪು, ತುಟಿಗಳ ಮೊಗ್ಗಿನ ಹಾಸಿಗೆಯ ಮೇಲೆ ಬಿದ್ದಿರುವಂತೆ ಕಂಡುಬರುವ ಮುಗುಳ್ನಗೆಯು ನಮ್ಮ ದುಃಖಗಳನ್ನು ದೂರಮಾಡಲಿ.


ವಿವರಣೆ :

ದೇವಿಯ ಅಧರವೇ ಒಂದು ಚಿಗುರಿನ ಹಾಸಿಗೆ. ಅದರಲ್ಲಿ ದೇವಿಯ ಮೂಗುತಿಯ ಪ್ರಭೆ ಎಂಬ ವಿಲಾಸಿನೀ ಯುವತಿಯೊಂದಿಗೆ ಕ್ರೀಡಿಸುತ್ತಿರುವ ಹರರಮಣಿಯಾದ ಉಮಾದೇವಿಯ ಮಂದಸ್ಮಿತವೆಂಬ ಯುವಕನು ನಮ್ಮ ಶೋಕಗಳನ್ನು ಹೋಗಲಾಡಿಸಲಿ.

ಸಂಸ್ಕೃತದಲ್ಲಿ :

ಅಧರೋಷ್ಠವೇದಿಕಾಯಾಂ ನಾಸಾಭರಣಾಂಶುಶಾಬಕೈಃ ಸಾಕಂ
ಕುಲಮಖಿಲಮವತು ಖೇಲನ್ನದ್ರಿಸುತಾಹಾಸಬಾಲೋ ನಃ ||18||

ತಾತ್ಪರ್ಯ :

ಹಿಮವಂತನ ಪುತ್ರಿಯ ಮುಗುಳ್ನಗೆಯು, ಅವಳ ಮೂಗುತಿಯಿಂದ, ಅವಳ ತುಟಿಗಳ ಮೇಲೆ ಹರಿದು ಹೊರಬರುತ್ತಿರುವ ಕಿರಣಗಳೊಂದಿಗೆ, ಮಗುವೊಂದು ಉಳಿದ ಮಕ್ಕಳೊಂದಿಗೆ ಆಟದ ಮೈದಾನದಲ್ಲಿ ಆಡುತ್ತಿರುವಂತೆ ಆಡುತ್ತಿದೆ. ಆ ಮುಗುಳ್ನಗುವು ನಮ್ಮ ಎಲ್ಲ ಬಂಧು ಬಾಂಧವರನ್ನೂ ರಕ್ಷಿಸಲಿ.

ವಿವರಣೆ :

ದೇವಿಯ ಕೆಳದುಟಿಯೊಂದು ಜಗಲಿ. ಅದರಲ್ಲಿ ಮೂಗುತಿಯ ಕಿರಣಗಳೆಂಬ ಶಿಶುಗಳೊಂದಿಗೆ ಕ್ರೀಡಿಸುತ್ತಿರುವ ಪರ್ವತರಾಜಪುತ್ರಿ ಪಾರ್ವತೀದೇವಿಯ ಮಂದಹಾಸವೆಂಬ ಬಾಲಕನು ನಮ್ಮ ಸಮಸ್ತ ಕುಲವನ್ನೂ ಕಾಪಾಡಲಿ.

ಸಂಸ್ಕೃತದಲ್ಲಿ :

ಅನುಲೇಪನಸ್ಯ ವೀಪ್ಸಾ ದ್ವಿರ್ಭಾವಃ ಕುಚತಟೀದುಕೂಲಸ್ಯ
ಹರತು ಹೃದಯವ್ಯಥಾಂ ಮೇ ಹಸಿತಂ ಹರಜೀವಿತೇಶ್ವರ್ಯಾಃ ||19||


ತಾತ್ಪರ್ಯ :

ಹರನ ಜೀವನದ ಸಾಮ್ರಾಜ್ಞಿಯ ಮುಗುಳ್ನಗೆಯು ಅವಳ ಮುಖದ ಸೌಂದರ್ಯವನ್ನು ಅಧಿಕವಾದ ಸೌಂದರ್ಯವರ್ಧಕದಂತೆ ಹೆಚ್ಚಿಸುತ್ತದೆ. ಆ ಮುಗುಳ್ನಗೆಯು ನನ್ನ ಹೃದಯದಲ್ಲಿರುವ ದುಃಖವನ್ನು ನಿವಾರಿಸಲಿ.

ವಿವರಣೆ :

ಶ್ರೀಖಂಡವೇ ಮೊದಲಾದ ಲೇಪನದ್ರವ್ಯಗಳ ದ್ವಿರುಕ್ತಿಯೂ ಸ್ತನಗಳ ಮೇಲೆ ಉತ್ತರೀಯವಾಗಿರುವ ದುಕೂಲವನ್ನು ಇಮ್ಮಡಿಸುವಂತಹದೂ ಆಗಿರುವ ಪರಶಿವನ ಜೀವಿತೇಶ್ವರಿಯಾದ ಪಾರ್ವತೀದೇವಿಯ ಮಂದಹಾಸವು ನನ್ನ ಹೃದಯ ವ್ಯಥೆಯನ್ನು ಹೋಗಲಾಡಿಸಲಿ.

ಸಂಸ್ಕೃತದಲ್ಲಿ :

ಗಿರಿಶಾಂಗರಾಗಭಸಿತಂ ಸ್ವಾಗತವಚಸಾsಭಿನಂದದಾದರತಃ
ಗಿರಿಜಾಲೀಲಾಹಸಿತಂ ಗರೀಯಸೀಂ ಮೇ ತನೋತು ಧಿಯಂ ||20||

ತಾತ್ಪರ್ಯ :

ಪವಿತ್ರ ಭಸ್ಮದೊಂದಿಗೆ ಅಲಂಕೃತನಾದ ಶಿವನನ್ನು ಗಿರಿಜೆಯ ಮನಮೋಹಕವಾದ ಮಂದಹಾಸವು ಗೌರವದೊಂದಿಗೆ ಸ್ವಾಗತಿಸುತ್ತದೆ. ಆ ಮಂದಹಾಸವು ನನ್ನನ್ನು ಹೆಚ್ಚಿನ ಬುದ್ಧಿಶಕ್ತಿಯೊಂದಿಗೆ ಅನುಗ್ರಹಿಸಲಿ.

ಗಿರಿಜೆಯ ಶುದ್ಧವಾದ ಮುಗುಳ್ನಗೆಯು ಶಿವನನ್ನು ಸ್ವಾಗತಿಸುವಂತೆ ಕಾಣುವುದು.

ವಿವರಣೆ :

ಪತಿಯಾದ ಶಂಕರನು ಧರಿಸಿರುವ ವಿಭೂತಿ ಎಂಬ ಅಂಗಾನುಲೇಪನವನ್ನು ದೇವಿಯ ಮಂದಹಾಸವು ಸ್ವಾಗತಿಸಿ ಅಭಿನಂದಿಸಿ ಅನುಮೋದಿಸುವಂತಿದೆ. ಅಂದರೆ ಮಂದಹಾಸದ ಬಿಳುಪು ಶಿವನ ಭಸ್ಮದ ಬಿಳುಪನ್ನು ಸ್ವಾಗತಿಸುವಂತಿದೆ. ಆ ರೀತಿ ಆ ಮಂದಹಾಸವು ನನ್ನ ಬುದ್ಧಿಯನ್ನು ವಿಸ್ತರಿಸಿ ಶ್ರೇಷ್ಠನನ್ನಾಗಿ ಮಾಡಲಿ.

ಸಂಸ್ಕೃತದಲ್ಲಿ :

ದಯಿತೇನ ಸಂಲ್ಲಪಂತ್ಯಾಃ ಸಹ ತುಹಿನಮರೀಚಿಶಿಶುಕಿರೀಟೇನ
ವಾಗಮೃತಬುದ್ಬುದೋsವ್ಯಾದಲಸೋ ಮಾಮಗಭುವೋ ಹಾಸಃ ||21||

ತಾತ್ಪರ್ಯ :

ಹಿಮವಂತನ ಪುತ್ರಿಯು ಚಂದ್ರನನ್ನು ಕಿರೀಟದಲ್ಲಿ ಧರಿಸಿರುವ ತನ್ನ ಪತಿಯೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದಾಗ ಅವಳ ಸೌಮ್ಯ ಮುಗುಳ್ನಗೆಯು ಸಿಹಿಯಾದ ಮಾತುಗಳ ಅಮೃತದ ಬುಗ್ಗೆಯಂತೆ ಕಾಣುವುದು. ಆ ಮುಗುಳ್ನಗೆಯು ನನ್ನನ್ನು ರಕ್ಷಿಸಲಿ.

ವಿವರಣೆ :

ಪರಶಿವನು ಶೀತಕಿರಣಗಳುಳ್ಳ ಚಂದ್ರನನ್ನು ತಲೆಯಲ್ಲಿ ಧರಿಸಿದ್ದಾನೆ. ಆ ಚಂದ್ರನೇ ಶಿಶು. ಪ್ರಿಯನಾದ ಶಿವನ ಜೊತೆಯಲ್ಲಿ ದೇವಿಯು ವಿಲಾಸಪೂರ್ವಕವಾಗಿ ಮಾತನಾಡುತ್ತಾಳೆ. ಆ ಮಾತುಗಳೇ ಅಮೃತಪ್ರಾಯವಾದುದು. ಹಾಗೆ ಮಾತನಾಡುವಾಗ ಮಧ್ಯದಲ್ಲಿ ಅವಳು ಬೀರುವ ಮಂದಹಾಸವೇ ಅಲ್ಲಿಯ ಗುಳ್ಳೆಗಳು. ಆ ಗುಳ್ಳೆಗಳು ನಮ್ಮನ್ನು ಕಾಪಾಡಲಿ.

ಸಂಸ್ಕೃತದಲ್ಲಿ :

ಶುದ್ಧಃ ಕುಚಾದ್ರಿನಿಲಯಾದಪಿ ಮುಕ್ತಾಹಾರತೋ ಹರಪುರಂಧ್ರ್ಯಾಃ
ವದನಶ್ರೀಪ್ರಾಸಾದೇ ವಿಲಸನ್ ಹಾಸೋsಲಸೋsವತು ಮಾಂ ||22||




ತಾತ್ಪರ್ಯ :

ಹರನ ಪತ್ನಿಯ ಸೌಮ್ಯ ಕಿರುನಗೆಯು ಲಕ್ಷ್ಮಿಯ ವಾಸಸ್ಥಾನವಾದ ಪಾರ್ವತಿಯ ವದನದಲ್ಲಿ ಬೆಳಗುತ್ತಿದ್ದು, ಅದು ಅವಳ ಬೆಟ್ಟದಂತಿರುವ ವಕ್ಷಸ್ಥಳದಲ್ಲಿ ರಾರಾಜಿಸುತ್ತಿರುವ ಮುತ್ತಿನ ಹಾರಕ್ಕಿಂತ ಪರಿಶುದ್ಧವಾಗಿರುವುದು. ಆ ಕಿರುನಗೆಯು ನನ್ನನ್ನು ರಕ್ಷಿಸಲಿ.

ಗೌರಿಯ ಸೌಮ್ಯ ಮಂದಹಾಸವು ಅವಳ ಮುತ್ತಿನ ಹಾರಕ್ಕಿಂತ ಹೆಚ್ಚಿನ ಸೌಂದರ್ಯವುಳ್ಳದ್ದು ಹಾಗೂ ಪರಿಶುದ್ಧವಾದದ್ದು. ಗೌರಿಯ ಮುಖಕಮಲವು ಮಹಾಲಕ್ಷ್ಮಿಯ ವಾಸಸ್ಥಾನ. ಗೌರಿಯ ಸುಂದರವಾದ ಹಾಗೂ ಹೊಳೆಯುತ್ತಿರುವ ಮುಗುಳ್ನಗೆಯನ್ನು ನಾವು ಹೇಗೆ ವರ್ಣಿಸಬಹುದು?

ವಿವರಣೆ :

ಪಾರ್ವತೀದೇವಿಯ ಕುಚ ಪರ್ವತಗಳನ್ನು ಆಶ್ರಯಿಸಿರುವ, ಮುತ್ತಿನ ಹಾರಕ್ಕಿಂತ ಶುದ್ಧವಾದ, ಹಾಗೆಯೇ ದೇವಿಯ ಕುಚಪರ್ವತಗಳ ಮೇಲಿರುವ ಮುಖವೆಂಬ ಪ್ರಾಸಾದವು, ಲಕ್ಷ್ಮೀದೇವಿಯ ಆವಾಸಸ್ಥಾನವಾದ ಕಮಲದಂತಿದೆ. ಅದರಲ್ಲಿ ವಿಲಾಸದಂತಿರುತ್ತಿರುವ ದೇವಿಯ ಮಂದಹಾಸವು ನನ್ನನ್ನು ಕಾಪಾಡಲಿ.

ಸಂಸ್ಕೃತದಲ್ಲಿ :

ವ್ಯರ್ಥೀಭೂತೇ ಚೂತೇ ಗತವತಿ ಪರಿಭೂತಿಮಸಿತಜಲಜಾತೇ
ಅನಿತೇ ಸಿದ್ಧಿಮಶೋಕೇ ಕಮಲೇsಪಿ ಗಲಜ್ಜಯಶ್ರೀಕೇ ||23||

ತಾತ್ಪರ್ಯ :

ಮನ್ಮಥನ ಮಾವಿನ ಹಣ್ಣಿನಿಂದ ಕೂಡಿದ ಬಾಣಗಳು ವ್ಯರ್ಥವಾದಾಗ, ನೈದಿಲೆಯು ಸೋತಿತು; ಅಶೋಕ ಪುಷ್ಪವು ವ್ಯರ್ಥವಾಯಿತು, ಅಷ್ಟೇ ಏಕೆ, ಕಮಲ ಪುಷ್ಪವೂ ಗೆಲ್ಲಲಾಗಲಿಲ್ಲ.



ವಿವರಣೆ :

ಪರಶಿವನ ಹೃದಯವನ್ನು ಭೇದಿಸುವಾಗ ಮನ್ಮಥನ ಪಂಚಬಾಣಗಳಲ್ಲಿ ಎಲ್ಲ ಬಾಣಗಳೂ ವ್ಯರ್ಥವಾದವು. ಅವನ ಐದು ಬಾಣಗಳಲ್ಲಿ ಒಂದಾದ ಮಾವು ವಿಫಲವಾಯಿತು. ನೀಲೋತ್ಪಲವೆಂಬ ಬಾಣವು ಅವಮಾನಪಟ್ಟುಕೊಂಡಿತು. ಅಶೋಕವೆಂಬ ಬಾಣವು ಲಕ್ಷಭೇದನವನ್ನು ಮಾಡಲು ಅಸಮರ್ಥವಾಯಿತು. ಕಮಲವೆಂಬ ಬಾಣವೂ ಕೂಡಾ ವಿಜಯಲಕ್ಷ್ಮಿಯನ್ನು ಕಳೆದುಕೊಂಡಾಗ (ಮುಂದಿನ ಶ್ಲೋಕದಲ್ಲಿ ಕ್ರಿಯಾಪದವಿದೆ).

ಸಂಸ್ಕೃತದಲ್ಲಿ :

ಬಹುಧಾ ಬಿಭೇದ ಹೃದಯಂ ಹರಸ್ಯ ಬಾಣೇನ ಯೇನ ಸುಮಬಾಣಃ
ತದುಮಾಲೀಲಾಹಸಿತಂ ಮಲ್ಲೀಸುಮಮಸ್ತು ಮೇ ಭೂತ್ಯೈ ||24||

ತಾತ್ಪರ್ಯ :

ಕಟ್ಟಕಡೆಗೆ ಮನ್ಮಥನು ಹರನ ಹೃದಯವನ್ನು ಅನೇಕ ಮಾರ್ಗಗಳ ಮೂಲಕ ಉಮಾದೇವಿಯ ವಿನೋದದ ಮಲ್ಲಿಗೆಯಂಥ ಮಂದಹಾಸದಿಂದ ಪ್ರವೇಶಿಸಲು ಸಾಧ್ಯವಾಯಿತು. ಆ ಮಂದಹಾಸವು ನನಗೆ ಅಭ್ಯುದಯವನ್ನು ದಯಪಾಲಿಸಲಿ.

ಕವಿಯು ಈ ಶ್ಲೋಕದಲ್ಲಿ ಉಮಾದೇವಿಯ ಮಂದಹಾಸವನ್ನು ಮನ್ಮಥನು ಮಲ್ಲಿಗೆ ಹೂವಿನ ಐದನೇ ಬಾಣವನ್ನಾಗಿಸಿಕೊಂಡು ಶಿವನ ಹೃದಯವನ್ನು ಪ್ರವೇಶಿಸಿದನೆಂದು ಸುಂದರವಾಗಿ ವರ್ಣಿಸಿರುವರು. ಸಣ್ಣದಾದ ಬಿಳಿಯ ಮಲ್ಲಿಗೆ ಹೂವನ್ನು ಉಮಾದೇವಿಯ ಸೌಮ್ಯ ಹಾಗೂ ಶುದ್ಧವಾದ ಮಂದಹಾಸಕ್ಕೆ ಹೋಲಿಸಲಾಗಿದೆ.

ವಿವರಣೆ :

ಯಾವ ಬಾಣದಿಂದ ಮನ್ಮಥನು ಹರನ ಹೃದಯವೆಂಬ ಲಕ್ಷ್ಯವನ್ನು ಭೇದಿಸಿದನೋ ಉಮಾದೇವಿಯ ಆ ಮಂದಹಾಸವೆಂಬ ಮಲ್ಲಿಗೆಯು ನನಗೆ ಸಕಲೈಶ್ವರ್ಯಗಳನ್ನೂ ನೀಡಲಿ. ಮನ್ಮಥನ ಎಲ್ಲ ಬಾಣಗಳೂ ವ್ಯರ್ಥವಾದಾಗ ದೇವಿಯ ಮಂದಹಾಸವೇ ಅವನನ್ನು ಜಯಿಸಿತು. ಮನ್ಮಥನ ಐದು ಬಾಣಗಳಲ್ಲಿ ಅಲ್ಪವೂ ಶುಭ್ರವೂ ಆದ ಮಲ್ಲಿಗೆಯ ಮಂದವೂ ಶುಭ್ರವೂ ಆದ ದೇವಿಯ ಮಂದಹಾಸದೊಂದಿಗೆ ಒಂದಾಗಿ ಕಾಣುತ್ತದೆ.

ಸಂಸ್ಕೃತದಲ್ಲಿ :

ಅಮಲದರಸ್ಮಿತಚಿಹ್ನಾಸ್ತಾ ಏತಾಃ ಸರ್ವಮಂಗಲಾ ಆರ್ಯಾಃ
ಕಮನೀಯತಮಾಸ್ವಸಮಾಮುಪತಿಷ್ಠಂತಾಮುಮಾಂ ದೇವೀಂ ||25||       225

ತಾತ್ಪರ್ಯ :

ಆರ್ಯಾವೃತ್ತದ ಛಂದಸ್ಸಿನಲ್ಲಿ ಈ ಪರಿಶುದ್ಧ ಹಾಗೂ ಪವಿತ್ರವಾದ ಪ್ರಾರ್ಥನೆಯನ್ನು ಮಂದಹಾಸದೊಂದಿಗೆ ಅಲಂಕರಿಸಿ, ಅದು ಬೇರಾರಿಗೂ ಸರಿಸಾಟಿಯಾಗದ, ಅಪ್ರತಿಮ ಸೌಂದರ್ಯವತಿಯಾದ ಉಮಾದೇವಿಯನ್ನು ತೇಜೋಮಯಗೊಳಿಸಲಿ.

ವಿವರಣೆ :

ದೇವಿಯ ಶುದ್ಧವಾದ ಮಂದಹಾಸವನ್ನೇ ಚಿಹ್ನೆಯಾಗಿ ಉಳ್ಳ, ಎಲ್ಲೆಡೆಯೂ ಮಂಗಳವನ್ನು ಪ್ರಾರ್ಥಿಸಿರುವ, ಆರ್ಯಾ ಎಂಬ ಛಂದಸ್ಸಿನಲ್ಲಿ ನಿಬದ್ಧವಾಗಿರುವ ಈ ಸ್ತೋತ್ರಗಳು ಅತ್ಯಂತ ಮನೋಹರವಾದ ಪದಾರ್ಥಗಳಲ್ಲಿ ಅದ್ವಿತೀಯವಾದ ಉಮಾದೇವಿಯನ್ನು ಉಪಾಸನೆ ಮಾಡಲಿ.

ಇಲ್ಲಿ ನಿಬದ್ಧವಾಗಿರುವ ಆರ್ಯಾವೃತ್ತದ ಶ್ಲೋಕಗಳಲ್ಲಿ ದೇವಿಯ ಮಂದಹಾಸವೇ ವಿಷಯವಾಗಿದೆ. ಪ್ರತಿ ಶ್ಲೋಕದಲ್ಲೂ ಮಂಗಳವನ್ನು ಪ್ರಾರ್ಥಿಸಿರುವುದರಿಂದ ಇವು ಸರ್ವಮಂಗಳಗಳೂ ಆಗಿವೆ. ಇವುಗಳನ್ನು ಉಪಾಸನೆ ಮಾಡಲಿ ಎಂದು ತಾತ್ಪರ್ಯ.

 ಒಂಬತ್ತನೇ ಸ್ತಬಕವು ಸಂಪೂರ್ಣವಾಯಿತು

ಪುಷ್ಪಗುಚ್ಛ (ಸ್ತಬಕ) – 10; ಛಂದಸ್ಸುಲಲಿತಾವೃತ್ತ; ಕೇಶಾದಿಪಾದಾಂತವರ್ಣನೆ

ಸಂಸ್ಕೃತದಲ್ಲಿ :

ಸಂಕ್ಷಾಲನಾಯ ಹರಿತಾಂ ವಿಭೂತಯೇ ಲೋಕತ್ರಯಸ್ಯ ಮದನಾಯ ಧೂರ್ಜಟೇಃ
ಕಾತ್ಯಾಯನೀವದನತಃ ಶನೈಃ ಶನೈರ್ನಿರ್ಯಂತಿ ಶುಭ್ರಹಸಿತಾನಿ ಪಾಂತು ನಃ ||1||

ತಾತ್ಪರ್ಯ :

ಕಾತ್ಯಾಯನಿಯ ಮುಖದಿಂದ ನಿಧಾನವಾಗಿ ಮಂದಹಾಸವು ಹೊರಬಂದು ಅದು ಶಿವನಲ್ಲಿ ಮೂರು ಲೋಕಗಳ ಸಮೃದ್ಧಿಗಾಗಿ, ಮತ್ತು ದಿಕ್ಕುಗಳ ಶುದ್ಧೀಕರಣಕ್ಕಾಗಿ, ಆಸೆಯನ್ನು ಉತ್ಪತ್ತಿಯನ್ನುಂಟುಮಾಡಿರುವುದು. ಆ ಪವಿತ್ರ ಮಂದಹಾಸವು ನಮ್ಮನ್ನು ರಕ್ಷಿಸಲಿ.

ವಿವರಣೆ :

ಸಮಸ್ತ ದಿಕ್ಕುಗಳಲ್ಲಿ ನೈರ್ಮಲ್ಯವನ್ನುಂಟು ಮಾಡಲೂ ಮೂರು ಲೋಕದ ಐಶ್ವರ್ಯಕ್ಕೋಸ್ಕರವೂ, ಪರಶಿವನ ಕಾಮಕ್ಕೊಸ್ಕರವೂ ಮೆಲ್ಲ ಮೆಲ್ಲನೆ ದೇವಿಯ ಮುಖದಿಂದ ಹೊರಡುವ ಮಂದಹಾಸಗಳು ನಮ್ಮೆಲ್ಲರನ್ನೂ ಕಾಪಾಡಲಿ.

ಸಂಸ್ಕೃತದಲ್ಲಿ :

ಸ್ವಲ್ಪೋsಪಿ ದಿಕ್ಷು ಕಿರಣಾನ್ ಪ್ರಸಾರಯನ್ ಮಂದೋsಪಿ ಬೋಧಮಮಲಂ ದಧತ್ಸತಾಂ
ಶುಭ್ರೋsಪಿ ರಾಗಕೃದನಂಗವೈರಿಣೋ ಹಾಸಃ ಪುರಾಣಸುದೃಶಃ ಪುನಾತು ನಃ ||2||



ತಾತ್ಪರ್ಯ :

ದೇವಿಯ ಮಂದಹಾಸವು ಚಿಕ್ಕದಾಗಿದ್ದರೂ ಅದರ ಕಿರಣಗಳು ಎಲ್ಲ ದಿಕ್ಕುಗಳಿಗೂ ಹರಡಿವೆ ಹಾಗೂ ಅದು ಸೌಮ್ಯವಾಗಿದ್ದರೂ ಜ್ಞಾನಿಗಳಿಗೆ ಪರಿಶುದ್ಧ ಜ್ಞಾನವನ್ನು ನೀಡುತ್ತದೆ. ಅದು ಶ್ವೇತವರ್ಣದಿಂದ ಕೂಡಿದ್ದರೂ ಮನ್ಮಥನ ಶತ್ರುವಿನ (ಶಿವ) ಹೃದಯದಲ್ಲಿ ವಿವಿಧ ವರ್ಣಗಳ ಪ್ರೀತಿಯ ಬಣ್ಣಗಳನ್ನು ಸೃಷ್ಟಿಸುತ್ತದೆ. ಅಪ್ರತಿಮ ಸೌಂದರ್ಯವತಿಯ (ಉಮಾದೇವಿ) ಆ ಮಂದಹಾಸವು ನಮ್ಮನ್ನು ನಿರ್ಮಲವಾಗಿರಿಸಲಿ.

ವಿವರಣೆ :

ದೇವಿಯ ಮಂದಹಾಸವು ಸ್ವಲ್ಪವಾದರೂ ಎಲ್ಲಕಡೆಯಲ್ಲೂ ಪ್ರಕಾಶ ಬೀರುತ್ತದೆ. ದಡ್ಡನಾದವನೂ ಉತ್ತಮವಾದ ಜ್ಞಾನವನ್ನು ಪಡೆಯುತ್ತಾನೆ. ತಾನು ಶುಭ್ರವಾದರೂ ಶಿವನಿಗೆ ಅನುರಾಗವುಂಟುಮಾಡುವ ಪುರಾಣಸುಂದರಿಯಾದ ದೇವಿಯ ಮಂದಹಾಸಗಳು ನಮ್ಮನ್ನು ಕಾಪಾಡಲಿ.

ಸಂಸ್ಕೃತದಲ್ಲಿ :

ಚೇತೋಹರೋsಪ್ಯತಿಜುಗುಪ್ಸಿತೋ ಭವೇತ್ ಸರ್ವೋsಪಿ ಜೀವಕಲಯಾ ಯಯಾ ವಿನಾ
ಸಾ ವರ್ಣ್ಯತಾಂ ಕಥಮಪಾರಚಾರುತಾ ಪೀಯೂಷಸಿಂಧುರಖಿಲೇಂದ್ರಸುಂದರೀ ||3||

ತಾತ್ಪರ್ಯ :

ವಿಶ್ವದ ಅಧಿಪತಿಯ ಪ್ರಿಯ ಸಂಗಾತಿಯ ಅಪರಿಮಿತ ಸೌಂದರ್ಯವನ್ನು ವಿವರಿಸಲು ಹೇಗೆ ಸಾಧ್ಯ? ಅದು ಆನಂದ ಸಾಗರ ಹಾಗೂ ಅಸ್ತಿತ್ವದ ಉತ್ಸಾಹ (ಜೀವನದ ಶಕ್ತಿ), ಅದಿಲ್ಲದಿದ್ದರೆ ಎಲ್ಲ ಸುಂದರ ವಸ್ತುಗಳೂ ಸಂಪೂರ್ಣವಾಗಿ ಭಯಂಕರವಾಗುವುದು.

ಕಲಾಪದವುಆಗಮಸಿದ್ಧಿವಿದ್ಯಾದಲ್ಲಿ ಕಂಡುಬರುವುದು. ಇಲ್ಲಿ ದೇವಿ ಉಮಾಳ ವಿಶೇಷಣದಿಂದಾಗಿಸೌಂದರ್ಯಕಿರಣಪದವು ಅಧಿಕವಾಗಿ ಉಚಿತವೆನಿಸುವುದು. ಸಮಸ್ತ ಜೀವಿಗಳ ಸೌಂದರ್ಯಕಿರಣಗಳ ಮೂಲವನ್ನು ಜೀವಕಲ, ಅಂದರೆ, ಅಸ್ತಿತ್ವದ ಉತ್ಸಾಹ ಎನ್ನುವರು. ಈ ಅಸ್ತಿತ್ವದ ಉತ್ಸಾಹವಿಲ್ಲದ ಶರೀರವನ್ನು ಯಾರು ನೋಡಲು ಇಷ್ಟಪಡುವರು? ಶರೀರದ ಎಲ್ಲ ಅಂಗಗಳೂ ಜೀವಕಲೆಯೊಂದಿಗೆ ಸಾಮರಸ್ಯದಿಂದ ಸೇರಿದಲ್ಲಿ ಆಗ ಜೀವನದ ಸೌಂದರ್ಯವನ್ನು ಮೆಚ್ಚಬಹುದು. ಸಾಮರಸ್ಯದಿಂದ ಕೂಡಿದ ಜೀವಕಲ ಮತ್ತು ಸೌಂದರ್ಯವು ವಿಶ್ವೇಶ್ವರನ ಆಕರ್ಷಕ  ಪತ್ನಿಯ ರೂಪ (ಅಖಿಲೇಂದ್ರಸುಂದರಿ) ಹಾಗೂ ಮಹೋನ್ನತ ಜಾಗೃತಿ ಮತ್ತು ಸಂತೋಷಗಳ ಅಭಿವ್ಯಕ್ತತೆ.

ವಿವರಣೆ :

ಮನೋಹರನಾದವನೂ ಯಾವಸುಶಮಾಎಂಬ ಜೀವಕಳೆಯಿಲ್ಲದೆ ಅತ್ಯಂತ ಜಿಗುಪ್ಸಿತನಾಗಿ ಎಲ್ಲರೂ ಆಗುತ್ತಾರೋ ಅಂತಹ ಜೀವಕಲಾಸ್ವರೂಪಿಣಿಯಾದ ಅನಂತವಾದ ಸೌಂದರ್ಯವೆಂಬ, ಅಮೃತದ ಕಡಲಾದ ಜಗತ್ತಿಗೆ ಒಡೆಯನಾದ ಶಿವನ ಸುಂದರಿಯಾದ ಪಾರ್ವತೀದೇವಿಯನ್ನು ಹೇಗೆ ತಾನೇ ವರ್ಣಿಸಲಿ.

ಸಂಸ್ಕೃತದಲ್ಲಿ :

ಅತ್ಯಲ್ಪದೇವವನಿತಾಂ ಚ ಪಾರ್ಥಿವೈರ್ಭಾವೈರ್ವಯಂ ತುಲಯಿತುಂ ನ ಶಕ್ನುಮಃ
ತಾಂ ಕಿಂ ಪುನಃ ಸಕಲದೇವಸುಂದರೀ ಲೋಕಾಕ್ಷಿಪಾರಣತನುಪ್ರಭಾಮುಮಾಂ ||4||

ತಾತ್ಪರ್ಯ :

ನಮ್ಮ ಪ್ರಾಪಂಚಿಕ ಜ್ಞಾನದಿಂದ ಸಾಮಾನ್ಯ ದೇವತೆಗಳಾದ ಗಂಧರ್ವರ ಸೌಂದರ್ಯವನ್ನು ಊಹಿಸುವುದು ಕಷ್ಟ. ಹೀಗಿರುವಾಗ ಅನೇಕ ಸೌಂದರ್ಯವತಿಯರ ಮಧ್ಯದಲ್ಲಿರುವ ಕಣ್ಣುಗಳಿಗೆ ಹಬ್ಬವಂತಿರುವ ಉಜ್ವಲವಾದ ಹೊಳಪಿನಿಂದ ಕೂಡಿದ ರೂಪವುಳ್ಳ ದೇವಿ ಉಮಾಳನ್ನು ಹೇಗೆ ಅರಿಯುವುದು?

ಸಾಮಾನ್ಯ ದೇವತೆಗಳ ರೂಪವನ್ನು ವರ್ಣಿಸಲಾಗದ ಪ್ರಪಂಚದಲ್ಲಿನ ಕವಿಗಳಿಗೆ ಸೌಂದರ್ಯವತಿ ದೇವಿಯರ ಮಧ್ಯದಲ್ಲಿರುವ ಕಣ್ಣುಗಳಿಗೆ ಆನಂದವನ್ನು ನೀಡುವ ಹೊಳೆಯುವ ರೂಪವುಳ್ಳ ಉಮಾದೇವಿಯನ್ನು ಹೋಗಳುವ ಸಾಮರ್ಥ್ಯವಿರುವುದಿಲ್ಲ.

ವಿವರಣೆ :

ನಾವು ಸಾಮಾನ್ಯವಾದ ದೇವಸುಂದರಿಯನ್ನು ವರ್ಣಿಸಲು ಅಸಮರ್ಥರಾಗಿರುತ್ತೇವೆ. ಹೀಗಿರುವಾಗ ಸಕಲದೇವಸುಂದರಿಯರ ಕಣ್ಣಿಗೂ ಅಮೃತದಂತೆ ಆಪ್ಯಾಯಮಾನವಾದ ಉಮಾದೇವಿಯನ್ನು ಹೇಗೆ ತಾನೇ ವರ್ಣಿಸಬಲ್ಲೆವು? ಸಾಧ್ಯವಿಲ್ಲದ ಕೆಲಸವೆಂದು ಅಭಿಪ್ರಾಯ.

ಸಂಸ್ಕೃತದಲ್ಲಿ :

ವರ್ಷಾಪಯೋದಪಟಲಸ್ಯ ಸಾಂದ್ರತಾ ಸೂರ್ಯಾತ್ಮಜೋರ್ಮಿಚಯನ್ನಿಮ್ನತುಂಗತಾ
ಕಾಲಾಹಿಭೂಮಿಪತಿದೀರ್ಘತಾ ಚ ತೇ ಕೇಶೇಷು ಭರ್ಗಭವನೇಶ್ವರಿ ತ್ರಯಂ ||5||

ತಾತ್ಪರ್ಯ :

ಓ ಭರ್ಗಹರನ ಪತ್ನಿಯೆ ! ನಿನ್ನ ಉದ್ದವಾದ ಜಡೆಯು ಸರ್ಪರಾಜನಂತಿದ್ದು ಅದರ ಗಾತ್ರವು ಮಳೆತರುವ ಕಪ್ಪು ಮೋಡಗಳ ಗಾತ್ರದಷ್ಟೇ ಇರುವುದು. ಅದು ಸೂರ್ಯದೇವನ ಮಗಳಾದ ಯಮುನಾ ನದಿಯ ಅಲೆಗಳ ಉಬ್ಬು ತಗ್ಗುಗಳಂತೆ ಕಾಣುವುದು.

ವಿವರಣೆ :

ಶಂಕರನ ಗೃಹಿಣಿಯಾದ ಉಮಾದೇವಿಯೇ! ಮಳೆಗಾಲದ ಮೋಡಗಳಲ್ಲಿ ಸಾಂದ್ರತೆ ಇದೆ. ಯಮುನಾನದಿಯ ಅಲೆಗಳಲ್ಲಿ ಏರಿಳಿತಗಳಿವೆ. ಕಪ್ಪಾದ ಸರ್ಪರಾಜನಲ್ಲಿ ಉದ್ಧವಾಗಿರುವಿಕೆಯೂ ಇದೆ. ಆದರೆ ಇವುಗಳಲ್ಲಿ ಒಂದೊಂದರಲ್ಲಿರುವ ಸೊಬಗು ಮತ್ತೊಂದರಲ್ಲಿಲ್ಲ. ಆದರೆ ಅವೆಲ್ಲವೂ ದೇವಿಯೇ! ನಿನ್ನ ತಲೆಗೂದಲಿನಲ್ಲಿ ತುಂಬಿದೆ.


ಸಂಸ್ಕೃತದಲ್ಲಿ :

ಈಶಾನಸುಂದರಿ ತವಾಸ್ಯಮಂಡಲಾನ್ನೀಚೈರ್ನಿತಾಂತಮಮೃತಾಂಶುಮಂಡಲಂ
ಕೋ ವಾ ನ ಕೀರ್ತಯತಿ ಲೋಷ್ಟಪಿಂಡಕಂ ಲೋಕೇ ನಿಕೃಷ್ಟಮಿಹ ಮಾನವೀಮುಖಾತ್ ||6||

ತಾತ್ಪರ್ಯ :

ಓ ಈಶಾನ್ಯ ದಿಕ್ಕಿನ ದೇವನಾದ ಶಿವನ ಆಕರ್ಷಣೀಯ ದೇವಿಯೇ ! ಚಂದ್ರಮಂಡಲವೂ ನಿನ್ನ ವದನಕ್ಕಿಂತ ಬಹಳಷ್ಟು ಕೆಳಮಟ್ಟದ್ದು. ಯಾರು ಈ ಪ್ರಪಂಚದಲ್ಲಿ, ನಿನ್ನಂತಹ ಸೌಂದರ್ಯವತಿಯ ಮುಖವನ್ನು ಬಿಟ್ಟು ಕೆಳಮಟ್ಟದ ಮಣ್ಣಿನ ಮುಖವುಳ್ಳವರನ್ನು ಹೋಗಳುವರು?

ಇಲ್ಲಿ ಉಮಾದೇವಿಯ ಹೊಳಪಾದ ದೈವೀ ಮುಖಕ್ಕೆ ಕೆಳಮಟ್ಟದ ಚಂದ್ರನನ್ನು ಹೋಲಿಸಿರುವುದನ್ನು, ಮಣ್ಣಿನ ಮುಖಕ್ಕೆ ಹೋಲಿಸಲಾಗಿದೆ ಎಂದು ವರ್ಣಿಸಲಾಗಿದೆ.

ವಿವರಣೆ :

ಶಂಕರ ಸುಂದರಿಯಾದ ದೇವಿಯೇ! ನಿನ್ನ ಮುಖಬಿಂಬಕ್ಕಿಂತಲೂ ಚಂದ್ರನ ಬಿಂಬವು ಸೌಂದರ್ಯದಲ್ಲಿ ನಿಕೃಷ್ಟವೇ ಆಗಿದೆ. ಲೋಕದಲ್ಲಿ ಮಾನವ ಸುಂದರಿಯ ಮುಖಕ್ಕಿಂತ ಮಣ್ಣಿನ ಮುದ್ದೆಯನ್ನು ನಿಕೃಷ್ಟವೆಂದೇ ಹೇಳುತ್ತಾರಲ್ಲವೇ? ಜೀವಂತವಾದ ಮಾನವ ಸುಂದರಿಯ ಮುಖಕ್ಕೂ ಮಣ್ಣಿನ ಮುದ್ದೆಗೂ ಎಷ್ಟು ಅಂತರವಿದೆಯೋ ಅಷ್ಟೇ ಅಂತರವು ಉಮಾದೇವಿಯ ಮುಖಕ್ಕೂ ಚಂದ್ರಬಿಂಬಕ್ಕೂ ಇದೆಯೆಂದು ತಾತ್ಪರ್ಯ.

ಸಂಸ್ಕೃತದಲ್ಲಿ :

ಬಿಭ್ರತ್ಯಮರ್ತ್ಯಭುವನಸ್ಥದೀರ್ಘಿಕಾ ಪಂಕೇರುಹಾಣಿ ವದನಾಯ ತೇ ಬಲಿಂ
ನೋ ಚೇತ್ ಕಥಂ ಭವತಿ ಸೌರಭಂ ಮಹದ್ಭಿನ್ನೇ ಸುಮೇಭ್ಯ ಉರುಕೇಶಿ ತೇ ಮುಖೇ ||7||



ತಾತ್ಪರ್ಯ :

ಓ ದಟ್ಟವಾದ ಆಕರ್ಷಕ ಜಡೆಯುಳ್ಳ ದೇವಿಯೇ ! ಸ್ವರ್ಗದ ಕೊಳದಲ್ಲಿರುವ ಕಮಲ ಪುಷ್ಪವು ನಿನ್ನ ಸುಂದರ ಮುಖದ ಮುಂದೆ ಸೋಲನ್ನೊಪ್ಪಿಕೊಂಡಿವೆ. ಹಾಗಿಲ್ಲದಿದ್ದರೆ, ಪುಷ್ಪವಲ್ಲದ ನಿನ್ನ ಮುಖದಿಂದ ಹೇಗೆ ಒಳ್ಳೆಯ ಸುವಾಸನೆಯು ಹೊರಸೂಸುವುದು?

ವಿವರಣೆ

ದಟ್ಟವಾದ ತಲೆಗೂದಲುಳ್ಳ ದೇವಿಯೇ! ದೇವತೆಗಳ ಭವನಗಳಲ್ಲಿರುವ ಕಮಲಗಳು ನಿನ್ನ ಮುಖಕ್ಕೆ ಉಪಹಾರವನ್ನು ಸಮರ್ಪಿಸುತ್ತವೆಯೆಂದು ನಾನು ಊಹಿಸುತ್ತೇನೆ. ಹಾಗಲ್ಲದಿದ್ದರೆ ಪುಷ್ಪಗಳಿಗಿಂತ ಬೇರೆಯಾದ ನಿನ್ನ ಮುಖದಲ್ಲಿ ಅತ್ಯದ್ಭುತವಾದ ಪರಿಮಳವು ಅದು ಹೇಗೆ ಉಂಟಾಗುತ್ತಿತ್ತು?

ಸಂಸ್ಕೃತದಲ್ಲಿ :

ಗೀರ್ವಾಣಲೋಕತಟಿನೀಜಲೇರುಹಾಂ ಗಂಧೇ ಶುಭೇ ಭವತು ತೇ ಮನೋರತಿಃ
ಲೋಕಾಧಿರಾಜ್ಞಿ ತವ ವಕ್ತ್ರಸೌರಭೇ ಲೋಕಾಧಿರಾಜಮನಸಸ್ತು ಸಮ್ಮದಃ ||8||

ತಾತ್ಪರ್ಯ :

, ವಿಶ್ವದ ರಾಣಿಯೇ ! ವಿಶ್ವದ ಅಧಿಪತಿಯ ಮನಸ್ಸು ನಿನ್ನ ಮುಖದಿಂದ ಹೊರಸೂಸುವ ಸುವಾಸನೆಯ ಆನಂದವನ್ನು ಅನುಭವಿಸುತ್ತಿರುವಾಗ, ದೇವತೆಗಳ ಲೋಕದಲ್ಲಿನ ನದಿಯಲ್ಲಿರುವ ಕಮಲ ಪುಷ್ಪದ ಸುವಾಸನೆಯನ್ನು ನೀನು ಅನುಭವಿಸಬಹುದು.

ವಿವರಣೆ :

ದೇವಿಯೇ! ಅತ್ಯಂತ ಪರಿಮಳಯುಕ್ತವಾದ ದೇವಗಂಗೆಯ ಕಮಲಗಳಲ್ಲಿ ನಿನ್ನ ಮನಸ್ಸು ರಮಿಸಲಿ. ಆದರೆ ಆ ವಿಶ್ವೇಶ್ವರನ ಮನಸ್ಸು ನಿನ್ನ ಮುಖಪರಿಮಳದಲ್ಲಿ ಪ್ರೀತಿಯುಳ್ಳದ್ದಾಗಿರುತ್ತದೆ.


ಸಂಸ್ಕೃತದಲ್ಲಿ :

ಕೋ ಭಾಷತಾಂ ತವ ಸವಿತ್ರಿ ಚಾರುತಾಂ ಯಸ್ಯಾಃ ಸ್ಮಿತಸ್ಯ ಧವಲದ್ಯುತಿರ್ಲವಃ
ಯಸ್ಯಾಃ ಶರೀರರುಚಿಸಿಂಧುವೀಚಯಃ ಶಂಪಾಲತಾಃ ಪೃಥುಲದೀಪ್ತಿರ್ಲವಃ ||9||

ತಾತ್ಪರ್ಯ :

ಓ ಮಾತೇ ! ನಿನ್ನ ಮಂದಹಾಸದ ಅತಿ ಸಣ್ಣಭಾಗವೇ ಬಿಳುಪಾದ ಹಾಗೂ ಭವ್ಯವಾದ ಚಂದ್ರ. ಹಾಗಿರುವಾಗ ಯಾರಿಗೆ ನಿನ್ನ ಅಪರಿಮಿತ ಸೌಂದರ್ಯವನ್ನು ವರ್ಣಿಸಲು ಸಾಧ್ಯ? ನಿನ್ನ ರೂಪದ ಹೊಳಪು ಒಂದು ಸಮುದ್ರದಂತೆ ಮತ್ತು ಅದು ಮಿಂಚಿನ ಅಲೆಗಳನ್ನು ಉತ್ಪಾದಿಸುವ ಅಪರಿಮಿತ ಕಾಂತಿಯ ಮೂಲವಾಗಿರುವುದು.

ಚಂದ್ರನನ್ನು ದೇವಿಯ ಮಂದಹಾಸದ ಹಾಗೂ ಅವಳ ಮಿಂಚಿನಂಥಹ ರೂಪದ ಒಂದು ಅತಿ ಸಣ್ಣ ಭಾಗವೆಂಬ ವಿವರಣೆಯಿಂದ ಭಗವತಿಯ ಬ್ರಹ್ಮಾಂಡ ರೂಪವನ್ನು ಸೂಚಿಸುತ್ತದೆ. ಅವಳ ರೂಪದ ಕಾಂತಿಯೇ ವಿದ್ಯುತ್ತಿನ ಮಿಂಚು. ಈ ಸ್ತೋತ್ರದ ಬೇರೆಡೆ ಹಾಗೂ ಇಂದ್ರಾಣಿಸಪ್ತಶತಿಯಲ್ಲಿಯೂ ಸಹ ಮಿಂಚು ದೇವಿಯ ರೂಪವೆಂದು ವರ್ಣಿಸಲಾಗಿದೆ.

ವಿವರಣೆ :

ತಾಯಿಯೇ! ನಿನ್ನ ಸೌಂದರ್ಯವನ್ನು ಯಾರು ತಾನೇ ವರ್ಣಿಸಲು ಸಾಧ್ಯ? ಯಾವ ನಿನ್ನ ಮಂದಹಾಸದ ಲವಲೇಶವಾಗಿ ಚಂದ್ರನಾಗುತ್ತಾನೋ ಹಾಗೂ ಯಾವ ನಿನ್ನ ಶರೀರದ ಕಾಂತಿಯೆಂಬ ಮಹಾನದಿಯಲ್ಲಿ ಅಲೆಗಳಾಗಿ, ಅತ್ಯಂತ ಪ್ರಕಾಶಮಾನವಾಗಿರುವ ವಿದ್ಯುತ್ತೆಂಬ ಬಳ್ಳಿಯಾಗುತ್ತದೋ ಅಂತಹ ನಿನ್ನ ಸೌಂದರ್ಯವನ್ನು ಯಾರಿಂದ ತಾನೇ ವರ್ಣಿಸಲು ಸಾಧ್ಯ?

ಸಂಸ್ಕೃತದಲ್ಲಿ :

ಲೋಕಾಂಬಿಕೇ ನ ವಿಲಸಂತಿ ಕೇ ಪುರೋ ಮಂದಸ್ಮಿತಸ್ಯ ತವ ರೋಚಿಷಾಂ ನಿಧೇಃ
ಯೇ ತು ವ್ಯಧಾಯಿಷತ ತೇನ ಪೃಷ್ಠತೋ ಹಂತೈಷು ಕಾsಪಿ ತಿಮಿರಚ್ಛಟಾ ಭವೇತ್ ||10||

ತಾತ್ಪರ್ಯ :

, ವಿಶ್ವಮಾತೆ ! ಕಾಂತಿಯ ಖಜಾನೆಯಾದ ನಿನ್ನ ಮಂದಹಾಸದ ಮುಂದೆ ಬಂದಾಗ ಯಾರು ಹೊಳೆಯುವುದಿಲ್ಲ? ಯಾರನ್ನೇ ಆದರೂ ಈ ಮಂದಹಾಸದ ಹಿಂಭಾಗದಲ್ಲಿ ನಿಲ್ಲಿಸಿದಾಗ ಅವರು ವಿವರಿಸಲಾಗದ ಕತ್ತಲಿನ ಸಾಮ್ರಾಜ್ಯದಲ್ಲಿ ಸಿಕ್ಕಿಕೊಳ್ಳುವರು.

ಯಾರೇ ಆಗಲಿ ದೇವಿಯ ಸಮಸ್ತ ಶಕ್ತಿಗಳ ಖಜಾನೆಯಾದ ಮಂದಹಾಸದ ಮುಂದೆ ಬಂದಲ್ಲಿ ಅವರು ಕಾಂತಿಯಿಂದ ಮೀನುಗುವರು ಮತ್ತು ಅವಳ ಮಂದಹಾಸದ ಹಿಂದೆ ಬಂದಲ್ಲಿ ಅವರು ಕತ್ತಲಿನ ಕೂಪದಲ್ಲಿ ಸಿಕ್ಕಿಹಾಕಿಕೊಳ್ಳುವರು. ಇದರಿಂದ ಕಂಡುಬರುವುದೇನೆಂದರೆ ಹೇಗೆ ದೇವಿಯ ಮಂದಹಾಸವು ತನ್ನ ಭಕ್ತರಿಗೆ ಅನುಕೂಲಗಳನ್ನು ಕರುಣಿಸುವುದು, ಮತ್ತು ವಿರೋಧಿಗಳನ್ನು ನಿಗ್ರಹಿಸುವುದು ಎಂಬುದು, ಏಕೆಂದರೆ ಅವರು ದೇವಿಯ ಮುಂಭಾಗದಲ್ಲಿ ರುವುದಿಲ್ಲವಾದ್ದರಿಂದ.

ವಿವರಣೆ :

ಜಗನ್ಮಾತೆಯೇ ! ಪ್ರಕಾಶಮಾನವಾದ ನಿನ್ನ ಮಂದಸ್ಮಿತದ ಮುಂದೆ ಎದುರುಗಡೆ ಬಂದವರು ಪ್ರಕಾಶದಿಂದ ಬೆಳಗುತ್ತಾರೆ. ಯಾರು ಆ ಮಂದಸ್ಮಿತದ ಹಿಂದೆ ಬರುತ್ತಾರೋ ಅವರು ಕತ್ತಲೆಯಾಗುತ್ತಾರೆ. ಅಂದರೆ, ನಿನ್ನ ಆನುಗ್ರಹಕ್ಕೆ ಪಾತ್ರರಾದರು ಪ್ರಕಾಶವಾಗಿ ಬೆಳಗುತ್ತಾರೆ. ನಿನ್ನ ಅನುಗ್ರಹಕ್ಕೆ ಪಾತ್ರರಾಗದವರು ಪ್ರಕಾಶಹೀನರಾಗುತ್ತಾ ರೆಂದು ತಾತ್ಪರ್ಯ.

ಸಂಸ್ಕೃತದಲ್ಲಿ :

ಕಿಂ ವಾ ರದಾವಲಿರುಚಿರ್ಮುಖಸ್ಯ ಕಿಂ ಸಂಫುಲ್ಲತಾ ವರಧಿಯಃ ಕಿಮೂರ್ಮಿಕಾ
ಸಂತೋಷಪಾದಪಸುಮಂ ನು ಶಂಕರಪ್ರೇಮಸ್ವರೂಪಮುತ ದೇವಿ ತೇ ಸ್ಮಿತಂ ||11||

ತಾತ್ಪರ್ಯ :
ಓ ದೇವಿ ! ಈ ನಿನ್ನ ಮಂದಹಾಸವು ನಿನ್ನ ದಂತಪಂಕ್ತಿಗಳ ಪ್ರಭೆಯೋ ಅಥವಾ ನಿನ್ನ ಮುಖದ ಬೇಡಗೋ? ಅದು ಅತ್ಯುತ್ತಮ ಆಲೋಚನೆಗಳ ಅಲೆಯೋ ಅಥಾವಾ ಸಂತೋಷ ವೃಕ್ಷದ ಪುಷ್ಪಗಳೋ? ಅಥವಾ ಇದು ಶಂಕರನ ಒಲವಿನ ಚಿನ್ಹೆಯೋ?

ವಿವರಣೆ :

ದೇವಿಯೇ! ನಿನ್ನ ಮಂದಹಾಸವು ದಂತಪಂಕ್ತಿಗಳ ಪ್ರಭೇಯೋ ಏನು? ಪ್ರಶಸ್ತವಾದ ಪ್ರಜ್ಞೆಯ ಅಲೆಯೋ? ಸಂತೋಷವೆಂಬ ಮರದ ಪುಷ್ಪವೋ? ಅಥವಾ ಶಂಕರನ ಪ್ರೇಮವೇ ಆ ರೂಪದಲ್ಲಿದೆಯೋ? ಎಂದು ಸಂದೇಹವಾಗಿದೆ.

ಸಂಸ್ಕೃತದಲ್ಲಿ :

ದಿಕ್ಷು ಪ್ರಕಾಶಪಟಲಂ ವಿತನ್ವತಾ ಕೋಟಿಪ್ರಭಾಕರವಿಭಕ್ತತೇಜಸಾ
ನೇತ್ರೇಣ ತೇ ವಿಷಮನೇತ್ರವಲ್ಲಭೇ ಪಂಕೇರುಹಂ ಕ ಉಪಮಾತಿ ಪಂಡಿತಃ ||12||

ತಾತ್ಪರ್ಯ :

ಓ ವಿರೂಪಾಕ್ಷನ ಪ್ರಿಯತಮೆಯೇ ! ಮಣ್ಣಿನಲ್ಲಿ ಜನಿಸಿ ಅರಳುವ ಕಮಲ ಪುಷ್ಪಕ್ಕೆ ನಿನ್ನ ಕಣ್ಣುಗಳನ್ನು ಜ್ಞಾನಿಗಳು ಹೇಗೆ ಹೋಲಿಸುವರು? ನಿನ್ನ ಕಣ್ಣುಗಳಿಂದ ಕಾಂತಿಯನ್ನು ಸಹಸ್ರ ಸೂರ್ಯರಿಗೆ ಹಂಚಿ ಅಲ್ಲಿಂದ ದಶದಿಕ್ಕುಗಳಿಗೂ ಹರಡುವುದು.

ವಿವರಣೆ :

ದೇವಿಯೇ ! ನಿನ್ನ ಕಣ್ಣಿನ ಪ್ರಕಾಶವು ದಿಕ್ಕುದಿಕ್ಕುಗಳಲ್ಲಿ ಪ್ರಕಾಶವನ್ನು ವಿಸ್ತಾರಗೊಳಿಸುತ್ತದೆ. ಕೋಟ್ಯಾಂತರ ಸೂರ್ಯರು ತಮ್ಮಲ್ಲಿ ನಿನ್ನ ಕಣ್ಣಿನ ತೇಜಸ್ಸನ್ನು ಹಂಚಿಕೊಂಡಿದ್ದಾರೆ. ಜಗತ್ತಿನಲ್ಲಿರುವ ಕಮಲವು ಕೆಸರಿನಲ್ಲಿ ಬೆಳೆಯುವಂತಹುದಾಗಿದೆ. ಆದ್ದರಿಂದಲೇ ಅದನ್ನು ಪಂಕೇರುಹವೆಂದು ಕರೆಯುತ್ತಾರೆ. ಅದರೊಂದಿಗೆ ಯಾವ ಪಂಡಿತನು ತಾನೇ ನಿನ್ನ ಕಣ್ಣನ್ನು ಹೋಲಿಸಿಯಾನು?

ಸಂಸ್ಕೃತದಲ್ಲಿ :

ಶ್ರೀಕರ್ಣ ಏಷ ತವ ಲೋಚನಾಂಚಲೇ ಭಾಂತ್ಯಾ ದಯಾದಯಿತಯಾ ಪ್ರಬೋಧಿತಃ
ಏತಂ ಸವಿತ್ರಿ ಮಮ ಕಂಚನ ಸ್ತವಂ ಶ್ರುತ್ವಾ ತನೋತು ಭರತಾವನೇಃ ಶ್ರಿಯಂ ||13||

ತಾತ್ಪರ್ಯ :

ಓ ಸಾವಿತ್ರಿ ! ತಾಯೆ ! ನಿನ್ನ ಪವಿತ್ರ / ಉಜ್ವಲವಾದ ಕಿವಿಗಳು ನೇತ್ರಗಳ ತುದಿಯಲ್ಲಿದ್ದು, ನನ್ನ ವಿಶೇಷ ಪ್ರಾರ್ಥನೆಯನ್ನು ಆಲಿಸಿದನಂತರ ಕರುಣೆಯಿಂದ ಎಚ್ಚೆತ್ತು ಭಾರತ ದೇಶಕ್ಕೆ ಅಭ್ಯುದಯವನ್ನು ದಯಪಾಲಿಸಲಿ.

ಮಂಗಳಕರ ಶ್ರೀಅಕ್ಷರವು ಕರ್ಣ ಪದದ ಹಿಂದೆ ಪೂರ್ವಪ್ರತ್ಯಯವಾಗಿರುವುದು ಶ್ರಿತಿ ಮಂತ್ರದಲ್ಲಿ ಉಪಯೋಗಿಸಿರುವ ಶ್ರೋತ್ರಮ್ ಪದವನ್ನು (ಶ್ರೋತ್ರಮ್ ಸಂಪತ್) ಸೂಚಿಸುತ್ತದೆ. ಅದು ಶ್ರೀ ಪದಕ್ಕೇ ಕರ್ಣ ಎಂಬ ಅರ್ಥವನ್ನು ನೀಡುತ್ತದೆ. ಇದನ್ನು ಕಿವಿಗಳು ಶ್ರೀ ಅಕ್ಷರವನ್ನು, ಅಂದರೆ ಲಕ್ಷ್ಮಿಯನ್ನು ಎಂಬುದಾಗಿಯೂ ಅರ್ಥೈಸಬಹುದು. ಆಗ ಇದರ ಅರ್ಥವು ಭಾರತಶ್ರೀ ಎಂದಾಗಿ ಅದು ಭಾರತ ದೇಶವನ್ನು ಸೂಚಿಸುವುದು. ಕವಿಯ ಆಸೆಯೇನೆಂದರೆ ದೇವಿಯು ತನ್ನ ಪ್ರಾರ್ಥನೆಯನ್ನಾಲಿಸಿ ಎಚ್ಚೆತ್ತು ದೇಶಕ್ಕೆ ಅಭ್ಯುದಯವನ್ನು ಕರುಣಿಸಿವಳು ಎಂದು.

ಭಾರತ ದೇಶಕ್ಕೆ ಪರಕೀಯರ ಆಳ್ವಿಕೆಯಿಂದ ಸ್ವಾತಂತ್ರ್ಯ ದೊರಕುವುದೆಂಬ ಕವಿಯ ಆಶಯವನ್ನು ಇಲ್ಲಿ ಸೂಚಿಸಲಾಗಿದೆ. ಕಂಚನಸ್ತವಮ್ ವಿಶೇಷ ಪ್ರಾರ್ಥನೆ.

ವಿವರಣೆ :

ಜಗನ್ಮಾತೆಯೇ ! ಈ ನಿನ್ನ ಶ್ರೀಯುತವಾದ ಕಿವಿಯು ಕಣ್ಣಿನ ಕೊನೆಯ ಕಟಾಕ್ಷದಲ್ಲಿರುವ ದಯಾದೇವಿಯೆಂಬ ಸಖಿಯಿಂದ ಎಚ್ಚರಗೊಳಿಸಲ್ಪಟ್ಟು ನಾನು ಮಾಡುತ್ತಿರುವ ಈ ಸ್ತೋತ್ರವನ್ನು ಕೇಳಿ ಭಾರತಭೂಮಿಗೆ ಮಂಗಳವನ್ನುಂಟುಮಾಡಲಿ.

ಸಂಸ್ಕೃತದಲ್ಲಿ :

ಸ್ವಾ ನಾಸಿಕಾ ಭವತಿ ಯುಂಜತಾಂ ಸತಾಂ ಸಂಸ್ತಂಭಿನೀ ಚಲತಮಸ್ಯ ಚಕ್ಷುಷಃ
ತ್ವನ್ನಾಸಿಕಾ ಪುರಹರಸ್ಯ ಚಕ್ಷುಷಃ ಸಂಸ್ತಂಭಿನೀ ಭವತಿ ಚಿತ್ರಮಂಬಿಕೇ ||14||


ತಾತ್ಪರ್ಯ :

ಓ ಅಂಬಿಕೆ ! ಯೋಗಾಭ್ಯಾಸಿಗಳ ಮೂಗು ಚಂಚಲವಾದ ಕಣ್ಣುಗಳಿಗೆ ಸ್ಥಿರತೆಯನ್ನು ದೊರಕಿಸಿಕೊಡುತ್ತದೆ. ಆದರೆ, ಆಶ್ಚರ್ಯವೆಂದರೆ, ನಿನ್ನ ಮೂಗು ಕೂಡಾ ಮೂರು ಲೋಕಗಳನ್ನು ನಾಶಮಾಡುವ ಶಿವನ ಕಣ್ಣುಗಳನ್ನು ಚಲನರಹಿತವನ್ನಾಗಿ ಮಾಡುತ್ತದೆ.

ಹರನ ಕಣ್ಣುಗಳು ಭಗವತಿ ದೇವಿಯ ಮೂಗಿನ ಸೌಂದರ್ಯದಲ್ಲಿ ಮುಳುಗಿವೆ.

ವಿವರಣೆ :

ಅಂಬಿಕೆಯೇ! ಜಗತ್ತಿನಲ್ಲಿ ಯೋಗಸಾಧನ ಮಾಡುವವರಿಗೆ ಅವರವರ ಮೂಗು ಕಣ್ಣಿನ ಚಾಂಚಲ್ಯವನ್ನು ಕಳೆದು ಸ್ಥೈರ್ಯವನ್ನುಂಟು ಮಾಡುವಂತಹುದಾಗಿರುತ್ತದೆ. ಅವರು ಮೂಗಿನ ತುದಿಯಲ್ಲಿ ದೃಷ್ಟಿ ಇಟ್ಟು ಧ್ಯಾನಿಸುತ್ತಾರೆ. ಆದರೆ ನಿನ್ನ ಮೂಗೋ ಎಂದರೆ ಪರಶಿವನ ಕಣ್ಣಿನ ಚಾಂಚಲ್ಯವನ್ನು ತಡೆದು ತನ್ನನ್ನೇ ನೋಡುವಂತೆ ಮಾಡುತ್ತದೆ. ಅಂದರೆ ಪರಶಿವನು ನಿನ್ನ ಮೂಗಿನ ತುದಿಯ ಸೌಂದರ್ಯವನ್ನು ಅನುಭವಿಸುತ್ತಿರುತ್ತಾ ನೆಂದು ತಾತ್ಪರ್ಯ.

ಸಂಸ್ಕೃತದಲ್ಲಿ :

ಬಿಂಬಪ್ರವಾಲನವಪಲ್ಲವಾದಿತಃ ಪೀಯೂಷಸಾರಭರಣಾದ್ ಗುಣಾಧಿಕಃ
ಗೋತ್ರಸ್ಯ ಪುತ್ರಿ ಶಿವಚಿತ್ತರಂಜಕಃ ಶ್ರೇಷ್ಠೋ ನಿತಾಂತಮಧರಾಧರೋsಪಿ ತೇ ||15||

ತಾತ್ಪರ್ಯ :

ಹೇ ಪರ್ವತರಾಜ ಕುಮಾರಿಯೇ ! ಬಿಂಬ ಫಲ, ಹವಳ ಮತ್ತು ಹೊಸದಾಗಿ ಅರಳಿರುವ ಪುಷ್ಪದ ಸೌಂದರ್ಯವನ್ನೂ ನಿನ್ನ ಕೆಳತುಟಿಗಳ ಸೌಂದರ್ಯವು ಮೀರಿಸುತ್ತದೆ, ಅದು (ಕೆಳತುಟಿಯು) ಅಮೃತದ ಸತ್ವಕ್ಕಿಂತ ಸಿಹಿಯಾದದ್ದು ಮತ್ತು ಶಿವನ ಹೃದಯಕ್ಕೆ ಅತ್ಯಂತ ಸಂತೋಷವನ್ನು ನೀಡುವಂಥದ್ದು.


ವಿವರಣೆ :

ಗಿರಿರಾಜಕುಮಾರಿಯೇ! ನಿನ್ನ ಕೆಳದುಟಿಯು ತೊಂಡೆಹಣ್ಣು - ಹವಳ - ಚಿಗುರುಗಳಿಗಿಂತಲೂ ಹೆಚ್ಚು ಗುಣವುಳ್ಳದ್ದು. ಏಕೆಂದರೆ ಅದು ಅಮೃತದ ಸಾರವುಳ್ಳದ್ದೂ ಜೋತೆಗೆ ಶಿವನ ಚಿತ್ರರಂಜಕವಾದುದೂ ಆಗಿದೆ. ಆದ್ದರಿಂದ ಅದು ಸರ್ವಶ್ರೇಷ್ಟವಾಗಿ ಬೆಳಗುತ್ತಿದೆ.

ಸಂಸ್ಕೃತದಲ್ಲಿ :

ದೋರ್ವಲ್ಲಿಕೇ ಜನನಿ ತೇ ತಟಿತ್ಪ್ರಭಾಮಂದಾರಮಾಲ್ಯಮೃದುತಾಪಹಾರಿಕೇ
ನಿಶ್ಯೇಷಬಂಧದಮನಸ್ಯ ಧೂರ್ಜಟೇರ್ಬಂಧಾಯ ಭದ್ರಚರಿತೇ ಬಭೂವತುಃ ||16||

ತಾತ್ಪರ್ಯ :

ಓ ಪವಿತ್ರ ನಡತೆಯ ಮಾತೆಯೇ ! ನಿನ್ನ ಬಳ್ಳಿಯಂತಿರುವ ಕೈಗಳು ಮಿಂಚಿನಿಂದ ಪ್ರಭೆಯನ್ನು ಮತ್ತು ಮಂದಾರ ಪುಷ್ಪಗಳ ಮಾಲೆಯಿಂದ ಮೃದುತ್ವವನ್ನು ಕದ್ದಿವೆ. ಅವುಗಳು ಪ್ರಾಪಂಚಿಕ ಮಮತೆಯನ್ನು ಸಂಪೂರ್ಣವಾಗಿ ನಿಗ್ರಹಿಸಿರುವ ಶಿವನನ್ನು ತಬ್ಬಿಕೊಳ್ಳುವಂತೆ ಮಾಡುವುದು.

ವಿವರಣೆ :

ಜನನಿಯೇ! ಮಂಗಳಶೀಲೆಯೇ! ಮಿಂಚಿನ ಪ್ರಭೆಯನ್ನೂ ದೇವವೃಕ್ಷವಾದ ಮಂದಾರಪುಷ್ಪದ ಮೃದುತ್ವವನ್ನೂ ಅಪಹರಿಸಿರುವ ನಿನ್ನ ತೋಳುಗಳು ಸಮಸ್ತ ಬಂಧನಗಳನ್ನೂ ನೀಗಿಸುವ ಪರಶಿವನ ಬಂಧನಕ್ಕೆ ಸಮರ್ಥವಾಗುತ್ತವೆ. ಅಂದರೆ ಪಾರ್ವತಿಯ ಪ್ರೇಮಬಂಧನಕ್ಕೆ ಶಿವನು ಪಾತ್ರನಾಗುತ್ತಾನೆಂದು ಭಾವ.

ಸಂಸ್ಕೃತದಲ್ಲಿ :

ಹಸ್ತಾಬ್ಜಯೋಸ್ತವ ಮೃದುತ್ವಮದ್ಭುತಂ ಗೃಹ್ಣಾತಿ ಯೇ ಸದಯಮೇವ ಧೂರ್ಜಟಿಃ
ಅತ್ಯದ್ಭುತಂ ಜನನಿ ದಾಢರ್ಯಮೇತಯೋಃ ಶುಂಭಾದಿದರ್ಪವಿಲಯೋ ಯಯೋರಭೂತ್ ||17||

ತಾತ್ಪರ್ಯ :

ಓ ಮಾತೆಯೇ ! ಕಮಲದಂತೆ ಮೃದುವಾಗಿರುವ ನಿನ್ನ ತೋಳುಗಳನ್ನು ಧುರ್ಜಟಿಯು ಮೆತ್ತಗೆ ಹಿಡಿದುಕೊಂಡಿರುವುದು ಮನೋಹರವಾಗಿದೆ. ಶುಂಭ ಮತ್ತು ಇತರ ರಾಕ್ಷಸರನ್ನು ನಾಶಮಾಡಲು ಕಾರಣವಾದ ಆ ಕೈಗಳೂ ಸಹ ಅತ್ಯಂತ ಆಶ್ಚರ್ಯಕರವಾಗಿದೆ.

ಎಲ್ಲಿ ನಿನ್ನ ಕೈಗಳಿಗೆ ನೋವಾಗುವುದೋ ಎಂಬ ಭಯದಿಂದ ಹರನು ನಿನ್ನ ತೋಳುಗಳನ್ನು ಹಿಡಿದಿರುವನು. ಆದರೆ ಅದೇ ಕೈಗಳ ಶಕ್ತಿಯು ಅಸುರರನ್ನು ನಾಶಮಾಡಿರುವುದು ಇನ್ನೂ ಹೆಚ್ಚಿನ ಆಶ್ಚರ್ಯವನ್ನುಂಟು ಮಾಡಿದೆ.

ವಿವರಣೆ :

ದೇವಿಯೇ! ಪರಶಿವನು ನಿನ್ನ ಕರಕಮಲ ಗಳನ್ನು ಪ್ರೀತಿಯಿಂದ ಮೃದುವಾಗಿ ಹಿಡಿಯುತ್ತಾನೆ. ಆದರೂ ಆ ಕರಗಳಲ್ಲಿರುವ ದೃಢತೆಯು ಆಶ್ಚರ್ಯಕರವಾದುದು. ಏಕೆಂದರೆ ಆ ಕೈಗಳ ಪ್ರಭಾವದಿಂದಲೇ ಶುಂಭಾದಿಗಳ ದರ್ಪನಿಗ್ರಹವು ಆಯಿತಲ್ಲವೇ?

ಸಂಸ್ಕೃತದಲ್ಲಿ :

ರಾಜಂತು ತೇ ಕುಚಸುಧಾಪ್ರಪಾಯಿನೋ ಲೋಕಸ್ಯ ಮಾತರನಘಾಃ ಸಹಸ್ರಶಃ
ಏತೇಷು ಕಶ್ಚನ ಗಜಾನನಃ ಕೃತೀ ಗಾಯಂತಿ ಯಂ ಸಕಲದಾಯಿಸತ್ಕರಂ ||18||

ತಾತ್ಪರ್ಯ :

ಓ ಸಮಸ್ತ ವಿಶ್ವದ ಮಾತೆಯೇ ! ಪಾಪವನ್ನೇ ಮಾಡದ ಹಾಗೂ ನಿನ್ನಿಂದ ಅಮೃತವನ್ನು ಕುಡಿದಿರುವ ಸಾವಿರಾರು ವ್ಯಕ್ತಿಗಳಿಗೆ ಜಯವಾಗಲಿ. ಆದರೆ, ಅವರುಗಳಲ್ಲಿ ಕೇವಲ ಗಜಾನನನು ಮಾತ್ರ ನಿನ್ನ ದಯಾಪೂರಿತ ಕೈಗಳಿಂದ ಸಮಸ್ತವನ್ನು ಪಡೆದು ಜೊತೆಗೆ ಹೊಗಳಿಕೆ ಮತ್ತು ಆಶೀರ್ವಾದವನ್ನು ಪಡೆದನು.

ತಾಯಿಯಿಂದ ಅಮೃತವನ್ನು ಪಡೆದ ಮಕ್ಕಳೆಲ್ಲರ ಪೈಕಿ ಗಜಾನನನು ಮಾತ್ರ ಅದೃಷ್ಟವಂತನು, ಏಕೆಂದರೆ ಅವನು ಮಾತ್ರ ಆಶಿಸಿದ್ದೆಲ್ಲವನ್ನೂ ಕೊಡುವವನು. ದೇವಿಯ ಎದೆಹಾಲಿನ ವೈಶಿಷ್ಟ್ಯವೇ ಅದು. ಸಕಲಾಧ್ಯಾಯಿ ಎಂದು ಮತ್ತೊಂದು ಆವೃತ್ತಿ (ಪಥಾಂತರ) ಇರುವುದು. ಅದೇ ಸಂದರ್ಭದಲ್ಲಿ, ಗಜಾನನನ ಕೈಗಳು ಎಲ್ಲವನ್ನೂ ಹಿಡಿದುಕೊಳ್ಳುವ ಶಕ್ತಿ ಇರುವುದೆಂದು ಅರ್ಥ ಮಾಡಿಕೊಳ್ಳಬೇಕು.

ವಿವರಣೆ :

ಜಗಜ್ಜನನಿಯೇ! ನಿನ್ನ ಸ್ತನ್ಯಪಾನಮಾಡಿ ಪವಿತ್ರರಾದವರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಎಲ್ಲವನ್ನೂ ಕೊಡುವ ಗಣಪತಿಯೊಬ್ಬನನ್ನೇ ಪಂಡಿತರು ಸ್ತೋತ್ರಮಾಡುತ್ತಾರೆ.

ಸಂಸ್ಕೃತದಲ್ಲಿ :

ತ್ವನ್ನಾಭಿಕೂಪತಿತಾಂ ದೃಶಂ ಪ್ರಭೋರ್ನೇತುಂ ವಿನಿರ್ಮಲಗುಣೇ ಪುನಸ್ತಟಂ
ಸೌಮ್ಯತ್ವದೀಯಹೃದಯಪ್ರಸಾರಿತಃ ಪಾಶಃ ಸವಿತ್ರಿ ತವ ರೋಮರಾಜಿಕಾ ||19||

ತಾತ್ಪರ್ಯ :

ಓ ಮಾತೇ ! ಪವಿತ್ರಗುಣಗಳು (ವಿನಿರ್ಮಲಗುಣ) ಇರುವುದು, ನಿನ್ನ ಉದ್ದವಾದ ಜಡೆಯು ಹಗ್ಗದಂತೆ ನಿನ್ನ ದಯಾ ಹೃದಯದಿಂದ ಇಳಿ ಬಿದ್ದಿರುವುದು, ಹರನ ದೃಷ್ಟಿಯನ್ನು ನಿನ್ನ ನಾಭಿಯ ಹಳ್ಳದಲ್ಲಿರುವುದನ್ನು ಮರಳಿ ದಂಡೆಗೆ ತರುವಂತದ್ದಾಗಿದೆ.

ಇಲ್ಲಿ ನಾಭಿಯನ್ನು ಭಾವಿಗೆ, ಮತ್ತು ಸ್ತನಗಳ ನಡುವೆ ಇರುವ ಹೃದಯವನ್ನು ದಡವನ್ನಾಗಿ ಹೋಲಿಸಲಾಗಿದೆ. ಅವಳ ಕೂದಲನ್ನು ಹಗ್ಗವೆಂದು, ತನ್ನ ನಾಭಿಯ ಮೇಲೆ ಬಿದ್ದಿರುವ ಹರನ ದೃಷ್ಟಿಯನ್ನು ಅವಳ ಹೃದಯವು ತನ್ನೆಡೆಗೆ ಸೆಳೆಯಬೇಕೆಂಬ ಉದ್ದೇಶ. ಅಪ್ಪಯ್ಯ ದೀಕ್ಷಿತರಚಿತ್ರಮೀಮಾಂಸಕೃತಿಯಲ್ಲೂ ಇಂಥದೇ ಆಲೋಚನೆ ಬಂದಿರುವುದು.



ವಿವರಣೆ :

ಕವಿಯು ಈ ಶ್ಲೋಕದಲ್ಲಿ ದೇವಿಯ ರೋಮಗಳ ಸಾಲನ್ನು ವರ್ಣಿಸುವರು. ಸುಂದರಿಯರ ಕುಚಗಳ ಬುಡದಿಂದ ನಾಭಿಯವರೆಗೂ ಬೆಳೆದಿರುವ ರೋಮಗಳ ಸಾಲಿಗೆ ರೋಮರಾಜಿ ಎನ್ನುವರು.

ಪ್ರಭುವಾದ ಶಿವನ ದೃಷ್ಟಿಯು ದೇವಿಯ ನಾಭಿಕೂಪದಲ್ಲಿ ಬಿದ್ದಿತು. ಅದನ್ನು ಮೇಲಕ್ಕೆತ್ತಲು, ಸುಂದರವಾದ ಹಗ್ಗವನ್ನು ಎಸೆದಿದೆ. ಆ ಹಗ್ಗವೇ ರೋಮರಾಜಿ ಎಂದು ಕವಿಯ ವರ್ಣನೆ.

ಸಂಸ್ಕೃತದಲ್ಲಿ :

ತ್ವನ್ಮಧ್ಯಮೋ ಗಗನಲೋಕ ಏವ ಚೇತ್ ತ್ವದ್ದಿವ್ಯವೈಭವವಿದೋ ನ ವಿಸ್ಮಯಃ
ಪ್ರಾಜ್ಞೈರ್ಹಿ ಸುಂದರಿ ಪುರತ್ರಯದ್ವಿಷಸ್ತಂ ದೇಹಿನೀ ತ್ರಿಭುವನೇನ ಗೀಯಸೇ ||20||

ತಾತ್ಪರ್ಯ :

ಓ ದೇವಾಧಿದೇವನ ಸೌಂದರ್ಯದ ಖನಿಯೇ! ಮೂರು ಲೋಕಗಳ ವಿನಾಶಕಾರಿಣಿಯೇ, ನಿನ್ನ ನಡುವನ್ನು ಆಕಾಶಕ್ಕೆ ಹೋಲಿಸಿದರೆ, ನಿನ್ನ ದೈವೀ ಕಾಂತಿಯ ಜ್ಞಾನವುಳ್ಳವರಿಗೆ ಇದು ಆಶ್ಚರ್ಯವನ್ನುಂಟು ಮಾಡುವುದಿಲ್ಲ. ನಿನ್ನನ್ನು ಜ್ಞಾನಿಗಳು ಮೂರು ಲೋಕಗಳ ರೂಪವುಳ್ಳವಳೆಂದು ಹೊಗಳುತ್ತಾರೆ.

ದೇವಿಯ ರೂಪವು ಮೂರೂ ಲೋಕಗಳನ್ನು ವ್ಯಾಪಿಸಿರುವುದು. ಹಾಗಾಗಿ ಕವಿಯು ಇಲ್ಲಿ ದೇವಿಯ ನಡುವನ್ನು ಮಧ್ಯ ಪ್ರಪಂಚಕ್ಕೆ ಹೋಲಿಸುವರು, ಅಂದರೆ ಅಂತರಿಕ್ಷ.

ವಿವರಣೆ :

ತ್ರಿಪುರಾಂತಕನಾದ ಪರಶಿವನ ಸುಂದರಿಯೇ! ನಿನ್ನ ನಡುವನ್ನು ಅಂತರಿಕ್ಷ ಲೋಕವೆಂದು ಕವಿಗಳು ಹೇಳುತ್ತಾರೆ. ಇದು ಕವಿಸಮಯ. ಹೀಗೆ ನಿನ್ನನ್ನು ಹೇಳುವುದು ತತ್ತ್ವವೇತ್ತರಿಗೆ ಆಶ್ಚರ್ಯ ತರುವುದಿಲ್ಲ. ಏಕೆಂದರೆ, ನೀನು ಅದೇ ತತ್ತ್ವಜ್ಞರಿಂದ ಮೂರು ಲೋಕವನ್ನೇ ಶರೀರವಾಗಿ ಉಳ್ಳವಳೆಂದು ಸ್ತೋತ್ರ ಮಾಡಲ್ಪಡುತ್ತೀಯೆ. ಅವರ ಪ್ರಕಾರ ಅಂತರಿಕ್ಷಲೋಕವಾಗಿರಬೇಕಲ್ಲವೇ?

ಸಂಸ್ಕೃತದಲ್ಲಿ :

ನಾಭಿಹೃದಾದ್ವಿಗಲಿತಃ ಕಟೀಶಿಲಾಭಂಗಾತ್ ಪುನಃ ಪತತಿ ಕಿಂ ದ್ವಿಧಾಕೃತಃ
ಕಾಂತೋರುಯುಗ್ಮಮಿಷತಃ ಸವಿತ್ರಿ ತೇ ಭಾವಾರಿಪೂರ ಇಭಶುಂಡಯೋಃ ಸಮಃ ||21||

ತಾತ್ಪರ್ಯ :

ಓ ಮಾತೇ ! ಹೊಕ್ಕಳಿನ ಭಾವಿಯಿಂದ ಹೊರಬಂದ ನೀರಿನ ಜ್ಯೋತಿಯ ಧಾರೆಯನ್ನು (ಭಾವಾರಿಪುರಃ) ಸೊಂಟಕಲ್ಲಿನಿಂದಾಗಿ ತಡೆದು, ಮತ್ತು ಇಬ್ಬಾಗವಾಗಿ ತೊರೆಯಂತೆ ಹರಿದು, ಅದು ಆನೆಯ ಸೊಂಡಿಲಿಗೆ ಸಮನಾಗಿ, ನಿನ್ನ ತೊಡೆಗಳ ರೂಪದಲ್ಲಿ ಮರೆಮಾಚುವುದು.

ವಿವರಣೆ :

ಜಗಜ್ಜನನಿಯೇ! ನಿನ್ನ ಹೊಕ್ಕಳೆಂಬ ಮಡುವಿನಿಂದ ಹೊರಬಿದ್ದ ಕಾಂತಿಯೆಂಬ ನೀರಿನ ಪ್ರವಾಹವು ನಿತಂಬಗಳೆಂಬ ಕಲ್ಲಿಗೆ ಹೊಡೆಯಲ್ಪಟ್ಟು ಎರಡಾಗಿ ಸೀಳಿ, ಆನೆಯ ಸೊಂಡಿಲುಗಳಂತಾಗಿ, ಮನೋಹರವಾದ ತೊಡೆಗಳ ರೂಪದಲ್ಲಿ ಪ್ರಕಾಶಿಸುತ್ತಿವೆಯೋ? ಏನು?

ಸಂಸ್ಕೃತದಲ್ಲಿ :

ಜಂಘಾಯುಗಂ ತವ ಮಹೇಶನಾಯಿಕೇ ಲಾವಣ್ಯನಿರ್ಝರಿ ಜಗದ್ವಿಧಾಯಿಕೇ
ಅಂತಃಪುರಿಸ್ಫುರದಗುಪ್ತಸುಪ್ರಭಾಬಾಣಾಢ್ಯತೂಣಯುಗಲಂ ರತೀಶಿತುಃ ||22||

ತಾತ್ಪರ್ಯ :

ಓ ಮಹೇಶನ ಪತ್ನಿಯೆ ! ವಿಶ್ವದ ಸೃಷ್ಟಿಕರ್ತಳೆ ! ಸೌಂದರ್ಯದ ಚಿಲುಮೆಯೇ ! ನಿನ್ನ ಕೆಳಗಿನ ಕಾಲುಗಳು ಮನ್ಮಥ ದೇವನ ಎರಡು ಬತ್ತಳಿಕೆಗಳಾಗಿ ಅದರ ತುಂಬಾ ಬಾಣಗಳಿದ್ದು ಅವು ಅಂತರ್ಗತ ತೇಜಸ್ಸಿನಿಂದ ಹೊಳೆಯುತ್ತಿರುವುದು.


ವಿವರಣೆ :

ಜಗತ್ತನ್ನು ನಿರ್ವಹಿಸುವವಳೇ! ಮಹೇಶನ ಪತ್ನಿಯಾದ ದೇವಿಯೇ! ನಿನ್ನ ಮೊಣಕಾಲುಗಳು ಸೌಂದರ್ಯದ ಪ್ರವಾಹವೆಂಬಂತಿದೆ. ಅದು ಒಳಗಡೆ ಸ್ಪಷ್ಟವಾಗಿ ಕಾಣುವ ಕಿರಣಗಳೆಂಬ ಬಾಣಗಳನ್ನುಳ್ಳ ಮನ್ಮಥನ ಬತ್ತಳಿಕೆಯೋ ಎಂಬಂತಿದೆ.

ಸಂಸ್ಕೃತದಲ್ಲಿ :

ಪುಷ್ಪಾಸ್ತ್ರಶಾಸನನಿಶಾಂತರಾಜ್ಞಿ ತೇ ಲೋಕತ್ರಯಸ್ಥಖಲಕಂಪನಂ ಬಲಂ
ಶ್ರೋಣೀಭರೇಣ ಗಮನೇ ಕಿಲ ಶ್ರಮಂ ಪ್ರಾಪ್ನೋಷಿ ಕೇನ ತವ ತತ್ತ್ವಮುಚ್ಯತಾ ||23||

ತಾತ್ಪರ್ಯ :

ಓ ಮನ್ಮಥ ದೇವನ ಶತ್ರುವಿನ ರಾಣಿಯೇ ! ಮೂರು ಲೋಕದಲ್ಲಿನ ದುಷ್ಟ ವ್ಯಕ್ತಿಗಳಲ್ಲಿ ನಡುಕವನ್ನು ಸೃಷ್ಟಿಮಾಡುವುದು ನಿನ್ನ ಶಕ್ತಿಯು. ಆದರೆ ನಿನ್ನ ದೇಹದ ಹಿಂಭಾಗದ ಭಾರದಿಂದಾಗಿ ನೀನು ನಡೆಯುವಾಗ ಆಯಾಸಗೊಳ್ಳುವೆ. ಈ ಆಶ್ಚರ್ಯದ ಹಿಂದಿನ ಸತ್ಯವನ್ನು ಕೃಪೆಮಾಡಿ ನನಗೆ ತಿಳಿಸು.

ವಿವರಣೆ :

ಮನ್ಮಥನನ್ನು ನಿಗ್ರಹಿಸಿದ ಶಿವನ ಮನೆಯ ಸ್ವಾಮಿನಿಯೇ! ನಿನ್ನ ಬಲವು ಮೂರು ಲೋಕದಲ್ಲಿರುವ ದುಷ್ಟರ ಕಂಪನವಾಗಿದೆ. ಹಾಗಾದಾಗ್ಯೂ ನಡೆಯುವಾಗ ನಿತಂಬಭಾಗದಿಂದ ಆಯಾಸವನ್ನು ಪಡೆಯುತ್ತೀಯೆ. ಅದು ಯಾವ ಕಾರಣದಿಂದ ಆಗುತ್ತದೆ ಎಂಬ ರಹಸ್ಯವು ಹೇಳಲ್ಪಡಲಿ.

ಸಂಸ್ಕೃತದಲ್ಲಿ :

ಯತ್ರೈವ ನಿತ್ಯವಿಹೃತೇರಭೂದ್ರಮಾ ರಾಜೀವಮಂದಿರಚರೀತಿ ನಾಮತಃ
ತನ್ಮೇ ಸದಾ ಭಣತು ಮಂಗಲಂ ಶಿವಾ ಪಾದಾಂಬುಸಂಭವಮಮೇಯವೈಭವಂ ||24||


ತಾತ್ಪರ್ಯ :

ರಮಾ, ಲಕ್ಶ್ಮೀಯುಕಮಲ ವಾಸಿನಿಎಂಬ ಹೆಸರನ್ನು ಪಡೆದರು, ಏಕೆಂದರೆ ಅವಳು ಸದಾ ಕಮಲದಲ್ಲೇ ಸಂಚರಿಸುವಳು. ಅಪಾರ ಶಕ್ತಿಯುಳ್ಳ ಕಮಲಪಾದಗಳು ನನಗೆ ಸದಾ ಅಭ್ಯುದಯವನ್ನು ದಯಪಾಲಿಸಲಿ.

ವಿವರಣೆ :

ರಮಾದೇವಿಯು ಸದಾ ಕಮಲದಲ್ಲಿ ನಿತ್ಯವೂ ವಿಹರಿಸುತ್ತಾಳೆ. ಆದ್ದರಿಂದಲೇ ಅವಳಿಗೆಕಮಲವಾಸಿನೀಎಂದು ಹೆಸರು ಬಂದಿದೆ. ಅಂತಹ ಅಪಾರ ವೈಭವವುಳ್ಳ ಭವಾನೀದೇವಿಯ ಪಾದಕಮಲವು ನನಗೆ ನಿತ್ಯವೂ ಮಂಗಳವನ್ನುಂಟು ಮಾಡಲಿ.

ಸಂಸ್ಕೃತದಲ್ಲಿ :

ಕೇಶಾದಿಪಾದಕಮಲಾಂತಗಾಯಿನೀಃಕಂತುಪ್ರಶಾಸನನಿಶಾಂತನಾಯಿಕಾ
ಅಂಗೀಕರೋತು ಲಲಿತಾ ಇಮಾಃ ಕೃತೀರ್ಗೌರೀ ಕವ್ರೆಶ್ಚರಣಕಂಜಸೇವಿನಃ ||25||     250

ತಾತ್ಪರ್ಯ :

ಮನ್ಮಥ ದೇವನ ಶತ್ರುವಿನ ದೇವಿ, ಉಮಾ ದೇವಿಯು, ಅವಳನ್ನು ಶಿರದಿಂದ ಪಾದದವರೆಗೂ, ಅವಳ ಪಾದಗಳನ್ನು ಪೂಜಿಸುವ ಕವಿಯ ಲಲಿತಾ ಛಂದಸ್ಸಿನಲ್ಲಿ ರಚಿಸಿದ ಈ ಪ್ರಾರ್ಥನೆಯನ್ನು ಸ್ವೀಕರಿಸಲಿ.

ವಿವರಣೆ :

ಮನ್ಮಥನನ್ನು ನಿಗ್ರಹಿಸಿದ ಪರಶಿವನ ಪಟ್ಟಮಹಿಷಿಯಾದ ಉಮಾದೇವಿಯುಕೇಶಾದಿಪಾದಾಂತ ಸ್ತೋತ್ರವನ್ನು ಸ್ವೀಕರಿಸಲಿ. ಈ ಸ್ತೋತ್ರವು ಗೌರೀಚರಣಪಂಕಜ ಸೇವಕನಾದ ಕವಿಯಿಂದಲಲಿತಾಎಂಬ ಛಂದಸ್ಸಿನಲ್ಲಿ ನಿಬದ್ಧವಾಗಿದೆ.

ಇಲ್ಲಿಗೆ ಹತ್ತನೇ ಸ್ತಬಕವು ಸಂಪೂರ್ಣವಾಯಿತು.


ಪುಷ್ಪಗುಚ್ಛ (ಸ್ತಬಕ) – 11; ಛಂದಸ್ಸುಆರ್ಯಾವೃತ್ತ;  ಪಾದದಿಂದ ಕೇಶದವರೆಗಿನ ವರ್ಣನೆ

ಸಂಸ್ಕೃತದಲ್ಲಿ :

ಝ್ಷಕೇತುನಾ ಪ್ರಯುಕ್ತಃ ಸಮ್ಮೋಹನಚೂರ್ಣಮುಷ್ಟಿರೀಶಾನೇ
ದರಹಾಸೋ ಧರದುಹಿತುಃ ಕರೋತು ಭುವನಂ ವಶೇsಸ್ಮಾಕಂ ||1||

ತಾತ್ಪರ್ಯ :

ಪರ್ವತರಾಜನ ಪುತ್ರಿಯ ಸೌಮ್ಯವಾದ ಮುಗುಳುನಗೆಯ ಕೆಲವು ಸಂಮ್ಮೋಹನಗೊ ಳಿಸುವ ಕಣಗಳನ್ನು ಮನ್ಮಥನು ಶಿವನ ಮೇಲೆ ಗುರಿಯಾಗಿಸಿರುವುದು. ಇದು ವಿಶ್ವವನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಹಕಾರಿಯಾಗ ಬಹುದು.

ದೇವಿಯ ಸೌಮ್ಯವಾದ ಮಂದಹಾಸದ ಕೆಲವು ಕಣಗಳು ಮನ್ಮಥನಿಗೆ ಶಿವನನ್ನು ವಶಪಡಿಸಿಕೊಳ್ಳಲು ಸಹಕಾರಿಯಾಗಿ, ಇದು ಅಸುರರು ಆಕ್ರಮಿಸಿಕೊಂಡಿರುವ ಪ್ರಪಂಚವನ್ನು ಮತ್ತೆ ಹತೋಟಿಗೆ ತಂದುಕೊಳ್ಳಲು ಖಂಡಿತವಾಗಿಯೂ ಸಹಕಾರಿಯಾಗುವುದು.

ಕವಿಯು ಇಲ್ಲಿ ಭಾರತವನ್ನು ಆಂಗ್ಲರ ಹಿಡಿತದಿಂದ ಮುಕ್ತಿಗೊಳಿಸುವ ತನ್ನ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತಿರುವಂತಿದೆ.

ವಿವರಣೆ :

ಮನ್ಮಥನಿಂದ ಶಿವನನ್ನು ವಶೀಕರಿಸಲು ಒಂದು ಹಿಡಿ ಸಮ್ಮೋಹನ ಚೂರ್ಣದಂತೆ ಇರುವ ಪಾರ್ವತಿಯ ಮಂದಹಾಸವು, ಪರರಿಂದ ಆಕ್ರಮಿಸಲ್ಪಟ್ಟಿರುವ ನಮ್ಮ ಭೂಮಿಯನ್ನು ನಮ್ಮ ವಶಕ್ಕೆ ಬರುವಂತೆ ಮಾಡಲಿ.

ಸಂಸ್ಕೃತದಲ್ಲಿ :

ಉಪಜೀವಿದ್ಭಿಃ ಕಾಂತೇರ್ಲೇಶಾಂಸ್ತೇ ಜಗತಿ ಸುಂದರೈರ್ಭಾವೈಃ
ಉಪಮಿತುಮಂಗಾನಿ ತವ ಪ್ರಾಯೋ ಲಜ್ಜೇsಮ್ಬ ಯತಮಾನಃ ||2||

ತಾತ್ಪರ್ಯ :

ಓ ಮಾತೇ! ನಿನ್ನ ಅಂಗಾಂಗಳನ್ನ, ನಿನ್ನ ಹೊಳಪಿನ ಸಣ್ಣ ಭಾಗವನ್ನವಲಂಬಿಸಿರುವ  ಸುಂದರವಾದ ಪ್ರಾಪಂಚಿಕ ಕಲ್ಪನೆಗಳಿಗೆ ಹೋಲಿಸುವ ನನ್ನ ವ್ಯರ್ಥ ಪ್ರಯತ್ನಕ್ಕೆ ನನಗೆ ನಾಚಿಕೆಯಾಗುವುದು.

ಪ್ರಪಂಚದಲ್ಲಿನ ಎಲ್ಲ ಸುಂದರವಾದ ಕಲ್ಪನೆಗಳನ್ನು ಹೋಲಿಸುವುದು ದೇವಿಯ ಕಾಂತಿಯನ್ನವಲಂಬಿಸಿದೆ; ಅವುಗಳಿಗೆ ತಮ್ಮದೇ ಆದ ಕಾಂತಿಯು ಇರುವುದಿಲ್ಲ. ಆದರೆ ಎರಡು ತಮ್ಮದೇ ಆದ ಬೇರೆ ಬೇರೆ ಗುಣಗಳಿರುವ ಪದಾರ್ಥಗಳ ನಡುವೆ ಹೋಲಿಕೆಯು ಸಾಧ್ಯ. ಹಾಗಾಗಿ ನಿನ್ನ ಕಾಂತಿಯನ್ನು ಹೋಲಿಸಲಸಾಧ್ಯವಾದ ಕಲ್ಪನೆಗಳಿಗೆ ಹೋಲಿಸಲು ಪ್ರಯತ್ನಿಸಿದ್ದು ನನ್ನನ್ನು ಪೇಚಾಟಕ್ಕೆ ಸಿಕ್ಕಿಸಿದೆ.

ವಿವರಣೆ :

ತಾಯಿಯೇ ! ಜಗತ್ತಿನಲ್ಲಿ ಮುಖವೇ ಮೊದಲಾದ ಅಂಗಗಳನ್ನು ವರ್ಣಿಸಲು ಆಯಾಯ ಅಂಗಗಳಿಗಿಂತ ಬೇರೆಯಾದ ಚಂದ್ರಾದಿಗಳನ್ನು ಹೋಲಿಕೆಯಾಗಿ ಕೊಟ್ಟು ವರ್ಣಿಸುತ್ತಾರೆ. ಆದರೆ ನಿನ್ನ ವಿಷಯದಲ್ಲಿ ಪ್ರಪಂಚದಲ್ಲಿರುವ ಎಲ್ಲ ಉಪಮಾದ್ರವ್ಯ ಗಳೂ, ನಿನ್ನ ಅಂಗಶೋಭೆಗಿಂತ ಬೇರೆಯಾಗಿಲ್ಲ. ಹೀಗಿರುವಾಗ ನಾನು ನಿನ್ನ ಅಂಗಾಂಗಗಳ ಸೌಂದರ್ಯವನ್ನು ಹೇಗೆತಾನೇ ವರ್ಣಿಸಲಿ? ಎಂದು ನನ್ನ ಮನಸ್ಸು ನಾಚುತ್ತಿದೆ. “ಪ್ರಾಯಃಎಂಬ ಪದವನ್ನು ಬಳಸಿರುವುದರಿಂದ ಅತ್ಯಂತವಾಗಿ ಬಿಡದೆ ಸ್ವಲ್ಪ ಪ್ರಯತ್ನಿಸುತ್ತೀನೆಂದು ಕವಿಯು ಹೇಳುವರು.




ಸಂಸ್ಕೃತದಲ್ಲಿ :

ಅವತಂಸಪಲ್ಲವತುಲಾಂ ಬಿಭ್ರಾಣಂ ಶ್ರುತಿನತಭ್ರುವಃ ಶಿರಸಿ
ಚರಣಂ ವ್ರಜಾಮಿ ಶರಣಂ ವಾಮಂ ಕಾಮಾರಿಲಲನಾಯಾಃ ||3||

ತಾತ್ಪರ್ಯ :

ಮನ್ಮಥನ ಶತ್ರುವಿನ ಪತ್ನಿಯ ಎಡಭಾಗದ ಪಾದವು ಹೊಸ ಚಿಗುರೆಲೆಯಂತೆ ಮೃದುವಾಗಿರುವುದು. ವೇದಗಳ ಶಿರದ ಮೇಲಿನ ಆಭರಣದಂತಿರುವ ಆ ಎಡಪಾದದಲ್ಲಿ ನಾನು ಆಶ್ರಯವನ್ನು ಬೇಡುತ್ತೇನೆ.

ಧರ್ಮ ಗ್ರಂಥಗಳಲ್ಲಿ ದೇವಿಯ ಎಡಪಾದವನ್ನು ಪ್ರಶಂಸಿಸಲಾಗಿದೆ. ದೇವಿಯು ಅರ್ಧನಾರೀಶ್ವರ ಶರೀರದ ಎಡಭಾಗದಲ್ಲಿರುವಳು. ಸಮಸ್ತ ವೇದಗಳು ಎಡ ಪಾದವನ್ನು ವರ್ಣಿಸಿವೆ.

ವಿವರಣೆ :

ವೇದಗಳೆಂಬ ಸುಂದರಿಯ ತಲೆಯಲ್ಲಿ (ಅಂದರೆ ವೇದಾಂತವೆಂದು ಅರ್ಥ) ಚಿಗುರಿನಂತೆ ಅಲಂಕಾರಪ್ರಾಯವಾಗಿರುವ ಕಾಮಾರಿಯಾದ ಪರಶಿವನ ಅರ್ಧಾಂಗಿಯಾದ ಪಾರ್ವತೀದೇವಿಯ ಎಡಗಾಲನ್ನು ನನ್ನ ಕೊನೆಯ ಗತಿಯಾಗಿ ಹೊಂದುತ್ತೇನೆ.

ಸಂಸ್ಕೃತದಲ್ಲಿ :

ಶಂಕರನಯನೋನ್ಮಾದನಮತಿಮಧುರಂ ಭಾತಿ ಮತಿಮತಾ ವರ್ಣ್ಯೇ
ಜಂಘಾಯುಗಂ ಭವತ್ಯಾಃ ಕುಸುಮಪೃಷತ್ಕಸ್ಯ ಸರ್ವಸ್ವಂ ||4||

ತಾತ್ಪರ್ಯ :

ಓ ದೇವಿ ! ಜ್ಞಾನಿಗಳಿಂದ ಪ್ರಶಂಸಿಸಲ್ಪಟ್ಟ, ನಿನ್ನ ಸುಂದರ ಜಂಘವು ಶಂಕರನ ಕಣ್ಣುಗಳಿಗೆ ಉತ್ಸಾಹವನ್ನು ಉಂಟುಮಾಡುವುದು. ಅವುಗಳು ಮನ್ಮಥನ ಸಂಪತ್ತಿನಂತೆ ಹೊಳೆಯುವುದು.


ವಿವರಣೆ :

ತಾಯಿಯೇ ! ನಿನ್ನ ಮೊಣಕಾಲು ಪರಶಿವನ ಕಣ್ಣುಗಳಿಗೆ ಮೋಹಕವಾಗಿ ಅತ್ಯಂತ ರಮಣೀಯವಾಗಿದೆ. ಆದ್ದರಿಂದಲೇ ಬುದ್ಧಿವಂತರಿಂದ ವರ್ಣಿಸಲ್ಪಡುವವ ಳಾಗಿದ್ದೀಯೆ. ಆ ನಿನ್ನ ಮೊಣಕಾಲು ಹೂವುಗಳನ್ನೇ ಬಾಣಗಳಾಗಿ ಮನ್ಮಥನ ಸಾರಸರ್ವಸ್ವವೂ ಆಗಿದೆ.

ಸಂಸ್ಕೃತದಲ್ಲಿ :

ಏಕೈಕಲೋಕನೇ ದ್ವಯಮನ್ಯೋನ್ಯಸ್ಮರಣಹೇತುತಾಮೇತಿ
ದೇವಿ ಭವಸ್ಯ ತವೋರುಃ ಶುಂಡಾ ಚ ಗಜೇಂದ್ರವದನಸ್ಯ ||5||

ತಾತ್ಪರ್ಯ :

ಓ ದೇವಿ ! ನಿನ್ನ ತೊಡೆಗಳು ಹಾಗೂ ಆನೆಯ ಮುಖದ ದೇವನ ಸೊಂಡಿಲುಗಳನ್ನು ಬೇರೆ ಬೇರೆಯಾಗಿ ನೋಡಿದಾಗ ಒಂದು ಮತ್ತೊಂದನ್ನು ಜ್ಞಾಪಿಸುವುದು.

ವಿವರಣೆ :

ಪರಶಿವನ ಮಡದಿಯೇ ! ನಿನ್ನ ತೊಡೆಗಳು ಮತ್ತು ಗಜಾನನನ ಸೊಂಡಿಲು ಇವೆರಡೂ ಒಂದನ್ನು ನೋಡಿದಾಗ ಇನ್ನೊಂದು ನೆನಪಿಗೆ ಕಾರಣವಾಗುತ್ತದೆ. ಅಂದರೆ ಗಜಾನನನ ಸೊಂಡಿಲು ಮತ್ತು ದೇವಿಯ ತೊಡೆಗಳು ಒಂದನ್ನೊಂದು ಹೋಲುತ್ತದೆಂದು ತಾತ್ಪರ್ಯ.

ಸಂಸ್ಕೃತದಲ್ಲಿ :

ನಾಕೋsವಲಗ್ನಮೀಶ್ವರಿ ಕಟಿರವನಿರ್ಭೋಗಿನಾಂ ಜಗನ್ನಾಭಿಃ
ಕುಕ್ಷೌ ನ ಕೇವಲಂ ತೇ ಬಹಿರಪಿ ವಪುಷಿ ತ್ರಯೋ ಲೋಕಾಃ ||6||



ತಾತ್ಪರ್ಯ :

ಓ ಶಿವನ ಪತ್ನಿಯೆ ! ಸಮಸ್ತ ವಿಶ್ವವು ನಿನ್ನ ಗರ್ಭದಲ್ಲಿ ವಾಸಿಸುವುದಲ್ಲದೇ ಅವು ಹೊರನೋಟಕ್ಕೆ ನಿನ್ನ ಅಂಗಾಂಗಗಳಲ್ಲಿ ಕಂಡುಬರುವುದು. ನಿನ್ನ ನಡುವೇ ಆಕಾಶವು, ಸೊಂಟವು ಭೂಮಿ ಮತ್ತು ನಾಭಿಯೇ ಕೆಳಗಿನ ಪ್ರಪಂಚ.

ವಿವರಣೆ :

ಶಿವನ ಮಡದಿಯೇ ! ನಿನ್ನ ಮಧ್ಯಭಾಗವು ಸ್ವರ್ಗಲೋಕವಾಗಿದೆ. ನಿತಂಬ ಭಾಗಗಳು ಭೂಮಿಯಾಗಿದೆ. ಹೊಕ್ಕಳು ಪಾತಾಳ ಲೋಕವಾಗಿದೆ. ದೇವಿಯೇ ! ನಿನ್ನ ಉದರದಲ್ಲಿ ಮಾತ್ರವೇ ಮೂರೂ ಲೋಕಗಳಿವೆ. ಮತ್ತೇನೆಂದರೆ ನಿನ್ನ ದೇಹದ ಇತರೆ ಅಂಗಗಳಲ್ಲಿಯೂ ಮೂರೂ ಲೋಕಗಳಿವೆ.

ಸಂಸ್ಕೃತದಲ್ಲಿ :

ಮನ್ಯೇ ಮಹಾಕೃಪಾಣಂ ತವ ವೇಣಿಮಚಲಪುತ್ರಿ ಮದನಸ್ಯ
ಅಸಿಧೇನುಕಾಂ ವಿಶಂಕೇ ನಿಶಿತತರಾಗ್ರಾಂ ತು ರೋಮಾಲಿಂ ||7||

ತಾತ್ಪರ್ಯ :

ಓ ಪರ್ವತರಾಜ ಕುಮಾರಿಯೇ! ನಿನ್ನ ಜಡೆಯನ್ನು ನಾನು ಮನ್ಮಥನ ಮಹಾನ್ ಖಡ್ಗವೆಂದು ಪರಿಗಣಿಸುವೆ ಮತ್ತು ನಿನ್ನ ಕೂದಲುಗಳ ಕಂಭಗಳನ್ನು ಖಡ್ಗದ ಅತ್ಯಂತ ಹರಿತವಾದ ಭಾಗವನ್ನಾಗಿ ಭ್ರಮಿಸುವೆ.

ವಿವರಣೆ :

ದೇವಿಯೇ ! ಬಾಚಿ ಹೆಣೆಯಲ್ಪಟ್ಟ ನಿನ್ನ ತಲೆಗೂದಲನ್ನು ಮನ್ಮಥನ ಕತ್ತಿಯೆಂದು ಭಾವಿಸುತ್ತೇನೆ. ಹಾಗೆಯೇ ನಿನ್ನ ರೋಮಾವಳಿಯನ್ನು ಮನ್ಮಥನ ತೀವ್ರವಾದ ತುದಿಯುಳ್ಳ ಚೂಪಾದ ಬಾಕು ಎಂದು ತಿಳಿಯುತ್ತೇನೆ. (ಸುಂದರಿಯರ ನಾಭಿಯ ಮೇಲ್ಭಾಗದಿಂದ ಸ್ತನದ ಬುಡದವರೆಗೂ ಬೆಳೆದಿರುವ ಸೂಕ್ಷ್ಮವಾದ ರೋಮಗಳ ಸಾಲಿಗೆ ರೋಮರಾಜಿ ಎಂದು ಹೆಸರು.)

ಸಂಸ್ಕೃತದಲ್ಲಿ :

ದ್ವರದವದನೇನ ಪೀತಂ ಷಡ್ವದನೇನಾಥ ಸಕಲಭುವನೇನ
ಅಕ್ಷಯ್ಯಕ್ಷೀರಾಮೃತಮಂಬಾಯಾಃ ಕುಚಯುಗಂ ಜಯತಿ ||8||

ತಾತ್ಪರ್ಯ :

ಮಾತೆಯ ಸ್ತನಗಳಲ್ಲಿರುವ ಅಕ್ಷಯ ಅಮೃತವನ್ನು ಗಜಾನನನ ಎರಡು ಮುಖಗಳು, ಷಣ್ಮುಖನ ಆರು ಮುಖಗಳೂ ಹಾಗೂ ಸಮಸ್ತ ವಿಶ್ವವೂ ರುಚಿನೋಡಿರುವುದು. ಅದಕ್ಕೆ ಜಯವಾಗಲಿ.

ವಿವರಣೆ :

ದೇವಿಯೆ ! ನಿನ್ನ ಕುಚಯುಗ್ಮದಲ್ಲಿರುವ ಹಾಲೆಂಬ ಅಮೃತವನ್ನು, ಗಜಾನನನೂ, ಷಣ್ಮುಖನೂ, ಅನಂತರ ಸಮಸ್ತ ಜಗತ್ತು ಕುಡಿದಿದೆ. ಆದರೂ ಕಡಿಮೆಯಾಗದಿರುವ ಹಾಲೆಂಬ ಅಮೃತವುಳ್ಳ ದೇವಿಯ ಸ್ತನದ್ವಯವೂ ಉತ್ಕೃಷ್ಟವಾಗಿ ಬೆಳಗುತ್ತವೆ.

ಸಂಸ್ಕೃತದಲ್ಲಿ :

ಜಗದಂಬ ಲಂಬಮಾನಾ ಪಾರ್ಶ್ವದ್ವಿತಯೇ ತವಾಗಲಾದ್ಭಾತಿ
ಸಾಂದ್ರಗ್ರಥಿತಮನೋಜ್ಞಪ್ರಸೂನಮಾಲೇವಭುಜಯುಗಲೀ ||9||

ತಾತ್ಪರ್ಯ :

ಓ ವಿಶ್ವ ಮಾತೇ ! ನಿನ್ನ ಎರಡೂ ಭುಜಗಳಿಂದ ನೇತಾಡುತ್ತಿರುವ ಕೈಗಳು ಸುಂದರವಾದ ಪುಷ್ಪಗಳಿಂದ ದಟ್ಟವಾಗಿ ಹೆಣೆದಿರುವ ಮಾಲೆಯಂತೆ ಕಂಗೊಳಿಸುವುದು.

ದಪ್ಪವಾಗಿ ಹೆಣೆದಿರುವ ಮಾಲೆಯು ಶಕ್ತಿಯುತವಾದ ಕೈಗಳು/ಭುಜಗಳನ್ನು ಸೂಚಿಸುತ್ತದೆ.

ವಿವರಣೆ :

ಜಗಜ್ಜನನಿ ! ನಿನ್ನ ಕುತ್ತಿಗೆಯ ಎರಡು ಪಾರ್ಶ್ವಗಳಲ್ಲಿ ನೇತಾಡುತ್ತಿರುವ ನಿನ್ನ ಎರಡು ತೋಳುಗಳು, ಸಾಂದ್ರವಾಗಿ ಕಟ್ಟಲ್ಪಟ್ಟ ಮನೋಹರವಾದ ಪುಷ್ಪಮಾಲೆಯಂತೆ ಪ್ರಕಾಶಿಸುತ್ತದೆ.

ಸಂಸ್ಕೃತದಲ್ಲಿ :

ಜಾನಂತಿ ಶಕ್ತಿಮಸುರಾಃ ಸುಷಮಾಂ ಸಖ್ಯೋ ವದಾನ್ಯತಾಮೃಷಯಃ
ಮೃದುತಾಂ ತವಾಂಬ ಪಾಣೇರ್ವೇದ ಸ ದೇವಃ ಪುರಾಂ ಭೇತ್ತಾ ||10||

ತಾತ್ಪರ್ಯ :

ಓ ಮಾತೇ ! ರಾಕ್ಷಸರಿಗೆ ನಿನ್ನ ಶಕ್ತಿಯ ಅರಿವಿರುವುದು ಹಾಗೂ ನಿನ್ನ ಸ್ನೇಹಿತರಿಗೆ ನಿನ್ನ ಬೆಡಗು ಗೊತ್ತಿರುವುದು. ಋಷಿ ಮುನಿಗಳಿಗೆ ನಿನ್ನ ವರಗಳನ್ನು ನೀಡುವ ಹೃದಯದ ಬಗೆಗೆ ಅರಿವುಂಟು ಮತ್ತು ತ್ರಿಪುರ ಸಂಹಾರಿಗೆ ನಿನ್ನ ಹಸ್ತಗಳ ಮೃದುತ್ವದ ಬಗ್ಗೆ ಅರಿವುಂಟು.

ನಿನಗೆ ತೀರ ಹತ್ತಿರವಾಗಿರುವ ನಿನ್ನ ಸ್ನೇಹಿತರಿಗೆ ನಿನ್ನ ದೈವೀ ಕರುಣೆಯ ಬಗೆಗೆ ಅರಿವಿರುವುದು.

ವಿವರಣೆ :

ಜಗಜ್ಜನನಿಯೇ ! ನಿನ್ನ ಕೈಯಿನ ಶಕ್ತಿಯನ್ನು ಅಸುರರೂ, ಸಖಿಯರು ಶೋಭೆಯನ್ನೂ, ಋಷಿಗಳು ಔದಾರ್ಯವನ್ನೂ, ಪರಶಿವನು ಅದೇ ಕೈಯಿನ ಮೃದುತ್ವವನ್ನೂ ಬಲ್ಲವರಾಗಿದ್ದಾರೆ.

ಸಂಸ್ಕೃತದಲ್ಲಿ :

ಕಂಬುಸದೃಗಂಬ ಜಗತಾಂ ಮಣಿವೇಷೋಡುಸ್ರಜಾಕೃತಾಕಲ್ಪಃ
ಕಂಠೋsನಘಸ್ವರಸ್ತೇ ಧೂರ್ಜಟಿದೋರ್ನಯನಕರ್ಣಹಿತಃ ||11||


ತಾತ್ಪರ್ಯ :

ಓ ಮಾತೇ ! ಶಂಖದಂತೆ ಕಾಣುವ ನಿನ್ನ ಕುತ್ತಿಗೆಯು, ರತ್ನಗಳ ವೇಷದಲ್ಲಿ ನಕ್ಷತ್ರಗಳ ಮಾಲೆಯಿಂದ ಅಲಂಕರಿಸಿರುವುದು. ಅದು ಶಿವನ ಕಣ್ಣಿಗೆ ಹಬ್ಬದಂತಿದ್ದು ಹಾಗೂ ಅವನ ತೋಳುಗಳು ಆ ರೂಪವನ್ನು ತಬ್ಬಿಕೊಳ್ಳುವಂತಿರುವುದು. ನಿನ್ನ ಸುಸ್ಪಷ್ಟವಾದ ಮಾತುಗಳು ಶಿವನ ಕಿವಿಗಳಿಗೆ ಹಿತವಾಗಿರುವುದು.

ವಿವರಣೆ :

ಜಗಜ್ಜನನಿಯೇ ! ನಿನ್ನ ಕಂಠವು ಶಂಖಕ್ಕೆ ಸಮಾನವಾಗಿದೆ. ನಕ್ಷತ್ರಗಳಿಂದ ಮಾಡಿದ ಹಾರದ ಅಲಂಕಾರವಾಗಿದೆ. ಹೀಗೆ ಅದು ಶಿವನ ತೋಳುಗಳಿಗೆ, ಕಣ್ಣಿಗೆ ಮತ್ತು ಕಿವಿಗೆ ಆಪ್ಯಾಯಮಾನವಾಗಿದೆ. ಶಿವನ ಆಲಿಂಗನ ಕಾಲದಲ್ಲಿ ಸುಖಕೊಡುವುದರಿಂದ ತೋಳುಗಳಿಗೆ ಹಿತ, ನೋಡಲು ಆಕರ್ಷಕ ಹಾಗೂ ಕಣ್ಣಿಗೆ ಹಿತ ಹಾಗೂ ಮಧುರವಾಗಿ ರುವುದರಿಂದ ಶಿವನ ಕಿವಿಗೆ ಹಿತ.

ಸಂಸ್ಕೃತದಲ್ಲಿ :

ಹರಕಾಂತೇ ವದನಂ ತೇ ದರ್ಶಂ ದರ್ಶಂ ವತಂಸಶೀತಾಂಶುಃ
ಪೂರ್ಣೋsಪ್ಯವಾಪ ಕೃಶತಾಂ ಪ್ರಾಯೇಣಾಸೂಯಯಾ ಶುಷ್ಕಃ ||12||

ತಾತ್ಪರ್ಯ :

ಓ ಹರನ ಪತ್ನಿಯೆ ! ಶಿವನ ಶಿರದಲ್ಲಿದ್ದ ಚಂದ್ರನು ಮೊದಲಲ್ಲಿ ಗುಂಡಾಗಿದ್ದು ಈಗ ಬಹುಶಃ ಗಾತ್ರದಲ್ಲಿ ಸಣ್ಣಗಾಗಿರುವನು. ಅಸೂಯೆಯಿಂದಾಗಿ ಅವನು ಕಳೆಗುಂದಿರುವನು, ಏಕೆಂದರೆ ಅವನು ನಿನ್ನ ಸೌಂದರ್ಯಭರಿತ ಮುಖವನ್ನು ಸದಾ ವೀಕ್ಷಿಸುತ್ತಿರುವನು.

ವಿವರಣೆ :

ಹರನ ಸುಂದರಿಯೆ ! ಶಿವನ ತಲೆಗೆ ಅಲಂಕಾರವಾಗಿರುವ ಚಂದ್ರನು ನಿನ್ನ ಮುಖದ ಕಾಂತಿಯನ್ನು ನೋಡಿ ತಾನು ಪೂರ್ಣನಾದರೂ ಅಸೂಯೆಯಿಂದ ಕೃಶನಾಗಿದ್ದಾನೆ.

ಸಂಸ್ಕೃತದಲ್ಲಿ :

ಚಂದ್ರಂ ರಣಾಯ ಸಕಲಾ ಚಪಲಾಕ್ಷೀವದನಜಾತಿರಾಹ್ವಯತಾಂ
ತಂ ತು ಮಹಸಾ ಮುಖಂ ತೇ ಮಹೇಶಕಾಂತೇ ಜಿಗಾಯೈಕಂ ||13||

ತಾತ್ಪರ್ಯ :

ಓ ಮಹೇಶನ ಪತ್ನಿಯೆ ! ಜಿಂಕೆ ಕಣ್ಣುಗಳುಳ್ಳ ಸಮಸ್ತ ಸ್ತ್ರೀ ಗುಂಪು ಚಂದ್ರನೊಡನೆ ಹಿರಿಮೆಗಾಗಿ ಸವಾಲನ್ನೊಡ್ಡಬಹುದು, ಆದರೆ, ಅವನು ಕೇವಲ ನಿನ್ನ ಮುಖಕಾಂತಿಯೆದುರಿಗೆ ಸೋಲುವನು.

ವಿವರಣೆ :

ಪರಶಿವನ ಕಾಂತೆಯೇ ! ಸಕಲ ಸ್ತ್ರೀ ಜಾತಿ ಸಮೂಹವು ಚಂದ್ರನನ್ನು ಮುಖಕಾಂತಿಯಿಂದ ಜಯಿಸಲು ಅವನನ್ನು ಸ್ಪರ್ಧೆಗೆ ಕರೆಯಲಿ. ಆದರೆ ನಿನ್ನ ಮುಖ ಒಂದೇ ಚಂದ್ರನನ್ನು ತನ್ನ ಮುಖಕಾಂತಿಯಿಂದ ಜಯಿಸಿತು. ಅಂತಹ ಲೋಕೋತ್ತರವಾದ ಕಾಂತಿಯಿಂದ ನಿನ್ನ ಮುಖವು ಕೂಡಿದೆ.

ಸಂಸ್ಕೃತದಲ್ಲಿ :

ವದನಕಮಲಂ ತವೇಶ್ವರಿ ಕಮಲಜಯಾದ್ದರ್ಪಿತಂ ಸುಧಾಭಾನುಂ
ನಿರ್ಜಿತ್ಯ ಕಮಲಜಾತೇರಮಲಂ ಮಹದಾಜಹಾರ ಯಶಃ ||14||

ತಾತ್ಪರ್ಯ :

ಓ ಈಶ್ವರಿ ! ಚಂದ್ರನು ಕಮಲ ಪುಷ್ಪದ ಮೇಲಿನ ವಿಜಯದಿಂದಾಗಿ ಹೆಮ್ಮೆಯಿಂದಿದ್ದು, ನಿನ್ನ ಕಮಲ ಪುಷ್ಪದಂತಿರುವ ವದನದಿಂದ ಸೋಲಲ್ಪಟ್ಟಿರುವನು. ನಿನ್ನ ಕಮಲ ಪುಷ್ಪದಂತಿರುವ ವದನವು ಕಮಲದ ಜಾತಿಗೇ ಪ್ರಸಿದ್ಧಿಯನ್ನು ತಂದುಕೊಟ್ಟಿದೆ.



ವಿವರಣೆ :

ದೇವಿಯೆ ! ನಿನ್ನ ಮುಖಕಮಲವು ಕಮಲಗಳನ್ನು ಜಯಿಸಿದ ಅಹಂಕಾರದಿಂದ ಬೀಗುವ ಚಂದ್ರನನ್ನು ಜಯಿಸಿ ಕಮಲ ಜಾತಿಗೆ ಯಶಸ್ಸನ್ನು ತಂದುಕೊಟ್ಟಿತು.

ಸಂಸ್ಕೃತದಲ್ಲಿ :

ಲಾವಣ್ಯಮರಂದಾಶಾ ಭ್ರಮದ್ಭವಾಲೋಕಬಂಭರಂ ಪರಿತಃ
ಮುಗ್ಧಂ ಮುಖಾರವಿಂದಂ ಜಯತಿ ನಗಾಧೀಶನಂದಿನ್ಯಾಃ ||15||

ತಾತ್ಪರ್ಯ :

ಹಿಮಾಲಯ ಪರ್ವತದ ಪುತ್ರಿಯ ಸುಂದರವಾದ ಕಮಲವದನಕ್ಕೆ ಜಯವಾಗಲಿ! ಶಿವನ ದೃಷ್ಟಿಯು ದುಂಬಿಯಂತೆ ಅವಳ ಕಮಲವದನದ ಸುತ್ತ ಜೇನಿನಿಂದ ಕೂಡಿದ ದೃಷ್ಟಿಯನ್ನು ತನ್ನೆಡೆಗೆ ಸೆಳೆಯಲು ಸುತ್ತಾಡುತ್ತಿದೆ.

ವಿವರಣೆ :

ಪರಶಿವನ ನೋಟವೆಂಬ ದುಂಬಿಯು ಪರ್ವತರಾಜನ ಮಗಳಾದ ಪಾರ್ವತೀದೇವಿಯ ಮುಖಸೌಂದರ್ಯವೆಂಬ ಮಕರಂದವನ್ನು ಪಾನಮಾಡಬೇಕೆಂಬ ಬಯಕೆಯಿಂದ ಮುಗ್ಧವಾದ ಅವಳ ಮುಖವೆಂಬ ಕಮಲದ ಸುತ್ತಲೂ ಸುತ್ತುತ್ತದೆ. ಅಂತಹ ಮುಖಕಮಲವು ಚೆನ್ನಾಗಿ ಬೆಳಗುತ್ತದೆ.

ಸಂಸ್ಕೃತದಲ್ಲಿ :

ಶುದ್ಧೇಂದುಸಾರನಿರ್ಮಿತಮಾಸ್ಯಾರ್ಧಂ ತೇ ಭವಾನಿ ಭಾಲಮಯಂ
ಸಕಲರಮಣೀಯಸಾರೈರ್ನಿರ್ಮಿತಮರ್ಧಾಂತರಂ ವಿಧಿನಾ ||16||



ತಾತ್ಪರ್ಯ :

ಓ ಭವಾನಿ ! ನಿನ್ನ ಮುಖದ ಮೇಲ್ಭಾಗವನ್ನು ಸೃಷ್ಟಿಕರ್ತನು ಶುದ್ಧವಾದ ಚಂದ್ರನಂತಿರುವ ಅಮೃತದ ಮೂಲದಿಂದ ಮಾಡಿರುವನು ಮತ್ತು ಮಿಕ್ಕ ಅರ್ಧಭಾಗವನ್ನು (ಕೆಳಭಾಗ) ಸುಂದರ ವಸ್ತುಗಳ ಸಾರದಿಂದ ಸೃಷ್ಟಿಸಿರುವನು.

ನಿನ್ನ ಅಮೃತಮಯವಾದ ಮುಖದ ಮೇಲಿನ ಅರ್ಧಭಾಗವು ಉಜ್ವಲವಾಗಿ ಬೆಳಗುತ್ತಿದೆ. ಉಳಿದರ್ಧ ಭಾಗವು ಘನ ಸೌಂದರ್ಯದ ಸಾರದಿಂದ ಮಾಡಲ್ಪಟ್ಟಿದೆ. ನಿನ್ನ ಮುಖವು ಎಲ್ಲ ಜೀವ ಶಕ್ತಿಗಳ ನಿಧಿಯ ಮನೆ ಹಾಗೂ ಎಲ್ಲ ಆನಂದಗಳ ಮೂಲ.

ವಿವರಣೆ :

ಭವಾನಿಯೇ ! ಆನಂದ ಪ್ರಚುರವಾದ ನಿನ್ನ ಮುಖದ ಅರ್ಧಭಾಗವು ಶುದ್ಧವಾದ ಚಂದ್ರನ ಸಾರವಾದ ಅಮೃತದಿಂದ ನಿರ್ಮಿಸಲ್ಪಟ್ಟಿದೆ. ಆದ್ದರಿಂದಲೇ ಮುಖದ ಇನ್ನೊಂದು ಅರ್ಧಭಾಗವು ವಿಧಿಯಿಂದ ಸಮಸ್ತವಾದ ಸುಂದರ ಪದಾರ್ಥಗಳಿಂದ ನಿರ್ಮಿಸಲ್ಪಟ್ಟಿತು.

ನಿನ್ನ ಮುಖದ ಅರ್ಧಭಾಗವು ಅಮೃತಖಂಡವೆಂದೂ ಇನ್ನೊಂದು ಅರ್ಧಭಾಗವು ಸಕಲ ಸೌಂದರ್ಯ ಖಂಡವೆಂದೂ ಅರ್ಥ.

ಸಂಸ್ಕೃತದಲ್ಲಿ :

ವದನಂ ತವಾದ್ರಿದುಹಿರ್ವಿಜಿತಾಯ ನತಾಯ ಶೀತಕಿರಣಾಯ
ದ್ವಾರಪಪದವೀಂ ಪ್ರದದಾ ವಯಮಿಹ ದರಹಾಸನಾಮಧರಃ ||17||

ತಾತ್ಪರ್ಯ :

ಓ ಪರ್ವತ ರಾಜಪುತ್ರಿಯೇ, ನಿನ್ನಿಂದ ಸೋಲಿಸಲ್ಪಟ್ಟ ಚಂದ್ರನು ಬಾಗಿರುವನು. ಹಾಗಾಗಿ ಅವನಿಗೆ ದ್ವಾರಪಾಲಕನ ಹುದ್ದೆಯನ್ನು ನೀಡಿ, ಹಾಗೂ ಅವನನ್ನು ಈ ಭೂಮಿಯದರಹಾಸ ಕುಗ್ಗಿದ ನಗೆಎಂದು ಗುರುತಿಸಲಾಗಿದೆ.

ವಿವರಣೆ :

ಪಾರ್ವತೀದೇವಿಯೇ ! ನಿನ್ನ ಮುಖಕಾಂತಿಯಿಂದ ವಿಜಿತನಾಗಿ, ನಮ್ರನಾದ ಚಂದ್ರನಿಗೆ ನಿನ್ನ ಮುಖವು ಬಾಗಿಲುಕಾಯುವವನ ಪದವಿಯನ್ನು ಕೊಟ್ಟಿತು. ಆ ಚಂದ್ರನು ನಿನ್ನ ಮುಖದಲ್ಲಿ ಮಂದಹಾಸವೆಂಬ ಹೆಸರಿನಿಂದ ಇರುತ್ತಾನೆ.

ಸಂಸ್ಕೃತದಲ್ಲಿ :

ತೇ ತೇ ವದಂತು ಸಂತೋ ನಯನಂ ತಾಟಂಕಮಾಲಯಂ ಮುಕುಟಂ
ಕವಯೋ ವದಂ ವದಾಮಃ ಸಿತಮಹಸಂ ದೇವಿ ತೇ ಹಾಸಂ ||18||

ತಾತ್ಪರ್ಯ :

ಓ ದೇವಿ ! ಸಾಧು ಜನಗಳು ಮತ್ತು ಪುರಾತನ ಕಾಲದ ಕವಿಗಳು ಚಂದ್ರನನ್ನು ನಿನ್ನ ಕಣ್ಣುಗಳಿಗೆ, ಕಿವಿಯಾಭಾರಣ, ಕಿರೀಟ ಮತ್ತು ವಾಸಸ್ಥಾನಕ್ಕೆ ಹೋಲಿಸುವರು ! ಆದರೆ ಈಗ, ನಾವುಗಳು, ಕವಿಗಳು ಚಂದ್ರಕಾಂತಿಯನ್ನು ನಿನ್ನ ಸುಂದರ ಮಂದಹಾಸದ ಅಭಿವ್ಯಕ್ತಿಯನ್ನಾಗಿ ಪರಿಗಣಿಸುವೆವು.

ವಿವರಣೆ :

ಪಾರ್ವತೀದೇವಿಯೇ ! ಚಂದ್ರನನ್ನು ಸಜ್ಜನರು ಮತ್ತು ಹಿಂದಿನ ಕವಿಗಳು ಶಿವನ ಎಡಗಣ್ಣನ್ನಾಗಿಯೂ ದೇವಿಯ ಕಣ್ಣನ್ನಾಗಿಯೂ ದೇವಿಯ ಕಿವಿಯ ಅಲಂಕಾರವನ್ನಾಗಿಯೂ, ದೇವಿಯ ವಾಸಸ್ಥಾನವನ್ನಾಗಿಯೂ ಹೇಳುವರು. ಕವಿಗಳಾದ ನಾವು ಚಂದ್ರನನ್ನು ದೇವಿಯ ಮಂದಹಾಸವೆಂದು ಅರಿಯುತ್ತೇವೆ.

ಸಂಸ್ಕೃತದಲ್ಲಿ :

ಬಿಂಬಾಧರಸ್ಯ ಶೋಭಾಮಂಬಾಯಾಃ ಕೋ ನು ವರ್ಣಯಿತುಮೀಷ್ಟೇ
ಅಂತರಪಿ ಯಾ ಪ್ರವಿಶ್ಯ ಪ್ರಮಥಪತೇರ್ವಿತನುತೇ ರಾಗಂ ||19||

ತಾತ್ಪರ್ಯ :
ಬಿಂಬ ಫಲದಂತಿರುವ ಮಾತೆಯ ಮತ್ತೇರಿಸುವ ತುಟಿಗಳ ಸೌಂದರ್ಯವನ್ನು ಯಾರು ವರ್ಣಿಸಬಲ್ಲರು? ಅವು ಪ್ರಮಥ ಗಣಗಳ ಒಡೆಯನ ಹೃದಯವನ್ನು ಪ್ರವೇಶಿಸಿ ಪ್ರೀತಿಯನ್ನು ಪ್ರೇರೇಪಿಸುವುದು.

ಕೆಂಪು ಬಣ್ಣದ ಬಿಂಬ ಫಲದಂತಿರುವ ದೇವಿಯ ತುಟಿಗಳು ಬಣ್ಣ ಬಣ್ಣದ ರಾಗಗಳಿಂದ ಕೂಡಿದ ಪ್ರೀತಿಯನ್ನು ಮಹಾ ಸಂಯಮಿಯಾದ ಕಾಮಾರಿಯಲ್ಲಿ (ಶಿವ) ಉತ್ಪತ್ತಿಯುಂಟುಮಾಡುವುದು. ರಾಗ ಪದವು ಪ್ರೀತಿ ಹಾಗೂ ಬಣ್ಣವನ್ನೂ ಸೂಚಿಸುತ್ತದೆ.

ವಿವರಣೆ :

ಪಾರ್ವತೀದೇವಿಯ ತೊಂಡೆಹಣ್ಣಿನಂತೆ ಕೆಂಪಾದ ತುಟಿಗಳ ಕಾಂತಿಯನ್ನು ಯಾರು ತಾನೇ ವರ್ಣಿಸಲು ಸಮರ್ಥರಾಗುತ್ತಾರೆ? ಯಾವ ಕಾಂತಿಯು ಪರಮ ವಿರಕ್ತನಾದ ಪರಶಿವನ ಹೃದಯನ್ನು ಪ್ರವೇಶಿಸಿ ಅದನ್ನು ಕೆಂಪುಮಾಡುವುದಲ್ಲದೆ ಅದನ್ನು ಅನುರಕ್ತನನ್ನಾಗಿಸುತ್ತದೆ.

ಸಂಸ್ಕೃತದಲ್ಲಿ :

ಗಣಪತಯೇ ಸ್ತನಘಟಯೋಃ ಪದಕಮಲೇ ಸಪ್ತಲೋಕಭಕ್ತೇಭ್ಯಃ
ಅಧರಪುಟೇ ತ್ರಿಪುರಜಿತೇ ದಧಾಸಿ ಪಿಯೂಷಮಂಬ ತ್ವಂ ||20||

ತಾತ್ಪರ್ಯ :

ಓ ಮಾತೇ ! ಗಣಪತಿಗಾಗಿ ನೀನು ನಿನ್ನ ಸ್ಥನಕುಂಭಗಳಲ್ಲಿ ಅಮೃತವನ್ನು ಹೊಂದಿರುವೆ; ಆ ಅಮೃತವನ್ನು ನಿನ್ನ ಕೈಗಳಲ್ಲಿ ಸಪ್ತಲೋಕಗಳಲ್ಲಿರುವ ನಿನ್ನ ಭಕ್ತರಿಗಾಗಿ ಹಿಡಿದಿರುವೆ ಮತ್ತು ತ್ರೈಲೋಕಗಳನ್ನು ಜಯಿಸಿದ ಶಿವನಿಗಾಗಿ ಅದೇ ಅಮೃತವನ್ನು ನಿನ್ನ ತುಟಿಗಳಲ್ಲಿ ಹಿಡಿದಿಟ್ಟುಕೊಂಡಿರುವೆ.


ವಿವರಣೆ :

ತಾಯಿಯೇ ! ನೀನು ನಿನ್ನ ಸ್ತನಗಳಲ್ಲಿ ನಿನ್ನ ಮಗನಾದ ಗಣಪತಿಗೆ ನೀಡಲು ಅಮೃತವನ್ನು ಧರಿಸಿದ್ದೀಯೆ. ನಿನ್ನ ಕರಗಳಲ್ಲಿ ನಿನ್ನ ಭಕ್ತರಿಗೋಸ್ಕರ ಅಮೃತವನ್ನು ಹಿಡಿದಿದ್ದೀಯೆ. ನಿನ್ನ ಕೆಳದುಟಿಯಲ್ಲಿ ತ್ರಿಪುರಗಳನ್ನು ಜಯಿಸಿದ ಶಿವನಿಗೋಸ್ಕರ ಅಮೃತವನ್ನು ಧರಿಸಿರುವೆ.

ಸಂಸ್ಕೃತದಲ್ಲಿ :

ದೃಕ್ಷೀಯೂಷತಟಿನ್ಯಾಂ ನಾಸಾಸೇತೌ ವಿನಿರ್ಮಿತೇ ವಿಧಿನಾ
ಭಾಸಾಂ ಭವತಿ ಶಿವೇ ತೇ ಮುಖೇ ವಿಹಾರೋ ನಿರಾತಂಕಃ ||21||

ತಾತ್ಪರ್ಯ :

ಓ ಶಿವೆ ! ಸೃಷ್ಟಿಕರ್ತನು ನಿನ್ನ ಕಣ್ಣುಗಳ ನಡುವಿನಲ್ಲಿರುವ ಅಮೃತ ನದಿಗೆ ಮೂಗನ್ನೇ ಸೇತುವೆಯನ್ನಾಗಿ ಸೃಷ್ಟಿಸಿರುವನು. ಆದರೆ ಕಾಂತಿಯುಕ್ತವಾದ ಬೆಳಕು ಯಾವುದೇ ಅಡೆತಡೆಗಳಿಲ್ಲದೆ ಸ್ವೇಚ್ಛೆಯಾಗಿ ನಿನ್ನ ಮುಖದಲ್ಲಿ ಸಂಚರಿಸುವುದು.

ವಿವರಣೆ :

ಪಾರ್ವತೀದೇವಿಯೇ ! ನಿನ್ನ ದೃಷ್ಟಿ ಎಂಬ ಅಮೃತ ನದಿಯಲ್ಲಿ ಮೂಗೆಂಬ ಸೇತುವೆಯು ವಿಧಿಯಿಂದ ನಿರ್ಮಿಸಲ್ಪಟ್ಟಿತು. ಆದ್ದರಿಂದಲೇ ನಿನ್ನ ಮುಖದ ಕಾಂತಿಗಳಿಗೆ ನಿರಾತಂಕವಾದ ಓಡಾಟವು ಮುಖದಲ್ಲಿ ಆಗುತ್ತದೆ. ಆ ಸೇತುವೆ ಇಲ್ಲದಿದ್ದರೆ, ದೃಗಮೃತವಾದ ನದಿಯಲ್ಲಿ ಮುಖದ ಕಾಂತಿಯು ಕೊಚ್ಚಿಹೋಗುತ್ತಿತ್ತು.

ಸಂಸ್ಕೃತದಲ್ಲಿ :


ಕಮಲಾವಿಲಾಸಭವನಂ ಕರುಣಾಕೇಲೀಗೃಹಂ ಚ ಕಮನೀಯೇ
ಹರದಯಿತೇ ತೇ ವಿನಿತಹಿತೇ ನಯನೇ ತೇ ಜನನಿ ವಿಜಯೇತೇ ||22||

ತಾತ್ಪರ್ಯ :

ಓ ಮಾತೇ ! ಹರನ ಪ್ರಿಯೆಯೇ ! ಹರನಿಗೆ ಅತ್ಯಮೂಲ್ಯವಾದ ನಿನ್ನ ಸುಂದರ ಕಣ್ಣುಗಳಿಗೆ ಜಯವಾಗಲಿ, ಅದು ಲಕ್ಷ್ಮಿಯ ವಾಸಸ್ಥಾನ, ಲಾವಣ್ಯದ ಆಟದ ಮೈದಾನ. ತಮ್ಮ ಶಿರವನ್ನು ನಿನ್ನಲ್ಲಿ ಬಾಗಿಸುವ ಭಕ್ತರಿಗೆ ಅದು ಅನುಗ್ರಹವನ್ನು ದಯಪಾಲಿಸುತ್ತದೆ.

ವಿವರಣೆ :

ತಾಯಿಯೇ ! ಹರನ ಪ್ರಿಯೆಯೇ ! ನಿನ್ನ ಎರಡೂ ಕಣ್ಣುಗಳು ಅತ್ಯಂತ ಮನೋಹರವಾಗಿದ್ದು ಲಕ್ಷ್ಮಿಯ ವಾಸಸ್ಥಾನವಾಗಿಯೂ, ಕರುಣಾರಸದ ರೂಪವಾಗಿಯೂ ಇದ್ದು ಭಕ್ತರಿಗೆ ಹಿತವನ್ನು ಮಾಡುತ್ತಾ ಜಯಶೀಲವಾಗಿದೆ.

ಸಂಸ್ಕೃತದಲ್ಲಿ :

ಸರ್ವಾಣ್ಯಾಪ್ಯಂಗಾನಿ ಶ್ರೀಮಂತಿ ತವೇಂದುಚೂಡಕುಲಕಾಂತೇ
ಕವಿನಿವಹವಿನುತಿಪಾತ್ರೇ ಶ್ರೋತ್ರೇ ದೇವಿ ಶ್ರಿಯಾವೇವ ||23||

ತಾತ್ಪರ್ಯ :

ಓ ಇಂದುಚೂಡನ (ಶಿರದಲ್ಲಿ ಚಂದ್ರನನ್ನು ಧರಿಸಿದ) ಪತ್ನಿಯೆ ! ನಿನ್ನ ಎಲ್ಲ ಅಂಗಾಂಗಗಳೂ ಅತ್ಯಂತ ಪವಿತ್ರವಾದದ್ದು. ಆದರೂ, ದೇವಿಯೇ, ಕವಿಗಳು ಹೊಗಳಲ್ಪಟ್ಟ ನಿನ್ನ ಕಿವಿಗಳು ತಮ್ಮಿಂದಲೇ ಸಂಪತ್ತಾಗಿರುವುದು (ಶ್ರೀ).

ದೇವಿಯ ಮಂಗಳಕರ ಕಿವಿಗಳನ್ನು ಹಿಂದಿನ ಸ್ತಬಕದಲ್ಲೂ ವರ್ಣಿಸಲಾಗಿದೆ. ಛಾಂದೋಗ್ಯದ ಐದನೇ ಪ್ರಪತ್ತಕದಲ್ಲೂಕಿವಿಗಳು ಸಂಪತ್ತುಎಂಬ ಸಮಾನ ವಿವರಣೆಗಳನ್ನು ಗಮನಿಸಬಹುದು. ಸಮಸ್ತ ಜ್ಞಾನಗಳನ್ನೂ ಶಬ್ದದ ಮೂಲಕವೇ ಗ್ರಹಿಸಬೇಕು ಮತ್ತು ಇದು ಕಿವಿಗಳ ಮೂಲಕವೇ ಬರಬೇಕು.



ವಿವರಣೆ :

ಚಂದ್ರಚೂಡನ ಕುಲಾಂಗನೆಯೇ! ನಿನ್ನ ಸರ್ವಾಂಗಗಳೂ ಶ್ರೀ ಉಳ್ಳದ್ದಾಗಿದೆ. ಆದರೆ ಕವಿಗಳ ಸ್ತೋತ್ರಾಧಾರವಾದ ನಿನ್ನ ಕಿವಿಗಳುಶ್ರೀಯೇಆಗಿವೆ.

ಅದು ಹೇಗೆಂದರೆ ಛಾಂದೋಗ್ಯೋಪನಿಷತ್ತಿ ನಲ್ಲಿ ಯೋ ವೈ ಜ್ಯೇಷ್ಠಂ ಶ್ರೇಷ್ಠಂ ವೇದ ಎಂದು ಆರಂಭಿಸಿ ಅಥ ಹೈನಂ ಶ್ರೋತ್ರಮುವಾಚ ಯದಹಂ ಸಂಪದಸ್ಮಿ ತ್ವಂ ತತ್ಸಂಪದಸಿ ಎಂಬ ಮಾತಿನ ಸರ್ವರಹಸ್ಯದಲ್ಲಿದೆ. ನಾವು ಸಂಪಾದಿಸುವ ಎಲ್ಲ ವಿದ್ಯೆಗಳೂ ಶಬ್ದಾತ್ಮಕವಾಗಿ ಕಿವಿಯಲ್ಲಿ ಸನ್ನಿಹಿತವಾಗಿರುವುದರಿಂದಶ್ರೋತೃವೇ ಸಂಪತ್ತೆಂದು ಹೇಳಿರುವರು.

ಸಂಸ್ಕೃತದಲ್ಲಿ :

ಅಪಿ ಕುಟಿಲಮಲಿನಮುಗ್ಧಸ್ತವ ಕೇಶಃ ಪುತ್ರಿ ಗೋತ್ರಸುತ್ರಾಮ್ಣಃ
ಬಿಭ್ರತ್ಸುಮಾನಿ ಕಾನ್ಯಪಿ ಹೃದಯಂ ಭುವನಪ್ರಭೋರ್ಹರತಿ ||24||

ತಾತ್ಪರ್ಯ :

ಓ ಪರ್ವತರಾಜನ ಪುತ್ರಿಯೇ ! ಸಾಮಾನ್ಯ ಪುಷ್ಪಗಳಿಂದ ಕೂಡಿದ ನಿನ್ನ ಕಪ್ಪಾದ ಗುಂಗುರು ಕೂದಲು ಜಗದೊಡೆಯನ ಹೃದಯವನ್ನು ಗೆದ್ದಿರುವುದು.

ಇಲ್ಲಿ, ಮಲಿನ ಎಂಬ ಪದಕ್ಕೆ ಕಪ್ಪು ಎಂದು ಅರ್ಥೈಸಲಾಗಿದೆ.

ವಿವರಣೆ :

ಕೌಟಿಲ್ಯ ಮಾಲಿನ್ಯ ಮತ್ತು ಮುಗ್ಧವಾದ ದೇವಿಯ ಕೇಶಪಾಶವು ಭುವನವಲ್ಲಭನಾದ ಪರಶಿವನ ಮನಸ್ಸನ್ನು ಸಾಮಾನ್ಯವಾದ ಹೂವನ್ನು ಮುಡಿದೂ, ಆಕರ್ಷಿಸುತ್ತದೆ. ಇದು ವಿರುದ್ಧವೇ ಸರಿ. ಆದರೆ ಡೊಂಕು ಡೊಂಕಾದ ಕಪ್ಪು ಬಣ್ಣವುಳ್ಳ ಸುಂದರವಾದ ಕೇಶಪಾಶವು ನಿನ್ನದು ಎಂದು ಆರ್ಥ ಮಾಡಿ ವಿರೋಧವನ್ನು ಪರಿಹರಿಸಬೇಕು.

ಸಂಸ್ಕೃತದಲ್ಲಿ :

ಚರಣಾದಿಕುಂತಲಾಂತಪ್ರಕೃಷ್ಟಸೌಂದರ್ಯಗಾಯಿನೀರೇತಾಃ
ಅಂಗೀಕರೋತು ಶಂಭೋರಂಭೋಜದೃಗಾತ್ಮಜಸ್ಯಾರ್ಯಾಃ ||25||          275

ತಾತ್ಪರ್ಯ :

ಶಂಭುವಿನ ಪ್ರೀತಿಯ ಮಡದಿಯ ಪಾದದಿಂದ ತಲೆಯ ಕೂದಲಿನವರೆಗೂ ಪುತ್ರ ಗಣಪತಿಗೆ ಪ್ರೀತಿಯಾದ ಆರ್ಯಾವೃತ್ತದ ಛಂದಸ್ಸಿನಲ್ಲಿ ವಿವರಿಸಿರುವ ಪ್ರಾರ್ಥನೆಯನ್ನು ಒಪ್ಪಿಸಿಕೊಳ್ಳಲಿ.

ವಿವರಣೆ :

ಶುಭಸುಂದರಿಯಾದ ಉಮಾದೇವಿಯು ಪಾದಾದಿಕೇಶಾಂತವಾದ ಮತ್ತು ಆರ್ಯ ಎಂಬ ಛಂದಸ್ಸಿನಲ್ಲಿ ರಚಿಸಲ್ಪಟ್ಟಿರುವ ಹಾಗೂ ಮಗನಾದ ಗಣಪತಿಯಿಂದ ಮಾಡಲ್ಪಟ್ಟ ಈ ಸ್ತೋತ್ರವನ್ನು ಸ್ವೀಕರಿಸಿ ಅನುಗ್ರಹಿಸಲಿ.

ಇಲ್ಲಿಗೆ ಹನ್ನೊಂದನೇ ಸ್ತಬಕವು ಸಂಪೂರ್ಣವಾಯಿತು.

ಪುಷ್ಪಗುಚ್ಛ (ಸ್ತಬಕ) – 12 ; ಛಂದಸ್ಸುರಥೋದ್ಧತಾವೃತ್ತಂ; ಶೃಂಗಾರವರ್ಣನೆ

ಸಂಸ್ಕೃತದಲ್ಲಿ

ಶರ್ವಧೈರ್ಯಗುಣಶಾತಶಸ್ತ್ರಿಕಾ ಶಂಬರಾರಿಜಯಕೇತುಪಟ್ಟಿಕಾ
ಮಂದಹಾಸಿಕಲಿಕಾ ಮದಾಪದಂ ಪರ್ವತೇಂದ್ರುದುಹಿತುರ್ವ್ಯಪೋಹತು ||1||

ತಾತ್ಪರ್ಯ :

ಪರ್ವತರಾಜನ ಪುತ್ರಿಯ ಅರಳುತ್ತಿರುವ ಮುಗುಳ್ನಗುವು ಶರ್ವನ ದೃಢತೆಯ ರೂಪದಲ್ಲಿ ಹಗ್ಗದ ಮೇಲಿನ ಹರಿತವಾದ ಖಡ್ಗದಂತೆ ವರ್ತಿಸುವುದು. ಅದು ಶಂಬರನ ಶತ್ರುವಾದ ಮನ್ಮಥನ ವಿಜಯಪತಾಕೆ. ಆ ಮುಗುಳ್ನಗುವು ನನ್ನ ತೊಂದರೆಗಳನ್ನು ನಿವಾರಿಸಲಿ.
ಈ ಶ್ಲೋಕದಲ್ಲಿನಕಲಿಕಾಪದವು ಮನ್ಮಥನ ಬಾಣಗಳಲ್ಲಿ ಉಪಯೋಗಿಸುವ ಪುಷ್ಪಗಳನ್ನು ಸೂಚಿಸುತ್ತದೆ.

ವಿವರಣೆ :

ಪರಶಿವನಿಗೆ ಮನಸ್ಸಿನ ವಿಕಾರಗಳಿಲ್ಲ. ಅವನ ಧೈರ್ಯವೆಂಬ ಗುಣವನ್ನು (ಹಗ್ಗವನ್ನು) ಕತ್ತರಿಸುವ ಹರಿತವಾದ ಕತ್ತರಿಯಂತೆ ದೇವಿಯ ಮಂದಹಾಸ ಇರುತ್ತದೆ. ಅವಳ ಮಂದಹಾಸವು ಮನ್ಮಥನ ವಿಜಯಧ್ವಜ ದಂತಿರುತ್ತದೆ. ಪರ್ವತೇಂದ್ರನ ಮಗಳಾದ ಪಾರ್ವತೀದೇವಿಯ ಆ ಮಂದಹಾಸವೆಂಬ ಮೊಗ್ಗು ನನ್ನ ವಿಪತ್ತುಗಳನ್ನು ಪರಿಹರಿಸಲಿ.

ಸಂಸ್ಕೃತದಲ್ಲಿ :

ಮುಕ್ತಭೋಗಿಕಟಕೇನ ಪಾಣಿನಾ ಮುಗ್ಧಗಾತ್ರಿ ಪರಿಗೃಹ್ಯ ತೇ ಕರಂ
ಏಕದಾ ಶಶಿಕಿಶೋರಶೇಖರಃ ಸಂಚಚಾರ ರಜತಾದ್ರಿಭೂಮಿಷು ||2||
ತಾತ್ಪರ್ಯ :

ಓ ಮೃದುವಾದ ದೇವಿಯೇ ! ಶಿವನು ತನ್ನ ತೊಳಲ್ಲಿದ್ದ ಸರ್ಪದ ಕಂಕಣವನ್ನು ತ್ಯಜಿಸಿ ನಿನ್ನ ಹಸ್ತವನ್ನು ತನ್ನ ಹಸ್ತದಲ್ಲಿ ಹಿಡಿದುಕೊಂಡು ಕೆಲವು ಕಾಲದ ಹಿಂದೆ ಸೌಮ್ಯ ರೂಪದಲ್ಲಿ ಬೆಳ್ಳಿ ಬೆಟ್ಟದ ಮೇಲೆ ನಿಧಾನವಾಗಿ ಸುತ್ತಾಡಿದನು.

ಈ ಶ್ಲೋಕದಲ್ಲಿ ಶಿವನು ಅರ್ದಚಂದ್ರನನ್ನು ಆಭರಣವಾಗಿ ಧರಿಸಿ, ಪ್ರೇಮವನ್ನು ಸೂಚಿಸುವ ಲಹರಿಯಲ್ಲಿರುವುದನ್ನು ಚಿತ್ರಿಸುತ್ತದೆ. ಶಿವನು ಜುಗುಪ್ಸೆ ತರುವ ತನ್ನ ಜಟೆ, ಹಾವಿನ ಕಂಕಣಗಳು, ಗಜಚರ್ಮ, ಇತ್ಯಾದಿ ಅಲಂಕರಣಗಳನ್ನು ತ್ಯಜಿಸಿ ತನ್ನ ಮಲಿನವಲ್ಲದ ಹಸ್ತದಿಂದ ಉಮಾದೇವಿಯ ಮೃದುವಾದ ಹಸ್ತಗಳನ್ನು ಹಿಡಿದುಕೊಂಡಿರು ವನು. ಈ ಹಿಂದೆ ಶಿವ-ಪಾರ್ವತಿಯರ ವಿವಾಹದ ಸಮಯದಲ್ಲಿನ ಶಿವನ ರೂಪವರ್ಣನೆಯಾದ, “ನಿನ್ನೊಂದಿಗೆ ಸಂತೋಷದ ಸಮಯವನ್ನು ಕಳೆಯಲು ಶಿವನು ಸಂತುಷ್ಟಿಗೊಳಿಸುವ ರೂಪವನ್ನು ಧರಿಸಿದನುಎಂಬುದನ್ನು ಇಲ್ಲಿ ಸ್ಮರಿಸಲಾಗಿದೆ.

ವಿವರಣೆ :

ಸುಂದರಾಂಗಿಯೇ ! ಒಂದು ಬಾರಿ ಪರಶಿವನು ತನ್ನ ಕೈಯಲ್ಲಿರುವ ಸರ್ಪಗಳೆಂಬ ಬಳೆಗಳನ್ನು ತೆಗೆದ ಕೈಯುಳ್ಳವನಾಗಿ, ನಿನ್ನ ಕೈಯನ್ನು ಹಿಡಿದುಕೊಂಡು ಕೈಲಾಸಪರ್ವತದ ಪ್ರದೇಶಗಳಲ್ಲಿ ಸಂಚರಿಸಿದನು.

ಸಂಸ್ಕೃತದಲ್ಲಿ :

ತಸ್ಯ ತತ್ರ ಪರಿತಃ ಪರಿಭ್ರಮನ್ ವಲ್ಲಭಾಂ ವಕುಲಪುಷ್ಪಚುಂಬಿನೀಂ
ಪಾರ್ವತಿ ತ್ವದಲಕೋಪಮದ್ವಿತಿಃ ಚ್ಂಚರೀಕತರುಣೋ ಮನೋsಧುನೋತ್ ||3||





ತಾತ್ಪರ್ಯ :

ಓ ಪಾರ್ವತಿ ! ನಿನ್ನ ಜಡೆಬಿಲ್ಲೆಯಿಂದ ಹೊರಬರುತ್ತಿರುವ ಕಾಂತಿಯಂತೆ, ಒಂದು ಎಳೆಯ ದುಂಬಿಯು, ಮತ್ತೊಂದು ಹೆಣ್ಣುದುಂಬಿಯು ಬಕುಳ ಪುಷ್ಪದ ಸುವಾಸನೆಗೆ ಆಕರ್ಷಿತವಾಗಿ, ಅದಕ್ಕೆ ಮುತ್ತಿಕ್ಕುತ್ತಾ, ಸುತ್ತ ಹಾರಾಡುತ್ತಾ ಇರುವುದನ್ನು ನೋಡಿ ಶಿವನ ಮನಸ್ಸು ಉತ್ಸಾಹಿತವಾಯಿತು.

ವಿವರಣೆ :

ಪಾರ್ವತಿಯೇ ! ಆ ರಜತಾದ್ರಿಯಲ್ಲಿ ವಕುಲವೆಂಬ ಪುಷ್ಪದ ಸುತ್ತಲೂ ಓಡಾಡುತ್ತಲಿದ್ದು, ಅದರ ರಸವನ್ನು ಆಸ್ವಾದಿಸುವ ಪ್ರಿಯೆಯ ಸುತ್ತಲೂ ಓಡಾಡುತ್ತಿರುವ, ನಿನ್ನ ಮುಂಗುರುಳುಗಳ ಕಾಂತಿಯನ್ನು ಹೊತ್ತಿರುವ ಯುವಾವಸ್ಥೆಯಲ್ಲಿರುವ ದುಂಬಿಯು ಪರಶಿವನ ಮನಸ್ಸನ್ನು ಅಲುಗಿಸಿತು.

ಸಂಸ್ಕೃತದಲ್ಲಿ :

ಪ್ರೇಯಸೀಂ ಚಪಲಚಾರುಲೋಚನಾಮುಲ್ಲಿಖನ್ ವಪುಷಿ ಶೃಂಗಕೋಟಿನಾ
ತದ್ವಿಲೋಕಿತನಿಭೈರ್ವಿಲೋಕಿತೈಃ ಧೂರ್ಜಟೀರಮದಯನ್ಮನೋ ಮೃಗಃ ||4||

ತಾತ್ಪರ್ಯ :

ಸಾರಂಗವೊಂದು ತನ್ನ ಪ್ರೀತಿಯ ಜಿಂಕೆಯ ಶರೀರವನ್ನು ತನ್ನ ಕೊಂಬಿನ ತುದಿಯಿಂದ ಮೃದುವಾಗಿ ಉಜ್ಜುತ್ತಿರುವಾಗ, ಆ ಜಿಂಕೆಯ ಸುಂದರವಾದ ಮಿನುಗುತ್ತಿರುವ ಕಣ್ಣುಗಳು ನಿನ್ನ ನೋಟವನ್ನು ಹೋಲುವಂತಿರುವುದನ್ನು ನೋಡಿದಾಗ ಧೂರ್ಜಟಿಯ ಮನಸ್ಸು ಪ್ರಚೋದನೆಗೊಳಗಾಯಿತು.

ವಿವರಣೆ :

ಗಂಡು ಜಿಂಕೆಯು ಚಂಚಲವಾದ ಮತ್ತು ಸುಂದರವಾದ ಕಣ್ಣುಳ್ಳ ಹೆಣ್ಣು ಜಿಂಕೆಯ ಶರೀರವನ್ನು ತನ್ನ ಕೊಂಬಿನ ತುದಿಯಿಂದ ಕೆರೆಯಿತು. ನಿನ್ನ ನೋಟದಂತಿರುವ ತನ್ನ ನೋಟದಿಂದ ಪರಶಿವನ ಮನಸ್ಸಿನಲ್ಲಿ ವ್ಯಾಮೋಹವನ್ನು ಉಂಟುಮಾಡಿತು.

ಸಂಸ್ಕೃತದಲ್ಲಿ :

ಮಂಜುಕುಂಜಭವನಾನಿ ಮಾಲತೀಪುಷ್ಪರೇಣುಸುರಭಿಃ ಸಮೀರಣಃ
ಪೇಶಲಾ ಚ ಪಿಕಬಾಲಕಾಕಲೀ ಮೋಹಮೀಶ್ವರಿ ಹರಸ್ಯ ತೇನಿರೇ ||5||

ತಾತ್ಪರ್ಯ :

ಓ ಈಶ್ವರಿ ! ಬಳ್ಳಿಯಿಂದಾವೃತವಾದ ಗುಡಿಸಲು, ಮಾಲತೀ ಪುಷ್ಪಗಳ ಪರಾಗದಿಂದ ಹೊರಬಂದ ಸುಗಂಧವು ಗಾಳಿಯಲ್ಲಿ ಸೇರಿರುವ ಮತ್ತು ಪರ್ವತದ ಮೇಲಿರುವ ಕಿರಿಯ ಕೋಗಿಲೆಯಿಂದ ಮಧುರವಾದ ಶಬ್ದಗಳಿಂದ ಕೂಡಿದ ಸುಂದರ ವಾತಾವರಣವು ಹರನನ್ನು ಪ್ರಚೋದಿಸಿತು.

ವಿವರಣೆ :

ಈಶ್ವರಿಯೇ ! ಆ ರಜಾತಾದ್ರಿಯಲ್ಲಿ ಮನೋಹರವಾದ ಲತಾಕುಂಜಗಳಲ್ಲಿ ಹೂವುಗಳಿಂದ ಸುವಾಸಿತವಾದ ಗಾಳಿಯು ಬೀಸುತ್ತಿತ್ತು. ಬಾಲ ಕೋಗಿಲೆಯ ಇಂಪಾದ ಧ್ವನಿಯು ಕೇಳಿಬರುತ್ತಿತ್ತು. ಇವೆಲ್ಲವೂ ಪರಶಿವನಿಗೆ ಮೋಹವನ್ನು ಉಂಟುಮಾಡಿತು.

ಸಂಸ್ಕೃತದಲ್ಲಿ :

ಅಗ್ರತಃ ಕುಸುಮಶೋಭಿತಾ ಲತಾಃ ಪಾರ್ಶ್ವತಸ್ತ್ವಮಗಪಾಲಬಾಲಿಕೇ
ಸರ್ವತೋ ಮದನಶಿಂಜಿನೀಧ್ವನಿರ್ಧೀರತಾ ಕಥಮಿವಾಸ್ಯ ವರ್ತತಾಂ ||6||

ತಾತ್ಪರ್ಯ :

ಓ ಪಾರ್ವತಿ ! ನೀನು ಹರನೊಂದಿಗಿರುವಾಗ, ಅವನ ಮುಂದೆ ಬಳ್ಳಿಗಳು ಪುಷ್ಪದಿಂದ ತುಂಬಿರುವಾಗ ಮತ್ತು ಮನ್ಮಥನ ಬಿಲ್ಲಿನಿಂದ ಹೊರಬಿದ್ದ ಠೇಂಕಾರವು ಎಲ್ಲೆಲ್ಲೂ ಕೇಳಿಸುತ್ತಿರುವಾಗ ಎಷ್ಟು ಕಾಲ ಹರನು ತನ್ನ ಸಂಯಮವನ್ನು ಕಾಯ್ದುಕೊಳ್ಳಲು ಸಾಧ್ಯ.

ಕೋಗಿಲೆಯಿಂದ ಹೊರಬರುವ ಶಬ್ದವನ್ನು ಅನೇಕ ಬಾರಿ ಮನ್ಮಥನ ಬಿಲ್ಲಿನಿಂದ ಹೊರಬರುವ ಠೇಂಕಾರಕ್ಕೆ ಹೋಲಿಸಲಾಗಿದೆ.

ವಿವರಣೆ :

ಶಿವನ ಮುಂದುಗಡೆ ಅರಳಿದ ಪುಷ್ಪಗಳಿಂದ ಅಲಂಕೃತವಾದ ಬಳ್ಳಿಗಳು ಇದ್ದವು. ಪಕ್ಕದಲ್ಲಿ ತ್ರೈಲೋಕ್ಯಸುಂದರಿಯಾದ ನೀನು ಇದ್ದೆ. ಸುತ್ತಲೂ ಮನ್ಮಥನ ಮೌರ್ವಿಯ ಮನೋಹರವಾದ ಧ್ವನಿಯಿದ್ದಿತು. ಹೀಗಿರುವಾಗ ನಿನ್ನ ಕಾಂತನಿಗೆ ಹೇಗೆ ತಾನೇ ಮನಸ್ಸಿನಲ್ಲಿ ಧೈರ್ಯವಿದ್ದೀತು?

ಮುಂದುಗಡೆ, ಪಕ್ಕದಲ್ಲಿ, ಎಲ್ಲೆಡೆ ಮನಸೆಳೆಯುವ ಸಾಮಗ್ರಿಗಳಿದ್ದಾಗ ಅದು ಹೇಗೆ ಮನಸ್ಸಿನಲ್ಲಿ ಧೈರ್ಯ ಇದ್ದೀತು?

ಸಂಸ್ಕೃತದಲ್ಲಿ :

ಕೀರಕೂಜಿತಸಮಾಕುಲೇ ವನೇ ಶಂಭುಮಂಬ ತವ ಪಾರ್ಶ್ವವರ್ತಿನಂ
ಆಜಘಾನ ಮಕರಧ್ವಜಶ್ಶರೈರರ್ದಯಂತ್ಯವಸರೇ ಹಿ ಶತ್ರವಃ ||7||

ತಾತ್ಪರ್ಯ :

ಓ ಮಾತೇ ! ಗಿಣಿಗಳ ಸುಮಧುರ ಉಲಿತದಿಂದ ಆವೃತವಾದ ವನದಲ್ಲಿ, ಶಂಭುವು ನಿನ್ನ ಬಳಿ ಇರುವ ಸರಿಯಾದ ಸಮಯವನ್ನು ನೋಡಿಕೊಂಡು ಮನ್ಮಥನು ತಃಕ್ಷಣವೇ ಶಂಭುವೆಡೆಗೆ ಬಾಣವನ್ನು ಬಿಟ್ಟನು. ಸಂದರ್ಭವು ಅನುಕೂಲಕರವಾಗಿದ್ದಾಗ ಶತ್ರುಗಳು ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವರು.

ವಿವರಣೆ :

ತಾಯಿಯೇ ! ರಜಾತಾದ್ರಿಯಲ್ಲಿ ಸುತ್ತಲೂ ಗಿಳಿಗಳು ಧ್ವನಿಮಾಡುತ್ತಿದ್ದವು. ಆಗ ನಿನ್ನ ಪಕ್ಕದಲ್ಲಿದ್ದ ಶಿವನನ್ನು ತನ್ನ ಬಾಣಗಳಿಂದ ಮನ್ಮಥನು ಹೊಡೆದನು. ಶತ್ರುಗಳು ಯಾವಾಗಲೂ, ಸಮಯ ಒದಗಿದಾಗ ಪೀಡಿಸುತ್ತಾರಲ್ಲವೇ?

ಸಂಸ್ಕೃತದಲ್ಲಿ :

ತಾಡಿತೋ ಮಕರಕೇತುನಾ ಶರೈರಂಸದೇಶಮವಲಂಬ್ಯ ಪಣಿನಾ
ಏಕಹಾಯನಕುರಂಗಲೋಚನಾಂ ತ್ವಾಮಿದಂ ಕಿಲ ಜಗಾದ ಶಂಕರಃ ||8||

ತಾತ್ಪರ್ಯ :

ಓ ದೇವಿ ! ಮನ್ಮಥನ ಬಾಣವು ಶಂಕರನಿಗೆ ನಾಟಿದಾಗ, ಅವನು ತನ್ನ ತೋಳುಗಳಿಂದ ನಿನ್ನ ಭುಜಗಳನ್ನು ಬಳಸಿ ಮೋಡಿಮಾಡುವ ಆಸೆಗಣ್ಣುಗಳಿಂದ ನೋಡುತ್ತಿರುವ ಜಿಂಕೆಯಂತೆ ನಿನ್ನೊಡನೆ ಮಾತನಾಡಲಿಲ್ಲವೇ?

ಕವಿಯು ಶಿವೆಯೆಡಗಿನ ಶಿವನ ಪ್ರಣಯಭರಿತ ಪಿಸುಮಾತುಗಳನ್ನು ಮುಂದಿನ ಶ್ಲೋಕಗಳಲ್ಲಿ ವಿವರಿಸುವರು.

ವಿವರಣೆ :

ಮನ್ಮಥನ ಬಾಣಗಳಿಂದ ಹೊಡೆಯಲ್ಪಟ್ಟ ಆ ಶಿವನು ವೇದನೆಯಿಂದ ನಿನ್ನ ಭುಜಗಳನ್ನು ಆಲಂಗಿಸಿಕೊಂಡು ಒಂದು ವರ್ಷವಾಗಿರುವ ಜಿಂಕೆಯಂತೆ ಕಣ್ಣುಳ್ಳ ನಿನ್ನನ್ನು ಕುರಿತು ಹೇಳಿದನು.

ಸಂಸ್ಕೃತದಲ್ಲಿ :

ಕಾಕಲೀಕಲಕಲಂ ಕರೋತ್ಯಸೌ ಬಾಲಚೂತಮಧಿರುಹ್ಯ ಕೋಕಿಲಾ
ವಾಚಮುದ್ಗಿರ ಸರೋಜಲೋಚನೇ ಗರ್ವಮುನ್ನತಮಿಯಂ ವಿಮುಂಚತು ||9||

ತಾತ್ಪರ್ಯ :

ಓ ಕಮಲದಾ ಕಣ್ಣುಳ್ಳ ದೇವಿಯೇ ! ಚಿಗುರೆಲೆಯಿಂದ ಕೂಡಿದ ಮಾವಿನ ವೃಕ್ಷದ ಮೇಲೆ ಕುಳಿತಿರುವ ಕೋಗಿಲೆಯು ಮಧುರವಾದ ಧ್ವನಿಯನ್ನು ಹೊರಡಿಸುತ್ತಿದೆ. ನೀನು ಒಂದೇ ಪದವನ್ನು ಮಾತನಾಡಿದರೂ ಸಾಕು ಆ ಕೋಗಿಲೆಯು ತನ್ನ ತಿರಸ್ಕಾರದ ಅಹಂಕಾರವನ್ನು ತ್ಯಜಿಸುವುದು.

ಇಲ್ಲಿ ಶಂಕರನು ಪಾರ್ವತಿಯ ಧ್ವನಿಯನ್ನು ಆಲಿಸಲು ಕಾತುರನಾಗಿರುವನೆಂದು ಸೂಚಿಸಲಾಗಿದೆ.

ವಿವರಣೆ :

ನಮ್ಮ ಎದುರುಗಡೆ ಈ ಹೆಣ್ಣು ಕೋಗಿಲೆಯು ಪುಟ್ಟ ಮಾವಿನ ಮರವನ್ನೇರಿ ಸೂಕ್ಷ್ಮವಾದ, ಅವ್ಯಕ್ತ ಮಧುರವಾದ ಕಲರವವನ್ನು ಮಾಡುತ್ತಿದೆ. ಕೇಳಲು ಇಂಪಾದ ಧ್ವನಿಯನ್ನು ತಾನು ಮಾಡುತ್ತೇನೆಂದು ಅದು ಗರ್ವಪಡುವಂತಿದೆ. ಅದಕ್ಕಿಂತಲೂ ಚೆನ್ನಾಗಿ ನಿನ್ನ ಧ್ವನಿಯು ಇಂಪಾಗಿದೆ. ನನಗೆ ಅದು ಕರ್ಣಾಮೃತವಾಗಿದೆ ಎಂದು ಭಾವ. ಅದರಿಂದ ಆ ಕೋಗಿಲೆಯು ತನ್ನ ಗರ್ವವನ್ನು ಬಿಡಲಿ.

ಸಂಸ್ಕೃತದಲ್ಲಿ :

ಪುಲ್ಲಕುಂದಮಕರಂದವಾಹಿನೋ ಮಲ್ಲಿಕಾಮುಕುಲಧೂಲಿಧಾರಿಣಃ
ಕಂಪಯಂತಿ ಶಿಶಿವಃ ಸಮೀರಣಾಃ ಪಲ್ಲವಾನಿ ಹೃದಯಂ ಚ ತನ್ವಿ ಮೇ ||10||

ತಾತ್ಪರ್ಯ :

ಓ ಅಪ್ರತಿಮ ಸೌಂದರ್ಯವತಿಯೇ ! ಅರಳುತ್ತಿರುವ ಕುಂದ ಪುಷ್ಪದ ಮೇಲೆ ಬೀಸುತ್ತಿರುವ ಜೇನಿನಿಂದ ಕೂಡಿದ, ಮತ್ತು ಮಲ್ಲಿಕಾ ಪುಷ್ಪದ ಪರಾಗದಿಂದ ಕೂಡಿದ, ಸೌಮ್ಯ ಕುಳಿರ್ಗಾಳಿಯು, ಎಲೆಗಳನ್ನು ನನ್ನ ಹೃದಯದೊಂದಿಗೆ ಚಲಿಸುವಂತೆ ಮಾಡುತ್ತಿದೆ.

ವಿವರಣೆ :

ಸುಂದರಿಯೇ ! ಕುಂದಪುಷ್ಪದ ಮಕರಂದವನ್ನು ಹೊತ್ತಿರುವ, ಮಲ್ಲಿಗೆಯ ಮೊಗ್ಗಿನ ಧೂಳನ್ನು ಹೊತ್ತಿರುವ ಮಂದಮಾರುತಗಳು, ನನ್ನ ಹೃದಯವನ್ನೂ ಚಿಗುರುಗಳನ್ನು ಕಂಪಿಸುವಂತೆ ಮಾಡುತ್ತವೆ.

ಸಂಸ್ಕೃತದಲ್ಲಿ :

ವರ್ಣನೇನ ಹೃತಚಕ್ಷುಷಃ ಶ್ರಿಯಃ ಸುಪ್ರಸನ್ನಮಧುರಾಕೃತೀನಿ ತೇ
ಅಂಗಕಾನಿ ದಯಿತೇ ಭಜೇsರ್ಭಕಃ ಸ್ವೇದಬಿಂದುಹರಣೇನ ವಾsನಿಲಃ ||11||

ತಾತ್ಪರ್ಯ :

ಓ ನನ್ನ ಪ್ರಿಯತಮೆ ! ನಿನ್ನ ಹಿತಕರವಾದ ಆಕರ್ಷಕ ರೂಪದಲ್ಲಿನ ಅಂಗಾಂಗಗಳ ಕಾಂತಿಯು, ತಂಪಾದ ಕುಳಿರ್ಗಾಳಿಯು ಬೆವರು ಹನಿಗಳನ್ನು ಹೋಗಲಾಡಿಸುವಂತೆ, ವಿವರಿಸುವ ಮೂಲಕ ನಾನು ನಿನ್ನನ್ನು ಸೇವಿಸುವೆ.

ವಿವರಣೆ :

ದೇವಿಯೇ ! ನಿನ್ನ ಅಂಗಾಂಗಗಳ ಚೆಲುವು ನನ್ನ ಕಣ್ಣಿನ ದೃಷ್ಟಿಯನ್ನು ಅಪಹರಿಸಿದೆ. ಅಂತಹ ಯಾವ ನ್ಯೂನತೆಯೂ ಇಲ್ಲದ ನಿನ್ನ ಅಂಗಾಂಗಗಳ ಅಯಾಸದಿಂದುಂಟಾದ ಬೆವರನ್ನು ಮಂದಮಾರುತವು ಹೋಗಲಾಡಿಸುವಂತೆ ನಾನು ಉಪಚರಿಸಿ ಹೋಗಲಾಡಿಸುತ್ತೇನೆ.

ಸಂಸ್ಕೃತದಲ್ಲಿ :

ತಾವದೇವ ಮಮ ಚೇತಸೋ ಮುದೇ ಬರ್ಹಮೇತದನಘಾಂಗಿ ಬರ್ಹಿಣಃ
ಯಾವದಕ್ಷಿಪಥಮೇಷ ವಿಶ್ಲಥೋ ಗಾಹತೇ ನ ಕಬರೀಭರಸ್ತವ ||12||

ತಾತ್ಪರ್ಯ :

ಓ ದೋಷರಹಿತ ಸದ್ಗುಣಿ ದೇವಿಯೇ ! ನಿನ್ನ ಕೆದರಿದ ಕೂದಲುಗಳು ನನ್ನ ದೃಷ್ಟಿಗೆ ಬರುವವರೆಗೂ ನನ್ನ ಮನಸ್ಸು ನವಿಲುಗರಿಗಳನ್ನು ಕಂಡೇ ಸಂತೋಷಿಸು ತ್ತಿತ್ತು.

ವಿವರಣೆ :

ಸುಂದರಿಯೇ ! ನಿನ್ನ ಕೇಶಪಾಶಗಳ ಸೊಬಗು ನನ್ನ ಕಣ್ಣಿಗೆ ಬೀಳುವವರೆಗೆ ಮಾತ್ರ ಈ ನಿನ್ನ ಪಕ್ಕದಲ್ಲಿರುವ ನವಿಲು ತನ್ನ ಕೆದರಿದ ಗರಿಗಳಿಂದ ಸಂತೋಷವನ್ನು ಉಂಟುಮಾಡುತ್ತದೆ. ಒಂದು ಬಾರಿ ನಿನ್ನ ಕೇಶಪಾಶಗಳನ್ನು ನೋಡಿದರೆ ನಂತರ ಆ ನವಿಲಿನ ಗರಿಗಳು ಆಕರ್ಷಕವಾಗಿ ತೋರುವುದಿಲ್ಲ.

ಸಂಸ್ಕೃತದಲ್ಲಿ :

ರಾಗವಾನಧರ ಏಷ ಸಂತತಂ ನಿರ್ಮಲದ್ವಿಜಸಮೀಪವರ್ತ್ಯಪಿ
ಏಭಿರಸ್ಯ ಸಹವಾಸತಃ ಪ್ರಿಯೇ ನೇಷದಪ್ಯಪಗತೋ ನಿಜೋ ಗುಣಃ ||13||

ತಾತ್ಪರ್ಯ :

ಓ ನನ್ನ ಪ್ರಿಯತಮೆ ! ನಿನ್ನ ಕೆಂಪು ಬಣ್ಣದ ಕೆಳತುಟಿಗಳು, ಪರಿಶುದ್ಧನಾದ ಬ್ರಾಹ್ಮಣನ ಹಲ್ಲುಗಳಿಗೆ ಸದಾ ಹತ್ತಿರದಲ್ಲಿದ್ದರೂ, ತನ್ನ ನೈಜ ಗುಣವನ್ನು ಕಳೆದುಕೊಂಡಿಲ್ಲ.

ಈ ಶ್ಲೋಕದಲ್ಲಿರಾಗಪದವು ಕೆಂಪು ಬಣ್ಣ ಹಾಗೂ ಆಸೆಗಳೊಂದಿಗಿನ ಮಮತೆ ಎಂಬ ಎರಡು ಅರ್ಥಗಳನ್ನು ಸೂಚಿಸುವುದು. “ನಿರ್ಮಲಪುರೆಪದವನ್ನು ಬ್ರಾಹ್ಮಣರಿಗೆ ಸಂಬಂಧಿಸಿದಂತೆ ಸದ್ಗುಣವನ್ನು ಸೂಚಿಸುವುದು ಮತ್ತು ಹಲ್ಲುಗಳಿಗೆ ಸಂಬಂಧಿಸಿದಂತೆ ಶ್ವೇತ ಬಣ್ಣವೆಂದು ಸೂಚಿಸುತ್ತದೆ. ಹಿಂದಿನ ಶ್ಲೋಕಗಳಲ್ಲೂ ಹಲ್ಲುಗಳನ್ನು ಎರಡು ಬಾರಿ ಜನಿಸಿರುವ ಎಂದು ಉಲ್ಲೇಖಿಸಲಾಗಿದೆ.

ವಿವರಣೆ :

ಪ್ರಿಯೆಯೇ ! ನಿನ್ನ ಕೆಳದುಟಿಯು ನಿರ್ಮಲವಾದ ಹಲ್ಲುಗಳ ಸಹವಾಸ ದಲ್ಲಿದ್ದರೂ ತನ್ನ ಸ್ವಾಭಾವಿಕವಾದ ಕೆಂಪು ಬಣ್ಣವನ್ನು ಬಿಡುವುದಿಲ್ಲ. ಇಲ್ಲಿ ಮತ್ತೊಂದು ಅರ್ಥವೆಂದರೆ - ಶುದ್ಧವಾದ ಬ್ರಾಹ್ಮಣರ ಸಹವಾಸದಲ್ಲಿದ್ದರೂ ಜನರು ತಮ್ಮ ರಜೋಗುಣವನ್ನು ಬಿಡುವುದಿಲ್ಲ. ಸಂಸರ್ಗಜಾ ದೋಷ ಗುಣಾ ಭವಂತಿ ಎಂಬ ಮಾತು ಸ್ವಾಭಾವಿಕವಾದ ಗುಣಗಳಲ್ಲಿ ಅಪವಾದವನ್ನು ಹೊಂದುತ್ತದೆ ಎಂದು ಭಾವ.

ಸಂಸ್ಕೃತದಲ್ಲಿ :

ಚಕ್ಷುಷಃ ಸುದತಿ ತೇ ಸಗೋತ್ರತಾ ಕೈರವೈರ್ನಿಶಿ ದಿನೇ ಕುಶೇಶಯೈಃ
ಕಶ್ಯಪೈರಪಿ ವಸಿಷ್ಠಬಾಂಧವೈಭೂಸುಪರ್ವಣ ಇವ ದ್ವಿಗೋತ್ರಿಣಃ ||14||


ತಾತ್ಪರ್ಯ :

ಓ ದೇವಿ ಸುದತಿ (ಸುಂದರ ದಂತಪಂಕ್ತಿ ಯುಳ್ಳವಳು) ! ನಿನ್ನ ಕಣ್ಣುಗಳು ಹಗಲು ಹೊತ್ತಿನಲ್ಲಿ ಕಮಲ ಕುಟುಂಬದಂತಿರುವುದು ಮತ್ತು ರಾತ್ರೆಯ ಹೊತ್ತು ನೈದಿಲೆ ಹೂವನ್ನು ಹೋಲುತ್ತಿದ್ದು ಅವುಗಳು ದ್ವಿಗೋತ್ರಿಯಂತಿರು ವುದು (ಎರಡೂ ಕುಟುಂಬಗಳಾದ ಕಶ್ಯಪ ಮತ್ತು ವಸಿಷ್ಠ).

ನಿನ್ನ ಕಣ್ಣುಗಳು ಹಗಲೂ ರಾತ್ರೆಯೂ ನಿನ್ನ ಭಕ್ತರಿಗೆ ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆಯನ್ನು ನೀಡಲು ಎಚ್ಚೆತ್ತಿರುವುದು.

ವಿವರಣೆ :

ಸುಂದರವಾದ, ಕಾಂತಿಯುಕ್ತ ದಂತಪಂಕ್ತಿ ಯುಳ್ಳವಳೇ ! ನಿನ್ನ ಸುಂದರವಾದ ಕಣ್ಣುಗಳು ರಾತ್ರಿಯಲ್ಲಿ ಕುಮುದಪುಷ್ಪಗಳಂತೆ ಇದ್ದು ಅವುಗಳು ಸಗೋತ್ರವಾಗಿರುತ್ತದೆ. ಅದೇ ಕಣ್ಣುಗಳು ಹಗಲಿನಲ್ಲಿ ಕಮಲ ಪುಷ್ಪದ ಸಗೋತ್ರತೆಯನ್ನು ಪಡೆಯುತ್ತದೆ. ಅಂದರೆ ರಾತ್ರಿಯಲ್ಲಿ ಕುಮುದ ಪುಷ್ಪವು ಅರಳುತ್ತದೆ, ಹಗಲಿನಲ್ಲಿ ಮೊಗ್ಗಾಗುತ್ತದೆ. ಅದೇ ಕಮಲ ಪುಷ್ಪವು ಹಗಲಿನಲ್ಲಿ ಅರಳಿ ರಾತ್ರಿಯಲ್ಲಿ ಮೊಗ್ಗಾಗುತ್ತದೆ. ಅವುಗಳ ಹಾಗಲ್ಲದೆ ನಿನ್ನ ಕಣ್ಣುಗಳು ರಾತ್ರಿ ಮತ್ತು ಹಗಲು ಎರಡೂ ಸಮಯದಲ್ಲೂ ಅರಳಿರುತ್ತವೆಂದು ಅಭಿಪ್ರಾಯ.

ಸಂಸ್ಕೃತದಲ್ಲಿ :

ಅಲ್ಪಯಾsಪ್ಯತಿಸಮರ್ಥಯಾ ಸ್ಮಿತಜ್ಯೋತ್ಸ್ನಯಾ ಗಗನಗಂ ಹರತ್ತಮಃ
ಕೇವಲಂ ಸುವಚನಾಮೃತಂ ಕಿರಚ್ಛಂದ್ರಬಿಂಬಮತುಷಾರಮಾನನಂ ||15||

ತಾತ್ಪರ್ಯ :

ಸಣ್ಣದಾದರೂ, ನಿನ್ನ ಅತ್ಯಂತ ಸಮರ್ಥವಾದ ಚಂದ್ರ ಬೆಳಕಿನಂತಹ ಮಂದಹಾಸವು ಆಕಾಶ ದಲ್ಲಿನ ಕತ್ತಲನ್ನು ಹೋಗಲಾಡಿಸುವುದು. ಇಬ್ಬನಿರಹಿತ ಚಂದ್ರನಂತೆ ನಿನ್ನ ಮುಖದಿಂದ ಅಮೃತದಂತಹ ಸಿಹಿ ಮಾತುಗಳ ವರ್ಷಧಾರೆ ಯಾಗುವುದು.

ವಿವರಣೆ :

ದೇವಿಯೇ ! ನಿನ್ನ ಮುಖವು ಅಲ್ಪವಾದ ಅಥವಾ ಸೂಕ್ಷ್ಮವಾದ ನಗುವೆಂಬ ಬೆಳದಿಂಗಳಿನಿಂದ ಆಕಾಶದಲ್ಲಿರುವ ಕತ್ತಲೆಯನ್ನು ಹೋಗಲಾಡಿಸುತ್ತದೆ. ಆದರೆ ಮಾತೆಂಬ ಅಮೃತವನ್ನು ನೀಡುವ ಹಿಮವಿಲ್ಲದಿರುವ ಚಂದ್ರಬಿಂಬವೇ ನಿನ್ನ ಮುಖವಾಗಿದೆ.

ಇಲ್ಲಿ ದೇವಿಯ ಮುಖವು ಪ್ರಸಿದ್ಧವಾದ ಚಂದ್ರನಿಗಿಂತ ಶ್ರೇಷ್ಠವೆಂದು ತಾತ್ಪರ್ಯ.

ಸಂಸ್ಕೃತದಲ್ಲಿ :

ನಿತ್ಯಮಬ್ಜಮುಖಿ ತೇ ಪರಸ್ಪರಶ್ಲಿಷ್ಟಮಶ್ಲಥಪಟೀಕುಟೀರಗಂ
ಶರ್ವರೀಭಯವಿವರ್ಜಿತಂ ಸ್ಥಲೀಚಕ್ರವಾಕಮಿಥುನಂ ಕುಚದ್ವಯಂ ||16||

ತಾತ್ಪರ್ಯ :

ಓ ಕಮಲವದನೆಯೇ ! ಬಿಗಿಯಾದ ಮೇಲ್ವಸ್ತ್ರದೊಳಗೆ ಇರುವ ನಿನ್ನ ಸ್ತನಗಳು ಒಂದನ್ನೊಂದು ಒತ್ತಿಕೊಂಡಿರುವಂತಿವೆ. ಅವುಗಳು ಭೂಮಿಯ ಮೇಲೆ ರಾತ್ರೆಯ ಹೊತ್ತು ಬೇರೆಯಾಗುವ ಭಯವಿಲ್ಲದೇ ಇರುವ ಚಕ್ರವಾಕ ಪಕ್ಷಿಗಳಂತೆ ಯಾವಾಗಲೂ ಒಟ್ಟಿಗೆ ಇರುವುದು.

ರಾತ್ರೆ ಹೊತ್ತಿನಲ್ಲಿ ಚಕ್ರವಾಕ ಜೋಡಿ ಪಕ್ಷಿಗಳ ಬೇರ್ಪಡುವಿಕೆಯ ಭಯವು ಸರ್ವವಿದಿತ.

ವಿವರಣೆ :

ಚಂದ್ರಮುಖಿಯಾದ ಉಮಾದೇವಿಯೇ ! ನಿನ್ನ ಕುಚಯುಗಳವನ್ನು ಭೂಮಿಯಲ್ಲಿರುವ ಕೋಕ ಪಕ್ಷಿಗಳ ಜೋಡಿ ಎಂದು ಭಾವಿಸುತ್ತೇನೆ. ಈ ಕೋಕ ಪಕ್ಷಿಗಳು ಅನ್ಯೋನ್ಯವಾಗಿ ಒಟ್ಟಿಗೆ ಇರುತ್ತವೆ. ಆದರೆ ಆಕಾಶದಲ್ಲಿರುವ ಚಕ್ರವಾಕಗಳು ರಾತ್ರಿಯಲ್ಲಿ ವಿಯುಕ್ತವಾಗುತ್ತವೆ. ನಿನ್ನಲ್ಲಿರುವ ಕೋಕಪಕ್ಷಿಗಳು ನಿನ್ನ ಕುಚಪಟ್ಟಿ ಎಂಬ ಮನೆಯಲ್ಲಿರುತ್ತವೆ. ಆದರೆ ಆಕಾಶದಲ್ಲಿರುವ ಪಕ್ಷಿಗಳು ಸುಮ್ಮನೆ ಆಕಾಶದಲ್ಲಿರುತ್ತವೆ. ನಿನ್ನಲ್ಲಿರುವ ಕೋಕಪಕ್ಷಿಗಳು ರಾತ್ರಿಯ ಭಯವಿಲ್ಲದೇ ಒಂದನ್ನೊಂದು ಅಪ್ಪಿಕೊಂಡಿವೆ. ಆದರೆ ಆಕಾಶದಲ್ಲಿರುವ ಚಕ್ರವಾಕಗಳು ರಾತ್ರಿಯಾದೊಡನೆ ಬೇರೆಯಾಗಿಬಿಡುತ್ತವೆ.

ಸಂಸ್ಕೃತದಲ್ಲಿ :

ಲಾಲನೀಯಮಯಿ ದೇವಮೌಲಿಭಿಃ ಕೋಮಲಂ ಚರಣಪಲ್ಲವದ್ವಯಂ
ಕಚ್ಚಿದದ್ರಿಪುರುಹೂತಪುತ್ರಿಕೇ ನ ಸ್ಥಲೀ ತುದತಿ ಕರ್ಕಶಾ ತವ ||17||

ತಾತ್ಪರ್ಯ :

ಓ ಪರ್ವತರಾಜನ ಪುತ್ರಿಯೇ ! ಈ ಗಟ್ಟಿ ನೆಲವು ದೇವಾನುದೇವತೆಗಳು ಪೂಜಿಸುವ ನಿನ್ನ ಚಿಗುರೆಲೆಗಳಂತಿರುವ ಮೃದುವಾದ ಪಾದಗಳಿಗೆ ನೋವನ್ನುಂಟುಮಾಡುವುದೇ?

ವಿವರಣೆ :

ಪರ್ವತರಾಜ ಪುತ್ರಿಯೇ ! ದೇವತೆಗಳ ಕಿರೀಟಗಳಿಂದ ಲಾಲಿಸಲ್ಪಡುವ, ಚಿಗುರಿನಂತೆ ಕೋಮಲವಾದ ನಿನ್ನ ಕಾಲ್ಗಳನ್ನು ಕಲ್ಲುಮುಳ್ಳುಗಳಿಂದ ತುಂಬಿದ ಈ ಪ್ರದೇಶವು ಬಾಧಿಸುವುದಿಲ್ಲವಷ್ಟೆ. ಪ್ರಿಯನಾದವನು ತನ್ನ ಪ್ರೇಯಸಿಯನ್ನು ಈ ರೀತಿಯಾದ ಪ್ರಶ್ನೋಪಚಾರಗಳನ್ನು ಮಾಡಿದಾಗ ಪ್ರೇಯಸಿಯಾದವಳಿಗೆ ಸ್ವಲ್ಪ ಬಾಧೆಯಿದ್ದರೂ ಪ್ರೀತಿಯುಂಟಾಗುತ್ತದೆ.

ಸಂಸ್ಕೃತದಲ್ಲಿ :

ಏವಮಾದಿ ವದತಿ ತ್ರಿಲೋಚನೇ ತ್ವನ್ಮುಖೇ ಲಸತಿ ಮೌನಮುದ್ರಯಾ
ಆತತಾನ ಜಲಚಾರಿಕೇತನೋ ನರ್ತನಂ ನಗಮಹೇಂದ್ರಬಾಲಿಕೇ ||18||

ತಾತ್ಪರ್ಯ :

ಓ ಪರ್ವತ ಪುತ್ರಿಯೇ ! ಶಿವನ ಮಾತುಗಳೆಲ್ಲವನ್ನೂ ನಿಃಶಬ್ದವಾಗಿ ಕೇಳುತ್ತಿರುವಾಗ ನಿನ್ನ ಮುಖವು ಹೊಳೆಯತೊಡಗಿದ್ದನ್ನು ನೋಡಿ ಮನ್ಮಥನು ನಾಟ್ಯವಾಡತೊಡಗಿದನು.

ನಿನ್ನ ಮುಖವು ಶಿವನ ಪ್ರಶ್ನೆಗಳಿಗೆ ಯಾವುದೇ ಉತ್ತರವನ್ನು ನೀಡದೇ ನಿಃಶಬ್ದವಾಗಿದ್ದರೂ ನಿನ್ನ ಪ್ರಿಯಕರನ ಪ್ರೀತಿಯ ಪ್ರತಿಫಲನದಿಂದ ಹೊಳೆಯುತ್ತಿರುವುದು. ಆ ಸಂದರ್ಭವನ್ನು ಉಪಯೋಗಿಸಿಕೊಂಡು ಮನ್ಮಥನು ಶಿವನ ಮನಸ್ಸನ್ನು ಹೊಕ್ಕು ಮುಂದಿನ ಕಾರ್ಯಗಳಿಗೆ ಉತ್ತೇಜನ ನೀಡುವಲ್ಲಿ ನಿರತನಾಗುವನು.

ವಿವರಣೆ :

ಪರ್ವತರಾಜನ ಪುತ್ರಿಯೇ ! ಪರಶಿವನು ಈ ರೀತಿಯಾಗಿ ಮಾತನಾಡುತ್ತಿರಲು ನೀನು ಯಾವ ರೀತಿಯ ಉತ್ತರವನ್ನೂ ನೀಡದೆ ಸುಮ್ಮನಿದ್ದಾಗ, ಮಕರಕೇತನಾದ ಮನ್ಮಥನು ತನ್ನ ನರ್ತನವನ್ನು ವಿಸ್ತರಿಸಿದನು. ಅಂದರೆ ಪಾರ್ವತಿಯು ಮಾತನಾಡದೇ ಸುಮ್ಮನಿದ್ದಾಗ ಆ ಮೌನದಿಂದ ಒಂದು ವಿಧವಾದ ಮುಖವಿಕಾಸವು ಕಾಣಿಸಿಕೊಂಡಾಗ ಪರಶಿವನು ಅವಳಿಗೆ ಮತ್ತೂ ಪ್ರೀತಿಯ ಉಪಚಾರಗಳನ್ನು ಮಾಡಲು ಪ್ರಯತ್ನಿಸಿದನು ಎಂದು ಭಾವ.

ಸಂಸ್ಕೃತದಲ್ಲಿ :

ದೇವಿ ತೇ ಪುರಜಿತಾವತಂಸಿತಃ ಪಾರಿಜಾತಕುಸುಮಸ್ರಜಾ ಕಚಃ
ಮಾನಸಂ ಪುರಜಿತೋsಮುನಾ ಹೃತಂ ಸ್ಮರ್ಯತೇ ಕ್ವ ಮಲಿನಾತ್ಮನಾ ಕೃತಂ ||19||

ತಾತ್ಪರ್ಯ :

ಓ ದೇವಿ ! ತ್ರಿಪುರಾಂತಕರ ಶತ್ರುವಾದ ಶಿವನಿಂದ ಪಾರಿಜಾತ ಪುಷ್ಪಗಳಿಂದ ಅಲಂಕರಿಸಲ್ಪಟ್ಟ ನಿನ್ನ ಜಡೆಯು ಶಿವನ ಮನಸ್ಸನ್ನು ಕದ್ದಿದೆ. ಅಶುದ್ಧವಾದ ವಸ್ತುವಿನಿಂದ ನಡೆದ ಕಾರ್ಯವನ್ನು ಹೇಗೆ ನೆನಪಿನಲ್ಲಿಟ್ಟುಕೊಳ್ಳುವುದು ಸಾಧ್ಯ?

ಪರಮೇಶ್ವರನು ಪಾರಿಜಾತ ಪುಷ್ಪಗಳಿಂದ ಜಡೆಗೆ ಅಲಂಕಾರ ಮಾಡಿದನು, ಅದಕ್ಕೆ ಪ್ರತಿಫಲವಾಗಿ ಜಡೆಯು ಅವನ ಮನಸ್ಸನ್ನು ಕದ್ದು ಕೃತಜ್ಞತೆಯನ್ನು ತೋರಿತು. ಜಡೆಯು ಅಶುದ್ಧವೇಕೆಂದರೆ ಇದು ಜೀವರಹಿತ ಮತ್ತು ಅದು ಕಪ್ಪುಬಣ್ಣವಾದ್ದರಿಂದ.



ವಿವರಣೆ :

ಮೊದಲು ಪರಶಿವನು ಪಾರ್ವತಿಯ ಕೇಶಪಾಶಗಳನ್ನು ಪಾರಿಜಾತ ಪುಷ್ಪಗಳಿಂದ ಅಲಂಕರಿಸಿದನು. ಆದರೆ ಆ ಕೇಶಪಾಶವು ಪರಶಿವನ ಮನಸ್ಸನ್ನೇ ಅಪಹರಿಸಿತು. ಮಲಿನಾತ್ಮರಿಗೆ ಕೃತಜ್ಞತೆ ಇರುವುದಿಲ್ಲವಲ್ಲವೇ? ಅಂದರೆ ದೇವಿಯ ಕೇಶಪಾಶದ ಸೋಬಗಿನಿಂದ ಶಿವನ ಮನಸ್ಸು ಅದಕ್ಕಧೀನವಾಯಿತು. ಎಂದು ತಾತ್ಪರ್ಯ.

ಸಂಸ್ಕೃತದಲ್ಲಿ :

ಬ್ರಹ್ಮಚರ್ಯನಿಯಮಾದಚಂಚಲಾ ನಾಯಿಕಾ ಯದಿ ಲುಲಾಯಮರ್ದಿನೀ
ನಾಯಕಶ್ಚ ಸುಮಬಾಣಸೂದನೋ ವೇದ ಕೋ ರತಿರಹಸ್ಯಮಾವಯೋಃ ||20||

ತಾತ್ಪರ್ಯ :

ಈ ನಾಯಕ ನಾಯಕಿಯರ ನಡುವಿನ ಪ್ರೀತಿಯ ಗುಟ್ಟನ್ನು ಯಾರು ಅರಿತುಕೊಳ್ಳುವರು? ಮಹಿಷಾಸುರನನ್ನು ನಾಶಮಾಡಿದ ನಾಯಕಿಯು ಮತ್ತು ಕನ್ಯತ್ವದಿಂದ ಬದಲಾಗದ ಹಾಗೂ ಮನ್ಮಥನನ್ನು ನಾಶಮಾಡಿದ ನಾಯಕ.

ಈ ಶ್ಲೋಕವು ಜಗತ್ತಿನ ಮಾತಾ-ಪಿತೃಗಳಾದ ಪಾರ್ವತಿ-ಪರಮೇಶ್ವರರ ನಡುವಿನ ಪ್ರೀತಿಯ ಸ್ವರೂಪವನ್ನು ಯಾರಿಗೂ ಅರಿಯಲು ಅಸಾಧ್ಯ ಎಂಬುದನ್ನು ತೋರುವುದು. ಹಿಂದಿನ ಶ್ಲೋಕಗಳಲ್ಲಿ ವಿವರಿಸಿರುವ ಶಿವ-ಶಿವೆಯರ ನಡುವಿನ ಪ್ರಣಯದಾಟಗಳು ಕೇವಲ ಕಾಲ್ಪನಿಕವಾದದ್ದು.

ವಿವರಣೆ :

ಮಹಿಷಾಸುರಮರ್ದಿನಿಯಾದ ಪೂಜ್ಯಳಾದ ದೇವಿಯು ಬ್ರಹ್ಮಚರ್ಯ ವ್ರತದಲ್ಲಿ ಸ್ಥಿರವಾದವಳು. ಪರಶಿವನು ಮನ್ಮಥನನ್ನೇ ನಾಶಮಾಡಿದವನು. ಇವರಿಬ್ಬರ ರತಿರಹಸ್ಯವನ್ನು ಯಾರು ತಾನೇ ತಿಳಿಯಲು ಸಾಧ್ಯ? ಈಗ ತಾನೇ ಹೇಳಿದ ಶ್ಲೋಕಗಳಿಂದ ಪಾರ್ವತಿ-ಪರಮೇಶ್ವರರ ಶೃಂಗಾರವನ್ನು ವರ್ಣಿಸಲಾಯಿತು. ಅದು ಪಾಮರ ಸ್ತ್ರೀಪುರುಷರ ಮದನವಿಲಾಸವಾಗದಿರಲಿ ಎಂಬ ಅಭಿಪ್ರಾಯದಿಂದ ಈ ಶ್ಲೋಕವು ಹೇಳಲ್ಪಟ್ಟಿದೆ.

ಸಂಸ್ಕೃತದಲ್ಲಿ :

ಲೋಚನೋತ್ಸವವಿಧೌ ವಿಶಾರದೇ ವಾರಿದಾವರಣದೋಷವರ್ಜಿತೇ
ಮರ್ದಯತ್ಯಪಿ ನಭೋಗತಂ ತಮಃಶ್ಯಾಮಿಕಾರಹಿತಸುಂದರಾಕೃತೌ||21||

ಸಂಸ್ಕೃತದಲ್ಲಿ :

ಭಾತಿ ಶೀತಕಿರಣಸ್ತನಂಧಯೇ ಪ್ರಾಣನಾಯಕಜಟಾಕುಟೀಜುಷಿ
ಶುಭ್ರಪರ್ವತತಟೇ ಶುಭಾಂಗಿ ತೇ ಸಮ್ಮದಾಯ ನ ಬಭೂವ ಕಾ ನಿಶಾ ||22||

ತಾತ್ಪರ್ಯ : ಶ್ಲೋಕ 21 ಮತ್ತು 22 ಕ್ಕೆ ಸೇರಿದ ಒಟ್ಟಾರೆ ತಾತ್ಪರ್ಯ ಹಾಗೂ ವಿವರಣೆ

ಓ ಪವಿತ್ರವಾದ ದೇವಿಯೇ ! ಶುಭ್ರವಾದ ಪರ್ವತದ ಮೇಲೆ ನಿನ್ನ ಪತಿಯ ಜತೆಯಲ್ಲಿರುವ ಅರ್ಧ ಚಂದ್ರನ ಬೆಳಕಿನಲ್ಲಿ ಕಳೆದ ರಾತ್ರೆಗಳಲ್ಲಿ ಸಂತೋಷಗಳಿಲ್ಲದ ಯಾವುದೇ ರಾತ್ರಿಯು ಇರುವುದೇ? ಶಿವನ ಜಟೆಯಲ್ಲಿರುವ ಅರ್ಧಚಂದ್ರನು ಮೋಡಗಳಿಂದ ಮರೆಯಾಗದ ಕಳಂಕರಹಿತನು ಹಾಗೂ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸೌಂದರ್ಯವಂತನು. ಕಣ್ಣುಗಳಿಗೆ ಆನಂದವನ್ನು ನೀಡುವುದರ ಮೂಲಕ ಅವನು ಕತ್ತಲನ್ನು ಹೋಗಲಾಡಿಸುವನು.

ಶಿವನಲ್ಲಿರುವ ಸದಾ ಸಂತೋಷದಿಂದಿರುವ, ಕಲಂಕವುಳ್ಳ ಸಹಜ ಚಂದ್ರನಂತಲ್ಲದೇ ಕಳಂಕರಹಿತ ಕಾಂತಿಯುಳ್ಳ ಅರ್ಧಚಂದ್ರನ ದೈವೀ ರೂಪವನ್ನು ವಿವರಿಸುವುದರ ಮೂಲಕ ಪ್ರಣಯದ ಮನಸ್ಥಿತಿಯನ್ನು ಸೂಚಿಸಲಾಗಿದೆ.

ವಿವರಣೆ :

ದೇವಿಯೇ ! ಮಂಗಳಕರವಾದ ಶರೀರವುಳ್ಳವಳೇ; ಶಿವನ ಜಟೆಯಲ್ಲಿ ಬಾಲಚಂದ್ರನು ಪ್ರಕಾಶಿಸುತ್ತಿದ್ದನು. ಪ್ರಸಿದ್ಧ ಚಂದ್ರನಿಗಿಂತ ಅವನು ವಿಭಿನ್ನ. ಆತನು, ಕಣ್ಣಿಗೆ ಆನಂದವನ್ನು ನೀಡುವುದರಲ್ಲಿ ವಿಶಾರದ. ಮೇಘಗಳ ಆವರಣ ದೋಷವಿಲ್ಲದವನಾಗಿದ್ದನು. ಆಕಾಶದಲ್ಲಿ ಕತ್ತಲೆಯು ಸುತ್ತುವರೆದಿದ್ದರೂ ಬೆಳಗುತ್ತಿದ್ದನು. ನ್ಯೂನತೆ ಇಲ್ಲದ ಶುದ್ಧನಾದ ಆತನು ಪ್ರಾಣನಾಯಕನ ಜಟಾಜೂಟವನ್ನು ಆಶ್ರಯಿಸಿದ್ದನು. ಅಂತಹವನ ಬೆಳದಿಂಗಳಲ್ಲಿ ಬೆಳ್ಳಾಗಿರುವ ಹಿಮಾಲಯದಲ್ಲಿ (ಕೈಲಾಸದಲ್ಲಿ) ಯಾವ ರಾತ್ರಿಯು ತಾನೇ ನಿನಗೆ ಆನಂದವೀಯಲು ಸಮರ್ಥವಾಗಲಿಲ್ಲ. ಪ್ರತಿ ರಾತ್ರಿಯೂ ನಿನಗೆ ಆನಂದದಾಯಕವಾಗಿತ್ತು ಎಂಬ ತಾತ್ಪರ್ಯ.

ಸಂಸ್ಕೃತದಲ್ಲಿ :

ಸಂತು ಭೂಷಣಸುಧಾಂಶುದೀಧಿತಿ ವ್ಯಕ್ತಮುಗ್ಧಮುಖಶೋಭಯೋರ್ಮಿತಃ
ತಾನಿ ತಾನಿ ಗಿರಿಜಾಗಿರೀಶಯೋಃ ಕ್ರೀಡಿತಾನಿ ಜಗತೋ ವಿಭೂತಯೇ ||23||

ತಾತ್ಪರ್ಯ :

ಪರ್ವತಗಳ ರಾಜ ಹಾಗೂ ಮಹಾ ಪರ್ವತನ ಪುತ್ರಿಯ ಮುಖದ ಸೌಂದರ್ಯವು ಅಲಂಕಾರಿತ ಚಂದ್ರನ ಕಾಂತಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಅವರ ಒಬ್ಬರನ್ನೊಬ್ಬರನ್ನು ತೃಪ್ತಿಪಡಿಸುವ ಪ್ರಣಾಯದಾಟಗಳು ವಿಶ್ವಕ್ಕೆ ಅಭ್ಯುದಯವನ್ನು ಉಂಟುಮಾಡಲಿ.

ಕವಿಯು ಈ ಮುಕ್ತಾಯದ ಶ್ಲೋಕದಲ್ಲಿ ಪಾರ್ವತಿ-ಪರಮೇಶ್ವರರ ವಿವರಿಸಲಾಗದ ಪ್ರಣಾಯದಾಟಗಳು ವಿಶ್ವಕ್ಕೆ ಒಳಿತನ್ನು ತರಲೆಂದು ಆಶಿಸುವನು.

ವಿವರಣೆ :

ಶಿರೋಭೂಷಣವಾದ ಚಂದ್ರನ ಕಿರಣಗಳಿಂದ ಸ್ಪಷ್ಟವಾದ ಸುಂದರವಾದ ಮುಖಪ್ರಭೆಯುಳ್ಳ ಗಿರಿಜಾ-ಗಿರೀಶರ ಪರಸ್ಪರವಾದ ಕೈಲಾಸದಲ್ಲಿ ಅಥವಾ ಹಿಮಾಲಯದಲ್ಲಿ ನಡೆದ ಏಕಾಂತ ರತಿಕ್ರೀಡೆಗಳು ಜಗತ್ತಿಗೆ ಅದ್ಭುತವಾದ ಐಶ್ವರ್ಯವನ್ನು ನೀಡಿ ಅನುಗ್ರಹಿಸಲಿ.

ಪಾರ್ವತೀಪರಮೇಶ್ವರರ ಅನಿರ್ವಾಚ್ಯವಾದ ರಹಸ್ಯವಾದ ರತಿವಿಲಸಿತಗಳು ಜಗತ್ತಿಗೆ ಶ್ರೇಯಸ್ಸಾನ್ನುಂಟುಮಾಡಲಿ ಎಂದು ಶೃಂಗಾರ ವರ್ಣನದ ಉಪಸಂಹಾರದ ಸಂದರ್ಭದಲ್ಲಿ ಕವಿಯ ಮಂಗಳ ಆಸೆ.

ಸಂಸ್ಕೃತದಲ್ಲಿ :

ಮೋದಕಾದನಪರಸ್ಯ ಸೃಷ್ಟಯೇ ಕ್ರೀಡಿತಂ ಜನನಿ ವಾಂ ಕಿಮಪ್ಯಭೂತ್
ಶಕ್ತಿಭೃತ್ತನಯರತ್ನಜನ್ಮನೇ ಕಿಂಚಿದೀಶ್ವರಿ ಬಭೂವ ಖೇಲನಂ ||24||

ತಾತ್ಪರ್ಯ :

ಓ ಮಾತೇ ! ನಿನ್ನ ಮೊದಲ ಪುತ್ರ ಗಣಪತಿಯು ಜನಿಸಿದಾಗ ನೀನು ದೈವೀ ನಾಟಕದಲ್ಲಿ ತೊಡಗಿದ್ದೆ ಎಂಬುದು ಆಶ್ಚರ್ಯವನ್ನು ತರುವಂಥದ್ದು ಮತ್ತು ಮತ್ತೊಂದು ರೀತಿಯ ನಿನ್ನ ದೈವೀ ನಾಟಕವೆಂದರೆ ಪ್ರಸಿದ್ಧವಾದ ಶಕ್ತ್ಯಾಯುಧವನ್ನು ಹಿಡಿದಿರುವ ನಿನ್ನ ಮತ್ತೊಬ್ಬ ಪುತ್ರನಾದ ಸ್ಕಂದನ ಜನನದ ಕಾರಣ.

ಆಹಾರವನ್ನು ಪ್ರೀತಿಸುವ ಗಣಪತಿ ಮತ್ತು ಶಕ್ತಿಧರನೆಂದು ಪ್ರಸಿದ್ಧನಾದ ಸ್ಕಂದ ಇಬ್ಬರೂ ಒಬ್ಬರನ್ನೊಬ್ಬರಿಂದ ವ್ಯತ್ಯಾಸವುಳ್ಳವರು. ಏಕೆಂದರೆ ಅವರು ಜನಿಸಿದಾಗ ಬೇರೆ ಬೇರೆ ರೀತಿಯ ದೈವೀ ನಾಟಕಗಳಲ್ಲಿ ತೊಡಗಿದ್ದರು. ಇದೇ ರೀತಿಯ ಆಲೋಚನೆಯು ಹಿಂದಿನ ಶ್ಲೋಕವಾದ 2.1.24 ರಲ್ಲೂ ಕಂಡುಬರುವುದು.

ವಿವರಣೆ :

ಜಗನ್ಮಾತೆಯೇ ! ಮೋದಕಪ್ರಿಯನಾದ ಲಂಬೋದರನ ಸೃಷ್ಟಿಗೆ ನಿಮ್ಮೀರ್ವರ ರತಿಕ್ರೀಡೆಯು ಜರುಗಿತು. ಶಕ್ತಿಧರನಾದ ಷಣ್ಮುಖನೆಂಬ ಪುತ್ರರತ್ನದ ಜನನಕ್ಕೆ ಮತ್ತೂ ರತಿಕ್ರೀಡೆಯು ಆಯಿತು. ಅದೂ ಅದ್ಭುತವಾದುದು.



ಸಂಸ್ಕೃತದಲ್ಲಿ :

ಮಾಧುರೀರಸಪರಿಪ್ಲುತಾ ಇಮಾಃ ಕಾವ್ಯಕಂಠವಿದುಷೋ ರಥೋದ್ಧತಾಃ
ಆದಧತ್ವಚಲನಾಥನಂದಿನೀ ಮಾನಸೇ ಕಮಪಿ ಮೋದಮುತ್ತಮಂ ||25||  300

ತಾತ್ಪರ್ಯ :

ರಥೋದ್ಧತ ಛಂದಸ್ಸಿನಲ್ಲಿ ವಿದ್ವತ್ ಕವಿ ಕಾವ್ಯಕಂಠರಿಂದ ರಚಿತವಾದ ಸಿಹಿ ರಸಗಳಿಂದ ತುಂಬಿದ ಈ ಶ್ಲೋಕಗಳು ಪರ್ವತರಾಜಕುಮಾರಿಯ ಮನದಲ್ಲಿ ಅನನ್ಯವಾದ ಸಂತೋಷವನ್ನು ಉಂಟುಮಾಡಲಿ.

ಈ ಸ್ತಬಕವು ಕಾಳಿದಾಸನ ಕುಮಾರ ಸಂಭವದ ಎಂಟನೇ ಸರ್ಗದಲ್ಲಿನ ಕಲ್ಪನೆಗಳಂತೆ ಇರುವುದನ್ನು ಜನಗಳು ಸ್ಪಷ್ಟವಾಗಿ ಗುರುತಿಸಬಹುದು. ಎರಡೂ ಸ್ತೋತ್ರಗಳು ರಥೋದ್ಧಾತ ಛಂದಸ್ಸಿನಲ್ಲಿರು ವುದು ಹಾಗೂ ಎರಡರ ವಿಷಯವೂ ಶೃಂಗಾರ.  ಉಮಾ ಮತ್ತು ಶಂಕರರ ಪ್ರಣಯದ ಮುಖಭಾವಗಳನ್ನು ವಿವರಿಸುವಲ್ಲಿ ಉಪಯೋಗಿಸಿರುವ ಪದಗಳಲ್ಲೂ ಆನೇಕ ಸಾಮ್ಯತೆಗಳನ್ನು ಕಾಣಬಹುದು. ಕಾವ್ಯಕಂಠ ಮುನಿಯು ಮಹಾನ್ ಕವಿ ಕಾಳಿದಾಸನ ಮೇರು ಕೃತಿಗಳಿಂದ ಪ್ರಭಾವಿತರಾಗಿರುವುದು ಸರ್ವವಿದಿತವಾದದ್ದು.

ಆದಾಗ್ಯೂ, ಈ ಸ್ತೋತ್ರದ ಕವಿಯು ಕಾಳಿದಾಸನ ಪ್ರಣಯದ ಬಗೆಗಿನ ವಿಚಾರಗಳನ್ನು ಹೆಚ್ಚು ಕಡಿಮೆ ಅನುಸರಿಸಿದ್ದರೂ, ಅವುಗಳಿಂದ ಸ್ವಲ್ಪ ವ್ಯತ್ಯಾಸವನ್ನು ಅನುಸರಿಸಲು ಯೋಚಿಸಿದ್ದರು. ಇದನ್ನು ಕೆಲವು ಪದಸಮುಚ್ಚಯಗಳಾದ - “ಪಾರ್ವತಿಯು ಬ್ರಹ್ಮಚರ್ಯವನ್ನು ಅನುಸರಿಸುತ್ತಿದ್ದಳು”, ಮತ್ತುಅವರ ಪ್ರಣಯದ ಗುಟ್ಟು ಯಾರಿಗೆ ಗೊತ್ತಿರುವುದುಇವುಗಳಿಂದ ಅರಿಯಬಹುದು.

ಉಮಾಮಹೇಶ್ವರರ ಪ್ರಣಯದ ರಹಸ್ಯಗಳಿಂದ ತುಂಬಿದ ಅತ್ಯುತ್ತಮ ಪ್ರಾರ್ಥನೆಯು ಗಣಪತಿ ಮುನಿಗಳ ವೇದವೇದಾಂತಮಂತ್ರತಂತ್ರಯೋಗದ ಬಗ್ಗೆ ಇರುವ ಜ್ಞಾನದಿಂದ ಹೊರಬಂದ ಮಹಾನ್ ದೈವೀ ಉತ್ಸಾಹವು ಈ ಸ್ತಬಕದಲ್ಲಿ ಕಂಡುಬರುವುದು.



ವಿವರಣೆ :

ಶೃಂಗಾರವೆಂಬ ಮಧುರಸದಿಂದ ತುಂಬಿರುವ ಕಾವ್ಯಕಂಠಗಣಪತಿಯೆಂಬ ಮಹಾವಿದ್ವಾಂಸನಿಂದ ರಥೋದ್ಧಾತಾ ಛಂದಸ್ಸಿನಲ್ಲಿ ರಚಿಸಲ್ಪಟ್ಟ ಈ ಸ್ತೋತ್ರಗಳು ಪರ್ವತರಾಜ ಪುತ್ರಿಯ ಮನಸ್ಸಿನಲ್ಲಿ ಆಶ್ಚರ್ಯಕರವಾದ ಸಂತೋಷವನ್ನುಂಟು ಮಾಡಲಿ.

ಇಲ್ಲಿಗೆ ಮೂರನೇ ಶತಕದ ಹನ್ನೆರಡನೇ ಸ್ತಬಕವು ಸಂಪೂರ್ಣವಾಯಿತು

ಇಲ್ಲಿಗೆ ಮೂರನೇ ಶತಕವು ಮುಗಿಯಿತು







Comments